ರಮ್ಮನಹಳ್ಳಿಯಲ್ಲಿ ದೇವರ ಮೆಚ್ಚಿಸಲು ವಿಶಿಷ್ಟ ಆಚರಣೆ


ಇಲ್ಲಿ ಯುವಕರು ಯುವತಿಯರಾಗ್ತಾರೆ !
ಕುಂದೂರು ಉಮೇಶಭಟ್ಟ ಮೈಸೂರು
ಕತ್ತಲಾಗುತ್ತಿದ್ದಂತೆ  ಇಲ್ಲಿ ಯುವಕರೆಲ್ಲಾ ಯುವತಿಯ ರಾಗುತ್ತಾರೆ. ದೇವರನ್ನು ಮೆಚ್ಚಿಸಲು ಮನಸಾರೆ ಕುಣಿ ಯುತ್ತಾರೆ, ಊರವರನ್ನು ಖುಷಿಯಲ್ಲಿ ತೇಲಿಸುತ್ತಾರೆ...
ಇಂಥ ಆಚರಣೆ ವರ್ಷಗಳಿಂದ ನಡೆದಿರುವುದು ಮೈಸೂರಿನಿಂದ ಕೇವಲ ೧೦ ಕಿ.ಮಿ. ದೂರದ ರಮ್ಮನಹಳ್ಳಿ ಎಂಬ ಗ್ರಾಮದಲ್ಲಿ. ಇಡೀ ಊರಿಗೆ ಊರೇ ಸೇರಿ ೧೫ ದಿನ ರಾತ್ರಿ ನೃತ್ಯ ಮಾಡುತ್ತದೆ. ಯುವಕರು ಯುವತಿಯರ ವೇಷ ಹಾಕಿ ಕುಣಿದರೆ, ಮಹಿಳೆ ಯರೆಲ್ಲಾ ಕುಳಿತು ನೃತ್ಯದ ಸವಿ ಸವಿಯುತ್ತಾರೆ.
ದುಮ್ಮಾನದ ಬದುಕು: ಮೈಸೂರಿನಿಂದ ಪೂರ್ವ ಭಾಗಕ್ಕೆ ಮಹಾದೇವಪುರ ರಸ್ತೆಯಲ್ಲಿ ಹೋದರೆ ಸಿಗು ವುದು ರಮ್ಮನಹಳ್ಳಿ ಗ್ರಾಮ. ನಾಯಕ ಸಮು ದಾಯ ದವರೇ ಹೆಚ್ಚಾಗಿರುವ ಗ್ರಾಮದಲ್ಲಿ ಕೆಲವರು ಕೃಷಿ ಮಾಡಿದರೆ ಇನ್ನಷ್ಟು ಮಂದಿಗೆ ಕೂಲಿಯೇ ಬದುಕು. ಗ್ರಾಮದ ಬಹುತೇಕ ಮಹಿಳೆಯರು ಬೆಳಗ್ಗೆ ಮೈಸೂರಿಗೆ ಬಂದು ಹಣ್ಣು ವ್ಯಾಪಾರ ಮಾಡಿ ಸಂಜೆಗೆ ಊರು ಸೇರು ತ್ತಾರೆ. ರಮ್ಮನಹಳ್ಳಿಯವರ ದುಮ್ಮಾನದ ಬದುಕಿನ ಕಥೆಯಿದು. ಇಂಥ ಗ್ರಾಮದಲ್ಲಿ ಧಾರ್ಮಿಕ ಆಚರಣೆಗೆ ಕೊರತೆ ಯಿಲ್ಲ. ಕೊಂಚ ವಿಭಿನ್ನ ಎನ್ನುವ ಆಚರಣೆ ಗ್ರಾಮದಲ್ಲಿ ವರ್ಷಗಳಿಂದ ನಡೆದುಕೊಂಡು ಬಂದಿದೆ.
ಶಿವರಾತ್ರಿ ಮುಗಿದು ಬೇಸಿಗೆ ಆರಂಭವಾಗುವ ಹೊತ್ತಿಗೆ ಊರವರೆಲ್ಲಾ ಸೇರಿ ಮಾರಿ ಹಬ್ಬ ನಡೆಸುವ ದಿನಾಂಕ ನಿಗದಿ ಮಾಡುತ್ತಾರೆ. ಆ ದಿನಾಂಕಕ್ಕಿಂತ ೧೫ ದಿನ ಮೊದಲು ಊರಲ್ಲಿ ನೃತ್ಯದ ಸಂಭ್ರಮ. ೧೪ ದಿನವೂ ರಾತ್ರಿ ೨ ರಿಂದ ೩ ಗಂಟೆ ಕಾಲ ನೃತ್ಯ. ಕಡೆಯ ದಿನ ಹಗಲಿನಲ್ಲಿ ಹಬ್ಬದ ಸಂಭ್ರಮಾಚರಣೆಗೆ ನೃತ್ಯದ ಕಳೆ.
ವಿವಿಧ ವೇಷದೊಂದಿಗೆ: ಇದಕ್ಕಾಗಿ ಊರಿನ ಯುವಕರೆಲ್ಲಾ ಯುವತಿಯರ ವೇಷ ಧರಿಸುತ್ತಾರೆ. ಒಬ್ಬರು ಚೂಡಿದಾರ್ ಧರಿಸಿದರೆ, ಇನ್ನು ಕೆಲವರು ಸೀರೆ ಉಡುತ್ತಾರೆ. ಈಗಿನ ಟ್ರೆಂಡ್ ಜೀನ್ಸ್‌ಪ್ಯಾಂಟ್, ಮಿಡ್ಡಿ, ಚೆಡ್ಡಿಗಳನ್ನೂ ಧರಿಸುತ್ತಾರೆ.  ಕೆಲವರು ಸೊಪ್ಪುಗಳನ್ನು ಕಟ್ಟಿಕೊಂಡು ಧಾರ್ಮಿಕತೆಯ ಸ್ಪರ್ಶ ನೀಡಿದರೆ, ಬಾಲಕಿಯರು ಹಾಗೂ ವೃದ್ಧೆಯರೂ ಹೆಜ್ಜೆ ಹಾಕುತ್ತಾರೆ. ಆದರೆ ಯುವತಿ-ಮಹಿಳೆಯರಿಗೆ ಅವಕಾಶವಿಲ್ಲ. ಅವರ ರೂಪದಲ್ಲೇ ಯುವಕರು !
ಹೀಗೆ ಅಣಿಯಾಗುವ ಯುವಕರು ಉದ್ದನೆಯ ಕೋಲುಗಳನ್ನು ಹಿಡಿದು ಊರಿನ ಮುಖ್ಯ ದೇವತೆ ಮಾರಿಗುಡಿಯ ಮುಂದೆ ಸೇರುತ್ತಾರೆ. ಸಂಜೆಯಾಗುತ್ತಿ ದ್ದಂತೆ ಯುವತಿಯಾದವರು, ಯುವಕರಾಗೇ ಉಳಿದವರು ಸೇರಿ ಹೆಜ್ಜೆ ಹಾಕುತ್ತಾ ದೇವಸ್ಥಾನ ಸುತ್ತುತ್ತಾರೆ. ಹಲಗೆ ಹೊಡೆತಕ್ಕೆ ಹೆಜ್ಜೆ ಹಾಕಿ ದೇವರನ್ನು ಮೆಚ್ಚಿಸಲು ಯತ್ನಿಸುತ್ತಾರೆ.  ಈ ವೇಷ ನೋಡಬೇಡ ಅಮ್ಮಯ್ಯ.. ಎಂದು ಯುವಕರು ಹಾಡದಿದ್ದರೂ ಇವರ ನೃತ್ಯ ಸಂಭ್ರಮವನ್ನು ಆಸ್ವಾದಿಸುವವರು ಗ್ರಾಮದ ಮಹಿಳೆಯರು. ಅಬಾಲವೃದ್ಧೆಯರಾದಿ ಯಾಗಿ ಎಲ್ಲರೂ ಸೇರಿ ಚಪ್ಪಾಳೆ ತಟ್ಟುತ್ತಾ ಕುಣಿಯುವವರಿಗೆ ಉತ್ಸಾಹ ತುಂಬುತ್ತಾರೆ.
ಮಾಂಸದೂಟವಿಲ್ಲ: ಗ್ರಾಮದಲ್ಲಿ ಮಾಂಸದೂಟ ಮಾಮೂಲಿಯಾದರೂ ಈ ಹದಿನೈದು ದಿನ ನಿಷೇಧ. ದೇವಸ್ಥಾನದ ಮುಂದೆ ನೃತ್ಯ ಶುರುವಾದ ದಿನದಂದೇ ಕೋಳಿ-ಕುರಿ ಸೇವನೆ ಬಂದ್. ಯಾವ ಮನೆಯಲ್ಲೂ ಮಾಂಸ ಮಾಡುವಂತಿಲ್ಲ. ಹೊರಗಡೆ ಸೇವಿಸಿ ಬರುವ ಹಾಗಿಲ್ಲ. ವರ್ಷದಿಂದ ಈ ನಿಷೇಧ ಜಾರಿಯಲ್ಲಿದೆ.
ಚಪ್ಪಲಿ ಧರಿಸಿದರೆ ದಂಡ: ಗ್ರಾಮ ಜನ ದೇವಸ್ಥಾನದ ಮುಂದೆ ನೃತ್ಯಕ್ಕೆ ಸೇರಿದರೆಂದರೆ ಅಲ್ಲಿಗೆ ಯಾರೂ ಚಪ್ಪಲಿ ಧರಿಸಿ ಬರುವಂತಿಲ್ಲ. ಆದರೂ ಧರಿಸಿ ಬಂದ ವರಿಗೆ ದಂಡ. ಇದಕ್ಕಾಗಿಯೇ ಯುವಕರ ತಂಡ ಮೇಲೇ ನಿಗಾ ಇಟ್ಟಿರುತ್ತದೆ. ಸಾಕಷ್ಟು ಮಂದಿ ಚಪ್ಪಲಿ ಹಾಕಿಕೊಂಡು ಬಂದು ದಂಡವನ್ನೂ ಕಟ್ಟಿದ್ದಾರೆ.
ಚಪ್ಪಲಿ ಹಾಕಿಕೊಂಡು ಬರಬಾರದು ಅನ್ನುವುದನ್ನು ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ. ಅದನ್ನು ನಾವು ಪಾಲಿಸುತ್ತಿದ್ದೇವೆ. ಚಪ್ಪಲಿ ಹಾಕಿದರೆ ದಂಡ ತೆರಬೇಕಾಗುತ್ತದೆ ಎನ್ನುವುದು ಗ್ರಾಮದ ಮುಖಂಡ ನಾಗರಾಜು ಅಭಿಮತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ