ಜನಸೆಟ್,ಕೇರ್‌ಆಫ್ ಫುಟ್‌ಪಾತ್



ಮಾಲಿನ್ಯ ‘ಉಚಿತ’: ರೋಗ ಖಚಿತ !
 ವಿಕ ಸುದ್ದಿಲೋಕ ಮೈಸೂರು

ವಿದ್ಯುತ್ ಕಣ್ಣಾಮುಚ್ಚಾಲೆ  ಸೃಷ್ಟಿತ ಅವಾಂತರಗಳು ಒಂದೆರಡಲ್ಲ. ಹೇಳುತ್ತಾ ಹೋದರೆ ಮುಗಿಯು ವುದೂ ಇಲ್ಲ. ಪಾದಚಾರಿಗಳ ಆರೋಗ್ಯದ ಮೇಲೆ  ಗಂಭೀರ ‘ಅಡ್ಡ ಪರಿಣಾಮ’ ಬೀರುತ್ತಿದೆ ಎನ್ನವುದು ಇತ್ತೀಚಿನ ಸಮಸ್ಯೆ !
-ನಗರದ ದೇವರಾಜ ಅರಸು, ಸಯ್ಯಾಜಿರಾವ್,ಅಶೋಕ ರಸ್ತೆ ಮತ್ತಿತರ ವಾಣಿಜ್ಯ ಮಾರ್ಗಗಳಲ್ಲಿ ಕರೆಂಟ್ ಕೈಕೊಟ್ಟ ಸಂದರ್ಭ ಸಂಚರಿಸಿದ ಎಲ್ಲರಿಗೂ ಖಂಡಿತಾ ಇದರ ಅರಿವಾಗಿರುತ್ತದೆ. ಒಮ್ಮೆ ನಡೆದರೆ ಉಸಿರಿನ ಜತೆಗೆ ಬೇಕಾದಷ್ಟು ‘ಮಾಲಿನ್ಯ’ ಉಚಿತ. ಕೆಲಸದ ನಿಮಿತ್ತ ನಾಲ್ಕಾರು ಬಾರಿ ಸಂಚರಿಸಿದರಂತೂ  ‘ದಮ್ಮು ಕಾಯಿಲೆ ’ಖಚಿತ.
ಒಟ್ಟಿನಲ್ಲಿ, ಜನರದ್ದು ರಾಜ ಮಾರ್ಗದಲ್ಲಿಯೂ ಮುಖಮುಚ್ಚಿಕೊಂಡು ಓಡಾಡುವ ಅನಿವಾರ‍್ಯ ಸ್ಥಿತಿ. ಕಾರಣ,ವಿದ್ಯುತ್‌ಗೆ ಪರ‍್ಯಾಯವಾಗಿ ಅಂಗಡಿ,ಮಳಿಗೆ ಮಾಲೀಕರು ಬಳಸುವ  ಜನರೇಟರ್‌ಗಳು.
ಬೆಳಗ್ಗೆ,ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ಹೊತ್ತು ಯಾವುದೇ ಇರಲಿ ಕರೆಂಟ್ ಹೋಯಿತೆಂದರೆ  ಇಡೀ ರಸ್ತೆಗಳು ಭೋರ್ಗರೆಯುತ್ತವೆ.ಗಾತ್ರ,ಪ್ರಮಾಣದಲ್ಲಿ ಎಲ್ಲವೂ ಚಿಕ್ಕವಾದರೂ ಮಾರಿಗೊಂದರಂತೆ  ಇರುವ ಸೆಟ್‌ಗಳು ಹೊಮ್ಮಿಸುವ ಶಬ್ದ, ಮಾಲಿನ್ಯದ  ಒಟ್ಟು ಪರಿಣಾಮ ಘನ ಗಂಭೀರ.
ನಿಯಮ ಏನಿದೆ: ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಸೂಚನೆ ಪ್ರಕಾರ  ಸೊನ್ನೆಯಿಂದ ೧೦೦ ಕಿಲೋವ್ಯಾಟ್ಸ್‌ವರೆಗಿನ ಯಾವುದೇ ಜನ ರೇಟರ್ ಬಳಕೆಗೆ ಮುನ್ನ  ಪರಿಸರ ಮಾಲಿನ್ಯ ಮಂಡಳಿ ಯಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ನಿರ್ದಿಷ್ಟ , ಸುರಕ್ಷಿತ ಕೊಠಡಿಯಲ್ಲೇ  ಜನರೇಟರ್ ಇಡಬೇಕು. ಹೊಗೆ ಕೊಳವೆ (ಚಿಮಣಿ)ಯನ್ನು ಹೊಂದಿರಬೇಕು. ಆ ಕೊಳವೆ ಕಟ್ಟಡದ ಚಾವಣಿ ಯಿಂದ ಕನಿಷ್ಠ ೩ಮೀಟರ್ ಎತ್ತರದಲ್ಲಿರಬೇಕು. ಯಾವುದೇ ಜನರೇಟರ್ ಶಬ್ದ ಮಾಲಿನ್ಯಕ್ಕೆ ಕಾರಣವಾಗ ಬಾರದು. ಜನ ಸಂಚಾರ ಸ್ಥಳದಲ್ಲಿ ಇಡುವುದು ಸುತರಾಂ ಸಲ್ಲ.
ಪಾಲನೆ ಆಗ್ತಿದೆಯಾ?: ಪಾಲನೆಯ ಮಾತಿರಲಿ, ಮಹಾನಗರ ಪಾಲಿಕೆಯ ಅಧಿಕಾರಿಗಳಿಗೇ  ನಿಯಮ ಗಳ ಪೂರ್ಣ ಅರಿವು ಇದ್ದಂತಿಲ್ಲ.‘ದೊಡ್ಡ  ಜನ ರೇಟರ್ ಬಳಸುವ ಮಳಿಗೆ,ಉದ್ದಿಮೆ,ವಸತಿ ಸಮು ಚ್ಚಯ ಮಾಲೀಕರಿಗೆ ನಿರ್ದಿಷ್ಟ  ನಿಯಮ ಪಾಲಿಸು ವಂತೆ  ಸೂಚಿಸುತ್ತಿದ್ದೇವೆ. ಸಣ್ಣ ಪುಟ್ಟ ಜನರೇಟರ್ ಬಳಕೆದಾರರಿಗೆ ಯಾವುದೇ ಸೂಚನೆ ನೀಡಿಲ್ಲ’ ಎನ್ನುತ್ತಾರೆ ಅಧಿಕಾರಿಗಳು.
ಅಧಿಕಾರಿಗಳೇ ಹೀಗೆಂದ ಮೇಲೆ ಕೇಳಬೇಕೆ,‘ಹೇಳು ವವರು, ಕೇಳೋರು ಯಾರು ಇಲ್ಲ’ದ ಸ್ವಾತಂತ್ರ್ಯ ಅನುಭವಿಸುತ್ತಿರುವ  ಮಳಿಗೆ ಮಾಲೀಕರು ಫುಟ್‌ಪಾತ್‌ಗಳಲ್ಲೇ ಜನ್‌ಸೆಟ್ ಇಟ್ಟಿದ್ದಾರೆ. ಪರಿಸರ  ಇಲಾಖೆ ನಿರ್ದೇಶಿತ ನಿಯಮಗಳನ್ನು ಗಾಳಿಗೆ ತೂರಿ ರುವ ಪರಿಣಾಮ, ಸೀಮೆ ಎಣ್ಣೆ, ಪೆಟ್ರೋಲ್‌ನಿಂದ ಚಾಲಿತ  ಸೆಟ್‌ಗಳು ಚಾಲೂ ಆಗಿದ್ದ ಅಷ್ಟೂ ಹೊತ್ತು ದಾರಿಹೋಕರ ಮುಖಕ್ಕೆ ಮಾಲಿನ್ಯವನ್ನು ಉಗುಳುತ್ತವೆ.
ಹೇಳೋರ್ ಕೇಳೋರ್ ಇಲ್ವಾ: ಪ್ರಶ್ನೆ  ಸಹಜವೇ. ಉತ್ತರ ನಿರಾಶಾದಾಯಕ. ‘ನಿಯಮದ ಪ್ರಕಾರ ಎಲ್ಲಾ ರೀತಿಯ  ಜನರೇಟರ್ ಬಳಕೆಗೆ ಮಂಡಳಿಯಿಂದ ಅನುಮತಿ ಪಡೆದಿರಬೇಕು. ಆದರೆ, ಬಹುತೇಕ ಅಂಗಡಿ ಮಾಲೀಕರು ಅದರ ಗೋಜಿಗೆ ಹೋಗಿಲ್ಲ. ಇದು ತಪ್ಪಾದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎನ್ನುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ  ಅಸಹಾಯಕತೆ.
ಹಾಗಿದ್ದರೆ ಪರಿಹಾರ ಏನು? ‘ಇದು ಮಹಾ ನಗರದ ಜನರ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆ. ನಗರ ಪಾಲಿಕೆ ಆಯುಕ್ತರು,ಆರೋಗ್ಯಾಧಿಕಾರಿಗಳು ಸಿಆರ್‌ಪಿಸಿ ಕಾಯಿದೆ ಪ್ರಕಾರ ಕ್ರಮ ಜರುಗಿಸಬೇಕು. ಸಾರ್ವ ಜನಿಕರು ನಮಗೆ ದೂರು ನೀಡಿದರೆ, ಪಾಲಿಕೆಗೆ ಪತ್ರ ಬರೆಯುವುದಷ್ಟೆ ನಮ್ಮಿಂದ ದೊರೆಯಬಹುದಾದ ಪರಿಹಾರ’ಎನ್ನುತ್ತಾರೆ ಮಂಡಳಿ ಅಧಿಕಾರಿಗಳು.
ಪಾಲಿಕೆ ‘ಪಾಲಿಸಿ’ಏನು?: ಈ ವರೆಗೆ ಸಣ್ಣಪುಟ್ಟ ಜನ ರೇಟರ್ ಬಳಕೆ ಬಗ್ಗೆ ಗಮನಹರಿಸಿರಲಿಲ್ಲ. ಒಟ್ಟು ಸ್ವರೂಪದಲ್ಲಿ ಆಗುತ್ತಿರುವ ಮಾಲಿನ್ಯದ ಗಂಭೀರತೆಯ ಅರಿವಾಗಿದೆ.  ಏಕಾ ಏಕಿ ಎಲ್ಲವನ್ನೂ ಎತ್ತಂಗಡಿ ಮಾಡಿಸಲಾಗದು. ನಿಯಮ ಪಾಲಿಸುವಂತೆ ಎಲ್ಲಾ ಅಂಗಡಿ ಮಾಲೀಕರಿಗೆ ತಕ್ಷಣ ನೋಟಿಸ್ ನೀಡುತ್ತೇವೆ. ತಪ್ಪಿದರೆ , ‘ದಂಡ’ ಪ್ರಯೋಗಿಸಲಾಗುವುದು.ಗಂಭೀರ ಕ್ರಮವಂತೂ ಖಂಡಿತಾ ಎಂದರು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್.
ಇನ್ನಾದರೂ ಸಮಸ್ಯೆಗೆ ಪರಿಹಾರ ಸಿಗುತ್ತದಾ? ಜನ್‌ಸೆಟ್ ಬಳಸುವವರು ನಿಯಮವನ್ನು ಪಾಲಿಸುತ್ತಾರಾ? ರಾಜ ಮಾರ್ಗಗಳಲ್ಲಿ ಉತ್ತಮ ಗಾಳಿ ಬೀಸುತ್ತದಾ?- ಇವು ಸದ್ಯದ ಪ್ರಶ್ನೆಗಳು. ಅಧಿಕಾರಿಗಳು ಮಾತಿನಂತೆ ನಡೆದುಕೊಂಡರೆ ಉತ್ತರ ಸಿಗಬಹುದು.
----------------------------------------------------------------------------------------------------------
ಏಡ್ಸ್ ಪತ್ತೆಗೆ ನೂತನ ಪರೀಕ್ಷಾ  ಕ್ರಮ
ವಿಕ ಸುದ್ದಿಲೋಕ ಮೈಸೂರು
ಮಹಾಮಾರಿ ಎಚ್‌ಐವಿ/ಏಡ್ಸ್ ಪತ್ತೆಗೆ ಹೊಸ ಪರೀಕ್ಷಾ ವಿಧಾನವನ್ನು ತರಲಾಗುತ್ತಿದೆ. ಅಮ್ಮ ನಿಂದ ಸಾಗಿ ಬರುವ ಎಚ್‌ಐವಿ ವೈರಾಣುವಿನಿಂದ ಒಡಲಕುಡಿಯನ್ನು ರಕ್ಷಿಸುವ ಆಶಯದೊಂದಿಗೆ ಈ  ಹೊಸ ವಿಧಾನವನ್ನು  ಆಸ್ಪತ್ರೆಗಳಲ್ಲಿ ಅಳ ವಡಿಸಲು ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತ ವಾಗಿದ್ದ ಈ ವಿಧಾನ ಸರಕಾರಿ ಆಸ್ಪತ್ರೆ ಗಳಲ್ಲೂ ಸದ್ಯವೇ ಆರಂಭವಾಗಲಿದೆ.
ಅದುವೇ  ಡಿಎನ್‌ಎ- ಪಿಸಿಆರ್ (ಡಿಎನ್‌ಎ- ಪಾಲಿಮರೇಸ್ ಚೈನ್ ರಿಯಾಕ್ಷನ್) ವಿಧಾನ. ಅತ್ಯಂತ ತ್ವರಿತವಾಗಿ ಎಚ್‌ಐವಿ ರೋಗಾಣುವನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲು ಸಹಕಾರಿ ಯಾಗಲಿದೆ. ಎಚ್‌ಐವಿಯೊಂದಿಗೆ ಜೀವಿಸುತ್ತಿರುವ ತಾಯಿಯಿಂದ ಶೇ. ೩೦-೪೦ರಷ್ಟು ಮಗುವಿಗೆ ವರ್ಗಾ ವಣೆಯಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಆರಂಭದಲ್ಲೇ ಗುರುತಿಸಿ ಔಷಧ ನೀಡಿದರೆ ಮಗು ಇನ್ನಷ್ಟು ಸುರಕ್ಷಿತ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಈ ಮೊದಲು ೧೮ ತಿಂಗಳ ನಂತರ ಮಗುವಿನ ರಕ್ತ ಪರೀಕ್ಷೆ ನಡೆಸಿ ಎಚ್‌ಐವಿ ಗುರುತಿಸಿ ಚಿಕಿತ್ಸೆ ನೀಡಬೇಕಿತ್ತು. ಆದರೆ ಪಿಸಿಆರ್ ವಿಧಾನದಲ್ಲಿ ೬ ವಾರಗಳಲ್ಲೇ ಪರೀಕ್ಷಿ ಸಲು ಸಾಧ್ಯವಿದೆ. ಇದು ಕೇವಲ ಎಚ್‌ಐವಿ ಪೀಡಿತ ತಾಯಿ-ಮಗುವಿಗೆ ಮಾತ್ರವಲ್ಲ, ಇತರರಿಗೂ ಅನು ಕೂಲವಾಗಲಿದೆ. ಅಷ್ಟು ಮಾತ್ರವಲ್ಲ, ವೈದ್ಯರ ಪ್ರಕಾರ ಕ್ಷಯ, ಟೈಫಾಯ್ಡ್ ಇತ್ಯಾದಿ ಸೋಂಕು ಕಾಯಿಲೆಗಳ ವೈರಾಣು ಗುರುತಿಸಿ ಅದಕ್ಕೆ ತಕ್ಕಂತೆ ಔಷಧ ನೀಡಲು ಸುಲಭವಾಗಲಿದೆ.
ಕೇಂದ್ರದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೋ) ಹಾಗೂ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ (ಕೆಎಸ್‌ಎಪಿಎಸ್)ಯು ಜಂಟಿಯಾಗಿ ಡ್ಯಾಪ್ಕು ನೆರವಿನೊಂದಿಗೆ ಈ ಕಾರ್ಯಕ್ರಮವನ್ನು ತರುತ್ತಿವೆ.
ಬೆರಳೆಣಿಕೆಯಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಪಿಸಿಆರ್ ಪರೀಕ್ಷೆಗೆ ಅನುಕೂಲವಿದ್ದು, ಜನಸಾಮಾನ್ಯರಿಗೆ ದುಬಾರಿ.  ಮೈಸೂರು ಜಿಲ್ಲೆಯಲ್ಲಿರುವ  ೨೬ ಸಮಗ್ರ ಆಪ್ತಸಮಾಲೋಚನೆ ಮತ್ತು ರಕ್ತ ಪರೀಕ್ಷೆ ಕೇಂದ್ರ (ಐಸಿಟಿಸಿ)ಗಳು ಸೇರಿದಂತೆ ರಾಜ್ಯದಲ್ಲಿ ೫೬೫ ಕೇಂದ್ರ ಗಳಿದ್ದು, ಇಲ್ಲಿ ಉಚಿತವಾಗಿ ಎಚ್‌ಐವಿ ಪರೀಕ್ಷೆ ಮಾಡಲಾಗುತ್ತಿದೆ. ಪ್ರಸ್ತುತ ಎಚ್‌ಐವಿ ಪತ್ತೆಗೆ ಕ್ರಮವಾಗಿ ಕಾಂಬೋ ಏಡ್, ಟ್ರೈಡಾಟ್, ಟ್ರೈಲೈನ್ ಈ ಮೂರು ತ್ವರಿತ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಎಲಿಷಾ ಟೆಸ್ಟ್ ಕೂಡ ಮಾಡಲಾಗುತ್ತಿದೆ. ಅದರೊಡನೆ ಈಗ ಡಿಎನ್‌ಎ-ಪಿಸಿಆರ್ ಸೇರ್ಪಡೆ.
ಎಚ್‌ಐವಿ/ಏಡ್ಸ್ ಇಳಿಮುಖ: ಜಿಲ್ಲೆಯಲ್ಲಿ ಈವರೆಗೆ ಶೇ.೧ರಷ್ಟಿದ್ದ ಎಚ್‌ಐವಿ/ಏಡ್ಸ್ ಸ್ಥಾನಿಕತೆ (ಪ್ರಿವಲೆನ್ಸ್ ದರ) ಪ್ರಸ್ತುತ ಸಾವಿರಕ್ಕೆ ಶೇ.೦.೮ಕ್ಕೆ ಇಳಿಕೆಯಾಗಿದೆ. ಗರ್ಭಿಣಿಯರಲ್ಲಿ ಈ ಮೊದಲು ಶೇ.೧ರಷ್ಟಿದ್ದದ್ದು ಈಗ ಶೇ.೦.೩ಗೆ ಇಳಿದಿದೆ. ಜಿಲ್ಲೆಯಲ್ಲಿ ೨೦೦೮ರಲ್ಲಿ ೨೫,೨೩೩ ಜನರಿಗೆ ಆಪ್ತಸಮಾಲೋಚನೆ ನಡೆಸಿ ಪರೀಕ್ಷಿಸಿದಾಗ ೨೮೧೧ ಮಂದಿಯಲ್ಲಿ ಎಚ್‌ಐವಿ ಸೋಂಕು ಕಂಡು ಬಂದಿತು. ೩೩,೮೪೬ ಗರ್ಭಿಣಿಯರ ಪೈಕಿ ೧೭೩ ಮಂದಿಗೆ ಸೋಂಕಿದೆ. ೨೦೦೯ ರಲ್ಲಿ ೩೩,೪೦೫ ಜನರಲ್ಲಿ ೨೬೨೧ ಎಚ್‌ಐವಿ ಸೋಂಕು ಕಂಡು ಬಂದಿದ್ದು, ೩೪೯೮೩ ಗರ್ಭೀಣಿಯರಲ್ಲಿ ೧೧೧ ಮಂದಿಗೆ ಸೋಂಕು ಪತ್ತೆ ಯಾಗಿದೆ.  ಗರ್ಭಿಣಿಯರಿಗೆ ಕಡ್ಡಾಯವಾಗಿ ಎಚ್‌ಐವಿ ಪರೀಕ್ಷೆ ನಡೆಯಲಿದ್ದು,  ಖಾಸಗಿ ಆಸ್ಪತ್ರೆಗಳಲ್ಲಿ ಸಹ  ಕೌನ್ಸೆಲಿಂಗ್ ಮತ್ತು ಎಚ್‌ಐವಿ ಪರೀಕ್ಷೆಗೆ ಒಳಪಡಿಸ ಲಾಗುತ್ತಿದೆ ಎಂದು ಡಾ.ರಘು ಕುಮಾರ್ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ