ಹುಲಿ ಸಾವು: ಉಗುರು ಮಾಯ


ವಿಕ ಸುದ್ದಿಲೋಕ ಗುಂಡ್ಲುಪೇಟೆ
ಎಂಟು ವರ್ಷದ ಗಂಡು ಹುಲಿಯೊಂದು ಅನುಮಾನಾಸ್ಪದ ವಾಗಿ ಮೃತಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ನಡೆದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತಿ ರುವ ಗುಂಡ್ಲುಪೇಟೆ ವಲಯದ ಬರಗಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಹುಲಿ ಶವ ಪತ್ತೆಯಾಗಿದೆ.
ಹುಲಿಯ ಬಲಗಾಲನ್ನು ಕತ್ತರಿಸಲಾ ಗಿದ್ದು, ೧೫ ಉಗುರು ಗಳು ಕಾಣೆಯಾಗಿ ಕೇವಲ ೩ ಉಗುರು ಉಳಿದುಕೊಂಡಿವೆ. ಆದರೆ ಹುಲಿಯ ಹಲ್ಲು ಸೇರಿದಂತೆ ಇತರೆ ಭಾಗಗಳು ಹಾಗೆಯೇ ಉಳಿದಿವೆ. ಹುಲಿ ಕಾಲಿನ ಬೆರಳಿನ ನಾಪತ್ತೆಗೆ ಸಂಬಂಧಿಸಿ ಐವರನ್ನು ವಶಕ್ಕೆ ತೆಗೆದುಕೊಂಡು ಅರಣ್ಯ ಇಲಾಖೆವರು ವಿಚಾರಣೆ ಆರಂಭಿಸಿದ್ದಾರೆ. ೪ ದಿನದ ಹಿಂದೆ ಹುಲಿ ಸತ್ತಿದ್ದರೂ ಶನಿವಾರ ಗಮನಿಸಿದ ದಾರಿ ಹೋಕರು ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಹುಲಿ ಯೋಜನೆ ನಿರ್ದೇಶಕ ಬಿ.ಜೆ. ಹೊಸಮಠ, ಬಂಡೀಪುರ ಡಿಸಿಎಫ್ ಡಾ.ಕೆ.ಟಿ.ಹನುಮಂತಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.  ಬಂಡೀಪುರ ವ್ಯಾಪ್ತಿಯಿಂದ ೨ ಕಿ.ಮಿ ದೂರಕ್ಕೆ ಹೋಗಿ ಹುಲಿ ಮೃತಪಟ್ಟಿದೆ. ಇದರಿಂದ ಕೊಳ್ಳೇಗಾಲ ವಿಭಾಗದ ಡಿಸಿಎಫ್ ನಾರಾಯಣಸ್ವಾಮಿ ಅವರು ಸ್ಥಳಕ್ಕೆ ಬಂದರು.
೮ರಿಂದ ೧೦ ವರ್ಷ ಪ್ರಾಯದ ಗಂಡು ಹುಲಿ ಮೃತಪಟ್ಟಿದ್ದು ಬೇಟೆಗಾರರ ಉರುಳು ಬಿದ್ದಿರಬಹುದೇ ಎನ್ನುವ ಶಂಕೆಯೊಂದಿಗೆ ಅರಣ್ಯ ಇಲಾಖೆಯವರು ಪರಿಶೀಲನೆ ನಡೆಸಿದರು. ಮಧ್ಯಾಹ್ನದ ಹೊತ್ತಿಗೆ ಮರಣೋತ್ತರ ಪರೀಕ್ಷೆ ನಡೆಸಿದ್ದು. ವಿಷಾಹಾರದಿಂದ ಹುಲಿ ಸತ್ತಿಲ್ಲ ಎನ್ನುವುದು ದೃಢಪಟ್ಟಿದೆ. ಆದರೆ ಉಪವಾಸದಿಂದ ಹುಲಿ ಸತ್ತಿರುವ ಶಂಕೆಯಿದ್ದರೂ ಹುಲಿಯ ಕಾಲು ಕತ್ತರಿಸಿ ಉಗುರು ಕಳ್ಳತನ ಮಾಡಿ ರುವುದರಿಂದ ಯಾರು ಈ ಕೃತ್ಯ ನಡೆಸಿರಬಹುದು ಎನ್ನುವುದು ಇನ್ನೂ ತಿಳಿದಿಲ್ಲ.
ಹುಲಿಯ ಸಾವಿನ ಬಗ್ಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆ ವರದಿ ನಂತರ ತಿಳಿಯಲಿದೆ. ಉಗುರು ಕಾಣೆಯಾದ ಸಂಬಂಧ ಐವರು ದನಗಾಹಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಎಫ್ ಡಾ.ಹನುಮಂತಪ್ಪ ಪತ್ರಿಕೆಗೆ ತಿಳಿಸಿದರು. ಕಳೆದ ವರ್ಷ ಬಂಡೀಪುರ-ನಾಗರಹೊಳೆಯಲ್ಲಿ ಏಳು ಹುಲಿಗಳು ಮೃತಪಟ್ಟಿದ್ದವು. ಕಳೆದ ತಿಂಗಳು ಹುಲಿ ಗಣತಿ ಆರು ದಿನ ನಡೆದಿತ್ತು. ಅದಾದ ನಂತರ ಮೃತಪಟ್ಟಿರುವ ಮೊದಲ ಹುಲಿ ಇದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ