ಪಡಿತರ ಕಾರ್ಡ್ ನೋಡಿ ‘ಕೋಮಾ’ಗೆ ಹೋದೀರಿ ಜೋಕೆ...


ನಿಮಗೆ ಕೊಟ್ಟ ಪಡಿತರ ಚೀಟಿಯಲ್ಲಿ ನಿಮ್ಮದೇ ಭಾವಚಿತ್ರವಿದೆಯಾ ಎಂದು ಖಚಿತಪಡಿಸಿಕೊಳ್ಳಿ,. ನಿಮ್ಮ ಹಾಗೂ ಮನೆಯವರ ಹೆಸರುಗಳು ಸರಿಯಾಗಿವೆಯೇ ಎಂದು ನೋಡಿಕೊಳ್ಳಿ. ಕೊನೆಗೆ ನಿಮ್ಮ ಮನೆ ವಿಳಾಸವನ್ನು ಪಕ್ಕದ ಮನೆಯವರನ್ನಾಗಿ ಮಾಡಿದ್ದಾರಾ ಎಂದೂ ಖಾತ್ರಿ ಮಾಡಿಕೊಳ್ಳಿ....
ಜಿಲ್ಲೆಯಲ್ಲಿ ವಿತರಿಸುತ್ತಿರುವ ಪಡಿತರ ಚೀಟಿಗಳ ಅವಾಂತರ ಮುಂದುವರಿದಿದೆ. ಕೆಲವರ ಭಾವಚಿತ್ರವೇ ನಾಪತ್ತೆಯಾಗಿದ್ದರೆ, ಮತ್ತೆ ಕೆಲವರದ್ದು ಬದಲಾಗಿದೆ. ಜಿಲ್ಲೆಯಲ್ಲಿ ಕಾರ್ಡ್ ಕೊಡುವ ಹೊಣೆ ಹೊತ್ತ ಆಹಾರ ಮತ್ತು ನಾಗರಿಕ ಇಲಾಖೆ ಮತ್ತೊಮ್ಮೆ ವಿಫಲವಾಗಿ ದ್ದರೆ, ಗುತ್ತಿಗೆ ಪಡೆದ ಕೊಮ್ಯಾಟ್ ಸಂಸ್ಥೆ ಜನರನ್ನೇ ಕೋಮಾಕ್ಕೆ ತಳ್ಳುತ್ತಿದೆ. ಬೇಕಂತಲೇ ತಪ್ಪು ಮಾಡಿ ಮತ್ತೆ ಸರಿಪಡಿಸಿಕೊಳ್ಳಿ ಎನ್ನುವ ದಂಧೆ  ಸದ್ದಿಲ್ಲದೇ ನಡೆಯುತ್ತಿದೆ.
ಹೇಗಿದೆ ನೋಡಿ: ನಟ ಮಂಡ್ಯ ರಮೇಶ್ ಅವರ ಭಾವಚಿತ್ರವೇ ಕಾರ್ಡಿನಲ್ಲಿ ಮಾಯ. ತಾವೇ ಖುದ್ದಾಗಿ ಹೋಗಿ ತೆಗೆಸಿದರೂ ಭಾವಚಿತ್ರವೇ ನಾಪತ್ತೆ. ಜತೆಗೆ ವಿಳಾಸವೂ ನಾಪತ್ತೆ. ಕುಟುಂಬದವರ ಸಂಬಂಧಗಳಲ್ಲೂ ಹೆಚ್ಚೂ ಕಡಿಮೆ. ಪತ್ನಿ ಸರೋಜ ಹಾಗೂ ರಮೇಶ್ ಅವರ ವಯಸ್ಸಿನ ಅಂತರ ಏಳು ವರ್ಷ. ಪಡಿತರ ಕಾರ್ಡಿನಲ್ಲಿ ರಮೇಶ್ ತಮ್ಮ ಪತ್ನಿಗಿಂತ ಏಳು ವರ್ಷ ಚಿಕ್ಕವರು. ರಮೇಶ್ ಅವರ ಪುತ್ರಿ ಹೆಸರು ದಿಶಾ, ಚೀಟಿಯಲ್ಲಿ ಆಕೆ ದೀಪಾ.
ಅದೇ ರೀತಿ ಕುವೆಂಪುನಗರ ನಿವಾಸಿ ರಮಾಮಣಿ ಕಮಲೇಶ್ ಅವರಿಗೆ ನೀಡಿರುವ ಕಾರ್ಡಿನಲ್ಲೂ ಮತ್ತೊಂದು ಅವಾಂತರ, ರಮಾಮಣಿ ಅವರ ಪುತ್ರ ಕೆ.ಗುರುಪ್ರಸಾದ್ ಅವರ ಭಾವಚಿತ್ರಕ್ಕೆ ಇನ್ನಾರದೋ ಚಿತ್ರ. ತಮ್ಮ ಅತ್ತಿಗೆ ವಾಣಿಶ್ರೀಯಾಗಿ ಗುರುಪ್ರಸಾದ್ ಫೋಟೋ. ...ಇಂಥ ಸಾವಿರಾರು ತಪ್ಪುಗಳು ನುಸುಳಿವೆ. ವಿತರಣೆ ಯಾದ ಲಕ್ಷಕ್ಕೂ ಹೆಚ್ಚು ಕಾರ್ಡಿನಲ್ಲಿ ಶೇ.೭೦ಕ್ಕೂ ಹೆಚ್ಚು ಇಂಥಹುದ್ದೇ ತಪ್ಪು.
ಇದರೊಟ್ಟಿಗೆ ಹೊಸ ಪಡಿತರ ಕಾರ್ಡ್ ಅನ್ನು ತಮ್ಮ ವಿಳಾಸ ದಾಖಲೆ ಯಾಗಿ ಬಳಸಲು ಹೋದರೆ ಅಲ್ಲಿಯೂ ತಪ್ಪುಗಳಾಗಿ ಇದನ್ನು ಯಾಕಾದರೂ ಪಡೆದೆ ವಪ್ಪಾ ಎಂದು ಶಪಿಸುತ್ತಿದ್ದಾರೆ.
ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರನ್ನೇ ಕೇಳಿದರೆ, ಉತ್ತರ ಪಕ್ಕಾ ಸರಕಾರಿ ಶೈಲಿಯಲ್ಲಿ. ‘ಅಯ್ಯೋ ತಪ್ಪುಗಳು ಆಗಿರುವುದು ನನ್ನ ಗಮನಕ್ಕೂ ಬಂದಿದೆ. ಅದನ್ನು ಸರಿಪಡಿಸಿಕೊಳ್ಳಲು ಮತ್ತೊಂದು ಅವಕಾಶ ನೀಡುತ್ತೇವೆ. ನೀವು ತಲೆಕೆಡಿಸಿಕೊಳ್ಳಬೇಡಿ‘..
ಕೊಮ್ಯಾಟ್ ನ ಅವಾಂತರ : ಇಷ್ಟೆಲ್ಲಾ ಅವಾಂತರಗಳಿಗೆ ಮೂಲ ಕಾರಣ ಕೊಮ್ಯಾಟ್. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಯೋಜನೆಗಳ ಗುತ್ತಿಗೆ ಪಡೆದಿದೆ ಈ ಸಂಸ್ಥೆ. ಚುನಾವಣೆ ಆಯೋಗ ನೀಡುವ ಗುರುತಿನ ಚೀಟಿ ಇರಬಹುದು, ಪಡಿತರ ಚೀಟಿ ವಿತರಣೆಯೇ ಇರಬಹು ದು, ಇವುಗಳ ತಾಂತ್ರಿಕ ಹೊಣೆಗಾರಿಕೆ ಈ ಸಂಸ್ಥೆಯದ್ದೇ. ೨೦೦೮ರ ವಿಧಾನಸಭೆ ಚುನಾವಣೆ ವೇಳೆ ಸರಿಯಾಗಿ ಗುರುತಿನ ಕಾರ್ಡ್ ವಿತರಿಸಲಿಲ್ಲ ಎನ್ನುವ ಕಾರಣಕ್ಕೆ ಜಿಲ್ಲಾಧಿಕಾರಿ ಮಣಿವಣ್ಣನ್ ಈ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದರು. ಅದಾದ ನಂತರವೂ ಸಂಸ್ಥೆಯ ಲೋಪಗಳ ಸರಮಾಲೆ ಮುಗಿದಿಲ್ಲ.
ಕೊಮ್ಯಾಟ್ ಸಂಸ್ಥೆಯಲ್ಲಿ ವೃತ್ತಿಪರ ಸಿಬ್ಬಂದಿಯ ಕೊರತೆಯಿಂದ ಪ್ರತಿ ಬಾರಿ ತಪ್ಪುಗಳು ನುಸುಳುತ್ತಿವೆ. ಯಾವುದೋ ಭಾವಚಿತ್ರಕ್ಕೆ ಇನ್ನಾವುದೇ ಹೆಸರು, ವಿಳಾಸದಲ್ಲಿ ಭಾರಿ ಏರುಪೇರು. ಹೀಗೆ ತಪ್ಪು ಮಾಡುತ್ತಿದ್ದರೂ ಸರಕಾರದ ಗುತ್ತಿಗೆ ತಪ್ಪುತ್ತಿಲ್ಲ.
ನಿಮ್ಮದೇ ಹಣ ಯಾರದೋ ಕೆಲಸ: ಇದು ಯಾರದೋ ದುಡ್ಡಲ್ಲಿ ಎಲ್ಲಮ್ಮನ ಜಾತ್ರೆ ಮಾಡೋದಲ್ಲ. ಬದಲಿಗೆ ನಮ್ಮಿಂದಲೇ ಹಣ ಪಡೆದು ತಪ್ಪುಗಳಿಂದಲೇ ತುಂಬಿದ ಪಡಿತರ ಚೀಟಿ ನೀಡುವ ಕಾಯಕ.
ತಾತ್ಕಾಲಿಕ ಪಡಿತರ ಚೀಟಿ ಪಡೆಯಲು ಮೊದಲು ನೀಡಿದ ಮೊತ್ತ ೫೦ ರೂ. ಅದಾದ ನಂತರ ಈಗ ಕಾಯಂ ಕಾರ್ಡ್ ವಿತರಣೆಗೆ ಪಡೆಯುತ್ತಿರುವ ಹಣ ೧೫ ರೂ. ಮೊದಲ ಕಾರ್ಡ್‌ನಲ್ಲೂ ಸಾಕಷ್ಟು ತಪ್ಪುಗಳಿದ್ದವು. ಅದು ಹೊಸ ಕಾರ್ಡ್‌ನಲ್ಲಿ ಸರಿಯಾಗಬಹುದು ಎಂದುಕೊಂಡರೆ ಮತ್ತದೇ ತಪ್ಪುಗಳ ಕಂತೆ
ಈಗಾಗಲೇ ೪೫ ರೂ. ಫೋಟೋಗೆ, ಕಾರ್ಡ್ ಪಡೆಯಲು ೧೫ ರೂ. ನೀಡಲಾಗಿದೆ. ಅವರು ಮಾಡಿದ ತಪ್ಪು ಮತ್ತೆ ಸರಿಪಡಿಸಲು ನಾವೇ ಮತ್ತೆ ಹಣ ತೆರಬೇಕು. ಕಾರ್ಡ್ ಕೊಟ್ಟವನನ್ನು ನಿಲ್ಲಿಸಿ ಕೇಳದೇ ಇದ್ದರೆ ಮುಂದೆಯೂ ಕಾಣಲಿದೆ ಇದೇ ತಪ್ಪು.
ವಿತರಣೆಯಾದ ಕಾರ್ಡ್‌ಗಳು
 ಜಿಲ್ಲೆಯಲ್ಲಿ ಮುದ್ರಣವಾಗಿದ್ದು ೫,೯೯,೯೭೫
 ವಿತರಣೆಯಾಗಿದ್ದು-೫,೧೭,೪೫೬.
ಕೊಮ್ಯಾಟ್‌ಗೆ ಸರಕಾರ ನೀಡಿದ ಗುತ್ತಿಗೆ
 ೧ ಕಾರ್ಡ್‌ಗೆ ೨೮ ರೂ.
 ಒಟ್ಟು- ೧.೨೩ ಕೋಟಿ ರೂ.
 (ಫೋಟೋ ತೆಗೆಯಲು ೨೩ ರೂ, ಮುದ್ರಣಕ್ಕೆ ೫ ರೂ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ