‘ಮಾರ‍್ಸ್’ ನಿಂದ ಆಕಾಶಕಾಯ ಪರಿಚಯ


ವಿಕ ಸುದ್ದಿಲೋಕ ಮೈಸೂರು
‘ದೇವರ ಪೆಪ್ಪರಮೆಂಟೇನಮ್ಮ ಗಗನದಳೊಳೆ ಯುವ ಚಂದಿರನು...?’ ಎಂದು ರಸಋಷಿ ಕುವೆಂಪು ಮಗುವಿನ ಮುಗ್ಧ ಮನಸ್ಸಿನ ಕುರಿತು ಬರೆದರೆ, ‘ತಾರೆಗಳ ಜರತಾರಿ ಅಂಗಿ ತೊಡಿಸು ವರಂತೆ, ಚಂದಿರನ ತಂಗಿ ಯರು ನಿನ್ನ ಕರೆದು...’ ಎಂದು ಮಗುವನ್ನು ಸಂತೈಸಲು ಕವಿ ಕೆ.ಎಸ್. ನರಸಿಂಹ ಸ್ವಾಮಿ ಕವನ ಬರೆದಿದ್ದಾರೆ.
ಮಕ್ಕಳ ಪಾಲಿನ ಚಂದ ಮಾಮನೇ ಹಾಗೆ. ಭೂಮಿಯ ಉಪಗ್ರಹವೂ ಆಗಿರುವ ಚಂದ್ರ ಕವಿಗಳಷ್ಟೇ ಅಲ್ಲ, ವಿಜ್ಞಾನಿ-ಸಂಶೋಧಕರು, ಖಗೋಳ ವಿಜ್ಞಾನಿಗಳು ಸೇರಿದಂತೆ ಎಲ್ಲರ ಪಾಲಿಗೂ  ಯಾವತ್ತೂ ಆಕರ್ಷಣೆಯ   ತಾರೆ. ಇಂಥ ಚಂದ್ರ ವಾಸ್ತವವಾಗಿ ಹೇಗಿರುತ್ತಾನೆ ?, ಆತನಷ್ಟೇ ಅಲ್ಲ.  ಸೌರವ್ಯೂಹದಲ್ಲಿರುವ  ಇತರೆ ಆಕಾಶಕಾಯಗಳು, ಅವುಗಳ  ಉಪಗ್ರಹಗಳು ಹೇಗಿರುತ್ತವೆ ?, ಅವುಗಳನ್ನು ವೈಜ್ಞಾನಿಕ ನೆಲೆಯಲ್ಲಿ  ಗ್ರಹಿಸಿಕೊಳ್ಳುವುದು, ಅರ್ಥಮಾಡಿಕೊಳ್ಳುವುದು ಹೇಗೆ ?, ಅವುಗಳ ರಚನೆ ಹೇಗಿರುತ್ತದೆ ?, ಸೌರಗ್ರಹಗಳ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಹೇಗೆ ...?
ಇಂಥ ಕುತೂಹಲ ಭರಿತ ಹತ್ತಾರು  ಪ್ರಶ್ನೆಗಳು ಮಕ್ಕಳ ಮನಸ್ಸಿನಲ್ಲಿ ಮೂಡುವುದು ಸಹಜ. ನಗರ ಪ್ರದೇಶದಲ್ಲಿ ಕಲಿಯುವವರಿಗೆ ಯಾರಾದರೂ ಉತ್ತರ ಹೇಳಿಯಾರು. ಆದರೆ, ಗ್ರಾಮೀಣ ಮಕ್ಕಳಿಗೆ, ಶಾಲೆಯಿಂದ ಹೊರಗುಳಿದ ಚಿಣ್ಣರಿಗೆ ತಿಳಿಸುವವರು ಯಾರು? ಈ ನೆಲೆಯಲ್ಲೇ ೧೪ ತಿಂಗಳ ಹಿಂದೆ ಆರಂಭವಾಗಿದ್ದು  ‘ಮೈಸೂರು ಅಸ್ಟ್ರಾನಮಿಕಲ್ ರೀಸರ್ಚ್  ಸೊಸೈಟಿ(ಮಾರ‍್ಸ್ )’ ಸಂಸ್ಥೆ,  ಸುಮಾರು ೪೫ ಸಾವಿರ ಮಕ್ಕಳಿಗೆ ಆಕಾಶಕಾಯಗಳನ್ನು ಪರಿಚಯಿಸಿದೆ.
ರೋಟರಿ ಮೈಸೂರು ಮಿಡ್‌ಟೌನ್‌ನ ೨೫ ಲಕ್ಷ ರೂ. ಪ್ರಾಯೋಜಕತ್ವದ ನೆರವಿನೊಂದಿಗೆ ಮಾರ‍್ಸ್  ತನ್ನಲ್ಲಿಗೆ ಬರುವ ಮಕ್ಕಳಿಗೆ ಆಕಾಶಕಾಯಗಳನ್ನು ತೋರಿಸುವ ಕಾಯಕದಲ್ಲಿ ನಿರತವಾಗಿದೆ.  ಇದಕ್ಕಾಗಿ  ಹೂಟಗಳ್ಳಿಯಲ್ಲಿರುವ ರೋಟರಿ ಮಿಡ್‌ಟೌನ್ ಅಕಾಡೆಮಿ ಸ್ಕೂಲ್‌ನ ಆವರಣದಲ್ಲಿ  ಎರಡು ಟೆಲಿಸ್ಕೋಪ್‌ಗಳ (ದೂರದರ್ಶಕ)ನ್ನ ಅಳವಡಿಸಲಾಗಿದೆ. ಸುಸಜ್ಜಿತ ವಾಹನವೂ ಇದೆ. ಮಾರ‍್ಸ್ ನ  ಈ ಯೋಜನೆಯಲ್ಲಿ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಚಿರಂಜೀವಿ, ಅಧ್ಯಾಪಕ ಎಸ್.ಎ. ಮೋಹನ್‌ಕೃಷ್ಣ, ಅಜೀಜ್ ಉಲ್ಲಾ  ಸಂಪನ್ಮೂಲ ವ್ಯಕ್ತಿಗಳು. ೨೦೦೯ನೇ ಇಸ್ವಿ ಯನ್ನು ಅಂತಾರಾಷ್ಟ್ರೀಯ ಖಗೋಳ ವರ್ಷ ಎಂದು ಘೋಷಿಸಲಾಯಿತು. ಇದನ್ನು ಅರ್ಥ ಪೂರ್ಣವಾಗಿ ಆಚರಿಸಲೆಂದೇ ಈ ಸಂಸ್ಥೆ ಜನ್ಮತಾಳಿತು. ಆಕಾಶಕಾಯಗಳ ಬಗ್ಗೆ ಟೆಲಿಸ್ಕೋಪ್ ಮೂಲಕ ಅವುಗಳನ್ನು ತೋರಿಸಿ ಜಾಗೃತಿ ಮೂಡಿಸುವುದು,  ಸೌರವ್ಯೂಹದ ಬಗ್ಗೆ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ರೀತಿಯ ಚಟುವಟಿಕೆ ಇದರ ಜೀವಾಳ.
ಮಕ್ಕಳಿಗೆ ಮುಕ್ತ ಆಹ್ವಾನ
ಆಸಕ್ತರು ಮಾರ‍್ಸ್  ಸಂಪರ್ಕಿಸಬಹುದು. ರೋಟರಿ ಮಿಡ್‌ಟೌನ್ ಅಕಾಡೆಮಿ ಸ್ಕೂಲ್‌ನಲ್ಲಿರುವ ೧೪ ಇಂಚು ಮತ್ತು ೮ ಇಂಚಿನ ಎರಡು ಸೆಲೆಸ್ಟ್ರಾನ್ ಟೆಲಿಸ್ಕೋಪ್‌ಗಳ ಮೂಲಕ, ಆಕಾಶ ಕಾಯಗಳನ್ನು ತೋರಿಸಲಿದೆ. ವಾರದಲ್ಲಿ ಎರಡು ಬಾರಿ ಇದರ ಲಾಭ ಪಡೆಯಬಹುದು. ಕೆಲವೊಮ್ಮೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ತೆರಳಿ, ಅಲ್ಲಿಯೇ ಸ್ಥಳೀಯರಿಗೆ ಆಕಾಶಕಾಯಗಳನ್ನು  ತೋರಿಸಲಿದೆ. ಸಂಸ್ಥೆಯ ಚಿಕ್ಕ ಅಳತೆಯ ಟೆಲಿಸ್ಕೋಪ್, ಪ್ರೊಜೆಕ್ಟರ್ ತೆಗೆದು ಕೊಂಡು ಹೋಗಿ, ಹಳ್ಳಿಯ ಜನರಿಗೆ  ಸೌರವ್ಯೂಹದ ನೈಜ ಸೌಂದರ್ಯವನ್ನು ತೋರಿಸುತ್ತಿದೆ.
ಸಂಪರ್ಕಿಸಿ- ೯೪೮೦೪೭೭೭೭೬, ೯೬೨೦೧೯೫೧೯೨ (ಚಿರಂಜೀವಿ).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ