ಭಾರತೀಯ ನೋಟಿಗೆ ಇನ್ನು ದೇಶಿ ಕಾಗದ



ಕುಂದೂರು ಉಮೇಶ ಭಟ್ಟ ಮೈಸೂರು
ಅಭೂತಪೂರ್ವ ಭದ್ರತೆ ಮಧ್ಯೆಯೂ ನೋಟು ಸಂಗ್ರಹದ ಬಾಕ್ಸ್‌ಗಳ ಮಿಸ್ಸಿಂಗ್ ಲಿಂಕ್ ಪ್ರಕರಣಗಳಿಂದ ಕುಖ್ಯಾತಿಗೂ ಪಾತ್ರವಾಗಿದ್ದ ಆರ್‌ಬಿಐ ನೋಟು ಮುದ್ರಣ ಘಟಕದಲ್ಲೀಗ ಹೊಸ ಕೆಲಸ.
ಭಾರತೀಯ ನೋಟುಗಳ ದೇಶಿ ಕಾಗದದ ಮುದ್ರಣ ಘಟಕ ಮೈಸೂರಿನಲ್ಲಿ ಸ್ಥಾಪನೆಯಾಗಲಿದೆ. ನೀವು ಬಳಸುತ್ತಿರುವ ೧೦೦೦ ರೂ. ನೋಟು ಮೊದಲು ಮುದ್ರಣವಾಗಿದ್ದೇ ಮೈಸೂರಿನಲ್ಲಿ. ಅದೂ ವಿದೇಶದ ಕಾಗದದಿಂದ. ೧೦/೫೦ ರೂ.ಗಳ ನೋಟುಗಳ ಮುದ್ರಣಕ್ಕೆ ನಮ್ಮಲ್ಲೇ ತಯಾರಿಸಿದ ಕಾಗದ ಬಳಕೆ ಮಾಡಲಾಗುತ್ತಿದೆ. ದೊಡ್ಡ ಮೊತ್ತದ ನೋಟುಗಳ ಮುದ್ರಣಕ್ಕೂ ನಮ್ಮದೇ ಕಾಗದ ಬಳಸುವ ದಿನಗಳು ಹತ್ತಿರವಾಗುತ್ತಿವೆ.
ನೋಟು ಮುದ್ರಣಕ್ಕಾಗಿಯೇ ಹೊರ ದೇಶಗಳಿಂದ ಕಾಗದ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್(ಅರ್‌ಬಿಐ) ಮೈಸೂರಿನಲ್ಲಿ ಪ್ರತ್ಯೇಕ ಘಟಕ ಸ್ಥಾಪನೆಗೆ ಮುಂದಾಗಿದೆ.
ವಿಶ್ವದಲ್ಲೇ ಅತ್ಯುತ್ತಮ ನೋಟು ಮುದ್ರಣ ಘಟಕ ಎನ್ನುವ ಹಿರಿಮೆಯೊಂದಿಗೆ ೧೪ ವರ್ಷದಿಂದ ಮೈಸೂರಿನಲ್ಲಿ ನೋಟು ಮುದ್ರಣದಲ್ಲಿ ನಿರತವಾಗಿರುವ ಘಟಕದಲ್ಲಿಯೇ ನೋಟಿಗೆ ಬೇಕಾದ ಕಾಗದದ ಉತ್ಪಾದನೆಯೂ ಆರಂಭಗೊಳ್ಳಲಿದೆ. ಅದು ೨೪*೭ ಮಾದರಿಯ ಘಟಕವೂ ಆಗಲಿದೆ.
ಘಟಕ ಸ್ಥಾಪನೆಗೆ ಬೇಕಾದ ಒಪ್ಪಿಗೆ ಈಗಾಗಲೇ ದೊರೆತಿದ್ದು, ಮುಂದಿನ ತಿಂಗಳ ೨೨ರಂದು ಈ ಘಟಕಕ್ಕೆ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈಗಿನ ಯೋಜನೆಯಂತೆ ಮೂರು ವರ್ಷದೊಳಗೆ ಘಟಕ ಕಾಗದ ಉತ್ಪಾದನೆಗೆ ಅಣಿಯಾಗಲಿದೆ.
ಮುದ್ರಣದ ಸುತ್ತ
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿ.(ಬಿಆರ್‌ಬಿಎನ್‌ಎಂಪಿಎಲ್) ಅನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ೧೯೯೫ರಲ್ಲಿ ಆರಂಭಿಸಿತ್ತು. ಸಾರ್ವಜನಿಕ ಸಂಸ್ಥೆ ಹಾಗೂ ಹಾಗೂ ಕಂಪೆನಿ ಕಾಯಿದೆ ೧೯೫೬ರ ಅಡಿ ಬಿಆರ್‌ಬಿಎನ್‌ಎಂಪಿಎಲ್ ರೂಪುಗೊಂಡಿದೆ.
ನೋಟುಗಳ ಬೇಡಿಕೆ ಹಾಗೂ ಪೂರೈಕೆ ಗುರಿಯನ್ನು ಗಮನದಲ್ಲಿಟ್ಟುಕೊಂಡೇ ನೋಟು ಮುದ್ರಣ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದಲೇ ಸರಕಾರಿ ಸ್ವಾಮ್ಯದ ಸಂಸ್ಥೆಯಾದ ಬಿಆರ್‌ಬಿಎನ್‌ಎಂಪಿಲ್ ರೂಪುಗೊಂಡಿತ್ತು.
ಈ ಸಂಸ್ಥೆ ದೇಶದಲ್ಲಿ ಎರಡು ಕಡೆ ಸುಸಜ್ಜಿತ ನೋಟು ಮುದ್ರಣ ಘಟಕ ಹೊಂದಿದೆ. ಅದರಲ್ಲಿ ಒಂದು ಮೈಸೂರಿನಲ್ಲಿದ್ದರೆ, ಮತ್ತೊಂದು ಹಾಗೂ ಪಶ್ಚಿಮ ಬಂಗಾಲದ ಸಾಲ್ಬೋನಿಯಲ್ಲಿದೆ. ಇನ್ನೆರಡು ಘಟಕ(ನಾಸಿಕ್, ದೇವಾಸ್) ಕೇಂದ್ರ ಸರಕಾರದ ನೇರ ಸುಪರ್ದಿಯಲ್ಲಿವೆ.
ಈ ಎರಡೂ ಘಟಕಗಳ ಒಟ್ಟು ಸಾಮರ್ಥ್ಯ ವರ್ಷಕ್ಕೆ ೩೦ ಬಿಲಿಯನ್ ನೋಟುಗಳ ಮುದ್ರಣ. ಮೂರು ಪಾಳಿಯಲ್ಲಿ. ಎರಡೂ ಘಟಕಗಳು ಅತ್ಯಾಧುನಿಕ ಯಂತ್ರಗಳನ್ನು ಹೊಂದಿವೆ. ಮೈಸೂರಿನಲ್ಲಿರುವ ಮುದ್ರಣ ಘಟಕ ಸ್ವಿಟ್ಜೆರ್‌ಲೆಂಡ್ ಮೂಲದ್ದು.
ಕೇಂದ್ರೀಯ ಬ್ಯಾಂಕಿಂಗ್ ಹಾಗೂ ನಿರ್ವಹಣಾ ಪ್ರಾಧಿಕಾರಗಳು ನಿಗದಿಪಡಿಸಿರುವ ಮಾನದಂಡದಂತೆಯೇ ಅಂತರಾಷ್ಟ್ರೀಯ ಗುಣಮಟ್ಟದ ನೋಟುಗಳ ಮುದ್ರಣ ಹಾಗೂ ಬೇಡಿಕೆ ಪೂರೈಕೆಗೆ ಆರ್‌ಬಿಐ ಗಮನ ನೀಡಿದೆ. ಇದಕ್ಕಾಗಿಯೇ ಹೊಸ ಘಟಕ ಸ್ಥಾಪನೆಗೆ ಮುಂದಾಗಿದೆ.
ದೇಶದಲ್ಲಿನ ನೋಟು, ನಾಣ್ಯ ಹಾಗೂ ಕಾಗದ ಪತ್ರಗಳ ಮುದ್ರಣ ಘಟಕಗಳನ್ನು ಒಂದೇ ಸಂಸ್ಥೆಯಡಿ ತರಲು ಆರ್‌ಬಿಐ ಕಾರ‍್ಯಪ್ರವೃತ್ತವಾಗಿದೆ.
೨ ನೋಟು ಮುದ್ರಣ, ೨ ಕಾಗದ ಪತ್ರ ಮುದ್ರಣ ಹಾಗೂ ೪ ನಾಣ್ಯ ಮುದ್ರಣ ಘಟಕಗಳನ್ನು ವಿಲೀನಗೊಳಿಸಿ, ಸೆಕ್ಯರಿಟಿ ಪ್ರಿಂಟ್ ಅಂಡ್ ಮಿಂಟ್ ಕಾರ್ಪೊರೇಷನ್ ಲಿ.(ಎಸ್‌ಡಿಎಂಸಿಐಎಲ್) ಆಗಿ ಪರಿವರ್ತಿಸುವ ಪ್ರಕ್ರಿಯೆ ಆರಂಭಗೊಂಡಿದೆ.
ಎಲ್ಲೆಲ್ಲಿ ಘಟಕ
ಕೇಂದ್ರ ಹಣಕಾಸು ಸಚಿವಾಲಯದ ಅಡಿ ಕಾರ‍್ಯನಿರ್ವಹಿಸುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣದ ಮುಖ್ಯ ಪ್ರವರ್ತಕ.
ದೇಶದಲ್ಲಿ ಸದ್ಯ ನಾಲ್ಕು ಮುದ್ರಣ ಘಟಕಗಳಿವೆ. ಅದರಲ್ಲಿ ೨ ನೋಟು ಮುದ್ರಣ, ಮತ್ತೆರಡು ಪತ್ರಗಳ ಮುದ್ರಣದಲ್ಲಿ ತೊಡಗಿವೆ.
ಇದರಲ್ಲಿ ಮಹಾರಾಷ್ಟ್ರದ ನಾಸಿಕ್, ಮಧ್ಯಪ್ರದೇಶದ ದೇವಾಸ್ ಸರಕಾರಿ ಪತ್ರ, ಚೆಕ್, ಬಾಂಡ್‌ಗಳ ಮುದ್ರಣವಾದರೆ ಹಾಗೂ ಪಶ್ಚಿಮ ಬಂಗಾಲದ ಸಾಲ್ಬೋನಿ ಹಾಗೂ ಮೈಸೂರಿನಲ್ಲಿರುವುದು ನೋಟು ಮುದ್ರಣ ಘಟಕಗಳು. ದಕ್ಷಿಣ ಭಾರತದಲ್ಲಿ ಮೊದಲ ಬಾರಿ ೧೯೯೬ರಲ್ಲಿ ಇಂಥ ಘಟಕ ಮೈಸೂರಿನಲ್ಲಿ ಆರಂಭಗೊಂಡಿತು. ಮೈಸೂರು ಹಾಗೂ ಸಾಲ್ಬೋನಿ ಘಟಕಗಳು ಆರ್‌ಬಿಐ ಸುಪರ್ದಿಯಲ್ಲಿವೆ. ಇವುಗಳು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿ. ಸಂಸ್ಥೆಯಡಿ ಕಾರ‍್ಯನಿರ್ವಹಿಸುತ್ತಿವೆ.
ಮೈಸೂರು ಘಟಕ
ಮೈಸೂರಿನ ಮೇಟಗಳ್ಳಿಯಲ್ಲಿ ವಿಶಾಲ ಘಟಕ ೧೪ ವರ್ಷದಿಂದ ನೋಟು ಮುದ್ರಣದಲ್ಲಿ ನಿರತ. ೬೦೦ ಸಿಬ್ಬಂದಿ ಮೂರು ಪಾಳಿಯಲ್ಲಿ ಕಾರ‍್ಯನಿರ್ವಹಿಸುತ್ತಿದ್ದಾರೆ. ಆರ್‌ಬಿಐನ ನೋಟುಗಳ ನಿರ್ವಹಣೆ ವಿಭಾಗದ ಬೇಡಿಕೆಯಂತೆ ಇಲ್ಲಿ ನೋಟುಗಳ ಮುದ್ರಣವಾಗುತ್ತದೆ. ವರ್ಷದ ಬೇಡಿಕೆ ಹಾಗೂ ನೋಟುಗಳ ಮುಖಬೆಲೆ ಆಧರಿಸಿ ಮುದ್ರಣ ನಡೆಯುತ್ತದೆ.
ದೇಶದಲ್ಲಿ ಅತಿ ದೊಡ್ಡ ಮುದ್ರಣ ಘಟಕವಿದು. ಜತೆಯಲ್ಲಿ ವಿಶ್ವದಲ್ಲೇ ಅತ್ಯುತ್ತಮ ಮುದ್ರಣಗಳಲ್ಲೊಂದು ಎನ್ನುವ ಹಿರಿಮೆಯೂ ಪಾತ್ರವಾಗಿದೆ.
ಸದ್ಯ ದೇಶದ ನೋಟುಗಳ ಮುದ್ರಣದಲ್ಲಿ ಘಟಕ ತೊಡಗಿಕೊಂಡಿದೆ. ಹೊರ ದೇಶದಿಂದ ಮುದ್ರಣದ ಬೇಡಿಕೆಯಿಲ್ಲ. ನಾಸಿಕ್ ಘಟಕ ಮಾತ್ರ ನೇಪಾಳ ದೇಶದ ನೋಟುಗಳ ಮುದ್ರಣ ಜವಾಬ್ದಾರಿಯನ್ನೂ ಹೊತ್ತಿದೆ.
ಏನಿದು ಹೊಸ ಘಟಕ
ನೋಟುಗಳ ಮುದ್ರಣಕ್ಕೆ ವಿಶೇಷವಾದ ಕಾಗದವನ್ನೇ ಬಳಸಲಾಗುತ್ತದೆ. ಹತ್ತಿ ಹಾಗೂ ನೀರನ್ನು ಕಚ್ಚಾ ವಸ್ತುಗಳಾಗಿ ಬಳಸಿ ನೋಟು ತಯಾರಿಕೆಗೆ ವಿಶೇಷವಾದ ಕಾಗದ ತಯಾರಿಸಲಾಗುತ್ತದೆ. ನಮ್ಮಲ್ಲಿ ನೋಟುಗಳ ಬಳಕೆ ಯಥೇಚ್ಛವಾಗಿದ್ದರೂ ಸ್ವಂತ ಕಾಗದ ಘಟಕ ಇರಲಿಲ್ಲ. ೪೨ ವರ್ಷಗಳ(೧೯೬೮) ಹಿಂದೆಯೇ ಮಧ್ಯಪ್ರದೇಶದ ಹೊಶಂಗಾಬಾದ್‌ನಲ್ಲಿ ಕಾಗದ ಬಳಕೆ ಘಟಕ ಸ್ಥಾಪಿಸಲಾಯಿತು. ಆದರೆ ಈ ಘಟಕ ಬೇಡಿಕೆಯಷ್ಟು ನೋಟುಗಳ ಪೂರೈಕೆಯಷ್ಟು ಸಾಮರ್ಥ್ಯ ಹೊಂದಿಲ್ಲ. ಇದಲ್ಲಿ ೫೦೦/೧೦೦೦ ರೂ.ಗಳ ನೋಟುಗಳ ಮುದ್ರಣಕ್ಕೆ ಬೇಕಾದ ಕಾಗದ ಲಭ್ಯವಿಲ್ಲ. ಇದರಿಂದಲೇ ಆರ್‌ಬಿಐ ನೋಟು ತಯಾರಿಕೆಗೆ ಕಾಗದವನ್ನು ಜರ್ಮನಿ ಹಾಗೂ ಯೂರೋಪ್ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಇದನ್ನು ತಪ್ಪಿಸಬೇಕು. ನೋಟು ಮುದ್ರಣದಲ್ಲೂ ನಾವೇ ಸ್ವಾವಲಂಬಿಯಾಗೋಣ ಎನ್ನುವ ಕಾರಣದಿಂದ ಆರ್‌ಬಿಐ ಹೊಸದೊಂದು ಘಟಕ ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ ಕೋಟ್ಯಾಂತರ ರೂ.ಗಳನ್ನು ಇಲ್ಲಿ ಹೂಡಲಾಗುತ್ತಿದೆ.
ಪ್ರತ್ಯೇಕ ಕಾಗದ ಮುದ್ರಣ ಘಟಕ, ವಿಶಾಲ ಕಟ್ಟಡ, ಇದಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿ ನೇಮಕ ಪ್ರಕ್ರಿಯೆಗಳು ಶಂಕುಸ್ಥಾಪನೆ ನಂತರ ಆರಂಭವಾಗಲಿವೆ.
೧೨ ಸಾವಿರ ಮೆಟ್ರಿಕ್ ಟನ್ ಕಾಗದ ಉತ್ಪಾದನೆ ಈ ಘಟಕದ ಗುರಿ. ಇದಕ್ಕಾಗಿ ತಲಾ ೬ ಸಾವಿರ ಮೆಟ್ರಿಕ್ ಟನ್ ಎರಡು ಲೈನ್ ಇಲ್ಲಿ ರೂಪುಗೊಳ್ಳಲಿವೆ.
ನಕಲಿ ನೋಟುಗಳ ಹಾವಳಿ
ಈಗ ನಕಲಿ ನೋಟುಗಳ ಹಾವಳಿ ಜೋರಾಗಿದೆ. ಹೊರ ರಾಜ್ಯಗಳಿಂದ ನಕಲಿ ನೋಟುಗಳನ್ನು ತಂದು ವಂಚಿಸುವ ಜಾಲವು ಪ್ರಬಲವಾಗಿದೆ. ಇಂಥ ನಕಲಿ ಜಾಲಗಳನ್ನು ತಪ್ಪಿಸುವ ಉದ್ದೇಶದಿಂದಲೂ ಈ ಹೊಸ ಘಟಕ ಸ್ಥಾಪನೆ ಮಹತ್ವ ಪಡೆಯಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ