ಕಾಲೇಜು ಅಂಗಳದಲ್ಲಿ ಚುನಾವಣೆಯ ಸದ್ದು !


ವಿಕ ಸುದ್ದಿಲೋಕ ಮೈಸೂರು
ಡಾ. ಎನ್. ಆರ್. ಶೆಟ್ಟಿ ಅವರ ಸಮಿತಿಯ ಶಿಫಾರಸುಗಳನ್ನು ಸರಕಾರ ಒಪ್ಪಿದ್ದೇ ಆದರೆ, ಮುಂಬರುವ ದಿನಗಳಲ್ಲಿ ಎಲ್ಲ ಕಾಲೇಜು ವಿದ್ಯಾರ್ಥಿಗಳು ಮತದಾನಕ್ಕೆ ಸಿದ್ಧವಾಗಬೇಕಾಗುತ್ತದೆ.
ಏಕೆಂದರೆ- ಶೆಟ್ಟಿ ಸಮಿತಿ ವಿಶ್ವವಿದ್ಯಾನಿಲಯದ ಆಡಳಿತದಲ್ಲಿ ಸೆನೆಟ್ ಮರುಸ್ಥಾಪಿಸಬೇಕು ಎಂದಿದೆಯಲ್ಲದೆ, ಅಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ ಇರಬೇಕು ಎಂದು ಹೇಳಿದೆ. ವಿದ್ಯಾರ್ಥಿ ಸಂಘಗಳ ಚುನಾವಣೆ ಮೂಲಕ ಕಾಲೇಜು ಕ್ಯಾಂಪಸ್‌ನೊಳಗೆ ರಾಜಕೀಯ ಶಕ್ತಿಗಳು ನುಗ್ಗಲು ಸೆನೆಟ್ ಒಂದು ಹೆಬ್ಬಾಗಿಲು. ವಿದ್ಯಾರ್ಥಿಗಳ ಮಧ್ಯೆ ಕೆಟ್ಟ ರಾಜಕೀಯ ಹರಡಲು ಸೆನೆಟ್ ಮೂಲ ಎಂಬ ಕಾರಣದಿಂದ ಎಸ್. ಎಂ. ಕೃಷ್ಣ ಸರಕಾರದ ಅವಧಿಯಲ್ಲಿ ಸೆನೆಟ್‌ನಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ ರದ್ದಾಯಿತು. ಇದಾದ ಬಳಿಕ ಹಲವು ವಿದ್ಯಾರ್ಥಿ ಸಂಘಟನೆಗಳು ಸೆನೆಟ್‌ನಲ್ಲಿ ಪ್ರಾತಿನಿಧ್ಯ, ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ಬೇಕೆಂದು ಆಗ್ರಹಿಸುತ್ತಲೇ ಇವೆ. ಈ ಎಲ್ಲದರ ಮಧ್ಯೆಯೇ ಸರಕಾರ - ಕರ್ನಾಟಕ ವಿಶ್ವವಿದ್ಯಾನಿಲಯಗಳ ಕಾಯ್ದೆ ೨೦೦೦ಕ್ಕೆ ಕೆಲವು ತಿದ್ದುಪಡಿ ತರಲು ಚಿಂತನೆ ನಡೆದಿದೆ. ಇದಕ್ಕಾಗಿ ಎನ್. ಆರ್. ಶೆಟ್ಟಿ ನೇತೃತ್ವದಲ್ಲಿ ಪರಿಣತರ ಸಮಿತಿಯನ್ನು ರಚಿಸಿತ್ತು. ಸಮಿತಿ ಎರಡು ದಿನಗಳ ಹಿಂದೆಯಷ್ಟೆ ಕಾಯ್ದೆಯಲ್ಲಿ ಬದಲಾಗಬೇಕಿರುವ ಕೆಲವು ಸಂಗತಿಗಳ ಕುರಿತು ಸರಕಾರಕ್ಕೆ ಶಿಫಾರಸು ಮಾಡಿದೆ.
ವಿಶ್ವವಿದ್ಯಾನಿಲಯಗಳ ನೀತಿ ರೂಪಕ ಸಂಸ್ಥೆಗಳಲ್ಲಿ ಕುಲಪತಿ, ಕುಲಸಚಿವರು, ಡೀನ್‌ಗಳು, ಪೋಷಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಶೈಕ್ಷಣಿಕ ಪರಿವಾರದ ಎಲ್ಲ ಸದಸ್ಯರು ಇರಬೇಕು ಎಂಬುದು ಕೆಲವರ ಆಶಯ. ಪಠ್ಯ, ಪಠ್ಯೇತರ, ಸಾಂಸ್ಕೃತಿಕ, ಕ್ರೀಡೆ, ಹಾಸ್ಟೆಲ್ ಸೇರಿದಂತೆ ವಿದ್ಯಾರ್ಥಿ ತನಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಆಡಳಿತದ ಗಮನಸೆಳೆಯಲು ವಿದ್ಯಾರ್ಥಿಗಳು ಇರಬೇಕು ಎಂಬ ಕಾರಣ ನೀಡುತ್ತಾರೆ.
ಆದರೆ, ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯ ಮಂಡಿಸುವವರು ಇದ್ದಾರೆ. ವಿವಿ ಆವರಣದೊಳಗೆ, ಕಾಲೇಜು ಕ್ಯಾಂಪಸ್‌ನೊಳಗೆ ರಾಜಕೀಯ ಪ್ರವೇಶಿಸಿದರೆ, ಅಲ್ಲಿನ ಶೈಕ್ಷಣಿಕ ವಾತಾವರಣವೇ ಕಲುಷಿತವಾಗುತ್ತದೆ. ರಾಜಕೀಯದ ಹೆಸರಿನಲ್ಲಿ ದುಷ್ಟಶಕ್ತಿಗಳು ಆವರಣದೊಳಗೆ ಪ್ರವೇಶಿಸಿ, ಹಿಂಸಾತ್ಮಕ ಪ್ರತಿಭಟನೆಗೆ ನಾಂದಿಯಾಡುತ್ತಿವೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಎಂಬುದು ಸೆನೆಟ್‌ನಲ್ಲಿ ವಿದ್ಯಾರ್ಥಿ ಪ್ರಾತಿನಿಧ್ಯ ವಿರೋಧಿಸುವವರ ವಾದ. ಈಗ ಶೆಟ್ಟಿ ಸಮಿತಿ ಮತ್ತೊಮ್ಮೆ ವಿದ್ಯಾರ್ಥಿಗಳ ಪ್ರಾತಿನಿಧ್ಯದ ಅಗತ್ಯದ ಬಗ್ಗೆ ಹೇಳಿದೆ. ಹಾಗಾಗಿ ಈ ವಿಷಯ ಕುರಿತು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ವಿಜಯ ಕರ್ನಾಟಕಕ್ಕೆ ನೀಡಿರುವ ಪ್ರತಿಕ್ರಿಯೆ.
ರಾಜಕೀಯದ ಬಗ್ಗೆ ತಾತ್ಸಾರ; ಮತದಾನ ವ್ಯವಸ್ಥೆಯಲ್ಲಿನ ಲೋಪ-ದೋಷಗಳು ಸೇರಿದಂತೆ ಬಹಳಷ್ಟು ಸಂಗತಿಗಳ ಕಾರಣದಿಂದ, ನಮ್ಮದು ಇನ್ನೂ ಪರಿಪಕ್ವ ಆಗುತ್ತಿರುವ ಪ್ರಜಾಪ್ರಭುತ್ವ ದೇಶ ಎಂಬುದು ಕೆಲವರ ಗೊಣಗಾಟ. ಇದರಲ್ಲಿ ಸತ್ಯವಿರಬಹುದು. ಆದರೆ, ಈ ಸವಾಲನ್ನು ಎದುರಿಸಲು, ಗೊಣಗಾಡುವವರು ಎತ್ತಿದ ಅಭಿಪ್ರಾಯದಲ್ಲಿಯೇ ಉತ್ತರವಿದೆ. ರಾಜಕೀಯ ಒಳ್ಳೆಯವರಿಗಲ್ಲ , ವಿದ್ಯಾರ್ಥಿಗಳಿಗಲ್ಲ, ಅವರಿಗಲ್ಲ-ಇವರಿಗಲ್ಲ, ಅದು ಕಳ್ಳ-ಕಾಕರಿಗೆ ಎಂದು ಹೇಳುತ್ತಾ, ಎಷ್ಟು ವರ್ಷ ಕಾಲ ಕಳೆಯುವುದು. ರಾಜಕೀಯ ಕ್ಷೇತ್ರವನ್ನು ಸುಧಾರಣೆ ಮಾಡಬೇಕೆಂದರೆ, ಎಲ್ಲರೂ ಇಲ್ಲಿಗೆ ಬರಬೇಕು. ಅಂತೆಯೇ, ಕಾಲೇಜು ವಿದ್ಯಾರ್ಥಿಗಳು ಕೂಡ. ಅದಕ್ಕಾಗಿ ಅವರಿಗೆ ಒಂದು ತರಬೇತಿ ಸಿಗಬೇಕು. ಇದು ಸಾಧ್ಯವಾಗುವುದು ಸೆನೆಟ್ ಮತ್ತು ಸಿಂಡಿಕೇಟ್‌ನಲ್ಲಿ ವಿದ್ಯಾರ್ಥಿ ಪ್ರಾತಿನಿಧ್ಯ ಇದ್ದಾಗ ಮಾತ್ರ. ಹಾಗಾಗಿ- ಸಮಿತಿಯ ಶಿಫಾರಸು ಸ್ವಾಗತಾರ್ಹ. ಹಾಗೆ ನೋಡಿದರೆ, ಕೇಂದ್ರ ಸರಕಾರ ನೇಮಿಸಿದ ಲಿಂಗ್ಡೋ ಸಮಿತಿ ಕೂಡ ಇದೇ ರೀತಿ ಶಿಫಾರಸ್ ಮಾಡಿದೆ. ಕಾಲೇಜಿನಲ್ಲಿ ನಡೆಯುವ ಚುನಾವಣೆಗಳಿಂದ ಗಲಾಟೆ ನಡೆಯುತ್ತಿದೆ ಎಂದರೆ, ಅದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆ ಹೊರತು, ಚುನಾವಣೆಯನ್ನು ರದ್ದು ಪಡಿಸುವುದು ಸರಿಯಲ್ಲ. ನೆಗಡಿ ಎಂದು ಯಾರೂ ಮೂಗನ್ನು ಕೊಯ್ದುಕೊಳ್ಳುವುದಿಲ್ಲ. ರಾಜಕೀಯ ಪಕ್ಷಗಳು ಕ್ಯಾಂಪಸ್‌ಗೆ ನುಸುಳದಂತೆ ಕ್ರಮ ಕೈಗೊಳ್ಳಲಿ. ರಾಜಕೀಯ ತರಬೇತಿಗಾಗಿ ಇದು ಅತ್ಯಗತ್ಯ.
- ನವೀನ್, ಮೈಸೂರು ವಿಭಾಗ ಸಂಘಟನೆ ಕಾರ್ಯದರ್ಶಿ, ಎಬಿವಿಪಿ


ವಿದ್ಯಾರ್ಥಿ ಪ್ರಾತಿನಿಧ್ಯವುಳ್ಳ ಸೆನೆಟ್-ಸಿಂಡಿಕೇಟ್ ರದ್ದು ಪಡಿಸಿದ ದಿನದಿಂದಲೇ ನಮ್ಮ ಸಂಘಟನೆ, ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಿ ಎಂದು ಆಗ್ರಹಿಸುತ್ತಲೇ ಬಂದಿದೆ. ಹಾಗಾಗಿ- ನಾವು ಶೆಟ್ಟಿ ಸಮಿತಿಯ ಬಹಳಷ್ಟು ಶಿಫಾರಸುಗಳ ಬಗ್ಗೆ ತಕರಾರು ಇಟ್ಟುಕೊಂಡೇ, ವಿದ್ಯಾರ್ಥಿ ಪ್ರಾತಿನಿಧ್ಯ ಕುರಿತು ಸಲಹೆಯನ್ನು ಬೆಂಬಲಿಸುತ್ತೇವೆ.
ನಮ್ಮ ವಿವಿಗಳ ಈಗಿನ ಆಡಳಿತ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ ದನಿಗಳೇ ಇಲ್ಲವಾಗಿದೆ. ನೀತಿ-ನಿರೂಪಣೆ ಮಾಡುವಂಥ ವಿವಿಯ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳೇ ಇದ್ದರೆ, ಅವರ ಸಮಸ್ಯೆ ಸುಲಭವಾಗಿ ಅಧಿಕಾರಿಗಳ ಕಿವಿಗೆ ತಲುಪುತ್ತದೆ. ವಿದ್ಯಾರ್ಥಿ ಸಂಘಟನೆಗಳು ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಬಹುದಷ್ಟೆ. ಆದರೆ, ಆಡಳಿತ ಅಧಿಕೃತ ಪಾಲ್ಗೊಳ್ಳುವಿಕೆಗೆ ಸೆನೆಟ್ ಬೇಕೆ-ಬೇಕು.
ಚುನಾವಣೆ ವ್ಯವಸ್ಥೆಯಿಂದ ಸೆನೆಟ್‌ನಲ್ಲಿ ರಾಜಕೀಯ ನುಸುಳಿ ಬಿಡುತ್ತದೆ ಎಂಬುದೇನೋ ಸರಿ. ಆದರೆ ಚುನಾವಣೆ ಇರದಿದ್ದರೂ, ವಿದ್ಯಾರ್ಥಿ ಪ್ರತಿನಿಧಿಗಳ ನೇಮಕದ ಮೂಲಕ ರಾಜಕೀಯ ನುಸುಳುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಧಿಕಾರದಲ್ಲಿದ್ದ ಪಕ್ಷ, ತನ್ನ ರಾಜಕೀಯ ಕಾರ್ಯಕರ್ತರನ್ನೇ ನೇಮಿಸುತ್ತದೆ. ಇಂಥ ಪ್ರತಿನಿಧಿಗಳು ವಿದ್ಯಾರ್ಥಿ ಸಮಸ್ಯೆ ಎತ್ತಿಹಿಡಿಯುವ ಬದಲು, ಅವರ ರಾಜಕೀಯ ಅಜೆಂಡಾಗಳ ಜಾರಿಗೆ ಸಹಕರಿಸುತ್ತಾರೆ. ಇದಕ್ಕಿಂತ ಸೆನೆಟ್‌ಗೆ ಚುನಾವಣೆಯೇ ವಾಸಿ. ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಬುದ್ಧತೆ ಅರಳಲು ಕೂಡ ಇದು ಸಹಕಾರಿ.
- ರವಿ, ರಾಜ್ಯ ಉಪಾಧ್ಯಕ್ಷರು, ಎಐಡಿಎಸ್‌ಒ


ಸಾರ್ವಜನಿಕ ಹಾಗೂ ಶೈಕ್ಷಣಿಕ ಬದುಕಿನ ಎಲ್ಲ ವಲಯದಲ್ಲೂ ವಿದ್ಯಾರ್ಥಿಗಳ ಪ್ರಾತಿನಿಧ್ಯ ಇರಬೇಕು ಹಾಗೂ ಅವರ ಪ್ರಜಾತಾಂತ್ರಿಕ ಹಕ್ಕನ್ನು ಕಾಪಾಡಬೇಕು ಎಂಬುದು ನಮ್ಮ ಸಿದ್ಧಾಂತ. ಹಾಗಾಗಿ- ಸಹಜವಾಗಿಯೇ ಶೆಟ್ಟಿ ಸಮಿತಿ ಶಿಫಾರಸ್ ನಮ್ಮ ಅಭಿಪ್ರಾಯವೇ ಆಗಿದೆ. ಕೇರಳ ಹೈ ಕೋರ್ಟ್ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನೇ ರದ್ದು ಪಡಿಸಿದ ಸಂದರ್ಭದಲ್ಲಿ, ಸುಪ್ರೀಂಕೋರ್ಟ್ ಇದರ ಸಾಧಕ-ಬಾಧಕ ಅಧ್ಯಯನ ನಡೆಸಲು ಲಿಂಗ್ಡೋ ಸಮಿತಿ ರಚಿಸಿತ್ತು. ಆ ಸಮಿತಿ ಕೂಡ ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆಗೆ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ಅಗತ್ಯ ಎಂದು ಹೇಳಿದೆ. ಇದನ್ನು ಗಮನಿಸಬೇಕು. ಕೆಲವರು ವಿದ್ಯಾರ್ಥಿಗಳಿಗೇಕೆ ರಾಜಕೀಯ ಎನ್ನುತ್ತಾರೆ. ಆದರೆ, ರಾಜಕೀಯ ಇಲ್ಲದ ಕ್ಷೇತ್ರ ಯಾವುದಿದೆ ಹೇಳಿ ?, ಬದುಕಿನ ಎಲ್ಲವನ್ನೂ ನಿರ್ಧರಿಸುವುದು ರಾಜಕೀಯ. ಇಂಥ ಮಹತ್ವ ಪಡೆದಿರುವ ವಲಯ ವಿದ್ಯಾರ್ಥಿಗಳಿಗೆ ಏಕೆ ಬೇಡ. ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗಲಾಟೆ ಆಗುತ್ತೆ, ಜಾತಿ ನಡೆಯುತ್ತೇ ಅನ್ನೋ ಕಾರಣಕ್ಕೆ, ಇಡೀ ಪದ್ಧತಿಯನ್ನು ರದ್ದು ಪಡಿಸುವುದು ಸರಿಯಲ್ಲ. ಸಾರ್ವತ್ರಿಕ ಚುನಾವಣೆಯಲ್ಲೂ ಗಲಾಟೆ ಆಗುತ್ತದೆ ಎಂದು, ಅದನ್ನೇ ರದ್ದು ಪಡಿಸಲು ಆಗದು.
- ನವೀನ್‌ಕುಮಾರ್, ಅಧ್ಯಕ್ಷರು, ಎಸ್‌ಎಫ್‌ಐ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ