ಜನಸಾಗರದಲ್ಲಿ ಮಿಂದ ಜಂಬೂಸವಾರಿ

ಜೆ.ಶಿವಣ್ಣ ಮೈಸೂರು 
ಕಣ್ಣತುಂಬ ಪರಂಪರೆಯ ಬೆಳಕನ್ನು ಹೊತ್ತಿಸಿ ಬಿಡುವ ದಸರೆಯ ಭವ್ಯ ಜಂಬೂಸವಾರಿಯ ವೈಭವಕ್ಕೆ-ಅದರ ಸಂಭ್ರಮಕ್ಕೆ ಯಾರು ಸಾಟಿ ?
ಅದಕ್ಕೆ ಅದುವೇ ಸಾಟಿ. ಮಳೆಯೇ ಬರಲಿ, ಬಿರು ಬಿಸಿಲೇ ಇರಲಿ, ರಾಜಕೀಯ ಸ್ಥಿರತೆ- ಅಸ್ಥಿರತೆ ಏನೇ ಇರಲಿ, ಏನೇ ಬರಲಿ. ದಸರೆಯ  ಸಂಭ್ರಮ ಮಾತ್ರ ನಿಲ್ಲದು.  ಭಾನುವಾರ ಅರಮನೆ ನಗರಿ ಮೈಸೂರಿನಲ್ಲಿ ನಡೆದ ನಾನೂರನೇ ದಸರಾ ಮಹೋತ್ಸವದ ಜಂಬೂ ಸವಾರಿ ಯದು ಮತ್ತದೇ ವೈಭವ, ಸಡಗರ-ಸಂಭ್ರಮದೊಂದಿಗೆ ಸಾಂಗೋಪಾಂಗವಾಗಿ ನಡೆಯಿತು. ಲಕ್ಷಾಂತರ ಜನ ಜಂಬೂಸವಾರಿಯಲ್ಲಿ ಮೆರೆಯುತ್ತಿದ್ದ ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು, ಆಕೆಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಿಸುತ್ತಿದ್ದ ಗಜರಾಜ ಬಲರಾಮ ವನ್ನು ನೋಡಿ ಉಘೇ-ಉಘೇ ಎಂದರು.
ಐದು ಕಿ.ಮೀ. ದೂರ ಸಾಗುವ ವಿಜಯದಶಮಿ ಮೆರವಣಿಗೆ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಮನೋಜ್ಞವಾಗಿ ಬಿಂಬಿಸಿತಲ್ಲದೆ, ನೆರೆದ ಜನರನ್ನು ನಾಡ ಪರಂಪರೆಯ ಅಭಿಮಾನದ ಸವಾರಿಯಲಿ ಮುಳುಗಿಸಿತು.
ವೈವಿಧ್ಯಮಯ ಕಲಾತಂಡಗಳು, ನಾಡನ್ನಾಳಿದ ರಾಜ ಮಹಾರಾಜರ ಪರಂಪರೆ, ಇತಿಹಾಸದ ವೈಭವವನ್ನು ಅನಾವರಣಗೊಳಿಸುವ ಸ್ತಬ್ಧ ಚಿತ್ರಗಳನ್ನೊಳಗೊಂಡ ವರ್ಣರಂಜಿತ ಮೆರವಣಿಗೆ ಅತ್ಯಂತ ಶಿಸ್ತುಬದ್ಧವಾಗಿ ಸಾಗಿತ್ತಲ್ಲದೇ, ವೀಕ್ಷಣೆಯೂ ಕಿರಿಕಿರಿ, ಗೊಂದಲಗಳಿಂದ ಮುಕ್ತವಾಗಿದ್ದು ಈ ಬಾರಿಯ ವಿಶೇಷ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ