ಕೊಟ್ಟವನು ‘ಪಟ್ಟ’ಭದ್ರ; ಬಾಚ್ಕೊಂಡವ ಈರಭದ್ರ !


ಪಿ.ಓಂಕಾರ್ ಮೈಸೂರು
ಮೈಸೂರು ಮಹಾನಗರ ಪಾಲಿಕೆಯಲ್ಲಿ ಸದಸ್ಯರ ‘ಖರೀದಿ ಹಂಗಾಮ’ಕ್ಕೆ ತಾತ್ಕಾಲಿಕ ತೆರೆಬಿದ್ದಿದ್ದು,‘ಮರುಖರೀದಿ’ವ್ಯವಹಾರ ಬಿರುಸಾಗಿದೆ !
ಒಂದೂವರೆ ವರ್ಷದಿಂದ ನಡೆಯುತ್ತಿರುವ ‘ಆಪರೇಷನ್ ಕಮಲ’, ‘ಆಪರೇಷನ್ ಸೈಡ್ ಎಫೆಕ್ಟ್’ ವಿದ್ಯಮಾನಗಳು ‘ಕೊಟ್ಟವನು ಕೋಡಂಗಿ,ಈಸ್ಕೊಂಡವನು ಈರಭದ್ರ...’ ಗಾದೆ ಮಾತಿಗೆ ಅನ್ವರ್ಥ.
ಸದಸ್ಯರ ಖರೀದಿ ಮೂಲಕ ಮಹಾ ನಗರ ಪಾಲಿಕೆಯ ಅಧಿಕಾರ ಚುಕ್ಕಾಣಿ ಹಿಡಿಯುವ ಕನಸು ಕಂಡಿದ್ದ ಬಿಜೆಪಿ ನಾಯಕರದ್ದು ಕೋಡಂಗಿಯ ಸ್ಥಿತಿ. ‘ಅಭಿವೃದ್ಧಿ’ಯ ಮಂತ್ರ ಹೇಳುತ್ತಲೇ ಹಣ ಮೋಹದ ಮಂತ್ರದಂಡಕ್ಕೆ ಬಲಿಯಾಗಿ ‘ಮಾರಿಕೊಂಡ ’ಸದಸ್ಯರದ್ದು ‘ಈರಭದ್ರ’ನ ಅಪರಾವತಾರ.
ಮೋಹ ಜಾಲ: ಪಾಲಿಕೆಯಲ್ಲಿ ಮೊದಲ ‘ಆಪರೇಷನ್ ಕಮಲ’ನಡೆದದ್ದು ೨೦೦೮ರ ಜುಲೈನಲ್ಲಿ. ೧೮ ಸ್ಥಾನ ಹೊಂದಿದ್ದ ಬಿಜೆಪಿ ೬೫ ಸದಸ್ಯ ಬಲದ ಪಾಲಿಕೆ ಚುಕ್ಕಾಣಿ ಹಿಡಿದೇ ತೀರುವ ಪ್ರಯತ್ನದ ಫಲ ಅದು. ಆಗ, ರಾಜ್ಯದೆಲ್ಲೆಡೆ ‘ಅಪರೇಷನ್ ಕಮಲ’ದ್ದೇ ಸದ್ದು. ಅದೇ ‘ಮೋಹ ಜಾಲ’ವನ್ನು ಇಲ್ಲಿಯೂ ಬೀಸಲಾಗಿತ್ತು. ಖರೀದಿ ವ್ಯವಹಾರದ ‘ಸುಪಾರಿ’ ಪಡೆದಿದ್ದ ಶಾಸಕರಾದ ಎಸ್.ಎ.ರಾಮದಾಸ್, ಸಿದ್ದರಾಜು ಮತ್ತಿತರ ಮುಖಂಡರು ೮ ಜಾ.ದಳ ಸದಸ್ಯರು,ಇಬ್ಬರು ಪಕ್ಷೇತರರನ್ನು ‘ಬಲೆ ’ಗೆ ಕೆಡವಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ‘ಆತ್ಮೀಯವಾಗಿ’ ಎಲ್ಲರನ್ನೂ ಬರಮಾಡಿಕೊಂಡಿದ್ದರು.
ಶಾಂತಂ ಪಾಪಂ: ಅತ್ಯಂತ ಖಚಿತ ಮೂಲಗಳ ಪ್ರಕಾರ ಪ್ರತಿ ಸದಸ್ಯರ ‘ಖರೀದಿ’ಗೆ ಬಿಜೆಪಿ ತೊಡಗಿಸಿದ್ದು ಬರೋಬ್ಬರಿ ೨೦ ಲಕ್ಷ ರೂ. ‘ಮಧ್ಯವರ್ತಿ’ಗಳು ಕೈಚಳಕ ಪ್ರದರ್ಶಿಸಿದ್ದರಿಂದ ಕೆಲವರಿಗೆ ೧ ರಿಂದ ೨ ಲಕ್ಷ ‘ಕಡಿತ’ವಾಯಿತಾದರೂ ದೊಡ್ಡ ಮೊತ್ತಕ್ಕೆ ಮೋಸವಾಗಲಿಲ್ಲ.
ಆದರೆ, ಮಾರಾಟ ಮಾಡಿಕೊಂಡ ಸದಸ್ಯರು ಅದನ್ನೆಲ್ಲ ಒಪ್ಪಲು ತಯಾರಿರಲಿಲ್ಲ. ‘ಅಯ್ಯಯ್ಯೋ, ಎಲ್ಲಾದರೂ ಹಣ ಪಡೆಯು ವುದುಂಟೆ. ಶಾಂತಂ-ಪಾಪಂ, ನಮ್ಮದೇನಿದ್ದರೂ ಅಭಿವೃದ್ಧಿ ಕನಸು. ವಾರ್ಡ್ ಅಭಿವೃದ್ಧಿಗೆ ಹೆಚ್ಚು ಹಣ ಹರಿದು ಬರುತ್ತದೆ ಎಂಬ ನಿರೀಕ್ಷೆ ಯೊಂದಿಗೆ ಆಡಳಿತ ಪಕ್ಷಕ್ಕೆ ಸೇರುತ್ತಿದ್ದೇವೆ...’ ಎಂದು ಹತ್ತೂ ಜನ ಗಲ್ಲ ತಟ್ಟಿಕೊಂಡಿದ್ದರು.
ಈಗ ಉಲ್ಟಾ ಕತೆ: ಈ ಪೈಕಿ,ಜಾ.ದಳಕ್ಕೆ ಕೈಕೊಟ್ಟು ೨೦೦೮ ಜುಲೈ ೨೮ ರಂದು ಬಿಜೆಪಿ ಸೇರಿದ ಎಂಟು ಮಂದಿ ತಮ್ಮ ವಾರ್ಡನ್ನು ಅದೇನು ಅಭಿವೃದ್ಧಿ ಮಾಡಿದರೋ, ಸರಕಾರ ಅದೆಷ್ಟು ನೆರವಾಯಿತೋ ಆ ‘ಮತದಾರರ ಪ್ರಭು’ವೇ ಬಲ್ಲ.ಆದರೆ,ಈಗ ಇದ್ದಕ್ಕಿದ್ದಂತೆ ‘ಉಲ್ಟಾ ’ ಹೊಡೆದಿದ್ದಾರೆ. ಪಕ್ಷ ತ್ಯಜಿಸುವಾಗಿ ‘ಎಚ್.ಡಿ. ದೇವೇಗೌಡರ ಕುಟುಂಬ ರಾಜಕೀಯ ಅಸಹನೀಯ’ ಎಂದು ಕೊಂಕು ನುಡಿದಿದ್ದವರು ‘ಹಳೆ ಗಂಡನ ಪಾದ’ಕ್ಕೆ ಶರಣೆಂದಿದ್ದಾರೆ.
ರಕ್ಷಣಾತ್ಮಕ ಆಟ: ಅಷ್ಟಕ್ಕೂ ಆಗಿದ್ದೇನು? ಕಳೆದ ಫೆಬ್ರವರಿಯಲ್ಲಿ ನಡೆದ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಇವರೇನಾದರೂ ಮತ ಹಾಕಿದ್ದರೆ ಈ ಹೊತ್ತಿಗಾಗಲೇ ಸದಸ್ಯತ್ವಕ್ಕೆ ‘ಎಳ್ಳು ನೀರು’ ಬಿಟ್ಟಿರಬೇಕಿತ್ತು. ಆದರೆ, ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್-ಜಾ.ದಳ ಪ್ರತಿತಂತ್ರ ಹೆಣೆದದ್ದು,ಜಾ.ದಳ ವಿಪ್ ನೀಡುವ ಗೋಜಿಗೆ ಹೋಗದಿದ್ದದ್ದು, ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸುವ ಸ್ಥಿತಿ ಬಾರದೆ ಹೋಗಿದ್ದರಿಂದ ಬಚಾವಾಗಿದ್ದರು. ಮಾತ್ರವಲ್ಲ, ಬಿಜೆಪಿ ಜತೆ ‘ನೇರ ’ಗುರುತಿಸಿಕೊಳ್ಳದೆ ಪ್ರತ್ಯೇಕ ಗುಂಪಾಗಿ ಪಾಲಿಕೆಯಲ್ಲಿ ಕುಳಿತುಕೊಳ್ಳುವ ಮೂಲಕ ಕಾನೂನು ಅಡಕತ್ತರಿಯಿಂದ ಪಾರಾಗಿದ್ದರು.ಆದರೆ,ಮತ್ತೆ ಈ ತಿಂಗಳು ನಡೆಯುವ ಮೇಯರ್-ಉಪಮೇಯರ್ ಚುನಾವಣೆ ಯಲ್ಲಿಯೂ ಅದೇ ರೀತಿ ‘ರಕ್ಷಣಾತ್ಮಕ ಆಟ’ಸಾಧ್ಯವಿರಲಿಲ್ಲ. ಏನೇ ಆದರೂ ಈ ಬಾರಿ ‘ವಿಪ್’ ಜಾರಿ ಮಾಡುವ ಮೂಲಕ ‘ಪಕ್ಷದ್ರೋಹಿ’ಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಜಾ.ದಳ ಮುಖಂಡರು ನಿರ್ಧರಿಸಿದ್ದರು.
ಆತಂಕದ ಗಂಟು: ಈ ಮಧ್ಯೆ,ಮಂಡ್ಯ, ಕೊಳ್ಳೇಗಾಲ ನಗರಸಭೆಯ ತಲಾ ಹತ್ತು ಮಂದಿ ಪಕ್ಷಾಂತರಿಗಳಿಗೆ ತಕ್ಕ ಶಾಸ್ತಿಯಾಯಿತು. ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಈ ಎಲ್ಲರ ಸದಸ್ಯತ್ವವನ್ನು ಹೈಕೋರ್ಟ್ ಅನರ್ಹಗೊಳಿಸಿದ ನಂತರ ಎಂಟು ಮಂದಿ ತಲೆ, ಮುಖದ ಮೇಲೆ ಆತಂಕದ ‘ಗಂಟು’ ಹೊತ್ತುಕೊಂಡೇ ಓಡಾಡುತ್ತಿದ್ದರು.
ಮರುಖರೀದಿ ಶಂಕೆ: ಸದ್ಯ,ಜಾ.ದಳ ಮುಖಂಡರು ಕರೆದದ್ದೇ ಸಾಕೆಂಬಂತೆ ೭ ಮಂದಿ ಬಿಜೆಪಿ ಸಾಹವಾಸಕ್ಕೆ ಗುಡ್‌ಬೈ ಹೇಳಿ, ಗೂಡಿಗೆ ಮರಳಿದ್ದಾರೆ. ‘ನಮ್ಮನ್ನು ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ ಮಾತಿನಂತೆ ನಡೆದುಕೊಳ್ಳಲಿಲ್ಲ. ಅಂತಿಮವಾಗಿ ಸದಸ್ಯತ್ವ ಉಳಿಯಬೇಕಾಗಿದ್ದರಿಂದ ಗೂಡಿಗೆ ಮರಳುತ್ತಿದ್ದೇವೆ...’ಎಂದು ಹೊಸ ‘ಪ್ಲೇಟ್ ’ಹಾಕುತ್ತಿದ್ದಾರೆ. ಆದರೆ, ‘ನಿಜ ಸಂಗತಿ ಇಷ್ಟೇ ಅಲ್ಲ,ಪಕ್ಷಕ್ಕೆ ಮರಳಲಿಕ್ಕೂ ದೊಡ್ಡ ಮೊತ್ತದ ಗಂಟು ಪಡೆದಿದ್ದಾರೆ. ಜಾ.ದಳ ವರಿಷ್ಠರು ಪಕ್ಷ ಮರು ಸಂಘಟನೆ ಹಿನ್ನೆಲೆಯಲ್ಲಿ ೮ ಮಂದಿಯನ್ನು ಮರು ಖರೀದಿ ಮಾಡಿದ್ದಾರೆ’ ಎಂಬ ಶಂಕೆಗಳಿವೆ.
‘ಖರೀದಿ ಸರಕಿನಿಂತಾಗಿರುವ’ ಸದಸ್ಯರು ಸಹಜವಾಗಿಯೇ ಇದನ್ನೆಲ್ಲ ನಿರಾಕರಿಸುತ್ತಾರಾದರೂ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ.ರಾಜಕೀಯ ನೈತಿಕತೆ, ಪಕ್ಷ ನಿಷ್ಠೆ, ಪ್ರಾಮಾಣಿಕತೆ ಅದೆಲ್ಲ ಒತ್ತಟ್ಟಿಗಿರಲಿ, ‘ಹುಡಿ ಹಾರಿಸಲು’ ಒಂದಷ್ಟು ಲಕ್ಷ ಕಿಸೆ ಸೇರಿತಲ್ಲ ಎಂಬುದಷ್ಟೇ ಅವರ ಪಾಲಿನ ಸಮಾಧಾನ. ಅದೇ, ಮತದಾರರ ಪಾಲಿನ ದುರದೃಷ್ಟ ! ಒಟ್ಟಿನಲ್ಲಿ ಯಾರ‍್ದೋ ದುಡ್ಡು, ಎಲ್ಲಮ್ಮನ ಜಾತ್ರೆ,ಕೊಟ್ಟವ ಕೋಡಂಗಿ, ಈಸ್ಕೊಂಡವ ಈರಭದ್ರ !!
ತಂತ್ರ ವಿಫಲ ಹೇಗೆ?
ಕಾಂಗ್ರ್ರೆಸ್ ವಶದಲ್ಲಿರುವ ನಗರಪಾಲಿಕೆ ಆಡಳಿತವನ್ನು ತೆಕ್ಕೆಗೆ ಸೆಳೆದುಕೊಳ್ಳುವುದೇ ಬಿಜೆಪಿ ‘ಆಪರೇಷನ್’ನ ಮಹದೋದ್ದೇಶ. ಮೊದಲ ಕಾರ‍್ಯಾಚರಣೆಯಲ್ಲಿ ‘ಬೆಲೆ’ಗೆ ಬಿದ್ದ ೮ ಜಾ.ದಳ,ಇಬ್ಬರು ಪಕ್ಷೇತರರು ಸೇರಿ ಬಿಜೆಪಿ ಬಲ ೨೬. ಆದರೆ,ಕಳೆದ ಫೆಬ್ರವರಿಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಗೆಲುವಿನ ಸಂಖ್ಯೆ ‘೩೩’ನ್ನು ತಲುಪಲು ಏಳು ಸದಸ್ಯರ ಕೊರತೆ.
ಇನ್ನೂ ಕೆಲವು ಜಾ.ದಳ ಸದಸ್ಯರ ‘ಖರೀದಿ’ಪ್ರಯತ್ನ ಫಲಿಸಲಿಲ್ಲ. ಮಾರಿಕೊಂಡವರು ಈಗ ವಾಪಸಾಗಲೂ ಇದು ಮತ್ತೊಂದು ಕಾರಣ.ಕಾರ‍್ಯತಂತ್ರದಂತೆ ಜಾ.ದಳದ ೧೨ ಸದಸ್ಯರನ್ನು (ಮೂರನೇ ಎರಡರಷ್ಟು) ಸೆಳೆಯ ಬೇಕಿತ್ತು.ಹಾಗಾದರೆ ಮಾತ್ರ ಪಕ್ಷಾಂತರ ನಿಷೇಧ ಕಾಯಿದೆಯಿಂದ ಬಚಾವಾಗಿ ಎಲ್ಲರೂ ಬಿಜೆಪಿ ಸೇರಬಹುದಿತ್ತು. ಆದರೆ, ಅಷ್ಟರಲ್ಲೇ ಎಚ್ಚೆತ್ತ ‘ದಳಪತಿ’ಗಳು ಉಳಿದ ‘ವಿಕೆಟ್’ ಗಳು ಉದುರದಂತೆ ಬಂದೋಬಸ್ತ್ ಮಾಡಿದ್ದರು.
ಪಟ್ಟು ಬಿಡದ ಬಿಜೆಪಿ ಮುಖಂಡರು ಕಾಂಗ್ರೆಸ್ ಬುಟ್ಟಿಗೆ ಕೈಹಾಕಿದರು. ಆರು ಸದಸ್ಯರ ಜತೆ ವ್ಯವಹಾರ ಖುದುರಿತು. ಆದರೆ, ಪಕ್ಷಾಂತರ ನಿಷೇಧ ಕಾಯಿದೆ ಭಯ. ಆರು ಮಂದಿ (ನಂದಕುಮಾರ್, ಸೋಮಶೇಖರ್, ವನಿತಾ, ಮಹದೇವಮ್ಮ, ನಿಗಾರ ಸುಲ್ತಾನ್, ಫರಿದಾಬೇಗಂ) ಚುನಾವಣಾ ಸಭೆಗೆ ಗೈರು ಹಾಜರಾಗುವ ಮೂಲಕ ರಕ್ಷಣಾತ್ಮಕ ವರಸೆ ಪ್ರದರ್ಶಿಸಿದರು.
ಆದರೆ, ಪ್ರತಿ ತಂತ್ರ ಹೊಸೆದ ಕಾಂಗ್ರೆಸ್-ಜಾ.ದಳ ಮುಖಂಡರು ಬಿಜೆಪಿ ಪಾಳಯದಲ್ಲಿದ್ದ ಪಕ್ಷೇತರ ಸದಸ್ಯ ‘ಪಂಡು’ ವನ್ನು ಸೆಳೆದುಕೊಂಡು ಮೇಯರ್ ಗಾದಿ ಉಳಿಸಿಕೊಂಡರು. ನಂತರ, ಸ್ಥಳೀಯ ಮತ್ತು ರಾಜ್ಯ ಬಿಜೆಪಿಯಲ್ಲಿ ನಡೆದ ವಿದ್ಯಮಾನಗಳಿಂದ ‘ಆಪರೇಷನ್ ಸಂಸ್ಕೃತಿ’ಗೆ ಅಂಕುಶ ಬಿದ್ದಿತು. ಅಧಿಕಾರ ‘ಮೇಲಾಟ’ದಿಂದ ಉತ್ಸಾಹ ಕಳೆದುಕೊಂಡ ಮುಖಂಡರು ಮತ್ತೆ ಕಾರ‍್ಯಾಚರಣೆಗೆ ಮುಂದಾಗಲಿಲ್ಲ. ಇದೇ ನೆಪವಾಗಿ, ೭ ಮಂದಿ ‘ಸುರಕ್ಷಿತ ತಾಣ’ಕ್ಕೆ ಮರಳಿದ್ದಾರೆ.
ಭರಿಸಲಾಗದ ‘ನಷ್ಟ’
ಮಾರಿಕೊಂಡವರ ಕತೆ ಏನೇ ಇರಲಿ, ಖರೀದಿದಾರರ ಸ್ಥಿತಿ ಅಯ್ಯೋ ಪಾಪ. ಅಧಿಕಾರವೂ ಬರಲಿಲ್ಲ; ಕೊಂಡ ‘ಕುದುರೆ’ ಗಳೂ ಉಳಿಯಲಿಲ್ಲ. ಇವರ ಮೇಲೆ ಭರವಸೆ ಇಟ್ಟು ಹೂಡಿದ ಅನಾಮತ್ತು ಒಂದೂವರೆ ಕೋಟಿ ರೂಪಾಯಿ ಹೊಳೆ ಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಅದೇನು ಅವರು ದುಡಿದದ್ದಲ್ಲ, ಸ್ವಂತ ಗಳಿಕೆಯೂ ಅಲ್ಲ,‘ಆಪರೇಷನ್ ನಿರತ’ ರಾಜಕಾರಣಿಗಳಿಗೆ ಅದು ಹೇಳಿಕೊಳ್ಳು ವಂತ ದೊಡ್ಡ ಮೊತ್ತವೂಅಲ್ಲ,ಎಲ್ಲೋ ಹೊಡೆದದ್ದನ್ನು ಇಲ್ಲಿ ಹೂಡಿದ್ದರು ಎನ್ನುವುದು ಬೇರೆ ಮಾತು.ಆದರೆ,ಅಧಿಕಾರ ಹಿಡಿಯುವ ಕನಸು ಕೈಕೊಟ್ಟಿದ್ದು ‘ಸದ್ಯಕ್ಕೆ’ ಭರಿಸಲಾಗದ ನಷ್ಟ. ಕಳೆದು ಕೊಂಡ, ಕೈಸುಟ್ಟುಕೊಂಡ ಬಗ್ಗೆ ‘ಉಗುಳಲೂ’ ಆಗದ, ನುಂಗಲೂ ಆಗದ ಸ್ಥಿತಿ.
ಇವರು ಈರಭದ್ರರು...
ಪಿ.ಪ್ರಭುಮೂರ್ತಿ (ವಾರ್ಡ್ ನಂ.೯),ಕೆಂಪಣ್ಣ (೧೩), ಕೆ.ವಿ. ಮಲ್ಲೇಶ್(೧೮),ಆರ್.ಲಿಂಗಪ್ಪ (೨೦),ಟಿ.ದೇವರಾಜು (೩೪), ಎಂ.ಲಕ್ಷ್ಮಮ್ಮ (೪೮), ಖಮ್ರುದ್ದೀನ್ (೫೫).
ಗೈರು ತಂತ್ರ: ಎಚ್.ಎನ್. ಶ್ರೀಕಂಠಯ್ಯ(೬೦)ಇನ್ನೂ ಮರಳಿಲ್ಲವಾದರೂ ಅವರಿಗೆ ಉಳಿದಿರುವುದು ಅದೊಂದೇ ಮಾರ್ಗ. ಹಾಗೆ ಮಾಡದೆ,ಚುನಾವಣೆ ವೇಳೆ ಗೈರು ಹಾಜರಾಗಿ ಸದಸ್ಯತ್ವ ಉಳಿಸಿಕೊಳ್ಳುವ ‘ಯೋಚನೆ’ ನಡೆಸಿದ್ದಾರೆ ಎನ್ನಲಾಗಿದೆ.ಈ ಸಂಬಂಧ ಪ್ರತಿಕ್ರಿಯೆಗೆ ಅವರು ಲಭಿಸಲಿಲ್ಲ.
ಕೈಕೊಟ್ಟವರ ಕತೆ: ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಜತೆ ಗುರುತಿಸಿಕೊಂಡಿ ರುವ ಆರು ಮಂದಿಯ ನಡೆ ಇನ್ನೂ ನಿಗೂಢ. ಕಾಂಗ್ರೆಸ್-ಜಾ.ದಳ ಹೊಂದಾಣಿಕೆ ಮೂಲಕ ಅಧಿಕಾರ ಹಿಡಿಯಬಹುದಾದ್ದರಿಂದ ವರಿಷ್ಠರು ಅವರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.ಆದರೆ, ಕಾಯಿದೆ ತೂಗು ಕತ್ತಿಯಿಂದ ತಮ್ಮ ‘ತಲೆ’ ಕಾಯ್ದುಕೊಳ್ಳುವುದು ಈ ೬ಮಂದಿಗೆ ಅನಿವಾರ್ಯ.
ಚಿಂತಾಜನಕ ಸ್ಥಿತಿ
ಭಾರೀ ಮೊತ್ತದ ಆಸೆಗೆ ಬಿದ್ದು ‘ಮಾರಿಕೊಂಡ ’ಕೊಳ್ಳೆಗಾಲ ಮತ್ತು ಮಂಡ್ಯ ನಗರಸಭೆಗಳ ತಲಾ ೧೦ಮಂದಿ ‘ಸದಸ್ಯತ್ವ ವಂಚಿತ’ರ ಕತೆ ತದ್ವಿರುದ್ದ.ಪಕ್ಷಾಂತರ ಹಾಗೂ ವ್ಹಿಪ್ ಉಲ್ಲಂಘನೆ ಹಿನ್ನೆಲೆಯಲ್ಲಿ ಕೊಳ್ಳೇಗಾಲ ನಗರಸಭೆಯ ೧೦ ಮಂದಿ ಸದಸ್ಯರ ಸದಸ್ಯತ್ವ ಅನರ್ಹಗೊಂಡಿದ್ದು,ತಡೆ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ. ಜಾ.ದಳದಿಂದ ಆಯ್ಕೆಯಾಗಿದ್ದ ಸೆಲ್ವರಾಜ್,ಜಿ.ಎಂ. ಸುರೇಶ್ ಸೇರಿ ೧೦ ಮಂದಿ ನಂತರದಲ್ಲಿ ‘ಆಪರೇಷನ್ ಕಾಂಗ್ರೆಸ್’ಗೆ ಶರಣಾಗಿ, ಅಧ್ಯಕ್ಷರಾಗಿದ್ದ ಪರಮೇಶ್ವರಯ್ಯ ಅವರನ್ನು ಕೆಳಗಿಳಿಸಿದ್ದರು.ಸೆಲ್ವರಾಜ್,ಸುರೇಶ್ ಅವರೇ ಅಧ್ಯಕ್ಷ,ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.
ಮಂಡ್ಯದಲ್ಲಿ,‘ಆಪರೇಷನ್ ಕಮಲ’ದ ಪಾಲಾಗಿ ಸದಸ್ಯತ್ವ ವಂಚಿತರಾಗಿರುವ ೧೩ಮಂದಿಯ ಕತೆ ಇದಕ್ಕಿಂತ ಚಿಂತಾಜನಕ. ಮೇಲ್ಮನವಿ ಸಲ್ಲಿಸಿರುವ ಎಲ್ಲರೂ,
ಜಾ.ದಳ ವರಿಷ್ಠರ ಜತೆ ಸಂಧಾನ ಪ್ರಯತ್ನ ನಡೆಸು ತ್ತಿದ್ದಾರೆ.‘ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಿ’ ಎಂದು ಎಚ್.ಡಿ. ಕುಮಾರಸ್ವಾಮಿ ಅವರ ಕಾಲು ಹಿಡಿದು ಅಂಗಲಾಚಿ ಕೊಂಡದ್ದೂ ನಡೆದಿದೆ.ಹಣದ ಮೋಹಕ್ಕೆ ಬಿದ್ದು ಪಕ್ಷ ನಿಷ್ಠೆ ಮರೆತರೆ ಏನೆಲ್ಲಾ ಅನುಭವಿಸ ಬೇಕಾಗುತ್ತದೆ ಎಂಬುದಕ್ಕೆ ಇವರು ಉದಾಹರಣೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ