ಬಲ್ಲಿರಾ? ಸ್ಟ್ಯಾಂಡಿಂಗ್ ಆರ್ಡರ್‌ನ ಚಂಚಲರಾವ್

ಪಲ್ಲೆ ಚಂಚಲರಾವ್ ಪಂತುಲು ಆಗಿನ ಹೈದರಾಬಾದ್ ಪ್ರಾಂತ್ಯದ ಪಲ್ಲೆ ಗ್ರಾಮದವರು. ಬಹಳ ಬುದ್ಧಿವಂತ.  ಧೈರ್ಯವೇ ಮೈದಾಳಿದ ವ್ಯಕ್ತಿತ್ವ. ದಣಿವರಿಯದ ಶಕ್ತಿ. ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯ. ಬ್ರಿಟಿಷ್ ಸರ್ಕಾರ ಈ  ‘ರಾಜತಂತ್ರ ಪ್ರವೀಣ’ನ ಪ್ರತಿಭೆಯನ್ನು ಚೆನ್ನಾಗಿ ಬಳಸಿಕೊಂಡಿತು.
ನೋಡಿ. ೧೮೫೧ರಲ್ಲಿ ನೆಲ್ಲೂರಿನ ಸಿವಿಲ್ ನ್ಯಾಯಾಲಯದ ಕ್ಲರ್ಕ್ ಸೇವೆ ಆರಂಭಿಸಿದವರು ಪಂತುಲು. ಆಗ ತಿಂಗಳಿಗೆ ಹತ್ತು ರೂಪಾಯಿ ಸಂಬಳ. ಇವರ ಕಾರ್ಯವೈಖರಿ ಗಮನಿಸಿದ ಸರಕಾರ ಇನಾಂ ಆಯುಕ್ತರ ಇಲಾಖೆಯಲ್ಲಿ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿತು. ಆಗಿನ್ನೂ ಅವರಿಗೆ ೨೭ ವರ್ಷ.
ಇವರ ಆಡಳಿತ ವೈಖರಿಗೆ ಮನಸೋತ ಅಂದಿನ ಬ್ರಿಟಿಷ್ ಸರಕಾರ ೧೮೬೩ರಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಹುದ್ದೆ ನೀಡಿತು. ಅದು ರೆವೆನ್ಯೂ ಮಂಡಳಿಯಲ್ಲಿ ಅತ್ಯುನ್ನತ ಹುದ್ದೆ. ಕೊಯಮತ್ತೂರು, ಮದರಾಸಿನಲ್ಲಿ ಸೇವೆ. ಆಗ ಸಂಬಳ ತಿಂಗಳಿಗೆ ೧,೦೦೦ ರೂಪಾಯಿ. ವಿವಿಧ ಹುದ್ದೆಗಳು ಹೆಗಲೇರಿದವು. ಸ್ಟಾಂಪ್ ಅಂಡ್ ಸ್ಟೇಷನರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ೧೮೮೭ರ ಮಾರ್ಚ್ ೧ರಂದು ನಿವೃತ್ತಿ. ಕಂದಾಯ ಇಲಾಖೆ ಬಗ್ಗೆ ಇವರಲ್ಲಿದ್ದ ಆಡಳಿತ ಕೌಶಲ್ಯ, ರೆವೆನ್ಯೂ ಮಂಡಳಿಯಲ್ಲಿ ನೇರ ಅಭಿಪ್ರಾಯವನ್ನು ಕೊಡುವ ತಾಕತ್ತಿಗೆ ಸೋತ ಸರಕಾರ ನಾಲ್ಕು ವರ್ಷ ಸೇವೆ ಮುಂದುವರಿಸಿತು.
ರೆವಿನ್ಯೂ ಮಂಡಳಿಯಲ್ಲಿ ಚಂಚಲರಾವ್ ಹೇಳಿದ್ದೇ ಅಂತಿಮ. ಅವರ ಆದೇಶಗಳು ‘ಚಂಚಲರಾವ್ ಸ್ಟ್ಯಾಂಡಿಂಗ್ ಆರ್ಡರ್’ ಎಂದೇ ಖ್ಯಾತಿ. ವಿಕ್ಟೋರಿಯಾ ರಾಣಿ ರಾಯಲ್ ಗೌರವ ‘ಸಿಐಇ’ (ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್) ಬಿರುದು ಕೊಟ್ಟರು.

ಮೈಸೂರು ರಾಜರ ಕಣ್ಣು
ಬ್ರಿಟಿಷ್ ಆಡಳಿತ ಸೇವೆಯಿಂದ ನಿವೃತ್ತರಾಗುತ್ತಿದ್ದಂತೆ ಅಂದಿನ ಮೈಸೂರು ಮಹಾರಾಜ ಚಾಮರಾಜೇಂದ್ರ ಒಡೆಯರ್ ಕಣ್ಣು ಇವರ ಮೇಲೆ ಬಿತ್ತು. ಸರಿ. ಮೈಸೂರಿಗೆ ಕರೆಸಿಕೊಂಡು ಸರಕಾರದಲ್ಲಿ ಕೌನ್ಸೆಲರ್ ಹುದ್ದೆಯನ್ನು ಕೊಟ್ಟರು. ಅಲ್ಲಿಂದ ಶುರುವಾಯ್ತು ನೋಡಿ ಆಡಳಿತದಲ್ಲಿ ಹೊಸ ಪರ್ವ, ಆಧುನಿಕತೆಯ ಸ್ಪರ್ಶ.
ಮಹಿಳೆಯರ ಶಿಕ್ಷಣ, ವಿಧವಾ ವಿವಾಹಕ್ಕೆ ಉತ್ತೇಜನ, ಆಯುರ್ವೇದ ಅಭಿವೃದ್ಧಿ....ಯಾವುದೇ ವಿಷಯ ಇರಬಹುದು. ಎಲ್ಲದರ ಹಿಂದೆ ಇದ್ದವರು ಪಂತಲು. ಮೈಸೂರು ನಗರದಲ್ಲಿ ಮಹಾರಾಣಿಯವರ ಬಾಲಕಿಯರ ಶಾಲೆ ಪ್ರಾರಂಭವಾಗುವಲ್ಲಿ ಇವರ ಪ್ರಭಾವವೂ ದೊಡ್ಡದು. ಅಂದಿನ ದಿವಾನ್ ಶೇಷಾದ್ರಿ ಅಯ್ಯರ್ ಇವರ ಸ್ನೇಹಿತರೂ ಕೂಡ. ಪ್ರಾಮಾಣಿಕತೆ, ಶಿಸ್ತು, ಉದಾರತೆ, ಬುದ್ಧಿಮತ್ತೆ, ಪೌರ ಜಾಗೃತಿ ಇವರ ಸಾರ್ವಜನಿಕ ಜೀವನದಲ್ಲಿ ಹಾಸುಹೊಕ್ಕಾಗಿದ್ದವು.
ಚಂಚಲರಾವ್ ಪಂತುಲು ನಾವು ಮರೆಯಬಾರದ, ಆದರೆ ಮರೆತಿರುವ ಮಹಾನುಭಾವ.
ಈಚನೂರು ಕುಮಾರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ