ಮೈಸೂರು ವಿವಿಯಲ್ಲಿ ಮತ್ತೆ ದೂರಶಿಕ್ಷಣ

ವಿಕ ಸುದ್ದಿಲೋಕ, ಮೈಸೂರು
ತೆರಪಿನ(ಬಿಡುವು) ವೇಳೆಯಲ್ಲಿ ಮನೆಯಲ್ಲಿಯೇ ಕುಳಿತು ಅಂಚೆ ಮೂಲಕ ಬರುವ ಪಠ್ಯವನ್ನು ಕಲಿತು ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪಡೆಯಲು ಬಯಸುವವರಿಗೆ ಇದೊಂದು ಸಿಹಿ ಸಮಾಚಾರ.
ಎಲ್ಲವೂ ‘ಕ್ರಾಫರ್ಡ್ ಭವನ’ ಅಂದುಕೊಂಡಂತೆ ನಡೆದರೆ ೨೦೧೦-೧೧ನೇ ಶೈಕ್ಷಣಿಕ ಸಾಲಿನಿಂದಲೇ ಅಂಚೆ ಮತ್ತು ತೆರಪಿನ ಶಿಕ್ಷಣ ಕೋರ್ಸ್‌ಗಳು ಮೈಸೂರು ವಿವಿಯಲ್ಲಿ ಪುನರಾ ರಂಭವಾಗಲಿವೆ. ಮಾನಸ ಗಂಗೋತ್ರಿಯಲ್ಲಿ ಅಂಚೆ ಮತ್ತು ತೆರಪಿನ ಶಿಕ್ಷಣ ನಿರ್ದೇಶನಾಲಯ (ಕರೆಸ್ಪಾಂಡೆನ್ಸ್ ಕೋರ್ಸ್ ಅಂಡ್ ಕಂಟಿನ್ಯೂಯಿಂಗ್ ಡೈರೆಕ್ಟೋರೇಟ್) ಸ್ಥಾಪಿಸುವ ಸಂಬಂಧ ತಜ್ಞರ ಸಮಿತಿ ರಚಿಸಿರುವ ಕರಡು ನಿಯಮಾವಳಿಗಳಿಗೆ ಮೈಸೂರು ವಿವಿ ಸಿಂಡಿಕೇಟ್ ಸಭೆ ಸಮ್ಮತಿ ಸೂಚಿಸಿದೆ.
ಉನ್ನತ ಶಿಕ್ಷಣವನ್ನು ಮನೆ ಬಾಗಿಲಿಗೆ ತಲುಪಿಸುವ ಹಾಗೂ ಅದನ್ನು ಹೆಚ್ಚು ಸಾರ್ವತ್ರೀಕರಣಗೊಳಿಸುವ ನಿಟ್ಟಿನಲ್ಲಿ ಅಂಚೆ-ತೆರಪಿನ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಿದ ದೇಶದ ಮೊತ್ತ ಮೊದಲ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆ ಮೈಸೂರು ವಿಶ್ವವಿದ್ಯಾನಿಲಯದ್ದು. ದೇ. ಜವರೇಗೌಡರ ವಿಶೇಷ ಆಸಕ್ತಿಯ ಪರಿಣಾಮ ೧೯೬೯ರಲ್ಲಿ ಈ ಶಿಕ್ಷಣ ಪದ್ಧತಿ ಆರಂಭವಾಯಿತು. ಬಳಿಕ ದೇಶದ ಇತರೆ ಎಲ್ಲ ವಿವಿಗಳು ಕೂಡ ಈ ಪದ್ಧತಿಯನ್ನು ಆರಂಭಿಸಿದವು.
ದೂರ ಶಿಕ್ಷಣದ ಮೂಲಕ ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲಿಸುತ್ತಿರುವ ಹೊಸದಿಲ್ಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯಕ್ಕೂ (ಇಗ್ನೋ) ಮೈಸೂರು ವಿವಿಯ ಅಂಚೆ-ತೆರಪಿನ ಶಿಕ್ಷಣ ಕ್ರಮವೇ ಸ್ಫೂರ್ತಿ.
ಸುಮಾರು ೨೮ ವರ್ಷಗಳ ಕಾಲ ಈ ಶಿಕ್ಷಣ ಪದ್ಧತಿಯಡಿ ಸಾವಿರಾರು ವಿದ್ಯಾರ್ಥಿಗಳಿಗೆ ಪದವಿ ನೀಡಿದ ಮೈಸೂರು ವಿವಿ, ೧೯೯೮ರಲ್ಲಿ ತಾತ್ಕಾಲಿಕವಾಗಿ ಈ ಪದ್ಧತಿಗೆ ವಿರಾಮ ನೀಡಿತು. ಏಕೆಂದರೆ- ವರ್ಷದಿಂದ ವರ್ಷಕ್ಕೆ ಈ ಪದ್ಧತಿ ಜನಪ್ರಿಯವಾಗಲಾರಂಭಿಸಿದ್ದನ್ನು ಗಮನಿಸಿದ ಕರ್ನಾಟಕ ಸರಕಾರ, ಮೈಸೂರು ವಿವಿಯ ನೆರಳಿನಲ್ಲಿಯೇ ಅಂಚೆ- ತೆರಪಿನ ಶಿಕ್ಷಣ ನೀಡಲು ಪ್ರತ್ಯೇಕ ವಿವಿಯೊಂದನ್ನು ಸ್ಥಾಪಿಸಿತು. ಹಾಗೆ ಆರಂಭವಾದ ವಿವಿಯೇ ಗಂಗೋತ್ರಿಯ ಅಂಗಳದಲ್ಲಿ ಸ್ವಾತಂತ್ರ್ಯವಾಗಿ ಬೆಳೆದು ನಿಂತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ !
೨೦೦೫ರಲ್ಲಿ ಮರು ಪ್ರಯತ್ನ : ಮುಕ್ತ ವಿವಿ ಸ್ಥಾಪನೆ ಬಳಿಕ ನಿಲ್ಲಿಸಿದ ಅಂಚೆ-ತರೆಪಿನ ಶಿಕ್ಷಣ ಕ್ರಮವನ್ನು ೨೦೦೫ರಲ್ಲಿ ಪುನರಾರಂಭಿಸಲು ಮೈಸೂರು ವಿವಿ ಪ್ರಯತ್ನ ನಡೆಸಿತು. ಆ ವೇಳೆಗೆ ಕರ್ನಾಟಕ ರಾಜ್ಯ ವಿವಿಗಳ ಕಾಯ್ದೆ -೨೦೦೨ ಜಾರಿಗೆ ಬಂದಿದ್ದು; ದೂರ ಶಿಕ್ಷಣ ಪದ್ಧತಿಯಡಿ ಪದವಿ ಬಯಸುವವರು ಬೇಡಿಕೆ ಹೆಚ್ಚಿದ್ದು ಹಾಗೂ ಸಂಪನ್ಮೂಲ ಕ್ರೋಢಿಕರಣ ಸಾಧ್ಯ ಎಂಬುದನ್ನು ಕೆಲವು ವಿವಿಗಳು ಮಾಡಿ ತೋರಿಸಿದ್ದು- ಸೇರಿದಂತೆ ನಾನಾ ಕಾರಣಗಳನ್ನು ಗಮನಿಸಿಯೇ ಮೈಸೂರು ವಿವಿ ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿತು. ಕುವೆಂಪು ವಿವಿ, ಕರ್ನಾಟಕ ವಿವಿ, ಬೆಂಗಳೂರು ವಿವಿ ಸೇರಿದಂತೆ ಇತರೆ ಸಾಂಪ್ರದಾಯಿಕ ವಿವಿಗಳು ವಿವಿಯ ಹೊಸ ಕಾಯ್ದೆಯ ಪ್ರಯೋಜನ ಪಡೆದು, ದೂರ ಶಿಕ್ಷಣವನ್ನು ಆರಂಭಿಸಿದ್ದವು. ಈ ಧೈರ್ಯದ ಮೇಲೆ ಮೈಸೂರು ವಿವಿ ನಡೆಸಿದ ಪ್ರಯತ್ನಕ್ಕೆ ಅಂದಿನ ಕುಲಾಧಿಪತಿ ಟಿ. ಎನ್. ಚತುರ್ವೇದಿ ಮಾನ್ಯ ಮಾಡಲಿಲ್ಲ. ಮೈಸೂರು ವಿವಿ ಅಂಗಳದ ಪಕ್ಕದಲ್ಲಿಯೇ, ದೂರ ಶಿಕ್ಷಣ ನೀಡುವುದಕ್ಕಾಗಿಯೇ ಇರುವ ಮುಕ್ತ ವಿವಿ ಕಾರ್ಯ ನಿರ್ವಹಿಸುತ್ತಿದೆ. ನೆರೆ-ಹೊರೆಯ ಎರಡು ವಿವಿಗಳು ಒಂದೇ ರೀತಿಯ ಶಿಕ್ಷಣ ಪದ್ಧತಿ ಅನುಸರಿಸುವುದು ಸಲ್ಲದು ಎಂದು ರಾಜ್ಯಪಾಲರು ಬುದ್ಧಿಮಾತು ಹೇಳಿದ್ದರು.
ವಸ್ತ್ರ ಸಂಹಿತೆ ಬದಲು: ಘಟಿಕೋತ್ಸವದ ವಸ್ತ್ರ ಸಂಹಿತೆ ಬದಲಿಸಬೇಕೆಂಬ ವಿವಿಯ ಅಪೇಕ್ಷೆ ವರ್ಷದ ಮಟ್ಟಿಗೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಿರುವ ಪದ್ಧತಿಯನ್ನು ಕೈ ಬಿಟ್ಟು, ಮೈಸೂರು ಪೇಟ ಮತ್ತು ಭಾರತೀಯ ಸರಳು ಉಡುಪನ್ನೇ ಘಟಿಕೋತ್ಸವದ ‘ವೇಷ-ಭೂಷಣ’ವಾಗಿ ಬಿಂಬಿಸಬೇಕು ಎಂದು ವಿವಿ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಕುಲಪತಿ ಪ್ರೊ. ತಳವಾರ್ ವಿಶೇಷ ಆಸಕ್ತಿ ವಹಿಸಿ ಉಪ ಸಮಿತಿಯನ್ನು ರಚಿಸಿದ್ದರು. ಸಮಿತಿ ಹಲವು ಸಭೆಗಳನ್ನೂ ನಡೆಸಿ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸಮಿತಿಯಲ್ಲಿರುವ ಪರೀಕ್ಷಾಂಗ ಕುಲಸಚಿವ ಬಿ. ರಾಮು ಅವರು ವಸ್ತ್ರ ಸಂಹಿತೆ ಬದಲಿಸಲು ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗಿದೆ.
ಮತ್ತೆ ಚಿಗುರಿದ ಕನಸು
ಈಗ ಉನ್ನತ ಶಿಕ್ಷಣದ ಆಸೆ-ಆಕಾಂಕ್ಷೆಗಳು ಇನ್ನಷ್ಟು ಹೆಚ್ಚಿವೆ. ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಬರುತ್ತಿರುವವರ ಸಂಖ್ಯೆ ಕೇವಲ ಶೇ. ೧೩.೭ರಷ್ಟಿದೆ. ಈ ಪ್ರಮಾಣವನ್ನು ೨೦೨೦ರ ವೇಳೆಗೆ ಶೇ. ೨೫ರಷ್ಟು ಮುಟ್ಟಿಸಬೇಕು ಎಂಬುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬಯಕೆ. ಈ ಹಿನ್ನೆಲೆಯಲ್ಲಿ ಎಲ್ಲ ಸಾಂಪ್ರದಾಯಿಕ ವಿವಿಗಳು ದೂರ ಶಿಕ್ಷಣ ಆರಂಭಿಸಲು ಯುಜಿಸಿ ಮತ್ತು ದೂರ ಶಿಕ್ಷಣ ಮಂಡಳಿಗಳೇ ಪ್ರೋತ್ಸಾಹ ನೀಡುತ್ತಿವೆ. ಇದನ್ನು ಗ್ರಹಿಸಿರುವ ಮೈಸೂರು ವಿವಿ ಈಗ ಅಂಚೆ-ತೆರಪಿನ ಶಿಕ್ಷಣ ನೀಡಲು ಪ್ರಯತ್ನ ಆರಂಭಿಸಿದೆ. ಬದಲಾದ ಸನ್ನಿವೇಶದಲ್ಲಿ ಈಗಿನ ಕುಲಾಧಿಪತಿ ಹನ್ಸ್‌ರಾಜ್ ಭಾರದ್ವಾಜ್ ವಿವಿಯ ಪ್ರಯತ್ನಕ್ಕೆ ಬೆಂಬಲ ನೀಡುವ ಸಾಧ್ಯತೆಯೇ ಹೆಚ್ಚಿದೆ. ಇದಲ್ಲದೆ, ವಿಶ್ವವಿದ್ಯಾನಿಲಯದ ೨೦೦೦ರ ಕಾಯ್ದೆ ಎಲ್ಲೂ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿದೆ. ಕಾಯ್ದೆಯ ಪ್ರಕಾರ ಸಾಂಪ್ರದಾಯಿಕ ವಿವಿಗಳು ‘ದೂರ ಶಿಕ್ಷಣ’ ಪದ್ಧತಿ ಆರಂಭಿಸುವಂತಿಲ್ಲ. ಆದರೆ, ಕರೆಸ್ಪಾಂಡೆನ್ಸ್ (ಅಂಚೆ)ಕೋರ್ಸ್ ನಡೆಸಲು ಯಾವುದೇ ಅಡ್ಡಿ ಇಲ್ಲ. ಈ ನಿಯಮವನ್ನೇ ಮೈಸೂರು ವಿವಿ ಗಟ್ಟಿಯಾಗಿ ಹಿಡಿದುಕೊಂಡಿದೆ. ಹಾಗಾಗಿಯೇ ವಿವಿ ಕೋರ್ಸ್‌ಗೆ ಹೆಸರಿಡುವ ಯತ್ನದಲ್ಲಿಯೇ ಬುದ್ಧಿವಂತಿಕೆ ಪ್ರದರ್ಶಿಸಿದೆ. ನೆನಪಿರಲಿ- ವಿವಿ ಆರಂಭಿಸುತ್ತಿರುವುದು ದೂರ ಶಿಕ್ಷಣವಲ್ಲ. ಅಂಚೆ ಮತ್ತು ತೆರಪಿನ ಶಿಕ್ಷಣ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ