
‘...ಏನಾದರೂ ಆಗಿ, ಕ್ರಿಯಾಶೀಲ ನಾಗರಿಕರಾಗಿ’
ವಿಕ ಸುದ್ದಿಲೋಕ ಮೈಸೂರು
‘ಮಕ್ಕಳೇ, ಭವಿಷ್ಯದಲ್ಲಿ ನೀವು ಏನಾದರೂ ಆಗಿ, ಡಾಕ್ಟರ್, ಆಕ್ಟರ್, ಎಂಜಿನಿಯರ್... ಏನು ಬೇಕಾ ದರೂ ಆಗಿ. ಆದರೆ ಕ್ರಿಯಾಶೀಲ ನಾಗರಿಕರಾಗಿ’
-ಹೀಗೆಂದು ನೀತಿ ಬೋಧಿಸಿ ಎಳೆಯ ಮನಸ್ಸುಗಳಲ್ಲಿ ಉತ್ಸಾಹ ಮೂಡಿಸಿದವರು ನಟ ರಮೇಶ್ ಅರವಿಂದ್.
ನಗರದ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಶನಿವಾರ ಪೌರಪ್ರಜ್ಞೆಗಾಗಿ ಮಕ್ಕಳ ಚಳವಳಿ (ಸಿಎಂಸಿಎ) ಪೌರಕೂಟಗಳ ವಾರ್ಷಿಕ ಮಹೋತ್ಸವ ‘ಮೈಸೂರು ಹಬ್ಬ- ೨೦೧೦’ದ ಮುಕ್ತಾಯ ಸಮಾ ರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಚಿನ್, ದ್ರಾವಿಡ್, ಐಶ್ವರ್ಯ ರೈ... ನೀವೇನೇ ಆಗಿ, ಮೊದಲು ಕ್ರಿಯಾಶೀಲ ನಾಗರಿಕರಾಗಿ ಎಂದರಲ್ಲದೇ, ಮಕ್ಕಳಿಂದಲೂ ಹೇಳಿಸಿದರು.
ಸಿಎಂಸಿಎ ಗುಡ್‌ವಿಲ್ ರಾಯಭಾರಿ ಕೂಡ ಆಗಿರುವ ನಟ ರಮೇಶ್ ಆಗಮಿಸುತ್ತಿದ್ದಂತೆಯೇ ಮಕ್ಕಳು ಮುತ್ತಿಕೊಂಡರು. ಸಾವಿರಾರು ಸಂಖ್ಯೆ ಯಲ್ಲಿದ್ದ ಶಾಲಾ ಮಕ್ಕಳು ನಟನ ಹಸ್ತಲಾಘವಕ್ಕೆ ಮುಗಿಬಿದ್ದರು. ಪುಟ್ಟ ಮಕ್ಕಳ ಆಸೆಗೆ ಭಂಗ ತಾರದೆ ಹಸನ್ಮುಖಿಯಾಗಿ ಎಲ್ಲರತ್ತ ಕೈಚಾಚುತ್ತಲೇ ವೇದಿಕೆ ಏರಿದ ರಮೇಶ್ ಕೈಬೀಸಿ ’ಹಾಯ್’ಎಂದರು.
ನಂತರ ಮಾತಿಗಿಳಿದ ಅವರು-ಬರೀ ರಾತ್ರಿ ಮಾತ್ರ ನಕ್ಷತ್ರಗಳನ್ನು ನೋಡಿದ್ದೆ. ಈಗ ಹಗಲಿನಲ್ಲೂ ನಕ್ಷತ್ರಗಳನ್ನು ಕಂಡೆ. ನಕ್ಷತ್ರಗಳು ಭೂಮಿಗೆ ಇಳಿದು ಬಂದಿವೆ. ಅದು ನೀವೇ. ‘ತಾರೇ ಜಮೀನ್ ಪರ್’ ಎಂದರೆ ಇದೆ. ಮೈಸೂರಿನಲ್ಲಿ ಅರಮನೆ ಪ್ರಮುಖ ಆಕರ್ಷಣೆ. ಕೇವಲ ಅರಮನೆ ಅಲ್ಲ, ಇಡೀ ಮೈಸೂರು ನಗರ ಅರಮನೆಯಾಗಬೇಕು. ಅಂಥ ಅದ್ಭುತ ಸಿಟಿ ಮಾಡಲು ಸಿಎಂಸಿಎ ಮಕ್ಕಳಿಂದ, ‘ಮೈಸೂರು ಕಿಡ್ಸ್ ಮಿಲಿಟರಿ’ಯಿಂದ ಮಾತ್ರ ಸಾಧ್ಯ. ನೀರು, ಗಾಳಿ, ಭೂಮಿ ಎಲ್ಲವನ್ನೂ ಶುದ್ಧಗೊಳಿಸಲು ಮುಂದಾಗಿ ಎಂದರು.
ಈ ಸಂದರ್ಭದಲ್ಲಿ ವಿವಿಧ ಪುರಸ್ಕಾರಗಳನ್ನು ನೀಡಲಾಯಿತು. ಅತ್ಯುತ್ತಮ ಸಿವಿಕ್ ಅವಾರ್ಡ್ ಸೇಂಟ್ ಮೇರೀಸ್ ಶಾಲೆಯ ಸಿವಿಕ್ ಕ್ಲಬ್ ಪಾಲಾಯಿತು. ವಿಶೇಷ ಪುರಸ್ಕಾರವನ್ನು ಸಿಕೆಸಿ ಶಾಲೆಯ ಸುಮನಾ ತಂಡ ಪಡೆಯಿತು. ಬಾಲಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಮರಿಮಲ್ಲಪ್ಪ ಶಾಲೆಯ ಇಬ್ಬರು ವಿದ್ಯಾರ್ಥಿನಿಯರನ್ನು ಗೌರವಿಸ ಲಾಯಿತು.
ಉತ್ತಮ ಭಿತ್ತಿಚಿತ್ರ ರಚನೆಯಲ್ಲಿ ವಿಜಯವಿಠಲ, ಶ್ರೀಕಂಠೇಶ್ವರ ವಿದ್ಯಾಸಂಸ್ಥೆ, ಸಿಕೆಸಿ, ಸೇಂಟ್ ಥಾಮಸ್ ಶಾಲೆ, ಲಕ್ಷ್ಮೀಪುರಂ ಜೆಎಸ್‌ಎಸ್, ಗಿರಿಯಾಬೋವಿ ಪಾಳ್ಯ ಜೆಎಸ್‌ಎಸ್ ಶಾಲೆ, ಮಾದರಿ ರಚನೆಯಲ್ಲಿ ಜೆಎಸ್‌ಎಸ್ ಪಬ್ಲಿಕ್ ಶಾಲೆ, ಮರಿಮಲ್ಲಪ್ಪ ಶಾಲೆ, ಜೆಎಸ್‌ಎಸ್, ಸೇಂಟ್ ಮೇರೀಸ್, ಸಿದ್ಧಾರ್ಥನಗರ ಜೆಎಸ್‌ಎಸ್ ಶಾಲೆ ಪುರಸ್ಕಾರ ಪಡೆದವು. ಡಿಸಿಪಿ ರಾಜೇಂದ್ರಪ್ರಸಾದ್, ಪ್ರಿಯಾಕೃಷ್ಣಮೂರ್ತಿ, ಸಿಎಂಸಿಎ ಸಮನ್ವಯಾಧಿಕಾರಿ ಪಿ.ವಿ.ರಾಮದಾಸ್ ಹಾಜರಿದ್ದರು.
‘ಮೈಸೂರು ಹಬ್ಬ’ವನ್ನು ಮೇಯರ್ ಪುರುಷೋತ್ತಮ ಉದ್ಘಾಟಿಸಿದರು. ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಮಂಜುನಾಥ್, ಪಿ.ವಿ. ರಾಮದಾಸ್, ಭಾರದ್ವಾಜ್ ಹಾಜರಿದ್ದರು. ಸಂಚಾರಿ ಪೊಲೀಸ್ ಇಲಾಖೆ, ಮೈಸೂರು ಗ್ರಾಹಕ ಪರಿಷತ್, ಅಜಯ್ ಸ್ಮಾರಕ ಕುಡಿಯುವ ನೀರಿನ ಫೌಂಡೇಷನ್, ವಿವಿಧ ಶಾಲೆಗಳ ಮಾಹಿತಿ ಕೇಂದ್ರ ತೆರೆಯಲಾಗಿತ್ತು.
ಮಕ್ಕಳ ಕಲರವ
ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಶನಿವಾರ ಶಾಲಾ ಮಕ್ಕಳ ಕಲರವ. ಬಿ.ವಿ. ಕಾರಂತ ರಂಗಮಂಟಪದಲ್ಲಿ ಮಕ್ಕಳಿಂದ ನೃತ್ಯ, ಸಂಗೀತ ಸಂಭ್ರಮದ ಜತೆಗೆ ಗಲಗಲ ಸದ್ದು, ಕೇಕೇ ನಗು. ನಟ ರಮೇಶ್ ಆಗಮಿಸಿದಾಗಲಂತೂ ಮುಗಿಲು ಮುಟ್ಟುವಂತೆ ಹರ್ಷೋ ದ್ಗಾರ ಮಾಡಿದರು. ಎರಡು ಸಾವಿರಕ್ಕೂ ಅಧಿಕ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ