ನಗರ ಬಸ್ ನಿಲ್ದಾಣವೇ ಎತ್ತಂಗಡಿ !


ವಿಕ ಸುದ್ದಿಲೋಕ ಮೈಸೂರು
‘ಕೋಟ್ಯಂತರ ರೂ. ವೆಚ್ಚದಲ್ಲಿ ಇದೀಗ ತಾನೇ ನಿರ್ಮಾಣಗೊಂಡಿರುವ ನಗರ ಬಸ್ ನಿಲ್ದಾಣ ಸದ್ಯವೇ ಜಟಕಾ, ಸೈಕಲ್ ಸ್ಟ್ಯಾಂಡ್ ಅಗಲಿದೆ!’.
ಆಶ್ಚರ್ಯವಾದರೂ ಇದು ಸತ್ಯ. ನರ್ಮ್ ಯೋಜನೆಯಡಿ ಒಟ್ಟು ೧೪.೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು, ಉದ್ಘಾಟನೆಗಾಗಿ ಮೇಯರ್ ಹಾಗೂ ಸರಕಾರದ ಮಧ್ಯೆ ಬಹಿರಂಗ ಕದನಕ್ಕೆ ಕಾರಣವಾಗಿದ್ದ ನಗರ ಬಸ್ ನಿಲ್ದಾಣ ಸದ್ಯವೇ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ.
ನಗರದ ಹೃದಯ ಭಾಗಕ್ಕೆ ಹೊಂದಿಕೊಂಡ ಕೆ.ಆರ್.ವೃತ್ತದಲ್ಲಿರುವ, ನಗರ ಬಸ್ ನಿಲ್ದಾಣದಿಂದ ಅರಮನೆ ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಅಗುತ್ತಿರುವುದರಿಂದ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಮುಡಾದಲ್ಲಿ ಬುಧವಾರ ನಡೆದ ಸಂಚಾರಿ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಇನ್ನೊಂದು ವರ್ಷದಲ್ಲಿ ನೂತನ ನಗರ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಅವರಿಗೆ ಜಿಲ್ಲಾಧಿಕಾರಿ ಪಿ.ಮಣಿವಣ್ಣನ್, ಕಟ್ಟು ನಿಟ್ಟಿನ ಆದೇಶ ನೀಡಿದರು.
ನರ್ಮ್‌ನಡಿ ೧೦.೪ ಕೋಟಿ ರೂ. ವೆಚ್ಚದಲ್ಲಿ ಈಗ ತಾನೇ ಬಸ್ ನಿಲ್ದಾಣ ನಿರ್ಮಿಸಿ, ಹೆಚ್ಚುವರಿಯಾಗಿ ೪ ಕೋಟಿ ರೂ. ಖರ್ಚು ಮಾಡಲಾಗಿದೆ. ಈಗ ಏಕಾಏಕಿ ಸ್ಥಳಾಂತರ ಮಾಡುವುದರಿಂದ ತೊಂದರೆ ಅಗಲಿದೆ ಎಂದು ಶ್ರೀನಿವಾಸ್ ಸಮಂಜಾಯಿಷಿ ನೀಡಿದರು.
ಆದರೆ ಇದಕ್ಕೆ ಒಪ್ಪದ ಮಣಿವಣ್ಣನ್, ಅರಮನೆ ಸುತ್ತ ಪಾರಂಪರಿಕತೆ ಉಳಿಸಲು ನಗರ ಬಸ್ ನಿಲ್ದಾಣವನ್ನು ಸ್ಥಳಾಂತರಿಸಬೇಕು. ಅರಮನೆ ಸುತ್ತ ಸೈಕಲ್ ಹಾಗೂ ಜಟಕಾ ಬಂಡಿಗಳಿಗೆ ಅವಕಾಶ ಕಲ್ಪಿಸಲಿದ್ದು, ವಾಹನ ಸಂಚಾರವನ್ನು ನಿಷೇಧಿಸಲಾಗುವುದು. ಅದಕ್ಕಾಗಿ ಕೆ.ಆರ್.ವೃತ್ತದ ಬಳಿಯ ನಗರ ಬಸ್ ನಿಲ್ದಾಣವನ್ನು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಬೇಕು. ಗ್ರಾಮಾಂತರ ಬಸ್ ನಿಲ್ದಾಣವನ್ನು ನಗರದ ನಾಲ್ಕು ಕಡೆ ಉಪ ಬಸ್ ನಿಲ್ದಾಣಕ್ಕೆ ವರ್ಗಾಯಿಸಬೇಕೆಂದರು.
ಇನ್ನೊಂದು ವರ್ಷದಲ್ಲಿ ಪೂರ್ಣವಾಗಿ ಬಸ್ ನಿಲ್ದಾಣ ಸ್ಥಳಾಂತರಿಸಬೇಕು. ಈ ಕುರಿತು ನಗರ ಸಾರಿಗೆಯವರಿಗೆ ನೋಟಿಸ್ ಜಾರಿ ಮಾಡಬೇಕು. ಒಂದೊಮ್ಮೆ ಅವಧಿಯೊಳಗೆ ಬಸ್ ನಿಲ್ದಾಣ ಸ್ಥಳಾಂತರಿಸದಿದ್ದರೆ ಬಸ್‌ಗಳನ್ನು ವಶಪಡಿಸಿಕೊಳ್ಳಲು ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಅವರಿಗೆ ಮಣಿವಣ್ಣನ್ ತಿಳಿಸಿದರು.
ಬಹುಮಹಡಿ ಪಾರ್ಕಿಂಗ್
ಪಾರಂಪರಿಕತೆಗೆ ಧಕ್ಕೆ ಅಗುತ್ತದೆ ಎಂದು ನೂತನ ಬಸ್ ನಿಲ್ದಾಣ ಸ್ಥಳಾಂತರಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ ಮಣಿವಣ್ಣನ್, ಅರಮನೆಯ ದಕ್ಷಿಣ ದ್ವಾರದಲ್ಲಿ ಬಳಿ ಎರಡು-ಮೂರು ಅಂತಸ್ತಿನ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಸಮ್ಮತಿಸಿದರು.
ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿಲ್ಲ. ಆದ್ದರಿಂದ ಅರಮನೆ ದಕ್ಷಿಣ ದ್ವಾರ ಸೇರಿದಂತೆ ನಂಜರಾಜಬಹದ್ದೂರ್ ಛತ್ರ, ದೇವರಾಜ ಸಂಚಾರಿ ಪೊಲೀಸ್ ಠಾಣೆ, ಗ್ರಾಮಾಂತರ ಬಸ್ ನಿಲ್ದಾಣದ ಎದುರು ಸೇರಿದಂತೆ ವಿವಿಧೆಡೆ ಬಹುಮಹಡಿ ಪಾರ್ಕಿಂಗ್ ಅವಶ್ಯವಿದೆ ಎಂದು ಸಂಚಾರಿ ವಿಭಾಗದ ಎಸಿಪಿ ಶಂಕರೇಗೌಡ ಸಭೆಯಲ್ಲಿ ಪ್ರಸ್ತಾವನೆ ಇಟ್ಟರು.
ಇದಕ್ಕೆ ಸಮ್ಮತಿಸಿದ ಮಣಿವಣ್ಣನ್, ನಂಜರಾಜ ಬಹದ್ದೂರ್ ಛತ್ರದಲ್ಲಿ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಬೇಕು. ಅರಮನೆ ಬಳಿ ತಕ್ಷಣ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ರೂಪುರೇಷೆ ತಯಾರಿಸಬೇಕು. ನಿರ್ಮಾಣದ ಹೊಣೆಯನ್ನು ಪಾಲಿಕೆ ವಹಿಸಿಕೊಳ್ಳಬೇಕು ಎಂದು ಸೂಚಿಸಿದರು.
ರಾರಾಜಿಸಲಿವೆ ಗೋಡೆ ಚಿತ್ರಕಲೆ
ಪಾರಂಪರಿಕ ಕಟ್ಟಡಗಳ ಬಳಿ ಇರುವ ಕಟ್ಟಡಗಳ ಗೋಡೆಗಳ ಮೇಲೆ ಚಿತ್ರಕಲೆ ರಾರಾಜಿಸಲಿವೆ. ಪಾರಂಪರಿಕ ಕಟ್ಟಡಗಳ ಬಳಿ ಇರುವ ಕಟ್ಟಡಗಳಲ್ಲಿ ಖಾಲಿ ಗೋಡೆ ಇದ್ದು, ಸೌಂದರ್ಯಕ್ಕೆ ಧಕ್ಕೆ ಅಗಲಿದೆ. ಆದ್ದರಿಂದ ಇಂಥ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸುವ ಚಿಂತನೆ ಇದೆ. ಈ ಕುರಿತು ಕಾವಾ ಡೀನ್ ದೇಶಪಾಂಡೆ ಅವರೊಂದಿಗೆ ಚರ್ಚಿಸಿದ್ದು, ಫೆ.೧೬ರಂದು ಸಭೆ ಕರೆಯಲಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ತಿಳಿಸಿದರು.
ಗೋಡೆ ಬರಹ, ಪೋಸ್ಟರ್ ಅಳವಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ೩೫ ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಅಂದಗೆಡಿಸುವವರ ವಿರುದ್ಧ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ನಗರದ ಎಲ್ಲೆಡೆ ಅನಧಿಕೃತ ಜಾಹೀರಾತು ಫಲಕವನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ