‘ಹಳಿ’ಗೆ ಬಂದ ಕೊಡಗಿನ ಕನಸು


ಪಿ.ಓಂಕಾರ್ ಮೈಸೂರು
ರಾಜ್ಯಕ್ಕೆ ‘ಬಂಪರ್ ಉಡುಗೊರೆ’ ನೀಡಿರುವ ರೈಲ್ವೆ ಮಂತ್ರಿ ಮಮತಾ ಬ್ಯಾನರ್ಜಿಮೈಸೂರು ಭಾಗಕ್ಕೆ ಮೋಸವನ್ನೇನೂ ಮಾಡಿಲ್ಲ. ಹಾಗಂತ, ರೈಲಿ ನಷ್ಟೇ ಉದ್ದದ ನಿರೀಕ್ಷೆಗಳ ಪಟ್ಟಿಯನ್ನು ಪೂರ್ತಿಯಾಗಿ ‘ಹಳಿ’ಗೂ ತಂದಿಲ್ಲ.
ಮೈಸೂರು-ಮಡಿಕೇರಿ-ಮಂಗಳೂರು ಮತ್ತು ಚಾಮರಾಜನಗರ-ಕೃಷ್ಣಗಿರಿ ಮಾರ್ಗಗಳ ಸರ್ವೆ, ಮೈಸೂರು-ಶಿವಮೊಗ್ಗ ಇಂಟರ್ಸಿಟಿ ರೈಲು ಆರಂಭಕ್ಕೆ ಹಸಿರು ನಿಶಾನೆ ತೋರುವ ಮೂಲಕ ಮಮತಾ ಸಮಾಧಾನಕರ ‘ಕೃಪೆ ’ತೋರಿದ್ದಾರೆ. ದೂರದ ಕೆಲ ರೈಲುಗಳು ಮೈಸೂರು ಮೂಲಕ ಸಂಚರಿಸಲಿರು ವುದು ‘ಬೋನಸ್’.
ಮತ್ತದೇ ನಿರಾಸೆ: ನಿರೀಕ್ಷೆಯಂತೆ, ಚಾಮರಾಜ ನಗರ-ಮೆಟ್ಟುಪಾಳ್ಯಂ ರೈಲ್ವೆ ಯೋಜನೆ ವಿಷಯದಲ್ಲಿ ಈ ಬಾರಿಯೂ ನಿರಾಸೆ. ಪ್ರಧಾನಿ ಮೂಲಕ ಅರಣ್ಯ ಸಚಿವಾಲಯದ ಮನ ವೊಲಿಸು ವುದಾಗಿ ಇತ್ತೀಚೆಗೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು ನೀಡಿದ್ದ ಭರವಸೆ ಅಷ್ಟಕ್ಕೇ ಸೀಮಿತವಾಗಿದೆ.ಈ ಮಾರ್ಗದ ಸಾಧಕ-ಬಾಧಕಗಳ ಕುರಿತು ದಿಲ್ಲಿ ಮೆಟ್ರೋ ಮತ್ತು ಕೊಂಕಣ ರೈಲು ಮಾರ್ಗದ ರೂವಾರಿ ಶ್ರೀಧರನ್ ಅವರಿಂದ ಮಮತಾ ವರದಿ ಕೇಳಿದ್ದಾರೆ ಎನ್ನಲಾಗಿದೆ.
ಕೇಳಿದ್ದೊಂದು,ಈಡೇರಿದ್ದು ಇನ್ನೊಂದು: ಅದಾಗದಿದ್ದರೆ ಹೋಗಲಿ, ಚಾಮರಾಜನಗರ-ಕೊಳ್ಳೇಗಾಲ-ಕನಕಪುರ-ಬೆಂಗಳೂರು ಮಾರ್ಗದ ಸರ್ವೇಗಾದರೂ ಈ ಬಾರಿ ಹಸಿರು ನಿಶಾನೆ ದೊರಕಿಸಿ ಎಂದು ಈ ಭಾಗದ ಜನ, ಜನಪ್ರತಿನಿಧಿಗಳು ಸಚಿವ ಮುನಿಯಪ್ಪ ಮುಂದೆ ಬೇಡಿಕೆ ಸಲ್ಲಿಸಿದ್ದರು.
ಅದಕ್ಕೆ ಇಲಾಖೆ ಸ್ಪಂದಿಸಿದೆಯೋ, ಇಲ್ಲವೋ ಎನ್ನುವುದು ಬಜೆಟ್ ನಂತರವೂ ಸ್ಪಷ್ಟವಿಲ್ಲ. ಯಾಕೆಂದರೆ, ಸರ್ವೆಗೆ ಒಪ್ಪಿತ ‘ಚಾಮರಾಜನಗರ -ಕೃಷ್ಣಗಿರಿ’ ಮಾರ್ಗ ಯಾವ ಊರು, ಕೇರಿಗಳ ಮೂಲಕ ಹಾಯ್ದು ಹೋಗುತ್ತದೆ ಎನ್ನುವುದು ಖಚಿತವಿಲ್ಲ. ‘ಯಾವ ಮಾರ್ಗ ಸೂಕ್ತ ಎನ್ನು ವುದನ್ನು ಸರ್ವೆ ಸಂದರ್ಭವೇ ಗೊತ್ತುಪಡಿಸಲಾಗುತ್ತದೆ ’ಎನ್ನುವುದು ಇಲಾಖೆ ಮೂಲಗಳ ಸ್ಪಷ್ಟನೆ. ಅದು ಏನೇ ಇದ್ದರೂ, ಸರ್ವೇಗೆ ಅನುಮತಿ ಸಿಕ್ಕಿರುವುದು ಈ ಭಾಗದ ಜನರಿಗೆ ಸಂತಸ ತಂದಿದೆ.
ಕೊಡಗಿಗೆ ಸಂಪರ್ಕ: ‘ಕಾಫಿ ನಾಡು ಕೊಡಗಿಗೆ ರೈಲು ಸಂಪರ್ಕ ಕಲ್ಪಿಸಿ’ ಎಂಬ ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಗೆ ಮಮತಾ ಸ್ಪಂದಿಸಿದ್ದಾರೆ. ಎರಡು-ಮೂರು ಮಾರ್ಗಗಳ ಬೇಡಿಕೆ ಇತ್ತಾದರೂ ಮೈಸೂರು- ಮಡಿಕೇರಿ-ಮಂಗಳೂರು ಮಾರ್ಗ ಸರ್ವೇಗೆ ಅಸ್ತು ಎಂದಿರುವುದು ಸಂಭ್ರಮದ ಹೊಂಗಿರಣ ಮೂಡಿಸಿದೆ. ಸರ್ವೆ ನಡೆದು, ಅನುಷ್ಠಾನಕ್ಕೆ ಬಂದರೆ ಸಾಂಸ್ಕೃತಿಕ ನಗರಿಯಿಂದ ಕಡಲ ತಡಿಗೆ ನೇರ ರೈಲು ಸಂಪರ್ಕ ದೊರಕಲಿದೆ. ವಾಣಿಜ್ಯ, ಪ್ರವಾಸೋದ್ಯಮದ ದೃಷ್ಟಿಯಿಂದ ಭವಿಷ್ಯದಲ್ಲಿ ಲಾಭದಾಯಕ ಮಾರ್ಗವೂ ಆಗಲಿದೆ.
ಶಿವಮೊಗ್ಗಕ್ಕೆ ಇಂಟರ್ಸಿಟಿ: ಮೈಸೂರು-ಶಿವಮೊಗ್ಗ ಇಂಟರ್ಸಿಟಿ ರೈಲು ಒಂದರ್ಥದಲ್ಲಿ ಅನಿರೀಕ್ಷಿತ ಕೊಡುಗೆ. ಈಗಿರುವ ‘ಫಾಸ್ಟ್ ಪ್ಯಾಸೆಂಜರ್ ರೈಲಿನಲ್ಲಿ ದಿನವಿಡೀ ಪ್ರಯಾಣಿಸಬೇಕು’ ಎಂದು ತಪಿಸು ವವರಿಗೆ ಹೊಸ ರೈಲು ಅನುಕೂಲವಾಗಲಿದೆ. ಶಿವಮೊಗ್ಗ-ತಾಳಗುಪ್ಪ ಮಾರ್ಗ ಫೂರ್ಣವಾದ ನಂತರ, ಪ್ರವಾಸೋದ್ಯಮ ದೃಷ್ಟಿಯಿಂದಲೂ ಈ ರೈಲು ಹೆಚ್ಚಿನ ಪ್ರಯೋಜನಕಾರಿಯಾಗಬಹುದು.
ಬೇಡಿಕೆಯಾಗೇ ಉಳಿದವು: ಉಳಿದಂತೆ, ಮೈಸೂರು ಇಲ್ಲವೇ ನಂಜನಗೂಡಿನಲ್ಲಿ ಕಂಟೈನರ್ ಯಾರ್ಡ್ ಸ್ಥಾಪಿಸಬೇಕು, ಮೈಸೂರಿಗೆ ಇನ್ನೊಂದು ರೈಲ್ವೆ ನಿಲ್ದಾಣ ಬೇಕು, ಮಂಡ್ಯದ ಮದ್ದೂರಿನಲ್ಲಿ ರೈಲು ನಿಲ್ದಾಣ ಆರಂಭಿಸಬೇಕು,ಆದಿಚುಂಚನಗಿರಿ-ನಾಗಮಂಗಲ ಮಾರ್ಗ ವಾಗಿ ತುಮಕೂರು-ಮೈಸೂರು ರೈಲ್ವೆಯೋಜನೆ ಸರ್ವೆಗೆ ಅಸ್ತು ನೀಡಬೇಕು, ನಂಜನಗೂಡು-ನೀಲಂಬೂರ್ ನಡುವೆ ರೈಲು ಸಂಚಾರ ಆರಂಭಿಸಬೇಕು ಎಂಬಿತ್ಯಾದಿ ಪ್ರಮುಖ ಬೇಡಿಕೆಗಳ ಬಗ್ಗೆ ಮಮತಾ ಕಣ್ಣೆತ್ತಿಯೂ ನೋಡಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ