ವಲಸೆ ‘ಅತಿಥಿ’ಗಳ ಆವಾಸಕ್ಕೆ ಆಪತ್ತು!

ಪಿ. ಓಂಕಾರ್ ಮೈಸೂರು
ದಲೆಲ್ಲ ಚಳಿಗಾಲ ಬಂತೆಂದರೆ ಮೈಸೂರು ಪ್ರಾಂತ್ಯದ ಕೆರೆ ಕುಂಟೆಗಳಲ್ಲಿ ಜೀವ ಕಳೆ  ಇಮ್ಮಡಿಸುತ್ತಿತ್ತು.ದೇಶ-ವಿದೇಶದಿಂದ ವಲಸೆ ಬರುತ್ತಿದ್ದ ‘ಬಾನಾಡಿ ಅತಿಥಿ’ಗಳು ಸ್ವಚ್ಛಂದವಾಗಿ ವಿಹರಿಸಿ ಪರಿಸರಕ್ಕೆ ರಂಗು ತುಂಬುತ್ತಿದ್ದವು.ಆ ಮೂಲಕವೇ ಚಳಿಗಾಲ ಆಪ್ಯಾಯಮಾನವಾಗುತ್ತಿದ್ದುದು.
ಆದರೆ, ಇತ್ತೀಚಿನ ವರ್ಷಗಳಲ್ಲಿ ಹಕ್ಕಿಗಳ ಬೆಡಗು-ಬಿನ್ನಾಣ ಕ್ಷೀಣಿಸಿದೆ. ವರ್ಷದಿಂದ ವರ್ಷಕ್ಕೆ ವಲಸೆ  ನೀರುಹಕ್ಕಿಗಳ ಸಂಖ್ಯೆ ಕ್ಷೀಣಿಸುತ್ತಿದೆ.ಒಂದು ದಶಕದ ಅವಧಿಯಲ್ಲಂತೂ ‘ಇಳಿಕೆ ’ಪ್ರಮಾಣ ತೀರಾ ಆತಂಕಕಾರಿ.
ಬಾನಾಡಿಗಳ ತಾತ್ಕಾಲಿಕ ‘ನೆಲೆ’ಗಳಾದ  ನೀರಿನ  ತಾಣಗಳು, ಮುಖ್ಯವಾಗಿ ಕೆರೆಗಳು ಗಂಡಾಂತರ ಎದುರಿಸುತ್ತಿರುವುದು; ನಾನಾ ಕಾರಣಕ್ಕೆ ಬದಲಾ ಗಿರುವುದು, ಹಲವು ಕೆರೆಗಳೇ ‘ನಾಪತ್ತೆ’ಯಾಗಿರು ವುದು ಸಂಖ್ಯಾ ಕುಸಿತಕ್ಕೆ ಮುಖ್ಯ ಕಾರಣ. ನಗರದ ‘ಮ್ಯಾನ್’ (ಮೈಸೂರು ಅಮೆಚೂರ್ ನ್ಯಾಚ್ಯುರಲಿಸ್ಟ್ ) ಸಂಘಟನೆಯ ಹವ್ಯಾಸಿ ಪಕ್ಷಿ ವೀಕ್ಷಕರು ನಡೆಸಿದ  ಮಧಂತರ ಚಳಿಗಾಲದ ನೀರು ಹಕ್ಕಿಗಳ ಗಣತಿಯಲ್ಲಿ ಈ ಸಂಗತಿ ಗೋಚರಿಸಿದೆ.
ಕುಸಿತ ಹೀಗೆ: ಮೈಸೂರು,ಮಂಡ್ಯ,ಚಾಮರಾಜನಗರ  ಜಿಲ್ಲೆಗಳ ಸುಮಾರು ೧೬೦ ಕೆರೆ ಗಳಲ್ಲಿ ೧೦ವರ್ಷದ ಹಿಂದೆ (೧೯೯೯- ೨೦೦೦) ‘ಮ್ಯಾನ್’ ಗಣತಿ ನಡೆಸಿ ದಾಗ ೭೦ ವಿವಿಧ ಪ್ರಭೇದದ ೧.೫ರಿಂದ ೧.೬ ಲಕ್ಷ ಹಕ್ಕಿಗಳನ್ನು ಲೆಕ್ಕ ಹಾಕಲಾಗಿತ್ತು. ಕಳೆದ ವರ್ಷದ ಗಣತಿಯಲ್ಲಿ ೬೦ ರಿಂದ ೭೨ ಸಾವಿರ ಹಕ್ಕಿಗಳು ಎಣಿಕೆಗೆ ಸಿಕ್ಕಿದ್ದವು.
ಈ ವರ್ಷ ಇನ್ನೂ ಮಾರಕ ಕುಸಿತ ದಾಖಲಾ ಗಿದೆ. ೧೧ಮಂದಿ ಪಕ್ಷಿ ವೀಕ್ಷಕರು ಜನವರಿಯಲ್ಲಿ ವೈಜ್ಞಾನಿಕ ಮಾದರಿಯಲ್ಲಿ ನಡೆಸಿದ ಗಣತಿಯಲ್ಲಿ ೩೮ರಿಂದ ೪೦ ಸಾವಿರ ವಲಸೆ ಹಕ್ಕಿಗಳು ಮಾತ್ರ ಕಂಡಿವೆ. ಹಿಂದಿನ ವರ್ಷಗಳಲ್ಲಿ ಕೆಲವು ಕೆರೆಗಳಲ್ಲಿ ೨೦ ಸಾವಿರ ಹಕ್ಕಿಗಳನ್ನು ಎಣಿಸಿದ್ದೂ ಇದೆ.ಕಳೆದ ವರ್ಷ  ೭ರಿಂದ ೮ ಸಾವಿರ ಹಕ್ಕಿಗಳು ಕಾಣಿಸಿದ್ದವು. ಈ ಬಾರಿ ಒಂದೆರಡು ಕೆರೆಗಳ ಹೊರತು ಉಳಿದ ನೆಲೆಗಳಲ್ಲಿ ೨ ಸಾವಿರಕ್ಕಿಂತ ಹೆಚ್ಚು ಎಲ್ಲೂ ಕಂಡಿಲ್ಲ.
ಯಾಕೆ ಹೀಗೆ? ಏನು ಕಾರಣ?: ಕೆರೆ ಒತ್ತುವರಿ,ದೊಡ್ಡ ಪ್ರಮಾಣದಲ್ಲಿ ಮೀನು ಸಾಕಣೆ, ತೂಬಿಗೆ ಬಲೆ ಹಾಕಿ ನೀರು ಬಿಟ್ಟು ಮೀನು ಹಿಡಿಯುವುದು, ಹಕ್ಕಿ ಬೇಟೆ ಹೆಚ್ಚಳ, ಪ್ರವಾಸೋದ್ಯಮ ನೆಪದಲ್ಲಿ ಕೆರೆಗಳ ಪಕ್ಕ ರೆಸಾರ್ಟ್ ನಿರ್ಮಾಣ,ವಿಹಾರಕ್ಕೆ ಮೋಟಾರ್ ಬೋಟ್ ಬಳಕೆ  ಮತ್ತಿತರ ಕಾರಣಗಳಿಂದ ಹಕ್ಕಿ ಸಂಕುಲ ದಿಕ್ಕು ತಪ್ಪಿದೆ.
ಸಾಮಾನ್ಯವಾಗಿ ೧ರಿಂದ ೪ ಅಡಿ ನೀರಿರುವ ಜಾಗದಲ್ಲಿ ಮುಳುಗು ಮತ್ತು ತೇಲುವ ಹಕ್ಕಿಗಳು ‘ಠಿಕಾಣಿ’ ಹೂಡುತ್ತವೆ. ಜಲ, ಜೌಗು ಭೂಮಿಯ ಇಳಿಯುತ್ತಿ ರುವ ನೀರಿನಲ್ಲಿ ಜಲಚರಗಳು ಸಮೃದ್ಧವಾಗಿದ್ದು,ಹಕ್ಕಿಗಳಿಗೆ ಆಹಾರವಾಗುತ್ತವೆ. ಆದರೆ, ಈಗ ಬಹುತೇಕ ಕೆರೆಗಳಲ್ಲಿ ಅಂಥ ಸ್ಥಿತಿ ಇಲ್ಲ. ಮಳೆಗಾಲಕ್ಕೆ ಮುನ್ನ  ತಳ ಕಾಣಬೇಕಾದ ಕೆರೆಗಳು ನಾಲೆಗಳ ಮೂಲಕ ಸದಾ ಹೊಸ ನೀರು ತುಂಬಿ ಕೊಂಡು ಸರ್ವ ಋತುಗಳಲ್ಲೂ ತುಳುಕುತ್ತಿವೆ. ಇಂಥ ಕಡೆ ಹಕ್ಕಿಗಳ ಹೊಟ್ಟೆಗೆ ಏನೂ ದಕ್ಕದು.ಪರಿಣಾಮ ಅರಕೆರೆ, ನಗುವಿನಹಳ್ಳಿ,ಮಂಡಕಳ್ಳಿ, ದಡದಹಳ್ಳಿ,ಅರಸನಕೆರೆ, ಅಹಲ್ಯ ಮತ್ತಿತರ ಕೆರೆಗಳತ್ತ ನೀರು ಹಕ್ಕಿಗಳು ಹೆಚ್ಚು ಸುಳಿಯುತ್ತಿಲ್ಲ.
ಹುಣಸೂರು, ಪಿರಿಯಾಪಟ್ಟಣ ವ್ಯಾಪ್ತಿಯ ಕೆರೆಗಳ ಸ್ಥಿತಿ ವ್ಯತಿರಿಕ್ತ. ಈ ಭಾಗದ ಹಲವು ಕೆರೆಗಳು ಒಣಗಿ ನಿಂತಿವೆ. ಕೆಲವು ಕೆರೆಗಳದ್ದು ಅತಿ ಹೂಳಿನ ಸಮಸ್ಯೆ. ಇನ್ನು ಕೆಲವು ಕೆರೆಗಳಿಗೆ ಜಲ ಸಸ್ಯಗಳೇ ಮುಳುವು. ಜಮೀನುಗಳಿಗೆ ಅತಿಯಾದ ರಸಗೊಬ್ಬರ ಬಳಸುತ್ತಿರುವುದರಿಂದ  ಕೆರೆಗಳ ತುಂಬ ಜೊಂಡು ಬೆಳೆದು ನೀರು ಹಕ್ಕಿ ನೆಲೆಗಳು ಅವಸಾನದಂಚಿಗೆ ತಲುಪಿರುವುದು ಮತ್ತೊಂದು ದುರಂತ.
ಮೈಸೂರಿನ ದಡದಹಳ್ಳಿ ಕೆರೆ, ಚಾಮರಾಜನಗರದ ಹಿರೀ ಕೆರೆ, ಮಂಡ್ಯದ ಸೂಳೆಕೆರೆ  ಮತ್ತು ಕೊಪ್ಪ ಕೆರೆಗಳಲ್ಲಿ ವಿಪರೀತ  ಮೀನುಗಾರಿಕೆ ಪಕ್ಷಿ ಕುಲಕ್ಕೆ ಕಂಟಕವಾಗಿ ಪರಿಣಮಿಸಿದೆ. ಹಿರಿಕೆರೆ ಬಳಿ ಅಕ್ರಮ ಗಣಿಗಾರಿಕೆ- ಸ್ಫೋಟಕ್ಕೆ ಬೆದರಿ ಪರ್ವತ ಹಕ್ಕಿಗಳು ದಿಕ್ಕಾಪಾಲಾಗಿವೆ. ಚಿಕ್ಕ ಅಂಕನಹಳ್ಳಿ, ಕಗ್ಗಲೀಪುರ ಮತ್ತು ಹದಿನಾರು ಕೆರೆಗಳಲ್ಲಿ ಬೇಟೆಗಾರರ ಕಾಟ. ಹುಣಸೂರಿನ ಹೈರಿಗೆ ಕೆರೆಯಲ್ಲಿ ವಿಹಾರಿ ದೋಣಿಗಳು ಹಕ್ಕಿಗಳ ನೆಲೆ ತಪ್ಪಿಸಿವೆ.
ಕೆರೆಗಳೇ ಕಣ್ಮರೆ: ಮುಂಬಯಿ ನ್ಯಾಚುರಲ್ ಹಿಸ್ಟರಿ ಸೊಸೈಟಿ,ಬರ್ಡ್‌ಲೈಫ್ ಇಂಟರ್‌ನ್ಯಾಷನಲ್ ಮತ್ತು ಮ್ಯಾನ್ ಸಂಸ್ಥೆಗಳು ಐದು ವರ್ಷಗಳ ಹಿಂದೆ ನೀಡಿದ ವರದಿ ಆಧರಿಸಿ ಅತಿ ಮುಖ್ಯ ಪಕ್ಷಿ ಕೇಂದ್ರಗಳೆಂದು ಗುರುತಿಸಿದ ಕೆರೆಗಳು ವಾರಸುದಾರ ರಿಲ್ಲದೆ, ಇದ್ದರೂ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿ ಅವಸಾನದಂಚಿನಲ್ಲಿವೆ. ಮೈಸೂರು ವಿವಿ ಉಸ್ತುವಾರಿಯಲ್ಲಿರುವ ಕುಕ್ಕರಹಳ್ಳಿ ಕೆರೆ, ಅರಣ್ಯ ಇಲಾಖೆ  ಸುಪರ್ದಿನಲ್ಲಿ ರುವ ಲಿಂಗಾಂಬುದಿ ಕೆರೆ, ಮೃಗಾಲಯಕ್ಕೆ ಸೇರಿದ ಕಾರಂಜಿ ಕೆರೆಗಳು ವಲಸೆ ನೀರು ಹಕ್ಕಿಗಳಿಗೆ ಆಶ್ರಯ ನೀಡುವಲ್ಲಿ ವಿಫಲವಾಗಿವೆ ಎಂಬುವುದು ಮ್ಯಾನ್ ಸದಸ್ಯರ ಆಕ್ಷೇಪ.
ರಕ್ಷಣಾ ಬೇಲಿ ನಿರ್ಮಿಸಲಾಗಿದೆಯೇ ಹೊರತು ಸೂಕ್ತ ವಾತಾವರಣವನ್ನು ಕಾಯ್ದಿಟ್ಟುಕೊಂಡಿಲ್ಲ. ಚಾಮರಾಜ ನಗರದ ನರಸಾಂಬುದಿ ಕೆರೆ ಸ್ಥಿತಿಯೂ ಶೋಚನೀಯ. ಚಳಿಗಾಲ ಶುರುವಿನಲ್ಲೇ ಕೆರೆಯ ನೀರನ್ನು ಬಸಿದು ಬೇಸಾಯ ಮಾಡುವ ಪ್ರವೃತ್ತಿ ಹೆಚ್ಚಿದೆ. ಸಂಬಂಧ ಪಟ್ಟವರು ನಿಗಾ ವಹಿಸದಿದ್ದರೆ ಪೂರ್ತಿ ಕೆರೆಯೇ ಒತ್ತುವರಿಯಾಗುವ ಆಪಾಯವಿದೆ ಎನ್ನುವುದು ಅವರ  ಆತಂಕ. ಇಂಥದೇ ಸಮಸ್ಯೆಗಳಿಂದ ಈ ಭಾಗದ ೧೬೩ ಕೆರೆಗಳ ಪೈಕಿ ಸುಮಾರು ೪೦ ಕೆರೆಗಳು ‘ಕಣ್ಮರೆ’ಯಾಗುವ ಭೀತಿ ಯಲ್ಲಿವೆ.
ಪರಿಹಾರವೇನು?: ಹಕ್ಕಿನೆಲೆಗಳಾದ ಕೆರೆ, ಕುಂಟೆಗಳು ಸುರಕ್ಷಿತವಾಗಿರಬೇಕು. ಆದರೆ, ಎಲ್ಲಾ ಅಭಿವೃದ್ಧಿಗಳು ಮನುಷ್ಯ ಕೇಂದ್ರಿತ. ಮೀನುಗಾರಿಕೆ, ಬೇಸಾಯ ಭೂಮಿ ಮಗ್ಗುಲಿನ ಕೆರೆಗಳ ಹೊರತು, ಉಳಿದವು ಮನುಷ್ಯ ವಿಹಾರಕ್ಕೆ ಸೀಮಿತವಾಗುತ್ತಿವೆ. ಪರಿಣಾಮ, ಪರಿಹಾರ ಏನು ಎಂಬ ಪ್ರಶ್ನೆಗೆ,ಪಕ್ಷಿ ಸಂಕುಲದ ಉಳಿವಿನ ಬಗ್ಗೆ ತಲೆ ಕೆಡಿಸಿಕೊಳ್ಳು ವವರು ಯಾರು ಎಂಬುದೇ ಮರು ಪ್ರಶ್ನೆಯಾಗಿ ಎದುರುಗೊಳ್ಳುತ್ತದೆ.
ಹಕ್ಕಿ -ಮೂಲ: ಅತಿ ಚಳಿ ಪ್ರದೇಶದ ಹಕ್ಕಿಗಳು ಹವಾಮಾನ ವೈಪರಿತ್ಯ, ಆಹಾರದ ಕೊರತೆಯ ಕಾರಣಕ್ಕೆ ಸುಮಾರು ೩,೫೦೦ಕಿ.ಮೀ.ಕ್ರಮಿಸಿ ಭೂಮಧ್ಯ ರೇಖೆ ಕಡೆ ವಲಸೆ ಬರುವ  ಪ್ರಕ್ರಿಯೆ ನಿರಂತರ ಮತ್ತು ಅತ್ಯಂತ ಕುತೂಹಲಕಾರಿ. ಜರ್ಮನಿ, ಸೈಬೀರಿಯಾ, ಬಲೂಚಿಸ್ತಾನ್ ಮತ್ತು ಮಧ್ಯ ಯೂರೋಪ್ ದೇಶಗಳಿಂದ ಹಕ್ಕಿಗಳು ವಲಸೆ ಬರುತ್ತವೆ. ಬರುವ  ಬಾತುಕೋಳಿಗಳು : ಗಾರ್ಗೆನಿ, ಪಿಂಟೀಲ್, ಶವಲರ್, ಟೀಲ್. ನೀರ್ನಡಿಗೆ ಹಕ್ಕಿಗಳು : ಪ್ಲೋವರ್, ಸ್ಯಾಂಡ್ ಪೈಪರ್, ಸ್ಟಿಲ್ಟ್  ಮುಖ್ಯವಾದವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ