ಶಿಸ್ತಿನಿಂದ ಗೆದ್ದ ಪೊಲೀಸರು

ಶಿಸ್ತಿನಿಂದ ಗೆದ್ದ ಪೊಲೀಸರು
ದಸರೆ ನೋಡಲು ಬಂದಿದ್ದ ಲಕ್ಷಾಂತರ ಮಂದಿಯನ್ನು ನಿಯಂತ್ರಿಸಿ ಗೆದ್ದು ಜನ ಸ್ನೇಹಿ ಎನ್ನಿಸಿದರು ಪೊಲೀಸರು.
ಕಡೆಯ ದಿನ ಐದು ಸಾವಿರಕ್ಕೂ ಹೆಚ್ಚು ಮಂದಿ ಪೊಲೀಸರು ಲಕ್ಷಕ್ಕೂ ಹೆಚ್ಚು ಮಂದಿಯನ್ನು ನಿಯಂತ್ರಿಸಿ ಸಂಯಮದಿಂದಲೇ ನಡೆದುಕೊಂಡರು.
ಅರಮನೆ ಪ್ರವೇಶದಿಂದ ಹಿಡಿದು ಸಂಚಾರ ದಟ್ಟಣೆ ಇರುವ ಸ್ಥಳ, ಪ್ರಮುಖ ವೃತ್ತದಲ್ಲಿ ಕನಿಷ್ಠ ೫ ಪೊಲೀಸರು ಕಾರ್‍ಯನಿರ್ವಹಿಸಿದರು. ಸಣ್ಣಪುಟ್ಟ ಮಾತಿನ ಚಕಮಕಿ ಬಿಟ್ಟರೆ ಎಲ್ಲೂ ಪೊಲೀಸರು ಮಿತಿ ಮೀರಿ ವರ್ತಿಸಲಿಲ್ಲ. ಕೆಲವು ಪಡೆ ಪೊಲೀಸರೇ ಮಾರ್ಗದರ್ಶನ ನೀಡುತ್ತಿದ್ದರು. ನೀವು ಹೋಗಬೇಕಾದ ದ್ವಾರ ಇದು ಎಂದು ಸೂಚಿಸುತ್ತಲೂ ಇದ್ದರು. ಸಂಚಾರ ಪೊಲೀಸರು ಎಲ್ಲೂ ತಮ್ಮ ದರ್ಪವನ್ನ್ನು ತೋರದೇ ಕೆಲಸ ಮಾಡಿದರು.
ಜಂಬೂ ಸವಾರಿ ಸಾಗಿದ ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಅರಮನೆ ಆವರಣದೊಳಗೆ ಕೆಲವರು ಮುಂದೆ ನುಗ್ಗಿದಾಗ ತಾಳ್ಮೆಯಿಂದಲೇ ನಿಯಂತ್ರಿಸಿದ್ದು ಕಂಡು ಬಂದಿತು. ಪೊಲೀಸ್ ಆಯುಕ್ತ ಸುನೀಲ್ ಅಗರವಾಲ್ ಅವರು ಆರಂಭದಲ್ಲೇ ಹೇಳಿಕೊಂಡಂತೆ ಜನಸ್ನೇಹಿಯಾಗಿದ್ದರು. ಎಲ್ಲೂ ಅತಿರೇಕದಿಂದ ವರ್ತಿಸಲಿಲ್ಲ ಎಂದು ಬಹಳಷ್ಟು ಮಂದಿ ದಸರೆಗೆ ಬಂದ ಪ್ರವಾಸಿಗರು ಪತ್ರಿಕೆ ಎದುರು ಹೇಳಿಕೊಂಡರು.
ಇವರೊಂದಿಗೆ ನಿಯೋಜಿಸಿದ್ದ ಎನ್‌ಸಿಸಿ ವಿದ್ಯಾರ್ಥಿಗಳೂ ಅಚ್ಚುಕಟ್ಟಾಗಿ ಕೆಲಸ ಮಾಡಿದರು. ಹೋಮ್ ಗಾರ್ಡ್ಸ್‌ಗಳೂ ಕೈ ಜೋಡಿಸಿದರು.
ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು, ಒತ್ತಡ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವ ಕುರಿತು ಕೆ.ಆರ್.ವಿಭಾಗದ ಸಂಚಾರ ಪೊಲೀಸರು ನಮಗೆ ಮೂರು ದಿನ ತರಬೇತಿ ನೀಡಿದ್ದರು. ಇದರಿಂದ ನಾವೂ ತಾಳ್ಮೆಯಿಂದಲೇ ಕೆಲಸ ಮಾಡಲು ಖುಷಿಯಾಯ್ತು. ಇದರಿಂದ ಒಳ್ಳೆಯ ಅನುಭವವಾಗಿದೆ ಎನ್ನುವುದು ಡಿಪ್ಲೊಮಾ ವಿದ್ಯಾರ್ಥಿ ಕೆಆರ್‌ಎಸ್‌ನ ನಿಶಾಂತ್ ಸಂತಸದ ನುಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ