ಅಕ್ಕಿ ಇಲ್ಲ ಬೇಳೆ ಇಲ್ಲ;ಇನ್ನು ಮುಂದೆ ಹೇಳೋ ಹಾಗಿಲ್ಲ


ಆರ್.ಕೃಷ್ಣ ಮೈಸೂರು
ಪ್ರತಿ ಕೆ.ಜಿ ಅಕ್ಕಿಗೆ ಕೇವಲ ೧೬ ರೂ., ತೋಗರಿ ಬೇಳೆ ಬರೇ ೬೫ ರೂ.!.
ನಾವು ಯಾವ ಕಾಲದಲ್ಲಿ ಇದ್ದೇವೆ ಎಂದೊಮ್ಮೆ ಕಣ್ಣುಜ್ಜಿಕೊಳ್ಳಬೇಕಿದೆ. ಆದರೂ ಇದು ಸತ್ಯ. ಗಗನಕ್ಕೇರಿಸುವ ಬೆಲೆಯಿಂದ ಬದುಕು ದುಸ್ತರ ಎಂದು ತತ್ತರಿಸಿರುವ ವರಿಗೆ ಈ ಬೆಲೆ ಹೊಸ ಹೊಳಪು ಮೂಡಿಸಿದೆ.
ಎಪಿಎಲ್ ಕಾರ್ಡ್ ಇರುವವರಿಗೆ ೧೭.೫೦ ರೂ.ನಲ್ಲಿ ಕೆ.ಜಿ. ಅಕ್ಕಿ ನೀಡಲಾಗುವುದು ಎಂದು ರಾಜ್ಯ ಸರಕಾರ ಪ್ರಕಟಿಸಿರುವ ಬೆನ್ನಲ್ಲೇ ಮೈಸೂರಿನ ಜನತಾ ಬಜಾರ್ ೧೬ ರೂ.ಗೆ ಕೆ.ಜಿ ಅಕ್ಕಿ, ೬೫ ರೂ.ಗೆ ತೋಗರಿ ಬೇಳೆ ನೀಡಲು ಮುಂದಾಗಿದೆ. ಸರಕಾರದ ಯೋಜನೆಯಲ್ಲಿ ಕಾರ್ಡ್ ಕಡ್ಡಾಯ ವಾಗಿದ್ದು, ಗರಿಷ್ಠ ಮಿತಿ ೧೦ ಕೆ.ಜಿ.. ಆದರೆ ಬೆಲೆ ಏರಿಕೆಯನ್ನು ಸವಾಲಾಗಿ ಸ್ವೀಕರಿಸಿದ ಜನತಾ ಬಜಾರ್ ಆಡಳಿತ ಮಂಡಳಿ, ದರ ಸಮರಕ್ಕೆ ಮುಂದಾಗಿದೆ. ಇಲ್ಲಿ ಕೊಳ್ಳುವ ಅಕ್ಕಿ-ಬೇಳೆಗೆ ಯಾವ ಕಾರ್ಡ್ ಬೇಕಿಲ್ಲ, ಬಡವ, ಬಲ್ಲಿದ ಎಂಬ ಭೇದವೂ ಇಲ್ಲಿಲ್ಲ. ನಗರದಲ್ಲಿನ ಜನತಾ ಬಜಾರ್ ಮಳಿಗೆ, ಶಾಖೆಗಳಿಗೆ ತೆರಳಿ ಅಕ್ಕಿ-ಬೇಳೆಯನ್ನು ಖರೀದಿಸಬಹುದು.
ಕೃತಕ ಅಭಾವದಿಂದ ಬೆಲೆ ಏರಿಕೆ: ಅಕ್ಕಿ ಬೆಲೆ ಮುಗಿಲು ಮುಟ್ಟಿದ್ದರೂ ಬತ್ತ ಬೆಳೆದ ರೈತನ ಜೇಬು ಖಾಲಿ, ಖಾಲಿ.ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಅಕ್ಕಿಗೆ ಕನಿಷ್ಠ ೨೫೦೦ ರೂ.ನಿಂದ ಗರಿಷ್ಠ ೪೫೦೦ ರೂ. ತಲುಪಿ ದ್ದರೂ ರೈತರು ಬೆಳೆದ ಬತ್ತಕ್ಕೆ ೯೦೦ ರಿಂದ ೧೫೦೦ ರೂ. ದೊರೆತರೆ ಹೆಚ್ಚು. ಇದರಿಂದ ಗ್ರಾಹಕ ಹಾಗೂ ರೈತರ ನಡುವೆ ವ್ಯವಹರಿಸುವ ಮಧ್ಯವರ್ತಿ ಗಳ ಜೇಬು ಮಾತ್ರ ದಿನೇ ದಿನೆ ಭಾರವಾಗುತ್ತಾ ಸಾಗಿದೆ. ಆಹಾರ ಧಾನ್ಯದ ಕೊರತೆ ಇಲ್ಲದಿದ್ದರೂ ಕೃತಕ ಅಭಾವ ಸೃಷ್ಟಿಸಿ ಲಾಭ ಪಡೆಯಲು ಮಧ್ಯವರ್ತಿಗಳು ಹವಣಿಸುತ್ತಿರು ವುದು ಬೆಲೆ ಏರಿಕೆಗೆ ಕಾರಣ.
ಇದಕ್ಕೆ ಕಡಿವಾಣ ಹಾಕಲು ಮುಂದಾದ ಜನತಾ ಬಜಾರ್‌ನ ಆಡಳಿತ ಮಂಡಳಿ, ರೈತರಿಂದ ನೇರವಾಗಿ ಬತ್ತ ಖರೀದಿಸಿ, ಶೇಖರಿಸಿ ಕೃತಕ ಆಹಾರ ಅಭಾವ ಸೃಷ್ಟಿಸಿ ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿದ್ದ ಮಧ್ಯವರ್ತಿಗಳಿಗೆ ಟಾಂಗ್ ನೀಡಲು ಮುಂದಾಗಿದೆ. ಹಾಗಾಗಿ ಜನತಾ ಬಜಾರ್ ಬತ್ತವನ್ನು ಖರೀದಿಸಿ ಅಕ್ಕಿ ಮಾಡಿ ಸಂಸ್ಕರಿಸಿ, ತಲಾ ೨೫ ಕೆ.ಜಿ. ಹಾಗೂ ತೊಗರಿ ಬೇಳೆಯ ತಲಾ ೫ ಕೆ.ಜಿ. ಬ್ಯಾಗ್‌ನಲ್ಲಿ ಮಾರಲಾಗುತ್ತಿದೆ. ಕುಸುಬಲ (ಬೇಯಿಸಿದ) ಅಕ್ಕಿ ಪ್ರತಿ ಕೆ.ಜಿ.ಗೆ ೧೭ ರೂ.
ಮತ್ತೆ ಮಧ್ಯವರ್ತಿಗಳ ಪಾಲಾಗದಿರಲಿ: ಕಡಿಮೆ ಬೆಲೆಗೆ ಮಾರಾಟ ವಾಗುತ್ತಿರುವ ಅಕ್ಕಿ ಮತ್ತೆ ಮಧ್ಯವರ್ತಿಗಳ ಪಾಲಾಗದಿರಲಿ ಎನ್ನು ವುದೇ ಎಲ್ಲರ ಆಶಯ. ಮಿತಿ ಇಲ್ಲದೇ ಕೊಡುತ್ತಿರುವ ಅಕ್ಕಿಯನ್ನು ಮಧ್ಯವರ್ತಿಗಳು ಶೇಖರಿಸಿ ಅದನ್ನು ಮತ್ತೆ ಅಂಗಡಿಯಲ್ಲಿ ಹೆಚ್ಚು ದರಕ್ಕೆ ಮಾರಾಟ ಮಾಡದಂತೆ ಎಚ್ಚರ ವಹಿಸುವ ಅಗತ್ಯವಿದೆ.
ಕಾರ‍್ಯಕ್ರಮಕ್ಕೆ ಚಾಲನೆ, ನೂಕು ನುಗ್ಗಲು: ಕಾರ‍್ಯಕ್ರಮಕ್ಕೆ ಮಾಜಿ ಮೇಯರ್ ವಾಸು, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಬಸವೇಗೌಡ, ಜನತಾ ಬಜಾರ್ ಅಧ್ಯಕ್ಷ ಚಂದ್ರಶೇಖರ್ ಅವರು ಸಹಕಾರ ಭವನದಲ್ಲಿ ಸೋಮವಾರ ಚಾಲನೆ ನೀಡಿದರು. ತಕ್ಷಣವೇ ಗ್ರಾಹಕರ ನೂಕು ನುಗ್ಗಲು ಉಂಟಾಯಿತು. ಮಾಧ್ಯಮದಲ್ಲಿ ಬಂದ ಪ್ರಚಾರ ಹಾಗೂ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋದವರು ಕೊಟ್ಟ ಪ್ರಚಾರದಿಂದ ಮತ್ತಷ್ಟು ಮಂದಿ ಮಳಿಗೆಯತ್ತ ಧಾವಿಸತೊಡಗಿದರು. ಇದರಿಂದ ಸಂಜೆಯ ವೇಳೆಗೆ ಜನದಟ್ಟಣೆ ಹೆಚ್ಚಿತು.
ಮೈಸೂರು ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ ನಿಯಮಿತದಿಂದ ನಡೆಯುತ್ತಿರುವ ಜನತಾ ಬಜಾರ್‌ನಲ್ಲಿ ಮಾತ್ರ ಇದು ಲಭ್ಯ. ಅಶೋಕ ರಸ್ತೆಯ ನೆಹರು ವೃತ್ತದ ಜನತಾ ಬಜಾರ್ ೧ ನೇ ಘಟಕ, ಕುವೆಂಪುನಗರ ನೃಪತುಂಗ ರಸ್ತೆಯಲ್ಲಿ ಜನತಾ ಬಜಾರ್ ಶಾಖೆ, ಬೃಂದಾವನ ಬಡಾವಣೆಯ (ಪ್ರಿಯದರ್ಶಿನಿ ಆಸ್ಪತ್ರೆ ಎದುರು) ಶಾಖೆಯಲ್ಲಿ ನಿರಂತರವಾಗಿ ಸಗಟು, ಬಿಡಿಯಾಗಿ ಅಕ್ಕಿ, ಬೇಳೆ ಕಡಿಮೆ ದರದಲ್ಲಿ ದೊರೆಯಲಿದೆ. ಚಾಮ ರಾಜ ಜೋಡಿ ರಸ್ತೆಯ ಸಹಕಾರ ಭವನದಲ್ಲಿ ಸೋಮವಾರದಿಂದ ನಾಲ್ಕು ದಿನ ಕಾಲ ಮಾತ್ರ ಸಗಟಾಗಿ ಅಕ್ಕಿ-ಬೇಳೆ ಮಾರಾಟ ನಡೆಯಲಿದೆ.
ಮಂಡ್ಯದಲ್ಲಿ ನಡೆಯದ ಪಡಿತರ ವಿತರಣೆ
ಬಡತನ ರೇಖೆಗಿಂತ ಮೇಲಿರುವ(ಎಪಿಎಲ್) ಕುಟುಂಬಗಳಿಗೂ ಕಡಿಮೆ ದರದಲ್ಲಿ ಅಕ್ಕಿ, ಗೋಧಿ ವಿತರಿಸುವ ಪ್ರಕ್ರಿಯೆ ನಗರದಲ್ಲಿ ಆರಂಭವಾಗಲಿಲ್ಲ. ಫೆ.೧ರಿಂದ ಎಪಿಎಲ್ ಕಾರ್ಡ್ ದಾರರಿಗೆ ಕ್ರಮವಾಗಿ ೧೬.೫೦ರೂ., ೧೨ರೂ.ಗೆ ಅಕ್ಕಿ ಮತ್ತು ಗೋಧಿ ವಿತರಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹರತಾಳ ಹಾಲಪ್ಪ ಅವರು ಬೆಂಗಳೂರಿನಲ್ಲಿ ಪ್ರಕಟಿಸಿದ್ದರು. ಆದರೆ, ಆ ಸಂಬಂಧ ಯಾವುದೇ ಕಾರ‍್ಯ ಚಟುವಟಿಕೆಗಳು ಮಂಡ್ಯದಲ್ಲಿ ನಡೆಯಲಿಲ್ಲ. ಜತೆಗೆ, ಈ ಸಂಬಂಧ ಅಧಿಕಾರಿಗಳಿಗೂ ಅಧಿಕೃತ ಆದೇಶ ಬರದ ಪರಿಣಾಮ ಗೊಂದಲ ಸೃಷ್ಟಿಯಾಗಿದೆ. ಅಕ್ಕಿ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿ ಜನತಾ ಬಜಾರ್‌ನ ‘ಅಕ್ಕಿ ಸಂತೆ’ ವ್ಯವಸ್ಥೆ ಮಂಡ್ಯದಲ್ಲೂ ಬರಬಹುದು. ಆಗ ಕಡಿಮೆ ದರಕ್ಕೆ ಅಕ್ಕಿ ಮತ್ತು ಗೋಧಿ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ಜನರೂ ಇದ್ದರು. ಈ ಮಧ್ಯೆ ಮೈಸೂರಿನ ಜನತಾ ಬಜಾರ್‌ಗಳಲ್ಲಿ ಅಕ್ಕಿ, ಬೇಳೆ ವಿತರಣೆ ಬಗ್ಗೆ ಸೋಮವಾರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಮಂಡ್ಯದಲ್ಲೂ ವಿತರಿಸಬಹುದೆಂದು ನ್ಯಾಯಬೆಲೆ ಅಂಗಡಿಗಳು ಮತ್ತು ಜನತಾ ಬಜಾರ್ ಶಾಖೆಗೆ ಬೆಳಗ್ಗೆಯಿಂದಲೇ ಸಾರ್ವಜನಿಕರು ಎಡತಾಕಿದರಾದರೂ ನಿರಾಸೆ ಕಾದಿತ್ತು. ಸರಕಾರದಿಂದ ಆಹಾರ ಪದಾರ್ಥಗಳ ಮಂಜೂರು ಹಾಗೂ ಅಧಿಕೃತ ಆದೇಶ ಬಾರದ ಪರಿಣಾಮ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸಿದ್ಧ ಉತ್ತರ ನೀಡುತ್ತಿದ್ದರು.
ಕೊಡಗಿನಲ್ಲಿ ಜಾರಿಗೆ ಬರದ ಆದೇಶ
--------------------
ಕೊಡಗಿನಲ್ಲಿ ಈ ಆದೇಶ ಜಾರಿಯಾಗೇ ಇಲ್ಲ. ಅಷ್ಟೇ ಅಲ್ಲ, ಫೆಬ್ರವರಿ ಮುಗಿಯುವವರೆಗೂ ಕಡಿಮೆ ದರದಲ್ಲಿ ಅಕ್ಕಿ, ಗೋಧಿ ಸಿಗದು.ಕೊಡಗಿನ ಅಧಿಕಾರಿಗಳು ಒಂದುವೇಳೆ ಪ್ರಸ್ತಾವನೆ ಕಳುಹಿಸಿದರೆ ಮಾರ್ಚ್‌ನಿಂದ ಸಿಕ್ಕಿದರೂ ಸಿಕ್ಕೀತು. ಇಲ್ಲದಿದ್ದರೆ ಕೆ.ಜಿ. ಗೆ ೩೨ ರಿಂದ ೪೦ ರೂ, ಕೊಟ್ಟೇ ಅಕ್ಕಿ ಕೊಳ್ಳಬೇಕು. ರಾಜ್ಯದ ವಿವಿಧೆಡೆ ಕಡಿಮೆ ದರದಲ್ಲಿ ಅಕ್ಕಿ, ಗೋಧಿ ವಿತರಣೆ ಆರಂಭವಾಗಿದೆ. ಜಿಲ್ಲಾಡಳಿತದ ವೈಫಲ್ಯವೊ ಅಥವಾ ಸರಕಾರದ ನಿರ್ಲಕ್ಷ್ಯವೂ ಕೊಡಗಿನ ಜನರು ಅವಕಾಶ ವಂಚಿತರು. ಜಿಲ್ಲೆಯಲ್ಲಿ ಅತಿ ಹೆಚ್ಚು ಅಕ್ಕಿ ಬಳಕೆಯಾಗುತ್ತದೆ.
ಪಡಿತರ ಬೇಡಿಕೆ: ಕೊಡಗಿನಲ್ಲಿ ಪ್ರಸ್ತುತ ಬಿಪಿಎಲ್ ಪಡಿತರ ಕಾರ್ಡ್‌ದಾರರಿಗೆ ಇರುವ ಪಡಿತರ ಬೇಡಿಕೆ ವಿವರ ಈ ರೀತಿ ಇದೆ. ಅಂತ್ಯೋದಯ ಕಾರ್ಡ್‌ದಾರರಿಗೆ ೧೭೧ ಮೆಟ್ರಿಕ್ ಟನ್ ಅಕ್ಕಿ ಹಾಗೂ ೪೦ ಮೆಟ್ರಿಕ್ ಟನ್ ಗೋಧಿ ಬೇಡಿಕೆ ಇದೆ. ಇತರೆ ಬಿಪಿಎಲ್ ಕಾರ್ಡ್‌ದಾರರಿಗೆ ೧,೧೭೭ ಮೆಟ್ರಿಕ್ ಟನ್ ಅಕ್ಕಿ ಹಾಗೂ ೧೯೬ ಮೆಟ್ರಿಕ್ ಟನ್ ಗೋಧಿ ಬೇಡಿಕೆ ಇದೆ.
ದರ ಪಟ್ಟಿ: ಅಂತ್ಯೋದಯ ಕಾರ್ಡ್‌ದಾರರಿಗೆ ೩ ರೂ. ಗೆ ಅಕ್ಕಿ ಹಾಗೂ ೨ ರೂ.ಗೆ ಗೋಧಿ ನೀಡಲಾಗುತ್ತದೆ. ಉಳಿದ ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಮತ್ತು ಗೋಧಿಯನ್ನು ತಲಾ ೩ ರೂ.ಗೆ ನೀಡಲಾಗುತ್ತದೆ.
ಲಭ್ಯ ಪಡಿತರ: ೧ ಯೂನಿಟ್‌ಗೆ ೪ ಕೆ.ಜಿ. ಅಕ್ಕಿ ಹಾಗೂ ಗರಿಷ್ಠ ೨೦ ಕೆ.ಜಿ. (೫ ಯೂನಿಟ್) ನೀಡಲಾಗುತ್ತದೆ. ೧,೨ ಯೂನಿಟ್‌ಗೆ ೧ ಕೆ.ಜಿ., ೩ ಯೂನಿಟ್‌ಗೆ ೨ ಕೆ.ಜಿ. ಹಾಗೂ ೪,೫ ಯೂನಿಟ್‌ನವರಿಗೆ ೩ ಕೆ.ಜಿ. ಗೋಧಿ ನೀಡಲಾಗುತ್ತದೆ.
ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ವಿಳಂಬ
ಬಡತನ ರೇಖೆಗಿಂತ ಮೇಲಿರುವ ಮಂದಿಗೂ ರಿಯಾಯಿತಿ ದರದಲ್ಲಿ ಅಕ್ಕಿ, ಗೋಧಿ ಪೂರೈಕೆ ಯೋಜನೆ ಆಹಾರ ಇಲಾಖೆ ಸಚಿವರೇ ಉಸ್ತುವಾರಿಯಾಗಿರುವ ಚಾಮರಾಜನಗರ ಜಿಲ್ಲೆಯಲ್ಲೇ ಎರಡು ದಿನ ವಿಳಂಬವಾಗಿ ಜಾರಿ. ಆಹಾರ ಪದಾರ್ಥವನ್ನು ಪ್ರತಿ ನ್ಯಾಯಬೆಲೆ ಅಂಗಡಿಯಲ್ಲೂ ರಿಯಾಯಿತಿ ದರದಲ್ಲಿ ವಿತರಿಸುವುದಾಗಿ ಸಚಿವ ಹಾಲಪ್ಪ ಹೇಳಿದ್ದಾರಾದರೂ ಜಿಲ್ಲೆಯ ಆಹಾರ ಇಲಾಖೆಗೆ ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಆದರೆ ಜಿಲ್ಲಾ ಕೇಂದ್ರದಲ್ಲಿರುವ ಏಕೈಕ ಜನತಾ ಬಜಾರ್‌ಗೆ ಆದೇಶ ಬಂದಿದ್ದು, ಫೆ. ೩ ವಿತರಿಸಲಿದೆ. ಈ ಬಜಾರ್‌ಗೆ ಸದ್ಯ ೧೦೦ ಕ್ವಿಂಟಾಲ್ ಅಕ್ಕಿ ಹಾಗೂ ೫೦ ಕ್ವಿಂಟಾಲ್ ಗೋಧಿ ಬಿಡುಗಡೆಯಾಗಿದೆ. ಈ ಆಹಾರ ಪದಾರ್ಥಗಳನ್ನು ವಿತರಿಸುವ ನಿಟ್ಟಿನಲ್ಲಿ ಜನತಾ ಬಜಾರ್ ಸಿಬ್ಬಂದಿ ತಯಾರಿ ನಡೆಸಿದ್ದು, ಫೆ. ೩ ರಿಂದ ಗ್ರಾಹಕರಿಗೆ ನೀಡಲಿದ್ದಾರೆ. ಆದರೆ ಸದ್ಯಕ್ಕೆ ಜಿಲ್ಲೆಯ ಇನ್ನಾವ ಭಾಗದಲ್ಲೂ ಈ ಯೋಜನೆ ಜಾರಿಗೆ ಬರದು.
ಕಾರ್ಡ್ ಅಥವಾ ಗುರುತು ಚೀಟಿ
ಪಡಿತರ ಚೀಟಿ ಅಥವಾ ಯಾವುದಾದರೂ ಅಧಿಕೃತ ಗುರುತಿನ ಚೀಟಿ ವುಳ್ಳವರಿಗೆ ಅಕ್ಕಿ, ಗೋಧಿ ನೀಡಲು ಜನತಾ ಬಜಾರ್ ತಯಾರಿ ನಡೆಸಿದೆ.
ಯಾವುದಕ್ಕೆ ಎಷ್ಟು ದರ ?
ಜನತಾ ಬಜಾರ್‌ನಲ್ಲಿ ಕೆಜಿ ಅಕ್ಕಿಗೆ ೧೭ ರೂ. ಹಾಗೂ ಗೋಧಿಗೆ ೧೪.೬೫ ರೂ. ದರದಲ್ಲಿ ನೀಡಲಾ ಗುವುದು. ಒಂದು ಕಾರ್ಡ್‌ಗೆ ತಲಾ ೨೫ ಕೆಜಿ ಅಕ್ಕಿ ಹಾಗೂ ಗೋಧಿಯನ್ನು ವಿತರಿಸಲು ಸೂಚಿಸಲಾಗಿದೆ.
-----------
ಕೊಡಗಿನ ಎಪಿಎಲ್ ಕಾರ್ಡ್‌ದಾರರಿಗೆ ರಿಯಾಯಿತಿ ದರದ ಅಕ್ಕಿ- ಗೋಧಿ ನೀಡಲು ಇನ್ನೂ ಸರಕಾರದಿಂದ ಮಂಜೂರು ದೊರೆತಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು.
-ಕೆ.ಎಚ್. ಅಶ್ವತ್ಥ ನಾರಾಯಣ ಗೌಡ, ಕೊಡಗು ಜಿಲ್ಲಾಧಿಕಾರಿ.

ಅಕ್ಕಿ ವಿತರಣೆಗೆ ಸರಕಾರದಿಂದ ಯಾವುದೇ ಮಂಜೂರು ಆಗಿಲ್ಲ. ಬಹುಶಃ ಫೆ.೪-೫ರ ನಂತರ ಆದೇಶ ಬರಲಿದ್ದು, ನಂತರವಷ್ಟೇ ಅಕ್ಕಿ, ಗೋಧಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.
-ಮಹಾದೇವಪ್ಪ, ಉಪ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಮಂಡ್ಯ.

ನ್ಯಾಯಬೆಲೆ ಅಂಗಡಿ ಅಥವಾ ಸಹಕಾರ ಸಂಘಗಳಲ್ಲಿ ರಿಯಾಯಿತಿ ದರದಲ್ಲಿ ಅಕ್ಕಿ,ಗೋಧಿ ವಿತರಿಸುವ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಈ ಬಗ್ಗೆ ಸಭೆ ನಡೆದಿದೆಯಾದರೂ ಅಧಿಕೃತ ಆದೇಶ ಬಂದಿಲ್ಲ.
-ಕುಮುದಾ ಗಿರೀಶ್,

ಆಹಾರ ಇಲಾಖೆ ಉಪ ನಿರ್ದೇಶಕಿ.

ಈ ಯೋಜನೆಗೆ ವ್ಯಾಪಕ ಬೆಂಬಲ ವ್ಯಕ್ತ ವಾಗಿದ್ದು, ತಲಾ ೨೫ ಕೆ.ಜಿ.ಯ ೪೦೦೦ ಸಾವಿರ ಅಕ್ಕಿ ಬ್ಯಾಗ್ ಹಾಗೂ ತಲಾ ೫ ಕೆ.ಜಿ.ಯ ೨೦೦೦ ಬೇಳೆ ಬ್ಯಾಗ್ ಒಂದೇ ದಿನ ಮಾರಾಟವಾಗಿ ೧೪.೬೦ ಲಕ್ಷ ರೂ. ಸಂಗ್ರಹವಾಗಿದೆ. ಅಕ್ಕಿ-ಬೇಳೆ ಅಷ್ಟೇ ಅಲ್ಲ, ದಿನದ ಅಗತ್ಯ ಆಹಾರ ಪದಾರ್ಥಗಳನ್ನೆಲ್ಲಾ ಕಡಿಮೆ ದರದಲ್ಲಿ ಮಾರಾಟ ಮಾಡಲು ತಿಂಗಳೊಳಗೆ ಕ್ರಮ ಕೈಗೊಳ್ಳಲಾಗುವುದು. ಸರಕಾರ ಸಹ ಜನತಾ ಬಜಾರ್ ಮೂಲಕ ಕಡಿಮೆ ಬೆಲೆಗೆ ಅಕ್ಕಿ ಮಾರಾಟ ಮಾಡಲು ಮುಂದಾಗಿದೆ.
-ಚಂದ್ರಶೇಖರ್ ಅಧ್ಯಕ್ಷರು, ಜನತಾ ಬಜಾರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ