ಹೃದಯದ ಆರೋಗ್ಯ ಕಾಪಾಡಿಕೊಂಡವರೇ ಗಟ್ಟಿ-ಗುಂಡಿಗೆಯವರು

ವಿಕ ಸುದ್ದಿಲೋಕ ಮೈಸೂರು
‘ಎದೆನೋವು’ ಎಂದಾಕ್ಷಣ ಎಲ್ಲವೂ ಹೃದಯ ಸಂಬಂಧಿ ಕಾಯಿಲೆ ಅಲ್ಲ. ತಕ್ಷಣವೇ ಇದು ‘ಹೃದಯಾಘಾತ’ ಇರಬಹುದೇ ಎಂದುಕೊಳ್ಳುವುದು ಸರಿಯಲ್ಲ.
ಇದು ಕೆ.ಆರ್.ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ.ಕೆ.ಎಸ್. ಸದಾನಂದ ಅವರ ಸಲಹೆ.
ವಿಜಯ ಕರ್ನಾಟಕ ಪತ್ರಿಕೆ ಕಚೇರಿಯಲ್ಲಿ ಶನಿವಾರ ನಡೆದ ‘ಯೋಗಕ್ಷೇಮ-ವಿಕ ಫೋನ್‌ಇನ್’ ಕಾರ್ಯಕ್ರಮದಲ್ಲಿ ದೂರವಾಣಿ ಕರೆ ಹೊತ್ತು ತಂದ ಹೃದಯ ಸಂಬಂಧಿ ಸಮಸ್ಯೆಗಳಿಗೆ ಉತ್ತರಿಸಿದ ಅವರು, ಅದು ಮಾಂಸಖಂಡದ ನೋವಿರಬಹುದು, ಮೂಳೆ ನೋವು, ನಡೆದಾಗ, ಹತ್ತುವಾಗ, ಬಗ್ಗಿದಾಗ, ಆಮ್ಲತೆ (ಅಸಿಡಿಟಿ) ಯಿಂದಲೂ ನೋವು ಕಾಣಿಸಿಕೊಳ್ಳಬಹುದು. ಶ್ವಾಸಕೋಶ ಸಮಸ್ಯೆಗಳೂ ಎದೆನೋವಿಗೆ ಕಾರಣವಾಗಬಹುದು. ವೈದ್ಯಕೀಯ ಪರೀಕ್ಷೆಯಿಂದ ಮಾತ್ರ ನೋವಿನ ಮೂಲ ಪತ್ತೆ ಸಾಧ್ಯ ಎಂದರು.
ಹೃದಯಾಘಾತ ಕಾಣಿಸಿಕೊಳ್ಳುವ ಮುನ್ನ ಎದೆಯ ಮಧ್ಯೆ ಭಾಗದಲ್ಲಿ ಹಿಂಡಿದಂತೆ ನೋವು ಕಾಣಿಸಿಕೊಳ್ಳುತ್ತದೆ. ಆನೆ ಕಾಲಿಟ್ಟಂತೆ ಯಾತನೆಯಾಗುತ್ತದೆ. ದಮ್ಮು, ತಲೆಸುತ್ತ ಇತ್ಯಾದಿ ಮುನ್ಸೂಚನೆ ಕಾಣಿಸಿಕೊಳ್ಳುತ್ತದೆ. ನಡೆದಾಗ, ಮಲಗಿದಾಗ ದಮ್ಮು ಬರುವುದು, ತಲೆಸುತ್ತು, ಕಾಲು ಊದಿಕೊಳ್ಳುವುದು ಆಗುತ್ತದೆ. ಹಾಗಾಗಿ ‘ಎದೆನೋವು’ ಯಾವ ಕಾರಣಕ್ಕೆ ಬಂದಿರಬಹುದೆನ್ನುವು ದನ್ನು ದೃಢಪಡಿಸಿಕೊಂಡು, ವೈದ್ಯರ ಸಲಹೆ ಅನುಸಾರ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದರು.
ಎದೆನೋವು ಕಾಣಿಸಿಕೊಂಡಾಗ ನಿರ್ಲಕ್ಷ್ಯ ವಹಿಸದೇ ವೈದ್ಯರನ್ನು ಕಂಡು ಪರೀಕ್ಷಿಸಿಕೊಳ್ಳಬೇಕು. ಹೃದಯ ಕಾಯಿಲೆಗಳ ಪತ್ತೆಗೆ ಇಸಿಜಿ,ಟ್ರೆಡ್‌ಮಿಲ್, ಎಕೋಕಾರ್ಡಿಯೋಗ್ರಫಿ, ಸ್ಕ್ಯಾನಿಂಗ್, ಎಕ್ಸರೇ ಮೊದಲಾದ ಪರೀಕ್ಷೆಗಳ ಮೂಲಕ ದೃಢಪಡಿಸಿಕೊಳ್ಳಬಹುದು. ಮಾಂಸಖಂಡ, ಮೂಳೆ ನೋವು ಇತ್ಯಾದಿಗಳು ಎದೆನೋವಿಗೆ ಕಾರಣವಾದರೆ ಭೀತಿ ಅನಗತ್ಯ ಎಂದು ತಿಳಿಸಿದರು.
ಬಹುತೇಕ ಕರೆಗಳಲ್ಲಿ ಎದೆನೋವಿನ ಬಗ್ಗೆ ಅತಂಕವ್ಯಕ್ತವಾಯಿತು. ಕುವೆಂಪುನಗರದ ವೇಣುಗೋಪಾಲ್, ಕುಶಾಲನಗರದ ವಿನೋದ್, ಚಳ್ಳಕೆರೆ ನಿರಂಜನಗೌq, ಚಾಮರಾಜನಗರದ ಮಹದೇವಸ್ವಾಮಿ,ಗುಂಡೂರಾವ್‌ನಗರ ಸನತ್‌ಕುಮಾರ್ ಮೊದಲಾದವರು ಇದೇ ಪ್ರಶ್ನೆ ಎತ್ತಿದರು. ರಕ್ತದೊತ್ತಡ, ತೀವ್ರವಾಗಿ ಎದೆಬಡಿತ, ಯುವಕರಲ್ಲೂ ಹೆಚ್ಚು ಹೃದಯಾಘಾತಕ್ಕೆ ಕಾರಣ ಇತ್ಯಾದಿ ಪ್ರಶ್ನೆಗಳು ಕೇಳಿಬಂದವು.
ತಿಮ್ಮೇಗೌಡ ಎಂಬುವವರ ಕರೆಗೆ ಉತ್ತರಿಸಿದ ಡಾ.ಸದಾನಂದ ಅವರು, ಮಧುಮೇಹ ಇರುವವರಿಗೆ ತೀವ್ರ ಸ್ವರೂಪದ ಹೃದಯಾಘಾತ ಹೆಚ್ಚು. ೩೦-೪೦ ವಯಸ್ಸಿನವರಲ್ಲೂ ಹೃದಯಾಘಾತ ಹೆಚ್ಚು, ಮಧುಮೇಹಿಗಳು ಮುಂಚಿತವಾಗಿ ಇಸಿಜಿ, ಟ್ರೆಡ್‌ಮಿಲ್ ಪರೀಕ್ಷೆ ಮಾಡಿಸಬೇಕು. ಬಿ.ಪಿ., ಸಕ್ಕರೆ ಅಂಶ ಪರೀಕ್ಷಿಸಿ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.
ಬೈಪಾಸ್ ಸರ್ಜರಿ ಆದ ಬಳಿಕವೂ ನೋವು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಆತಂಕ ತೋಡಿಕೊಂಡ ಮಂಡ್ಯದ ನಾಗರತ್ನ ಅವರಿಗೆ, ಟ್ರೆಡ್‌ಮಿಲ್ ಪರೀಕ್ಷೆ ಜತೆಗೆ ವೈದ್ಯರ ಸಲಹೆ ಪಡೆದು ನೋವು ನಿವಾರಕ ಔಷಧ ತೆಗೆದುಕೊಳ್ಳುವುದು ಸೂಕ್ತ ಎಂದರು.
ಕೆ.ಆರ್.ನಗರ ಶಾರದಾ ಅವರು ವೇಗವಾಗಿ ಹೃದಯ ಬಡಿದುಕೊಳ್ಳುವ ಬಗ್ಗೆ ಕೇಳಿದ ಪ್ರಶ್ನೆಗೆ, ಹೃದಯ ವೇಗವಾಗಿ ಬಡಿದುಕೊಳ್ಳಲು ಉದ್ವೇಗ ಕಾರಣವಿರಬಹುದು. ಬಡಿತ ಹೆಚ್ಚಿದ ತಕ್ಷಣವೇ ಇಸಿಜಿ ಪರೀಕ್ಷೆ ಮಾಡಿಸಬೇಕು. ಇದು ಅಸಾಧ್ಯವಾದ್ದರಿಂದ ಹೋಲ್ಟರ್ ಅಳವಡಿಸಿ ೨೪ ಗಂಟೆಗಳು ನಿಗಾ ವಹಿಸಲಾಗುವುದು. ಸಾಮಾನ್ಯವಾಗಿ ಹೃದಯ ಬಡಿತ ನಿಮಿಷಕ್ಕೆ ೬೦-೧೦೦ ಬಾರಿ ಇರುತ್ತೆ. ೪೦-೫೦ ವರ್ಷದವರೆಗೆ ಮಹಿಳೆಯರಲ್ಲಿ ಹೃದಯಾಘಾತ ಪುರುಷರಿಗಿಂತ ಕಡಿಮೆ. ಅದಕ್ಕೆ ಈಸ್ಟ್ರೋಜನ್ ಕಾರಣ. ಆದರೆ ೫೦ ಬಳಿಕ ಮಹಿಳೆಯರಲ್ಲಿ ತೀವ್ರ ಸ್ವರೂಪದಲ್ಲಿ ಹೃದಯಾಘಾತ ಕಾಣಿಸಿಕೊಳ್ಳುತ್ತದೆ ಎಂದರು.
ಲಿಂಗರಾಜು ಅವರ ದಿಢೀರ್ ಸಾವಿಗೆ ಕಾರಣವೇನು ಎನ್ನುವ ಆತಂಕಕ್ಕೆ ಪ್ರತಿಕ್ರಿಯಿಸಿ, ರಕ್ತನಾಳಗಳು ಕಟ್ಟಿಕೊಂಡು ಬಡಿತದಲ್ಲಿ ಏರುಪೇರಾಗಿ ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್) ಉಂಟಾಗುತ್ತದೆ. ಇದರಿಂದ ಶೇ.೨೦ ರಷ್ಟು ಮಂದಿ ನಿಂತಲ್ಲೆ, ಕುಳಿತಲ್ಲೆ, ಮಲಗಿದಲ್ಲೇ ಸಾವನ್ನಪ್ಪುತ್ತಾರೆ. ವೈದ್ಯರಿಂದ ಪರೀಕ್ಷಿಸಿ ನಾಳದ ಕವಾಟು ಮರುಜೋಡಣೆ ಶಸ್ತ್ರಚಿಕಿತ್ಸೆ ಮಾಡಬೇಕು. ಹೃದ್ರೋಗ ಕಾಯಿಲೆಗಳಿಗೆ ಅಂಜಿಯೋಪ್ಲಾಸ್ಟಿ ಇತ್ಯಾದಿ ಹೊಸ ಶಸ್ತ್ರಚಿಕಿತ್ಸಾ ವಿಧಾನಗಳು ಬಂದಿವೆ ಎಂದು ತಿಳಿಸಿದರು.
ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣ ಜಾಸ್ತಿಯಾದಾಗ ನಾಳಗಳಲ್ಲಿ ಶೇಖರಗೊಂಡು ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ಹಾಗಾಗಿ ಬೆಣ್ಣೆ, ತುಪ್ಪ ಬಳಕೆಯಲ್ಲಿ ಮಿತಿ ಇರಬೇಕು, ಮನುಷ್ಯನ ತೂಕ, ಎತ್ತರಕ್ಕೆ ಅನುಗುಣವಾಗಿ ಶೇ.೩೦ ರಷ್ಟು ಕೊಬ್ಬು, ಶೇ.೨೦ ಪ್ರೋಟೀನ್, ಶೇ.೫೦ ರಷ್ಟು ಕಾರ್ಬೋಹೈಡ್ರೇಟ್ಸ್ ಅವಶ್ಯ ಎಂದು ಮಾಹಿತಿ ನೀಡಿದರು.
ಹೃದಯಾಘಾತ ಕಾರಣಗಳೇನು ? :
ಬದಲಾದ ಜೀವನ ಶೈಲಿ, ಧೂಮಪಾನ, ಬೊಜ್ಜು, ದೇಹ ದಂಡಿಸದಿರುವುದು (ವ್ಯಾಯಾಮ ಮಾಡದಿರುವುದು), ಸಕ್ಕರೆ ಕಾಯಿಲೆ, ಕೊಲೆಸ್ಟರಾಲ್, ರಕ್ತದೊತ್ತಡ (ಬಿಪಿ) ಇತ್ಯಾದಿ ಹೃದಯಾಘಾತಕ್ಕೆ ಪ್ರಮುಖ ಕಾರಣಗಳು. ಜತೆಗೆ ಅನುವಂಶಿಕವಾಗಿಯೂ ಬರುವ ಸಾಧ್ಯತೆಯಿದೆ. ಯುವಕರಲ್ಲಿ ಕೇವಲ ೩೦-೩೫ ವರ್ಷದವರಲ್ಲಿ ಹೃದಯಾಘಾತ ಹೆಚ್ಚಾಗಿರಲು ಮುಖ್ಯ ಕಾರಣ ಧೂಮಪಾನ.
ಹೃದಯಾಘಾತ ತಡೆ ನಿಮ್ಮ ಕೈಲಿದೆ
ಕನಿಷ್ಠ ವರ್ಷಕ್ಕೊಮ್ಮೆಯಾದರೂ ವೈದ್ಯರಲ್ಲಿ ನಿಯಮಿತವಾಗಿ ತಪಾಸಿಸಿಕೊಳ್ಳಿ. ಬಿಪಿ, ಮಧುಮೇಹ, ಕೊಲೆಸ್ಟರಾಲ್ ನಿಯಂತ್ರಣದಲ್ಲಿಟ್ಟುಕೊಂಡು ಆಗಾಗ್ಗೆ ಪರೀಕ್ಷಿಸಿಕೊಳ್ಳಬೇಕು. ನಿಯಮಿತವಾಗಿ ವಾಕಿಂಗ್, ಕನಿಷ್ಠ ೩೦ ನಿಮಿಷಗಳ ವ್ಯಾಯಾಮ, ಸದಾ ಚಟುವಟಿಕೆಯಿಂದಿರುವುದು, ವಾಹನ ಬಳಕೆಗಿಂತ ನಡೆಯುವುದು, ಲಿಫ್ಟ್‌ಗಿಂತ ಮೆಟ್ಟಿಲು ಹತ್ತುವುದು, ಅಹಾರದಲ್ಲಿ ಪಥ್ಯ, ಎಣ್ಣೆಜಿಡ್ಡು ಮತ್ತು ಕೊಬ್ಬಿನಾಂಶವಿರುವ ಆಹಾರ ಪದಾರ್ಥಗಳು, ಮಾಂಸಾಹಾರಕ್ಕಿಂತ ಸಸ್ಯಾಹಾರ ಒಳ್ಳೆಯದು. ಹಣ್ಣು, ತರಕಾರಿ, ಕಾಳುಗಳು, ಒಣಹಣ್ಣುಗಳ ಸೇವನೆ ಉತ್ತಮ.
ನೀವು ಮಾಡಬೇಕಾದ್ದೇನು ?
ನಿಮಗೋ ಅಥವಾ ನಿಮ್ಮ ಮನೆಯವರಿಗೋ ಹೃದಯಾಘಾತವಾದ ಕೂಡಲೇ ಕ್ಷಣವನ್ನು ವ್ಯರ್ಥಗೊಳಿಸದೆ ಹತ್ತಿರದ ಆಸ್ಪತ್ರೆಗೆ ದೌಡಾ ಯಿಸಿ. ಎಷ್ಟು ಬೇಗನೆ ಚಿಕಿತ್ಸೆ ದೊರೆಯುವುದೋ ಅಷ್ಟೂ ಅಪಾಯ ಕಡಿಮೆ. ಹೃದಯಕ್ಕಾಗುವ ಹಾನಿಯನ್ನು ಆದಷ್ಟು ತಡೆಗಟ್ಟ ಬಹುದು. ಈ ಸಮಯವನ್ನು ‘ಗೋಲ್ಡನ್ ಹವರ್‘ ಎನ್ನುತ್ತಾರೆ.
‘ಕಾರ್ಡಿಯಾಕ್ ಆಂಬ್ಯುಲೆನ್ಸ್’ಗೆ ಕರೆ ಮಾಡಿ. ಆಸ್ಪತ್ರೆ ಮುಟ್ಟುವ ಮುನ್ನ ಅಂಬ್ಯುಲೆನ್ಸ್‌ನಲ್ಲೇ ಒಂದಷ್ಟು ಚಿಕಿತ್ಸೆ ಸಾಧ್ಯವಾಗುವುದರಿಂದ ರೋಗಿ ಸುರಕ್ಷತೆ ದುಪ್ಪಟ್ಟು ಸಾಧ್ಯವಿದೆ. ಮಿಷನ್ ಆಸ್ಪತ್ರೆ, ವಿಕ್ರಂ ಆಸ್ಪತ್ರೆ, ಗೋಪಾಲಗೌಡ ಶಾಂತವೇರಿ ಆಸ್ಪತ್ರೆ ಸೇರಿದಂತೆ ಕೆಲವೆಡೆ ‘ಕಾರ್ಡಿಯಾಕ್ ಆಂಬ್ಯುಲೆನ್ಸ್’ ಹೊಂದಿವೆ. ಒಂದೂವರೆ ಗಂಟೆಯಲ್ಲಿ ಆಂಜಿಯೋಪ್ಲಾಸ್ಟಿ, ಇಸಿಜಿ ಮಾಡಿದರೆ ಹೃದಯಾಘಾತದಿಂದ ಬಚಾವ್ ಮಾಡಬಹುದು.
ಎಲ್ಲರೂ ಮದುವೆ, ಮುಂಜಿ, ಶಿಕ್ಷಣ ಇತ್ಯಾದಿಗಳಿಗೆ ಮುಂದಾಲೋಚನೆಯೊಂದಿಗೆ ಪಕ್ಕಾ ಪ್ಲಾನ್ ಮಾಡಿರುತ್ತಾರೆ. ಆದರೆ ಕಾಯವನ್ನು ಕಾಡುವ ಕಾಯಿಲೆಗಳಿಗೆ ಯಾರಲ್ಲೂ ಪ್ಲಾನ್ ಎಂಬುದಿಲ್ಲ. ಅಪಾಯ ಎದುರಾದಾಗಲೇ ಎಚ್ಚೆತ್ತುಕೊಳ್ಳುವುದು. ಅದರಲ್ಲೂ ಹೃದಯಾಘಾತ ನಿರ್ಲಕ್ಷಿಸಬಾರದು. ಅದಕ್ಕಾಗಿ ನೀವು ಮಾಡಬೇಕಾದಿಷ್ಟೇ - ವೈದ್ಯರು, ಆಸ್ಪತ್ರೆ, ಆಂಬ್ಯುಲೆನ್ಸ್ ದೂರವಾಣಿ ಸಂಖ್ಯೆ ಹೊಂದಿರುವುದು, ಆರೋಗ್ಯ ವಿಮೆ ಮಾಡಿಸುವುದು, ಎಲ್ಲಕ್ಕಿಂತ ಹೆಚ್ಚಾಗಿ ಹಣ ಹೊಂದಿಸಿಟ್ಟುಕೊಳ್ಳುವುದು ಅಗತ್ಯ. ಪ್ರಸ್ತುತ ಹೃದಯ ಚಿಕಿತ್ಸೆ ಅತ್ಯಂತ ದುಬಾರಿ. ಹೃದಯ ಶಸ್ತ್ರಚಿಕಿತ್ಸೆಗೆ ಕನಿಷ್ಠ ೧-೧.೫ ಲಕ್ಷ ರೂ. ವೆಚ್ಚ ತಗಲುತ್ತದೆ. ಹಾಗಾಗಿ ದುಡ್ಡು ಹೊಂದಿಸಿಟ್ಟುಕೊಳ್ಳುವುದು ಒಳಿತು.
ಇವರು ನಿಮ್ಮ ವೈದ್ಯರು
ಸಣ್ಣ ವಯಸ್ಸಿನಲ್ಲೇ ದೊಡ್ಡ ಹುದ್ದೆಗೆ ಏರಿದ್ದಾರೆ ಡಾ.ಕೆ.ಎಸ್. ಸದಾನಂದ್. ಮೈಸೂರು ಮೂಲದ ಸದಾನಂದ್ ಎಂಬಿಬಿಎಸ್ ಬಳಿಕ ಎಂಡಿಯನ್ನು ಮೈಸೂರು ವೈದ್ಯಕೀಯ ಕಾಲೇಜಿನಲ್ಲೇ ಪೂರೈಸಿದರು. ಬಳಿಕ ಜಯದೇವ ಹೃದ್ಯೋಗ ಸಂಸ್ಥೆಯಿಂದ ಡಿಎಂ ಪದವಿಯನ್ನು ಪಡೆದು ಈಗ ಕೆ.ಆರ್. ಆಸ್ಪತ್ರೆಯ ಹೃದ್ರೋಗ (ಕಾರ್ಡಿಯಾಲಜಿ) ವಿಭಾಗದ ಮುಖ್ಯಸ್ಥರು. ಹೃದಯಕ್ಕೆ ಸಂಬಂಧಿಸಿ ವೈದ್ಯಕೀಯ ಪರಿಭಾಷೆ ಯಲ್ಲಿ ಖಚಿತವಾಗಿ ಮಾತನಾಡುವ ಸಾಮರ್ಥ್ಯ ಸದಾನಂದ್ ಅವರಿಗಿದೆ. ಅವರ ಮೊಬೈಲ್ ನಂಬರ್- ೯೪೪೮೭ ೪೧೧೧೭.
ಇದು ಸಲಹೆ ಮಾತ್ರ. ಅನುಷ್ಠಾನಕ್ಕೆ ಮುನ್ನ ವೈದ್ಯರನ್ನು ಸಂಪರ್ಕಿಸಿ
ನಿರ್ವಹಣೆ: ಜೆ. ಶಿವಣ್ಣ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ