ಮಕ್ಕಳಿಗೆ ಪೋಷಕರ ಅಕ್ಕರೆಯೇ ಮೊದಲ ಔಷಧ

ವಿಕ ಸುದ್ದಿಲೋಕ ಮೈಸೂರು
‘ಮನೆಯಲ್ಲಿ ಸ್ವಚ್ಛತೆಗೆ ಒತ್ತು; ಕುರುಕಲು ತಿಂಡಿಗೆ ಗುಡ್ ಬೈ ಮತ್ತು  ಮಕ್ಕಳಿಗೆ ತಗಲುವ ಸಾಮಾನ್ಯ ಕಾಯಿಲೆ ಕಸಾಲೆ ಬಗ್ಗೆ  ಪ್ರಾಥಮಿಕ ಜ್ಞಾನ...!‘ 
ಯಾವ ಪಾಲಕರು  ಈ ಮೂರು  ಅಂಶಗಳ ಬಗ್ಗೆ ಗಮನಹರಿಸುವರೋ, ಅಂಥವರ ಮನೆ  ವೈದ್ಯರನ್ನು, ಕಾಯಿಲೆ -ಕಸಾಲೆಗಳನ್ನೂ  ದೂರವಿಡಬಲ್ಲ ಶಕ್ತಿ -ಸಾಮಾರ್ಥ್ಯ  ಹೊಂದಿರುತ್ತದೆ.
‘ಮಕ್ಕಳ ಆರೋಗ್ಯ ಸಮಸ್ಯೆಗಳು’ ಕುರಿತು  ಶನಿವಾರ  ವಿಕ ಕಚೇರಿಯಲ್ಲಿ ನಡೆದ  ಯೋಗ ಕ್ಷೇಮ  ‘ಫೋನ್ -ಇನ್ ‘  ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದ  ಡಾ. ಕೆ. ಬಿ. ಮಹೇಂದ್ರಪ್ಪ   ಅವರು  ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ನೀಡುತ್ತಿದ್ದ ಉತ್ತರದ  ಅಂತಿಮ ಸಾರ ಇದೇ  ಆಗಿತ್ತು !
‘ಮಗುವಿಗೆ ಯಾವುದೇ ರೀತಿಯ ಸಮಸ್ಯೆ ಬಂದ್ರೂ, ಯಾರೂ ಗಾಬರಿಯಾಗಬಾರದು. ಮನೆಯಲ್ಲಿಯೇ ಒಂದಿಷ್ಟು ಮದ್ದು ನೀಡಿ, ವೈದ್ಯರಿಗೆ ತೋರಿಸಬೇಕು. ಹೀಗೆ ಬರುವ ಸಮಸ್ಯೆಗಳು ನಿಧಾನವಾಗಿ ವಾಸಿಯಾಗುತ್ತವೆ. ಹಾಗಾಗಿ, ತಡ ಎಂದು  ಆತಂಕಕ್ಕೆ ಬೀಳಬಾರದು. ಪ್ರತಿಯೊಂದಕ್ಕೂ  ಮದ್ದು, ಔಷಧಿ  ಇದ್ದೇ ಇದೆ.  ಗಾಬರಿ ಏಕೆ ?’  ಎಂದು  ಪ್ರಶ್ನಿಸುತ್ತಲೇ  ಬಹುಪಾಲು ಪಾಲಕರಿಗೆ  ಸಾಂತ್ವನ -ಸಮಾಧಾನ ಹೇಳಿದರು.
ವರ್ಷ ೧೦ ತುಂಬಿದರೂ ಮಗು ಹಾಸಿಗೆಯಲ್ಲಿಯೇ ಉಚ್ಚೆ ಮಾಡುತ್ತದೆ; ಕುರಕಲು ತಿಂಡಿಗೆ ಜೋತು ಬಿದ್ದಿರುವುದರಿಂದ, ಅನ್ನ ತಿನ್ನುವುದಿಲ್ಲ; ಬಸ್‌ನಲ್ಲಿ ಪ್ರಯಾಣಿಸುವಾಗ ವಾಂತಿ ಮಾಡಿಕೊಳ್ಳುತ್ತೆ; ಕಕ್ಕಸ್ ಮಾಡಲು ತಿಣುಕಾಡುತ್ತೆ; ಸಕಾಲದಲ್ಲಿ ಹಲ್ಲು ಹುಟ್ಟಿಲ್ಲ; ಕಾಲಲ್ಲಿ-ಮುಖದಲ್ಲಿ ಗುಳ್ಳೆ ಆಗಿವೆ; ಮಗು ತೂಕನೇ ಕಡಿಮೆಯಾಗಿದೆ; ರಾತ್ರಿ ಉಸಿರಾಡಲು ಕಷ್ಟ ಪಡುತ್ತೆ... ಹೀಗೆ ಹತ್ತಾರು ರೀತಿಯ ಪ್ರಶ್ನೆಗಳನ್ನು  ಓದುಗರು  ವೈದ್ಯರ ಮುಂದಿಟ್ಟರು.
‘ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ, ಅದನ್ನು ಬರದಂತೆ ತಡೆಯುವುದೇ ಮೇಲು’ ಎಂಬ ವೈದ್ಯ ಧರ್ಮದಂತೆ-  ಎಲ್ಲ ಸಮಸ್ಯೆಗಳಿಗೂ  ಪರಿಹಾರ ವಿಧಾನ, ಚಿಕಿತ್ಸೆ ಯನ್ನು ವಿವರಿಸುತ್ತಲೇ, ಸಮಸ್ಯೆಯ ಮೂಲ ಬೇರು ಎಲ್ಲಿದೆ ಎಂಬುದರ ಬಗ್ಗೆ   ಬೆಳಕು ಚೆಲ್ಲಿದರು. ವೈದ್ಯರು ನೀಡಿದ ಸಲಹೆ-ಮಾರ್ಗದರ್ಶನಗಳು ಇಂತಿವೆ.
ಮನೆಯೇ ಹೋಟೆಲ್ ಆಗಲಿ
-  ಸಾಮಾನ್ಯವಾಗಿ ಮಕ್ಕಳು ಹೋಟೆಲ್ ಹಾಗೂ ಬೇಕರಿ ತಿಂಡಿಗೆ ಜೋತು ಬೀಳುವುದು ಸಾಮಾನ್ಯ. ಆದರೆ, ಚಾಕುಲೇಟ್, ಲೇಸ್, ಕುರ್ಕುರಿಯಂಥ  ತಿಂಡಿ-ತಿನಿಸುಗಳು ಹೊಟ್ಟೆ ಹಸಿವನ್ನೇ ನುಂಗಿ ಹಾಕಿಬಿಡುತ್ತವೆ. ಹಾಗಾಗಿ, ಮಕ್ಕಳು ಮನೆಯ ಊಟ ಮಾಡಲು ನಿರಾಕರಿಸುತ್ತವೆ. ಇದೇ ವೇಳೆ ಆಧುನಿಕ ತಿನಿಸುಗಳ ರುಚಿಗೆ ನಾಲಗೆಯನ್ನು ಒಪ್ಪಿಸಿಬಿಟ್ಟಿರುತ್ತವೆ. ಇದನ್ನು ತಪ್ಪಿಸಬೇಕು ಅಂದ್ರೆ,ಪಾಲಕರು ಮನೆಯಲ್ಲಿಯೇ ವೈವಿಧ್ಯಮಯ ಆಹಾರವನ್ನು ನೀಡಬೇಕು. ಊಟ ಅಂದ್ರೆ ಕೆಲವು ತಾಯಂದಿರ ದೃಷ್ಟಿಯಲ್ಲಿ ಅನ್ನ, ಹಾಲು. ಇದು ತಪ್ಪಬೇಕು.
- ಕುರುಕಲು ತಿಂಡಿ ಬೇಕು ಎಂದು ಮಗು ಹಠ ಮಾಡಿದರೆ, ಹೊಟ್ಟೆ ತುಂಬಾ ಊಟ ಮಾಡಿಸಿ. ಬಳಿಕ ಕುರುಕಲು ತಿಂಡಿ ನೀಡಿ.
- ೧ ರಿಂದ ೧೪ ಮಕ್ಕಳು ಬೆಳೆಯುವ ಕಾಲ. ಈ ಅವಧಿಯಲ್ಲಿ ಮಕ್ಕಳಿಗೆ ಸಮತೋಲನದಿಂದ ಕೂಡಿದ ಆಹಾರ ನೀಡಬೇಕು. ಶರ್ಕರ ಪಿಷ್ಟ, ಜಿಡ್ಡು, ನ್ಯೂಟ್ರಿನ್, ತರಕಾರಿ, ಹಣ್ಣು-ಹಂಪಲು ಸೇರಿದಂತೆ ಮಕ್ಕಳಿಗೆ ಎಲ್ಲವನ್ನೂ ನೀಡಬೇಕು.
- ಊಟದ ಸಮಯದಲ್ಲಿ  ಮಕ್ಕಳಿಗೆ ನೀತಿ ಕಥೆ, ಹಾಡು ಹೇಳುತ್ತಾ, ಹೊರಗಡೆ ಚಂದಮಾಮನನ್ನು ತೋರಿಸುತ್ತಾ  ಊಟ ಮಾಡಿಸಿದರೆ, ಅವು ಹೆಚ್ಚು ಊಟ ಮಾಡುತ್ತವೆ. ಊಟದ ಜತೆಗೆ ಪ್ರೀತಿಯ ಕೈ ತುತ್ತನ್ನು ನೀಡಬೇಕು.
- ಮಕ್ಕಳಿಗೆ  ದಿನಕ್ಕೆ ಮೂರು ಬಾರಿ ಊಟ ಮಾಡಿಸುವ ಬದಲು,ಐದು ಬಾರಿ ಊಟ ಮಾಡಿಸಿ. ಆಗ ಸ್ವಲ್ಪ -ಸ್ವಲ್ಪ ಊಟವನ್ನು  ಹೆಚ್ಚು ಬಾರಿ ತಿಂದರೆ ಒಳ್ಳೆಯದು.
- ಅನ್ನ ಬಸಿದ ಗಂಜಿ, ರಾಗಿ ಅಂಬಲಿ, ವಡ್ಡರಾಗಿ ಅಂಬಲಿ, ರವೆ ಗಂಜಿಯ ಬಗ್ಗೆ ಮಕ್ಕಳಲ್ಲಿ ಮೋಹ ಬೆಳಸಿ. ಇಂಥ ಆಹಾರಗಳನ್ನು ಆಕರ್ಷಕಗೊಳಿಸಿ.  ಸಂರಕ್ಷಣೆ ಮಾಡಿದ ಯಾವುದೇ ಆಹಾರ ಪದಾರ್ಥದಲ್ಲಿ ಒಂದಿಷ್ಟು ರಾಸಾಯನಿಕ ಅಂಶ ಇರುತ್ತದೆ ಎಂಬುದನ್ನು ಮರೆಯದಿರಿ.
- ಒಂದಕ್ಕಿಂತ ಹೆಚ್ಚು ಮಕ್ಕಳಿದ್ದರೆ- ಅವರ ನಡುವೆ ತಾರತಮ್ಯ ಮಾಡುವುದು ಬೇಡ. ಇದು ಕೂಡ ಕಾಯಿಲೆಗೆ ದಾರಿ ಮಾಡಿಕೊಡುತ್ತದೆ.
ಸ್ವಚ್ಛತೆಗೆ ಆದ್ಯತೆ
- ಇತ್ತೀಚಿನ ಸಮೀಕ್ಷೆಯೊಂದರ  ಅಸ್ತಮಾ ರೋಗ  ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ತಗಲುತ್ತಿದೆ. ಇದಕ್ಕೆ ವಿವಿಧ ರೀತಿಯ ಅಲರ್ಜಿಯೇ ಕಾರಣ. ತಿನ್ನುವ ಅನ್ನ, ಹಾಸಿಗೆಯ  ಧೂಳು, ಸಾಕು ಪ್ರಾಣಿಗಳ ಮೇಲಿನ ಚರ್ಮ, ಎಲ್ಲೆಂದರಲ್ಲಿ ಓಡಾಡುವ ಜಿರಳೆಗಳು... ಹೀಗೆ ನಾನಾ ಮಾರ್ಗದಲ್ಲಿ  ಅಸ್ತಮಾ ಮಕ್ಕಳ ಮೇಲೆ ದಾಳಿ ಇಡುತ್ತದೆ. ಹಾಗಾಗಿ, ಮಕ್ಕಳಿರುವ ಮನೆಗಳಲ್ಲಿ ಸ್ವಚ್ಛತೆಗೆ ಎಲ್ಲಿಲ್ಲದ ಆದ್ಯತೆ ನೀಡಬೇಕು.
- ಮಗು ದಿನಕ್ಕೆ ೯ ಗಂಟೆ ನಿದ್ರೆ ಮಾಡಲೇ ಬೇಕು. ಮನೆಯಲ್ಲಿ ಅಂಥಾ ವಾತಾವರಣ ನಿರ್ಮಿಸಿ.
- ಬೇಸಿಗೆ ಕಾಲದಲ್ಲಿ ಮಕ್ಕಳಿಗೆ ಅನೇಕ ಸೋಂಕುಗಳು ಬರುವ ಸಾಧ್ಯತೆ ಇದೆ. ಹಾಗಾಗಿ, ಕುದಿಸಿದ ಹಾಗೂ ಬೇಯಿಸಿದ ಆಹಾರವನ್ನು ಕೊಡುವುದು ಒಳ್ಳೆಯದು. ನೀರು ಮತ್ತು ಮಜ್ಜಿಗೆ ಯಂಥ ದ್ರವಾಹಾರವನ್ನು ಕಡಿಮೆ ಮಾಡಿ. ಕುದಿಸದ ಇಂಥ ದ್ರವಾಹಾರ ಕಲುಷಿತವಾಗುವ ಸಾಧ್ಯತೆ ಇರುತ್ತದೆ
 ರೋಗದ ಬಗ್ಗೆ  ಮಾಹಿತಿ ಇರಲಿ
- ವರ್ಷ ೧೦ ತುಂಬಿದರೂ ಮಕ್ಕಳು ಹಾಸಿಗೆಯಲ್ಲಿ ಸೂಸು ಮಾಡಿಕೊಳ್ಳುತ್ತವೆ. ಇಂಥ ಮಕ್ಕಳು  ‘ಪ್ರೈಮರಿ ಎನರಿಸಿಸ್’ನಿಂದ ಬಳಲುತ್ತಿರುತ್ತವೆ. ಈ ಮಕ್ಕಳಲ್ಲಿ ಪಿತ್ತಕೋಶ  ದ್ವಾರದಲ್ಲಿರುವ ಸ್ಪಿಂಟರ್ ಕಂಟ್ರೋಲರ್(ಮೂತ್ರವನ್ನು ತಡೆ ಹಿಡಿಯುವ ವ್ಯವಸ್ಥೆ)  ದುರ್ಬಲವಾಗಿರುತ್ತದೆ. ಹಾಗಾಗಿ, ಪಿತ್ತ ಕೋಶ  ತುಂಬಿದ ತಕ್ಷಣ ಮೂತ್ರ ಒಂದು ಕ್ಷಣವೂ ನಿಲ್ಲದಂತೆ ಹೊರಬಂದುಬಿಡುತ್ತದೆ.  ಇಂಥ ಮಕ್ಕಳಿಗೆ ಸಂಜೆ ೭ರ ಬಳಿಕ ನೀರು ನೀಡಬಾರದು. ಮಧ್ಯಾಹ್ನ ಚೆನ್ನಾಗಿ ನೀರು ಕುಡಿಸಿ, ಮೂತ್ರ ವಿಸರ್ಜನೆಯನ್ನು ತಡೆದು ನಿಲ್ಲಿಸುವ ಅಭ್ಯಾಸ ಮಾಡಿಸಬೇಕು. ರಾತ್ರಿ ವೇಳೆ ಮಕ್ಕಳನ್ನು ಏಳಿಸಿ, ಟಾಯ್ಲೆಟ್‌ಗೆ ಕಳುಹಿಸುವುದು ಒಳ್ಳೆಯದು. ಈ  ಎಲ್ಲ ಅಭ್ಯಾಸಗಳ ನಂತರವೂ ಮಗುವಿನ ಸೂಸು ದೌರ್ಬಲ್ಯ ಮುಂದುವರಿದರೆ, ವೈದ್ಯರ ಸಲಹೆ ಪಡೆದು ಔಷಧಿ ಪಡೆಯುವುದು ಒಳ್ಳೆಯವದು. 
 - ಸಾಮಾನ್ಯವಾಗಿ ನಾನಾ ಕಾರಣಗಳಿಂದ ಮಕ್ಕಳಿಗೆ ಜ್ವರ ಬರುತ್ತಿರುತ್ತದೆ. ಇದಕ್ಕಾಗಿ ಎಲ್ಲರ ಮನೆಯಲ್ಲೂ ಪ್ಯಾರಸೈಟಮಲ್ ಎಂಬ ಸಿರಪ್ ಇರಲಿ. ಜ್ವರ ಪೀಡಿತ ಮಗುವಿಗೆ ಉಗುರು ಬೆಚ್ಚಿನ ನೀರಿನಲ್ಲಿ ಮೈ ಒರೆಸಲಿ.
- ಕೆಲವು ಮಕ್ಕಳಿಗೆ ೬ ವರ್ಷವಾದರೂ ಮಾತು ಬರುವುದಿಲ್ಲ, ಕಿವಿ ಕೇಳಿಸುವುದಿಲ್ಲ. ಈ ಎಲ್ಲ ಮಕ್ಕಳು ದೈಹಿಕವಾಗಿ ದುರ್ಬಲವಾಗಿರುತ್ತವೆ. ಹುಟ್ಟಿದ ಮೊದಲ ಎರಡು ವರ್ಷದ ಅವಧಿಯಲ್ಲಿ ಮೆದುಳು ವೇಗವಾಗಿ ಬೆಳೆಯುತ್ತದೆ. ಈ ಹಂತದಲ್ಲಿ  ಸ್ವಲ್ಪ ತೊಂದರೆಯಾದರೂ, ಮಗು ದೈಹಿಕವಾಗಿ ದುರ್ಬಲವಾಗುವುದು, ಬುದ್ಧಿ ಮಾಂದ್ಯತೆ,ಕಿವುಡುತನ  ಸೇರಿದಂತೆ ನಾನಾ ರೀತಿಯ ತೊಂದರೆಗೆ ಸಿಲುಕುತ್ತದೆ. ಇಂಥ ಸಮಸ್ಯೆಗಳಿಗೆ ಈಗ ಪರಿಹಾರ ಇದ್ದೇ ಇದೆ. ಕಿವಿ ಕೇಳಿಸದಿದ್ದರೆ, ಮಾತನಾಡದಿದ್ದರೆ, ಮೈಸೂರಿನಲ್ಲಿರುವ ವಾಕ್ ಶ್ರವಣ ಸಂಸ್ಥೆಗೆ ತೋರಿಸಬಹುದು.
- ಕಾಲಲ್ಲಿ, ಮುಖದಲ್ಲಿ ಸಣ್ಣ -ಸಣ್ಣ ಗುಳ್ಳೆಗಳು ಆಗುತ್ತವೆ. ಚರ್ಮದ ಸೋಂಕು ಇದಕ್ಕೆ ಕಾರಣ. ವೈದ್ಯರ ಸಲಹೆ ಪಡೆದು  ಔಷಧಿ ಪಡೆಯಬೇಕು.
- ೪ ರಿಂದ ೮ ವರ್ಷದ ಮಕ್ಕಳಿಗೆ ಟ್ರಾನ್ಸಿಲ್(ಗಂಟಲಿನಲ್ಲಿ)  ಇರುವುದು ಸಾಮಾನ್ಯ, ವರ್ಷದಲ್ಲಿ ಐದಾರು ಬಾರಿ ದಪ್ಪ ಆಗುತ್ತೆ. ಆದರೆ, ಇದಕ್ಕೆ ಸೋಂಕು ತಗಲಿದರೆ ತೊಂದರೆ. ಶೀತ ಸಂಬಂಧಿ ಚಟುವಟಿಕೆಗಳಿಂದ ದೂರವಿಡಿ. ವೈದ್ಯರ ಸಲಹೆ ಪಡೆಯಿರಿ.
- ೬ ಇಲ್ಲವೇ ೭ ತಿಂಗಳ ಸುಮಾರಿಗೆ ಮಗುವಿಗೆ ಹಲ್ಲು ಹುಟ್ಟಲು ಆರಂಭವಾಗಿ, ಎರಡೂವರೆ ವರ್ಷದೊಳಗೆ ಎಲ್ಲ ೨೦ ಹಾಲು ಹಲ್ಲುಗಳು ಮೂಡುತ್ತವೆ.
ಅನುವಂಶೀಯ ಕಾರಣದಿಂದ ಇಲ್ಲವೇ ಕ್ಯಾಲ್ಸಿಯಂ, ವಿಟಮಿನ್ ಡಿ ಕೊರತೆಯಿಂದಲೂ ಕೆಲ ಮಕ್ಕಳಿಗೆ ಹಲ್ಲು ಬರುವುದು ತಡ ಆಗುತ್ತದೆ. ಮಕ್ಕಳಿಗೆ ರಾಗಿ  ಉತ್ಪನ್ನಗಳನ್ನು ನೀಡುವುದು, ಸೂರ್ಯನ ಬೆಳಕಿಗೆ ಅನಾವರಣಗೊಳಿಸಿದರೆ- ಈ ಕೊರತೆ ನೀಗಬಹುದು.
 - ಶೀತವಾದರೆ ಮಗು ಗೊರ್ ಗೊರ್ ಎಂದು ಮೂಗಿನ ಮೂಲಕ ಸದ್ದು ಮಾಡುತ್ತದೆ. ಶೀತಕ್ಕೆ ಮಗು ಮುಕ್ತವಾಗುವುದು ಬೇಡ. ರಾತ್ರಿ ವೇಳೆ ಮೂಗು ಕಟ್ಟಿದರೆ, ನೇಸಲ್ ಸಲೈ(ಉಪ್ಪು ನೀರು) ಡ್ರಾಪ್ ಹಾಕಿ. 
- ವಿಟಮಿನ್ ಡಿ ಕೊರತೆ ಇರುವ ಮಗುವಿಗೆ ಹಣೆಯಲ್ಲಿ ಬೆವರಿನ ಹನಿಗಳಿರುತ್ತವೆ. ಈ ಬಗ್ಗೆ ಭಯ ಬೇಡ.
- ಕೆಲವು ಮಕ್ಕಳು ಪ್ರಯಾಣಿಸುವಾಗ ವಾಂತಿ ಮಾಡಿಕೊಳ್ಳುತ್ತವೆ. ಚಲನೆ ದೌರ್ಬಲ್ಯವೇ ಇದಕ್ಕೆ ಕಾರಣ. ಇದಕ್ಕೆ ಮದ್ದು ಇದೆ.
ವೈದ್ಯರ ಪರಿಚಯ
ದಶಕದಿಂದ ಮೈಸೂರಿನಲ್ಲಿ ಶಿಶುರೋಗ ತಜ್ಞರಾಗಿ, ಜೆಎಸ್‌ಎಸ್ ವೈದ್ಯ ಕಾಲೇಜಿನ  ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಕೆ. ಬಿ. ಮಹೇಂದ್ರಪ್ಪ ಅವರು ಮೂಲತಃ ದಾವಣಗೆರೆ ಯ ಹೊನ್ನಾಳಿಯವರು. ಬೆಳಗಾವಿಯ ಜವಹರ್‌ಲಾಲ್ ನೆಹರು ವೈದ್ಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ ಬಳಿಕ, ಚೆನ್ನೈ, ಮುಂಬಯಿ ಮತ್ತು ಮೈಸೂರಿನಲ್ಲಿ  ಎಂಡಿ, ಡಿಸಿಎಚ್ ಮತ್ತು ಡಿಎನ್‌ಬಿ ವ್ಯಾಸಂಗ ಪೂರ್ಣಗೊಳಿಸಿದರು.
ರೋಗಕ್ಕೆ ಚಿಕಿತ್ಸೆ ನೀಡುವುದರ ಜತೆಗೆ, ರೋಗ ಬರುವುದನ್ನೇ ನಿಯಂತ್ರಿಸುವುದು ಹೇಗೆ ಎಂಬುದನ್ನು ವಿವರಿಸುವ ವಿರಳ ವೈದ್ಯರ ಸಾಲಿಗೆ ಸೇರುತ್ತಾರೆ. ದೂರವಾಣಿ ಸಂಖ್ಯೆ : ೦೮೨೧-೨೪೮೩೫೭೬

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ