ಪತ್ತೆ ಆಗುತ್ತಿಲ್ಲ ನಾಪತ್ತೆಯಾದ ಮಕ್ಕಳು !


ಎಲ್ಲಿ ಹೋದಿರಿ ಬಾಲಕರೇ
ವಿಕ ಸುದ್ದಿಲೋಕ ಮೈಸೂರು
ಎಲ್ಲಿ ಹೋದಿರಿ ಬಾಲಕರೇ, ಪೋಷಕರನ್ನು ಬಿಟ್ಟು, ಕಾಣೆಯಾದ ಒಂದೂವರೆ ವರ್ಷದ ನಂತರ ೯ ವರ್ಷದ ಬಾಲಕ ಸಿಗದಿದ್ದರೂ ಆತನನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿಯನ್ನು ನಂಜನಗೂಡು ಪೊಲೀಸರು ಸೆರೆ ಹಿಡಿದ ಪ್ರಕರಣದ ನಂತರ ಮೈಸೂರು ಭಾಗದಲ್ಲಿ ನಾಪತ್ತೆಯಾದ ಬಾಲಕ-ಬಾಲಕಿಯರ ಪ್ರಕರಣಗಳಿಗೆ ಜೀವ ಬರತೊಡಗಿದೆ.
ಅದರಲ್ಲೂ ಮೋಹನ ಲೀಲೆಗೆ ಮಹಿಳೆಯರು ಜೀವ ತೆತ್ತು ನಾಪತ್ತೆಯಾದ ಪ್ರಕರಣಗಳು ಇನ್ನೂ ಹಸುರಿರುವಾಗಲೇ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣ ಬಯಲಾಗಿದ್ದರಿಂದ ಆತಂಕ ಹೆಚ್ಚಿಸಿದೆ. ಅವರೊಟ್ಟಿಗೆ ಬಾಲಕಿಯ ನಾಪತ್ತೆ ಸಂಖ್ಯೆಯಲ್ಲೂ ಕಡಿಮೆಯೇನೂ ಇಲ್ಲ.
ಪೊಲೀಸ್ ಇಲಾಖೆಯ ಮಾಹಿತಿ ಗಮನಿಸಿದರೆ ಸಾಕಷ್ಟು ‘ಶರಣ್‘ನಂಥವರು ಇದ್ದಂತೆ ಕಾಣುತ್ತದೆ. ಮೈಸೂರು ನಗರವೂ ಸೇರಿ ಐದು ಜಿಲ್ಲೆಗಳಲ್ಲಿ ೨೦೦೯ರಲ್ಲಿ ನಾಪತ್ತೆ ಯಾದ ಬಾಲಕ ಹಾಗೂ ಬಾಲಕಿಯರ ಸಂಖ್ಯೆ ೫೫೭. ಇವರಲ್ಲಿ ೪೩೭ ಮಂದಿ ಪೋಷಕರ ಮಡಿಲಿಗೆ ಸುರಕ್ಷಿತವಾಗಿ ಬಂದಿದ್ದರೆ ಇನ್ನೂ ೧೨೦ ಬಾಲಕ, ಬಾಲಕಿಯರು ಈವರೆಗೂ ಪತ್ತೆಯಾಗಿಲ್ಲ. ಅವರನ್ನು ಈಗಲಾದರೂ ಹುಡುಕಿ ಕೊಡಿ ಎಂದು ಪೊಲೀಸರನ್ನು ಕೋರಬೇಕಾದ ಸ್ಥಿತಿ.
೨೦೦೯ರಲ್ಲಿ ಮೈಸೂರು ನಗರ, ಜಿಲ್ಲೆ, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಯಲ್ಲಿ ೨೪೨ ಬಾಲಕರು ಕಾಣೆಯಾಗಿದ್ದಾರೆ. ಇದರಲ್ಲಿ ಇನ್ನೂ ೫೮ ಬಾಲಕರು ನಾಪತ್ತೆ. ಬಾಲಕಿಯರ ಸಂಖ್ಯೆ ಇದಕ್ಕಿಂತ ಅಧಿಕ. ವರ್ಷದಲ್ಲಿ ೩೧೫ ಬಾಲಕಿಯರು ನಾಪತ್ತೆಯಾಗಿದ್ದರೆ ೬೨ ಬಾಲಕಿಯರು ಸಿಕ್ಕೇ ಇಲ್ಲ.
ನಗರದಲ್ಲಿ ಬಾಲಕಿಯರೇ ಅಧಿಕ
ಮೈಸೂರು ನಗರದಲ್ಲಿ ನಾಪತ್ತೆಯಾದವರ ಸಂಖ್ಯೆ ವರ್ಷ ದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಈ ವರ್ಷ ಏರಿಕೆಯಾದರೂ ಪತ್ತೆ ಪ್ರಮಾಣದಲ್ಲಿ ಇಳಿಮುಖವಾಗಿದೆ.
೨೦೦೯ರಲ್ಲಿ ನಗರದಲ್ಲಿ ನಾಪತ್ತೆಯಾದ ಬಾಲಕರ ಸಂಖ್ಯೆ ೯೭. ಪತ್ತೆಯಾದವರು ೭೧. ಇನ್ನೂ ೨೬ ಪ್ರಕರಣಕ್ಕೆ ಮುಕ್ತಿ ಸಿಕ್ಕಿಲ್ಲ. ಅದೇ ರೀತಿ ಬಾಲಕಿಯರ ನಾಪತ್ತೆಯೂ ಹೆಚ್ಚಾಗಿದೆ. ೨೦೦೯ರಲ್ಲಿ ೧೧೮ ಬಾಲಕಿಯರು ಕಾಣೆಯಾದರೂ ೧೦೩ ಬಾಲಕಿಯರ ಪತ್ತೆಯಾಗಿದೆ. ಉಳಿದ ೧೫ ಬಾಲಕಿಯರು ಈಗಲೂ ನಾಪತ್ತೆ. ಇದರಲ್ಲಿ ಕಾಲೇಜು ವಿದ್ಯಾರ್ಥಿಗಳ ಪ್ರಮಾಣವೇ ಹೆಚ್ಚು. ಬಹುತೇಕರು ಪ್ರೇಮ ಪಾಶಕ್ಕೆ ಸಿಲುಕಿ ಪೋಷಕರಿಂದ ದೂರ ಓಡಿದರೆ, ತಲೆ ಮರೆಸಿಕೊಂಡವರೂ ಇದ್ದಾರೆ.
ನಗರದಲ್ಲಿ ವರ್ಷವಿಡೀ ಪುರುಷರು, ಮಹಿಳೆಯರು, ಬಾಲಕರು ಹಾಗೂ ಬಾಲಕಿಯರು ನಾಪತ್ತೆಯಾದ ಸಂಖ್ಯೆ ೪೪೫. ಪತ್ತೆಯಾಗಿದ್ದು ೨೯೪. ಇದರಲ್ಲಿ ೧೫೧ ಪ್ರಕರಣ ಪೊಲೀಸ್ ಕಡತದಲ್ಲೇ ಉಳಿದಿವೆ.
ಗ್ರಾಮೀಣ ಭಾಗದಲ್ಲಿ ಬಾಲಕರೇ ಹೆಚ್ಚು
ಮೈಸೂರು ಜಿಲ್ಲೆಯನ್ನೂ ಒಳಗೊಂಡ ದಕ್ಷಿಣ ವಲಯದ ನಾಲ್ಕು ಜಿಲ್ಲೆಗಳಲ್ಲೂ ಇದೇ ಸ್ಥಿತಿ. ನಾಲ್ಕು ಜಿಲ್ಲೆಯಲ್ಲಿ ೧೪೫ ಬಾಲಕರು, ೧೯೭ ಬಾಲಕಿಯರು ಒಂದು ವರ್ಷದಲ್ಲಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ೩೨ ಬಾಲಕರು ಹಾಗೂ ೪೭ ಬಾಲಕಿಯರು ಸಿಕ್ಕಿಲ್ಲ.
ಮೈಸೂರು ಜಿಲ್ಲೆಯಲ್ಲಿ ೪೦ ಬಾಲಕರು ಕಾಣೆಯಾಗಿ ೩೨ ಬಾಲಕರು ವಾಪಸಾಗಿದ್ದರೆ, ಮಂಡ್ಯ ಜಿಲ್ಲೆಯಲ್ಲಿ ಈ ಪ್ರಮಾಣ ೭೫ ಹಾಗೂ ೪೯. ಕೊಡಗು ಜಿಲ್ಲೆಯಲ್ಲಿ ೨೧ ಬಾಲಕರು ನಾಪತ್ತೆಯಾಗಿ ೧೬ ಪ್ರಕರಣ ಬಗೆಹರಿದಿವೆ. ಚಾಮರಾಜನಗರದಲ್ಲಿ ಇದು ೯ ಹಾಗೂ ೫.
ಇದೇ ರೀತಿ ಬಾಲಕಿಯರು ಕಾಣೆಯಾದ ಅಂಕಿ ಸಂಖ್ಯೆಯನ್ನು ನೋಡಿ. ಮೈಸೂರು ಜಿಲ್ಲೆಯಲ್ಲಿ ೫೬ ಬಾಲಕಿಯರು ಮನೆ ಬಿಟ್ಟಿದ್ದರೆ ೩೮ ಬಾಲಕಿಯರು ವಾಪಸಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ೮೨ ಬಾಲಕಿಯರು ಓಡಿ ಹೋಗಿದ್ದರೆ, ೬೫ ಬಾಲಕಿಯರು ಹಿಂದಿರುಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಈ ಪ್ರಮಾಣ ೪೨-೩೨, ಚಾಮರಾಜನಗರ ಜಿಲ್ಲೆಯಲ್ಲಿ ೧೭-೧೨ರಷ್ಟಿದೆ.
ಪೊಲೀಸರ ತನಿಖೆಯ ಈ ಪರಿ
ಶಾಲೆಗೆ ಹೋದ ಮಗ ಇನ್ನೂ ಬಂದೇ ಇಲ್ಲ, ಸ್ನೇಹಿತೆಯ ಮನೆಗೆ ಹೋದ ಮಗಳು ಇದುವರೆಗೂ ವಾಪಸಾಗಿಲ್ಲ. ದಯಮಾಡಿ ಕಾಣೆಯಾಗಿರುವ ನನ್ನ ಮಗ/ಮಗಳನ್ನು ಹುಡುಕಿಕೊಡಿ ಎಂದು ಒಂದು ಸಾಲಿನ ಒಕ್ಕಣೆಯ ಪತ್ರ ಪೊಲೀಸ್ ಠಾಣೆಗೆ ಬರುತ್ತದೆ. ಇದನ್ನೇ ಆಧರಿಸಿ ಪೊಲೀಸರು ಮೊಕದ್ದಮೆ ದಾಖಲಿಸುತ್ತಾರೆ..ಆನಂತರ ಮೇಲ್ಕಂಡ ಚಹರೆವುಳ್ಳ ಬಾಲಕ/ಬಾಲಕಿ ಮಾಹಿತಿ ದೊರೆತಲ್ಲಿ ಸಂಬಂಧಪಟ್ಟ ಠಾಣೆಗೆ ತಿಳಿಸಿ ಎಂದು ಮಾಧ್ಯಮಗಳಿಗೆ ಒಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಕೈ ತೊಳೆದುಕೊಳ್ತಾರೆ. ಪೋಷಕರೇನಾದರೂ ಪೊಲೀಸರ ಮೇಲೆ ನಿರಂತರವಾಗಿ ಒತ್ತಡ ಹೇರಿ, ಮೇಲಧಿಕಾರಿಗಳು ವಿಶೇಷ ಆಸಕ್ತಿ ವಹಿಸಿದಾಗ ಮಾತ್ರವೇ ಪ್ರಕರಣ ಭೇದಿಸಬಹುದು.
ಕೆಲವರಲ್ಲಿ ತಾವೇ ವಾಪಸಾಗಿ ಪ್ರಕರಣ ಸುಖಾಂತ್ಯ ಕಂಡರೆ ಶೇ.೨೦ರಷ್ಟು ಪ್ರಕರಣಗಳಿಗೆ ಮುಕ್ತಿಯೇ ಸಿಗುವುದಿಲ್ಲ. ಇಂಥ ಮಿಸ್ಸಿಂಗ್ ಪ್ರಕರಣದ ಬಗ್ಗೆ ಪೊಲೀಸರು ತಲೆಕೆಡಿಸಿ ಕೊಳ್ಳುವುದೂ ಇಲ್ಲ. ಸಿ ರಿಪೋರ್ಟ್ ದಾಖಲಿಸಿದರೆ ಅಲ್ಲಿಗೆ ಪ್ರಕರಣ ಮುಕ್ತಾಯವಾದಂತೆಯೇ.
ನಂಜನಗೂಡಿನ ಬಾಲಕ ಕೊಲೆ ಪ್ರಕರಣ ದಾಖಲಾಗಿದ್ದು ಅಪಹರಣವಾಗಿ. ಇಷ್ಟಾದರೂ ಆರೋಪಿಯ ಸುಳಿವು ಇದ್ದರೂ ಪ್ರಕರಣ ಭೇದಿಸಲು ಪೊಲೀಸರು ತೆಗೆದುಕೊಂಡ ಸಮಯ ಒಂದೂವರೆ ವರ್ಷ. ಇನ್ನು ಅಪಹರಣ ಪ್ರಕರಣವಾಗದಿದ್ದರಂತೂ ಅದು ಪೊಲೀಸ್ ಕಡತದಲ್ಲಿಯೇ ಉಳಿದು ಹೋಗುತ್ತದೆ.
ಅಂಕಿ ಸಂಖ್ಯೆ
ಕಾಣೆಯಾದ ಬಾಲಕರು ೨೪೨
ಪತ್ತೆಯಾದವರು ೧೮೪
ಕಾಣೆಯಾದ ಬಾಲಕಿಯರು ೩೧೫
ಪತ್ತೆಯಾದವರು ೨೫೩

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ