ಮೈಸೂರಲ್ಲಿ ವಾಹನ ಕಳ್ಳತನ ಹೆಚ್ಚಾಗುತ್ತಿದೆ ಎಚ್ಚರ!



ಕುಂದೂರು ಉಮೇಶಭಟ್ಟ/ಮೈಸೂರು
ಮೈಸೂರಿನಲ್ಲಿ ದಿನಕ್ಕೆ ಒಂದರಿಂದ ಎರಡು ವಾಹನಗಳ ಕಳವು. ಇದರಲ್ಲಿ ಬೈಕ್‌ಗಳ ಸಂಖ್ಯೆಯೇ ಹೆಚ್ಚು. ನಂತರ ಕಾರಿನದ್ದು.
೨೦೦೯ರ ಒಂದೇ ವರ್ಷದಲ್ಲಿ ಕಳುವಾಗಿರುವ ವಾಹನಗಳ ಸಂಖ್ಯೆ ೪೮೬. ಪತ್ತೆ ಪ್ರಮಾಣ ಅರ್ಧದಷ್ಟಿದ್ದರೂ ಕಳುವಾಗುತ್ತಿರುವ ಅಂಕಿ ಅಂಶ ಏರಿಕೆಯಾಗುತ್ತಿರುವುದು ಪೊಲೀಸರಿಗೂ ತಲೆನೋವಾಗಿದೆ.
ಒಂದು ತಿಂಗಳಿನಲ್ಲಿ ೫೦ಕ್ಕೂ ಹೆಚ್ಚು ವಾಹನಗಳು ಕಳುವಾಗಿರುವುದೂ ಇದೆ. ಕಳೆದ ವರ್ಷದ ನವೆಂಬರ್‌ನಲ್ಲಿ ೫೬ ವಾಹನ ಕಳುವಾಗಿದ್ದು ಗರಿಷ್ಠವಾದರೆ, ಫೆಬ್ರವರಿಯಲ್ಲಿ ಕನಿಷ್ಠವೆಂದರೆ ೨೪ ವಾಹನ ಕಳ್ಳತನ ಮಾಡಲಾಗಿದೆ.
ಏರುತ್ತಿರುವ ಬೈಕ್ ಸಂಖ್ಯೆ-ಕಳವು
ಮೈಸೂರು ನಗರದ ಬೆಳವಣಿಗೆ ಮೂರ‍್ನಾಲ್ಕು ವರ್ಷದಲ್ಲಿ ಏರಿಕೆಯಾಗಿದೆ. ಇದು ಕಣ್ಣಮುಂದೆ ಕಾಣುವುದು ಸಂಚಾರ ಒತ್ತಡದ ಮೂಲಕ. ಸಂಚಾರದ ದಟ್ಟಣೆಗೆ ಕಾರಣವಾಗುತ್ತಿರುವುದು ಹೆಚ್ಚುತ್ತಿರುವ ವಾಹನಗಳು.
ನಾಲ್ಕೈದು ವರ್ಷದ ಹಿಂದೆ ನಗರದ ರಸ್ತೆಗೆ ಇಳಿಯುತ್ತಿದ್ದ ಬೈಕ್‌ನ ಸಂಖ್ಯೆ ದಿನಕ್ಕೆ ೨೦ರಿಂದ ೩೦ ಅಂದರೆ ಹೆಚ್ಚು. ಎರಡು ವರ್ಷದ ಹಿಂದೆ ಈ ಪ್ರಮಾಣ ಏರಿದ್ದು ೭೦ಕ್ಕೆ. ಅದು ೧೦೦ ಅನ್ನೂ ದಾಟಿದ್ದು ಉಂಟು. ಆರ್ಥಿಕ ಹಿಂಜರಿತದಿಂದ ಬೈಕ್ ಖರೀದಿಸುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಈಗಲೂ ನಿತ್ಯ ಇದೇ ದರದಲ್ಲಿ ಆಗುತ್ತಿದೆ, ವಾಹನಗಳ ನೊಂದಣಿ. ಅಂದರೆ ವರ್ಷಕ್ಕೆ ೩೫ ಸಾವಿರಕ್ಕೂ ಹೆಚ್ಚು. ಸಾರಿಗೆ ಇಲಾಖೆಯಲ್ಲಿ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ನಗರದಲ್ಲಿನ ವಾಹನಗಳ ಸಂಖ್ಯೆ ೪ ಲಕ್ಷ ದಾಟಿದೆ. ಬೈಕ್‌ಗಳ ಸಂಖ್ಯೆ ೩ ಲಕ್ಷದಷ್ಟು.
ವಾಹನಗಳ ಸಂಖ್ಯೆ ಏರಿದಂತೆ ಕಾರು ಹಾಗೂ ಬೈಕಿನ ಕಳುವಿನ ಪ್ರಮಾಣದಲ್ಲೂ ಏರಿಕೆ ಕಂಡಿದೆ. ಮುಖ್ಯರಸ್ತೆಗಳು, ಬಡಾವಣೆಗಳಲ್ಲಿ ನಿಲ್ಲಿಸಿದ ಸಮಯದಲ್ಲೇ ವಾಹನಗಳನ್ನು ಕಳವು ಮಾಡುವ ಪ್ರಕರಣಗಳು ವರದಿಯಾಗುತ್ತಿವೆ. ಅದರಲ್ಲೂ ಹಗಲು ವೇಳೆಯಲ್ಲಿ ದ್ವಿಚಕ್ರ ಕಳುವಾಗಿರುವುದು ಅಧಿಕ.
ಎಲ್ಲಿ ಹೆಚ್ಚು ಎಲ್ಲಿ
ಪ್ರಮುಖ ಸಂಚಾರ ಸ್ಥಳವಾಗಿರುವ ದೇವರಾಜ ಠಾಣೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ವಾಹನ ಕಳ್ಳತನಗಳಾಗುತ್ತಿದ್ದರೆ, ಜಯಲಕ್ಷ್ಮಿಪುರಂ ಠಾಣೆ ವ್ಯಾಪ್ತಿಯಲ್ಲೂ ಹೆಚ್ಚು ಕಳ್ಳತನವಾಗುತ್ತಿವೆ. ಇದರಿಂ ದ ಈ ಭಾಗದಲ್ಲಿ ಎಚ್ಚರ ವಹಿಸುವುದು ಸೂಕ್ತ.
ಎರಡೂ ಮುಖ
ವಾಹನ ಕಳುವಿಗೆ ಕಾರಣ ಎರಡೂ ಕಡೆಯದ್ದು,.ವಿಶೇಷವಾಗಿ ದ್ವಿಚಕ್ರ ವಾಹನಗಳ ಕಳುವಿನಲ್ಲಿ ಇರುವುದು ಮಾಲೀಕನ ನಿರ್ಲಕ್ಷ್ತವೇ. ಪ್ರಮುಖ ರಸ್ತೆಗಳಿಗೆ ಬಂದಾಗ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಹೋಗುವುದು. ಅಗತ್ಯ ಭದ್ರತೆ ರೂಪಿಸಿಕೊಳ್ಳದೇ ಇರುವುದು ಒಂದು ಕಡೆ. ಮತ್ತೊಂದು ಕಡೆ ಮಿತಿ ಮೀರುತ್ತಿರುವ ಪಾರ್ಕಿಂಗ್ ಸಮಸ್ಯೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಪರಿಹಾರವಾಗೇ ಇಲ್ಲ.
ಪಾಲಿಕೆ-ಮುಡಾ ಸಮನ್ವಯದೊಂದಿಗೆ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಪೊಲೀಸ್ ಆಯುಕ್ತರು ಹೇಳಿದ್ದರೂ ಅಂಥ ಪ್ರಯತ್ನಗಳು ಆಗಿಲ್ಲ. ಇದರಿಂದ ವಾಹನ ಸವಾರರು ಸಿಕ್ಕ ಸ್ಥಳದಲ್ಲಿ ವಾಹನ ನಿಲ್ಲಿಸುವ ಸ್ಥಿತಿಯಿದೆ. ಜತೆಗೆ ದೇವರಾಜಅರಸ್ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಜಾಗವೇ ಇಲ್ಲದಂತೆ ಮಾಡಿದರೂ ಪೊಲೀಸರು ಅಂಥವರಿಗೆ ಸೂಚನೆ ನೀಡುವ ಕೆಲಸವನ್ನೂ ಮಾಡುತ್ತಿಲ್ಲ.
=============
ಸೇರಿದ್ದು ಪೊಲೀಸ್ ಠಾಣೆ
ಇದು ೧೫ ಹಿಂದೆ ನಡೆದ ಘಟನೆ. ಚಾಮರಾಜನಗರ ಮೂಲದ ಈ ಯುವಕ ಕುವೆಂಪುನಗರ ವಾಸಿ. ಬೈಕ್ ಇಟ್ಟುಕೊಂಡಿದ್ದರೂ ಬೇಕಾಬಿಟ್ಟಿ ನಿಲ್ಲಿಸಿ ಹೋಗುವುದು ಈತನ ಚಾಳಿ. ರಾತ್ರಿ ಕೆಲಸ ಮುಗಿಸಿ ಬಂದವರು ಮನೆ ಎದುರು ಬೈಕ್ ನಿಲ್ಲಿಸಿ. ಹ್ಯಾಂಡಲ್ ಲಾಕ್ ಆಗಿರಲಿಲ್ಲ. ಆರಾಮವಾಗಿ ಮಲಗಿಬಿಟ್ಟ. ಹೀಗೆ ಆಗಿದ್ದು ಒಂದಲ್ಲ, ಎರಡಲ್ಲ ಮೂರು ದಿನ. ನೈಟ್ ಬೀಟ್ ಬರುವ ಪೊಲೀಸರು ಮನೆಯವರಿಗೆ ತಿಳಿಸಿದರೂ ಯಾವುದೇ ಬದಲಾವಣೆ ಕಾಣಲಿಲ್ಲ. ಮೂರನೇ ದಿನವೂ ಬೀದಿಯಲ್ಲಿ ಬೈಕ್ ನಿಂತಾಗ ಪೊಲೀಸರು ತಮ್ಮ ಕೆಲಸ ಮಾಡಿದರು. ಅದು ಕುವೆಂಪುನಗರ ಠಾಣೆ ಸೇರಿತು. ಬೆಳಗ್ಗೆ ಬೈಕ್ ಇಲ್ಲದಿದ್ದಾಗಲೇ ಆತನಿಗೆ ಬಿಸಿ ಮುಟ್ಟಿದ್ದು. ಆತ ತೆರಳಿದ್ದು ಕುವೆಂಪುನಗರ ಠಾಣೆಗೆ. ನನ್ನ ಬೈಕ್ ಕಳ್ಳತನ ಮಾಡಲಾಗಿದೆ ಎನ್ನುವ ಅರ್ಜಿಯೊಂದಿಗೆ ಆತ ಠಾಣೆಗೆ ಹೋದಾಗ ಅಲ್ಲಿಯೇ ಬೈಕ್ ಇತ್ತು. ಪೊಲೀಸರ ಬಳಿ ತಪ್ಪೊಪ್ಪಿಕೊಂಡರೂ ಆತನ ಬಳಿ ಬೈಕ್‌ನ ಸೂಕ್ತ ದಾಖಲೆಗಳಿಲ್ಲ. ಎಲ್ಲಾ ಊರಿನಲ್ಲಿವೆ ಎನ್ನುವ ಉತ್ತರ. ಕೊನೆಗೆ ದಾಖಲೆ ಒದಗಿಸಿದ ಮೇಲೆ ಬೈಕ್ ಬಿಡಬೇಕಾಯಿತು. ಸೂಕ್ತ ದಂಡವನ್ನೂ ಪೊಲೀಸರು ವಿಧಿಸಿದ್ದರು. ಇದು ಒಬ್ಬ ಯುವಕನ ಕಥೆಯಲ್ಲ ಬಹುತೇಕ ಯುವಕರ ಬೈಕ್‌ನ ಹಿಂದೆ ಇಂಥ ಬೇಜವಾಬ್ದಾರಿಯದ್ದೇ ಕಥೆ.
ಯಾವ ತಿಂಗಳಲ್ಲಿ ಎಷ್ಟು ಕಳುವು
ಜನವರಿ-೪೨
ಫೆಬ್ರವರಿ-೨೪
ಮಾರ್ಚ್-೫೦
ಏಪ್ರಿಲ್-೨೭
ಮೇ-೪೧
ಜೂನ್-೩೧
ಜುಲೈ-೪೨
ಆಗಷ್ಟ್-೩೭
ಸೆಪ್ಟೆಂಬರ್-೩೭
ಅಕ್ಟೋಬರ್-೫೩
ನವೆಂಬರ್-೫೬
ಡಿಸೆಂಬರ್-೪೬
ಒಟ್ಟು -೪೮೬
ಏನು ಮಾಡಬಹುದು
- ಲಾಕ್ ಮಾಡಿದ ನಂತರ ಖಚಿತಪಡಿಸಿಕೊಳ್ಳುವುದು
- ಬೈಕ್‌ನಲ್ಲಿನ ಲಾಕ್ ಅಲ್ಲದೇ ಪ್ರತ್ಯೇಕ ಲಾಕ್ ಅಳವಡಿಕೆ
- ಸುರಕ್ಷಿತ ಸ್ಥಳದಲ್ಲಿ ನಿಲುಗಡೆಗೆ ಯೋಚನೆ
- ಆದಷ್ಟು ಪಾರ್ಕಿಂಗ್ ಸ್ಥಳದಲ್ಲೇ ನಿಲ್ಲಿಸುವುದು
- ಮನೆ ಎದುರು ಬೇಕಾಬಿಟ್ಟಿ ನಿಲ್ಲಿಸುವುದು ಬೇಡ
============

ನಗರದಲ್ಲಿ ವಾಹನಗಳಲ್ಲಿ ದ್ವಿಚಕ್ರ ವಾಹನ ಕಳವು ಪ್ರಮಾಣ ಹೆಚ್ಚಾಗುತ್ತಿರುವುದು ನಿಜವಾಗಿಯೂ ಆತಂಕದ ಸಂಗತಿ. ಪೊಲೀಸರೂ ರಕ್ಷಣೆ ನಿಟ್ಟಿನಲ್ಲಿ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಜನತೆಯೂ ಸಹಕರಿಸಿ ಸ್ವಯಂ ಎಚ್ಚರಿಕೆ ವಹಿಸಬೇಕು. ಕಳ್ಳತನದ ಪ್ರಮುಖ ಸ್ಥಳಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ.
-ಪಿ.ರಾಜೇಂದ್ರಪ್ರಸಾದ್, ಅಪರಾಧ, ಸಂಚಾರ ಡಿಸಿಪಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ