ಬಜೆಟ್ ವೀಕ್ಷಣೆಗೆ ವಿವಿಗಳಲ್ಲಿ ಕವಿದ ಕತ್ತಲು

ಚೀ.ಜ. ರಾಜೀವ ಮೈಸೂರು
ಹಣಕಾಸು ಸಚಿವ  ಪ್ರಣವ್ ಮುಖರ್ಜಿ  ಅವರು ೨೦೧೦-೧೧ನೇ ಸಾಲಿನ ಬಜೆಟ್ ಮಂಡಿಸುವಾಗ  ನಮ್ಮ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕರು ಏನು ಮಾಡುತ್ತಿದ್ದರು ?
ಬಹುತೇಕರು ತರಗತಿಗಳಲ್ಲೇ ಇದ್ದರು. ವಿದ್ಯುತ್ ಕೈ ಕೊಟ್ಟ  ಪರಿಣಾಮ, ಬಹಳಷ್ಟು  ಮಂದಿ ಬಜೆಟ್ ನೋಡಲೇ ಇಲ್ಲ. ದೇಶದ ೧೦೦ ಕೋಟಿ ಜನರ ಆರ್ಥಿಕ ವ್ಯವಹಾರದ ಆಗು-ಹೋಗುಗಳನ್ನು ನಿರ್ಧರಿಸುವ, ಉದ್ಯಮದ ಬದುಕಿನ ಮೇಲೆ  ಒಂದಿಷ್ಟು ಪರಿಣಾಮ ಬೀರುವ,  ಲಾಭ-ನಷ್ಟವನ್ನು ತಂದೊಡ್ಡುವ ಬಜೆಟ್ ಕುರಿತು  ಇತ್ತೀಚಿನ ವರ್ಷಗಳಲ್ಲಿ ಶ್ರೀ ಸಾಮಾನ್ಯನಿಗೂ ಕುತೂಹಲ ಇದ್ದೇ ಇರುತ್ತದೆ.  ಐದಂಕಿ, ಆರಂಕಿ  ವೇತನ ಪಡೆಯುವ ಇಲ್ಲವೇ  ಆ ಪ್ರಮಾಣದಲ್ಲಿ ದುಡಿಮೆ ಮಾಡುವ ಜನರಂತೂ- ಬಜೆಟ್‌ನಿಂದ ತಮಗಾಗುವ  ಅನನುಕೂಲ - ಅನುಕೂಲದ  ಗುಣಾಕಾರ- ಭಾಗಾಕಾರ  ಮಾಡುತ್ತಿರುತ್ತಾರೆ. ಎಲ್ಲ ಸಮೂಹ ಮಾಧ್ಯಮಗಳು ಕೂಡ ಬಜೆಟ್ ಕುರಿತು ಸಂಪೂರ್ಣ ಲಕ್ಷ್ಯವಹಿಸಿರುತ್ತವೆ.
ಇಷ್ಟೆಲ್ಲಾ ಮಹತ್ವ ಪಡೆದಿರುವ ಪ್ರಕ್ರಿಯೆ ಎನ್ನಬಹುದಾದ ಬಜೆಟ್ ಮಂಡನೆ ಸಂದರ್ಭದಲ್ಲಿ, ವಿವಿಯ ಅರ್ಥಶಾಸ್ತ್ರ ವಿಭಾಗ ಮಾತ್ರ, ಬಜೆಟ್ ಕುರಿತ ತಾಜಾ  ಕುತೂಹಲವನ್ನೇ ಕಳೆದುಕೊಂಡು ದಿನ ದೂಡಿದೆ. ಶುಕ್ರವಾರ ಮಂಡನೆಯಾದ  ಬಜೆಟ್  ಅಧ್ಯಯನ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು  ಪ್ರತಿಕ್ರಿಯೆಗೆ ಲಭ್ಯವಾಗಲೇ ಇಲ್ಲ. ‘ನಮ್ಮಲ್ಲಿ ವಿದ್ಯುತ್ ಇರಲಿಲ್ಲ. ಹಾಗಾಗಿ, ಯಾರಿಗೂ  ಬಜೆಟ್‌ನೋಡಲು ಸಾಧ್ಯವಾಗಲಿಲ್ಲ. ಹಾಗಾಗಿ ಪ್ರತಿಕ್ರಿಯೆ ನೀಡು ವುದೆಂತು?’  ಎಂಬುದು ಅಧ್ಯಯನ ವಿಭಾಗದ ಪ್ರಭಾರ ಮುಖ್ಯಸ್ಥರೊಬ್ಬರು ನೀಡಿದ ಕಾರಣ.
ತಮಾಷೆಯೆಂದರೆ ನಮ್ಮ ವಿವಿಯ ಅರ್ಥಶಾಸ್ತ್ರ ವಿಭಾಗಗಳು ಇಂಥ ಪ್ರಾಯೋಗಿಕ ನೆಲೆಗೆ ಇನ್ನೂ ಒಗ್ಗಿಕೊಂಡೇ ಇಲ್ಲ. ವಾಸ್ತವವಾಗಿ ವಿಭಾಗದ ವಿದ್ಯಾರ್ಥಿಗಳಿಗೆ ಕೇಂದ್ರ ಹಣಕಾಸು ಸಚಿವರು ಮಂಡಿಸುವ ಬಜೆಟ್‌ನ ನೇರ ಪ್ರಸಾರವನ್ನು ವೀಕ್ಷಿಸಲು ಆ ವಿಭಾಗದ ವಿದ್ಯಾರ್ಥಿಗಳಿಗೆ ತರಗತಿಯಲ್ಲೇ ಅವಕಾಶ ಕಲ್ಪಿಸಬೇಕು. ಜತೆಗೆ ನಂತರ ಅವರವರ ಅಭಿಪ್ರಾಯ ಗಳನ್ನು ಪಡೆದು ಒಂದು ಚರ್ಚೆ ಯನ್ನು ನಡೆಸಬೇಕು. ಅದು ಪ್ರಾಯೋಗಿಕ ನೆಲೆಯ ಶಿಕ್ಷಣ. ನಮಗೆ ಲಭ್ಯ ಮಾಹಿತಿ ಪ್ರಕಾರ ಅಂಥ ದೊಂದು ಕಸರತ್ತು ನಡೆದೇ ಇಲ್ಲ.
ಇದರರ್ಥ ಅಧ್ಯಯನ ವಿಭಾಗ ಗಳು  ಬಜೆಟ್ ಕುರಿತು ಚಿಂತಿಸು ವುದೇ ಇಲ್ಲ ಎಂದಲ್ಲ. ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುವ ಎಲ್ಲ ವಿದ್ಯಾರ್ಥಿಗಳು ತಮ್ಮ ನಾಲ್ಕನೇ ಚತುರ್ಮಾಸ ಅವಧಿಯಲ್ಲಿ  ‘ಸಾರ್ವಜನಿಕ ಅರ್ಥಶಾಸ್ತ್ರ’  ಎಂಬ ವಿಷಯವನ್ನು ಕಲಿಯಲೇಬೇಕು; ಆ ಸಂದರ್ಭದಲ್ಲಿ  ಬಜೆಟ್ ಬಗ್ಗೆ ಆಳವಾಗಿ ಅಧ್ಯಯನ  ನಡೆಸಲೇ ಬೇಕು.  ಇದೊಂದು ಅನಿವಾರ್ಯ ಕರ್ಮ.
ಪ್ರಶ್ನೆ ಇರುವುದು-ಬಜೆಟ್ ಕುರಿತು  ಶ್ರೀ ಸಾಮಾನ್ಯನಿಗೆ  ಇರುವ ಕುತೂಹಲ ಅರ್ಥಶಾಸ್ತ್ರವನ್ನು ಶಾಸ್ತ್ರೀಯವಾಗಿ ವ್ಯಾಸಂಗ ಮಾಡುವ ಅಧ್ಯಾಪಕರಿಗೆ ಏಕಿಲ್ಲ  ಮತ್ತು ಅಧ್ಯಾಪಕರು ಅಂಥದ್ದೊಂದು ಕುತೂಹಲ ವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದಿಲ್ಲ ಏಕೆ ? ಇಂಥ ಅಭಿಪ್ರಾಯವನ್ನು ವಿವಿಯ ಕೆಲವು ಪ್ರಾಧ್ಯಾಪಕರು ಒಪ್ಪುವುದಿಲ್ಲ. ‘ನಮ್ಮ ವಿದ್ಯಾರ್ಥಿಗಳು ಬಜೆಟ್ ಅನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಅದರ ಬಗ್ಗೆ ತರಗತಿಗಳಲ್ಲಿ  ಪ್ರಬಂಧ ಮಂಡಿಸುತ್ತಾರೆ. ಇದಲ್ಲದೆ, ಅಧ್ಯಯನ ವಿಭಾಗ ಕೂಡ, ವಿವಿಧ ಕ್ಷೇತ್ರದ ಪರಿಣತರನ್ನು ಕರೆಸಿ, ವಿಚಾರ ಸಂಕಿರಣ  ನಡೆಸುತ್ತೇವೆ. ಪ್ರತಿ ವರ್ಷ ಬಜೆಟ್ ಬಗ್ಗೆ  ಒಳ್ಳೆಯ ಚರ್ಚೆ ನಡೆಯುತ್ತದೆ’ ಎಂಬುದು  ಅವರ ವಾದ.
ಬಜೆಟ್ ಸಿದ್ಧತೆಯಲ್ಲಿ  ಪಾತ್ರವೇ ಇಲ್ಲ: ‘ಹಾಗೆ ನೋಡಿದರೆ ಬಜೆಟ್ ಸಿದ್ಧತಾ ಪ್ರಕ್ರಿಯೆಯಲ್ಲಿ  ವಿಶ್ವವಿದ್ಯಾನಿಲಯಗಳ ಪಾತ್ರ ಇರಬೇಕು. ಅಮೆರಿಕದಂಥ ರಾಷ್ಟ್ರಗಳಲ್ಲಿ  ನೀತಿ ರೂಪಕರು ವಿವಿಯ ಅಭಿಪ್ರಾಯ ವನ್ನು ಆಲಿಸಿಯೇ, ಬಜೆಟ್‌ನಂಥ ನೀತಿಯನ್ನು, ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ.  ಆದರೆ, ನಮ್ಮಲ್ಲಿ  ವಿವಿಗಳನ್ನು ಆ ಮಟ್ಟಕ್ಕೆ ಯಾರೂ ಕಟ್ಟಿಲ್ಲ ಮತ್ತು ಆ ಎತ್ತರದ ಸ್ತರದಲ್ಲಿ ನೋಡುವುದೂ ಇಲ್ಲ. ಆದರೆ, ವಾಸ್ತವವಾಗಿ ನಮ್ಮ ವಿವಿಗಳಲ್ಲಿ ಘನ ವಿದ್ವಾಂಸರು, ಪರಿಣತರು  ಇರುತ್ತಾರೆ. ಅವರನ್ನು ಬಳಸಿಕೊಳ್ಳುವ ಇರಾದೆ ಸರಕಾರಕ್ಕೆ ಇರುವುದಿಲ್ಲ’ ಎಂಬುದು ಅಧ್ಯಯನ ವಿಭಾಗದ ಕೆ. ಸಿ. ಬಸವರಾಜು ಅವರ ಅಭಿಪ್ರಾಯ.  ನಮ್ಮಲ್ಲಿ ನಡೆಯುವ ಚರ್ಚೆಗಳು, ವಿಚಾರ ಗೋಷ್ಠಿಯ ಪ್ರಬಂಧಗಳು ನೀತಿ ರೂಪಕರ ಮೇಲೆ ಪ್ರಭಾವ ಬೀರುವಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಇದರರ್ಥ ಅಂಥ ಪ್ರಬಂಧಗಳನ್ನು ಮಂಡಿಸಲು ಸಾಧ್ಯವಿಲ್ಲ ಎಂದಲ್ಲ.  ನಮ್ಮ ಬೌದ್ಧಿಕ ಚಟುವಟಿಕೆಯನ್ನು ನೀತಿ ರೂಪಕರು ಗಂಭೀರವಾಗಿ ಪರಿಗಣಿಸುತ್ತಾರೆ ಎಂದಾದರೆ, ಮೌಲಿಕವಾದ ಪ್ರಬಂಧಗಳು ಬಂದೇ ಬರುತ್ತವೆ. ಬಜೆಟ್ ಬಗೆಗಿನ ನಿರಾಸಕ್ತಿಯನ್ನು ಈ ಎಲ್ಲ ನೆಲೆಯಲ್ಲಿ ನೋಡಬೇಕು ಎಂಬುದು ಅವರ ಮಾತಿನ ಸಾರ. 
ಅರ್ಥಶಾಸ್ತ್ರ  ಅಧ್ಯಯನ ವಿಭಾಗ ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ವಿಭಾಗಗಳಲ್ಲಿ ಒಂದು. ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗೆ ಹೆಸರು ಪಡೆದಿರುವ ವಿಭಾಗ, ಸಮಾಜಕ್ಕೆ  ಒಳ್ಳೆಯ ಪದವೀಧರರನ್ನೇ ನೀಡಿದೆ. ಇಲ್ಲಿ  ಕಲಿತಿರುವ ವಿದ್ಯಾರ್ಥಿಗಳು  ಶಿಕ್ಷಣ, ಆಡಳಿತ, ಸಂಶೋಧನಾಲಯ ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೆ. ಟಿ. ಷಾ, ಎನ್. ಎಸ್. ಸುಬ್ಬರಾವ್, ವಿ. ಎಲ್. ಡಿಸೋಜಾ, ಎಂ. ಎಚ್. ಗೋಪಾಲ್, ಆರ್. ಬಾಲಕೃಷ್ಣ, ಡಿ. ಎಂ. ನಂಜುಂಡಪ್ಪ, ಪಿ. ಆರ್. ಬ್ರಹ್ಮಾನಂದ, ರಂಗನಾಥ್ ಭಾರದ್ವಾಜ್, ಎಂ. ಮಾದಯ್ಯ ಅವರಂಥ ಶ್ರೇಷ್ಠ ಆರ್ಥಿಕ ತಜ್ಞರು  ಇಲ್ಲಿ ಪ್ರಾಧ್ಯಾಪಕರಾಗಿ ಬೋಧನೆ ಮಾಡಿದ್ದಾರೆ.
(ಅರ್ಥಶಾಸ್ತ್ರ ವಿಭಾಗದ ಕುರಿತು ಮೈಸೂರು ವಿವಿ ವೆಬ್‌ಸೈಟ್ ನೀಡುವ ಪರಿಚಯದಂತೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ