ಇದು ಪರಂಪರೆ ಇಲಾಖೆಯ ಪುರಾಣ

ಶ್... ಸದ್ದು ಮಾಡಬೇಡಿ ನಿದ್ದೆಯಲ್ಲಿದ್ದಾರೆ !
ಜೆ.ಶಿವಣ್ಣ ಮೈಸೂರು

ಪಾರಂಪರಿಕ ನಗರಿ ಅನ್ನೋ ಹೆಸರಿಗೆ ಮಸಿ ಬಳಿಯೋ ಕೆಲಸ ಇನ್ಯಾರಿಂದಲೂ ಆಗುತ್ತಿಲ್ಲ, ಸ್ವತಃ ಪಾರಂಪರಿಕ ಇಲಾಖೆಯೇ ಆ ಕೆಲಸ ಮಾಡುತ್ತಿದೆ ಅನ್ನದೇ ವಿಧಿಯಿಲ್ಲ.
ಕೇಂದ್ರ ಸರಕಾರದ ನರ್ಮ್ ಯೋಜನೆಯಡಿ ಮೈಸೂರಿನ ಪಾರಂಪರಿಕ ಸ್ಮಾರಕಗಳನ್ನು ಮತ್ತಷ್ಟು ಚೆಂದಗೊಳಿಸಲು, ಅಚ್ಚುಕಟ್ಟುಗೊಳಿಸಲು ಕೋಟಿಗಟ್ಟಲೆ ಹಣ ಸಿಕ್ಕಿದೆ. ಆದರೆ ಅದನ್ನು ಬಳಸೋ ಹೊಣೆ ನಿಭಾಯಿಸಲಿಕ್ಕೆ ಇಲಾಖೆಯವರು ತಯಾರೇ ಇಲ್ಲ. ತಮಾಷೆಯೆಂದರೆ ‘ನಿದ್ದೆ’ಯಲ್ಲಿ ರುವ  ಇಲಾಖೆ ಅಧಿಕಾರಿಗಳಂತೂ ‘ಕಣ್ಣು’ ಬಿಟ್ಟು ನೋಡೇ ಇಲ್ಲ !
ನರ್ಮ್ ಯೋಜನೆ ಬಂದು ನಾಲ್ಕು ವರ್ಷ ವಾಯಿತು. ಇದುವ ರೆಗೂ ಪಾರಂಪರಿಕ ಇಲಾಖೆ ಒಂದೇ ಒಂದು ಯೋಜನೆ ರೂಪಿ ಸಿಲ್ಲ. ಅರ್ಜೆಂಟಿಗೊಂದು ಅಂಗಿ ಹೊಲೆದ ರಾಯ್ತು ಅಂತ ಹೊಲೆದ ಯೋಜನೆಯೂ (ಡಿಪಿಆರ್)ಗಳು ಹೋದಷ್ಟೇ ವೇಗವಾಗಿ ವಾಪಸ್ ಬಂದಿವೆ, ಅಂದರೆ ತಿರಸ್ಕೃತಗೊಂಡಿವೆ. ಹೊಸದೊಂದು ಉತ್ತಮ ವಾದುದನ್ನು ಕಳಿಸಬೇಕು ಅನ್ನೋ ಕಾಳಜಿ ಈ ಅಧಿಕಾರಿಗಳ ರಕ್ತದಲ್ಲೇ ಬಂದಿಲ್ಲ ಬಿಡಿ.
ಪರಂಪರೆ ಇಲಾಖೆ ಇದೆ ಎನ್ನೋದು ತಿಳಿದಿ ರೋದೇ ಕೆಲವರಿಗೆ. ದಸರೆ ಹೊತ್ತಿನಲ್ಲಿ ಮೆಲ್ಲಗೆ ಎದ್ದು ಕುಳಿತು ತೂಕಡಿಸುತ್ತಾ ಕಟ್ಟಡ ಗಳ ಮೇಲಿನ ಧೂಳನ್ನು ಒರೆಸುವಷ್ಟರಲ್ಲಿ ದಸರೆಯೇ ಮುಗಿದಿರುತ್ತೆ, ಮತ್ತೆ ನಿದ್ದೆ. ಇಲಾಖೆ ಯಿಂದ ನೇರವಾಗಿ ಜನರಿಗೆ ಏನೂ ಆಗ ಬೇಕಿಲ್ಲ. ಹಾಗಾಗಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಇರೋ ಅಧಿಕಾರಿ ಗಳು ಕೆಲಸ ಮಾಡದ್ದಕ್ಕೆ ಶಿಕ್ಷೆ ಯಾರಿಗೆ ಗೊತ್ತೇ? ನರ್ಮ್ ಅಧಿಕಾರಿಗಳಿಗೆ.
ಪಾರಂಪರಿಕ ಇಲಾಖೆ ಸಿದ್ಧಪಡಿಸಬೇಕಾಗಿದ್ದ ಯೋಜನೆಯ ಹೊಣೆಯನ್ನು ಈಗ ನರ್ಮ್ ಆಧಿಕಾರಿಗಳಿಗೆ ವಹಿಸಲಾಗಿದೆ. ಇಷ್ಟಾಗಿದ್ದೂ ಪಾರಂಪರಿಕ ಇಲಾಖೆ ಅಧಿಕಾರಿಗಳಿಗೆ ಭರ್ಜರಿ ಖುಷಿಯಂತೆ ! ಒಂಚೂರು ತಲೆ ಕೆಡಿಸಿಕೊಂಡಿಲ್ಲ.
ಪರಂಪರೆ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳನ್ನು ಮಾಹಿತಿಗೆ ಸಂಪರ್ಕಿಸಿದರೆ ಸಿಗೋದೇ ಕಷ್ಟ. ಸಿಕ್ಕರೂ- ‘ಈಗ ನಮ್ಮದೇನೂ ಇಲ್ಲ. ಎಲ್ಲವನ್ನೂ ನರ್ಮ್ ವಿಶೇಷಾಧಿಕಾರಿ ಗಳನ್ನು ಕೇಳಿ, ಅಧೀಕ್ಷಕ ಎಂಜಿನಿಯರ್ ಅವರನ್ನು ಕೇಳಿ’ ಎನ್ನುತ್ತಾರೆ ನಾಚಿಕೆ ಇಲ್ಲದೇ.
ಮೈಸೂರಿನಲ್ಲಿ ನೂರಾರು ಪಾರಂಪರಿಕ ಕಟ್ಟಡಗಳಿವೆ. ಕೇವಲ ಕಟ್ಟಡಗಳಷ್ಟೇ ಅಲ್ಲ. ಪಾರಂಪರಿಕ ಸ್ಮಾರಕ, ವೃಕ್ಷ, ರಸ್ತೆ, ವೃತ್ತ, ಕೆರೆಗಳಿವೆ, ಜತೆಗೆ ವಸ್ತುಗಳು, ತಿನಿಸುಗಳೂ ಸಹ! ‘ಅರಮನೆಗಳ ನಗರಿ’ಯೂ ಆಗಿರುವ ಮೈಸೂರಿನಲ್ಲಿ ಎಲ್ಲವೂ ‘ಪಾರಂಪರಿಕತೆ’ಯೊಂದಿಗೆ ತಳುಕು ಹಾಕಿಕೊಂಡಿವೆ.
ಜಗದ್ವಿಖ್ಯಾತ ಅಂಬಾವಿಲಾಸ ಅರಮನೆ ಮೈಸೂರಿಗೆ ಕಿರೀಟ. ಇನ್ನು ನಗರಕ್ಕೆ ಕಳಸ ವಿಟ್ಟಂತಿರುವ ಚಾಮುಂಡಿ ಬೆಟ್ಟವೂ ಪಾರಂಪರಿಕ ಮಹತ್ವದ್ದೇ. ರಾಷ್ಟ್ರಕವಿ ಕುವೆಂಪು ಅವರಿಗೆ ಸ್ಫೂರ್ತಿಯಾಗಿದ್ದ ಕುಕ್ಕರಹಳ್ಳಿ ಕೆರೆಗೆ, ಜಂಬೂ ಸವಾರಿ ಸಾಗುವ  ಸಯ್ಯಾಜಿರಾವ್ ರಸ್ತೆಗೆ, ಸರಕಾರಿ ಅತಿಥಿ ಗೃಹಕ್ಕೆ, ಶಾ ಪಸಂದ್ ಟಾಂಗಾಕ್ಕೆ ಒಂದೊಂದು ಇತಿಹಾಸವಿದೆ.
ಇದನ್ನು ಪರಿಗಣಿಸಿಯೇ ಕೇಂದ್ರ ಸರಕಾರ ಮೈಸೂರನ್ನು ಪಾರಂಪರಿಕ ನಗರಗಳ ಸಾಲಿಗೆ ಸೇರಿಸಿ ಜೆಎನ್-ನರ್ಮ್‌ನಲ್ಲಿ ಎರಡು ಸಾವಿರ ಕೋಟಿ ರೂ. ಬೃಹತ್ ಮೊತ್ತವನ್ನೇ ‘ಪಾರಂಪರಿಕ ನಗರಿ’ಯ  ಪುನರುಜ್ಜೀವನಕ್ಕೆ ನೀಡಿದೆ. ವಿಪರ್ಯಾಸ ಎಂದರೆ - ಮೈಸೂರಿಗೆ ಅನ್ವರ್ಥವಾದ ‘ಪಾರಂಪರಿಕತೆ’ ಉಳಿವಿಗೆ ಇರುವ ಇಲಾಖೆಗೇ ಪುನರುಜ್ಜೀವನವಾಗಬೇಕಿದೆ. ನರ್ಮ್ ಅಡಿಯಲ್ಲಿ ಬಸ್ ನಿಲ್ದಾಣ, ಕುಡಿಯುವ ನೀರು ಇತ್ಯಾದಿ ಅನೇಕ ಕಾಮಗಾರಿಗಳು ಆರಂಭಗೊಂಡ ವೇನೋ ನಿಜ. ಅದರೆ  ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಯಿಂದಾಗಿ ಒಂದೂ ‘ಪರಂಪರೆ’ ಯೋಜನೆ ಆರಂಭವಾಗಿಲ್ಲ.
ನ್ಯೂಯಾರ್ಕ್ ಟೈಂಸ್ ಪತ್ರಿಕೆ ಗುರುತಿಸಿರುವ  ಜಗತ್ತಿನ ಅತ್ಯುತ್ತಮ ೩೧ ತಾಣ ಗಳ ಪೈಕಿ ಮೈಸೂರು ನಾಲ್ಕನೇ ಸ್ಥಾನ ಪಡೆದಿದೆ. ಅಷ್ಟು ಮಾತ್ರವಲ್ಲ, ಪ್ರೇಮಸೌಧ ತಾಜ್‌ಮಹಲ್‌ಗೆ ಭೇಟಿ ನೀಡುವ ಪ್ರವಾಸಿಗರಿಗಿಂತಲೂ ಹೆಚ್ಚು ಮಂದಿ ಇಲ್ಲಿಗೆ ಆಗಮಿಸುತ್ತಾರೆ ಎನ್ನುವ ಅಗ್ಗಳಿಕೆ. ಆದರೆ  ಪ್ರವಾಸಿಗರಿಗೆ ಇತಿಹಾಸದ ‘ಹೊಳವು- ಹೊಳಪು’ ನೀಡುವ ಕಾರ‍್ಯ ಮಾತ್ರ  ಶೂನ್ಯ.  ನರ್ಮ್ ಮಾರ್ಗಸೂಚಿ ಪ್ರಕಾರ ಯಾವುದಾದರೂ ಒಂದು ಪುರಾತನ ಬಡಾವಣೆಯನ್ನು ಪುನರುಜ್ಜೀವನಗೊಳಿ ಸುವ ಮತ್ತು  ‘ಹೆರಿಟೇಜ್ ವಾಕ್’ ರೂಪಿಸಿ ಪ್ರವಾಸಿಗರಿಗೆ ಸ್ಥಳ ಇತಿಹಾಸ ಕಟ್ಟಿ ಕೊಡುವಂಥದ್ದೇನೂ ಆಗಿಲ್ಲ.
ಸರಕಾರಿ ಇಲಾಖೆಗಳಿರುವ ಮತ್ತು ಖಾಸಗಿ ಒಡೆತನದ ಕೆಲ ಕಟ್ಟಡಗಳು ಸ್ವಲ್ಪ ಸುಸ್ಥಿತಿಯಲ್ಲಿ ದ್ದರೆ, ಹಲವು ‘ದುಸ್ಥಿತಿ’ಯತ್ತ ಸಾಗಿವೆ. ಇನ್ನುಳಿ ದವು ಬಹುತೇಕ ‘ಹಾಳು ಸುರಿಯುತ್ತಿವೆ’. ಅನೇಕ ಕಟ್ಟಡಗಳು ‘ನೆಲಸಮ’ವಾಗಿವೆ. ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ಸ್ ಕಟ್ಟಡ, ಕೆ.ಆರ್. ಆಸ್ಪತ್ರೆ, ಲಕ್ಷ್ಮೀಪುರಂ ಸರಕಾರಿ ಶಾಲೆ, ದೊಡ್ಡ ಗಡಿಯಾರ, ಫೌಂಟನ್ ವೃತ್ತ ಇತ್ಯಾದಿ ದುಸ್ಥಿತಿಯಲ್ಲಿ ದ್ದರೆ, ಹಳೇ ಜನತಾ ಬಜಾರ್ ಕಟ್ಟಡ, ಗನ್‌ಹೌಸ್ ಅವಜ್ಞೆಗೆ ಗುರಿಯಾಗಿ ಹಾಳುಬಿದ್ದಿವೆ. ನಜರ್‌ಬಾದ್ ನಲ್ಲಿ ಆದಾಯ ತೆರಿಗೆ ಇಲಾಖೆ ಕಚೇರಿಯಿದ್ದ ಕಟ್ಟಡ ನೆಲಸಮವಾಗಿದೆ.
ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡವಾದರೂ ಜೀರ್ಣೋದ್ಧಾರ ಬಲುದೂರ. ಕೆಡವಿ ಪುನರ್‌ರೂಪಿಸುವ, ಇರುವುದನ್ನೇ ದುರಸ್ತಿಗೊಳಿಸುವ ಇತ್ಯಾದಿ ಹತ್ತಾರು ಸಲಹೆ ಗಳು ಹರಿದಾಡಿದರೂ ಒಂದೂ  ಸಾಕಾರವಾಗಲಿಲ್ಲ. ಅರಮನೆ ಸಮೀಪದ  ಲ್ಯಾನ್ಸ್‌ಡೌನ್ಸ್ ಕಟ್ಟಡದ್ದೂ ಇದೇ ಪಾಡು. ಸಾರ್ವಜನಿಕ ಕಚೇರಿ ಗಳು (ಕಾಡಾ) ಕಟ್ಟಡದ ಪಾರಂಪರಿಕ ಸುಂದರ ವಿನ್ಯಾಸದ ಕಬ್ಬಿಣ ಗ್ರಿಲ್‌ಗಳು ಕಳ್ಳರ ಪಾಲಾಗಿದೆ. ಸಿಪಿಸಿ ಪಾಲಿಟೆಕ್ನಿಕ್ ಬಳಿ ಅಶೋಕ ರಸ್ತೆಯಲ್ಲಿರುವ  ಕೋಟೆ ಗೋಡೆ ಮತ್ತು ವೀಕ್ಷಣಾ ಗೋಪುರ ಅನಾಥವಾ ಗಿವೆ. ನೂರಾರು ವರ್ಷಗಳಾಗಿರುವ ವೃಕ್ಷಗಳ ಸಂರಕ್ಷಣೆಯೂ ಅಷ್ಟಕ್ಕಷ್ಟೆ.
ಯದುವಂಶದ ಅರಸರು ಕಟ್ಟಿದ ಪಾರಂಪರಿಕ ನಗರಿಯ ಅನೇಕ ‘ರಚನೆ’ಗಳು ‘ಸಂರಕ್ಷಣೆ’ ಇಲ್ಲದೇ ಇತಿಹಾಸದ ಪುಟಗಳನ್ನು ಸೇರುವ ಹಂತದಲ್ಲಿವೆ. ಒಟ್ಟಾರೆ ನರ್ಮ್ ಎಂಬೋ ಹಣದ ಥೈಲಿಯೇ ಅಂಗೈಯಲ್ಲಿದ್ದರೂ ಪಾರಂಪರಿಕ ನಗರಿಯ ‘ಹೆರಿಟೇಜ್’ ರಕ್ಷಿಸಿ ಚೆಂದಗೊಳಿಸುವ ಕಾಲ ಇನ್ನೂ ಕೂಡಿ ಬಂದಿಲ್ಲ.
 ಸರಕಾರಿ, ಖಾಸಗಿ ಸೇರಿದಂತೆ ೨೦೦ಕ್ಕೂ ಹೆಚ್ಚು ಕಟ್ಟಡಗಳನ್ನು ಗುರುತಿಸಿದ್ದು, ಸುಮಾರು ೨೦೦ ವರ್ಷಗಳಷ್ಟೂ ಪುರಾತನ ಕಟ್ಟಡಗಳು ಇಲ್ಲಿವೆ. ನರ್ಮ್ ಯೋಜನೆಗಿಂತ ಹಿಂದೆಯೇ ೧೯೯೭ರಲ್ಲಿ ಪ್ರಾಚ್ಯವಸ್ತು ಸ್ಮಾರಕ ಅಧಿನಿಯಮದಡಿ ೧೦ ಕಟ್ಟಡಗಳನ್ನು ಪಾರಂಪರಿಕ ಸ್ಮಾರಕ ಗಳೆಂದು ಗುರುತಿಸಿ ‘ವಿಶೇಷ ನಿಯಂತ್ರಿತ ಪ್ರದೇಶ’ ಎಂದು ಘೋಷಿಸಲಾಗಿತ್ತು. ಪಾಲನೆ ಮಾತ್ರ ಸೊನ್ನೆ. ಮೈಸೂರು ಅರಮನೆ, ಜಗನ್ಮೋಹನ ಅರಮನೆ, ಲಲತಮಹಲ್ ಪ್ಯಾಲೇಸ್, ಸೇಂಟ್ ಫಿಲೋಮಿನಾ ಚರ್ಚ್, ನಗರಪಾಲಿಕೆ, ಸರಕಾರಿ ಅತಿಥಿಗೃಹ, ಓರಿಯಂಟಲ್ ಲೈಬ್ರರಿ, ಕೆ.ಆರ್.ಆಸ್ಪತ್ರೆ, ಜಿಲ್ಲಾಧಿಕಾರಿಗಳ ಕಚೇರಿ ಇತ್ಯಾದಿ ಸೇರಿವೆ. ನಿಯಮದಂತೆ ಸ್ಮಾರಕ ಗಳ ಆವರಣದಿಂದ ೧೦೦ಮೀ. ದೂರದಲ್ಲಿ ಯಾವುದೇ ಕಟ್ಟಡ ೭ ಮೀ. ಎತ್ತರ ಮೀರಬಾರದು. ೧೦೦ ಮೀ. ದೂರಕ್ಕಿಂತ ೨೦೦ ಮೀಟರ್ ಒಳಗೆ ೧೦.೫ ಮೀ., ೪೦೦ ಮೀ. ದೂರದಲ್ಲಿ ೧೪ ಮೀ. ಎತ್ತರದ ಕಟ್ಟಡ ನಿರ್ಮಿಸಬಹುದು. ಅದ್ಯಾವುದೂ ಪಾಲನೆಯಾಗಿಲ್ಲ. ಪುರಭವನದ ಸಮೀಪ ನಿರ್ಮಾಣಗೊಳ್ಳುತ್ತಿರುವ ಮಕ್ಕಾಜಿ ಚೌಕ ವಾಣಿಜ್ಯ ಸಂಕೀರ್ಣ ಅದಕ್ಕೆ ತಾಜಾ ಉದಾಹರಣೆ. ಇಲಾಖೆಯ ಅಧಿಕಾರಿಗಳ್ಯಾರೂ ಅದನ್ನು ಕೇಳುವುದಿಲ್ಲ.
ಇಲಾಖೆ ಗುರುತಿಸಿದ್ದ ಕಟ್ಟಡಗಳ ಪೈಕಿ ೧೬ ಪ್ರಥಮ ಹಂತದಲ್ಲಿ ಪುನರುಜ್ಜೀವನಗೊಳ್ಳಬೇಕಿತ್ತು. ಮಾದರಿಯಾಗಿ ಲಕ್ಷ್ಮೀಪುರಂನಲ್ಲಿ ೧೯೧೪ರಲ್ಲಿ ಸ್ಥಾಪನೆಯಾದ ಸರಕಾರಿ ಬಾಲಕರ ಶಾಲೆ, ೧೮೭೨ ರಲ್ಲಿ ಅಸ್ತಿತ್ವಕ್ಕೆ ಬಂದ ಮಹಾರಾಜ ಸಂಸ್ಕೃತ ಪಾಠಶಾಲೆ ಜೀರ್ಣೋದ್ಧಾರಕ್ಕೆ ೨.೯ ಕೋಟಿ ರೂ.ಗಳ ಸಮಗ್ರ ಯೋಜನಾ ವರದಿ ಸಲ್ಲಿಕೆಯಾಗಿತ್ತು. ಆದರೆ ಡಿಪಿಆರ್ ತಿರಸ್ಕೃತ ಗೊಂಡು ಹಿಂದಕ್ಕೆ ಬಂದದ್ಧೇ ಹೆಚ್ಚು. ಈಗಷ್ಟೇ ‘ಪಾರಂಪರಿಕ ಕಟ್ಟಡಗಳು ಮತ್ತು ವೃತ್ತಗಳಿಗೆ ಮೂಲಸೌಕರ‍್ಯ ಒದಗಿಸುವ ಯೋಜನೆ’ಗೆ ಅನುಮೋದನೆಯಾಗಿದ್ದು, ಹಣ ಬಿಡುಗಡೆ ಯಾಗಿಲ್ಲ. ಪಾರಂಪರಿಕ ಕಟ್ಟಡಗಳೆಂದರೆ- ದೇವರಾಜ ಮಾರುಕಟ್ಟೆ, ಸೀತಾವಿಲಾಸ ಧರ್ಮಶಾಲಾ, ಲ್ಯಾನ್ಸ್‌ಡೌನ್ ಬಿಲ್ಡಿಂಗ್ಸ್, ವಾಣಿವಿಲಾಸ ಮಾರುಕಟ್ಟೆ, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್, ಮಹಾರಾಣಿ ಸರಕಾರಿ ವಿಜ್ಞಾನ ಕಾಲೇಜು, ಮಹಾರಾಣಿ ಕಿರಿಯ ಕಾಲೇಜು, ಕೃಷ್ಣರಾಜೇಂದ್ರ ಕಣ್ಣಿನ ಆಸ್ಪತ್ರೆ, ಲಕ್ಷ್ಮೀಪುರಂ ಬಾಲಕರ ಸರಕಾರಿ ಶಾಲೆ, ಸರಕಾರಿ ಆಯುರ್ವೇದ ಮಹಾ ವಿದ್ಯಾಲಯ, ಕೆ.ಆರ್.ಆಸ್ಪತ್ರೆ ಮುಖ್ಯ ಕಟ್ಟಡ, ಮಹಾರಾಜ ಸಂಸ್ಕೃತ ಪಾಠಶಾಲೆ, ಬನುಮಯ್ಯ ಪ್ರೌಢಶಾಲೆ, ಕುಪ್ಪಣ್ಣ ಪಾರ್ಕ್ ಮತ್ತು ಹಾರ್ಡಿಂಜ್ ವೃತ್ತ, ಚಿಕ್ಕ ಗಡಿಯಾರ.
‘ಸಂರಕ್ಷಣೆ’ ಉದ್ದೇಶದೊಂದಿಗೆ  ೧೯೯೯ ರಲ್ಲಿ ‘ಭೌಗೋಳಿಕ ಸೂಚ್ಯಂಕಗಳು‘ (ಜಿಯೋ ಗ್ರಾಫಿಕಲ್ ಇಂಡಿಕೇಷನ್ಸ್) ಅಡಿ ಯಲ್ಲಿ ೧೪೩ ಸಾಂಪ್ರದಾಯಿಕ ವಸ್ತುಗಳನ್ನು ಗುರುತಿಸ ಲಾಗಿತ್ತು. ಆ ಪೈಕಿ ಕರ್ನಾಟಕದ ಪಾಲು ೨೫. ಅದರಲ್ಲಿ ಮೈಸೂರಿನ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ಪೇಟ, ಮೈಸೂರಿನ ಚಿಗುರೆಲೆ (ವೀಳ್ಯದೆಲೆ), ಮೈಸೂರು ರೇಷ್ಮೆ, ಶ್ರೀಗಂಧ, ಅಗರಬತ್ತಿ, ಇನ್‌ಲೇ ವರ್ಕ್ ಸೇರಿವೆ. ಇವುಗಳಿಗೂ ಒಂದು  ಪರಂಪರೆ ಇದೆ. ಪ್ರವಾಸೋದ್ಯಮ ಇಲಾಖೆ ಇವುಗಳನ್ನು ಸಂರಕ್ಷಿಸಿ ‘ಮೈಸೂರು ಬ್ರಾಂಡ್’ ಆಗಿ ಉತ್ತೇಜನ (ಪ್ರಮೋಟ್) ನೀಡಬೇಕಿತ್ತು. ಆ ಕೆಲಸ ಎಳ್ಳಷ್ಟೂ ಆಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ