ನೋಂದಣಿ ಗಡುವು ಮತ್ತೆ ವಿಸ್ತರಣೆಗೆ ಪ್ರಯತ್ನ

ಶಿವಕುಮಾರ್ ಬೆಳ್ಳಿತಟ್ಟೆ  ಮೈಸೂರು
ಅನಧಿಕೃತ ಖಾಸಗಿ ವೈದ್ಯ ಸಂಸ್ಥೆಗಳ ಹಾವಳಿಗೆ ಕಡಿವಾಣ ಹಾಕುವ ಬದಲು ರಾಜ್ಯ ಸರಕಾರ ತಣ್ಣಗೆ ಕುಳಿತಿದೆ.
ಎಲ್ಲ ಸಂಸ್ಥೆಗಳಿಗೂ ಹೆಸರು ನೋಂದಣಿಗೆ ಈಗಾಗಲೇ ಎರಡು ಬಾರಿ ಗಡುವು ನೀಡಿತ್ತು. ಆದರೂ ಸಂಸ್ಥೆಗಳು ಇನ್ನೂ ನೋಂದಣಿ ಮಾಡಿಸದೇ ಸುಮ್ಮನಿವೆ. ಸರಕಾರವೂ ಯಾವ ಮುಜುಗರಕ್ಕೆ ಒಳಗಾಗಿದೆಯೋ ಗೊತ್ತಿಲ್ಲ. ಮತ್ತೊಂದು ಗಡುವು ನೀಡಲು ಮುಂದಾಗಿದೆ.
ಈ ಮಧ್ಯೆ ಜಿಲ್ಲಾಮಟ್ಟದಲ್ಲಿ ಸಂಸ್ಥೆಗಳ ವಿರುದ್ಧ  ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿದ್ದರೆ, ಉನ್ನತ ಮಟ್ಟದಲ್ಲಿ ಅಧಿಕಾರಿಗಳು ಇಂಥ ಸಂಸ್ಥೆಗಳಿಗೆ ಸಹಕರಿಸುತ್ತಿರುವ ಆರೋಪ ವ್ಯಕ್ತವಾಗಿದೆ. ಹಾಗಾಗಿ ‘ವೈದ್ಯ ಸಂಸ್ಥೆ ’ ಹೆಸರಿನಲ್ಲಿ ನಡೆಸಲಾಗುತ್ತಿರುವ  ಕ್ಲಿನಿಕ್, ಪಾಲಿಕ್ಲಿನಿಕ್, ನರ್ಸಿಂಗ್‌ಹೋಂ, ಡಯೋಗ್ನಾಸ್ಟಿಕ್ಸ್, ಮಸಾಜ್ ಚಿಕಿತ್ಸಾ  ಕೇಂದ್ರಗಳು, ವೈದ್ಯ ಸಲಹಾ ಕೇಂದ್ರಗಳು ದಂಧೆಯಲ್ಲಿ ತೊಡಗಿವೆ.
ವರ್ಷದ ಗಡುವು ?: ನಾಯಿಕೊಡೆಗಳಂತೆ ತಲೆ ಎತ್ತಿರುವ ಇಂಥ ಸಂಸ್ಥೆಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಸರಕಾರ  ‘ಕರ್ನಾಟಕ ಖಾಸಗಿ ವೈದ್ಯ ಸಂಸ್ಥೆಗಳ ಅಧಿನಿಯಮ-೨೦೦೭’ರ  ಕಾಯ್ದೆಗೆ ೨೦೦೯ರ ನವೆಂಬರ್‌ನಲ್ಲಿ ಹೊಸ ನಿಯಮಾವಳಿಯನ್ನು ಅನುಷ್ಠಾನಕ್ಕೆ ತಂದಿತ್ತು. ಆಗ ನೋಂದಣಿಗೆ (ಸಕ್ರಮಕ್ಕೆ ) ಫೆ. ೨೮ರ ವರೆಗೆ ಗಡುವು ನೀಡಲಾ ಗಿತ್ತು. ನಂತರ ಮಾ. ೧೫ರ ವರೆಗೆ ವಿಸ್ತರಿಸಲಾಯಿತು. ಈಗ ಪುನಾ ಮತ್ತೊಂದು ವರ್ಷ ಗಡುವು ವಿಸ್ತರಿಸಲು ನಿರ್ಧರಿಸಿದೆ. ಇದಕ್ಕೆ ಸಂಸ್ಥೆ ಗಳ ಲಾಬಿಯೇ ಕಾರಣ ಎನ್ನಲಾಗುತ್ತಿದೆ.
ಅಧಿಕಾರಿಗಳ ಅಸಮಾಧಾನ: ಅನೇಕ ಜಿಲ್ಲೆಗಳಲ್ಲಿ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು, ಅಧಿಕಾರಿಗಳೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಸರಕಾರದಿಂದಲೇ ನಿರಾಸಕ್ತಿ ವ್ಯಕ್ತವಾಗುತ್ತಿದೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಬೇಸರ.
ಮೈಸೂರು ಜಿಲ್ಲೆಯಲ್ಲಿ ೨೦೦೦ಕ್ಕೂ ಹೆಚ್ಚು ಸಂಸ್ಥೆಗಳ ಪೈಕಿ ೧೨೧೮ ಮಾತ್ರ ನೋಂದಣಿ ಪೂರೈಸಿವೆ. ಉಳಿದಂತೆ ೭೦೦ ಕ್ಕೂ ಅಧಿಕ ಸಂಸ್ಥೆಗಳು ಇತ್ತ ತಲೆ ಹಾಕಿಯೂ ಮಲಗಿಲ್ಲ. ಆ ಸಂಸ್ಥೆಗಳ ಬಳಿ ನಿಗದಿತ ಪರವಾನಗಿ ಹೊಂದಿಲ್ಲದಿರುವುದೇ ಕಾರಣ ಎಂಬುದು ಮೂಲಗಳ ವಿವರಣೆ.
ಈಗ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ, ಅಕ್ರಮ-ಸಕ್ರಮ ಪತ್ತೆ ಹಚ್ಚಬೇಕಿದೆ. ಈ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲೂ ಚರ್ಚಿಸಲಾಗಿದೆ. ಆದರೆ ಸರಕಾರ ಮತ್ತೆ ಗಡುವು ವಿಸ್ತರಣೆ ಮಾಡಿದರೆ ಕಷ್ಟ ಎನ್ನುತ್ತಾರೆ ಮೈಸೂರು ಜಿಲ್ಲಾ ನೋಡಲ್ ಆಧಿಕಾರಿ ಸೋಮಶೇಖರ್.
ಗಡುವು ವಿಸ್ತರಣೆ ಬೇಕಿತ್ತೇ ?: ಆರೋಗ್ಯ ಇಲಾಖೆ ನಿರ್ದೇಶನಾಲಯ ಈಗ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ಸರಕಾರಕ್ಕೆ ಸಲ್ಲಿಸಿದೆ. ಅದರಲ್ಲಿ ಸಂಸ್ಥೆಗಳ ನೋಂದಣಿಗೆ ವಿಧಿಸಿದ್ದ ಗಡುವು ವಿಸ್ತರಣೆ ಆಗಬೇಕೆಂಬುದೇ ಪ್ರಮುಖ ಕೋರಿಕೆ. ಈ ಮೊದಲು (ಅಧಿಸೂಚನೆ ಪ್ರಕಟಗೊಂಡ ದಿನದಿಂದ) ನೀಡಿದ್ದ  ೯೦ದಿನಗಳ ಗಡುವಿಗೆ ಬದಲಾಗಿ ೨೭೦ ದಿನ ನೀಡುವಂತೆ ಪ್ರಸ್ತಾಪಿಸಲಾಗಿದೆ. ವಿಧೇಯಕ ಕಾನೂನು ಮತ್ತು ಸಂಸದೀಯ ಇಲಾಖೆಯಲ್ಲಿದ್ದು ಮುಂದಿನ ಅಧಿವೇಶನದಲ್ಲಿ ಮಂಡನೆಯಾಗಬಹುದು. ಆನಂತರ ಈ ಸಂಸ್ಥೆಗಳಿಗೆ ಮತ್ತೊಂದು ಅವಕಾಶ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಈ ಯೋಜನೆಯ ನೋಡಲ್ ಅಧಿಕಾರಿ ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ರಮೇಶ್ ವಿವರಿಸುತ್ತಾರೆ.
ಮತ್ತೊಂದು ಸಬೂಬು:  ಖಾಸಗಿ ವೈದ್ಯ ಸಂಸ್ಥೆಗಳ ಸಮೀಕ್ಷೆ, ತಪಾಸಣೆ ಮತ್ತು ಅವುಗಳ ವಿರುದ್ಧ  ಕ್ರಮಕೈಗೊಳ್ಳಲು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ತಾಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿ ನೇತೃತ್ವದ  ಸಮಿತಿಗಳಿವೆ. ಆದರೆ ರಾಜ್ಯದಲ್ಲಿ ಇದನ್ನೆಲ್ಲ ಪರಿಶೀಲಿಸಲು ಯಾವುದೇ ಸಮಿತಿಗಳಿಲ್ಲ. ಆದ್ದರಿಂದ ಕಡಿಮೆ ಅವಧಿಯಲ್ಲಿ ಇದನ್ನು ಜಾರಿಗೊಳಿಸುವುದು ಕಷ್ಟಕರ. ಹಾಗಾಗಿ ಅವಧಿ ವಿಸ್ತರಣೆ ಅನಿವಾರ್ಯ ಎಂಬುದು ಇಲಾಖೆಯ ಮತ್ತೊಂದು ಸಬೂಬು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ