‘ಗಮನ ಸೆಳೆದ’ಧ್ವನಿಮುದ್ರಿತ ಮಂಜುಳಗಾನ !



ಬಯಲುರಂಗದಲ್ಲಿ ಬೆತ್ತಲಾದ ದೂರದರ್ಶನ...
ವಿಕ ಸುದ್ದಿಲೋಕ ಮೈಸೂರು
ಮೈಸೂರು ಮಾನಸ ಗಂಗೋತ್ರಿಯ ಬಯಲುರಂಗ ತುಂಬಿತ್ತು. ಸೇರಿದ್ದ ಎಲ್ಲರ ಮನಸ್ಸನ್ನು ಡಾ.ವಿಷ್ಣುವರ್ಧನ್ ತುಂಬಿದ್ದರು.ಸಾಹಸ ಸಿಂಹನ ಸ್ಮರಣೆಯಲ್ಲಿ, ಅವರ ನಟನೆಯ ಚಿತ್ರಗಳ ಮಧುರ ಗೀತೆಗಳು ‘ಮಂಜುಳ ಗಾನ’ವಾಗಿ ಹೊಮ್ಮಿದವು. ಮನ ಕುಣಿಸುವ ಹಾಡುಗಳಿಗೆ ಆಕರ್ಷಕ ಕುಣಿತವೂ ಇತ್ತು.
ಬೆಂಗಳೂರು ದೂರದರ್ಶನ ಕೇಂದ್ರ,ಮೈಸೂರು ಆಕಾಶವಾಣಿ ಮತ್ತು ಪ್ರಮತಿ ಹಿಲ್‌ವ್ಯೂ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಡಾ.ವಿಷ್ಣು ಸ್ಮರಣಾರ್ಥ ಭಾನುವಾರ ಸಂಜೆ ನಡೆದ ‘ಮಧುರ ಮಧುರವೀ ಮಂಜುಳಗಾನ ’ದ ‘ವಿಶೇಷ’ವಿದು.
ಕಾರ‍್ಯಕ್ರಮದಲ್ಲಿ ಹಾಡಿದವರು,ಕುಣಿದವರು,ಮಾತನಾಡಿದವರ ಪೈಕಿ ಬಹುತೇಕರು ಮೈಸೂರಿಗರು ಎನ್ನುವುದು ಇನ್ನೊಂದು ವಿಶೇಷ. ಮಧುರ ಗೀತೆಗಳು ಬಹುತೇಕ ‘ಪೂರ್ವ ಧ್ವನಿಮುದ್ರಿತ’ವಾದಂತವು,ಗಾಯಕರು ವೇದಿಕೆಯಲ್ಲಿ ತುಟಿಕುಣಿಸಿದರು, ಸಂಗೀತ ಸಾಥ್ ನೀಡಿದ ಕಲಾವಿದರೂ ‘ನಟನೆ ’ಯನ್ನೇ ಮಾಡಿದರು ಎಂಬುದು ಇಡೀ ಕಾರ‍್ಯಕ್ರಮದ ‘ವಿಪರ್ಯಾಸ’.
ಇದೆಲ್ಲಾ ಹೌದಾ?: ಸೇರಿದ್ದ ಸಾವಿರಾರು ಜನ ಇಷ್ಟುಪಟ್ಟು ಕೇಳಿದ್ದು,ಖುಷಿಪಟ್ಟದ್ದು ,ಚಪ್ಪಾಳೆ ತಟ್ಟಿ ಕಲಾವಿದರನ್ನು ಹುರಿದುಂಬಿಸಿದ್ದು ,ಓನ್ಸ್‌ಮೋರ್ ಎಂದದ್ದು ಎಲ್ಲದಕ್ಕೂ ಕಾರಣ ಇದು ‘ನೇರ ಕಾರ‍್ಯಕ್ರಮ’ ಎಂಬುದು.ಆದರೆ,‘ಹಿನ್ನೆಲೆ’ಯಲ್ಲಿ ನಡೆದದ್ದು ಪ್ರೇಕ್ಷಕರ ಕಿವಿಗೆ ‘ದಾಸವಾಳ ಹೂವು’ ಮುಡಿಸುವ ಕೆಲಸ. ಕಾರ‍್ಯಕ್ರಮದಲ್ಲಿ ಹಾಡಲು ‘ಆಡಿಷನ್’ ಮೂಲಕ ಆಯ್ಕೆಯಾದ ಸ್ಥಳೀಯ,ಯುವ ಕಲಾವಿದರನ್ನು ಈ ಮುನ್ನವೇ ಬೆಂಗಳೂರಿಗೆ ಕರೆಸಿ ಹಾಡುಗಳನ್ನು ಧ್ವನಿಮುದ್ರಿಸಿಕೊಳ್ಳಲಾಗಿತ್ತು. ಇಂದು ‘ಸರದಿ’ಯ ಪ್ರಕಾರ ವೇದಿಕೆಗೆ ಬಂದ ಕಲಾವಿದರು ಮೈಕ್ ಹಿಡಿದು,ಆಂಗಿಕ ಅಭಿನಯ ಮಾಡಿದರು.ವಾದ್ಯ ತಂಡದವರೂ ಅದಕ್ಕೆ ‘ಸಾಥ್’ನೀಡಿದರು.
ಹತ್ತಿರದಲ್ಲಿ ಕುಳಿತಿದ್ದ ,ಸೂಕ್ಷ್ಮವಾಗಿ ಗಮನಿಸಿದ ಪ್ರೇಕ್ಷಕರಿಗೆ ಇದರ ವಾಸನೆ ಬಡಿಯಿತು.ಆದರೆ,ಹೇಳುವ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ.ಸ್ವತಃ ದೂರದರ್ಶನದ ಹಿರಿಯ ನಿರ್ದೇಶಕ ಡಾ.ಮಹೇಶ್ ಜೋಷಿ ‘ಬಾರೇ ಬಾರೇ ಚಂದದ ಚಲುವಿನ ತಾರೆ ’ಹಾಡುವಾಗ ‘ಇದು ಲೈವ್ ಅಲ್ಲ,ರೆಕಾರ್ಡೆಡ್’ಎನ್ನುವ ಅನುಮಾನ ದೃಢವಾಯಿತು.
ಯಾಕೆ ಹೀಗೆ?: ಎಷ್ಟೇ ಪ್ರತಿಭಾವಂತ,ಅನುಭವಿ ಕಲಾವಿದರಾದರೂ ನೇರ ಕಾರ‍್ಯಕ್ರಮದ ಸಂದರ್ಭ ಒಮ್ಮೊಮ್ಮೆ ‘ಶ್ರುತಿ’ತಪ್ಪುತ್ತಾರೆ. ಏನೇ ಆದರೂ ಒಟ್ಟು ಕಾರ‍್ಯಕ್ರಮದ ಮೂಲಕ ಹಿತಾನುಭವ ನೀಡುತ್ತಾರೆ. ಆದರೆ, ದೂರದರ್ಶನದ ‘ಮಂಜುಳ ಗಾನ’ಕ್ಕೆ ಆಯ್ಕೆಯಾದವರ ಪೈಕಿ ಹಲವರು ಇಂಥ ವೇದಿಕೆಗೆ ಹೊಸಬರು.ಆದರೆ,ಸ್ವಲ್ಪವೂ ಅಪಸ್ವರ ಇಲ್ಲದಂತೆ,ಯುವ ಕಲಾವಿದರು ಎನ್ನುವುದರ ಸುಳಿಯೂ ನೀಡದಷ್ಟು ಸ್ಪಷ್ಟವಾಗಿ ಮಧುರ ಹಾಡುಗಳನ್ನು ಮೊಳಗಿಸಿದರು.
‘ಎಡವಟ್ಟು ಆಗಬಾರದು,ಕೇಳುಗರಿಗೆ ಮಧುರ ಅನುಭವ ದೊರೆಯಲಿ’ಎನ್ನುವ ಕಾರಣಕ್ಕೆ ಅಧಿಕಾರಿಗಳು ‘ಪೂರ್ವ ಮುದ್ರಿತ’ಕೃತ್ಯ ಎಸಗಿರಬಹುದು.ಮೊದಲೇ ಹೇಳಿಕೊಂಡಿದ್ದರೆ,ಅದೇನೂ ಅಂಥ ಅಪರಾಧವಲ್ಲ.ಹೇಳದೆ,ನಂಬಿಸಿದ್ದು ‘ಸಾಂಸ್ಕೃತಿಕ ಮೋಸ’ವಲ್ಲದೆ ಮತ್ತೇನೂ ಅಲ್ಲ.
ಪಾಪ ಪ್ರಜ್ಞೆ: ತಮ್ಮದೇ ಹಾಡಿಗೆ ವೇದಿಕೆಯಲ್ಲಿ ‘ನಟನೆ ’ ಮಾಡಿ ಹಿನ್ನೆಲೆಗೆ ಬಂದ ಕಲಾವಿದರೊಬ್ಬರನ್ನು ‘ವಿಜಯಕರ್ನಾಟಕ’ ಮಾತಿಗೆ ಎಳೆದಾಗ ‘ಹೌದು ಸಾರ್,ನಾವ್ಯಾರೂ ಇವತ್ತು ಇಲ್ಲಿ ಹಾಡಲಿಲ್ಲ. ಬೆಂಗಳೂರಲ್ಲೇ ರೆಕಾರ್ಡ್ ಮಾಡಿಸಿದ್ದರು. ಇದನ್ನೆಲ್ಲ ನೋಡಿದ್ರೆ ಬೇಜಾರಾಗುತ್ತೆ,ಆದ್ರೆ ಏನ್ ಮಾಡೋದು..‘!ಎಂದರು.
ಕಲಾವಿದರಿಗೆ ಕನಿಷ್ಠ ಇಂಥದೊಂದು ‘ಪಾಪ ಪ್ರಜ್ಞೆ’ಯಾದರೂ ಕಾಡಿತು. ಆದರೆ,ಅಧಿಕಾರಿಗಳು ಪ್ರಖರ ಬೆಳಕಿನಲ್ಲಿ ಮಿಂಚಿದರು. ಪ್ರೇಕ್ಷಕರು ಎಲ್ಲವನ್ನೂ ನಂಬಿ,ಸಮಯ ರಾತ್ರಿ ೧೦.೩೦ದಾಟಿದರೂ ಕೇಳುತ್ತಲೇ ಇದ್ದರು.
****
ಇದೆಲ್ಲದರ ಹೊರತಾಗಿಯೂ ಕಾರ‍್ಯಕ್ರಮದಲ್ಲಿ ಕೇಳಿಸಿದ ಹಾಡುಗಳು ಇಂಪಾಗಿದ್ದವು.ಪೂರ್ವ ಧ್ವನಿ ಮುದ್ರಿತವಾದರೂ ಹಾಡಿದ ಹುಡುಗರು,ಹಿರಿಯ-ಕಿರಿಯ ಕಲಾವಿದರು ಗಮನಸೆಳೆದರು. ಎಚ್.ಕೆ.ರಘು, ಆರ್.ಕೃಷ್ಣಮೂರ್ತಿ, ಶ್ರೀನಾಥ್ ಭಾರದ್ವಾಜ್, ಪ್ರಹ್ಲಾದ್,ಜಯಂತಿ ಭಟ್, ಡಾ.ಎಂ.ಎಸ್.ನಟಶೇಖರ್, ಅಶ್ವಿನ್ ಪ್ರಭು,ಅಭಿರಾಮ್, ಶ್ರೀನಿವಾಸ ಮೂರ್ತಿ -ಸುಬ್ಬಲಕ್ಷ್ಮಿ,ಮಾನಸ ವಿಜಯ್ ಮತ್ತಿತರರು ಬೆಳಗುವ ಭರವಸೆ ಮೂಡಿಸಿದರು. ಹಿರಿಯ ನಿರ್ದೇಶಕ ಡಾ.ಮಹೇಶ್ ಜೋಷಿ ತಾವೇನೂ ಕಡಿಮೆ ಇಲ್ಲ ಎನ್ನುವಂತೆ ನಾಗರಹಾವು ಚಿತ್ರದ ‘ಬಾರೇ ಬಾರೆ ಚಂದದ ಚೆಲುವಿನ ತಾರೆ ’ಯನ್ನು ಹಾಡಿದರು.
ಮನಸೂರೆ :‘ನೃತ್ಯಗಿರಿ’ಮತ್ತು ಶ್ರೀಧರ್ ಜೈನ್ ತಂಡ ಕಲಾವಿದರು,ಪ್ರಮತಿ ಹಿಲ್‌ವ್ಯೂ ಅಕಾಡೆಮಿ ವಿದ್ಯಾರ್ಥಿಗಳು ಹಲವು ಹಾಡಿಗೆ ಮಾಡಿದ ನೃತ್ಯ ಮನಸೂರೆಗೊಂಡಿತು. ಸಿ.ಅಶ್ವತ್ಥ್,ವಿಷ್ಣು ,ಕೆ.ಎಸ್,ಅಶ್ವತ್ಥ್, ಚಿಂದೋಡಿ ಲೀಲಾ ಅವರ ಭಾವಚಿತ್ರಗಳಿಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಹಿರಿಯ ನಿರ್ದೇಶಕರಾದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು,ದ್ವಾರಕೀಶ್, ಜೋಸೈಮನ್, ಎಸ್.ನಾರಾಯಣ್, ಕಲಾವಿದರಾದ ಚೇತನ್ ರಾಮರಾವ್,ಶಂಕರ್ ಅಶ್ವತ್ಥ್,ಲಕ್ಷ್ಮೀ ಗೋಪಾಲಸ್ವಾಮಿ, ಡಾ.ವಿಷ್ಣು ಸಹೋದರ ರವಿಕುಮಾರ್,ಡಾ.ಎಸ್.ಭಾಸ್ಕರ್,ಡಾ.ಎಚ್.ವಿ.ಸತೀಶ್,ಕುಲಪತಿ ಪ್ರೊ.ವಿ.ಜಿ. ತಳವಾರ್, ಗೃಹಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮತ್ತಿತರರು ಭಾಗವಹಿಸಿದ್ದರು. ಪ್ರಮತಿಯ ಎಚ್.ವಿ.ರಾಜೀವ್ ಪ್ರಾಸ್ತಾವಿಕವಾಗಿ ಮಾತನಾಡಿದರು.
*****
ದ್ವಾರಕೀಶ್ ಕಿಡಿ
ನಟ,ನಿರ್ಮಾಪಕ ದ್ವಾರಕೀಶ್ ಆಪ್ತಮಿತ್ರನ ಸಹವಾಸ,ಸರಸ,ವಿರಸ ಎಲ್ಲವನ್ನೂ ನೆನಪುಮಾಡಿಕೊಂಡರು. ಸರಕಾರಕ್ಕೆ,ರಾಜಕಾರಣಿಗಳಿಗೆ ವಿಷ್ಣು ,ಅಶ್ವತ್ಥ್ ಅವರಂತ ಕಲಾವಿದರಿಗೆ ಪದ್ಮಶ್ರೀ, ಪದ್ಮ ಭೂಷಣ ಪ್ರಶಸ್ತಿ ಕೊಡಿಸಲು ಆಗಲಿಲ್ಲ ಎಂದು ಕಿಡಿಕಾರಿದರು. ತಮಿಳುನಾಡಿನಲ್ಲಿ ೧೦ ವರ್ಷದ ಹಿಂದಷ್ಟೆ ಬಣ್ಣ ಹಚ್ಚಿದ ಹಾಸ್ಯ ನಟ ವಿವೇಕ್ ‘ಪದ್ಮಭೂಷಣ’ ಪಡೆದಿದ್ದಾರೆ. ಇಲ್ಲಿ ನಾವು ೪೫ ವರ್ಷದಿಂದ ದುಡಿಯುತ್ತಿದ್ದೇವೆ,ಯಾವ ಪ್ರಶಸ್ತಿಯೂ ಇಲ್ಲ. ಇದ್ದಾಗ ಕೊಡದೆ,ಸತ್ತಮೇಲೆ ಕೊಡ್ತೀರಾ ಎಂದು ಖಾರವಾಗಿ ಪ್ರಶ್ನಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ