ಬೀದಿಗೆ ಬೀಳಲಿದೆ ಸಾವಿರಾರು ರೈತ ಕುಟುಂಬ

ಎಂ.ಎಲ್.ರವಿಕುಮಾರ್ ಎಚ್.ಡಿ.ಕೋಟೆ
ಚಾಮಲಾಪುರ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಆತಂಕ ದೂರವಾಗಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಷ್ಟರಲ್ಲೇ, ಕೈಗಾರಿಕೆ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿ ಕಸಿದುಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ.
ಎಚ್.ಡಿ.ಕೋಟೆ ಮತ್ತು ಹುಣಸೂರು ತಾಲೂಕುಗಳ ಗಡಿಯಂಚಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಸುಮಾರು ೯ ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಮುಂದಾಗಿದ್ದು, ಇದರಿಂದ ಸಾವಿರಾರು ರೈತ ಕುಟುಂಬಗಳು ಬೀದಿಗೆ ಬೀಳಲಿವೆ.
ತಾಲೂಕಿನ ಹಂಪಾಪುರ ಹೋಬಳಿ, ಆಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳದ ಮನುಗನಹಳ್ಳಿ, ಶಂಖಹಳ್ಳಿ,ಆಲನಹಳ್ಳಿ ಮತ್ತು ಗಡಿ ಗ್ರಾಮದ ಕೆಲವು ಜಮೀನುಗಳು ಸೇರಿದಂತೆ ೯೯೦.೦೮ ಎಕರೆ ಮತ್ತು ಹುಣಸೂರು ತಾಲೂಕಿನ ಬೀಚನಹಳ್ಳಿ,ಹರದನಹಳ್ಳಿ, ದಳ್ಳಾಲಕೊಪ್ಪಲು ಸೇರಿದಂತೆ ೭ ಸಾವಿರ ಎಕರೆ , ಸಾಮಾಜಿಕ ಅರಣ್ಯ ವಲಯದ ೮೮೦ ಎಕರೆ ಪ್ರದೇಶವನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ಗುರುತಿಸಲಾಗಿದೆ.
ಸರಕಾರವೇ ಜಮೀನು ಸ್ವಾಧೀನಕ್ಕೆ ಮುಂದಾಗಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಅನಕ್ಷರಸ್ಥರೇ ಹೆಚ್ಚಿರುವ ಗ್ರಾಮಸ್ಥರಿಗೆ ಮಂಡಳಿಯ ಭೂಸ್ವಾಧೀನ ಅಧಿಕಾರಿಗಳು ನೋಟಿಸ್ ನೀಡಿ ಮೂರು ತಿಂಗಳಾಗಿದೆ. ಇದರಲ್ಲಿ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಲಾಗುವುದು. ಆಕ್ಷೇಪಣೆ ಇದ್ದಲ್ಲಿ ೩೦ ದಿನದೊಳಗೆ ಲಿಖಿತ ರೂಪದಲ್ಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
 ಕೆಲವು ರೈತರು ಜಮೀನನ್ನು ಕೊಡುವುದಿಲ್ಲ ಎಂಬುದನ್ನು ದಾಖಲೆಗಳ ಮೂಲಕ ವಿವರಿಸಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೆ ಕೆಲವರು ಎಕರೆಗೆ ೫೦ ರಿಂದ ೭೦ ಲಕ್ಷ ರೂ.ಕೊಡಬೇಕು ಜತೆಗೆ ಕುಟುಂಬಕ್ಕೆ ೧ ನಿವೇಶನ ಮತ್ತು ಒಬ್ಬರಿಗೆ ಕೆಲಸ ಕೊಡುವ ನಿಬಂಧನೆಯನ್ನು ಪತ್ರವನ್ನು ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ