ಮೊಬೈಲ್‌ಬಳಕೆದಾರರೇ ಎಚ್ಚರ

ಕುಂದೂರು ಉಮೇಶಭಟ್ಟ ಮೈಸೂರು
ಮೊಬೈಲ್ ಗ್ರಾಹಕರೇ ಎಚ್ಚರ, ನಿಮ್ಮ ಹೆಸರಿನಲ್ಲೇ ಸಿಮ್ ಪಡೆಯುವ ಭಾರಿ ವಂಚನೆಯ ಜಾಲ ಮೈಸೂರಿನಲ್ಲಿ ಸದ್ದಿಲ್ಲದೇ ತೊಡಗಿದೆ.
ಈ ಸಿಮ್ ಉಗ್ರಗಾಮಿ ಚಟುವಟಿಕೆ ಇಲ್ಲವೇ ವಾಮ ಮಾರ್ಗದ ಉದ್ದೇಶ ಗಳಿಗೆ ಬಳಕೆಯಾಗಿ ನೀವೂ ಕಂಬಿ ಎಣಿಸಬೇಕಾಗಿ ಬರಬಹುದು, ಇಲ್ಲವೇ ಅನಗತ್ಯ ವಿಚಾರಣೆಯ ಕಿರಿಕಿರಿಗೆ ಸಿಕ್ಕು ನಜ್ಜುಗುಜ್ಜಾಗಬೇಕಾದೀತು.
ಈ ಹಿಂದೆ ನೀವು ಸಿಮ್ ಪಡೆದುಕೊಳ್ಳಲು ನೀಡಿದ್ದ ದಾಖಲೆಯ ಪ್ರತಿಯನ್ನೇ ನಕಲು ಮಾಡಿ ಬಳಸುತ್ತಿರುವ ಜಾಲವಿದು. ಇದರಲ್ಲಿ ಮೊಬೈಲ್ ಕಂಪೆನಿ ಡೀಲರ್‌ಗಳು, ಪ್ರತಿನಿಧಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಮೈಸೂರಿನ ಪೊಲೀಸರಿಗೆ ಈ ಜಾಲದ ಖಚಿತ ಮಾಹಿತಿ ಇದ್ದರೂ ತಿಪ್ಪೆ ಸಾರಿಸುತ್ತಿದ್ದಾರೆ. ಡೀಲರ್‌ಗಳನ್ನು ಕರೆತಂದು ಕೆಲವು ಠಾಣೆ ಪೊಲೀಸರು ಕಮಾಯಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.
ಜಾಲ ಹೇಗೆ ?: ಯಾವುದೇ ಮೊಬೈಲ್ ಕಂಪನಿಗಳ ಸಿಮ್ ಬೇಕೆಂದರೆ ವಿಳಾಸದ ದಾಖಲೆ ಹಾಗೂ ಒಂದು ಫೋಟೋವನ್ನು ನೀಡಲೇಬೇಕು. ಅದನ್ನು ದೃಢೀಕರಿಸಿದ ನಂತರ ಸಿಮ್ ಹಾಗೂ ಸಂಪರ್ಕ ಒದಗಿಸಲಾಗು ತ್ತದೆ. ಇದು ಮೊಬೈಲ್ ಸೇವೆ ಆರಂಭವಾದಾಗಿನಿಂದ ಇರುವ ನಿಯಮ.
ಆದರೆ ಮೊಬೈಲ್ ಕಂಪನಿಗಳು ತಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಆರಂಭಿಸಿದ್ದು  ದಾಖಲೆ ಮಟ್ಟದಲ್ಲಿ ಸಿಮ್ ವಿತರಣೆ. ಇದರ ಬೆನ್ನಿಗೇ ಹುಟ್ಟು ಪಡೆದದ್ದು ನಕಲಿ ಜಾಲ. ಅಂದರೆ ಇಲ್ಲಿ ಎಲ್ಲವೂ ಸ್ಪಷ್ಟವೇ, ದಾಖಲೆ ಮಾತ್ರ ನಕಲಿ ಅಷ್ಟೇ.
ಅದು ಹೇಗೆಂದರೆ, ಗಣ್ಯರು ಹಾಗೂ ಪರಿಚಿತರನ್ನು ಬಿಟ್ಟು ಸಾಮಾನ್ಯರ ದಾಖಲೆಯ ನಕಲು ಪ್ರತಿಯನ್ನು ಮರು ಮುದ್ರಿಸಿ ಸಿದ್ಧಪಡಿಸಿಟ್ಟುಕೊಳ್ಳುವುದು, ಫೋಟೋ ಸ್ಟುಡಿಯೋದಲ್ಲಿ ಹಲವು ತಿಂಗ ಳಿಂದ ಪಡೆಯದೇ ಹೋದ ವ್ಯಕ್ತಿಯ ಫೋಟೋಗಳನ್ನು ಸಂಗ್ರಹಿಸುವುದು, ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ಆಯಾ ಕಂಪನಿಗಳಿಂದ ಓಕೆ ಮಾಡಿಸಿ ಕೊಳ್ಳುವುದು. ಅಂದರೆ ನಿಮ್ಮ ಹೆಸರಿನಲ್ಲೇ, ಮತ್ತೊಬ್ಬನ ಫೋಟೋಕ್ಕೆ ಮತ್ತೊಂದು ಸಿಮ್ ವಿತರಣೆಯಾಗಿರುತ್ತದೆ. ದಾಖಲೆ ಪ್ರಕಾರ ನಿಮಗೆ ಮತ್ತೊಂದು ಸಿಮ್ ವಿತರಿಸಿದಂತೆ. ದಾಖಲೆ ಕೊಡಲಾಗದ, ಅನ್ಯ ಕಾರ‍್ಯಗಳಿಗೆ ಸಿಮ್ ಬೇಕಾದವರು ಇದನ್ನು ಹೆಚ್ಚು ಹಣ ಕೊಟ್ಟು ಖರೀದಿಸುತ್ತಾರೆ,. ಇದನ್ನು ಬಳಸುವುದು ಅಗತ್ಯ ಬಿದ್ದಾಗ ಮಾತ್ರ.
ಎನ್‌ಆರ್ ಠಾಣೆ ವ್ಯಾಪ್ತಿಯಲ್ಲೇ ಅಧಿಕ: ಇಂಥ ಸಿಮ್‌ಗಳ ಕೈ ಬದ ಲಾವಣೆ, ವಹಿವಾಟು ನಡೆಯುವುದು ನರಸಿಂಹರಾಜ ಠಾಣೆ ವ್ಯಾಪ್ತಿಯಲ್ಲೇ ಹೆಚ್ಚು. ನಂತರದ ಸ್ಥಾನ ಉದಯಗಿರಿಯಲ್ಲಿ. ನರಸಿಂಹರಾಜ ಠಾಣೆಯ ಪೊಲೀಸರಿಗೆ ಈ ದಂಧೆಯ ಬಗ್ಗೆಯೂ ತಿಳಿದಿದೆ. ಮೇಲಧಿಕಾರಿಗಳಿಗೆ ತಿಳಿದಿಲ್ಲವೆಂದೋ ಗೊತ್ತಿಲ್ಲ, ತಣ್ಣಗೆ ಕುಳಿತಿದ್ದಾರೆ.
ಇದೇ ರೀತಿ ಸರಸ್ವತಿಪುರಂನ ಪ್ರಮುಖ ಮೊಬೈಲ್ ಶಾಪಿಯಲ್ಲಿ ಬೇಕಾಬಿಟ್ಟಿಯಾಗಿ ಸಿಮ್‌ಗಳನ್ನು ನೀಡಲಾಗುತ್ತದೆ ಎನ್ನುವ ದೂರು ಪೊಲೀಸರಿಗೆ ಬಂದಿತ್ತು. ಸರಸ್ವತಿಪುರಂ ಇನ್ಸ್‌ಪೆಕ್ಟರ್ ಸಂಬಂಧಪಟ್ಟವರನ್ನೂ ಕರೆಸಿ, ಚರ್ಚಿಸಿ ಸುಮ್ಮನಾದರು ಎನ್ನಲಾಗಿದೆ. ಕುವೆಂಪುನಗರ, ವಿದ್ಯಾರಣ್ಯಪುರಂ ಠಾಣೆ ವ್ಯಾಪ್ತಿಯಲ್ಲೂ ಇಂಥ ದೂರುಗಳು ಬಂದಿವೆ ಎಂದು ಹೇಳಲಾದರೂ ಅದು ದೃಢಪಟ್ಟಿಲ್ಲ.

ಜಿ.ಪಂ.ನಲ್ಲಿ ಕಾಂಗ್ರೆಸ್‌ಗೆ ಮುಖಭಂಗ

ವಿಕ ಸುದ್ದಿಲೋಕ ಮೈಸೂರು
ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದ್ದು, ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ವಾಗಿ ಕಣಕ್ಕಿಳಿದ ಎಸ್.ಎನ್.ಸಿದ್ಧಾರ್ಥ ಅಧ್ಯಕ್ಷರಾಗಿ ಆಯ್ಕೆಯಾದರು.
ಮಂಗಳವಾರ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಾದೇಶಿಕ ಆಯುಕ್ತರಾದ ಎಂ.ವಿ.ಜಯಂತಿ ಅಧ್ಯಕ್ಷತೆಯಲ್ಲಿ ನಡೆದ ಕೊನೆ ೮ ತಿಂಗಳ ಅವಧಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದ ಬಸವ ರಾಜಪುರ ಸಿದ್ದಪ್ಪ ೧೭ ಮತಗಳನ್ನು ಪಡೆದು ಪರಾಭವಗೊಂಡರೆ, ಜಾ.ದಳ-ಬಿಜೆಪಿ-ಪಕ್ಷೇತರ ಸದಸ್ಯರ ೧೯ ಮತಗಳ ಜತೆಗೆ ಕಾಂಗ್ರೆಸ್‌ನ ಏಳು ಸದಸ್ಯರ ಬೆಂಬಲ ಪಡೆದು ೨೬ ಸದಸ್ಯ ಬಲದೊಂದಿಗೆ ಸಿದ್ಧಾರ್ಥ ಚುನಾಯಿತರಾದರು.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಎಚ್.ಸಿ.ಲಕ್ಷ್ಮಣ್ ಅವರ ಪರವಾಗಿ ಯಾವುದೇ ಮತ ಬರಲಿಲ್ಲ. ಸ್ವತಃ ಲಕ್ಷ್ಮಣ್ ಅವರು ಸಿದ್ಧಾರ್ಥ ಅವರ ಪರ ಕೈ ಎತ್ತಿದರು. ಚುನಾವಣೆಗೆ ಬಂದರೂ ಒಬ್ಬ ಸದಸ್ಯ ತಟಸ್ಥರಾಗಿ ಉಳಿದರೆ ಇಬ್ಬರು ಗೈರು ಹಾಜರಾಗಿದ್ದರು.
ಕಾಂಗ್ರೆಸ್ ಹರಸಾಹಸ: ಜಿಲ್ಲಾ ಪಂಚಾಯಿತಿಯ ಕೊನೆಯ ಅವಧಿಯ ಹೊತ್ತಿಗೂ ೩೨ ಸದಸ್ಯರೊಂದಿಗೆ ಬಹುಮತ ಹೊಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಾಮಪತ್ರ ಸಲ್ಲಿಕೆವರೆಗೂ ಕುತೂಹಲ ಏರ್ಪಟ್ಟಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಡಾ.ಎಚ್.ಸಿ.ಮಹಾದೇವಪ್ಪ ಅವರು ಹತ್ತು ತಿಂಗಳ ಹಿಂದೆ ನೀಡಿದ ಮಾತಿನಂತೆ ಸಿದ್ಧಾರ್ಥ ಪರವಾಗಿದ್ದರೆ, ಮತ್ತೊಬ್ಬ ಶಾಸಕ ವಿ.ಶ್ರೀನಿವಾಸ ಪ್ರಸಾದ್ ಹಾಗೂ ಸಂಸದ ಎಚ್.ವಿಶ್ವನಾಥ್ ಅವರು  ಕೃಷ್ಣರಾಜನಗರ ಭಾಗದ ದಲಿತರಿಗೆ ಅವಕಾಶ ಸಿಗಬೇಕು ಎನ್ನುವ ಪಟ್ಟು ಹಿಡಿದು ಸಿದ್ದಪ್ಪ ಅವರ ಪರವಾಗಿ ನಿಂತರು. ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಅವರು ಪ್ರಸಾದ್ ಹಾಗೂ ವಿಶ್ವನಾಥ್ ಅವರ ಒತ್ತಾಯಕ್ಕೆ ಕಟ್ಟುಬಿದ್ದು ಸಿದ್ದಪ್ಪ ಅವರಿಗೆ ಬೆಂಬಲ ಸೂಚಿಸಿದರು.
ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇಲ್ಲದ್ದನ್ನು ಅರಿತ ಜಾ.ದಳ ಹಾಗೂ ಬಿಜೆಪಿ ಸದಸ್ಯರು ತಮ್ಮ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಗೆದ್ದು ಈಗ ಬಿಜೆಪಿ ಯಲ್ಲಿ ಗುರುತಿಸಿಕೊಂಡಿರುವ ಎಚ್.ಸಿ.ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಿ ದರು. ಮಧ್ಯಾಹ್ನ ೧ರವರೆಗೆ ನಾಮಪತ್ರ ವಾಪಸಿಗೆ ಅವಕಾಶವಿದ್ದರೂ ಕಾಂಗ್ರೆಸ್ ತನ್ನ ಅಭ್ಯರ್ಥಿ ಯನ್ನು ಬದಲಿಸುವ ನಿರ್ಧಾರ ಕೈಗೊಂಡಿದ್ದ ರಿಂದ ಸಿದ್ಧಾರ್ಥ ಹಾಗೂ ಲಕ್ಷ್ಮಣ್ ಕಣದಲ್ಲಿ ಉಳಿದರು. ಮಧ್ಯಾಹ್ನ ಮೂರಕ್ಕೆ ಚುನಾವಣೆ ನಡೆದಾಗ ಸಿದ್ದಪ್ಪ ಅವರ ಪರವಾಗಿ ೧೭ ಮತಗಳು ಬಂದವು. ಆನಂತರ ಸಿದ್ಧಾರ್ಥ  ಅವರ ಪರವಾಗಿ ೨೬ ಸದಸ್ಯರು ಕೈ  ಎತ್ತಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಕ್ಷ್ಮಣ್ ಅವರೂ ಸಿದ್ದಾರ್ಥ ಅವರಿಗೆ ಬೆಂಬಲ ಸೂಚಿಸಿದರು. ಇದರಿಂದ ಮುಖಭಂಗ ಅನುಭವಿಸಿದ ಕಾಂಗ್ರೆಸ್ ಸದಸ್ಯರು ಹೊರ ನಡೆದರೆ, ಬಂಡಾಯ ವಾಗಿಯೇ ಕಣಕ್ಕಿಳಿದ ಸಿದ್ಧಾರ್ಥ ಗೆಲುವಿನ ನಗೆ ಬೀರಿದರು. ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರು ಸಿದ್ಧಾರ್ಥ ಅವರ ಗೆಲುವನ್ನು ಪ್ರಕಟಿಸಿದರು.
ಸಿದ್ದು, ಮಹಾದೇವಪ್ಪ ಕೃಪಾಕಟಾಕ್ಷ: ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಅವರ ಆಶೀರ್ವಾದದಿಂದಲೇ ಅಧ್ಯಕ್ಷನಾಗಿದ್ದೇನೆ.
ಇದು ಜಿಲ್ಲಾಪಂಚಾಯಿತಿ ನೂತನ ಅಧ್ಯಕ್ಷ ಸಿದ್ಧಾರ್ಥ ಅವರ ಪ್ರತಿಕ್ರಿಯೆ.
ನಿನಗೆ ಅಧ್ಯಕ್ಷ ಸ್ಥಾನದ ಅವಕಾಶ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಅವರಿಬ್ಬರೂ ಹೇಳಿದ್ದರು. ಅವರ ಆಶೀರ್ವಾದ ಹಾಗೂ ಬಹುತೇಕ ಸದಸ್ಯರ ಬೆಂಬಲದಿಂದಲೇ ಅಧ್ಯಕ್ಷನಾದೆ ಎಂದು ಹೇಳಿದರು.
ಒಗ್ಗಟ್ಟಿನಿಂದ ನಾನು ಆಯ್ಕೆಯಾಗುತ್ತೇನೆ ಎಂದು ನಿರೀಕ್ಷಿಸಿದ್ದೆ. ಜತೆಗೆ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗುತ್ತೇನೆ ಎಂದುಕೊಂಡಿದ್ದೆ. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಇನ್ನು ಮುಂದೆ ಒಗ್ಗಟ್ಟಿನಿಂದಲೇ ಸದಸ್ಯರನ್ನು ಕೊಂಡೊಯ್ದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಕುಕ್ಕರಹಳ್ಳಿ ಕೆರೆಯಲ್ಲಿ ನಳನಳಿಸಲಿವೆ ಹಣ್ಣಿನ ಗಿಡಗಳು

ವಿಕ ಸುದ್ದಿಲೋಕ ಮೈಸೂರು
ಪ್ರೇಮಿಗಳ ತಾಣ, ಕವಿಗಳ ಸ್ಫೂರ್ತಿಯಾಗಿರುವ ಕುಕ್ಕರಹಳ್ಳಿಕೆರೆಯಲ್ಲಿ ಇನ್ನು ಮುಂದೆ ಹಕ್ಕಿಗಳ ಕಲರವ, ದುಂಬಿಗಳ ಝೇಂಕಾರ ನಿರಂತರವಾಗಿ ಕೇಳಿ ಬರಲಿದೆ.
ನಗರದ ಯಾಂತ್ರಿಕ ಜೀವನ, ಮರಗಳ ಹನನ, ಹೆಚ್ಚು ಉಪಯೋಗವಿಲ್ಲದ ಮರಗಳಿಂದ ಕೆರೆ ಅಂಗಳದಿಂದ ದೂರವಾಗುತ್ತಿರುವ ಹಕ್ಕಿ-ಪಕ್ಷಿಗಳನ್ನು ಮರಳಿ ಕರೆತರಲು ಮುಂದಾಗಿರುವ ಮೈಸೂರು ವಿಶ್ವವಿದ್ಯಾಲಯ, ಕೆರೆಯ ಅಂಗಳದಲ್ಲಿ ಹಣ್ಣಿನ ಗಿಡ ಬೆಳೆಸಲು ಮುಂದಾಗಿದೆ. ೧೪೯ ಎಕರೆಯ ಆಯ್ದ ಸ್ಥಳದಲ್ಲಿ ಈ ಹಣ್ಣಿನ ಗಿಡ ಬೆಳೆಸುವ ಪ್ರಯತ್ನಕ್ಕೆ ಅರಣ್ಯ ಇಲಾಖೆ, ನಗರ ಪಾಲಿಕೆ ಜತೆಗೆ ಇತರೆ ಸಂಘ, ಸಂಸ್ಥೆಗಳು ಸಹಕಾರ ನೀಡಿವೆ.
ಮೈಸೂರು ವಿ.ವಿ. ವ್ಯಾಪ್ತಿಗೆ ಒಳಪಡುವ ಕುಕ್ಕರಹಳ್ಳಿ ಕೆರೆಯ ಅಂಗಳದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಜಂಗುಳಿಯಿಂದ ಏಕಾಂತತೆ ಕಳೆದುಕೊಳ್ಳುತ್ತಿದ್ದ ಪಕ್ಷಿಗಳು, ಹೆಚ್ಚು ಉಪಯೋಗವಿಲ್ಲದ ನೀಲಗಿರಿ ಮರಗಳಿಂದಾಗಿ ಜಾಗ ಖಾಲಿ ಮಾಡಲಾರಂಭಿಸಿದ್ದವು. ಇದನ್ನು ಮನಗಂಡು ‘ಕೆರೆಯ ತನ’ ಉಳಿಸುವ ಜತೆಗೆ ಹಕ್ಕಿ-ಪಕ್ಷಿಗಳು ಇಲ್ಲಿಯೇ ಇರುವಂತೆ ಮಾಡಲು ಕ್ರಮಕೈಗೊಳ್ಳಬೇಕೆಂಬ ಒತ್ತಾಯ ಪರಿಸರ ಪ್ರೇಮಿಗಳಿಂದ ಕೇಳಿ ಬಂದಿತ್ತಲ್ಲದೇ, ಇದೇ ಕಾಲಕ್ಕೆ ಸರಕಾರವೂ ಕುಕ್ಕರಹಳ್ಳಿಕೆರೆಯ ಜೀರ್ಣೋದ್ಧಾರಕ್ಕೆ ಯೋಜನೆ ಘೋಷಿಸಿದ್ದರಿಂದ ಯೋಜನೆಗೆ ಚಾಲನೆ ದೊರೆತಿದೆ.
ಕೆರೆ ಅಂಗಳದಲ್ಲಿ ಇರುವ ನೀಲಗಿರಿ ಮರಗಳಿಂದ ಪರಿಸರಕ್ಕೆ ಉಪಯೋಗ ಕಡಿಮೆಯಾಗುವುದಲ್ಲದೇ, ಆಮ್ಲಜನಕ ಸೂಸುವುದು ಅಷ್ಟಕ್ಕೆ ಅಷ್ಟೆ. ಇಂಥ ಮರಗಳಿಂದ ಪಕ್ಷಿಗಳಿಗೆ ಯಾವುದೇ ಪ್ರಯೋಜನ ಇಲ್ಲ ಎನ್ನುವುದನ್ನು ಮನಗಂಡ ಮೈಸೂರು ವಿ.ವಿ. ಇಂಥ ನೀಲಗಿರಿ ಮರಗಳನ್ನು ಬುಡ ಸಮೇತ ತೆರವುಗೊಳಿಸಿದೆ. ಈ ಜಾಗದಲ್ಲಿ ಪರಿಸರಕ್ಕೆ ಉಪಯುಕ್ತವಾಗುವ ಜತೆಗೆ ಪಕ್ಷಿಗಳಿಗೆ ಆಹಾರ ಮೂಲವಾಗುವ ಮಾವು, ನೇರಳೆ, ಬೇವು, ಹೊಂಗೆ, ಅತ್ತಿ, ಸಂಪಿಗೆ, ಹಲಸು, ಹಿಪ್ಪನೇರಳೆ ಮತ್ತಿತರರ ಮೂರು ಸಾವಿರ ಗಿಡಗಳನ್ನು ಬೆಳೆಸಲಾರಂಭಿಸಿದೆ. ಇಷ್ಟೆ ಅಲ್ಲದೇ ಪಕ್ಷಿಗಳಿಗೆ ಏಕಾಂತ ಸೃಷ್ಟಿಸುವ ಜತೆಗೆ ಕೆರೆಯ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಪುಟ್ಟ ದ್ವೀಪ ನಿರ್ಮಾಣಕ್ಕೆ ವಿ.ವಿ. ಮುಂದಾಗಿದೆ.
ಕಾರಂಜಿಕೆರೆಗೆ ಬರುವ ಪರ್ಪಲ್ ಸನ್‌ಬರ್ಡ್, ಇಗ್ರೆಟ್, ಕ್ಯಾಟಲ್ ಎಗ್ರೆಟ್, ಬ್ರಾಹ್ಮಿನಿ ಕೈಟ್, ಪಾರಿಯಾ ಕೈಟ್, ಮೂರ್ ಹೆನ್, ಸ್ಪಾಟ್ ಬಿಲ್ಲಡ್ಡ್‌ಕ್ಸ್, ಫ್ಲವರ್ ಪೆಕ್ಕರ್, ಗೋಲ್ಡನ್ ಓರಿಯಲ್, ಬಾರ್ಬೆಟ್, ಗ್ರೀನ ಬಾರ್ಬೆಟ್, ಕಾರ್ಮೊರಾಂಟ್ಸ್, ಕಿಂಗ್‌ಫಿಷರ್, ಇಂಡಿಯನ್‌ಶಾಗ್, ಸ್ಮಾಲ್ ಗ್ರೀನ್ ಬೀ ಈಟರ‍್ಸ್, ಬುಶ್‌ಲಾರ್ಕ್, ಪೈಂಟೆಡ್ ಸ್ಪಾರ್ಕ್, ಪೆಲಿಕನ್, ಕಾಮನ್ ಕ್ರೋ, ಮೈನಾ, ಔಲೆಟ್, ಗ್ರೇ ಹೆರಾನ್, ಸ್ನೇಕ್ ಬರ್ಡ್, ಸ್ಟ್ಯಾಂಡ್ ಪೈಪರ್, ಲ್ಯಾಪ್‌ವಿಂಗ್, ಈಗಲ್, ಟಾನಿಈಗಲ್, ವ್ಯಾಗ್‌ಟೈಲ್, ಚಿಟ್ಟೆಗಳು, ಮಿಡತೆ, ಕ್ಯಾಟರ್ ಪಿಲ್ಲರ್ ಮತ್ತಿತರ ಪಕ್ಷಿಗಳು ನಗರದಲ್ಲಿದ್ದ ಕುಕ್ಕರಹಳ್ಳಿ, ದಳವಾಯಿ, ಲಿಂಗಾಂಬುದಿ ಸೇರಿದಂತೆ ವಿವಿಧ ಕರೆಗಳಲ್ಲಿ ವಂಶಾಭಿವೃದ್ಧಿಯಲ್ಲಿ ತೊಡಗುತ್ತಿದ್ದವು. ಆದರೆ ಕಾರಂಜಿ ಹೊರತುಪಡಿಸಿ ಉಳಿದ ಕೆರೆಗಳು ಸೂಕ್ತ ನಿರ್ವಹಣೆ ಇಲ್ಲದೇ ಬಳಲಿರುವುದರಿಂದ ಪಕ್ಷಿಗಳ ಆಗಮನ ಕಡಿಮೆಯಾಗಿದ್ದವು.
ಹಣ್ಣಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಪಕ್ಷಿ ಸಂಕುಲದ ರಕ್ಷಣೆಗಾಗಿ ಕುಕ್ಕರಹಳ್ಳಿಕೆರೆ ಅಂಗಳದಲ್ಲಿ ಹಣ್ಣಿನ ಗಿಡ ಬೆಳೆಸುವ ಯೋಜನೆಗೆ ಸೋಮವಾರ ಚಾಲನೆ ನೀಡಲಾಯಿತು. ಕೆರೆ ಅಂಗಳದಲ್ಲಿ  ನಡೆದ ಕಾರ‍್ಯಕ್ರಮದಲ್ಲಿ ಮೇಯರ್ ಸಂದೇಶ್‌ಸ್ವಾಮಿ, ಗಿಡ ನೆಡುವ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಜಿ.ತಳವಾರ್, ಕುಲಪತಿ ಪ್ರೊ.ಈ.ಟಿ. ಪುಟ್ಟಯ್ಯ, ಡಿಸಿಎಫ್ ಶಾಶ್ವತಿ ಮಿಶ್ರಾ, ವಲಯಾಧಿಕಾರಿ ರಮೇಶ್, ವಿ.ವಿ. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೆಂಪಂಕೇಗೌಡ, ಕುಕ್ಕರಹಳ್ಳಿಕೆರೆ ಸಂರಕ್ಷಣೆ ಸಮಿತಿ ಸಂಚಾಲಕ ಪ್ರೊ.ಕೆ.ಎಂ.ಜಯರಾಮಯ್ಯ ಮತ್ತಿತರರು ಹಾಜರಿದ್ದರು.

ಬಿಳಿಗಿರಿರಂಗನಬೆಟ್ಟ : ರಾಜಗೋಪುರ ನಿರ್ಮಾಣ ಇನ್ನೂ ಕನಸು


ಡಿ. ಪಿ. ಶಂಕರ್ ಯಳಂದೂರು ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿರಂಗನಬೆಟ್ಟದ ದೇವಾಲಯಕ್ಕೆ ರಾಜಗೋಪುರ ನಿರ್ಮಿಸುವ ಯೋಜನೆ ಇನ್ನೂ ಕೈಗೂಡೇ ಇಲ್ಲ. ಶಂಕುಸ್ಥಾಪನೆ ನೆರವೇರಿಸಿ ೩ ವರ್ಷ ಕಳೆದರೂ ಕಾಮಗಾರಿಯ ಸದ್ದೇ ಇಲ್ಲ.
ಚಂಪಕಾರಣ್ಯವೆಂದೇ ಖ್ಯಾತಿ ಪಡೆದ ಬಿಳಿಗಿರಿ ರಂಗನಬೆಟ್ಟದಲ್ಲಿ ರಂಗನಾಥಸ್ವಾಮಿಯ ದೇವಾಲಯ ವಿದ್ದು, ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ದೇವಾಲಯ ವನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಯಾರೂ ಕೈ ಹಾಕಿಲ್ಲ. ಹೋಗಲಿ ಪ್ರವಾಸಿ ತಾಣದಲ್ಲಿರುವ ಈ ಪುರಾಣ ಪ್ರಸಿದ್ಧ ದೇವಾಲಯದ ಪ್ರವೇಶ ದ್ವಾರದಲ್ಲಿ ರಾಜಗೋಪುರ ನಿರ್ಮಿಸಬೇಕು ಎಂಬ ಭಕ್ತರ ಕನಸು ಇನ್ನೂ ನನಸಾಗಿಲ್ಲ.
ಶಂಕುಸ್ಥಾಪನೆ ನೆರವೇರಿದೆ: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ದೇವಾಲಯಕ್ಕೆ ರಾಜಗೋಪುರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಇದಾಗಿ ೩ ವರ್ಷ ಕಳೆದರೂ ರಾಜಗೋಪುರದ ಬಗ್ಗೆ ಯಾರೂ ಮಾತೇ ಆಡುತ್ತಿಲ್ಲ.
ಆರಂಭದಲ್ಲಿ ಗೋಪುರಕ್ಕೆ ಸರಕಾರದಿಂದಲೇ ೩೪ ಲಕ್ಷ ರೂ. ಮಂಜೂರಾಗಿತ್ತು. ಅಲ್ಲದೆ ಭಕ್ತರಿಂದ ದೇಣಿಗೆ ಸಂಗ್ರಹಿಸುವ ಸಲುವಾಗಿ ಒಂದು ಸಮಿತಿಯನ್ನು ರಚಿಸಲಾಗಿತ್ತು. ಸುಮಾರು ೨.೨೫ ಕೋಟಿ ರೂ. ವೆಚ್ಚದಲ್ಲಿ ಸುಂದರ ಹಾಗೂ ಬೃಹತ್ ರಾಜಗೋಪುರ ನಿರ್ಮಿಸಬೇಕು ಎಂಬುದು ಅಂದಿನ ಯೋಜನೆಯಾಗಿತ್ತು.
ಹೀಗಾಗಿ ಭಕ್ತರು ಸಹ ಲಕ್ಷಾಂತರ ರೂ. ದೇಣಿಗೆ ನೀಡಿದ್ದಾರೆ. ಬೆಂಗಳೂರಿನ ಉದ್ಯಮಿ ಸುರೇಂದ್ರ ನಾಥ್‌ಸಿಂಗ್ ಎಂಬುವವರು ೫೯ ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅವರು ದೇಣಿಗೆ ನೀಡಿಯೇ ೨ ವರ್ಷ ಗಳಾಗಿವೆ. ಅಲ್ಲದೆ ಇನ್ನೂ ಸಾಕಷ್ಟು ಭಕ್ತರು ಹಾಗೂ ಸರಕಾರದ ಹಣ ಸೇರಿ ಒಟ್ಟು ೧.೨೫ ಕೋಟಿ ರೂ. ಸಂಗ್ರಹವಾಗಿದೆ. ಆದರೂ ಗೋಪುರ ನಿರ್ಮಾಣ ಕಾರ್ಯವನ್ನು ಆರಂಭಿಸಲು ಯಾರಿಗೂ ಮನಸ್ಸಿಲ್ಲ.
ಇದಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭ ಎಸ್. ಬಾಲರಾಜು ಶಾಸಕರಾಗಿದ್ದರು. ನಂತರ ಆರ್. ಧ್ರುವನಾರಾಯಣ್. ಇದೀಗ ಜಿ.ಎನ್.ನಂಜುಂಡಸ್ವಾಮಿ ಶಾಸಕರಾಗಿದ್ದಾರೆ. ಮೂರು ಮಂದಿ ಶಾಸಕರನ್ನು ಕಂಡರೂ ದೇವಾಲಯದ ಗೋಪುರ ನಿರ್ಮಾಣದ ಕನಸು ಮಾತ್ರ ಈಡೇರಲಿಲ್ಲ.
ಬೆಟ್ಟದಲ್ಲಿ ಜಾತ್ರೆ ನಡೆಯುವ ಸಂದರ್ಭದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯುತ್ತದೆ. ಆ ವೇಳೆಯಲ್ಲಿ ರಾಜಗೋಪುರದ ವಿಚಾರ ಪ್ರಸ್ತಾಪವಾಗುತ್ತಲೇ ಇರುತ್ತದೆ. ಸದ್ಯದಲ್ಲೇ ಕಾಮಗಾರಿ ಆರಂಭಿಸಿ ಬಿಡುವ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.
ಜಾತ್ರೆ ಮುಗಿದ ಮೇಲೆ ಆ ವಿಚಾರದ ಕುರಿತು ಯಾರೂ ಚಕಾರ ಎತ್ತುವುದಿಲ್ಲ. ಹೀಗಾಗಿ ಪುರಾಣ ಪ್ರಸಿದ್ಧ ದೇವಾಲಯ ಪಾಳು ಪಾಳಾಗಿ ಕಾಣುತ್ತಿದೆ. ರಾಜಗೋಪುರ ನಿರ್ಮಾಣಗೊಂಡರೆ ದೇವಾಲಯಕ್ಕೆ ಒಂದು ಕಳೆ ಬರುತ್ತದೆ ಎಂಬುದು ಭಕ್ತರ ಅನಿಸಿಕೆ. ಗೋಪುರ ನಿರ್ಮಿಸಬೇಕು ಎಂಬುದು ಸಾಕಷ್ಟು ಭಕ್ತರ ಆಸೆಯೂ ಕೂಡ.
ಸಂಬಂಧಿಸಿದವರು ಆದಷ್ಟು ಶೀಘ್ರ ಭಕ್ತರ ಕನಸನ್ನು ನನಸು ಮಾಡಲಿ ಎಂಬುದು ಎಲ್ಲರ ಆಗ್ರಹ.

ನೀರಿನ ಸಮಸ್ಯೆ ನಿವಾರಣೆಗೆ ಜೂನ್‌ನಲ್ಲಿ ಮುಹೂರ್ತ

ವಿಕ ಸುದ್ದಿಲೋಕ ಮೈಸೂರು
‘ನಗರದ ನೀರಿನ ಅಭಾವಕ್ಕೆ ನಿಜ ಕಾರಣ ನೀರುಗಳ್ಳರು’.
ಜಸ್ಕೋಗೆ ವಹಿಸಿದ ಬಳಿಕ ಸರಾಗವಾಗಿ ನೀರು ನೀಡಿ ಎಂದು ಒತ್ತಾಯಿಸಿ ದವರಿಗೆ, ನಾಗರಿಕರಿಗೆ, ಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್, ಈ ಸತ್ಯ ಬಿಚ್ಚಿಟ್ಟರು.
ಹಾಲಿ ನಗರಕ್ಕೆ ಬರುತ್ತಿರುವ ನೀರೇ ಸಾಕಷ್ಟಿದೆ. ಆದರೆ ಮಿತಿ ಮೀರಿದ ಸೋರಿಕೆ, ೩೦ ಸಾವಿರಕ್ಕೂ ಹೆಚ್ಚಾಗಿರುವ ಅನಧಿಕೃತ ಸಂಪರ್ಕವೇ ನೀರಿನ ಅಭಾವ ಸೃಷ್ಟಿಗೆ ಕಾರಣ. ಸೋರಿಕೆ ತಡೆಯುವ ಕಾರ‍್ಯ ಪ್ರಗತಿಯಲ್ಲಿದ್ದು, ನೀರುಗಳ್ಳರಿಗೆ ಕಡಿವಾಣ ಹಾಕುವ ಕೆಲಸ ನಡೆಯುತ್ತಿದೆ.
ದಿನಪೂರ್ತಿ ನೀರು ಬೇಡ ಸರಿಯಾಗಿ ಎರಡು ಗಂಟೆ ನೀಡಿದರೆ ಸಾಕು ಎಂಬ ನಾಗರಿಕರ ಕೋರಿಕೆಗೆ ‘ಇಪ್ಪನ್ನಾಲ್ಕು ಗಂಟೆ ನೀರು ಕುಡಿಯಲು ಇನ್ನು ನಾಲ್ಕು ವರ್ಷ ಕಾಯಲೇ ಬೇಕು.!’ಎಂಬ ಜಸ್ಕೋ ನಡುವಿನ ಕರಾರು ಮುಂದಿಟ್ಟರು.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಬಂದ ಹೆಚ್ಚು ಕರೆಗಳನ್ನು ಸಹನೆ ಯಿಂದಲೇ ಆಲಿಸಿದ ಅವರು, ಅತಿಯಾದ ಸೋರಿಕೆಯೇ ಸಮಸ್ಯೆಗೆ ಕಾರಣ. ಇದನ್ನು ತಡೆ ಗಟ್ಟಲು ಗಮನ ನೀಡಲಾಗಿದ್ದು, ನಿರ್ವಹಣೆ ಹೊಣೆ ವಹಿಸಿಕೊಂಡಿರುವ ಜಸ್ಕೋ ಕಂಪನಿಗೆ ಹಂತ, ಹಂತವಾಗಿ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ ಎಂದು ಉತ್ತರಿಸಿದರು.
‘ದಿನದ ೨೪ ಗಂಟೆ ನೀರು ಕೊಡುವುದಾಗಿ ಹೇಳಿದ್ದೀರಿ. ಅಷ್ಟೊಂದು ಬೇಡ, ಸರಿ ಯಾಗಿ ಎರಡು ಗಂಟೆ ಕೊಡಿ ಸಾಕು’ ಎಂಬ ಹಲವರ ಆಗ್ರಹಕ್ಕೆ ನಸುನಗುತ್ತಲೇ ಉತ್ತರಿಸಿ, ಸೋರಿಕೆ ತಡೆಗಟ್ಟಲಾಗುತ್ತಿದೆ. ಜೂನ್‌ನಲ್ಲಿ ಪ್ರಾಯೋಗಿಕವಾಗಿ ೫ ವಾರ್ಡ್‌ಗಳಲ್ಲಿ ೨೪೭ ನೀರು ಪೂರೈಕೆ ಆರಂಭಿಸಲಾಗುವುದು. ಡಿಸೆಂಬರ್ ವೇಳೆಗೆ ಮತ್ತೆ ೧೦ರಿಂದ ೧೫ ವಾರ್ಡ್‌ಗೆ ಚಾಲನೆ ನೀಡಿದರೆ, ಮುಂದಿನ ಜೂನ್ ವೇಳೆಗೆ ಮತ್ತಷ್ಟು ವಾರ್ಡ್‌ಗಳನ್ನು ಸೇರ್ಪಡೆಗೊಳಿಸಲಾಗುವುದು. ಪಾಲಿಕೆ ಹಾಗೂ ಜಸ್ಕೋ ನಡುವೆ ನಡೆದ ಒಪ್ಪಂದದ ಪ್ರಕಾರ ೨೦೧೩ರ ವೇಳೆಗೆ ಎಲ್ಲ ವಾರ್ಡ್‌ಗಳನ್ನು ೨೪೭ ಯೋಜನೆಗೆ ಒಳಪಡಿಸಲಾಗುವುದು. ಸರಿಯಾಗಿ ನಿರ್ವಹಿಸದಿದ್ದರೆ ಜಸ್ಕೋ ಕಂಪನಿ ಭಾರಿ ಮೊತ್ತದ ದಂಡ ತೆರಬೇಕಾದೀತು ಎಂದರು.
ನರ್ಮ್, ಮುಖ್ಯಮಂತ್ರಿಗಳ ವಿಶೇಷ ನೂರು ಕೋಟಿ ರೂ. ಅಲ್ಲದೇ ಕೇಂದ್ರದ ಹಲವು ಯೋಜನೆಗಳು ನಗರಕ್ಕೆ ಹರಿದು ಬರುತ್ತಿದ್ದು, ಇದುವರೆಗೆ ೧೧೦ ಯೋಜನೆಗಳನ್ನು ಕೇಂದ್ರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ದೇಶಾದ್ಯಂತ ಯೋಜನೆಗಳಿಗೆ ಅನುಮೋದನೆ ಕೋರಿ ಒಟ್ಟು ೨೦೫ ಅರ್ಜಿಗಳು ಬಂದಿದ್ದರೆ, ಮೈಸೂರು ನಗರ ಒಂದರಿಂದಲೇ ೧೧೦ ಯೋಜನೆಗಳ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಹೆಚ್ಚು ಪ್ರಸ್ತಾವನೆ ಸಲ್ಲಿಸುವ ಜತೆಗೆ, ಕೇಂದ್ರದಿಂದ ಹಲವು ಯೋಜನೆ ಗಳನ್ನು ನಗರಕ್ಕೆ ತರಲು ಹೊರಟಿರುವ ನಗರ ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್, ಶನಿವಾರ ‘ವಿಜಯ ಕರ್ನಾಟಕ’ ಕಚೇರಿಯಲ್ಲಿ ನಡೆದ  ಪೋನ್- ಇನ್ ಕಾರ‍್ಯಕ್ರಮದಲ್ಲಿ ಮೈಸೂರಿನ ಅಭಿವೃದ್ಧಿ ಕುರಿತು ವಿವರಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ಜೆ.ಪಿ.ನಗರ, ಅಶೋಕಪುರಂ, ವಿದ್ಯಾರಣ್ಯಪುರಂ, ವಿಶ್ವೇಶ್ವರನಗರ ಸೇರಿದಂತೆ ಕೆಲ ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ತೊಂದರೆಯಾಗಿದೆ. ಮಧ್ಯರಾತ್ರಿ ನೀರು ಬಿಡುತ್ತಿರುವುದರಿಂದ ನಿದ್ದೆಗಟ್ಟು ನೀರು ಹಿಡಿಯಬೇಕಾದ ಪರಿಸ್ಥಿತಿ ಇದೆ ಎಂಬ ನಿವಾಸಿಗಳ ಅಳಲಿಗೆ ಸಮಾಧಾನ ಹೇಳಿದ ರಾಯ್ಕರ್, ಜೆ.ಪಿ. ನಗರದ ಲೈನ್‌ಗೆ ೨೨ ಸಂಪರ್ಕ ಇರುವುದರಿಂದ ಎಲ್ಲ ಭಾಗಕ್ಕೂ ಏಕಕಾಲದಲ್ಲಿ ನೀರು ಪೂರೈಸಲಾಗುತ್ತಿಲ್ಲ. ಒಂದೊಂದು ಮಾರ್ಗಕ್ಕೂ ಪ್ರತ್ಯೇಕ ವಾಗಿ ನೀರು ನೀಡಬೇಕಿದ್ದು, ಪೂರೈಕೆಯಲ್ಲಿ ವ್ಯತ್ಯಯ ವಾಗುತ್ತಿದೆ. ಜೆ.ಪಿ.ನಗರಕ್ಕೆ ಪ್ರತ್ಯೇಕ ಕೊಳವೆ ಮಾರ್ಗ ಅಳವಡಿಸುತ್ತಿದ್ದು, ೨೦ ದಿನದಲ್ಲಿ ಸಮಸ್ಯೆ ಸುಧಾರಿಸಲಿದೆ ಎಂದರು,
ಜಟಕಾ ಹೋಗುತ್ತೆ, ರಥ ಬರುತ್ತೆ
ಮೈಸೂರಿನ ಅರಮನೆಯ ಸುತ್ತ ಪಾರಂಪರಿಕತೆ ಮಹತ್ವವನ್ನು  ಕಾಯ್ದುಕೊಳ್ಳಲಾಗುವು ದಲ್ಲದೇ, ಜಟಕಾ ಟ್ರ್ಯಾಕ್ ನಿರ್ಮಿಸಲಾಗುವುದು. ಜಟಕಾ ಗಾಡಿಗಳನ್ನು ಪಾರಂಪರಿ ಕತೆಗೆ ತಕ್ಕಂತೆ ‘ರಥ’ವನ್ನಾಗಿಸಲಾಗುವುದು. ಈ ಸಂಬಂಧ ಟಾಂಗಾವಾಲದವರೊಂದಿಗೆ ಚರ್ಚಿಸಲಾಗಿದೆ. ಸುಮಾರು ೪೫ ಮಂದಿ ಮುಂದೆ ಬಂದಿದ್ದು, ರಥವನ್ನು ನಿರ್ಮಿಸುವ ಹೊಣೆಯನ್ನು ಪಂಜಾಬ್‌ನ ಪಟಿಯಾಲದ ಸಂಸ್ಥೆಯೊಂದಕ್ಕೆ ನೀಡಲಾಗಿದೆ. ರಥ ಹಾಗೂ ಕುದುರೆಕೊಳ್ಳಲು ಪಾಲಿಕೆ ಶೇ. ೫೦, ಪ್ರವಾಸೋದ್ಯಮ ನಿಗಮ ಶೇ. ೨೫ ರಷ್ಟು ಹಣವನ್ನು ಭರಿಸಲಿದೆ. ಉಳಿದದ್ದನ್ನು ಟಾಂಗಾವಾಲರೇ ಭರಿಸಬೇಕು. ಇದು ಕಾರ‍್ಯಗತಗೊಂಡರೆ ಪ್ರವಾಸೋದ್ಯಮಕ್ಕೆ ಒತ್ತು ನೀಡಿದಂತಾಗುವುದು ಎಂದು ವಿವರಿಸಿದರು.
ಲಲಿತ ಮಹಲ್ ರಸ್ತೆಯಲ್ಲಿ ಪ್ರತ್ಯೇಕ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗುವುದು. ಜಂಬೂ ಸವಾರಿ ತೆರಳುವ ರಾಜಮಾರ್ಗದ ಅಭಿವೃದ್ಧಿ ಕೈಗೆತ್ತಿಕೊಳ್ಳಲಿದ್ದು, ಈಗಾಲೇ ಟೆಂಡರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ದಸರಾ ವಸ್ತು ಪ್ರದರ್ಶನ ನಡೆಯುವ  ಸ್ಥಳವನ್ನು ದಿಲ್ಲಿಯ ಪ್ರಗತಿ ಮೈದಾನ ಮಾದರಿ ಅಭಿವೃದ್ಧಿಪಡಿಸಲಾಗುವುದು. ಹೈಟೆಕ್ ಹೋಟೆಲ್, ಬಹು ಉಪಯೋಗಿ ಸಮುದಾಯ ಭವನ, ನಿರಂತರ ವಸ್ತು ಪ್ರದರ್ಶನ ನಡೆಸುವಂತೆ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಹಿರೋಡೆಕೆರೆ ವಿನಾಶದ ಅಂಚಿಗೆ

ರಘುವೀರ್ ಪಾಂಡವಪುರ
ಪಟ್ಟಣಕ್ಕೆ ಹೊಂದಿಕೊಂಡಂತೆ ನೂರಾರು ಎಕರೆ ವಿಸ್ತೀರ್ಣದಲ್ಲಿರುವ ಹಿರೋಡೆಕೆರೆ ವಿನಾಶದ ಅಂಚಿಗೆ ತಲುಪಿದೆ. ಶಿಥಿಲಾವಸ್ಥೆಗೆ ತಲುಪಿರುವ ಕೆರೆಯ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ.
೮೫೦ ವರ್ಷದ ಹಿಂದೆ ೮೫೦ ಎಕರೆ ವಿಸ್ತೀರ್ಣದಲ್ಲಿ ಕೆರೆಯನ್ನು ನಿರ್ಮಿಸಲಾಗಿತ್ತು. ಇದೀಗ ಸುತ್ತಲೂ ಒತ್ತುವರಿಯಾಗಿ ೨೦೦ ಎಕರೆ ಯಷ್ಟು ಪ್ರದೇಶದಲ್ಲಿ ಕೆರೆ ಉಳಿದಿದೆ. ಕೋಡಿ ಮತ್ತು ಏರಿ ಶಿಥಿಲ ಗೊಂಡು ವರ್ಷಗಳೇ ಉರುಳಿದ್ದರೂ ಅಭಿವೃದ್ಧಿ ಪಡಿಸಲಾಗಿಲ್ಲ.
ತೊಣ್ಣೂರು ಕೆರೆಯ ನಾಲೆ ಮತ್ತು ವಿ.ಸಿ.ನಾಲೆ ಸೋರಿಕೆ ನೀರನ್ನು  ಹಿರೋಡೆ ಕೆರೆ ಆಶ್ರಯಿಸಿದೆ.  ದೇವೇಗೌಡನಕೊಪ್ಪಲು, ಚಿಕ್ಕಾಡೆ, ಪಟ್ಟಸೋಮನಹಳ್ಳಿ ಸುತ್ತಮುತ್ತಲ ಸುಮಾರು ೭೫೦ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದೆ.
ಈ ಕೆರೆಯನ್ನು ಕುಂತಿ ಕೆರೆ ಎಂದು ಕರೆಯುವುದೂ ಉಂಟು. ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ಹಿರೋಡೆಕೆರೆ ಎನ್ನುವ ನಾಮಕರಣ ವಾಗಿದೆ. ಕೆರೆಯು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಒಳಪಟ್ಟಿದೆ.
ಶಿಥಿಲಾವಸ್ಥೆ: ವಿಶ್ವೇಶ್ವರಯ್ಯ ನಾಲೆ ಮತ್ತು ತೊಣ್ಣೂರು ಕೆರೆ ನಾಲೆ ಗಳಲ್ಲಿ ನೀರು ಹರಿಯುವಾಗಲೆಲ್ಲಾ ಈ ಕೆರೆ ತುಂಬಿ ತುಳುಕುತ್ತಿರು ತ್ತದೆ. ಬೇಸಿಗೆಯಲ್ಲೂ ನೀರು ತುಂಬಿರುವುದು ಕೆರೆಯ ಮತ್ತೊಂದು ವಿಶೇಷವಾಗಿದೆ.
ಕೆರೆಯ ಏರಿ ಮತ್ತು ಕೋಡಿಯು ಇಂದೋ ನಾಳೆಯೋ ಒಡೆದು ಹೋಗುವಂಥ ಸ್ಥಿತಿಗೆ ತಲುಪಿದೆ. ಶಿಥಿಲಗೊಂಡಿರುವ ಕೆರೆಯ ಕೋಡಿ ಮತ್ತು ಏರಿಯನ್ನು ಅಭಿವೃದ್ಧಿಪಡಿಸಬೇಕೆಂದು ಅಚ್ಚುಕಟ್ಟು ಪ್ರದೇಶದ ರೈತರು ಸಾಕಷ್ಟು ಬಾರಿ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ.
ಕಾವೇರಿ ನೀರಾವರಿ ನಿಗಮದಿಂದ ೨೦೦೪ರಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಕೆರೆ ಏರಿಯನ್ನು ದುರಸ್ತಿಪಡಿಸಲಾಗಿತ್ತು. ದುರಸ್ತಿ ಆಗಿ ರುವ ಕಡೆಯೇ ಏರಿ ಬಿರುಕು ಬಿಟ್ಟಿರುವುದು ಕಳಪೆ ಕಾಮಗಾರಿಗೆ ಕೈಗನ್ನಡಿಯಾಗಿದೆ. ಅಲ್ಲೀಗ ಮರಳು ಮೂಟೆಗಳನ್ನಿಟ್ಟು ತೇಪೆ ಕೆಲಸ ಮಾಡಲಾಗಿದೆ. 
ತೆರವಿಗೆ ಕ್ರಮವಿಲ್ಲ: ಮಂಡ್ಯ ಜಿಲ್ಲಾಡಳಿತವು ಜಿಲ್ಲಾದ್ಯಂತ ಒತ್ತುವರಿ ತೆರವು ಕಾರ್ಯಾಚರಣೆಯನ್ನು ವರ್ಷದ ಹಿಂದೆ ಪ್ರಾರಂಭಿಸಿದೆ. ಅಲ್ಲಲ್ಲಿ ರಸ್ತೆ ಮತ್ತು ಕೆರೆ-ಕಟ್ಟೆಗಳ ಒತ್ತುವರಿಯೂ ತೆರವಾಗಿದೆ. ಆದರೆ, ಇಂಥದ್ದೊಂದು ಐತಿಹಾಸಿಕ ಕೆರೆ ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿಲ್ಲ. ಸುಮಾರು ೧೫೦ ಎಕರೆಯಷ್ಟು ಕೆರೆ ಪ್ರದೇಶ ಒತ್ತುವರಿ ಯಾಗಿದೆ. ಕೆರೆಯ ಆಸುಪಾಸಿನಲ್ಲಿ ಹತ್ತಿಪ್ಪತ್ತು ಗುಂಟೆ ಜಮೀನು ಹೊಂದಿದ್ದವ ರೆಲ್ಲಾ ಎಕರೆ ಗಟ್ಟಲೆ ವಿಸ್ತೀರ್ಣವನ್ನು ವ್ಯಾಪಿಸಿಕೊಂಡು, ಬೇಸಾಯ ಮಾಡುತ್ತಿದ್ದಾರೆ.
ಒತ್ತುವರಿ ಪ್ರದೇಶಕ್ಕೆ ಕೆರೆಯಿಂದಲೇ ಮಣ್ಣು ಹಾಕಿ ಎತ್ತರಿಸಿಕೊಳ್ಳ ಲಾಗಿದೆ. ಇದೀಗ ಕೆರೆಯಲ್ಲಿ ನೀರು ಶೇಖರಣೆ ಸಾಮಾರ್ಥ್ಯ ಕೂಡಾ ಕುಗ್ಗಿದೆ. ಆ ಕಾರಣ ಬೇಸಿಗೆಯಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.
ಅನುದಾನಕ್ಕೆ ತಡೆ: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಗಳ ಅಭಿವೃದ್ಧಿ ಯೋಜನೆಯಡಿ ಪಾಂಡವಪುರಕ್ಕೆ ೫ ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ ಹಿರೋಡೆ ಕೆರೆ ಅಭಿವೃದ್ಧಿಗೆ ೫೦ ಲಕ್ಷ ರೂ. ನಿಗದಿಪಡಿಸಲಾಗಿತ್ತು.
ಅನುದಾನವನ್ನು ಕೆರೆ ಅಭಿವೃದ್ಧಿಗೆ ಬಳಸಲು ಶಾಸಕ ಸಿ.ಎಸ್. ಪುಟ್ಟ ರಾಜು ಶಿಫಾರಸು ಮಾಡಿದ್ದರು. ಆದರೆ, ಯೋಜನೆ ಅನುದಾನ ವನ್ನು ಸಂಪೂರ್ಣವಾಗಿ ಪಟ್ಟಣದ ಅಭಿವೃದ್ಧಿಗೆ ಬಳಸಬೇಕು. ಕೆರೆ ಅಭಿವೃದ್ಧಿ ಬೇಡ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಮುಂಖಡರು ಹೋರಾಟ ನಡೆಸಿದರು.
ಅನುದಾನ ಬಳಕೆಗೆ ವಿರೋಧ ಎದುರಾದ ಹಿನ್ನೆಲೆಯಲ್ಲಿ ಕೆರೆ ಅಭಿವೃದ್ಧಿಯನ್ನು ಉಪ ವಿಭಾಗಾಧಿಕಾರಿ ತಡೆ ಹಿಡಿದಿದ್ದಾರೆ.  ಈ ಸಂಬಂಧ ಕರೆದಿದ್ದ ಟೆಂಡರ್ ಪ್ರಕ್ರಿಯೆಯೂ ಸ್ಥಗಿತಗೊಂಡಿದೆ. ರಾಜಕೀಯ ರಂಪಾಟದಿಂದ ಕೆರೆ ಅಭಿವೃದ್ಧಿ ಕುಂಟಿತವಾಗಿದೆ.
ವಿಹಾರ ತಾಣವಾಗಿಸಲಿ: ಹಿರೋಡೆ ಕೆರೆಯು ಪಾಂಡವಪುರ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವುದರಿಂದ ಅದನ್ನು ವಿಹಾರ ತಾಣವನ್ನಾಗಿ ಸಲು ಯೋಜನೆ ರೂಪಿಸಬೇಕೆನ್ನುವ ಕೂಗು ಕೇಳಿ ಬಂದಿದೆ.
ಕೆರೆಯ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸಿ ಅಭಿ ವೃದ್ಧಿಪಡಿಸಿದ ನಂತರ ದೋಣಿ ವಿಹಾರ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸಿದಲ್ಲಿ ಪಟ್ಟಣ ಸುತ್ತಮುತ್ತಲ ಮಕ್ಕಳು, ಸಾರ್ವಜನಿಕರನ್ನು ಇಲ್ಲಿಗೆ ಸೆಳೆಯಬಹುದಾಗಿದೆ.

ನೋಂದಣಿ ಗಡುವು ಮತ್ತೆ ವಿಸ್ತರಣೆಗೆ ಪ್ರಯತ್ನ

ಶಿವಕುಮಾರ್ ಬೆಳ್ಳಿತಟ್ಟೆ  ಮೈಸೂರು
ಅನಧಿಕೃತ ಖಾಸಗಿ ವೈದ್ಯ ಸಂಸ್ಥೆಗಳ ಹಾವಳಿಗೆ ಕಡಿವಾಣ ಹಾಕುವ ಬದಲು ರಾಜ್ಯ ಸರಕಾರ ತಣ್ಣಗೆ ಕುಳಿತಿದೆ.
ಎಲ್ಲ ಸಂಸ್ಥೆಗಳಿಗೂ ಹೆಸರು ನೋಂದಣಿಗೆ ಈಗಾಗಲೇ ಎರಡು ಬಾರಿ ಗಡುವು ನೀಡಿತ್ತು. ಆದರೂ ಸಂಸ್ಥೆಗಳು ಇನ್ನೂ ನೋಂದಣಿ ಮಾಡಿಸದೇ ಸುಮ್ಮನಿವೆ. ಸರಕಾರವೂ ಯಾವ ಮುಜುಗರಕ್ಕೆ ಒಳಗಾಗಿದೆಯೋ ಗೊತ್ತಿಲ್ಲ. ಮತ್ತೊಂದು ಗಡುವು ನೀಡಲು ಮುಂದಾಗಿದೆ.
ಈ ಮಧ್ಯೆ ಜಿಲ್ಲಾಮಟ್ಟದಲ್ಲಿ ಸಂಸ್ಥೆಗಳ ವಿರುದ್ಧ  ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿದ್ದರೆ, ಉನ್ನತ ಮಟ್ಟದಲ್ಲಿ ಅಧಿಕಾರಿಗಳು ಇಂಥ ಸಂಸ್ಥೆಗಳಿಗೆ ಸಹಕರಿಸುತ್ತಿರುವ ಆರೋಪ ವ್ಯಕ್ತವಾಗಿದೆ. ಹಾಗಾಗಿ ‘ವೈದ್ಯ ಸಂಸ್ಥೆ ’ ಹೆಸರಿನಲ್ಲಿ ನಡೆಸಲಾಗುತ್ತಿರುವ  ಕ್ಲಿನಿಕ್, ಪಾಲಿಕ್ಲಿನಿಕ್, ನರ್ಸಿಂಗ್‌ಹೋಂ, ಡಯೋಗ್ನಾಸ್ಟಿಕ್ಸ್, ಮಸಾಜ್ ಚಿಕಿತ್ಸಾ  ಕೇಂದ್ರಗಳು, ವೈದ್ಯ ಸಲಹಾ ಕೇಂದ್ರಗಳು ದಂಧೆಯಲ್ಲಿ ತೊಡಗಿವೆ.
ವರ್ಷದ ಗಡುವು ?: ನಾಯಿಕೊಡೆಗಳಂತೆ ತಲೆ ಎತ್ತಿರುವ ಇಂಥ ಸಂಸ್ಥೆಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಸರಕಾರ  ‘ಕರ್ನಾಟಕ ಖಾಸಗಿ ವೈದ್ಯ ಸಂಸ್ಥೆಗಳ ಅಧಿನಿಯಮ-೨೦೦೭’ರ  ಕಾಯ್ದೆಗೆ ೨೦೦೯ರ ನವೆಂಬರ್‌ನಲ್ಲಿ ಹೊಸ ನಿಯಮಾವಳಿಯನ್ನು ಅನುಷ್ಠಾನಕ್ಕೆ ತಂದಿತ್ತು. ಆಗ ನೋಂದಣಿಗೆ (ಸಕ್ರಮಕ್ಕೆ ) ಫೆ. ೨೮ರ ವರೆಗೆ ಗಡುವು ನೀಡಲಾ ಗಿತ್ತು. ನಂತರ ಮಾ. ೧೫ರ ವರೆಗೆ ವಿಸ್ತರಿಸಲಾಯಿತು. ಈಗ ಪುನಾ ಮತ್ತೊಂದು ವರ್ಷ ಗಡುವು ವಿಸ್ತರಿಸಲು ನಿರ್ಧರಿಸಿದೆ. ಇದಕ್ಕೆ ಸಂಸ್ಥೆ ಗಳ ಲಾಬಿಯೇ ಕಾರಣ ಎನ್ನಲಾಗುತ್ತಿದೆ.
ಅಧಿಕಾರಿಗಳ ಅಸಮಾಧಾನ: ಅನೇಕ ಜಿಲ್ಲೆಗಳಲ್ಲಿ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು, ಅಧಿಕಾರಿಗಳೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಸರಕಾರದಿಂದಲೇ ನಿರಾಸಕ್ತಿ ವ್ಯಕ್ತವಾಗುತ್ತಿದೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಬೇಸರ.
ಮೈಸೂರು ಜಿಲ್ಲೆಯಲ್ಲಿ ೨೦೦೦ಕ್ಕೂ ಹೆಚ್ಚು ಸಂಸ್ಥೆಗಳ ಪೈಕಿ ೧೨೧೮ ಮಾತ್ರ ನೋಂದಣಿ ಪೂರೈಸಿವೆ. ಉಳಿದಂತೆ ೭೦೦ ಕ್ಕೂ ಅಧಿಕ ಸಂಸ್ಥೆಗಳು ಇತ್ತ ತಲೆ ಹಾಕಿಯೂ ಮಲಗಿಲ್ಲ. ಆ ಸಂಸ್ಥೆಗಳ ಬಳಿ ನಿಗದಿತ ಪರವಾನಗಿ ಹೊಂದಿಲ್ಲದಿರುವುದೇ ಕಾರಣ ಎಂಬುದು ಮೂಲಗಳ ವಿವರಣೆ.
ಈಗ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ, ಅಕ್ರಮ-ಸಕ್ರಮ ಪತ್ತೆ ಹಚ್ಚಬೇಕಿದೆ. ಈ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲೂ ಚರ್ಚಿಸಲಾಗಿದೆ. ಆದರೆ ಸರಕಾರ ಮತ್ತೆ ಗಡುವು ವಿಸ್ತರಣೆ ಮಾಡಿದರೆ ಕಷ್ಟ ಎನ್ನುತ್ತಾರೆ ಮೈಸೂರು ಜಿಲ್ಲಾ ನೋಡಲ್ ಆಧಿಕಾರಿ ಸೋಮಶೇಖರ್.
ಗಡುವು ವಿಸ್ತರಣೆ ಬೇಕಿತ್ತೇ ?: ಆರೋಗ್ಯ ಇಲಾಖೆ ನಿರ್ದೇಶನಾಲಯ ಈಗ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ಸರಕಾರಕ್ಕೆ ಸಲ್ಲಿಸಿದೆ. ಅದರಲ್ಲಿ ಸಂಸ್ಥೆಗಳ ನೋಂದಣಿಗೆ ವಿಧಿಸಿದ್ದ ಗಡುವು ವಿಸ್ತರಣೆ ಆಗಬೇಕೆಂಬುದೇ ಪ್ರಮುಖ ಕೋರಿಕೆ. ಈ ಮೊದಲು (ಅಧಿಸೂಚನೆ ಪ್ರಕಟಗೊಂಡ ದಿನದಿಂದ) ನೀಡಿದ್ದ  ೯೦ದಿನಗಳ ಗಡುವಿಗೆ ಬದಲಾಗಿ ೨೭೦ ದಿನ ನೀಡುವಂತೆ ಪ್ರಸ್ತಾಪಿಸಲಾಗಿದೆ. ವಿಧೇಯಕ ಕಾನೂನು ಮತ್ತು ಸಂಸದೀಯ ಇಲಾಖೆಯಲ್ಲಿದ್ದು ಮುಂದಿನ ಅಧಿವೇಶನದಲ್ಲಿ ಮಂಡನೆಯಾಗಬಹುದು. ಆನಂತರ ಈ ಸಂಸ್ಥೆಗಳಿಗೆ ಮತ್ತೊಂದು ಅವಕಾಶ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಈ ಯೋಜನೆಯ ನೋಡಲ್ ಅಧಿಕಾರಿ ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ರಮೇಶ್ ವಿವರಿಸುತ್ತಾರೆ.
ಮತ್ತೊಂದು ಸಬೂಬು:  ಖಾಸಗಿ ವೈದ್ಯ ಸಂಸ್ಥೆಗಳ ಸಮೀಕ್ಷೆ, ತಪಾಸಣೆ ಮತ್ತು ಅವುಗಳ ವಿರುದ್ಧ  ಕ್ರಮಕೈಗೊಳ್ಳಲು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ತಾಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿ ನೇತೃತ್ವದ  ಸಮಿತಿಗಳಿವೆ. ಆದರೆ ರಾಜ್ಯದಲ್ಲಿ ಇದನ್ನೆಲ್ಲ ಪರಿಶೀಲಿಸಲು ಯಾವುದೇ ಸಮಿತಿಗಳಿಲ್ಲ. ಆದ್ದರಿಂದ ಕಡಿಮೆ ಅವಧಿಯಲ್ಲಿ ಇದನ್ನು ಜಾರಿಗೊಳಿಸುವುದು ಕಷ್ಟಕರ. ಹಾಗಾಗಿ ಅವಧಿ ವಿಸ್ತರಣೆ ಅನಿವಾರ್ಯ ಎಂಬುದು ಇಲಾಖೆಯ ಮತ್ತೊಂದು ಸಬೂಬು.

ಉನ್ನತ ಶಿಕ್ಷಣ ಗುಣ, ಪ್ರಮಾಣ ವೃದ್ಧಿಗೆ ಕ್ರಮ

ವಿಕ ಸುದ್ದಿಲೋಕ ಮೈಸೂರು
ಹನ್ನೊಂದನೇ ಪಂಚವಾರ್ಷಿಕ ಯೋಜನೆ ಅಂತ್ಯ ದೊಳಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಪ್ರಮಾಣವನ್ನು ಶೇ.೧೦ರಿಂದ ೧೫ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಪ್ರೊ.ಸುಖದೇವ್ ಥೋರಟ್ ಹೇಳಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘ  ಮಂಗಳವಾರ  ಆಯೋಜಿಸಿದ್ದ ‘ಮಾಧ್ಯಮ ಸಂವಾದ’ದಲ್ಲಿ ಪಾಲ್ಗೊಂಡಿದ್ದ ಅವರು, ಉನ್ನತ ಶಿಕ್ಷಣ ಸುಧಾರಣೆಗೆ  ಹೇರಳ ಹಣ ಮೀಸಲಾಗಿದೆ. ಗುಣಮಟ್ಟ ಹೆಚ್ಚಳಕ್ಕೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
೨ನೇ ಅಲೆ: ೧೦ನೇ ಪಂಚವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣಕ್ಕೆ ದಕ್ಕಿದ ಅನುದಾನ ೪ ಸಾವಿರ ಕೋಟಿ ರೂ. ೧೧ನೇ ಪಂಚವಾರ್ಷಿಕ ಯೋಜನೆಗೆ (೨೦೦೭-೧೨) ಹತ್ತು ಪಟ್ಟು ಹೆಚ್ಚಿದ್ದು, ೪೮ ಸಾವಿರ ಕೋಟಿ ರೂ. ಅನುದಾನ ಮೀಸಲಾಗಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ೨ನೇ ಅಲೆ ಎದ್ದಿದೆ. ಶಿಕ್ಷಣದ ಗುಣಾತ್ಮಕತೆಗೆ ಬಾಧಕ ಆಗದಂತೆ ಗಮನ ವಹಿಸಲಾಗಿದೆ.
‘ಪ್ರಸ್ತುತ‘ ಶಿಕ್ಷಣ: ದೇಶದಲ್ಲಿ ೩೦ ಹೊಸ ಕೇಂದ್ರೀಯ ವಿವಿಗಳು ಆರಂಭವಾಗುತ್ತಿದ್ದು, ಈ ಪೈಕಿ ೧೫ ಚಟುವಟಿಕೆ ಆರಂಭಿಸಿವೆ. ೭ ಐಐಟಿ, ೭ ಐಐಎಂ, ೧ ಸಾವಿರ ಪಾಲಿಟೆಕ್ನಿಕ್‌ಗಳು ಸೇರಿ ೧,೪೬೨ ಹೊಸ ವಿದ್ಯಾಕೇಂದ್ರಗಳು ಪ್ರಾರಂಭವಾಗುತ್ತಿವೆ. ಪ್ರಸ್ತುತ  ಸ್ಪರ್ಧಾತ್ಮಕ  ಜಗತ್ತಿಗೆ ಅಗತ್ಯ ಶಿಕ್ಷಣ ನೀಡಲು ಒತ್ತು ನೀಡಲಾಗುತ್ತಿದೆ.
ಹೊಣೆ ನಿಗದಿ: ಬೋಧಕರಿಗೆ ಆರಂಭದಲ್ಲೇ ಅತ್ಯುತ್ತಮ ವೇತನ  (ಐಎಎಸ್ ಅಧಿಕಾರಿಗಳಿಗಿಂತ ಹೆಚ್ಚು ) ನೀಡಲಾಗುತ್ತಿದೆ. ಆಯ್ಕೆಯ ಮಾನದಂಡ ಗಳನ್ನು ಬಿಗಿಗೊಳಿಸಿದ್ದು, ಹೆಚ್ಚು ವೇತನ ನೀಡು ವುದಲ್ಲದೇ ಅದಕ್ಕೆ ತಕ್ಕಂತೆ ಕೆಲಸವನ್ನೂ ತೆಗೆಸಲಾಗುತ್ತಿದೆ. ಎಲ್ಲರಿಗೂ ಅವರದ್ದೇ ಹೊಣೆಗಾರಿಕೆ  ನಿಗದಿ ಪಡಿಸಿ ಚಟುವಟಿಕೆಗಳ ಮೇಲೂ ವಿವಿ ಕಣ್ಗಾವಲು ಇಡಲಿದೆ. ಬೋಧನೆ, ಸಂಶೋಧನೆ, ಶೈಕ್ಷಣಿಕ ಆಡ ಳಿತದ ಪ್ರಗತಿ ಆಧರಿಸಿಯೇ ಬಡ್ತಿ ಮತ್ತಿತರ  ಸೌಲಭ್ಯ ಕಲ್ಪಿಸಲಾಗುವುದು. ಸಂಶೋಧನೆಗಳ ಗುಣಮಟ್ಟ ವೃದ್ಧಿಗೂ ಅಗತ್ಯ ಮಾನದಂಡಗಳನ್ನು ರೂಪಿಸಲಾಗಿದೆ.
ಕೊಡುಕೊಳ್ಳುವಿಕೆ  ಓಕೆ: ವಿದೇಶಿ ವಿವಿಗಳ ಪ್ರವೇಶ ಪ್ರಸ್ತಾಪ ಸಂಸತ್ ಸ್ಥಾಯಿ ಸಮಿತಿ ಮುಂದಿದೆ. ತೊಂದರೆ ಆಗುತ್ತದೆಯೋ ಇಲ್ಲವೋ ಎನ್ನುವ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ಆದರೂ, ವಿದೇಶಿ ವಿವಿಗಳ  ಜತೆ ಒಡಂಬಡಿಕೆ, ಉತ್ಕೃಷ್ಟ ಜ್ಞಾನದ ಕೊಡುಕೊಳ್ಳುವಿಕೆ  ಅಪಾಯವೇನಲ್ಲ.
ಆಮಿಷವಲ್ಲವೇ: ಮೈಸೂರು ವಿವಿ ನೀಡಿದ ಗೌರವ ಡಾಕ್ಟರೇಟ್ ಸ್ವೀಕರಿಸಲು ನಗರಕ್ಕೆ ಆಗಮಿ ಸಿದ್ದ ಥೋರಟ್, ಈ ಕುರಿತ ಪ್ರಶ್ನೆಯಿಂದ ಮುಜುಗರಕ್ಕೆ ಒಳಗಾದರು.ಯುಜಿಸಿ ಅಧ್ಯಕ್ಷರು- ಸದಸ್ಯರಿಗೆ ವಿವಿಗಳು ಗೌರವ ಡಾಕ್ಟರೇಟ್ ನೀಡುವುದು ‘ಆಮಿಷ’ ಒಡ್ಡಿದಂತಲ್ಲವೇ? ಎನ್ನುವುದು ಪ್ರಶ್ನೆ.
‘ವಿವಿಗಳು ಸ್ವಾಯತ್ತ ಸಂಸ್ಥೆಗಳು. ಅವುಗಳಿಗೆ ಆಯ್ಕೆಯ ಸ್ವಾತಂತ್ರ್ಯವಿದೆ. ಆಯ್ಕೆ ಸಮಿತಿ ಅರ್ಹರನ್ನು ಆರಿಸುತ್ತದೆ. ಯಾವುದೋ  ಒಂದೆರಡು ಉದಾಹರಣೆಗಳನ್ನು ಮುಂದಿಟ್ಟುಕೊಂಡು ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲಾಗದು’ ಎನ್ನುವುದು ಥೋರಟ್ ಸಮಜಾಯಿಷಿ.
ರಾಜ್ಯ ಅನುದಾನ ಹೆಚ್ಚಿಸಲಿ: ಕೆಲ ವಿವಿಗಳು ರ‍್ಯಾಂಕ್ ವಿಜೇತರಿಗೆ ಚಿನ್ನದ ಪದಕದ ಬದಲು ೬೦ ರೂ.ಗಳ ಚೆಕ್ ನೀಡುತ್ತಿವೆ. ಇದು ವಿವಿಗಳ ಆರ್ಥಿಕ ಸಂಕಷ್ಟಕ್ಕೆ ನಿದರ್ಶನವೇ ಎಂಬ ಪ್ರಶ್ನೆಗೆ, ‘ವಿವಿಗಳಿಗೆ ಯುಜಿಸಿ ಶೇ.೪೦,ರಾಜ್ಯ ಸರಕಾರ ಶೇ.೬೦ ಅನುದಾನ  ನೀಡುತ್ತಿದೆ. ಯುಜಿಸಿ ಅನುದಾನ ಪ್ರಮಾಣವನ್ನು ೩ ಪಟ್ಟು ಹೆಚ್ಚಿಸಿದೆ. ಅಂತೆಯೇ ರಾಜ್ಯ ಸರಕಾರವೂ ತನ್ನ ಪಾಲನ್ನು ಹೆಚ್ಚಿಸಬೇಕು’ಎಂದು ಸಲಹೆ ನೀಡಿದರು.
ಮೂಗು ತೂರಿಸುವುದಿಲ್ಲ: ಖಾಸಗಿ ವಿವಿಗಳು ಮೀಸಲು ನಿಯಮ ಪಾಲಿಸದ ಕುರಿತ ಪ್ರಶ್ನೆಗೆ, ‘ ಖಾಸಗಿ ವಲಯ ಮೀಸಲು ನಿಯಮ ಪಾಲಿಸ ಬೇಕೆನ್ನುವ ಕುರಿತು ಯಾವುದೇ ಕಾನೂನು ಇಲ್ಲ. ಆದ್ದರಿಂದ  ಈ ವಿಷಯದಲ್ಲಿ ಯುಜಿಸಿ ಮೂಗು ತೂರಿಸದು’ ಎಂದು ಪ್ರತಿಕ್ರಿಯಿಸಿದರು. ಸಂಘದ ಅಧ್ಯಕ್ಷ ಕೆ.ಶಿವಕುಮಾರ್, ಪ್ರಧಾನ ಕಾರ‍್ಯದರ್ಶಿ ಬಿ.ಎಸ್.ಪ್ರಭುರಾಜನ್, ಉಪಾಧ್ಯಕ್ಷ ರಾಜೇಶ್ವರ್ ಹಾಜರಿದ್ದರು.

ಲಾಟರಿ ಜಾಕ್‌ಪಾಟ್, ವೋಟಿನ ಜತೆಗೆ ನೋಟು, ಗೊರಕೆ ಹೊಡೆದ ಅಭ್ಯರ್ಥಿ !

ಮೈಸೂರು
೩ ಬಾರಿ ಲಘು ಲಾಠಿ ಏಟು
ಗೆಲುವಿನ ಖುಷಿ ಅನುಭವಿಸಲು ಬಂದವರು, ಪೊಲೀಸರ ಬೆತ್ತದ ರುಚಿ ನೋಡಬೇಕಾಯಿತು.
ನಗರದ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕೇಂದ್ರದಲ್ಲಿ ಮಿತಿಮೀರಿ ಜಮಾಯಿಸಿದ್ದವರನ್ನು ಚದುರಿಸಲು ಪೊಲೀಸರು ಮೂರು ಬಾರಿ ಲಘುಲಾಠಿ ಪ್ರಹಾರ ನಡೆಸಬೇಕಾಯಿತು. ಇದರಿಂದ ಮೊದಲೇ ಪರಾಜಿತಗೊಂಡು ಕ್ರೋಧಗೊಂಡಿದ್ದ ವೆಂಕಟಲಕ್ಷ್ಮಿಸೇರಿದಂತೆ ಐದು ಮಂದಿಗೆ ಸಣ್ಣಪುಟ್ಟ ಪೆಟ್ಟಾಗಿದ್ದರಿಂದ ತಮ್ಮ ಆಕ್ರೋಶವನ್ನೆಲ್ಲಾ ಪೊಲೀಸರ ಮೇಲೆ ಪ್ರದರ್ಶಿಸಿದರು. ಬಳಿಕ ಅಕ್ಕ-ಪಕ್ಕ ನೆರೆದಿದ್ದವರು ಸಮಾಧಾನ ಪಡಿಸಿ ಕಳುಹಿಸಿದರು.
ಬೆಳಗ್ಗೆಯಿಂದಲೇ ಎಣಿಕೆ ಕೇಂದ್ರದ ಸುತ್ತ ಅಭ್ಯರ್ಥಿಗಳು, ಅವರ ಬೆಂಬಲಿಗರ ಜತೆಗೆ ವಿವಿಧ ಪಕ್ಷದ ಕಾರ‍್ಯಕರ್ತರು ಜಮಾ ಯಿಸಿದ್ದರು. ಮುಂಚಿತವಾಗಿ ಪಾಸ್‌ಹೊಂದಿದ್ದವರನ್ನು ಮಾತ್ರ ಒಳಗೆ ಬಿಡುತ್ತಿದ್ದರಿಂದ ಕಾಲೇಜಿನ ಎದುರು ಉಳಿದವರು ಫಲಿ ತಾಂಶಕ್ಕಾಗಿ ಕಾಯುತ್ತಾ ನಿಂತಿದ್ದರು. ಕೆಲವು ಸಮಯದ  ನಂತರ ಪೊಲೀಸರು ನಿರ್ಮಿಸಿದ್ದ ತಡೆಗೋಡೆಯನ್ನು ಉಲ್ಲಂಘಿಸಿ ಒಳಗೆ ನುಗ್ಗಲು ಯತ್ನಿಸಿದಾಗ ಜನರನ್ನು ನಿಯಂತ್ರಿಸಲು ಲಘುಲಾಠಿ ಪ್ರಹಾರ ನಡೆಸಿದರು. ಇದು ಆಗಾಗ್ಗೆ ಪುನರಾರ್ವತನೆಗೊಳ್ಳುತ್ತಿತ್ತು.
ಅಂಚೆ  ಮತ, ಲಾಟರಿ ಅದೃಷ್ಟ
ಇಬ್ಬರು ಲಾಟರಿ ಮೂಲಕದ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡರೆ ಮತ್ತೊಬ್ಬರಿಗೆ ಗೆಲುವು ತಂದಿದ್ದು ಅಂಚೆ ಮತ.
ಇಲವಾಲದ ಬಿ.ರೇಖಾ ಅವರಿಗೆ ಅಂಚೆ ಮೂಲಕ ಒಂದು ಮತದಿಂದ ವಿಜಯಲಕ್ಷ್ಮಿ ಒಲಿದಳು.
ಗ್ರಾಮ ಪಂಚಾಯಿತಿ ಎರಡನೇ ಬ್ಲಾಕ್‌ನಿಂದ ಸ್ಪರ್ಧಿಸಿದ್ದ ಬಿ.ರೇಖಾ ಹಾಗೂ ಇವರ ಪ್ರತಿಸ್ಪರ್ಧಿ ತಾರಾಮಣಿ ಅವರಿಗೆ ಚಲಾವಣೆಗೊಂಡು ಎಣಿಕೆ ಕಾಲಕ್ಕೆ ತಲಾ ೧೯೩ ಮತಗಳು ಬಂದು ಸಮಬಲ ಸಾಧಿಸಿದವು. ಈ ಸಮಯದಲ್ಲಿ ಅಂಚೆ ಮೂಲಕ ಮೂರು ಮತಗಳು ಚಲಾವಣೆಗೊಂಡಿದ್ದವು. ಇವುಗಳನ್ನು ಒಡೆದು ಎಣಿಕೆ ಮಾಡಿದಾಗ ರೇಖಾ ಅವರಿಗೆ ಎರಡು ಮತ ಹಾಗೂ ತಾರಾಮಣಿ ಅವರಿಗೆ ಒಂದು ಮತ ಬಂದಿದ್ದರಿಂದ ರೇಖಾ ಅವರು ಒಂದು ಮತದ ಅಂತರದಿಂದ ಗೆಲುವು ಕಂಡರು.
ಇದೇ ರೀತಿ ಬೋಗಾದಿಯ ಪುಟ್ಟೆಗೌಡ ಅವರು ಕಣ್ಣೇಗೌಡ ಅವರೊಂದಿಗೆ ಪಡೆದ ಮತಗಳು ೮೩೦. ಇವರಲ್ಲದೇ ಬೆಳವಾಡಿಯ ಮಹಾದೇವ ಅವರು ೪೩೦ ಮತ ಪಡೆದಿದ್ದರು. ಆಗ ಲಾಟರಿ ಮೂಲಕ ಜಯ ನಿರ್ಧರಿಸಲಾಯಿತು. ಪುಟ್ಟೇಗೌಡ, ಮಹಾದೇವ ಅವರು ಲಾಟರಿಯಿಂದ ಗೆದ್ದರು.
ಅಸಮಾಧಾನ
ಅಂಚೆ ಮತದ ಮೂಲಕ ಒಂದು ಮತದಿಂದ ಸೋಲುಂಡ ತಾರಾಮಣಿ, ಮರು ಎಣಿಕೆ ನಡೆಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಆದರೆ ಅಧಿಕಾರಿಗಳು ಇದಕ್ಕೆ ಅವಕಾಶ ನೀಡದಿದ್ದರಿಂದ ತಾರಾಮಣಿ ಅಸಮಾಧಾನದಿಂದಲೇ ಗೊಣಗುತ್ತಾ ಎಣಿಕೆ ಕೇಂದ್ರದಿಂದ ಹೊರ ನಡೆದರು. ದೂರ ಗ್ರಾಮ ಪಂಚಾಯಿತಿಯಿಂದ ಸ್ಪರ್ಧಿಸಿದ್ದ ಎಂ.ಕುಮಾರ್ ಎಂಬುವವರು  ತನ್ನ ವಿಕಲಚೇತನದ ನಡುವೆಯೂ ಸತತ ಎರಡನೇ ಸಾರಿ ಜಯಗಳಿಸಿದರು.
ಸಿಬ್ಬಂದಿ ಹರತಾಳ
ಊಟದ ವ್ಯವಸ್ಥೆ ಮಾಡಲಿಲ್ಲ ಎಂದು ಸಿಬ್ಬಂದಿ ದಿಢೀರ್ ಪ್ರತಿಭಟನೆ ನಡೆಸಿದ್ದೂ ನಡೆಯಿತು. ೯ರ ಹೊತ್ತಿಗೆ ಊಟ ಬಂದಾಗ ಸಿಬ್ಬಂದಿ ಅಲ್ಲಿಗೆ ಆಗಮಿಸಿದರು. ಅಷ್ಟು ಹೊತ್ತಿಗೆ ಮಳೆ ಬಂದಿದ್ದರಿಂದ ಒಳಗಡೆ ಇದ್ದ ಅಭ್ಯರ್ಥಿಗಳ ಕಡೆಯವರು ಊಟ ಮುಗಿಸಿದರು. ಸಿಬ್ಬಂದಿಗೆ ಊಟ ಸಿಗಲೇ ಇಲ್ಲ. ಇದರಿಂದ ಬೇಸರಗೊಂಡ ಸಿಬ್ಬಂದಿ ಪ್ರತಿಭಟನೆಯನ್ನು ನಡೆಸಿದರು. ಆಗ ತಹಸಿಲ್ದಾರ್ ಮಂಜುನಾಥ್ ಮನ ಒಲಿಸಲು ಹರಸಾಹಸ ಪಡಬೇಕಾಯಿತು.

ರಂಗಾಯಣದಲ್ಲಿ ‘ಮಕ್ಕಳ ಮೇಳ’ದ ಕೊನೇ ದಿನ

ವಿಕ ಸುದ್ದಿಲೋಕ ಮೈಸೂರು
ನಾಟಕ, ಸಂಗೀತ, ಗೀತೆಗಳ ಗುಂಗಿನಲ್ಲಿ ಮುಳುಗೇಳುವ ರಂಗಾಯಣ, ಕಲಾಮಂದಿರದ ಹೊರ ಅಂಗಳ ಭಾನುವಾರ ದಂದು ಎಂದಿನಂತಿರಲಿಲ್ಲ. ಇಡೀ ಆವರಣದಲ್ಲಿ ಹಳ್ಳಿ ಸಂತೆ ವಾತಾವರಣ ಯಥಾವತ್ ಅನಾವರಣಗೊಂಡಿತು !
ಮಕ್ಕಳ ಗಲಗಲ ಸದ್ದು... ಗಿಜಿಗಿಜಿ ಗಲಾಟೆ... ಕಾಲುಗಳಿಗೆ ತೊಡರುವ ಮಕ್ಕಳ ನಡುವೆಯೇ ದಾರಿ ಮಾಡಿಕೊಂಡು ಸಂತೆ ಬೀದಿಯಲ್ಲಿ ನಗು ನಗುತ್ತಲೇ ಸಾಗಿದ ಹಿರಿಯರು... ಕುಳಿತ ಲ್ಲಿಂದ ಎದ್ದು ಬಂದು ಗಿರಾಕಿಗಳಿಗೆ ಮುಗಿಬಿದ್ದ ಪುಟಾಣಿ ವ್ಯಾಪಾರಿಗಳು... ಎತ್ತ ಹೋಗುವುದೆಂದು ಅರಿಯದೇ ದಿಕ್ಕೆಟ್ಟು ನಿಂತ ಗ್ರಾಹಕರು... ಆ ಅಪ್ರಬುದ್ಧ ವ್ಯಾಪಾರಿಗಳ ಹಿಂದೆ ನಿಂತು ವ್ಯಾಪಾರದ ಒಳಗುಟ್ಟು ಹೇಳಿಕೊಡುತ್ತಿದ್ದ ಹೆತ್ತವರು...
ಅದು ‘ದೇಸಿ ಚಿಣ್ಣರ ಮೇಳ’ದ ಕೊನೇ ದಿನದ ಸಂಭ್ರಮ. ಮಕ್ಕಳಿಗೇ ಮೀಸಲಾದ ‘ಚಿಣ್ಣರ ಸಂತೆ’. ಅಲ್ಲಿ ಅವರೇ ವ್ಯಾಪಾರಿಗಳು. ಮಕ್ಕಳೊಡನೆ ಪೋಷಕರೂ ಗ್ರಾಹಕರಾಗಿ ದ್ದರು. ಮರದ ನೆರಳಿನಲ್ಲಿ ವ್ಯಾಪಾರ ಭರಾಟೆ ಸಾಗಿತ್ತು.
ಅಂಕಲ್, ಆಂಟಿ... ಗರ‍್ಮಗರ‍್ಮ ಕಡ್ಲೆಪುರಿ ತಗೊಳ್ಳಿ, ನಾಲಗೆ ಚಪ್ಪರಿಸುವ ಚಕ್ಕುಲಿ, ಕೋಡುಬಳೆ, ರೊಟ್ಟಿ ಚೆಟ್ನಿ ತಗೊಳ್ಳಿ, ನಿಂಬೆ ಜ್ಯೂಸ್ ತುಂಬಾ ಚೆನ್ನಾಗಿದೆ, ಬಟ್ಟೆ ಬ್ಯಾಗ್ ಕೇವಲ ೧೫ ರೂ... ಇಲ್ ಬನ್ನಿ ಅಂಕಲ್... ಎನ್ನುತ್ತಾ ಕೂಗಿ ಕರೆದದ್ದೇ ಕರೆದದ್ದು. ಸ್ಯಾರಿ ಉಟ್ಟ ಪುಟ್ಟ ಪೋರಿ ಸೊಪ್ಪೋ ಸೊಪ್ಪೋ.. ಎಂದು ಸಾರುತ್ತಾ ಮಾರುತ್ತಿದ್ದದ್ದು ಗಮನ ಸೆಳೆಯಿತು. ಕಡ್ಲೇಕಾಯಿ ಮಾರಾಟವೂ ಜೋರಿತ್ತು. ತಮ್ಮ ಮಕ್ಕಳೊಳಗಿನ ‘ವ್ಯಾಪಾರಿ’ಯ ಕಂಡು ಅಚ್ಚರಿ, ಖುಷಿ ಹೆತ್ತವರಿಗೆ.
ಈ ಸಂತೆಯೊಳಗೆ ಏನಿಲ್ಲ: ನೀರು ಮಜ್ಜಿಗೆ, ಕೋಸುಂಬರಿ, ಸೌತೆಕಾಯಿ, ಪಾನಿಪೂರಿ, ಕಡ್ಲೆಪುರಿ, ಚುರುಮುರಿ, ಮಂಡಕ್ಕಿ, ಅಕ್ಕಿರೊಟ್ಟಿ, ಮಸಾಲೆ ಮಾವಿನಕಾಯಿ, ಕೊಬ್ಬರಿ ಮಿಠಾಯಿ, ಚಾಕಲೇಟ್, ಕೋಡುಬಳೆ, ಚಕ್ಕುಲಿ, ನಿಪ್ಪಟ್ಟು, ರವೆಉಂಡೆ, ಪ್ರೂಟ್ ಸಲಾಡ್, ತೆಂಗಿನಕಾಯಿ, ಸೊಪ್ಪು-ತರಕಾರಿ, ಮಾವು, ಹಲಸು, ಬಾಳೆ ಹಣ್ಣು, ಹೂವು, ಆಟಿಕೆಗಳು, ಪುಸ್ತಕಗಳು, ಬಳೆ, ರಿಬ್ಬನ್, ಕೊರಳ ಸರಗಳು, ಮಣ್ಣಿನ ಹಣತೆಗಳು, ಮಣ್ಣಿನ ಗೊಂಬೆ ಗಳು... ಹೀಗೆ ತರೇಹವಾರಿ ವಸ್ತುಗಳ ಅಲ್ಲಿ ಲಭ್ಯವಿದ್ದವು.
ಕೆಲ ಮಕ್ಕಳು ರೆಡಿಮೇಡ್ ತಿನಿಸುಗಳನ್ನು ಅಂಗಡಿಯಿಂದ ತಂದು ಮಾರಾಟಕ್ಕಿಟ್ಟಿದ್ದರೆ, ಇನ್ನು ಹಲವರು ಮನೆಯಲ್ಲಿ ಅಮ್ಮ ತಯಾರಿಸಿಕೊಟ್ಟಿದ್ದ ತಿನಿಸುಗಳನ್ನು ಮಾರುತ್ತಿದ್ದರು. ಮಕ್ಕಳು ಗಿರಾಕಿಗಳನ್ನು ಕಾಡಿ, ಬೇಡಿ, ಕೈಹಿಡಿದು ಎಳೆದೊಯ್ದು ವ್ಯಾಪಾರ ಮಾಡಿಸಿದ್ದು ಕಂಡು ಬಂದಿತು. ಬಿದಿರಿನ ಬುಟ್ಟಿ ಯಲ್ಲಿ ಸ್ಕೆಚ್ ಪೆನ್ನು, ಪೆನ್ಸಿಲ್, ರಬ್ಬರ್ ಇಟ್ಟುಕೊಂಡು ಮಾರುತ್ತಿದ್ದಳು ಪುಟಾಣಿಯೊಬ್ಬಳು. ತಮ್ಮ ಪದಾರ್ಥಗಳು ಮಾರಾಟವಾಗಿ ಕೈಗೆ ಕಾಸು ಬರುತ್ತಿದ್ಧಂತೆ ಮುಖವರಳಿಸಿ ನಿಲ್ಲುವ ಅವರ ಸಂಭ್ರಮ ಅವರ್ಣೀಯ.
‘ಅಮ್ಮ ತಾಯಿ...’ ಭಿಕ್ಷುಕರು: ಭಿಕ್ಷೆ ಬೇಡುವ ಆಧುನಿಕ ಭಿಕ್ಷುಕರೂ ಅಲ್ಲಿದ್ದರು. ಹರಕಲು ಪ್ಯಾಂಟ್, ಟೀ ಶರ್ಟ್ ತೊಟ್ಟ ಅನನ್ಯ ಮತ್ತವನ ಗೆಳೆಯ ಭಿಕ್ಷೆಗಿಳಿದಿದ್ದರು. ಎರಡೂ ಕಾಲಿಲ್ಲದ (ನಕಲಿ)ವಿಕಲಚೇತನನೊಬ್ಬ ಪುಟ್ಟ ನಾಲ್ಕು ಚಕ್ರ ಗಳಿದ್ದ ಹಲಗೆಯ ಮೇಲೆ ತೆವಳುತ್ತಲೇ ಸಾಗಿ, ವ್ಯಾಪಾರಿಗಳು ಕನಿಕರ ತೋರುವಂತೆ ಮಾಡಿದ. ಪಕ್ಕದಲ್ಲೇ ಮುತ್ತುರಾಜ್ ಟೂರಿಂಗ್ ಟಾಕೀಸ್‌ನ ಟೆಂಟ್ ತಲೆಎತ್ತಿ ಸಿನಿಮಾ ಪ್ರದರ್ಶಿಸಿತು. ಶಿಬಿರದ ಮಕ್ಕಳ ಆಟೋಟಗಳನ್ನು ಚಿತ್ರದಲ್ಲಿ ತೋರಿಸಲಾಯಿತಲ್ಲದೇ, ನಡುವೆ ರಾಜಕುಮಾರ್ ಚಿತ್ರದ ತುಣುಕುಗಳೂ ಪ್ರದರ್ಶನಗೊಂಡಿತು. ಅಪ್ಪ, ಅಮ್ಮ ನಿಂದ ಕಾಸು ಪಡೆದ ಮಕ್ಕಳು ಸಿನಿಮಾ ನೋಡಿ ಖುಷಿಪಟ್ಟರು.
ರಂಗಾಯಣದ ಪ್ರಭಾರ ನಿರ್ದೇಶಕ ಕಾ.ತ. ಚಿಕ್ಕಣ್ಣ, ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡರು ಸಂತೆಯಲ್ಲೊಂದು ಸುತ್ತು ಬಂದು ಮಕ್ಕಳ ವ್ಯಾಪಾರ ವೈಖರಿಗೆ ತಲೆದೂಗಿದರು. ‘ಮುರ್ಖರ ಪೆಟ್ಟಿಗೆಯೊಳಗೆ ಕಳೆದು ಹೋಗ ಬಹುದಾಗಿದ್ದ ಸಮಯವನ್ನು ಮಕ್ಕಳು ಈ ರೀತಿಯ ಕ್ರಿಯಾ ಶೀಲ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದು ಖುಷಿಯಾ ಗಿದೆ’ ಎನ್ನುವುದು ಪೋಷಕರ ಅನಿಸಿಕೆಯಾಗಿತ್ತು.
ಅಂಬಾರಿ ಆನೆ ಸವಾರಿ
ಬೆನ್ನ ಮೇಲೆ ಚಿನ್ನದಂಬಾರಿ ಹೊತ್ತ ಆನೆ ವೇಷಧಾರಿಗಳು ಸಂತೆಗೆ ಬಂದು ವ್ಯಾಪಾರಿಗಳು ನೀಡುವ ತಿಂಡಿ ತಿನಿಸುಗಳಿಗಾಗಿ ಸೊಂಡಿಲಿನಲ್ಲಿ ಚಾಚಿದರು. ಸಿಕ್ಕಿದ್ದನ್ನು ಬಾಚಿ ದರು. ಮಕ್ಕಳು ಕಣ್ಣರಳಿಸಿ ನೋಡು ವಂತೆ ಮಾಡಿತು. ಮೈಮ್ ರಮೇಶ್ ನೇತೃತ್ವದ ತಂಡ ವೊಂದು ನವಿಲು, ಕುಕ್ಕುಟ, ಆನೆ ಮುಖವಾಡ ತೊಟ್ಟು, ಪುರಾಣದ ಮಂತ್ರಿ ಮಹೋದಯರ ಧಿರಿಸು ಉಟ್ಟು, ಭಾಜಾ ಭಜಂತ್ರಿ ಹಿಡಿದು ತಮಟೆ ಬಾರಿಸುತ್ತಾ ಸಂತೆ ಸುತ್ತಿ ರಂಜಿಸಿತು.
ಪರಿಸರ ಪ್ರೇಮ
ಬಟ್ಟೆ ಬ್ಯಾಗ್ ಮಾರುತ್ತಿದ್ದ ಸಂಜಯ್ ಪರಿಸರ ಉಳಿಸುವಂತೆ ಮನವಿ ಮಾಡುವ ಕರಪತ್ರಗಳನ್ನು ಹಂಚುತ್ತಾ ತನ್ನ ಪರಿಸರ ಪ್ರೇಮ ಮೆರೆದ. ಪ್ಲಾಸ್ಟಿಕ್ ಕೈಚೀಲ ತ್ಯಜಿಸಿ -ಬಟ್ಟೆ ಚೀಲ ಬಳಸಿ, ಪ್ಲಾಸ್ಟಿಕ್ ಕೈಚೀಲ ತ್ಯಜಿಸಿ- ಪರಿಸರ ಉಳಿಸಿ... ಇತ್ಯಾದಿ ನೀತಿಪಾಠವಿದ್ದ ಕರ ಪತ್ರದ ಕೊನೆಯಲ್ಲಿ -‘ಈ ಸುದ್ದಿ ಯನ್ನು ಓದಿ ೯ ಜನಕ್ಕೆ ಕೊಡಿ. ಸದ್ಯದಲ್ಲೇ ನಿಮಗೆ ಭೂಮಾತೆ ಒಳ್ಳೆಯದನ್ನು ನೀಡುತ್ತಾಳೆ. ತಪ್ಪಿದ್ದಲ್ಲಿ ತೊಂದರೆ ಖಚಿತ, ಎಚ್ಚರವಾಗಿರಿ’ ಎನ್ನುವ ಒಕ್ಕಣೆಯೂ ಇದ್ದದ್ದು ಗಮನಾರ್ಹ.

‘ಮಾರ‍್ಸ್’ ನಿಂದ ಆಕಾಶಕಾಯ ಪರಿಚಯ


ವಿಕ ಸುದ್ದಿಲೋಕ ಮೈಸೂರು
‘ದೇವರ ಪೆಪ್ಪರಮೆಂಟೇನಮ್ಮ ಗಗನದಳೊಳೆ ಯುವ ಚಂದಿರನು...?’ ಎಂದು ರಸಋಷಿ ಕುವೆಂಪು ಮಗುವಿನ ಮುಗ್ಧ ಮನಸ್ಸಿನ ಕುರಿತು ಬರೆದರೆ, ‘ತಾರೆಗಳ ಜರತಾರಿ ಅಂಗಿ ತೊಡಿಸು ವರಂತೆ, ಚಂದಿರನ ತಂಗಿ ಯರು ನಿನ್ನ ಕರೆದು...’ ಎಂದು ಮಗುವನ್ನು ಸಂತೈಸಲು ಕವಿ ಕೆ.ಎಸ್. ನರಸಿಂಹ ಸ್ವಾಮಿ ಕವನ ಬರೆದಿದ್ದಾರೆ.
ಮಕ್ಕಳ ಪಾಲಿನ ಚಂದ ಮಾಮನೇ ಹಾಗೆ. ಭೂಮಿಯ ಉಪಗ್ರಹವೂ ಆಗಿರುವ ಚಂದ್ರ ಕವಿಗಳಷ್ಟೇ ಅಲ್ಲ, ವಿಜ್ಞಾನಿ-ಸಂಶೋಧಕರು, ಖಗೋಳ ವಿಜ್ಞಾನಿಗಳು ಸೇರಿದಂತೆ ಎಲ್ಲರ ಪಾಲಿಗೂ  ಯಾವತ್ತೂ ಆಕರ್ಷಣೆಯ   ತಾರೆ. ಇಂಥ ಚಂದ್ರ ವಾಸ್ತವವಾಗಿ ಹೇಗಿರುತ್ತಾನೆ ?, ಆತನಷ್ಟೇ ಅಲ್ಲ.  ಸೌರವ್ಯೂಹದಲ್ಲಿರುವ  ಇತರೆ ಆಕಾಶಕಾಯಗಳು, ಅವುಗಳ  ಉಪಗ್ರಹಗಳು ಹೇಗಿರುತ್ತವೆ ?, ಅವುಗಳನ್ನು ವೈಜ್ಞಾನಿಕ ನೆಲೆಯಲ್ಲಿ  ಗ್ರಹಿಸಿಕೊಳ್ಳುವುದು, ಅರ್ಥಮಾಡಿಕೊಳ್ಳುವುದು ಹೇಗೆ ?, ಅವುಗಳ ರಚನೆ ಹೇಗಿರುತ್ತದೆ ?, ಸೌರಗ್ರಹಗಳ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಹೇಗೆ ...?
ಇಂಥ ಕುತೂಹಲ ಭರಿತ ಹತ್ತಾರು  ಪ್ರಶ್ನೆಗಳು ಮಕ್ಕಳ ಮನಸ್ಸಿನಲ್ಲಿ ಮೂಡುವುದು ಸಹಜ. ನಗರ ಪ್ರದೇಶದಲ್ಲಿ ಕಲಿಯುವವರಿಗೆ ಯಾರಾದರೂ ಉತ್ತರ ಹೇಳಿಯಾರು. ಆದರೆ, ಗ್ರಾಮೀಣ ಮಕ್ಕಳಿಗೆ, ಶಾಲೆಯಿಂದ ಹೊರಗುಳಿದ ಚಿಣ್ಣರಿಗೆ ತಿಳಿಸುವವರು ಯಾರು? ಈ ನೆಲೆಯಲ್ಲೇ ೧೪ ತಿಂಗಳ ಹಿಂದೆ ಆರಂಭವಾಗಿದ್ದು  ‘ಮೈಸೂರು ಅಸ್ಟ್ರಾನಮಿಕಲ್ ರೀಸರ್ಚ್  ಸೊಸೈಟಿ(ಮಾರ‍್ಸ್ )’ ಸಂಸ್ಥೆ,  ಸುಮಾರು ೪೫ ಸಾವಿರ ಮಕ್ಕಳಿಗೆ ಆಕಾಶಕಾಯಗಳನ್ನು ಪರಿಚಯಿಸಿದೆ.
ರೋಟರಿ ಮೈಸೂರು ಮಿಡ್‌ಟೌನ್‌ನ ೨೫ ಲಕ್ಷ ರೂ. ಪ್ರಾಯೋಜಕತ್ವದ ನೆರವಿನೊಂದಿಗೆ ಮಾರ‍್ಸ್  ತನ್ನಲ್ಲಿಗೆ ಬರುವ ಮಕ್ಕಳಿಗೆ ಆಕಾಶಕಾಯಗಳನ್ನು ತೋರಿಸುವ ಕಾಯಕದಲ್ಲಿ ನಿರತವಾಗಿದೆ.  ಇದಕ್ಕಾಗಿ  ಹೂಟಗಳ್ಳಿಯಲ್ಲಿರುವ ರೋಟರಿ ಮಿಡ್‌ಟೌನ್ ಅಕಾಡೆಮಿ ಸ್ಕೂಲ್‌ನ ಆವರಣದಲ್ಲಿ  ಎರಡು ಟೆಲಿಸ್ಕೋಪ್‌ಗಳ (ದೂರದರ್ಶಕ)ನ್ನ ಅಳವಡಿಸಲಾಗಿದೆ. ಸುಸಜ್ಜಿತ ವಾಹನವೂ ಇದೆ. ಮಾರ‍್ಸ್ ನ  ಈ ಯೋಜನೆಯಲ್ಲಿ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಚಿರಂಜೀವಿ, ಅಧ್ಯಾಪಕ ಎಸ್.ಎ. ಮೋಹನ್‌ಕೃಷ್ಣ, ಅಜೀಜ್ ಉಲ್ಲಾ  ಸಂಪನ್ಮೂಲ ವ್ಯಕ್ತಿಗಳು. ೨೦೦೯ನೇ ಇಸ್ವಿ ಯನ್ನು ಅಂತಾರಾಷ್ಟ್ರೀಯ ಖಗೋಳ ವರ್ಷ ಎಂದು ಘೋಷಿಸಲಾಯಿತು. ಇದನ್ನು ಅರ್ಥ ಪೂರ್ಣವಾಗಿ ಆಚರಿಸಲೆಂದೇ ಈ ಸಂಸ್ಥೆ ಜನ್ಮತಾಳಿತು. ಆಕಾಶಕಾಯಗಳ ಬಗ್ಗೆ ಟೆಲಿಸ್ಕೋಪ್ ಮೂಲಕ ಅವುಗಳನ್ನು ತೋರಿಸಿ ಜಾಗೃತಿ ಮೂಡಿಸುವುದು,  ಸೌರವ್ಯೂಹದ ಬಗ್ಗೆ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ರೀತಿಯ ಚಟುವಟಿಕೆ ಇದರ ಜೀವಾಳ.
ಮಕ್ಕಳಿಗೆ ಮುಕ್ತ ಆಹ್ವಾನ
ಆಸಕ್ತರು ಮಾರ‍್ಸ್  ಸಂಪರ್ಕಿಸಬಹುದು. ರೋಟರಿ ಮಿಡ್‌ಟೌನ್ ಅಕಾಡೆಮಿ ಸ್ಕೂಲ್‌ನಲ್ಲಿರುವ ೧೪ ಇಂಚು ಮತ್ತು ೮ ಇಂಚಿನ ಎರಡು ಸೆಲೆಸ್ಟ್ರಾನ್ ಟೆಲಿಸ್ಕೋಪ್‌ಗಳ ಮೂಲಕ, ಆಕಾಶ ಕಾಯಗಳನ್ನು ತೋರಿಸಲಿದೆ. ವಾರದಲ್ಲಿ ಎರಡು ಬಾರಿ ಇದರ ಲಾಭ ಪಡೆಯಬಹುದು. ಕೆಲವೊಮ್ಮೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ತೆರಳಿ, ಅಲ್ಲಿಯೇ ಸ್ಥಳೀಯರಿಗೆ ಆಕಾಶಕಾಯಗಳನ್ನು  ತೋರಿಸಲಿದೆ. ಸಂಸ್ಥೆಯ ಚಿಕ್ಕ ಅಳತೆಯ ಟೆಲಿಸ್ಕೋಪ್, ಪ್ರೊಜೆಕ್ಟರ್ ತೆಗೆದು ಕೊಂಡು ಹೋಗಿ, ಹಳ್ಳಿಯ ಜನರಿಗೆ  ಸೌರವ್ಯೂಹದ ನೈಜ ಸೌಂದರ್ಯವನ್ನು ತೋರಿಸುತ್ತಿದೆ.
ಸಂಪರ್ಕಿಸಿ- ೯೪೮೦೪೭೭೭೭೬, ೯೬೨೦೧೯೫೧೯೨ (ಚಿರಂಜೀವಿ).

ವೈಶಾಖದ ಶಾಖವನ್ನೂ ಮೆಟ್ಟಿ ನಿಂತ ಮತದಾನೋತ್ಸಾಹ !

ಚೀ. ಜ. ರಾಜೀವ ಮೈಸೂರು
ನೆತ್ತಿ ಸುಡುವ ಬಿಸಿಲನ್ನೂ ಮಣಿಸಿದ ಮತದಾರರ ಅತ್ಯುತ್ಸಾಹ...  ಅಭ್ಯರ್ಥಿಗಳ ಮನೆಯಲ್ಲಿ   ಬಾತು- ಮೊಸರನ್ನದ ಸಮಾರಾಧನೆ... ಬ್ಯಾಲೆಟ್ ಪೇಪರ್‌ನಲ್ಲಿ ಮತ ಚಲಾಯಿಸಲು  ‘ಸಾಹಸ’ ಪಟ್ಟ ಮತದಾರರು....!
ಜಿಲ್ಲೆಯ ೨೩೫ ಗ್ರಾಮ ಪಂಚಾಯಿತಿಗಳ ೪೦೮೦ ಸ್ಥಾನಗಳಿಗೆ ಬುಧವಾರ ನಡೆದ ಮತದಾನ ಹೆಚ್ಚು-ಕಡಿಮೆ ಸಾಗಿದ್ದೇ ಹೀಗೆ.
ಮೂರು ಸ್ತರದ ಪಂಚಾಯತ್ ರಾಜ್ ವ್ಯವಸ್ಥೆಯ ಮುಖ್ಯ ಬುನಾದಿ ಎನ್ನಬಹುದಾದ ಗ್ರಾಮ ಪಂಚಾಯಿತಿ  ‘ಮೆಂಬರ್‌ಗಳ’ ಆಯ್ಕೆ ಪ್ರಕ್ರಿಯೆ  ಒಂದರ್ಥದಲ್ಲಿ  ಜನರ ರಣೋತ್ಸಾಹ ವರ‍್ಸಸ್ ರಣಬಿಸಿಲು ಎಂಬಂತಿತ್ತು. ಮತದಾನ ಪ್ರಕ್ರಿಯೆ ವೀಕ್ಷಣೆಗೆಂದು ಮೈಸೂರು, ಕೆ.ಆರ್. ನಗರ, ಹುಣಸೂರು, ಪಿರಿಯಾಪಟ್ಟಣ ಮತ್ತು  ಎಚ್.ಡಿ.ಕೋಟೆ ತಾಲೂಕಿನ ಕೆಲವು  ಗ್ರಾಮಗಳಿಗೆ ತೆರಳಿದ್ದ  ಮೈಸೂರು  ಪತ್ರಕರ್ತರ ತಂಡ ಸಾಮಾನ್ಯವಾಗಿ ಗಮನಿಸಿದ ಅಂಶ- ರೈತಾಪಿ ಜನರ ಮಿತಿ ಮೀರಿದ ಉತ್ಸಾಹ !
ಹೇಳಿ-ಕೇಳಿ ಚುನಾವಣೆ ನಡೆಯುತ್ತಿರುವುದೇ ಅಧಿಕ ವೈಶಾಖ ಮಾಸದಲ್ಲಿ. ಹಾಗಾಗಿ ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೂ  ಎಲ್ಲ ಕಡೆಯೂ ಬಿಸಿಲೋ ಬಿಸಿಲು. ಮತದಾನ ಆರಂಭವಾದ ಮೊದಲ ಮೂರು  ಗಂಟೆ ಹೊರತು ಪಡಿಸಿ, ಉಳಿದ ೭ ಗಂಟೆ ಕಾಲ ಬಿಸಿಲಿನದ್ದೇ ಆಟ. ಹೀಗಿದ್ದರೂ ಮತದಾನ ಮಾಡುವವರ ಉತ್ಸಾಹಕ್ಕೆ ಕೊನೆ ಇರಲಿಲ್ಲ. ಬಹಳಷ್ಟು ಕಡೆ  ಹೊಲ-ಗದ್ದೆಯ ಕೆಲಸಕ್ಕೆ ರಜೆ ನೀಡಿ,  ಚುನಾವಣೆ ಊರ ಹಬ್ಬವೇನೋ ಎಂಬಂತೆ ಸಂಭ್ರಮಿಸುತ್ತಿದ್ದರು.
ಹುಣಸೂರು ತಾಲೂಕು ಗೋವಿಂದನಹಳ್ಳಿ ಗ್ರಾ. ಪಂ. ವ್ಯಾಪ್ತಿಯ ಆಜಾದ್ ನಗರದಲ್ಲಿ  ಮಟಮಟ ಮಧ್ಯಾಹ್ನ ಮತದಾನ ಕೇಂದ್ರದ ಬಳಿಗೆ ನಡೆದು ಕೊಂಡು ಬರುತ್ತಿದ್ದ  ೭೫ರ ವೃದ್ಧೆಗೆ, ಬಿಸಿಲಿನಲ್ಲೂ  ಓಟ್ ಮಾಡಲು ಬಂದಿರುವೆಯಾ ಅಜ್ಜಿ  ಎಂದು ಪ್ರಶ್ನಿಸಿದರೆ- ‘ಅಯ್ಯೋ, ಯಾವ ಬಿಸಿಲು ಮಗ. ನಮ್ಮ ಮೊಮ್ಮಗನೇ ಮೆಂಬರ್ ಆಗೋಕೆ ನಿಂತಿದ್ದಾನೆ. ನಾನು ಓಟ್ ಕೇಳದಿದ್ರೆ ಹೇಗೆ ?, ಮನೆಯ ಎಲ್ಲರೂ ಇಲ್ಲಿ ನಿಂತಿದ್ದೇವೆ...!’ ಎಂದು ನಮಗೆ ದಂಡು ಬಡಿಸಿದರು. ಬಹಳಷ್ಟು ಜನ ತಲೆಗೆ ಕರ್ಚಿಫ್ ಇಲ್ಲವೇ ಟವೆಲ್ ಸುತ್ತಿಕೊಂಡು ಕಡೆ ಕ್ಷಣದ ರಾಜಕೀಯದಲ್ಲಿ ನಿರತರಾಗಿ ದ್ದರು. ಕೆಲವರನ್ನು ಛತ್ರಿಯ ಆಸರೆಯಲ್ಲಿ ಕರೆತರುತ್ತಿದ್ದರು.
ಮತಕೇಂದ್ರದಿಂದ ೧೦೦ ಮೀಟರ್ ವ್ಯಾಪ್ತಿಯಲ್ಲಿ ಮತಯಾಚಿಸುವಂತಿಲ್ಲ, ಗುಂಪು-ಗುಂಪಾಗಿ ನಿಲ್ಲುವಂತಿಲ್ಲ ಎಂಬ ಸೂಚನೆಯನ್ನು ಎಲ್ಲ ಕಡೆಯೂ ಅಂಟಿಸಲಾಗಿತ್ತು. ಆದರೆ ಬಹುತೇಕ ಕಡೆ  ಅಂಟಿಸಿದ ನೋಟಿಸಿನ ಕೆಳಗೆ ನೂರಾರು ಜನ ಕುಳಿತುಕೊಂಡೇ ಇದ್ದರು. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಶಾಲಾ ಆವರಣದೊಳಗಿನ ಮರಗಳನ್ನು ಜನ ಅಶ್ರಯಿಸಿದ್ದೇ - ೧೦೦ ಮೀಟರ್ ನಿಯಮದ ಉಲ್ಲಂಘನೆಗೆ ಕಾರಣವಾಗಿತ್ತು. ಹಾಗಾಗಿ ಪೊಲೀಸರು ಕೂಡ  ಪ್ರಜ್ಞಾಪೂರ್ವಕವಾಗಿ ನಿಯಮವನ್ನು ಮರೆತು ಕರ್ತವ್ಯದಲ್ಲಿದ್ದರು.
ಪತ್ರಕರ್ತರ ತಂಡ ಪ್ರವಾಸ ನಡೆಸಿದ ಇಲವಾಲ, ಹಿನಕಲ್, ಬಿಳಿಕೆರೆ, ಬೋಳನಹಳ್ಳಿ, ಗಾವಡಗೆರೆ, ಕಟ್ಟೆಮಳಲವಾಡಿ, ಉಮ್ಮತ್ತೂರು, ಚಿಲ್ಕುಂದ, ಗೋವಿಂದನಹಳ್ಳಿ, ಜಯಪುರ, ಡಿ. ಸಾಲುಂಡಿ ಸೇರಿದಂತೆ ಎಲ್ಲ  ಕಡೆಯೂ  ಮತಕೇಂದ್ರಗಳ ಬಳಿ ಸಾಲು-ಸಾಲು ಜನರೇ ಕಂಡು ಬಂದರು.
ಬಾತು-ಮೊಸರನ್ನದ ಸಮಾರಾಧನೆ: ಅಭ್ಯರ್ಥಿಗಳು ಮತದಾರರಿಗೆ ಯಾವುದೇ ರೀತಿಯ ಆಸೆ- ಆಮಿಷವನ್ನು ಒಡ್ಡುವಂತಿಲ್ಲ ಎನ್ನುತ್ತದೆ ಸದಾಚಾರ ಸಂಹಿತೆ.  ಹಾಗಾಗಿ ಆಯೋಗದ ಮಂದಿ ಚುನಾವಣೆಗಳ ಸಂದರ್ಭದಲ್ಲಿ  ಈ ಬಗ್ಗೆ  ಕಣ್ಗಾವಲು ಹಾಕಿರು ತ್ತದೆ. ಆದರೆ, ಗ್ರಾಮ ಪಂಚಾಯಿತಿ  ಮತದಾನ ದಿನದಂದು  ಅಭ್ಯರ್ಥಿಗಳ ಮನೆಗಳಲ್ಲಿ  ನಡೆಯುವ ಅನ್ನ ಸಂತಾರ್ಪಣೆಯನ್ನು ಏನೂ ಮಾಡಿದರೂ ತಪ್ಪಿಸಲು ಆಗುವುದಿಲ್ಲ.  ಬಹುತೇಕ ಎಲ್ಲ ಕಡೆಯೂ ಅಭ್ಯರ್ಥಿಗಳ ಮನೆಯವರೇ ‘ತಮ್ಮ ಕಡೆಯವರಿಗೆ’ ಬೆಳಗಿನ ತಿಂಡಿ, ಮಧ್ಯಾಹ್ನದ ಊಟದ ವ್ಯವಸ್ಥೆ  ಮಾಡಿದ್ದರು. ಕೆಲವು ಕಡೆ ಇಂಥ ಮನೆಗಳಿಂದಲೇ ಚುನಾವಣೆ ಸಿಬ್ಬಂದಿಗೆ ಊಟೋಪಾಚರದ ವ್ಯವಸ್ಥೆ ಆಗಿತ್ತು.
‘ಇದನ್ನು ತಪ್ಪಿಸುವುದು ಬಹಳ ಕಷ್ಟ ಸಾರ್. ಹಳ್ಳಿಯ ಜನರ ದೃಷ್ಟಿಯಲ್ಲಿ  ಇದು ಆಮಿಷವಲ್ಲ. ಚುನಾವಣೆಗೆ ನಿಂತವನು ಮತದಾರರಿಗೆ  ಮಾಡ ಬಹುದಾದ, ಮಾಡಲೇ ಬೇಕಾದ ಕನಿಷ್ಠ ಕರ್ತವ್ಯ’ ಎಂದು ಕಟ್ಟೆಮಳಲವಾಡಿಯಲ್ಲಿ  ಚುನಾವಣಾ ಸಿಬ್ಬಂದಿಯೊಬ್ಬರು ಪತ್ರಿಕೆಗೆ ಪ್ರತಿಕ್ರಿಯಿಸಿದರು. 
ಕಷ್ಟ ಕೊಟ್ಟ ಬ್ಯಾಲೆಟ್ ಪೇಪರ್: ಸತತ ಮೂರನೇ ವರ್ಷ ಮೇನಲ್ಲಿ  ಚುನಾವಣೆ ಕಾಣುತ್ತಿರುವ ಜಿಲ್ಲೆಯ ಮತದಾರರು, ೨೦೦೮ರಲ್ಲಿ ವಿಧಾನ ಸಭೆ, ೨೦೦೯ನೇ ಇಸ್ವಿಯಲ್ಲಿ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದ್ದಾರೆ. ಆ ಎರಡೂ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್‌ನಲ್ಲಿ  ಗುಂಡಿ ಒತ್ತಿದ್ದರು.  ಆದರೆ ಈ ಬಾರಿ ಮತ್ತದೇ ಬ್ಯಾಲೆಟ್ ಪೇಪರ್ ಬಂದು ಕುಳಿತಿದೆ. ಹಾಗಾಗಿ ಹೊಸ ತಲೆಮಾರಿನ ಮತದಾರರಿಗೆ ಬ್ಯಾಲೆಟ್ ಪೇಪರ್ ತೀರಾ ಹೊಸತು. ಹಳಬರಿಗಷ್ಟೇ ಪರಿಚಿತ. ಇದರ ನಡುವೆ ಇದು ಊರಿನ ಎಲೆಕ್ಷನ್ ಆದ್ದರಿಂದ ಕಣದಲ್ಲಿ  ವಿಪರೀತ  ಮಂದಿ.  ಕಟ್ಟೆಮಳಲವಾಡಿಯಲ್ಲಿ ನಾಲ್ಕು ಸ್ಥಾನಕ್ಕೆ ೩೦ ಮಂದಿ ಸ್ಪರ್ಧಿ ಸಿದ್ದರು. ಅಷ್ಟೂ ಜನರ ಹೆಸರನ್ನು ಒಂದೇ ಬ್ಯಾಲೆಟ್‌ನಲ್ಲಿ ಮುದ್ರಿಸಲಾಗಿತ್ತು. ಇಂಥ ಬ್ಯಾಲೆಟ್‌ನಲ್ಲಿರುವ ಅಭ್ಯರ್ಥಿಗಳನ್ನು ಹುಡುಕುವುದೇ  ಒಂದು ದೊಡ್ಡ ಕೆಲಸವಾಗಿತ್ತು. ‘೩೦ ಜನರ ಬ್ಯಾಲೆಟ್ ಪೇಪರ್ ನ್ಯೂಸ್ ಪೇಪರ್ ತರ ಇದೆ.  ಅದನ್ನು ಮಡುಚುವುದೇ ಮತದಾರರಿಗೆ ದೊಡ್ಡ ಕೆಲಸ. ಒಬ್ಬ ಮತದಾರನಿಗೆ ಕನಿಷ್ಠ ೧೦ ನಿಮಿಷ ಬೇಕು’ ಎಂದು ಮತಗಟ್ಟೆಯ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.  ಯಾವ ಊರಲ್ಲೂ ಫ್ಲಕ್ಸ್, ಬ್ಯಾನರ್‌ಗಳ ಸುಳಿವೇ ಇರಲಿಲ್ಲ.  ಅಭ್ಯರ್ಥಿಗಳು ಕರಪತ್ರವೊಂದನ್ನೇ ಪ್ರಚಾರಕ್ಕೆ ಬಳಸುತ್ತಿದ್ದರು.

ಗ್ರಾ.ಪಂ. ಚುನಾವಣೆ ಪಕ್ಕನೋಟ

ನೂರಾರು ಪಕ್ಷಿಗಳ ಮಾರಣಹೋಮ

ವಿಕ ಸುದ್ದಿಲೋಕ ಮಂಡ್ಯ
ತಾಲೂಕಿನ ವಿ.ಸಿ.ಫಾರಂ ಕೃಷಿ ವಿಶ್ವವಿದ್ಯಾನಿಲಯ ಆವರಣ ದಲ್ಲಿ ಸೋಮವಾರ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ಬೃಹತ್ ಗಾತ್ರದ ಮರಗಳು ಧರೆಗುರುಳಿದ್ದು, ಮರಗಳಲ್ಲಿ ಆಶ್ರಯ ಪಡೆದಿದ್ದ ನೂರಾರು ಪಕ್ಷಿಗಳು ಮೃತಪಟ್ಟಿವೆ.
ಕೊಕ್ಕರೆ, ಗಿಳಿ, ಕಾಗೆಗಳ ಜಾತಿಯ ನೂರಾರು ಪಕ್ಷಿಗಳ ಪ್ರಾಣಪಕ್ಷಿಯೇ ಹಾರಿ ಹೋಗಿವೆ. ಮತ್ತೆ ಹಲವು ಪಕ್ಷಿಗಳ ರೆಕ್ಕೆ ಹಾಗೂ ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದು ನೋವು ಅನುಭವಿಸುತ್ತಿವೆ. ಇವು ಮೇಲೇಳಲಾಗದ ಸ್ಥಿತಿಯಲ್ಲಿವೆ.
ಕೃಷಿ ವಿವಿ ಆವರಣದಲ್ಲಿ ನೇರಳೆ, ನೀಲಗಿರಿ, ಸರ್ವೆ, ತೆಂಗು, ಬಾಗೆ ಸೇರಿದಂತೆ ವಿವಿಧ ಜಾತಿಯ ಹಲವು ಮರಗಳನ್ನು ಬೆಳೆಸಲಾಗಿತ್ತು. ಆದರೆ, ಸೋಮವಾರ ರಾತ್ರಿ ಬಿದ್ದ ಬಿರುಗಾಳಿ ಸಹಿತ ಮಳೆಯಿಂದಾಗಿ ಸುಮಾರು ೨೦ಕ್ಕೂ ಹೆಚ್ಚು ಮರಗಳು ಬುಡ ಸಮೇತ ಮುರಿದು ಬಿದ್ದಿವೆ.
ಮರಗಳು ನೆಲಕಚ್ಚುತ್ತಿದ್ದಂತೆ ಅವುಗಳಲ್ಲಿದ್ದ ಪಕ್ಷಿಗಳು ಅಪಾಯಕ್ಕೆ ಸಿಲುಕಿದವು. ಗೂಡುಗಳಲ್ಲಿ ಆಶ್ರಯ ಪಡೆದಿದ್ದ ಪಕ್ಷಿಗಳು ಗೂಡು ಸಹಿತ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಅಸುನೀಗಿದವು. ರಾತ್ರಿಯಿಡೀ ನೋವು ಅನುಭವಿಸಿದ ಕೆಲವು ಪಕ್ಷಿಗಳು ಮಂಗಳವಾರ ಬೆಳಗ್ಗೆ ಮೃತಪಟ್ಟವು.
ಮಂಗಳವಾರ ಬೆಳಗ್ಗೆ ನೋವಿನಿಂದ ಚೀರುತ್ತಾ ನರಳುತ್ತಿದ್ದ ಪಕ್ಷಿಗಳ ಆಕ್ರಂದನವನ್ನು ಕೇಳಿದ ಸ್ಥಳೀಯರು, ಸ್ಥಳಕ್ಕೆ ಆಗಮಿಸಿ ಕೆಲವು ಪಕ್ಷಿಗಳಿಗೆ ನೀರುಣಿಸಿ ಉಪಚರಿಸಿದ್ದಾರೆ. ಪಶು ವೈದ್ಯರು ಸಹ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದ್ದಾರೆ.
ವೈದ್ಯರು ಹಾಗೂ ಸ್ಥಳೀಯರ ಆರೈಕೆಯಿಂದ ಚೇತರಿಸಿ ಕೊಂಡ ಕೆಲ ಪಕ್ಷಿಗಳು ಹಾರಾಟ ಆರಂಭಿಸಿ, ಆಹಾರ ಹುಡುಕಿ ಕೊಂಡು ಹೊರಟವು. ತೀವ್ರ ಪೆಟ್ಟು ಬಿದ್ದು ಅಸ್ವಸ್ಥಗೊಂಡಿದ್ದ ಪಕ್ಷಿಗಳು ಹಾರಲಾಗದೆ ಅಲ್ಲೇ ಉಳಿದಿದ್ದವು.
ಗಾಯಗೊಂಡಿದ್ದ ಪಕ್ಷಿಗಳನ್ನು ಪಶು ವೈದ್ಯರು ಸಮೀಪದ ಆಸ್ಪತ್ರೆ ಹಾಗೂ ಮನೆಗಳಿಗೆ ಕೊಂಡೊಯ್ದು ಚಿಕಿತ್ಸೆ ನೀಡಿ ಉಪಚಾರ ಮುಂದುವರಿಸಿದ್ದಾರೆ. ಪಕ್ಷಿಗಳ ಕಳೇಬರಗಳು ಬಿದ್ದಿದ್ದ ದೃಶ್ಯ ಮನಃಕಲಕುವಂತಿತ್ತು.
ನೆನಪು: ಕಳೆದ ತಿಂಗಳಷ್ಟೇ ಶ್ರೀರಂಗಪಟ್ಟಣದ ಶ್ರೀ ಕಾಳಿಕಾಂಬ ರಸ್ತೆಯಲ್ಲಿ ಭಾರಿ ಗಾತ್ರದ ಆಲಿಕಲ್ಲು ಬಿದ್ದು ನೂರಾರು ಗಿಳಿ ಮರಿಗಳು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಒಂದು ವರ್ಷದ ಹಿಂದೆ ಬಸರಾಳು ಗ್ರಾಮದಲ್ಲಿ ಹೂ ಮಾರಾಟಗಾರರ ಸ್ವಾರ್ಥಕ್ಕೆ ದೊಡ್ಡ ಮರವನ್ನು ಕಡಿದಿದ್ದರಿಂದ ಅಲ್ಲೂ  ಪಕ್ಷಿಗಳ ಮಾರಣ ಹೋಮವೇ ನಡೆದಿತ್ತು. ಈಗ ಇಂತಹುದೇ ದುರ್ಘಟನೆ ವಿ.ಸಿ.ಫಾರಂನಲ್ಲಿ ಸಂಭವಿಸಿದೆ.
ಹಾನಿ: ಬಿರುಗಾಳಿ ಮತ್ತು ಮಳೆಯಿಂದಾಗಿ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಕಚೇರಿಗಳು, ವಸತಿ ಗೃಹಗಳಿಗೂ ಹಾನಿಯಾಗಿದೆ. ಕಾರ್‌ಶೆಡ್, ಬ್ಯಾಂಕ್‌ನ ಕಚೇರಿಯ ಬಾಗಿಲು ಸಹ ಹಾನಿಗೆ ಒಳಗಾಗಿದೆ. ಕಾಲೇಜು ಆವರಣದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್, ಮಿನಿ ಬಸ್‌ಗಳು ಜಖಂಗೊಂಡಿವೆ.
ಕಚೇರಿಯಲ್ಲಿ ಸಂಗ್ರಹಿಸಿದ್ದ ಜೋಳ, ಬತ್ತ, ರಾಗಿಯ ಬಿತ್ತನೆ ಬೀಜಗಳು ಮಳೆ ನೀರಿನಿಂದ ನೆನೆದು ನಷ್ಟ ಸಂಭವಿಸಿದೆ. ರಸ್ತೆ ಯಲ್ಲೇ ಮರಗಳು ಬಿದ್ದಿದ್ದರಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಮರಗಳನ್ನು ರಸ್ತೆಯಿಂದ ತೆರವುಗೊಳಿಸಿದರು.

ಬೆರಳೆಣಿಕೆ ಗ್ರಾಮಗಳಿಗಷ್ಟೆ ರಸ್ತೆ, ಚರಂಡಿ ಸೌಲಭ್ಯ

ವಿಕ ತಂಡ, ಮಂಡ್ಯ
ರಾಜ್ಯ ಮತ್ತು ಕೇಂದ್ರದ ಪ್ರತಿ ಬಜೆಟ್‌ನಲ್ಲಿ ಗ್ರಾಮೀಣಾ ಭಿವೃದ್ಧಿಗೆ ಒಟ್ಟಾರೆ ಬಜೆಟ್‌ನ ಶೇಕಡ ೨೦ರಷ್ಟು ಅನುದಾನ ಮೀಸಲಾಗುತ್ತಲೇ ಬಂದಿದೆ. ಅನುದಾನದ ಹೊಳೆ ಎಲ್ಲಿಗೆ ಹರಿದು ಹೋಗಿದೆ ಎನ್ನುವುದೇ ತಿಳಿಯದಂತಾಗಿದೆ.
ಮಂಡ್ಯ ಜಿಲ್ಲೆಯು ಮೇಲ್ನೋಟಕ್ಕೆ ಸಾಕಷ್ಟು ಅಭಿವೃದ್ಧಿ ಹೊಂದಿರುವ ‘ಶ್ರೀಮಂತ’ ಜಿಲ್ಲೆ. ಆದರೆ, ಡಾಂಬರು ರಸ್ತೆ, ಸುಸಜ್ಜಿತ ಚರಂಡಿ ಸೇರಿದಂತೆ ಮೂಲ ಸೌಲಭ್ಯ ಗಳನ್ನು ಕಂಡಿರುವ ಗ್ರಾಮಗಳು ಇಲ್ಲಿರುವುದು ಬೆರಳೆಣಿಕೆಷ್ಟು ಮಾತ್ರವೇ.
ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದ ಬಳಿಕವಂತೂ ರಸ್ತೆ ಮತ್ತು ಚರಂಡಿ ಹೆಸರಿನಲ್ಲಿ ಬಿಡುಗಡೆಯಾದ ಅನುದಾನಕ್ಕೆ ಲೆಕ್ಕವೇ ಇಲ್ಲ. ಅಲ್ಲೊಂದಿಲ್ಲೊಂದು ಗ್ರಾಮಗಳು ಸೌಲಭ್ಯ ಹೊಂದಿವೆ. ಶೇಕಡ ೯೫ ಗ್ರಾಮ ಗಳಲ್ಲಿ ಈಗಲೂ ಓಬಿರಾಯನ ಕಾಲದ ಸ್ಥಿತಿಯೇ ಇದೆ.
ಸುವರ್ಣ ಗ್ರಾಮೋದಯ ಯೋಜನೆ ಜಾರಿಗೊಂಡಿ ರುವ ಗ್ರಾಮಗಳಲ್ಲೇ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಹೀಗಿರುವಾಗ ಯಾವುದೇ ವಿಶೇಷ ಯೋಜನೆಗೆ ಒಳಪಡದ ಗ್ರಾಮಗಳ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಮಳೆಗಾಲದಲ್ಲಿ ಬಹುಪಾಲು ಗ್ರಾಮಗಳ ರಸ್ತೆಗಳಲ್ಲಿ ವಾಹನಗಳ ಸಂಚಾರವಿರಲಿ, ಜನ ಮತ್ತು ಜಾನುವಾರುಗಳೂ ತಿರುಗಾಡದಂಥ ಸ್ಥಿತಿ ಇದೆ. ಚರಂಡಿಗಳು ಸೊಳ್ಳೆಗಳ ಉತ್ಪಾದನಾ ಕೇಂದ್ರಗಳಾಗಿ ಜನರನ್ನು ಕಾಡುತ್ತಿವೆ.
ಇಚ್ಛಾಶಕ್ತಿ ಕೊರತೆ: ಹೇಗೆ ಚರಂಡಿ ಮತ್ತು ರಸ್ತೆ ಒಂದ ಕ್ಕೊಂದು ಬೆಸೆದುಕೊಂಡಿರುತ್ತವೆಯೋ ಅದೇ ರೀತಿ ಮಂಡ್ಯ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಮತ್ತು ಗುತ್ತಿಗೆ ದಾರರು ಅಂಟಿಕೊಂಡಿರುತ್ತಾರೆ. ಚುಕ್ಕಾಣಿ ಹಿಡಿದವರ ಹಿಂದೆ ಗುತ್ತಿಗೆದಾರರ ಹಿಂಡು ಅಲೆಯುತ್ತಿರುತ್ತದೆ.
ಚುನಾವಣೆ ಗೆಲ್ಲುವಾಗಷ್ಟೇ ಅಭಿವೃದ್ಧಿಯ ಮಂತ್ರ ಜಪಿಸಲಾಗುತ್ತದೆ. ಗೆದ್ದ ಮೇಲೆ ಹಣ ಮಾಡುವ ದಂಧೆಗೆ ಇಳಿಯುತ್ತಾರೆ. ವಿಜಯೋತ್ಸವದ ಮರು ಕ್ಷಣ ದಲ್ಲೇ ಗುತ್ತಿಗೆದಾರರ ಹಿಂಡು ಚುನಾಯಿತ ಪ್ರತಿನಿಧಿಯ ಬೆನ್ನಿಗೆ ನಿಲ್ಲುವುದು ಮಾಮೂಲು.
ಗ್ರಾ.ಪಂ. ಹಂತದ ಚುನಾಯಿತ ಪ್ರತಿನಿಧಿಯಿಂದಿ ಡಿದು ಪಾರ್ಲಿಮೆಂಟ್ ಸದಸ್ಯನವರೆಗೂ ಗುತ್ತಿಗೆದಾರರ ಮಿತ್ರರೇ. ಅದರಲ್ಲೂ ಕೆಲ ಜನಪ್ರತಿನಿಧಿಗಳು ಬೇನಾಮಿ ಹೆಸರಿನಲ್ಲಿ ಸ್ವತಃ ಗುತ್ತಿಗೆ ಕೆಲಸ ನಿರ್ವಹಿಸುತ್ತಿರುವ ಸುದ್ದಿ ಹೊಸದೇನಲ್ಲ. ಯಾವುದೇ ಅನುದಾನ ಬಿಡುಗಡೆ ಯಾದರೆ ಸಾಕು. ಚುನಾಯಿತ ಪ್ರತಿನಿಧಿಗಳು ಯಾವ ಕೆಲಸ ಆಗ ಬೇಕೆನ್ನುವ ಗೋಜಿಗೆ ಹೋಗುವುದೇ ಇಲ್ಲ. ಎಷ್ಟು ಕಮೀಷನ್ ಗಿಟ್ಟಿಸಿಕೊಳ್ಳಬಹುದೆನ್ನುವ ಲೆಕ್ಕಾಚಾರ ದಲ್ಲಿ ಮುಳುಗುತ್ತಾರೆ.
ಅವೈಜ್ಞಾನಿಕ ಕೆಲಸ: ದಾಕ್ಷಿಣ್ಯಕ್ಕೆ ಬಸುರಾದಂತೆ ಎನ್ನುವ ನಾಣ್ಣುಡಿಯಂತೆ ಗ್ರಾಮೀಣ ಪ್ರದೇಶದಲ್ಲಿ ಚುನಾಯಿತ ಪ್ರತಿನಿಧಿಗಳು ನೀತಿ-ನಿಯಮಾವಳಿಗಳನ್ನು ಗಾಳಿಗೆ ತೂರಿ ಅವೈಜ್ಞಾನಿಕ ಕಾಮಗಾರಿಗಳನ್ನು ನಡೆಸಿರುವುದೇ ಹೆಚ್ಚು.
ಬಹುತೇಕ ಗ್ರಾಮಗಳಲ್ಲಿ ರಸ್ತೆಗಳು ಒಂದೇ ವಿಸ್ತೀರ್ಣ ದಲ್ಲಿ ಇರುವುದಿಲ್ಲ. ರಸ್ತೆ ಹೋದಂತೆಲ್ಲಾ ಚರಂಡಿ ಕೂಡಾ ಅಂಕು ಡೊಂಕಾಗಿಯೇ ಸಾಗಬೇಕಿದೆ. ಚುನಾಯಿತ ಪ್ರತಿನಿಧಿ ತನ್ನ ಆಪ್ತೇಷ್ಟರು, ಬಂಧುಗಳ ಅನುಕೂಲಕ್ಕೆ ತಕ್ಕಂತೆಲ್ಲಾ ರಸ್ತೆ, ಚರಂಡಿಯ ದಿಕ್ಕನ್ನೇ ಬದಲಿಸಿರುವ ಪ್ರಕರಣ ಸಾಕಷ್ಟಿವೆ.
ಇಂಥ ತಂಟೆ, ತಕರಾರಿನಿಂದ ಅದೆಷ್ಟೋ ಗ್ರಾಮಗಳಲ್ಲಿ ಕಾಮಗಾರಿಗಳು ಅಪೂರ್ಣವಾಗಿವೆ. ನಡೆದಿರುವ ಅಷ್ಟಿಷ್ಟು ಕಾಮಗಾರಿಗಳು ವರ್ಷ ತುಂಬುವ ಮುನ್ನವೇ ಅಧ್ವಾನಗೊಳ್ಳುತ್ತಿವೆ. ರಸ್ತೆಗಳ ಆಸ್ಪಾಲ್ಟಿಂಗ್ ಸಮರ್ಪಕ ವಾಗಿರುವುದಿಲ್ಲ. ಹಾಕುವ ಡಾಂಬರು ದಪ್ಪ ನಾಯಿ ನಾಲಗೆಗಿಂತಲೂ ಸಣ್ಣದಾಗಿರುತ್ತದೆ.
ದಂಧೆಕೋರರ ಹಾವಳಿ: ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಗಳು ಹದಗೆಡಲು ಮರಳು ಲೂಟಿಕೋರರೂ ಕಾರಣ. ಜಿಲ್ಲಾ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಪೊಲೀಸರ ಉಪಟಳ ಹೆಚ್ಚಿರುವ ಹಿನ್ನೆಲೆಯಲ್ಲಿ ಓವರ್ ಲೋಡ್ ಮರಳು ಲಾರಿಗಳು ಗ್ರಾಮೀಣ ರಸ್ತೆಗಳಲ್ಲಿ ಸಾಗುತ್ತಿವೆ.
ವ್ಯವಸ್ಥೆಯಿನ್ನೂ ಮರೀಚಿಕೆ: ಜಿಲ್ಲೆಯ ೨೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆಯೇ ಇಲ್ಲ. ಚುನಾವಣೆ ಬಂದಾಗ ದಲಿತರ ಅಭ್ಯುದಯದ ಬಗ್ಗೆ ಭರವಸೆಗಳ ಮಹಾಪೂರವನ್ನೇ ಹರಿಸುವ ರಾಜಕಾರಣಿ ಗಳು ಆ ಸಮುದಾಯದ ಕಾಲೋನಿಗಳ ಅಭಿವೃದ್ಧಿಗೆ ಕಿಂಚಿತ್ ಕಾಳಜಿ ವಹಿಸಿಲ್ಲ.
ಈಗಲೂ ರಸ್ತೆ ಮತ್ತು ಚರಂಡಿ ವ್ಯವಸ್ಥೆಯನ್ನೇ ಕಾಣದ ಕುಗ್ರಾಮಗಳು ಬಹುಪಾಲು ದಲಿತರೇ ವಾಸಿಸುವ ಗ್ರಾಮಗಳಾಗಿವೆ. ಅದೇ ಸಮುದಾಯದ ಜನಪ್ರತಿನಿಧಿಗಳಿರುವ ಕಡೆಯೂ ಅಭಿವೃದ್ಧಿ ಶೂನ್ಯ.
ಮಂಡ್ಯ
ತಾಲೂಕಿನ ಹೊಳಲು, ಎಚ್.ಕೋಡಿಹಳ್ಳಿ ಸೇರಿದಂತೆ ೪ ಗ್ರಾಮಗಳಲ್ಲಷ್ಟೇ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಒಂದಿಷ್ಟು ಸಮಾಧಾನಕರವಾಗಿದೆ. ಉಳಿದಂತೆ ಯಾವೊಂದು ಗ್ರಾಮದಲ್ಲೂ ಅಚ್ಚುಕಟ್ಟಾಗಿಲ್ಲ.
ಮಂಡ್ಯ ತಾಲೂಕು ೩ ವಿಧಾನಸಭೆ ಕ್ಷೇತ್ರಗಳಲ್ಲಿ ಹರಿದು ಹಂಚಿ ಹೋಗಿದೆ. ಕ್ಷೇತ್ರ ಮರು ವಿಂಗಡಣೆಗೆ ಮುಂಚೆ ಕೆರಗೋಡು ವಿಧಾನಸಭೆ ಕ್ಷೇತ್ರಕ್ಕೆ ಸೇರಿದ್ದ ಗ್ರಾಮಗಳಲ್ಲಂತೂ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಶೋಚನೀಯವಾಗಿದೆ.
ತಗ್ಗಹಳ್ಳಿ ಜಿ.ಪಂ. ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಒತ್ತಾಯಿಸಿ ಆ ಭಾಗದ ಜನರು ಸಾಕಷ್ಟು ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ. ರಸ್ತೆ ಸರಿ ಇಲ್ಲ ಎನ್ನುವ ಕಾರಣಕ್ಕೆ ಈ ಭಾಗದಲ್ಲಿ ಕೆಲ ಬಸ್‌ಗಳ ಸಂಚಾರವೇ ಸ್ಥಗಿತಗೊಂಡಿದೆ.
ಪಾಂಡವಪುರ
೫ ವರ್ಷದಿಂದ ಈಚೆಗೆ ಗ್ರಾಮೀಣ ಪ್ರದೇಶದ ಸಾಕಷ್ಟು ಕಡೆ ಅಭಿವೃದ್ಧಿ ನಾಗಾಲೋಟದಲ್ಲಿ ಸಾಗಿದೆ. ಆದರೆ, ತಾಲೂಕಿನ ಸಮಗ್ರ ಗ್ರಾಮಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಸಾಧ್ಯವಾಗಿಲ್ಲ.
ಕೆರೆ ತೊಣ್ಣೂರು, ಗೌಡಗೆರೆ, ಸುಂಕಾತೊಣ್ಣೂರು, ಮೂಡಲಕೊಪ್ಪಲು, ಬೆಳ್ಳಾಳೆ, ಸಿಂಗ್ರಿಗೌಡನಕೊಪ್ಪಲು, ಮೂಡಲಕುಪ್ಪೆ, ನುಗ್ಗಹಳ್ಳಿ, ಕುರಹಟ್ಟಿ, ಚೀಕನಹಳ್ಳಿ ಮತ್ತಿತರ ಗ್ರಾಮಗಳು ಮತ್ತು ಸಂಪರ್ಕ ರಸ್ತೆಗಳು ಅವ್ಯವಸ್ಥೆಯಿಂದ ಕೂಡಿವೆ.
ಚಲುವರಸನಕೊಪ್ಪಲು, ಹೊಸಹಳ್ಳಿ, ಚಿಕ್ಕಾಡೆ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿ, ಬೇಬಿ ಗ್ರಾಮ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆಯಿಲ್ಲ. ಮಳೆ ಮತ್ತು ಕೊಚ್ಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.
ಮದ್ದೂರಿಗೆ ಶಾಪ: ನಾಲ್ಕೂವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ, ಇದೀಗ ಕೇಂದ್ರ ಮಂತ್ರಿಯಾಗಿರುವ ಎಸ್.ಎಂ. ಕೃಷ್ಣ ಅವರ ಹುಟ್ಟೂರು ಸೋಮನಹಳ್ಳಿಯೂ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ಅವ್ಯವಸ್ಥೆ ಹೇಳ ತೀರದಾಗಿದೆ.
ಸರಕಾರದ ಅನುದಾನದಡಿ ನಡೆದ ರಸ್ತೆ ಮತ್ತು ಚರಂಡಿ ಕೆಲಸಗಳು ಗುತ್ತಿಗೆದಾರರು, ಎಂಜಿನಿಯರ್‌ಗಳು, ಜನಪ್ರತಿನಿಧಿಗಳ ಕಿಸೆ ತುಂಬಿಸುವುದಕ್ಕಷ್ಟೇ ಸೀಮಿತವಾಗಿವೆ. ಮರಳು ಲಾರಿಗಳ ಹಾವಳಿಯಿಂದ ಸಾಕಷ್ಟು ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ.
ಶ್ರೀರಂಗಪಟ್ಟಣ
ತಾಲೂಕಿನ ಕುಗ್ರಾಮಗಳಿರಲಿ, ಪಟ್ಟಣಕ್ಕೆ ಹೊಂದಿ ಕೊಂಡಿರುವ ಗ್ರಾಮಗಳಲ್ಲೇ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಸರಿಯಿಲ್ಲ. ಗಂಜಾಂ, ಪಾಲಹಳ್ಳಿ, ಬೆಳಗೊಳ, ಅರಕೆರೆ, ಕೊಡಿಯಾಲ ಸೇರಿದಂತೆ ಪ್ರಮುಖ ಗ್ರಾಮ ಗಳೇ ಅವ್ಯವಸ್ಥೆಯ ಆಗರವಾಗಿವೆ.
ಶ್ರೀರಂಗಪಟ್ಟಣಕ್ಕೆ ೫ ಶಾಸಕರನ್ನು ನೀಡಿದ ಅರಕೆರೆ ಮತ್ತು ಸುತ್ತಮುತ್ತಲ ಗ್ರಾಮಗಳ ರಸ್ತೆಗಳಲ್ಲಿ            ಮುಷ್ಟಿ ಗಾತ್ರದ ಕಲ್ಲುಗಳು ಎದ್ದು ನಿಂತಿವೆ. ರಸ್ತೆಯಲ್ಲೇ ನೀರು ಹರಿಯುವುದು ಈ ತಾಲೂಕಿನವರಿಗೆ ಮಾಮೂಲಾಗಿದೆ.

‘ವಿಕ ಫೋನ್ ಇನ್’ನಲ್ಲಿ ಗಣೇಶ್ ಉಲ್ಲಾಸ ಉತ್ಸಾಹ....

ವಿಕ ಸುದ್ದಿಲೋಕ ಮೈಸೂರು
ನೀವು ಅಳೋದೆ ಒಂದು ಚೆಂದ, ಎಮೋಷನಲ್ ಸೀನ್‌ನಲ್ಲಿ ತುಂಬಾನೇ ಚೆನ್ನಾಗಿ ಕಾಣ್ತೀರಿ.., ಅಯ್ಯೋ, ಬೇಡ ಕಣ್ರೀ, ಅಷ್ಟೊಂದ್ ಅಳ್ಬೇಡಿ. ನೀವು ಅಳ್ತಿದ್ರೆ ನನಗೂ ಅಳು ಬಂದ್ಬಿಡುತ್ತೆ !
‘ಇದೊಳ್ಳೇ ಕಷ್ಟಕ್ಕೆ ಬಂತಲ್ಲಪ್ಪ ,ಅತ್ರೂ ಕಷ್ಟ, ಅಳದೇ ಇದ್ರೂ ಕಷ್ಟ .ಯಾರಿಗೂ ಇಂಥ ಕಷ್ಟ ಬರದಿರಲಿ’ ಎಂದು ಹಾರೈಸುತ್ತಿದ್ದೀರಾ,‘ಯಾರಪ್ಪ ಇಂಥ ಸಂಕಷ್ಟಕ್ಕೆ ಸಿಲುಕಿದ ಮಾನವ ಜೀವಿ ’ಎಂಬ ಮರುಕ ಪೂರಿತ ಕುತೂಹಲವೇ?
-‘ಮುಂಗಾರು ಮಳೆ’ಯಲ್ಲಿ ತೊಯ್ದು, ‘ಗಾಳಿಪಟ’ ಹಾರಿಸಿ, ಅದೇ ‘ಮಳೆಯಲಿ ಜೊತೆ ಯಲಿ’ ನಡೆದು, ಅಭಿಮಾನಿಗಳ ಹೃದಯದಲ್ಲಿ ‘ಅರಮನೆ ’ ಕಟ್ಟಿ, ‘ಚೆಲ್ಲಾಟ’ ಆಡಿ,‘ಚೆಲುವಿನ ಚಿತ್ತಾರ ’ ಮೂಡಿಸಿ ಈಗ ‘ಉಲ್ಲಾಸ ಉತ್ಸಾಹದಲ್ಲಿ’ ತೇಲುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಅಭಿಮಾಗಳು ಹಾಕಿದ ಪ್ರೀತಿ ಪೂರ್ವಕ ‘ಧಮಕಿ’ಗಳಿವು.
ತಮ್ಮ ಹೊಸ ಸಿನಿಮಾ ‘ಉಲ್ಲಾಸ ಉತ್ಸಾಹ’ವನ್ನು ಅಭಿಮಾನಿಗಳ ಜತೆ ಕುಳಿತು ನೋಡಲು ಮೈಸೂರಿನ ಚಿತ್ರಮಂದಿರಗಳಿಗೆ ಭಾನು ವಾರ ಭೇಟಿ ನೀಡಿದ್ದ ಅವರು,‘ವಿಜಯ ಕರ್ನಾಟಕ ’ಆಯೋಜಿಸಿದ್ದ ಫೋನ್ -ಇನ್ ಕಾರ‍್ಯಕ್ರಮದಲ್ಲಿ ಒಂದು ತಾಸು ಪಾಲ್ಗೊಂಡು ಅಭಿ ಮಾನದ ಕರೆಗಳ ‘ಸುರಿ ಮಳೆ’ಯಲ್ಲಿ ಮಿಂದರು. ತಮ್ಮ ಎಂದಿನ ‘ಕಾಮಿಡಿ’ ಶೈಲಿಯಲ್ಲಿ ಉಲ್ಲಾಸ, ಉತ್ಸಾಹದಿಂದಲೇ ಮಾತನಾಡಿದರು.
೬೦ ನಿಮಿಷದಲ್ಲಿ ೪೫ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದರು. ‘ಫ್ಯಾಮಿಲಿ ಪ್ಯಾಕೇಜ್’ ಕರೆಗಳಿಗಂತೂ ದೀರ್ಘವಾಗಿಯೇ ಸ್ಪಂದಿಸಿ ದರು. ಅಭಿಮಾನಿಗಳೂ ಅಷ್ಟೆ, ತಮ್ಮ ಪ್ರೀತಿಯ ನಟ ಹೀಗೇ ಇರ ಬೇಕು, ಕೆಟ್ಟ ಸಿನಿಮಾಗಳಲ್ಲಿ ನಟಿಸಿ ವರ್ಚಸ್ಸಿಗೆ ಧಕ್ಕೆ ತಂದು ಕೊಳ್ಳ ಬಾರದು ಎನ್ನುವ ಕಳಕಳಿ, ಕಾಳಜಿ ಪೂರ್ಣ ಕಿವಿಮಾತು ಹೇಳಿದರು.
ಅಳಬೇಕು,ಅಳು ಬೇಡ: ಮೈಸೂರಿನ ಮಾನಸಾಗೆ ಗಣೇಶ್ ಅಳೋದು ಇಷ್ಟ. ‘ತುಂಬಾ ಚೆನ್ನಾಗಿ ಅಳ್ತೀರ ಕಂಡ್ರೀ’ ಎಂಬ ಕಾಂಪ್ಲಿಮೆಂಟು. ಆದರೆ, ಕುವೆಂಪು ನಗರದ ವೀಣಾಗೆ ಅಳೋದು ಇಷ್ಟವಿಲ್ಲ. ಫೋನ್ ಸಂಪರ್ಕ ಸಿಕ್ಕ ಖುಷಿಗೇ ಬಿಕ್ಕಳಿಸಿದ ಆಕೆ ‘ನೀವು ಅಳುವಂತ ಸೀನ್‌ನಲ್ಲಿ ನಟಿಸಲೇಬೇಡಿ. ಅಳೋದನ್ನು ನೋಡಿದ್ರೆ ನನಗೂ ಅಳುಬರುತ್ತೆ ’ಎಂದು ಮತ್ತೆ ಬಿಕ್ಕಿದರು. ಅವರನ್ನು ಸಮಾಧಾನಿಸಲು ಗಣೇಶ್ ದೊಡ್ಡ ‘ಸರ್ಕಸ್’ ಮಾಡಬೇಕಾಯಿತು.
ಫೇಲಾದೆ ಗೊತ್ತಾ?: ‘ನಿಮ್ಮ ಸಿನಿಮಾ ನೋಡಿ ನೋಡಿಯೇ ನಾನು ಎಸ್ಸೆಸ್ಸೆಲ್ಸಿ ಫೇಲ್ ಆಗಿದ್ದೀನಿ ಗೋತ್ತಾ’ ಎಂದು ಮತ್ತೊಂದು ‘ಶಾಕ್’ನೀಡಿದವಳು ಮೈಸೂರಿನ ಶ್ರುತಿ. ಮಾತಿಗೆ ಸಿಕ್ಕಿದ್ದರಿಂದ ಉದ್ವೇಗ ಕ್ಕೊಳಗಾಗಿ ಕಣ್ಣೀರಾದ ಆಕೆ ‘ನಾನು ನಿಮ್ಮ ತುಂಬಾ... ತುಂಬಾ ದೊಡ್ಡ ಅಭಿಮಾನಿ’ ಅಂತ ಮತ್ತೆ ಮತ್ತೆ ಹೇಳಿಕೊಂಡಳು. ಉಲ್ಲಾಸ ಉತ್ಸಾಹದ ‘ಚಲಿಸುವ ಚೆಲುವೆ ಒಲಿಸಲು ಬರವೆ...’ಹಾಡನ್ನು ಆಕೆಗಾಗಿ ಹಾಡಿದ ಗಣೇಶ್, ‘ಚೆನ್ನಾಗಿ ಓದು, ನನ್ ಸಿನಿಮಾ ನೋಡು. ನಿನ್ನ ಶ್ರುತಿ ಅಪಶ್ರುತಿ ಆಗದಿರಲಿ’ ಎಂದು ಮಾರ್ಮಿಕವಾಗಿ ಹಾರೈಸಿದರು.
ಪ್ರೀತಿಯ ತಾಕೀತು: ಸುಶ್ಮಿತಾ ಎಂಬಾಕೆ ಮಾಡಿದ ಕರೆ ಐದಾರು ನಿಮಿಷ ಲಂಬಿಸಿತು. ‘ಫ್ಯಾಮಿಲಿ ಪ್ಯಾಕೇಜ್’ ಥರ. ಅಣ್ಣ,ತಂಗಿ, ಅಮ್ಮ, ಅಪ್ಪ ಹೀಗೆ ಎಲ್ಲರೂ ಒಬ್ಬರ ನಂತರ ಒಬ್ಬರು ಗಣೇಶ್ ಜತೆ ಮಾತಿನ ಸುಖ ಅನುಭವಿಸಿದರು.‘ ಮುಂಗಾರು ಮಳೆ, ಮಳೆಯಲಿ ಜತೆಯಲಿ ಥರದ ಸಿನಿಮಾಗಳನ್ನೇ ಮಾಡಿ. ನಿಮ್ಮ ಟ್ರೆಂಡ್ ಉಳಿಸಿಕೊಳ್ಳಿ. ಅದೇ ರೀತಿ ಪಂಚಿಂಗ್ ಡೈಲಾಗ್ ಹೇಳಿ. ಮಾಮೂಲಿ ಥರದ ಸಿನಿಮಾಗಳನ್ನು ಒಪ್ಪಿಕೊಳ್ಳ ಬೇಡಿ’ ಎಂಬುದು ಕುಟುಂಬದ ತಾಕೀತು. ‘ನಿಮ್ಮ ನಂಬಿಕೆ, ನಿರೀಕ್ಷೆಯನ್ನು ಹುಸಿಗೊಳಿಸಲ್ಲ’ ಎಂದು ಅಭಯ ನೀಡಿದರು ಗಣೇಶ್.
ಮೆಟ್ಟಿಲು ಹತ್ತಿದ ಸುಖ: ಕಾಮಗೆರೆಯ ದೇವರಾಜ್ ಅದೇನೋ ಕಷ್ಟ ಹೇಳಿ ಕೊಂಡರು. ‘ಅಣ್ಣಾ, ನಿಮ್ಮ ಮೇಲೆ ನಿಮಗೆ ವಿಶ್ವಾಸ ವಿರಲಿ. ಕಷ್ಟಪಟ್ಟು ಮುಂದೆ ಬಂದರೇನೇ ಸುಖ. ೧೨ ಅಂತಸ್ತಿನ ಕಟ್ಟಡ ವನ್ನು ಮೆಟ್ಟಿಲು ಮೂಲಕ ಹತ್ತಿ, ತುತ್ತ ತುದಿಯಲ್ಲಿ ಕುಳಿತು ನೀರು ಕುಡಿಯುವಾಗ ಸಿಗುವ ತೃಪ್ತಿ, ಖುಷಿ ಲಿಫ್ಟ್‌ನಲ್ಲಿ ಹೋದರೆ ಸಿಕ್ಕಲ್ಲ’ ಎಂದು ಅನುಭಾವಿಕ ಉಪದೇಶ ನೀಡಿದರು.
ಮಾತನಾಡಿಸೋಣ ಅಂದ್ರೆ..: ಮೈಸೂರು ಪಾಲಿಕೆ ಉದ್ಯೋಗಿ ವೀಣಾ ಅವರದ್ದೂ ‘ಫ್ಯಾಮಿಲಿ ಪ್ಯಾಕೇಜ್’. ಭಾನುವಾರದ ಸ್ಪೆಷಲ್ ನಾನ್‌ವೆಜ್ ಊಟದ ವಿಷಯವೇ ಮಾತಿಗೆ ಆಹಾರ. ಲೈನಿಗೆ ಬಂದ ಆಕೆಯ ತಂಗಿ ಸೌಮ್ಯ ‘ನಿಮ್ಮನ್ನ ಅವತ್ತೊಂದಿನ ಹತ್ತಿರದಿಂದ ನೋಡಿದ್ದೆ. ಮಾತನಾಡಿಸೋಣ ಅಂದ್ರೆ, ಅದ್ಯಾರೋ ನಿಮ್ಮನ್ನು ಕಾರ‍್ನಲ್ಲಿ ಎಳ್ಕೊಂಡು ಹೋದ್ರು’ ಅಂತ ಶ್ಯಾನೆ ಬೇಜಾರು ವ್ಯಕ್ತಪಡಿಸಿದಳು. ಅದೇ ಪ್ಯಾಕೇಜ್‌ನಲ್ಲಿದ್ದ ಅಪ್ಪು ತನ್ನ ಮೆಕ್ಯಾನಿಕ್ ವೃತ್ತಿಯ ಬಗ್ಗೆ ಹೇಳಿಕೊಂಡ. ‘ಚೆಲುವಿನ ಚಿತ್ತಾರ’ದ ಥರಾನಾ ಅಂತ ಕಾಲೆಳೆದ ಗಣೇಶ್, ಕ್ಲೈಮ್ಯಾಕ್ಸ್ ರೀತಿ ಮಾಡ್ಕೋಬೇಡಿ ಅಂತ ‘ಸಲಹೆ ’  ನೀಡಿದರು.ಆ ಸೀಸನ್ ಬಂದಿಲ್ಲ ಎಂದ ೨೭ರ ಅಪ್ಪು ಮತ್ತೊಮ್ಮೆ ಕಾಲೆಳೆಸಿಕೊಂಡ.
ನಾನೇ ಅಭಿಮಾನಿ: ಅದಾಗಲೇ ೬೮ ಬಾರಿ ಮೊಬೈಲ್ ಸಂಪರ್ಕಕ್ಕೆ ಪ್ರಯತ್ನಿಸಿ, ೬೯ನೇ ಬಾರಿ ಲೈನ್ ಸಿಕ್ಕಿದ್ದಕ್ಕೆ ‘ಫುಲ್ ಥ್ರಿಲ್ಲಾಗಿ’ ಮಾತಿಗಿಳಿದ ಕಾವ್ಯ, ‘ನಾನು ನಿಮ್ಮ ಫ್ಯಾನ್’ಎಂದರು. ಅವರ ಅಭಿಮಾನದ ಉದ್ವೇಗಕ್ಕೆ ಶರಣಾದ ಗಣೇಶ್ ‘ನಾನೇ ನಿಮ್ಮ ಅಭಿಮಾನಿ’ ಎಂದು ಪ್ರತಿಕ್ರಿಯಿಸಿದರು. ಬೆನ್ನಿಗೇ ಚಾಮರಾಜ ನಗರದಿಂದ ಇನ್ನೊಂದು ‘ಕಾವ್ಯ’ ಧಾರೆ. ನಿಮ್ಮ ‘ಮಳೆ’ ಸಿನಿಮಾಗಳನ್ನು ಸಿಕ್ಕಾಪಟ್ಟೆ ಸಾರಿ ನೋಡಿ ದೀನಿ. ಆದ್ರೆ, ಸರ್ಕಸ್, ಬೊಂಬಾಟ್ ಇತ್ಯಾದಿ ಗಿಂತ ಮಳೆ ಫಿಲ್ಮೇ ಇಷ್ಟ. ಯಾವತ್ತೂ ‘ಮಳೆ’ಯಂಥ ಸಿನಿಮಾನೇ ಮಾಡಿ ಎಂದು ಹುಕುಂ ಚಲಾಯಿಸಿದರು.
ಹುಡುಗಿಯರೇ ಹೆಚ್ಚು: ಲೈನಿಗೆ ಬಂದವರಲ್ಲಿ ಹೆಚ್ಚಿನ ವರು ಕಾಲೇಜು ಹುಡುಗರು, ಅದರಲ್ಲೂ ಹೆಚ್ಚು ಹುಡುಗಿಯರು. ‘ನಿಮ್ಮ ಅಭಿಮಾನಿ ಸಾರ್. ತುಂಬಾ ತುಂಬಾ ಅಭಿಮಾನಿ. ಎಲ್ಲಾ ಸಿನಿಮಾನೂ ನೋಡಿದ್ದೇನೆ. ಆಕ್ಟಿಂಗು, ಡೈಲಾಗ್ ಡೆಲಿವರಿ ಎಲ್ಲಾ ಸೂಪರ್’ ಎಂದರು. ಕೆಲವರಂತೂ ಗಣೇಶ್ ಜತೆ ಮಾತನಾಡುವ ಭಾಗ್ಯ ಸಿಕ್ಕಿದ್ದಕ್ಕೆ ‘ಆಕಾಶಕ್ಕೆ ಮೂರೇ ಗೇಣು’ ಎನ್ನುವಷ್ಟು ಅಮಿತಾನಂದ ವ್ಯಕ್ತಪಡಿಸಿದರು.
‘ನಿಮ್ಮ ಪ್ರೀತಿ, ಎಕ್ಸೈಟ್‌ಮೆಂಟ್‌ಗೆ ಬೆಲೆ ಕಟ್ಟಲಾಗದು. ನಿಮ್ಮನ್ನು ಖುಷಿ ಪಡಿಸುವ ಸಿನಿಮಾ ಕೊಟ್ಟರಷ್ಟೆ ಸಾರ್ಥಕ್ಯ’ ಎಂದು ಗಣೇಶ್ ಮನದುಂಬಿ ಕೃತಜ್ಞತೆ ಸಲ್ಲಿಸಿ ದರು. ‘ಚೆನ್ನಾಗಿ ಓದಿ, ಭವಿಷ್ಯ ರೂಪಿಸಿಕೊಳ್ಳಿ’ ಎಂಬ ಸದಾಶಯದ ಸಲಹೆಯನ್ನೂ ನೀಡಿದರು.
‘ಕರೆ ಮಳೆ’ನಿಂತ ಮೇಲೂ: ಫೋನ್ -ಇನ್ ಮುಗಿಸಿ ಹೊರಬಂದರೆ ಅಲ್ಲೊಬ್ಬ ‘ಹುಚ್ಚು ಅಭಿಮಾನಿ’ ಅಣ್ಣನ ಜತೆ ಹಾಜರಿದ್ದಳು. ಗಣೇಶ್ ಎದುರಾದೊಡನೆ ಏದುಸಿರು ಹೆಚ್ಚಿ, ಮಾತೇ ಆಡಲಾಗದವಳಂತೆ ನಿಂತಳು. ಯಾವತ್ತೋ ನೆಚ್ಚಿನ ನಟನ ಜತೆ ತೆಗೆಸಿಕೊಂಡಿದ್ದ ಫೋಟೋ ತೋರಿಸಿ ಪರಿಚಯ ಹೇಳಿದಳು. ಮೊಬೈಲ್ ಕ್ಯಾಮೆರಾದಲ್ಲಿ ಮತ್ತೊಂದು ಫೋಟೋಕ್ಕೆ ಫೋಸು ನೀಡಿದಳು.‘ಪರೀಕ್ಷೆ ಮುಗಿಯೋದನ್ನೇ ಕಾಯ್ತಿದ್ದೆ ಸಾರ್, ಕೂಡಲೆ ಹೋಗಿ ನಿಮ್ಮ ಸಿನಿಮಾ ನೋಡ್ದೆ  ಎಂದು ಸಂಭ್ರಮಿಸಿದಳು.
ಹೀಗೆ, ಅಭಿಮಾನದ ಮಳೆ, ಪೋನ್ ಕರೆಗಳ ಹೊಳೆ ಯಲ್ಲಿ ತೊಯ್ದು ತೊಪ್ಪೆಯಾಗಿದ್ದರು ಗಣೇಶ್. ‘ನನ್ನ ಇಂಥ ಯುವ ಅಭಿಮಾನಿಗಳು ದಾರಿ ತಪ್ಪ ಬಾರದು ಎನ್ನುವ ಕಾರಣಕ್ಕೇ ಸಿನಿಮಾಗಳಲ್ಲಿ ವಲ್ಗರ್ ಡೈಲಾಗ್ ಬಳಸಲ್ಲ’ ಎಂದರು. ಬೆಳಗ್ಗೆಯಿಂದ ಕಚೇರಿಯ ಸ್ಥಿರ ಮತ್ತು ಮೊಬೈಲ್ ದೂರವಾಣಿಗಳಿಗೆ ಹರಿದು ಬರುತ್ತಿದ್ದ ಕರೆಗಳ ಮಳೆ ಅವರು ಬಂದು ಹೋದ ನಂತರವೂ ಮುಂದುವರಿದಿತ್ತು. 

ಕಳಪೆ ಸಾಧನೆ ಜಿಲ್ಲೆಗಳ ಪಟ್ಟಿಗೆ ಸೇರಿದ್ದೇ ದೊಡ್ಡ ಸಾಧನೆ

ವಿಕ ತಂಡ ಮಂಡ್ಯ
ದುಡಿಯುವ ಕೈಗೆ ಕೆಲಸದ ಜತೆ ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆಯೊಂದಿಗೆ ಜಾರಿಗೆ ಬಂದಿರುವ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಮಂಡ್ಯ ಜಿಲ್ಲೆಯಲ್ಲಿ ಲೂಟಿಕೋರರಿಗೆ ಹಬ್ಬದೂಟವಾಗಿದೆ.
ಯೋಜನೆ ಮೂಲ ಉದ್ದೇಶ ಮತ್ತು ಆಶಯಗಳು ಈಡೇರಿಲ್ಲ. ಭ್ರಷ್ಟ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಗುತ್ತಿಗೆದಾರರು, ಯಂತ್ರೋಪಕರಣಗಳ ಮಾಲೀಕರು ಇಲಿ-ಹೆಗ್ಗಣಗಳಂತೆ ಯೋಜನೆಯ ಹಣವನ್ನು ತಿಂದು ತೇಗಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ ಬಿಡುಗಡೆಯಾಗಿರುವ ೪೧.೮೦ ಕೋಟಿ ರೂ. ಪೈಕಿ ೧೬.೬೪ ಕೋಟಿ ರೂ. ಇನ್ನೂ ಬಳಕೆಯಾಗಿಲ್ಲ. ೨೫.೧೬ ಕೋಟಿ ರೂ.ನಲ್ಲಿ ನಡೆದಿರುವುದೆಲ್ಲವೂ ಕಾಟಾಚಾರದ ಕೆಲಸವೇ ಹೊರತು ಶಾಶ್ವತವಾಗಿ ಉಳಿಯುವ ಕೆಲಸಗಳು ಬೆರಳೆಣಿಕೆಯಷ್ಟು ಮಾತ್ರ.
೧,೭೫,೬೯೨ ಕುಟುಂಬಗಳ ೪,೪೪,೧೩೨ ಮಂದಿ ಯೋಜನೆಯಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇಲ್ಲಿವರೆಗೆ ೧,೬೯,೯೬೪ ಮಂದಿಗೆ ಜಾಬ್ ಕಾರ್ಡ್ ವಿತರಣೆಯಾಗಿದೆ. ಕಡತದಲ್ಲಿರುವ ಪ್ರಕಾರ ೧,೫೮,೪೪೬ ಮಂದಿ ಕೆಲಸ ನಿರ್ವಹಿಸಿದ್ದಾರೆ.
೨೪,೫೯೦ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ  ೭೬೧೦ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಯೋಜನೆಯಲ್ಲಿ ಕಳಪೆ ಸಾಧನೆ ಮಾಡಿರುವ ರಾಜ್ಯದ ಕೆಲವೇ ಜಿಲ್ಲೆಗಳ ಪೈಕಿ ಮಂಡ್ಯ ಕೂಡಾ ಒಂದಾಗಿದೆ.
ಕೂಲಿ ಕಮ್ಮಿಯಾಯ್ತು: ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಯಲ್ಲಿ ವರ್ಷ ಪೂರ್ತಿ ಕೈತುಂಬಾ ಕೆಲಸ ಇದ್ದೇ ಇದೆ. ರಾಜ್ಯದ ಬೇರೆಡೆಗೆ ಹೋಲಿಸಿದರೆ ಈ ಜಿಲ್ಲೆಯಲ್ಲಿ ಕೂಲಿಕಾರರಿಗೆ ಹೆಚ್ಚಿನ ಕೂಲಿ ಹಣವೂ ದೊರೆಯುತ್ತಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರತಿ ದಿನ ೧೦೦ ರೂ. ಕೂಲಿ ನಿಗದಿಯಾಗಿದೆ.  ಆದರೆ, ಮಂಡ್ಯದಲ್ಲಿ ಕೃಷಿ ಕೂಲಿಕಾರರಿಗೆ ಒಪ್ಪೊತ್ತಿಗಾದರೆ ೧೦೦, ದಿನಕ್ಕೆ ೧೫೦ ರೂ. ಕೂಲಿಯ ಜತೆ ಒಂದೊತ್ತಿನ ಊಟ, ಬೀಡಿ-ಬೆಂಕಿ ಪೊಟ್ಟಣ ಕೊಡುತ್ತಾರೆ. ಕೆಲವರು ಬಾಟಲಿ ಕೊಡುವುದೂ ಉಂಟು. ಹೀಗಾಗಿ ಕೃಷಿ ಕೂಲಿಕಾರರು ಉದ್ಯೋಗ ಖಾತ್ರಿ ಯೋಜನೆ ಕಡೆ ಅಷ್ಟಾಗಿ ಆಕರ್ಷಿತರಾಗಿಲ್ಲ. ಬಹುಪಾಲು ನೀರಾವರಿ ಹೊಂದಿರುವ ಶ್ರೀರಂಗಪಟ್ಟಣ ಮತ್ತು ಪಾಂಡವಪುರದಂಥ ತಾಲೂಕುಗಳಲ್ಲಿ ಯೋಜನೆಯನ್ನು ಕೇಳುವವರೇ ಇಲ್ಲ.
ಮೇಕೆ ಮೂತಿಗೆ: ಕೋತಿ ತಾ ತಿಂದು, ಮೇಕೆ ಮೂತಿಗೆ ಒರೆಸಿತು ಎನ್ನುವ ನಾಣ್ಣುಡಿಯಂತೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಡ ಕೃಷಿ ಕೂಲಿಕಾರರ ಹೆಸರಿನಲ್ಲಿ ಭ್ರಷ್ಟರು ಬೂರಿ ಭೋಜನ ಸವಿದಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಬಹುಪಾಲು ಗ್ರಾ.ಪಂ. ಹೆಗಲಿಗೆ ಬಿದ್ದಿದೆ. ಹಣಕ್ಕಾಗಿ ಹಪಾಹಪಿಸುತ್ತಿದ್ದ ಸದಸ್ಯರು ಮತ್ತು ಕಾರ್ಯದರ್ಶಿಗಳು ಯೋಜನೆ ಯನ್ನು ಹಳ್ಳ ಹಿಡಿಸಿದ್ದಾರೆ. ಲಕ್ಷಗಟ್ಟಲೆ ಹಣ ಜೇಬಿಗೆ ಇಳಿಸಿಕೊಂಡಿದ್ದೂ ಆಗಿದೆ.
ಕೃಷಿ ಕೂಲಿಕಾರರ ಹೆಸರಿನಲ್ಲಿ ತಮ್ಮ ಆಪ್ತೇಷ್ಟರು, ಹಿಂಬಾಲಕರು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನೆಲ್ಲಾ ಯೋಜನೆಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಕೆಲವೆಡೆ ಅರೆ ಸರಕಾರಿ, ಖಾಸಗಿ ಸಂಸ್ಥೆಗಳ ಉದ್ಯೋಗಿಗಳೂ ಯೋಜನೆಯ ಜಾಬ್ ಕಾರ್ಡ್ ಗಿಟ್ಟಿಸಿದ್ದಾರೆ.
ಜಾಬ್ ಕಾರ್ಡ್ ಹೊಂದಿದವರಿಗೆ ಬ್ಯಾಂಕ್ ಖಾತೆ ಮೂಲಕ ಕೂಲಿ ಹಣ ಪಾವತಿಸಲಾಗುತ್ತಿದೆ. ಕಾರ್ಡ್‌ದಾರರಿಗೆ ಕೊಸರಿನಷ್ಟು ಕೊಟ್ಟು, ಕಾರ್ಡ್ ಮಾಡಿಸಿಕೊಟ್ಟ ವರು ಕೊಳ್ಳೆ ಹೊಡೆಯುತ್ತಿರುವುದು ಮಾಮೂಲಾಗಿದೆ. ಯಂತ್ರೋಪಕರಣಗಳನ್ನು ಬಳಸಿ ಕಾಮಗಾರಿ ನಿರ್ವಹಿಸಿರುವ ಸ್ಥಳಗಳಲ್ಲಿ ಗುದ್ದಲಿ, ಹಾರೆ, ಮಂಕರಿ ಹಿಡಿದ ಹತ್ತಿಪ್ಪತ್ತು ಕೂಲಿಕಾರರನ್ನು ನಿಲ್ಲಿಸಿ ತೆಗೆಸಿದ ಫೋಟೋಗಳನ್ನು ಗ್ರಾ.ಪಂ.ಗೆ ಸಲ್ಲಿಸಿ ಬಿಲ್ ಮಾಡಿಸಿಕೊಳ್ಳಲಾಗಿದೆ. ಫೋಟೋ ತೆಗೆಸಿಕೊಂಡವರಿಗೆ ೫೦-೧೦೦ ರೂ. ತಲುಪಿದೆ.
ಯಂತ್ರಗಳ ಬಳಕೆ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಂತಿಷ್ಟೇ ಪ್ರಮಾಣದಲ್ಲಿ ಯಂತ್ರೋಪಕರಣ ಗಳನ್ನು ಬಳಸಬೇಕೆನ್ನುವ ನಿಯಮವಿದೆ. ಆದರೆ, ಬಹುಪಾಲು ಕಾಮಗಾರಿಗಳು ಯಂತ್ರೋಪಕರಣಗಳಿಂದಲೇ ನಡೆದಿವೆ. ಯೋಜನೆಯು ಜೆಸಿಬಿ, ಹಿಟಾಚಿ ಮತ್ತು ಡೋಸರ್‌ಗಳ ಮಾಲೀಕರಿಗೆ ಸುಗ್ಗಿಯಾಗಿದೆ. ಕೆರೆ ಹೂಳೆತ್ತುವುದಕ್ಕೊಂದು ಬಿಲ್. ಹೂಳು ತೆಗೆದ ಮಣ್ಣನ್ನು ಕೆರೆ ಏರಿ ಮೇಲೆ ಹಾಕುವುದಕ್ಕೆ ಮತ್ತೊಂದು ಬಿಲ್. ಹೀಗೆ ನಡೆದಿದೆ ಯೋಜನೆ ಅನುಷ್ಠಾನ. ಕೃಷಿ ಮತ್ತು ಜಲಾನಯನ ಅಭಿವೃದ್ಧಿಗೆ ಮೀಸಲಾದ ಅನುದಾನದಲ್ಲಿ ಜಮೀನುಗಳ ಬದು ನಿರ್ಮಾಣ, ಬಾಳೆ, ಮಾವು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳನ್ನು ಹಾಕಲಾಗಿದೆ. ಈ ವಿಷಯದಲ್ಲಷ್ಟೇ ಯೋಜನೆ ಒಂದಿಷ್ಟು ಪ್ರಗತಿ ಸಾಧಿಸಿರುವುದೇ ಸಂತೃಪ್ತಿ.
ಯೋಜನೆ ಮಾತ್ರ ಖಾತ್ರಿ:  ಮಂಡ್ಯ ತಾಲೂಕಿನ ಮಟ್ಟಿಗೆ ಹೇಳುವುದಾದರೆ ಯೋಜನೆಯಷ್ಟೇ ಖಾತ್ರಿ. ಕೆಲಸ ಮತ್ತು ಕೂಲಿಗೆ ಬಿದ್ದಿರುವುದು ಕತ್ತರಿ ಎನ್ನುವಂತಾಗಿದೆ. ಯೋಜನೆ ಅನುಷ್ಠಾನದ ಬಗ್ಗೆ ಹೇಳೋರು ಕೇಳೇರೋ ಇಲ್ಲ.
ತಾಲೂಕಿನಲ್ಲಿ ೧೯೭೫೭ ಕುಟುಂಬಗಳನ್ನು ನೋಂದಣಿ ಮಾಡಲಾಗಿದೆ. ೧೮೧೯೦ ಮಂದಿಗೆ ಜಾಬ್ ಕಾರ್ಡ್ ವಿತರಣೆಯಾಗಿದೆ. ಬಸರಾಳು ಹೋಬಳಿಯಲ್ಲಿ ಒಂದಿಷ್ಟು ಸಾಧನೆ ಆಗಿದೆ. ಉಳಿದೆಲ್ಲೆಡೆ ಯೋಜನೆ ಹೊಳೆಯಲ್ಲಿ ಹುಣಸೆ ಹಣ್ಣು ತೊಯ್ದಂತಾಗಿದೆ. ಮಂಡ್ಯ ತಾಲೂಕಿಗೆ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ ೧೦.೫೦ ಕೋಟಿ ರೂ. ಬಿಡುಗಡೆಯಾಗಿದೆ. ಶಾಸಕರು, ಸಂಸದರ ಬಾಲಂಗೋಚಿಗಳೆಲ್ಲಾ ಪ್ರಭಾವ ಬೀರಿ ಕೆಲಸ ಮಾಡಿಸಿದ್ದಾರೆ. ಅವರಲ್ಲಿ ಬಹುತೇಕರು ಗುತ್ತಿಗೆದಾರರೇ. ಇನ್ನು ಕೆಲವರು ಪುಢಾರಿಗಳು.
ಪೇಟೆಯಲ್ಲೇ ಹೆಚ್ಚು ಲೂಟಿ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅತಿ ಹೆಚ್ಚು ಲೂಟಿ ನಡೆದಿರುವುದು ಕೆ.ಆರ್.ಪೇಟೆ ತಾಲೂಕಿನಲ್ಲಿ. ಈ ಬಗ್ಗೆ ವಿಧಾನಸಭೆ ಮಾಜಿ ಸ್ಪೀಕರ್ ಕೃಷ್ಣ ಅವರು ಪ್ರತಿ ಗ್ರಾ.ಪಂ. ಮಟ್ಟಕ್ಕೆ ಇಳಿದು ಪರಿಶೀಲಿಸಿ, ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.
ಉದ್ಯೋಗ ಖಾತ್ರಿಯಲ್ಲಿ  ೬.೯೩ ಕೋಟಿ ರೂ. ವ್ಯಯ ಆಗಿದ್ದು, ೧೧೭೮ ಕಾಮಗಾರಿಗಳು ನಡೆದಿವೆ. ಮಂದಗೆರೆ ಮತ್ತು ಮಾದಾಪುರ ಗ್ರಾ.ಪಂ.ಗಳಲ್ಲಿ ಅವ್ಯವಹಾರದ ಬಗ್ಗೆ ತಾ.ಪಂ. ಸದಸ್ಯರೇ ಗಲಾಟೆ ನಡೆಸಿದ್ದಾರೆ. ಅಮಾನತುಗೊಂಡಿದ್ದ ಇಬ್ಬರು ಗ್ರಾ.ಪಂ. ಕಾರ್ಯದರ್ಶಿಗಳು ಬೇರೆಡೆ ವರ್ಗ ಮಾಡಿಸಿಕೊಂಡು ಕೆಲಸಕ್ಕೆ ಹಾಜರಾಗಿದ್ದಾರೆ. 

ಉದ್ಯೋಗಕ್ಕಿಲ್ಲದ ಖಾತರಿ; ತಪ್ಪದ ವಲಸೆ

ವಿಕ ತಂಡ ಚಾಮರಾಜನಗರ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್‌ಆರ್‌ಇಜಿಎ) ಜಿಲ್ಲೆಯ ಮಟ್ಟಿಗೆ  ‘ಖಾತರಿ’ ಕಳೆದುಕೊಂಡಿದೆ.
ಉದ್ಯೋಗ ಅರಸಿ ವಲಸೆ ಹೋಗುವ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ   ಯಶಸ್ವಿಯಾಗಿಲ್ಲ. ಜಿಲ್ಲೆಯಾದ್ಯಂತ ಈ ಉಪಯುಕ್ತ ಯೋಜನೆ ಕಾಟಾಚಾರಕ್ಕೆಂಬಂತೆ ನಡೆಯುತ್ತಿದ್ಧು, ‘ಭರವಸೆ ’ ಕಳೆದುಕೊಳ್ಳುತ್ತಿದೆ.
ಈ ಯೋಜನೆಯಡಿ ಕಾಮಗಾರಿ ನಡೆಸಿದರೆ ಅಧಿಕಾರಿ ವರ್ಗಕ್ಕಾಗಲಿ, ಜನಪ್ರತಿನಿಧಿಗಳಿಗಾಗಲಿ ಒಂದು ಪೈಸೆ ’ಗಿಟ್ಟುವುದಿಲ್ಲ’  ಈ ಕಾರಣಕ್ಕಾಗಿಯೇ  ಯೋಜನೆ  ಹಾದಿ ತಪ್ಪಿದೆ.  ಉದ್ಯೋಗ ಖಾತ್ರಿ ಅನುಷ್ಠಾನದ ವಿಚಾರದಲ್ಲಿ ರಾಜ್ಯಕ್ಕೆ ಹಿಂದುಳಿದ ಗಡಿ ಜಿಲ್ಲೆಗೆ  ೨೪ನೇ ಸ್ಥಾನ !
ಈ ಸ್ಥಾನದ ಮೂಲಕವೇ ನಮ್ಮ ಆಡಳಿತ ವರ್ಗಕ್ಕೆ ಅಭಿವೃದ್ಧಿ ಬಗೆಗೆ ಇರುವ ಕಾಳಜಿ ಎಷ್ಟು ಎಂಬುದನ್ನು ಅಳೆಯಬಹುದು. ಒಂದೆಡೆ ಕಾರ್ಮಿಕರಿಗೆ ಕೆಲಸ, ಮತ್ತೊಂದೆಡೆ ಊರುಗಳ ಅಭಿವೃದ್ಧಿ. ಇಷ್ಟು ಅದ್ಬುತವಾಗಿರುವ  ಯೋಜನೆಯನ್ನು ಸದ್ಬಳಕೆ  ಮಾಡಿ ಕೊಳ್ಳುವಲ್ಲಿ ಜಿಲ್ಲೆ ತೀರ ಹಿಂದೆ ಬಿದ್ದಿದೆ.
ಹೆಚ್ಚಿಗೆ ಬಳಕೆಯಾಗಬೇಕಿತ್ತು: ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಯಾವುದೇ ಕೈಗಾರಿಕೆಗಳಿಲ್ಲ. ಕೃಷಿ ಅವಲಂಬಿತರೇ ಹೆಚ್ಚು. ಆದರೆ ಮಳೆ ಕೈಕೊಟ್ಟ ಕಾರಣ ರೈತರು ಹಾಗೂ ರೈತ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ವೇಳೆಯಲ್ಲಿ ಎನ್‌ಆರ್‌ಇಜಿಎ ವರವಾಗಿ ಪರಿಣಮಿಸಬೇಕಾಗಿತ್ತು. ಅನುಷ್ಠಾನದ ವಿಚಾರದಲ್ಲಿ ಮೊದಲ ಸ್ಥಾನ ಪಡೆಯಬೇಕಿತ್ತು.
ಆದರೆ ಇದರಲ್ಲಿ ‘ನುಂಗಲು’ ಯಾವುದೇ ಮಾರ್ಗವಿಲ್ಲ ಎಂಬ ಒಂದೇ ಕಾರಣಕ್ಕೆ ಬಹುತೇಕ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಯೋಜನೆ ಬಗ್ಗೆ  ನಿರಾಸಕ್ತಿ. ಎನ್‌ಆರ್‌ಇಜಿಎ ಬಹುತೇಕ ಎಲ್ಲ ಇಲಾಖೆಗಳ ವ್ಯಾಪ್ತಿಗೂ ಬರುತ್ತದೆ. ಇದಕ್ಕೆ ಅನುದಾನದ ಮಿತಿ ಇಲ್ಲ. ಎಷ್ಟೇ ಮೊತ್ತಕ್ಕೆ  ಕ್ರಿಯಾ ಯೋಜನೆ ತಯಾರಿಸಿದರೂ ಅಷ್ಟು ಅನುದಾನ ಸಿದ್ಧ ಇರುತ್ತದೆ. ಹೀಗಿದ್ದರೂ ಸಂಬಂಧಪಟ್ಟ ಯಾವ ಇಲಾಖೆಯೂ ಶೇ. ೨೫ ರಷ್ಟು ಗುರಿಯನ್ನೂ ಮುಟ್ಟಿಲ್ಲ.
ತಪ್ಪದ ಕಾರ್ಮಿಕರ ವಲಸೆ: ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗೇ ಉದ್ಯೋಗ ನೀಡಬೇಕು. ಆ ಮೂಲಕ ಆಯಾ ಪ್ರದೇಶದ ಅಭಿವೃದ್ಧಿಯೂ ಆಗಬೇಕು ಎಂಬುದು ಯೋಜನೆಯ ಉದ್ದೇಶ. ಆದರೆ ಯೋಜನೆ ಸಮರ್ಪಕವಾಗಿ ಜಾರಿಗೊಳ್ಳದ ಕಾರಣ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಗೆ ವಲಸೆ ಹೋಗುವ ಕಾರ್ಮಿಕರ ಸಂಖ್ಯೆಯನ್ನು ತಗ್ಗಿಸಲು ಸಹ ಯೋಜನೆ ಮುನ್ನೆಡೆಸುವ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. 
ಇಂದಿಗೂ ಚಾ.ನಗರದ ಹರವೆ ಹೋಬಳಿ, ಕೊಳ್ಳೇಗಾಲದ ಪಾಳ್ಯ, ಯಳಂದೂರು ತಾಲೂಕಿನ ಅಗರ ಹೋಬಳಿ ವ್ಯಾಪ್ತಿಯ ಗ್ರಾಮಗಳಿಂದ ಒಟ್ಟಾರೆ ಸಹಸ್ರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಕೊಡಗು, ತಮಿಳುನಾಡು ಹಾಗೂ ಜಿಲ್ಲೆಯಲ್ಲೇ ಇರುವ ಹತ್ತಿಖಾನೆ ಎಸ್ಟೆಟ್‌ಗಳಿಗೆ ವಲಸೆ ಹೋಗುತ್ತಾರೆ.
ಗುಂಡ್ಲುಪೇಟೆ ತಾಲೂಕಿನ ಚೆನ್ನಮಲ್ಲಿಪುರ, ಬೇರಂಬಾಡಿ, ಕಗ್ಗಲದಹುಂಡಿ, ಕಣ್ಣೇಗಾಲ, ಕುಂದುಕೆರೆ ಗ್ರಾಮಗಳಿಂದಲೂ ಗುಂಪು, ಗುಂಪಾಗಿ ತಿಂಗಳುಗಟ್ಟಲೆ ವಲಸೆ ಹೋಗಿದ್ದಾರೆ. ಹೋಗುತ್ತಲೇ ಇದ್ದಾರೆ. ಇದು ಆ ಪೋಷಕರ ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತಿದೆ ಎಂಬುದು ಗಮನಾರ್ಹ ಅಂಶ.
ಗುರಿಯಿಂದ ದೂರವೇ ದೂರ:  ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ೧೦೪ ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ ೬೮ ಕೋಟಿ ರೂ. ಅನ್ನು ಖರ್ಚು ಮಾಡಲು ನಿಗದಿಗೊಳಿಸಲಾಗಿದೆ. ಆದರೆ ಈಗ ಖರ್ಚಾಗಿರುವ ಮೊತ್ತ ಕೇವಲ ೧೨ ಕೋಟಿ. ಜಿಲ್ಲೆಯಲ್ಲಿ ಒಟ್ಟು  ೧.೧೦ ಲಕ್ಷ ಕುಟುಂಬಗಳು ಉದ್ಯೋಗ ಅರಸಿ ಹೆಸರು ನೋಂದಾಯಿಸಿಕೊಂಡಿವೆ. ಆದರೆ ಈವರೆಗೆ ಕೆಲಸ ಕೊಟ್ಟಿರುವುದು ೨೫ ಸಾವಿರ ಕುಟುಂಬಕ್ಕೆ. ಅದರಲ್ಲೂ ಇಡೀ ನೂರು ದಿನ ಕೆಲಸ ಮಾಡಿರುವ ಕುಟುಂಬಗಳ ಸಂಖ್ಯೆ ಕೇವಲ  ೬೮೦.
ಜಿಲ್ಲೆಯ ೧೨೦ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಉದ್ಯೋಗ ಖಾತ್ರಿ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ ಈ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಕೊಳ್ಳೇಗಾಲ ತಾಲೂಕು ಸಿದ್ದಯ್ಯನಪುರ ಗ್ರಾ.ಪಂ. ಕಾರ್ಯದರ್ಶಿ ಚಂದ್ರು, ಮಹಾದೇಶ್ವರಬೆಟ್ಟದ ಶಿವಲಿಂಗಯ್ಯ ಹಾಗೂ ಚಾ.ನಗರ ತಾಲೂಕು ಬಿಸಲವಾಡಿ ಗ್ರಾ.ಪಂ.

ದೃಷ್ಟಿ ಇಲ್ಲ; ಆದರೆ ಓದುವ ಛಲವಿತ್ತು !

ಕುಂದೂರು ಉಮೇಶಭಟ್ಟ ಮೈಸೂರು  
ಮೈಸೂರಿನ ಈ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ. ಅದೂ ಸತತ ೧೫ನೇ ವರ್ಷವೂ ಎಲ್ಲರೂ ಉತ್ತೀರ್ಣರಾದ ಸಂಭ್ರಮ.
ಇದರಲ್ಲೇನು ವಿಶೇಷ ಎಂದಿರಾ? ಶೇ.೧೦೦ರ ಫಲಿತಾಂಶ ಪಡೆದಿರುವುದು ದೃಷ್ಟಿ ವಿಕಲಚೇತನರಿಗೆಂದೇ ಸರಕಾರ ನಡೆಸುತ್ತಿರುವ ಅಂಧರ ಸರಕಾರಿ ಶಾಲೆ.
ಗುರುವಾರ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿ ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ರಜೆಗೆಂದು ಊರಿಗೆ ಹೋಗಿದ್ದ ಕೆಲವರು ಫಲಿತಾಂಶಕ್ಕಾಗಿಯೇ ಶಾಲೆಗೆ ಬಂದಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಿರ್ಣರಾಗಿದ್ದಕ್ಕೆ ಏನನ್ನೋ ಜಯಿಸಿದ ಉತ್ಸಾಹ. ಶಿಕ್ಷಕರಲ್ಲೂ ಇಂಥದ್ದೇ ಭಾವನೆ. ಶತಮಾನದ ಇತಿಹಾಸದ ಶಾಲೆಯಲ್ಲಿ ಸತತ ೧೫ ವರ್ಷದಿಂದ ಶೇ.೧೦೦ರ ಫಲಿತಾಂಶ ಬರುತ್ತಿರುವುದಕ್ಕೆ ಹೆಮ್ಮೆಯ ಭಾವ.
ಖುಷಿಯೋ ಖುಷಿ: ಪರೀಕ್ಷೆಗೆ ಹಾಜರಾಗಿದ್ದ ೧೩ ವಿದ್ಯಾರ್ಥಿಗಳಲ್ಲಿ ೪ ಮಂದಿ ಪ್ರಥಮ ದರ್ಜೆ, ೮ ಮಂದಿ ದ್ವಿತೀಯ ದರ್ಜೆ ಹಾಗೂ ಒಬ್ಬನಿಗೆ ತೃತೀಯ ಶ್ರೇಣಿ.
ಮೈಸೂರು ಕಲ್ಯಾಣಗಿರಿಯ ಜಬೀವುಲ್ಲಾ ೪೬೦ ಅಂಕಗಳೊಂದಿಗೆ ಸ್ಕೂಲಿಗೆ ಮೊದಲಿಗ. ೮ನೇ ತರಗತಿಯಿಂದ ಇಲ್ಲೇ ಕಲಿತ ಆತ ಹೆಚ್ಚು ಅಂಕ ಪಡೆಯುವ ನಿರೀಕ್ಷೆ ಶಾಲೆಯವ ರಲ್ಲೂ ಇತ್ತು. ನಂತರದ ಸ್ಥಾನ ಪಡೆದವರು ಹಾಸನದ ಶಿವಣ್ಣ. ಈತನ ಅಂಕ ೪೪೩. ನಂತರದ ಸ್ಥಾನ ಹಾಸನ ಜಿಲ್ಲೆ ನಿಡುವಾಗಿಲು ಕೊಪ್ಪಲು ಗ್ರಾಮದ ವಿಜಯ್‌ಗೆ. ೪೦೩ ಅಂಕಗಳನ್ನು ಪಡೆದ ವಿಜಯ್‌ಗೆ ಇನ್ನಷ್ಟು ಅಂಕಗಳ ನಿರೀಕ್ಷೆಯಿತ್ತು. ಆದರೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಕ್ಕೆ ಖುಷಿಯಾಗಿದೆ. ನಂಜನಗೂಡು ತಾಲೂಕು ನಂದಿಗುಂದಪುರದ ರವಿಗೆ ೩೫೯ ಅಂಕಗಳಿಸಿದ್ದಕ್ಕೆ ಸಂತಸವಾಗಿದೆ.
‘ಈ ವರ್ಷದಿಂದ ನಮಗಿಂತ ಕೆಳ ವಯಸ್ಸಿ ನವರು ನಮಗೆ ಪರೀಕ್ಷೆ ಬರೆಯಲು ಸಹಕರಿಸುವ ಆದೇಶವನ್ನು ಹೊರಡಿಸಲಾಗಿದೆ. ಇದರಿಂದ ಅಂಕ ಕಡಿಮೆಯಾಗಿವೆ. ಈ ಹಿಂದೆಯಂತೆ ಹಿರಿಯರನ್ನೇ ಪರೀಕ್ಷೆ ಬರೆಯಲು ಕೊಟ್ಟರೆ ಉತ್ತಮ. ಮುಂದೆ ಡಿಪ್ಲೊಮಾ ಮುಗಿಸಿ ಎಂಜಿನಿಯರ್ ಆಗಬೇಕು’ ಎನ್ನುತ್ತಾನೆ ವಿಜಯ್.
೧೯೯೬ರಿಂದಲೂ ನಮ್ಮ ಶಾಲೆಗೆ ಶೇ.೧೦೦ರ ಫಲಿತಾಂಶ ಬರುತ್ತಿದೆ. ಹಿಂದೆಯೂ ಉತ್ತಮ ಫಲಿತಾಂಶ ಪಡೆದು ಜೀವನ ರೂಪಿಸಿಕೊಂಡಿ ದ್ದಾರೆ. ನಮ್ಮದು ಹೆಮ್ಮೆಯ ಶಾಲೆಯೇ  ಎನ್ನು ವುದು ಶಿಕ್ಷಕ ನೆಲೆಮನೆ ಶಬ್ಬೀರ್ ಸಂತಸದ ನುಡಿ.
ವಿಸ್ತರಣೆ ಯೋಜನೆ: ಮೈಸೂರು ಮಹಾ ರಾಜರ ಕಾಲದಲ್ಲಿ ದೃಷ್ಟಿ ವಿಕಲಚೇತನರಿಗೆಂದೇ ಈ ಶಾಲೆ ಆರಂಭವಾಯಿತು. ೧೯೦೧ರಲ್ಲಿ ಆರಂಭ ಗೊಂಡರೂ ೧೯೩೩ರಲ್ಲಿ ಸುಸಜ್ಜಿತ ಕಟ್ಟಡಕ್ಕೆ ವರ್ಗಾವಣೆಗೊಂಡಿತು. ೧ರಿಂದ ೧೦ನೇ ತರಗತಿವರೆಗೆ ಉಚಿತ ಶಿಕ್ಷಣ. ಇತ್ತೀಚಿನ ವರ್ಷಗಳಲ್ಲಿ ಸರಕಾರವೇ ಹುಬ್ಬಳ್ಳಿ. ಗುಲ್ಬರ್ಗಾ, ದಾವಣಗೆರೆಯಲ್ಲಿ ಅಂಧರ ಶಾಲೆಗಳನ್ನು ತೆರೆದಿದೆ. ಅಲ್ಲಿ ಪ್ರೌಢಶಾಲೆಯಿಲ್ಲ. ಜತೆಗೆ ಖಾಸಗಿ ಸಂಸ್ಥೆಗಳೂ ಶಾಲೆ ಆರಂಭಿಸಿದ್ದರಿಂದ ಇಲ್ಲಿಗೆ ಬರುತ್ತಿದ್ದವರ ಸಂಖ್ಯೆ ಕಡಿಮೆಯಾಗಿದೆ.
ಪ್ರಸ್ತುತ ೬೨ ಮಂದಿ ಕಲಿಯುತ್ತಿದ್ದಾರೆ. ಇಲ್ಲಿ ೧೨೫ ವಿದ್ಯಾರ್ಥಿಗಳವರೆಗೆ ಅವಕಾಶವಿದೆ. ಶಿಕ್ಷಕರೂ ಸಾಕಷ್ಟಿಲ್ಲ. ಈ ವರ್ಷ ದೃಷ್ಟಿಹೀನ ವಿಕಲಚೇತನರ ಸಂಖ್ಯೆ ಹೆಚ್ಚಳಕ್ಕೆ ಸಮೀಕ್ಷೆ ನಡೆಸಿ ಪ್ರಚಾರವನ್ನೂ ನಡೆಸಲಾಗುತ್ತಿದೆ ಎನ್ನುತ್ತಾರೆ ಶಾಲೆ ಅಧೀಕ್ಷಕಿ ಟಿ.ಎಸ್.ಅರುಂಧತಿ.
ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದರೂ ಫಲಿತಾಂಶದ ಪ್ರಮಾಣ ಮಾತ್ರ ಕುಸಿದಿಲ್ಲ. ಇದು ಸಾಮಾನ್ಯ ಶಾಲೆಯ ಮಕ್ಕಳ ಕಣ್ಣು ತೆರೆಸುವ ಸಾಧನೆ. ವಿವರಗಳಿಗೆ ಶಾಲೆಯ ಅಧೀಕ್ಷಕರ ದೂರವಾಣಿ ಸಂಖ್ಯೆ-೯೬೬೩೫೬೭೪೧೮

ಭಿಕ್ಷೆ ಬೇಡುತ್ತಿದ್ದವರು ಎಸ್‌ಎಸ್‌ಎಲ್‌ಸಿ ಪಾಸಾದರು...

ಪಿ.ಓಂಕಾರ್  ಮೈಸೂರು
ವರ್ಷಗಳ ಹಿಂದೆ ಬೀದಿಯಲ್ಲಿ, ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದವರು, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ದುಡಿದು ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದ ‘ಬಾಲ ಕಾರ್ಮಿಕರು’ ಹೂ ನಗೆ ಬೀರಿದ್ದಾರೆ. ಎಸ್‌ಎಸ್‌ಎಲ್‌ಸಿ ‘ಅಗ್ನಿ ಪರೀಕ್ಷೆ’ಯ ಯಶಸ್ಸು ೭ ಮಕ್ಕಳ ಬದುಕಿನಲ್ಲಿ ಆಶಾಕಿರಣ ಮೂಡಿಸಿದೆ. ಈ ‘ಮೊಗ್ಗು’ಗಳು ಹೂವಾಗಿ ಅರಳಲು ಆಸರೆಯಾದದ್ದು ನಗರದ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ). ಇದರ ‘ಆಶಾಕಿರಣ’ (ಬಾಲಕರಿಗೆ) ಮತ್ತು  ‘ಆಶಾಭವನ’(ಬಾಲಕಿಯರು)ದ ಆಶ್ರಯ ದಲ್ಲಿ ಬೆಳೆದು, ಕೀಳನಪುರ  ಸರಕಾರಿ ಪ್ರೌಢಶಾಲೆ ಯಲ್ಲಿ  ಓದಿದ  ಇವರದ್ದು ಹುಬ್ಬೇರಿಸುವಂಥ  ಸಾಧನೆ. ಈ ಪೈಕಿ ಒಂದಿಬ್ಬರಿಗೆ ಅಕ್ಷರ ಜ್ಞಾನವೇ ಇರಲಿಲ್ಲ. ಈ ‘ಛಲದಂಕ ’ರದ್ದು ಒಂದೊಂದು ಕತೆ. ನೀವೇ  ಓದಿ. ವಿಶೇಷ  ಎನ್ನಿಸಿದರೆ ಶಹಬ್ಬಾಸ್ ಹೇಳಿ.  
೧.ರಮೇಶ್ ಚಂದ್ರ
ಅಲೆಮಾರಿ ಕುಟುಂಬದ ಕೂಸು. ಭಿಕ್ಷೆ ಬೇಡಲು ಹೋಗದ್ದಕ್ಕೆ ಹೆತ್ತವರಿಂದ ತಲೆ ಒಡೆಸಿಕೊಂಡು ಯಾರದೋ ಕೃಪೆಯಿಂದ ಚಿಕಿತ್ಸೆ  ಪಡೆದು ಮನೆ ಬಿಟ್ಟಾಗ ನೆನಪಿನಲ್ಲಿ ಉಳಿದಿದ್ದ ಊರು ಹೊಳೆ ನರಸೀಪುರ. ರೈಲಿನಲ್ಲೇ ಭಿಕ್ಷೆ ಬೇಡುತ್ತಾ, ನಿದ್ದೆಗೆ ಶರಣಾಗಿ ಬಂದು ಇಳಿದದ್ದು ಮೈಸೂರು. ನಿಲ್ದಾಣದಲ್ಲಿ ಈತನನ್ನು ಆರ್‌ಎಲ್‌ಎಚ್‌ಪಿ ರಕ್ಷಿಸದಿದ್ದರೆ ಏನಾಗುತ್ತಿದ್ದನೋ? ಈಗ ಆತನ  ಬದುಕು ಅರಳಿದೆ. ೧ನೇ ತರಗತಿಗೆ ಸೇರಿ, ಈಗ ಎಸ್‌ಎಸ್‌ಎಲ್‌ಸಿಯನ್ನು ಪ್ರಥಮ ದರ್ಜೆ (೩೬೦) ಯಲ್ಲಿ ಮುಗಿಸಿದ್ದಾನೆ. ಮುಂದೆ ಓದಬೇಕು, ಶಿಕ್ಷಕ ನಾಗಿ ತನ್ನಂಥ ಹಿನ್ನೆಲೆಯ ಮಕ್ಕಳಿಗೆ ಪಾಠ ಮಾಡಬೇಕು ಎನ್ನುವುದು ಈತನ ಕನಸು ಮತ್ತು ಆದರ್ಶ.
೨. ಮಹದೇವ
ಮೈಸೂರು ತಾಲೂಕಿನ ಕಿರಾಳು ಗ್ರಾಮದವನು. ಮನೆಯಲ್ಲಿ ಕಡುಬಡತನ. ೬ನೇ ತರಗತಿವರೆಗೆ ಓದಿದ್ದ. ನಂತರ ಅಪ್ಪ-ಅಮ್ಮ ಕೂಲಿಗೆ ತಳ್ಳಿದರು. ಇವನಿಗೆ ಓದುವ ತುಡಿತ. ಅಪ್ಪ, ಮೈಸೂರಿಗೆ ಕರೆ ತಂದು ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ೧ ಸಾವಿರ ರೂ. ಪಡೆದು ಕೆಲಸಕ್ಕೆ ಸೇರಿಸಿದ. ಬಾಲಕಾರ್ಮಿಕ ವಿರೋಧಿ ಆಂದೋಲನ ನಡೆಯುತ್ತಿದ್ದಾಗ ಬಾರ್‌ನವರು ಹೊರಹಾಕಿದರು. ಅನಿವಾರ‍್ಯವಾಗಿ ಈತ ಭಿಕ್ಷೆಗೆ ನಿಂತ. ಒಂದು ದಿನ ಸಂಸ್ಥೆಯ ಕಾರ‍್ಯಕರ್ತರ ಕಣ್ಣಿಗೆ ಬಿದ್ದ. ೭ನೇ ತಗತಿಯಿಂದ ಶಿಕ್ಷಣ ಮುಂದು ವರಿದು ಈಗ ೨೯೯ ಅಂಕಗಳೊಂದಿಗೆ ಪಾಸ್. ಕಂಪ್ಯೂಟರ್‌ನಲ್ಲಿ ಆಸಕ್ತಿ. ಅದೇ ಕ್ಷೇತ್ರದಲ್ಲಿ ಬೆಳಯುವ ಕನಸು.
೩.ಮಹದೇವಸ್ವಾಮಿ
ಇವನದ್ದು ಒಂಥರ ಸಿನಿಮಾ ಕತೆ. ಚಾಮರಾಜನಗರದವನು. ಮನೆಯಲ್ಲಿ ಬಡತನ. ಓದುವ ಆಸಕ್ತಿ.  ೬ನೇ ತರಗತಿ ನಂತರ ಹೆತ್ತವರು ಹೊಟೆಲ್‌ನಲ್ಲಿ ಕೆಲಸಕ್ಕೆ ಹಚ್ಚಿದರು. ಅದು ಹಿಡಿಸಲಿಲ್ಲ. ಮನೆ ಬಿಟ್ಟ. ರೈಲಿನಲ್ಲಿ ಭಿಕ್ಷೆಗೆ ನಿಂತ. ಹೀಗೇ ಒಂದು  ದಿನ,  ಮೈಸೂರಿಗೆ ಬಂದು ಚಾಮರಾಜ ಪುರಂ ನಿಲ್ದಾಣದಲ್ಲಿ ಇಳಿದ. ಬೇಸರ  ಸಾವಿನ ಕದ ತಟ್ಟು ವಂತೆ ಮಾಡಿತು. ರೈಲು ಹರಿದು ಹೋಗಲಿ ಎಂದು  ಹಳಿಗಳ ಮೇಲೆ ಕುಳಿತ. ಆದರೆ, ಪೊಲೀಸರು ರಕ್ಷಿಸಿ ಆರ್‌ಎಲ್‌ಎಚ್‌ಪಿಗೆ ಒಪ್ಪಿಸಿದರು. ಶಿಕ್ಷಣ ಮುಂದುವರಿಯಿತು. ೨೬೩ ಅಂಕ ಗಳೊಂದಿಗೆ ಬದುಕಿನ ‘ಅಗ್ನಿ ಪರೀಕ್ಷೆ’ಯಲ್ಲಿ ಮೊದಲ ಜಯ.
೪. ಚೇತನ್
ಸಮೀಪದ ನಾಗನಹಳ್ಳಿಯವ. ಮನೆಯಲ್ಲಿ ಬಡತನ. ಅಪ್ಪನ ‘ಚೆಲ್ಲಾಟ’ದಿಂದ ಮನಸ್ಸಿಗೆ  ಘಾಸಿ. ಹೀಗೇ ಇದ್ದಾಗ ಅಪ್ಪ ಅಪಘಾತದಲ್ಲಿ ಸತ್ತ. ಅಮ್ಮ ಮನೆಗೆಲಸಕ್ಕೆ ನಿಂತಳು. ಕಷ್ಟ ಸಹಿಸಲಾಗದೆ ಮನೆ ಬಿಟ್ಟು ಓಡಿದವ ಮೈಸೂರಿನಲ್ಲಿ ಭಿಕ್ಷೆ ಬೇಡಲು ನಿಂತ. ಚಿಂದಿ ಆಯುವುದು ಉಪ ಕಸುಬು.ನಾಲ್ಕು ವರ್ಷದ ಹಿಂದೆ ಸಂಸ್ಥೆ ಕಣ್ಣಿಗೆ ಬಿದ್ದು ನಾಲ್ಕೋ, ಐದೋ ಓದಿದ್ದವನಿಗೆ ಅನೌಪಚಾರಿಕ ಶಿಕ್ಷಣ ನೀಡಿ ೭ನೇ ತರಗತಿಗೆ  ಸೇರಿಸಿತು. ೨೫೨ ಅಂಕ ಪಡೆದು ಎಸ್‌ಎಸ್‌ಎಲ್‌ಸಿಯನ್ನು ಗೆದ್ದ.
೫. ಮುರುಗೇಶ್
ಈತನ ಬದುಕು ಹುಟ್ಟಿದ್ದೇ ಬೀದಿಯಲ್ಲಿ. ಮನ್ನಾರ‍್ಸ್ ಮಾರ್ಕೆಟ್‌ನ  ಬೀದಿ ಬದಿ ಬದುಕು ಸಾಗಿಸುತ್ತಿದ್ದ  ಹೆತ್ತವರು ಅಲ್ಲಿಯೇ ಕೊನೆಯುಸಿರೆಳೆದರು. ಎಳೆಯ ಪ್ರಾಯದಲ್ಲೇ ಬೋಟಿ ಬಜಾರಿನಲ್ಲಿ ದುಡಿಮೆ. ಓದು ಈತನ ಪಾಲಿಗೆ ಗಗನ ಕುಸುಮವೇ. ೮ ವರ್ಷದ ಹಿಂದೆ ಸಂಸ್ಥೆಗೆ ಸೇರಿದ ನಂತರ ‘ಆಶಾಕಿರಣ’ಮೂಡಿತು. ಒಂದೆರಡು ವರ್ಷದ ಅನೌಪಚಾರಿಕ ಶಿಕ್ಷಣದ ನಂತರ ೫ ನೇ ತರಗತಿಗೆ ದಾಖಲು. ೨೭೩ ಅಂಕ ಪಡೆದು ಪಾಸಾದವನಿಗೆ ಕನಸುಗಳು ದೊಡ್ಡವಿವೆ.
೬.ವೆಂಕಟೇಶ್
ಬದುಕಿನ  ಸಂಘರ್ಷ ಆರಂಭವಾಗಿದ್ದು ಚಿಂತಾಮಣಿ ಯಲ್ಲಿ. ತಂದೆ, ತಾಯಿ ಓದು ಬಿಡಿಸಿ ಕೆಲಸಕ್ಕೆ ಹಚ್ಚಿದ್ದೇ ನೆಪವಾಗಿ ಮನೆಯಿಂದ ಕಾಲ್ಕಿತ್ತ. ಬೆಂಗಳೂರಿನ ಬೀದಿಯಲ್ಲಿ ಹೂವು ಮಾರುವ ಕೆಲಸ. ನಂತರ, ಹೊಟೆಲ್‌ನಲ್ಲಿ ಕೆಲಸ. ಬದುಕು ಬೇಸರ ಎನ್ನಿಸಿ, ೧೫೦ ರೂ. ಕದ್ದು ಕಂಬಿ ಕಿತ್ತು ಬಂದು ನಿಂತದ್ದು ಮೈಸೂರಿನ ಬಸ್ ನಿಲ್ದಾಣದಲ್ಲಿ. ಇಲ್ಲೂ ಹೂ ಮಾರಿದ. ರಾತ್ರಿ, ಪುರಭವನ ಎದುರಿನ  ತಿಂಡಿ ಗಾಡಿಗಳಲ್ಲಿ ಕೆಲಸ. ಆರ್‌ಎಲ್‌ಎಚ್‌ಪಿ ರಕ್ಷಿಸಿದ ನಂತರ  ಓದಿನ ಕನಸು ಅರಳಿ ೨೧೯ ಅಂಕಗಳೊಂದಿಗೆ ಜಸ್ಟ್ ಪಾಸ್. ಸಂತಸದ  ಸಂಗತಿ ಎಂದರೆ, ಆತನ ಹೆತ್ತವರು ಪತ್ತೆ ಆಗಿದ್ದಾರಂತೆ.
೭. ಲತಾ
ಮೈಸೂರು ತಾಲೂಕಿನವಳು. ಅಪ್ಪ ಇಲ್ಲ.ಅಮ್ಮ ಊರೂರು ಸುತ್ತಿ,ಬಳೆ ಮಾರಿ ಬದುಕಿನ ಬಂಡಿ ಎಳೆಯುತ್ತಿದ್ದಳು. ಪುಟ್ಟ ಬಾಲೆಯೂ ಅಮ್ಮನೊಂದಿಗೆ ಹೆಜ್ಜೆ ಹಾಕುತ್ತಿ ದ್ದಳು. ಇದನ್ನು ನೋಡಿದ ಯಾರೋ ಕರುಣಾಳುಗಳು ಈಕೆಯನ್ನು ಸಂಸ್ಥೆಗೆ ದಾಖಲಿಸಿ ದರು. ಬಳೆ ಮಾರುವ ವೃತ್ತಿಯನ್ನೇ ಅನುಸರಿಸಬೇಕಿದ್ದ ಬಾಲೆ ೨೮೭ ಅಂಕ ಗಳೊಂದಿಗೆ ಎಸ್‌ಎಸ್‌ಎಲ್‌ಸಿಯನ್ನು ಜಯಿಸಿದ್ದಾಳೆ. ನರ್ಸ್ ಆಗಬೇಕೆಂಬುದು ಈಕೆಯ ಕನಸು.

ದಲಿತರಲ್ಲಿ ಹೆಚ್ಚಿದ ರಾಜಕೀಯ ಪ್ರಜ್ಞೆ

ವಿಕ ವಿಶೇಷ ಮೈಸೂರು
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿಹೆಚ್ಚು  ಸ್ಪರ್ಧೆ ಏರ್ಪಟ್ಟಿರುವುದು ಎಲ್ಲಿ ಗೊತ್ತೆ ? ಪರಿಶಿಷ್ಟ ಜಾತಿಯ ಸಾಮಾನ್ಯ ವರ್ಗದಲ್ಲಿ  !
ಸಾಮಾನ್ಯ ಸೇರಿದಂತೆ ಎಲ್ಲ ರೀತಿಯ ಮೀಸಲು ವರ್ಗದಲ್ಲಿ  ಒಂದು ಸ್ಥಾನಕ್ಕೆ ಸರಾಸರಿ ಮೂವರು ಸ್ಪರ್ಧೆಯಲ್ಲಿದ್ದರೆ, ಪರಿಶಿಷ್ಟ ಜಾತಿಯ ಸಾಮಾನ್ಯ ವರ್ಗದಲ್ಲಿ ಮಾತ್ರ ಒಂದು ಸ್ಥಾನಕ್ಕೆ ನಾಲ್ವರು !
ಮೇ ೧೨ರಂದು ನಡೆಯಲಿರುವ ಮೈಸೂರು ಜಿಲ್ಲೆಯ  ಎಲ್ಲ  ಗ್ರಾ. ಪಂ. ಸದಸ್ಯ ಸ್ಥಾನಗಳ ಚುನಾವಣೆಯ ಅಂತಿಮ ಹಣಾಹಣಿ ಪಟ್ಟಿಯನ್ನು ನೋಡಿದರೆ- ಪರಿಶಿಷ್ಟ ಜಾತಿ ಬಂಧುಗಳಲ್ಲಿ  ರಾಜಕೀಯ ಆಸಕ್ತಿ ಹೆಚ್ಚಿರುವುದು  ಕಂಡು ಬರುತ್ತದೆ.
ಗ್ರಾ. ಪಂ. ಚುನಾವಣೆಯಲ್ಲಿ  ಮೀಸಲು ನೀತಿಯನ್ನು  ಅರ್ಹ ಎಲ್ಲ ಜಾತಿ-ಜನಾಂಗಗಳಿಗೆ, ಅದರಲ್ಲೂ ಮಹಿಳೆಯರಿಗೆ ವೈಜ್ಞಾನಿಕವಾಗಿ ಸಲ್ಲುವಂತೆ  ಜಾರಿಗೊಳಿಸಲಾಗಿದೆ. ಪರಿಶಿಷ್ಟ   ಜಾತಿ (ಸಾಮಾನ್ಯ), ಪರಿಶಿಷ್ಟ  ಜಾತಿ(ಮಹಿಳೆ);  ಪರಿಶಿಷ್ಟ  ಪಂಗಡ(ಸಾ), ಪರಿಶಿಷ್ಟ ಪಂಗಡ(ಮ);  ಬಿಸಿಎ(ಸಾ), ಬಿಸಿಎ(ಮ); ಬಿಸಿಬಿ(ಸಾ), ಬಿಸಿಬಿ(ಮ);  ಸಾಮಾನ್ಯ(ಸಾ), ಸಾಮಾನ್ಯ(ಮ) ಎಂಬ ವರ್ಗೀಕರಣದಲ್ಲಿ ಬ್ರಾಹ್ಮಣರನ್ನು ಹೊರತು ಪಡಿಸಿ ಜಿಲ್ಲೆಯ ಎಲ್ಲ ಜಾತಿ, ಜನಾಂಗಗಳ ಅರ್ಹರು ರಾಜಕೀಯ ಮೀಸಲು ವ್ಯಾಪ್ತಿಗೆ ಬರುತ್ತಾರೆ. (ಬಿಸಿಬಿಗೆ ಬರುವ ಒಕ್ಕಲಿಗರು, ಲಿಂಗಾಯತರು, ಕ್ರೈಸ್ತರನ್ನು ಹೊರತು ಪಡಿಸಿ, ಉಳಿದ  ಎಲ್ಲ ಹಿಂದುಳಿದ ಜಾತಿಗಳು ಬಿಸಿಎ ವ್ಯಾಪ್ತಿಗೆ ಬರುತ್ತವೆ. ಈ  ವರ್ಗದಲ್ಲೂ ಯಾರಿಗಾದರೂ ಐದು ಎಕರೆಗಿಂತ ಹೆಚ್ಚು ಜಮೀನು, ೨ ಲಕ್ಷ ರೂ. ಗಿಂತ ಅಧಿಕ ಆದಾಯ ಇದ್ದು, ಆದಾಯ ತೆರಿಗೆದಾರರು  ಇದ್ದರೆ, ಅಂಥವರಿಗೆ ಮೀಸಲು ಇರುವುದಿಲ್ಲ)
ಒಂದು ಸ್ಥಾನಕ್ಕೆ ನಾಲ್ವರು ಆಕಾಂಕ್ಷಿಗಳು: ಜಿಲ್ಲೆಯ ೨೩೫ ಗ್ರಾ. ಪಂ. ಗಳ ೪೩೦೦ ಸ್ಥಾನಗಳ ಪೈಕಿ ೪೦೮೦ ಸದಸ್ಯ ಸ್ಥಾನಗಳಿಗೆ ೧೩,೨೯೮ ಮಂದಿ ಸ್ಪರ್ಧಿಸಿದ್ದಾರೆ.  (ಒಟ್ಟು ಸ್ಥಾನಗಳ ಪೈಕಿ ೯ ಸ್ಥಾನಗಳು ಖಾಲಿ  ಉಳಿದಿದ್ದು, ೨೧೧ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ)
ಈ ಪೈಕಿ ಪರಿಶಿಷ್ಟ ಜಾತಿ ಸಾಮಾನ್ಯ ವರ್ಗದ ೫೨೨ ಸ್ಥಾನಗಳಿಗೆ ೧೮೮೮ ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಂದರೆ ಸರಾಸರಿ ಒಂದು ಸ್ಥಾನಕ್ಕೆ ನಾಲ್ವರು ಆಕಾಂಕ್ಷಿಗಳು. ಉಳಿದಂತೆ  ಪರಿಶಿಷ್ಟ ಜಾತಿಯ ಮಹಿಳೆಯರ ಸ್ಥಾನಗಳಿಗೆ ಹೊರತು ಪಡಿಸಿ ಉಳಿದ ಎಲ್ಲ ವರ್ಗಗಳಲ್ಲಿಯೂ ಒಂದು ಸ್ಥಾನಕ್ಕೆ ಮೂವರು ಕಣದಲ್ಲಿ ಇದ್ದಾರೆ.  ಪರಿಶಿಷ್ಟ ಪಂಗಡದ (ಮಹಿಳೆ ) ವರ್ಗದಲ್ಲಿ  ಒಂದು ಸ್ಥಾನಕ್ಕೆ ಸರಾಸರಿ  ಇಬ್ಬರು ಅಭ್ಯರ್ಥಿಗಳು  ಕಣದಲ್ಲಿ ಇದ್ದಾರೆ.
ಇಲ್ಲೆಲ್ಲಾ ಇದೇ ಕೊನೆಯ ಪಂಚಾಯಿತಿ ಚುನಾವಣೆ
ಆರ್. ಕೃಷ್ಣ  ಮೈಸೂರು
ಈ ಗ್ರಾಮ ಪಂಚಾಯಿತಿಗಳಿಗೆ ಇದೇ ಕೊನೆ ಚುನಾವಣೆ.
ಮೈಸೂರು ಮಗ್ಗುಲಲ್ಲೇ ಇರುವ ೧೫ ಗ್ರಾಮ ಪಂಚಾಯಿತಿಗಳಿಗೆ ಇದೇ ಕೊನೆ ಚುನಾವಣೆ ಆಗಲಿದ್ದು, ಮುಂದೆ ಇವು ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ. ಬೃಹತ್ ನಗರವಾಗಲು ಹೊರಟಿರುವ ಮೈಸೂರು ನಗರಪಾಲಿಕೆ ಯೊಳಗೆ ೧೫ ಗ್ರಾ. ಪಂ. ವ್ಯಾಪ್ತಿಯ ೪೨ ಗ್ರಾಮಗಳು ಸೇರ್ಪಡೆ ಗೊಳ್ಳುವುದರಿಂದ ಈ ಗ್ರಾಮಗಳಲ್ಲಿ ಮುಂದೆಂದೂ ಪಂಚಾಯಿತಿ ಚುನಾವಣೆ ನಡೆಯುವುದಿಲ್ಲ.
ಮೈಸೂರು ಹೆಸರಿನೊಂದಿಗೆ ಬೆಸೆದುಕೊಂಡಿರುವ ಚಾಮುಂಡಿ ಬೆಟ್ಟ ಇಷ್ಟು ವರ್ಷ, ಮೂರು ಸದಸ್ಯರನ್ನು ಹೊಂದಿದ್ದ ರಾಜ್ಯದ ಅತಿ ಚಿಕ್ಕ ಗ್ರಾಮ ಪಂಚಾಯಿತಿಯಾ ಗಿಯೇ ಕಾರ‍್ಯ ನಿರ್ವಹಿಸಿತ್ತು. ಇದು ಬೃಹತ್ ನಗರಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳ್ಳಲಿದೆ. ಇದರೊಂದಿಗೆ ನಗರಕ್ಕೆ ಹೊಂದಿಕೊಂಡಂತಿರುವ ಶ್ರೀರಾಂಪುರ, ಹಿನಕಲ್, ಆಲನಹಳ್ಳಿ, ಉತ್ತನ ಹಳ್ಳಿ, ಬೋಗಾದಿ, ರಮ್ಮನಹಳ್ಳಿ, ಹಂಚ್ಯಾ, ಬೆಳವಾಡಿ ಗ್ರಾಮ ಪಂಚಾಯಿತಿಗಳು ಬೃಹತ್ ನಗರಪಾಲಿಕೆ ವ್ಯಾಪ್ತಿಗೆ ಒಳಪಡಲು ಸಿದ್ಧತೆ ನಡೆಸಲಾಗಿದೆ. ಹೀಗಾಗಿ ಈ ಗ್ರಾಮಗಳಿಗೆ ಕೊನೆಯ ಗ್ರಾ.ಪಂ. ಚುನಾವಣೆ ಅಗಲಿದೆ.
ನರ್ಮ್ ಯೋಜನೆಯ ಷರತ್ತಿನ ಪ್ರಕಾರ ಮುಂದಿನ ೪೦-೫೦ ವರ್ಷದ ಮುಂದಾಲೋಚನೆಯ ಯೋಜನೆ ಹಮ್ಮಿ ಕೊಳ್ಳಬೇಕಿರು ವುದರಿಂದ ಪಾಲಿಕೆಯನ್ನು ಬೃಹತ್ ನಗರಪಾಲಿಕೆ ಯನ್ನಾಗಿ ಮಾರ್ಪಾಡು ಮಾಡುವುದು ಅನಿವಾರ್ಯ. ಈಗಾಗಲೇ ಬೆಂಗಳೂರು ಬೃಹತ್ ನಗರಪಾಲಿಕೆಯಾಗಿ ಮಾರ್ಪಾಡಾಗಿದ್ದು, ಈಗಷ್ಟೆ ಚುನಾವಣೆ ಮುಗಿಸಿದೆ.  ನರ್ಮ್ ಯೋಜನೆ ಜಾರಿಗೊಂಡ ಕೊಯಮತ್ತೂರು, ವಿಜಯವಾಡ, ವಿಶಾಖಪಟ್ಟಣ ಗಳು ಬೃಹತ್‌ನಗರವಾಗಿವೆ.
ಇದೇ ಮಾದರಿಯನ್ನು ಮೈಸೂರು ನಗರಪಾಲಿಕೆಯೂ ಅನುಸರಿಸ ಬೇಕಿದ್ದು, ‘ಬೃಹತ್‌ನಗರ’ ಯೋಜನೆಯನ್ನು ಸಿದ್ಧ ಪಡಿಸಿದೆ. ಯೋಜನೆಯನ್ನು ರಾಜ್ಯ ಸರಕಾರದ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದು, ಅನುಮತಿ ನೀಡುವುದಷ್ಟೇ ಬಾಕಿ ಉಳಿದಿದೆ. ಬೃಹತ್‌ನಗರವಾಗದಿರುವುದರಿಂದ ಎರಡನೇ ಹಂತದ ನರ್ಮ್ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂಬ ಷರತ್ತು ವಿಧಿಸಿ ರುವುದರಿಂದ ಮೈಸೂರು ಅನಿವಾರ್ಯವಾಗಿ ಬೃಹತ್ ನಗರವಾಗ ಬೇಕಿದೆ. ಈ ಬಗ್ಗೆ  ಪಾಲಿಕೆ, ಈಗಾಗಲೇ ಸಾಮಾನ್ಯ ಸಭೆಯಲ್ಲಿ ತನ್ನ  ಸರಹದ್ದು ವಿಸ್ತರಿಸುವ ಕುರಿತು ಒಂದು ವರ್ಷದ ಹಿಂದೆಯೇ  (೨೦೦೯ರ ಮೇ ೨೯) ಚರ್ಚಿಸಿದ್ದು, ಅನುಮೋದನೆ ಪಡೆಯಲಾಗಿದೆ.
೨೦೧೧ರಲ್ಲಿ ನಡೆಯುವ  ಜನಗಣತಿ ವೇಳೆ , ನಗರದ ಹೊರ ವಲಯದಲ್ಲಿರುವ ಬಡಾವಣೆಗಳು ಎಂದು ಗುರುತಿಸಿ ಗಣತಿ ನಡೆಸು ವಂತೆ ಸರಕಾರವನ್ನು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಲಿ ೮೯ ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಮೈಸೂರ ನಗರಪಾಲಿಕೆ ೬೫ ವಾರ್ಡ್‌ಗಳನ್ನು ಹೊಂದಿದೆ. ಇದನ್ನು ೨೧೦ ಚದರ ಕಿ.ಮೀ.ಗೆ ವಿಸ್ತರಿಸಿಕೊಂಡು ನೂರಕ್ಕೂ ಹೆಚ್ಚು ವಾರ್ಡ್ ಗಳನ್ನು ಹೊಂದಲು ಯೋಜನೆ ರೂಪುಗೊಂಡಿದೆ. ಪಾಲಿಕೆಗೆ ಮೂರು ವರ್ಷದಲ್ಲಿ ಸಾಮಾನ್ಯ ಚುನಾವಣೆ ನಡೆಯಲಿದ್ದು, ಆ ವೇಳೆಗೆ ಬೃಹತ್ ನಗರಪಾಲಿಕೆಗೆ ಸ್ಪಷ್ಟ ರೂಪು ದೊರೆಯಲಿದೆ.

ಪೂರ್ಣ ನನಸಾಗದ‘ಸುವರ್ಣ’ ಕನಸು

ವಿಕ ಸುದ್ದಿಲೋಕ ಮೈಸೂರು
ಸುವರ್ಣ ಗ್ರಾಮೋದಯ. ವಿಶಾಲ ಕರ್ನಾಟಕದ ಸುವರ್ಣ ಮಹೋ ತ್ಸವ ಪ್ರಯುಕ್ತ ೨೦೦೬ರ ಅಕ್ಟೋಬರ್‌ನಲ್ಲಿ ಕರ್ನಾಟಕ ಸರಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆ. ಸಮರ್ಪಕವಾಗಿ ಅನುಷ್ಠಾನವಾಗಿ ದ್ದರೆ ಮೈಸೂರು ಜಿಲ್ಲೆ ಏಳು ತಾಲೂಕು ವ್ಯಾಪ್ತಿಯ ೪೫ ಗ್ರಾಮಗಳೂ ಸೇರಿ ಕರ್ನಾಟಕದ ಸಾವಿರ ಹಳ್ಳಿಗಳು ‘ಸುವರ್ಣ’ ಕಳೆ ಪಡೆಯಬೇಕಿತ್ತು.
ಆದರೆ,ಹಲವು ಕೋಟಿಗಳು ಖರ್ಚಾದರೂ ‘ಇದು ಸುವರ್ಣ ಗ್ರಾಮ, ಯೋಜನೆಗಿದು ಮಾದರಿ’ ಎಂದು ಹೇಳಿಕೊಳ್ಳುವಂಥ ಒಂದೇ ಒಂದು ಗ್ರಾಮ ರೂಪುಗೊಂಡಿಲ್ಲ. ಬಹುತೇಕ ಯೋಜನೆ ಗಳಂತೆ ಇಲ್ಲೂ ‘ಆಗಬಾರದ್ದೇ’ ಹೆಚ್ಚಾಗಿದ್ದರಿಂದ ಸುವರ್ಣ ಕನಸು ಹಾಗೇ ಉಳಿದಿದೆ. ಮೊದಲ ಹಂತಕ್ಕೆ ಆಯ್ಕೆಯಾದ ಜಿಲ್ಲೆಯ ಗ್ರಾಮಗಳಲ್ಲಿ ಸುತ್ತು ಹೊಡೆದರೆ ಎಲ್ಲೂ ಅಭಿವೃದ್ಧಿ ಮಂತ್ರ ಪೂರ್ಣ ಅನುರಣಿಸಿದ ಉದಾಹರಣೆ ಇಲ್ಲ.
ಯೋಜನೆಯ ರೂವಾರಿ, ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ‘ರಾತ್ರಿ ವಾಸ್ತವ್ಯ’ಮಾಡಿ ಹೋದ ಹಳ್ಳಿ ಗಳಲ್ಲೂ ಶೇ.೧೦೦ ಗುರಿ ಸಾಧನೆ ಸಾಧ್ಯವಾಗಿಲ್ಲ.ಕೆಲವು ಕಾಮಗಾರಿ ಗಳು ಅಪೂರ್ಣ,ಕೆಲವು ಇನ್ನೂ ಅನುಷ್ಠಾನ ಹಂತದಲ್ಲಿವೆ. ಆರಂಭವೇ ಆಗದವು ಕೆಲವು. ಮಾತ್ರವಲ್ಲ, ಯಾವ ಗ್ರಾಮಕ್ಕೂ ಮಂಜೂರಾದ ಪೂರ್ತಿ ಹಣ ಬಿಡುಗಡೆಯಾಗಿಲ್ಲ.
‘ಹಳ್ಳಿ ರಾಜಕೀಯ’ದಿಂದಲೂ ಯೋಜನೆ ಹೊರತಾಗಿಲ್ಲ. ರಾಜ ಕೀಯ ‘ಪ್ರಬಲ’ರ ಮನೆಗಳಿರುವ ಕಡೆ ಹೆಚ್ಚು ಹಣ ಹರಿಸಿ, ಬಡವರು, ದನಿ ಇಲ್ಲದವರ ಬಗ್ಗೆ ನಿರ್ಲಕ್ಷ್ಯ ತಳೆದದ್ದಕ್ಕೂ ನಿದರ್ಶನ ಗಳಿವೆ. ಯಾವುದೇ ಅಭಿವೃದ್ಧಿ ಯೋಜನೆಗಳ ಫಲ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮಟ್ಟದಲ್ಲೇ ಹೆಚ್ಚು ‘ಹಂಚಿ’ ಹೋಗಿ ಫಲಾನುಭವಿಗಳಿಗೆ ‘ಕಾಲು ಭಾಗ’ಮಾತ್ರ ತಲುಪುತ್ತದೆ ಎನ್ನುವ ವಾಸ್ತವ ಇಲ್ಲಿಯೂ ಪುನರಾವರ್ತನೆಯಾಗಿದೆ. ಗ್ರಾ.ಪಂ. ಸದಸ್ಯರೂ ತಮ್ಮ ಊರಿನ ಉದ್ಧಾರಕ್ಕೆ ‘ಸಂಪೂರ್ಣ’ ತೊಡಗಿಸಿಕೊಂಡಂತಿಲ್ಲ.
ಹಿಂದಿನ ವರ್ಷದ ‘ಬಾಕಿ’ ಉಳಿಸಿಕೊಂಡೇ ಈಗ ಮತ್ತಷ್ಟು ಗ್ರಾಮ ಗಳಲ್ಲಿ ‘ಸುವರ್ಣ’ಕನಸು ಬಿತ್ತಲಾಗಿದೆ. ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಿ,ಆಡಳಿತಾತ್ಮಕ ಅನುಮೋದನೆಗೆ ಕಾಯಲಾಗು ತ್ತಿದೆ. ಈ ಮಧ್ಯೆ, ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಭರಾಟೆ ಆರಂಭವಾಗಿದೆ. ಊರಿನ ಉದ್ಧಾರದ ಕನಿಷ್ಠ ಕಾಳಜಿ ಹೊಂದಿರ ದವರು ಪಕ್ಷಾತೀತ ರಾಜಕೀಯ ಅಂಗಳದಲ್ಲಿ ತೊಡೆತಟ್ಟಲು ಸಜ್ಜಾಗುತ್ತಿದ್ದಾರೆ. ಈ ಸಂದರ್ಭ ಸುವರ್ಣ ಕನಸಿನ ಅನುಷ್ಠಾನ ಕುರಿತಂತೆ ತಾಲೂಕುವಾರು ನೋಟ.
ಮೈಸೂರು
೨೦೦೬-೦೭ರಲ್ಲಿ ಮೊದಲ ಹಂತಕ್ಕೆ ಇಲವಾಲ, ವರುಣಾ ಹೋಬಳಿ ಹಾರೋ ಹಳ್ಳಿ, ದಡದಕಲ್ಲಹಳ್ಳಿ, ಉದ್ಬೂರು, ಜೈಪುರ ಮತ್ತು ಚಿಕ್ಕಕಾನ್ಯ (೬ ಗ್ರಾಮ) ಆಯ್ಕೆ. ಒಟ್ಟು ಮಂಜೂರಾಗಿದ್ದು ೫.೯೩ ಕೋಟಿ ರೂ. ಬಿಡುಗಡೆ ೪.೩೨ ಕೋಟಿ ರೂ. ಈವರೆಗೆ ಖರ್ಚಾಗಿರುವುದು ೩.೯೧ ಕೋಟಿ ಮಾತ್ರ.
ಈ ಪೈಕಿ ದಡದಕಲ್ಲಹಳ್ಳಿ ಮತ್ತು ಚಿಕ್ಕಕಾನ್ಯ ಗ್ರಾಮಗಳು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ರಾತ್ರಿ ವಾಸ್ತವ್ಯ’ದಿಂದ ಗಮನಸೆಳೆದಿದ್ದವು. ಆದರೆ, ಇಲ್ಲಿಗೂ ಮಂಜೂರಾದಷ್ಟು ಹಣ ಬಿಡುಗಡೆ ಆಗಿಲ್ಲ. ಬಿಡುಗಡೆಯಾದ ಹಣವೂಪೂರ್ತಿ ಖರ್ಚಾಗಿಲ್ಲ.
ಜನಸಂಖ್ಯೆ ಆಧರಿಸಿ ದಡದಕಲ್ಲಹಳ್ಳಿಗೆ ಮಂಜೂರಾಗಿದ್ದು ೨೭.೫೦ ಲಕ್ಷ ರೂ. ಬಿಡುಗಡೆ ೨೫ ಲಕ್ಷ ರೂ. ಖರ್ಚಾಗಿದ್ದು ೧೬.೫೦ ಲಕ್ಷ ರೂ.ಮಾತ್ರ. ಚಿಕ್ಕಕಾನ್ಯದ್ದೂ ಇದೇ ಕತೆ. ಮಂಜೂರಾದ ಮೊತ್ತದ ಪೈಕಿ (೧೨.೭೫ ಲಕ್ಷ ರೂ.) ೫೦ ಸಾವಿರ ಬರಲಿಲ್ಲ. ಬಂದದ್ದರಲ್ಲೂ ೨ಲಕ್ಷ ರೂ.ಬಳಸಿಕೊಂಡಿಲ್ಲ. ಬಹುತೇಕ ಕಡೆ ಚರಂಡಿ, ರಸ್ತೆ, ಮೆಟ್ಲಿಂಗ್, ಅಂಗನವಾಡಿ, ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಆದ್ಯತೆ. ಇಲವಾಲ (೧.೨೩ ಕೋಟಿ ರೂ.), ಹಾರೋಹಳ್ಳಿ (೧.೦೫ಕೋಟಿ ರೂ.), ಉದ್ಬೂರು (೧೦೫.೫೮ಕೋಟಿ ರೂ.) ಗ್ರಾಮಗಳಲ್ಲಿ ಹೆಚ್ಚು   ಹಣ ಬಳಸಿಕೊಳ್ಳಲಾಗಿದೆ ಯಾದರೂ ‘ಸಮಸ್ಯೆಗಳ ಬೇತಾಳ’ ಬೆನ್ನು ಬಿಟ್ಟಿಲ್ಲ.
ಪಶುಸಂಗೋಪನಾ ಇಲಾಖೆ ಒಂದೆರಡು ಕಡೆ ಹೊಂದಾಣಿಕೆ ಮೊತ್ತದಲ್ಲಿ ಸವಲತ್ತು ನೀಡಿದೆಯಾದರೂ, ಉಳಿದ ಇಲಾಖೆಗಳು ಸ್ಪಂದಿಸಿದ್ದಕ್ಕೆ ಉದಾಹರಣೆ ಇಲ್ಲ. ಭೂ ಮಾಫಿಯ ಸಕ್ರಿಯವಾಗಿ ರುವ ಕಾರಣಕ್ಕೆ ಯಾವುದೇ ಗ್ರಾಮದಲ್ಲಿ ಒಂದೇ ಒಂದು ನಿವೇಶನ ವಿತರಣೆ ಸಾಧ್ಯವಾಗಿಲ್ಲ. ಈಗ ಮತ್ತೆ, ೯ ಗ್ರಾಮಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸಲು ಕ್ರಿಯಾಯೋಜನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ.
ಕೃಷ್ಣರಾಜನಗರ
ತಾಲೂಕಿನ ಭೇರ್ಯ, ಸಾಲಿಗ್ರಾಮ, ಮಿರ್ಲೆ, ಹೆಬ್ಬಾಳು, ಹಳೆಯೂರು ಗ್ರಾಮಗಳು ಯೋಜನೆಗೆ ಒಳಪಟ್ಟಿದ್ದು, ಸುಮಾರು ೫ ಕೋಟಿ ರೂ. ಬಿಡುಗಡೆಯಾಗಿದೆ. ಎಲ್ಲೂ ಪೂರ್ಣ  ಕಾಮಗಾರಿ ನಡೆದಿಲ್ಲ. ಭೇರ್ಯ ಮತ್ತಿತರ ಕಡೆ ಕಳಪೆ ಕೆಲಸ. ಪ್ರತಿಭಟನೆ ನಡೆದು, ಸ್ವತಃ ಶಾಸಕರೇ ಕಾಮಗಾರಿ ನಿಲ್ಲಿಸಿದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ಸಾಲಿಗ್ರಾಮಕ್ಕೆ ೨.೧೫ ಕೋಟಿ ರೂ., ಭೇರ್ಯಕ್ಕೆ ೭೫ಲಕ್ಷ ರೂ., ಮಿರ್ಲೆಗೆ ೧೧೫ ಲಕ್ಷ ರೂ., ಹೆಬ್ಬಾಳಿಗೆ ೮೬ಲಕ್ಷ ರೂ. ಬಿಡುಗಡೆಯಾಗಿದೆ. ಕೆಲವೆಡೆ ಹಣ ಉಳಿದು ವಾಪಸ್ ಹೋದ ಉದಾಹರಣೆಯೂ ಇದೆ. ಬಹುತೇಕ ಕಡೆ ರಸ್ತೆ ಬದಿಯ ತಿಪ್ಪೆಗುಂಡಿ ತೆರವಾಗಿಲ್ಲ. ನಿವೇಶನಗಳು ಉಳ್ಳವರ ಪಾಲಾಗಿರುವ ಉದಾಹರಣೆಗಳೇ ಹೆಚ್ಚು. ತ್ಯಾಜ್ಯ ವಿಲೇವಾರಿ ಮರೀಚಿಕೆ. ಯಾವುದೇ ಗ್ರಾಮ ಪೂರ್ಣ ‘ಸುವರ್ಣ’ವಾದ ಉದಾಹರಣೆ ಇಲ್ಲ.
ಎಚ್.ಡಿ.ಕೋಟೆ
ಹಿರೇಹಳ್ಳಿ, ಅಂತರಸಂತೆ, ಹೈರಿಗೆ, ಪಡುಕೋಟೆ ಗಾಂಧಿನಗರ, ಸಾಗರೆ, ಕೊತ್ತೇಗಾಲ, ಕಂದಲಿಕೆ ಮತ್ತು ಹಂಪಾಪುರ ಗ್ರಾಮಗಳು ಮೊದಲ ಹಂತಕ್ಕೆ ಆಯ್ಕೆಯಾದವು. ೨೦೦೯-೧೦ನೇ ಸಾಲಿಗೆ ಕ್ಯಾತನಹಳ್ಳಿ, ಆಲನಹಳ್ಳಿ. ಚಾಮಲಾಪುರ, ನಂದಿನಾಥಪುರ, ಜಿ.ಬಿ. ಸರಗೂರು, ಆಗತ್ತೂರು, ಕಾಟ ವಾಳು, ಬಿ.ಮಟಕೆರೆ, ರಾಮೇನಹಳ್ಳಿ, ಇಟ್ನ, ಹೆಬ್ಬಲಗುಪ್ಪೆ ಗ್ರಾಮಗಳು ಸೇರಿವೆ.
ಹೆಬ್ಬಲಗುಪ್ಪೆಯಲ್ಲಿ ಸಾಕಷ್ಟು ಕೆಲಸ ನಡೆದಿದ್ದು, ಇನ್ನೂ ೪೨ ಲಕ್ಷ ರೂ.ಗೆ ಬೇಡಿಕೆ ಸಲ್ಲಿಸಲಾಗಿದೆ. ಕೊತ್ತೇಗಾಲ,ಸಾಗರೆ, ಹಂಪಾಪುರ ಮತ್ತು ಪಡು ಕೋಟೆ ಕಾವಲ್ ಗಾಂಧಿನಗರ ಗ್ರಾಮಗಳಲ್ಲಿ ರಸ್ತೆ ಸಂಪೂರ್ಣ. ಹೈರಿಗೆ, ಅಂತರಸಂತೆ, ಆಲನಹಳ್ಳಿ, ಕ್ಯಾತನಹಳ್ಳಿ ಗ್ರಾಮಗಳಲ್ಲಿ ಕೆಲ ರಸ್ತೆಗಳು ಕಾಂಕ್ರೀಟ್ ಭಾಗ್ಯ ಕಂಡಿವೆ. ಚರಂಡಿ ಕಾಮಗಾರಿ ಎಲ್ಲೂ ನಡೆದಿಲ್ಲ. ಹಣ ವನ್ನು ‘ರಸ್ತೆ’ಗೆ ಹಾಕಲು ತೋರಿದ ಆಸಕ್ತಿಯನ್ನು ಉಳಿದ ಸವಲತ್ತು ನೀಡಿಕೆಗೆ ತೋರದ ಕಾರಣ ಗ್ರಾಮಗಳು ಎಂದಿನಂತೆ ಸಮಸ್ಯೆ ಹೊದ್ದು ಮಲಗಿವೆ.
ಪಿರಿಯಾಪಟ್ಟಣ
ಯೋಜನೆಗೆ ಆಯ್ಕೆಯಾದ ಬೆಟ್ಟದಪುರ, ದೊಡ್ಡಹರವೆ, ಮಾಕೋಡು, ಕಂಪಲಾಪುರ, ಹಲಗನಹಳ್ಳಿ ಗ್ರಾಮಗಳಲ್ಲಿ ರಸ್ತೆ, ಚರಂಡಿ ಮತ್ತಿತರ ಸಿವಿಲ್ ಕಾಮಗಾರಿಗೆ ಒತ್ತು. ಒಟ್ಟು ೪೫೩.೬೪ ಲಕ್ಷ ರೂ.ಗಳ ಅನುದಾನ. ಕೆಲವೆಡೆ ಅಂಗನವಾಡಿ,ಸಮುದಾಯ ಭವನ ಕಟ್ಟಡ ನಿರ್ಮಿಸಲಾಗಿದೆ.ತೋಟಗಾರಿಕೆ, ಕೃಷಿ ಉತ್ಪಾದನೆ, ಭೂ ಆಧರಿತ ಚಟುವಟಿಕೆ, ಶೌಚಾಲಯ, ಕೃಷಿ ಅರಣ್ಯೀಕರಣ, ಹೈನುಗಾರಿಕೆ ಮತ್ತಿತರ ಅಭಿವೃದ್ಧಿ ಸಾಧ್ಯತೆಗಳತ್ತ ಮುಖವನ್ನೇ ತೋರಿಸಿಲ್ಲ.
ಕಂಪಲಾಪುರದಲ್ಲಿ ಕೆರೆ ಬಳಿ ಕಸದತೊಟ್ಟಿ ನಿರ್ಮಾಣ, ಅಂಗನವಾಡಿ ಕಟ್ಟಡ ದುರಸ್ತಿ. ದೊಡ್ಡರವೆ, ಹಲಗನಹಳ್ಳಿ ಗ್ರಾಮ ಗಳಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ. ಬೆಟ್ಟದಪುರದಲ್ಲಿ ಸಿಮೆಂಟ್‌ರಸ್ತೆ, ಸಮುದಾಯ ಭವನ ನಿರ್ಮಾಣ. ಮಾಕೋಡಿನಲ್ಲೂ ಸಿಮೆಂಟ್ ರಸ್ತೆ ಆಗಿದೆ. ಆದರೆ, ಇಲ್ಲಿ ನಿರ್ಮಿಸಿರುವ ಚರಂಡಿ ಅತ್ಯಂತ ಕಿರಿದು. ಕಂಪಲಾಪುರದಲ್ಲಿ ಕೆಲವೆಡೆ ಮನೆಗಳಿಲ್ಲದ ಕಡೆ ಚರಂಡಿ ನಿರ್ಮಿಸಿರುವುದು ನಿರ್ಲಕ್ಷ್ಯಕ್ಕೆ ಸಾಕ್ಷಿ. ಗ್ರಾಮ ಮಧ್ಯದಲ್ಲೇ ತಿಪ್ಪೆಗುಂಡಿ ಗಳು ರಾರಾಜಿಸುತ್ತಿದ್ದು, ಸ್ಥಳಾಂತರಕ್ಕೆ ಕ್ರಮ ಕೈಗೊಂಡಿಲ್ಲ.
ದೊಡ್ಡಹರವೆಗೆ ೧೭.೩೮ ಲಕ್ಷ ರೂ.ಕೊರತೆ. ೧ ಕಿ.ಮೀ. ರಸ್ತೆ ಮತ್ತು ಚರಂಡಿ ಕಾಮಗಾರಿ ಬಾಕಿ. ಬೆಟ್ಟದಪುರ, ಹಲಗನಹಳ್ಳಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಕೆಲವೆಡೆ ಚರಂಡಿ ಅಂಚುಕಿತ್ತು ಬರುತ್ತಿದ್ದು, ಕಳಪೆ ಕಾಮಗಾರಿಗೆ ನಿದರ್ಶನ. ಮಾಕೋಡು ಗ್ರಾಮದಲ್ಲಿ ಸಮುದಾಯ ಭವನ ಇನ್ನ್ನೂ ತಳಪಾಯ ಹಂತದಲ್ಲಿದೆ. ಅಂಗನವಾಡಿಗೆ ಕಾಂಪೌಂಡ್ ನಿರ್ಮಾಣ ಯೋಜನೆ ರೂಪಿಸಿದ್ದರೂ ಕಾರ್ಯಗತವಾಗಿಲ್ಲ.

ಬಲ್ಲಿರಾ? ಸ್ಟ್ಯಾಂಡಿಂಗ್ ಆರ್ಡರ್‌ನ ಚಂಚಲರಾವ್

ಪಲ್ಲೆ ಚಂಚಲರಾವ್ ಪಂತುಲು ಆಗಿನ ಹೈದರಾಬಾದ್ ಪ್ರಾಂತ್ಯದ ಪಲ್ಲೆ ಗ್ರಾಮದವರು. ಬಹಳ ಬುದ್ಧಿವಂತ.  ಧೈರ್ಯವೇ ಮೈದಾಳಿದ ವ್ಯಕ್ತಿತ್ವ. ದಣಿವರಿಯದ ಶಕ್ತಿ. ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯ. ಬ್ರಿಟಿಷ್ ಸರ್ಕಾರ ಈ  ‘ರಾಜತಂತ್ರ ಪ್ರವೀಣ’ನ ಪ್ರತಿಭೆಯನ್ನು ಚೆನ್ನಾಗಿ ಬಳಸಿಕೊಂಡಿತು.
ನೋಡಿ. ೧೮೫೧ರಲ್ಲಿ ನೆಲ್ಲೂರಿನ ಸಿವಿಲ್ ನ್ಯಾಯಾಲಯದ ಕ್ಲರ್ಕ್ ಸೇವೆ ಆರಂಭಿಸಿದವರು ಪಂತುಲು. ಆಗ ತಿಂಗಳಿಗೆ ಹತ್ತು ರೂಪಾಯಿ ಸಂಬಳ. ಇವರ ಕಾರ್ಯವೈಖರಿ ಗಮನಿಸಿದ ಸರಕಾರ ಇನಾಂ ಆಯುಕ್ತರ ಇಲಾಖೆಯಲ್ಲಿ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿತು. ಆಗಿನ್ನೂ ಅವರಿಗೆ ೨೭ ವರ್ಷ.
ಇವರ ಆಡಳಿತ ವೈಖರಿಗೆ ಮನಸೋತ ಅಂದಿನ ಬ್ರಿಟಿಷ್ ಸರಕಾರ ೧೮೬೩ರಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಹುದ್ದೆ ನೀಡಿತು. ಅದು ರೆವೆನ್ಯೂ ಮಂಡಳಿಯಲ್ಲಿ ಅತ್ಯುನ್ನತ ಹುದ್ದೆ. ಕೊಯಮತ್ತೂರು, ಮದರಾಸಿನಲ್ಲಿ ಸೇವೆ. ಆಗ ಸಂಬಳ ತಿಂಗಳಿಗೆ ೧,೦೦೦ ರೂಪಾಯಿ. ವಿವಿಧ ಹುದ್ದೆಗಳು ಹೆಗಲೇರಿದವು. ಸ್ಟಾಂಪ್ ಅಂಡ್ ಸ್ಟೇಷನರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ೧೮೮೭ರ ಮಾರ್ಚ್ ೧ರಂದು ನಿವೃತ್ತಿ. ಕಂದಾಯ ಇಲಾಖೆ ಬಗ್ಗೆ ಇವರಲ್ಲಿದ್ದ ಆಡಳಿತ ಕೌಶಲ್ಯ, ರೆವೆನ್ಯೂ ಮಂಡಳಿಯಲ್ಲಿ ನೇರ ಅಭಿಪ್ರಾಯವನ್ನು ಕೊಡುವ ತಾಕತ್ತಿಗೆ ಸೋತ ಸರಕಾರ ನಾಲ್ಕು ವರ್ಷ ಸೇವೆ ಮುಂದುವರಿಸಿತು.
ರೆವಿನ್ಯೂ ಮಂಡಳಿಯಲ್ಲಿ ಚಂಚಲರಾವ್ ಹೇಳಿದ್ದೇ ಅಂತಿಮ. ಅವರ ಆದೇಶಗಳು ‘ಚಂಚಲರಾವ್ ಸ್ಟ್ಯಾಂಡಿಂಗ್ ಆರ್ಡರ್’ ಎಂದೇ ಖ್ಯಾತಿ. ವಿಕ್ಟೋರಿಯಾ ರಾಣಿ ರಾಯಲ್ ಗೌರವ ‘ಸಿಐಇ’ (ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್) ಬಿರುದು ಕೊಟ್ಟರು.

ಮೈಸೂರು ರಾಜರ ಕಣ್ಣು
ಬ್ರಿಟಿಷ್ ಆಡಳಿತ ಸೇವೆಯಿಂದ ನಿವೃತ್ತರಾಗುತ್ತಿದ್ದಂತೆ ಅಂದಿನ ಮೈಸೂರು ಮಹಾರಾಜ ಚಾಮರಾಜೇಂದ್ರ ಒಡೆಯರ್ ಕಣ್ಣು ಇವರ ಮೇಲೆ ಬಿತ್ತು. ಸರಿ. ಮೈಸೂರಿಗೆ ಕರೆಸಿಕೊಂಡು ಸರಕಾರದಲ್ಲಿ ಕೌನ್ಸೆಲರ್ ಹುದ್ದೆಯನ್ನು ಕೊಟ್ಟರು. ಅಲ್ಲಿಂದ ಶುರುವಾಯ್ತು ನೋಡಿ ಆಡಳಿತದಲ್ಲಿ ಹೊಸ ಪರ್ವ, ಆಧುನಿಕತೆಯ ಸ್ಪರ್ಶ.
ಮಹಿಳೆಯರ ಶಿಕ್ಷಣ, ವಿಧವಾ ವಿವಾಹಕ್ಕೆ ಉತ್ತೇಜನ, ಆಯುರ್ವೇದ ಅಭಿವೃದ್ಧಿ....ಯಾವುದೇ ವಿಷಯ ಇರಬಹುದು. ಎಲ್ಲದರ ಹಿಂದೆ ಇದ್ದವರು ಪಂತಲು. ಮೈಸೂರು ನಗರದಲ್ಲಿ ಮಹಾರಾಣಿಯವರ ಬಾಲಕಿಯರ ಶಾಲೆ ಪ್ರಾರಂಭವಾಗುವಲ್ಲಿ ಇವರ ಪ್ರಭಾವವೂ ದೊಡ್ಡದು. ಅಂದಿನ ದಿವಾನ್ ಶೇಷಾದ್ರಿ ಅಯ್ಯರ್ ಇವರ ಸ್ನೇಹಿತರೂ ಕೂಡ. ಪ್ರಾಮಾಣಿಕತೆ, ಶಿಸ್ತು, ಉದಾರತೆ, ಬುದ್ಧಿಮತ್ತೆ, ಪೌರ ಜಾಗೃತಿ ಇವರ ಸಾರ್ವಜನಿಕ ಜೀವನದಲ್ಲಿ ಹಾಸುಹೊಕ್ಕಾಗಿದ್ದವು.
ಚಂಚಲರಾವ್ ಪಂತುಲು ನಾವು ಮರೆಯಬಾರದ, ಆದರೆ ಮರೆತಿರುವ ಮಹಾನುಭಾವ.
ಈಚನೂರು ಕುಮಾರ್

ಸವಲತ್ತಿಲ್ಲ, ಮತದಾನ ಮಾತ್ರ ತಪ್ಪಿಸಿಲ್ಲ


ವಿಕ ಸುದ್ದಿಲೋಕ ಕೃಷ್ಣರಾಜನಗರ
ಎಷ್ಟೋ ಅಧಿಕಾರಿಗಳಿಗೆ  ಸೋಮನಹಳ್ಳಿ ಎಂಬ ಗ್ರಾಮ ತಾಲೂಕಿ ನಲ್ಲಿ ಇದೆ ಎಂಬುದೇ ಗೊತ್ತಿಲ್ಲ ಎಂದರೂ ಆಶ್ವರ್ಯವಿಲ್ಲ , ಗ್ರಾಮದ ಜನತೆ ಇಂದಿಗೂ ಬಸ್ ಹತ್ತಬೇಕಾದರೆ ೨ರಿಂದ ೩ ಕಿ.ಮೀ. ನಡೆದೇ ಹೋಗಬೇಕು.
ಖಾಸಗಿ ಕಂಪನಿಯಿಂದಾಗಿ ಗ್ರಾಮದ ಜನತೆ ವ್ಯವಸಾಯದಲ್ಲಿ ಸಾವಯವ ಕೃಷಿ ಅಳವಡಿಸಿಕೊಂಡಿರುವುದು ಹೊರತುಪಡಿಸಿದರೆ  ಮೂಲ ಸವಲತ್ತುಗಳು ಮಾತ್ರ ಈ ಗ್ರಾಮದಿಂದ ಬಲು ದೂರ.
ಈ ಗ್ರಾಮದಲ್ಲಿ  ಸಮರ್ಪಕ ವಿದ್ಯುತ್, ಕುಡಿಯುವ ನೀರು, ಚರಂಡಿ, ರಸ್ತೆ, ಶೌಚಾಲಯ, ಇಲ್ಲದಾಗಿದೆ.  ಪ್ರತಿಯೊಂದಕ್ಕೂ ದೂರದ ಭೇರ್ಯ, ಇಲ್ಲವೆ ಕೃಷ್ಣರಾಜನಗರ ತಾಲೂಕು ಕೇಂದ್ರ ವನ್ನೇ ಅವಲಂಬಿಸಬೇಕಾಗಿದೆ.  ಇಂದಿಗೂ ಯಾವುದೇ ಸವಲತ್ತು ಬಯಸದ ಇಲ್ಲಿಯ ಜನ ಪ್ರತಿ ಚುನಾವಣೆಯಲ್ಲಿ ಮತ ಚಲಾಯಿಸುತ್ತಾ ಬಂದಿದ್ದಾರೆ.
ತಾ. ಕೇಂದ್ರದಿಂದ ಸುಮಾರು ೨೩ ಕಿ.ಮೀ.ನಲ್ಲಿರುವ ಸೋಮನ ಹಳ್ಳಿಯ ಜನ ಹೊರಜಗತ್ತಿನ ಐಷಾರಾಮಿ ಜೀವನ ತಿಳಿದವರಲ್ಲ.  ಗ್ರಾಮದಲ್ಲಿ ೩೦೦ ಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ರಸ್ತೆಗಳು ಹಾಗೂ ಚರಂಡಿಗಳು ಯಾವುದು ಎಂಬುದು ತಿಳಿಯದಾಗಿದೆ. ಸರಕಾರಿ ಬಸ್ ಕಾಣದ ಇಲ್ಲಿನ ಜನ ಸಾಕಷ್ಟು  ವಿದ್ಯೆ ಪಡೆಯದಿದ್ದರೂ, ಧ್ವನಿ ಯಿಲ್ಲದೇ ಪ್ರಶ್ನಿಸಲಾಗದೇ, ಬಾಯಿಮುಚ್ಚಿ ಮತ ಚಲಾಯಿಸುತ್ತಿದ್ದಾರೆ.
ಸಮರ್ಪಕ ರಸ್ತೆಯಿಲ್ಲದೆ  ಶೌಚಾಲಯವಿಲ್ಲದ  ಇಲ್ಲಿ ಅಂಗನ ವಾಡಿ, ೫ನೇ ತರಗತಿವರೆಗಿನ  ಶಾಲೆ ಹಾಗೂ ಕಲ್ಲು ಮಣ್ಣಿನಿಂದ ಕೂಡಿದ ರಸ್ತೆಯೇ ಇವರ ಪಾಲಿಗೆ ಗತಿಯಾಗಿದೆ. ಚರಂಡಿಯಿಲ್ಲದ ಈ ಗ್ರಾಮದಲ್ಲಿ ಎಲ್ಲೆಂದರಲ್ಲಿ  ಚರಂಡಿ ನೀರು ನಿಂತಿದ್ದು, ಅನಾ ರೋಗ್ಯಕ್ಕೆ ಕಾರಣವಾಗಿದೆ . ಬೋರ್‌ವೆಲ್‌ನಿಂದ ಸೋಮನಹಳ್ಳಿ ಮತ್ತು ಪಕ್ಕದ ಗೇರುದಡ ಗ್ರಾಮಕ್ಕೆ ಕುಡಿಯುವನೀರು ಒದಗಿಸ ಲಾಗುತ್ತಿದ್ದು  ವಿದ್ಯುತ್ ಇದ್ದರೆ ಮಾತ್ರ ಇವರ ಪಾಲಿಗೆ ನೀರು ಲಭ್ಯ. ಇಲ್ಲವಾದಲ್ಲಿ  ಬೇರೆಡೆಗೆ ನೀರಿಗಾಗಿ ಅಲೆಯುವಂತಾಗಿದೆ.    
ಗ್ರಾಮದ ವಾಸಿಗಳಾದ ಪುಟ್ಟಸ್ವಾಮಯ್ಯ ಮತ್ತು ಕುಳ್ಳಯ್ಯ ಅವರನ್ನು ಪತ್ರಿಕೆಯು ಮಾತನಾಡಿಸಿದಾಗ “ಗ್ರಾಮದ ಸೌಕರ್ಯದ ಬಗ್ಗೆ ನಮಗೆ ತಿಳಿಯದು ಸಾರ್, ಎಲೆಕ್ಷನ್ ಬಂದೈತೆ ಓಟ್ ಹಾಕ್‌ಬೇಕು, ಹಾಕ್‌ತೀವಿ ಅಷ್ಟೇ" ಎಂದು ನಿರುತ್ಸಾಹ ವ್ಯಕ್ತಪಡಿಸುತ್ತಾರೆ. ಇವರು ಚುನಾವಣೆ ಬಗ್ಗೆ ಅಂಥ ಕುತೂಹಲವೇನೂ ಇಟ್ಟುಕೊಂಡಂತಿಲ್ಲ.
ಭೇರ್ಯ ಜಿ.ಪಂ. ತಾ.ಪಂ.ಕ್ಷೇತ್ರ ಹಾಗೂ ಗ್ರಾ.ಪಂ.ಗೆ ಸೇರಿರುವ ಈ ಗ್ರಾಮವು ಭೇರ್ಯದಿಂದ ಸುಮಾರು ೪ ಕಿ.ಮೀ. ದೂರದಲ್ಲಿರುವ ಈ ಗ್ರಾಮದ ನಿವಾಸಿಗಳು ತಮಗಾಗಿ ಏನನ್ನೂ ಪಡೆಯದಿದ್ರೂ ಚುನಾವಣೆಯಲ್ಲಿ ಮಾತ್ರ ಮತ ಚಲಾಯಿಸುವುದನ್ನು ಮರೆಯುವುದಿಲ್ಲ.
ಇಲ್ಲದ ರಸ್ತೆಯ ನಡುವೆ ಇಂದಿಗೂ ಕೆಲವರು ಗುಡಿಸಲುಗಳಲ್ಲಿ ವಾಸಮಾಡುವ, ಈ ಗ್ರಾಮದಲ್ಲಿ ವ್ಯವಸಾಯ ಮತು  ಕೂಲಿಯನ್ನೇ ನಂಬಿ ಜೀವನ ನಡೆಸುತ್ತಿರುವ ಜನತೆಯ ಕೂಗು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕೇಳದಾಗಿದೆ. ಹಿಂದುಳಿದ ಪರಿಶಿಷ್ಟ ಜಾತಿಯವರೇ ವಾಸಿಸುವ ಈ ಗ್ರಾಮದವರು ಇಂದಿನವರೆಗೆ ಇತಿಹಾಸದಲ್ಲಿ ಗ್ರಾ.ಪ. ಸದಸ್ಯರಾದ ಉದಾಹರಣೆ ಇಲ್ಲ.
ಸುಮಾರು ೧೫೦ ಮತದಾರರನ್ನು ಹೊಂದಿರುವ ಗ್ರಾಮದಲ್ಲಿ ಗೆಲ್ಲಲು ಅವಕಾಶ ಇಲ್ಲ ಎಂಬ ಕಾರಣದಿಂದ, ಸ್ಪರ್ಧಿಸಲು ಇಲ್ಲಿಯ ವರು ಹಿಂದೇಟು ಹಾಕುವಂತಾಗಿದ್ದು, ತಮ್ಮ ಮತ ಚಲಾಯಿಸಲು ೪ ಕಿ.ಮೀ.ದೂರದ ಭೇರ್ಯಕ್ಕೆ  ಹೋಗಬೇಕಾಗಿದೆ.

ಪೊಲೀಸರನ್ನೇ ಸತಾಯಿಸುತ್ತಿರುವ ಮುಡಾ ಅಧಿಕಾರಿಗಳು

ವಿಕ ಸುದ್ದಿಲೋಕ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧಿಕಾರಿಗಳ ತಿಕ್ಕಾಟದಿಂದ ಕೋಟ್ಯಂತರ ರೂ. ಬೆಲೆ ಬಾಳುವ ನಿವೇಶನಗಳ ಮಾರಾಟ ಹಗರಣದ ತನಿಖೆ ವಿಳಂಬವಾಗುತ್ತಿದೆ.
ಖೋಟಾ ದಾಖಲೆ ಸೃಷ್ಟಿಸಿ ಪ್ರತಿಷ್ಠಿತ ಬಡಾವಣೆಯಲ್ಲಿ ನಿವೇಶನಗಳನ್ನು ಮಾರಾಟ ಮಾಡಲಾಗಿದ್ದು, ತನಿಖೆ ನಡೆಸಿ ಎಂದು ದೂರು ನೀಡಿದ ಮುಡಾ ಅಧಿಕಾರಿಗಳೇ ಈಗ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಮುಡಾದಲ್ಲೇ ಇರುವ ಇಂಥ ತಿಮಿಂಗಿಲಗಳನ್ನು ರಕ್ಷಿಸುವ ಕೆಲಸದಲ್ಲಿ ಕೆಲ ಅಧಿಕಾರಿ ಗಳು ತೊಡಗಿದ್ದಾರೆ. ಇದರಿಂದ ತನಿಖೆ ನಡೆಸಬೇಕಾಗಿದ್ದ ಲಕ್ಷ್ಮಿಪುರಂ ಪೊಲೀಸರು ವರ್ಷದ ಅವಧಿಯಲ್ಲೇ  ಹಗರಣದಲ್ಲಿ ಭಾಗಿಯಾಗಿರುವ ಮುಡಾ ನೌಕರರ ಹೆಸರು ನೀಡಿ ಎನ್ನುವ ಒಕ್ಕಣೆಯೊಂದಿಗೆ ಎಂಟು ಪತ್ರ ಬರೆದರೂ ಏನೂ ಉಪಯೋಗ ವಾಗಿಲ್ಲ. ಹೆಸರು ನೀಡುವ ವಿಚಾರದಲ್ಲಿ ಅಧಿಕಾರಿಗಳ ನಡುವೆ ತಿಕ್ಕಾಟ ಏರ್ಪಟ್ಟಿದ್ದು, ಇದು ಮುಡಾದಲ್ಲಿ ಗೊಂದಲವನ್ನೂ ಹುಟ್ಟು ಹಾಕಿದೆ.
ಏನಿದು ಹಗರಣ: ಮುಡಾ ಆಯುಕ್ತ ಪಿ.ಸಿ.ಜಯಣ್ಣ ಅವರು ಲಕ್ಷ್ಮಿಪುರಂ ಪೊಲೀಸರಿಗೆ ೨೦೦೯ರ ಮಾರ್ಚ್‌ನಲ್ಲಿ ನೀಡಿರುವ ದೂರಿನ ವಿವರ ಹೀಗಿದೆ:
೧೯೯೫ರಿಂದ ೨೦೦೮ರವರೆಗೆ ಸುಮಾರು ೮ ನಿವೇಶನಗಳನ್ನು ಖೋಟಾ ದಾಖಲೆಗಳೊಂದಿಗೆ ಮಾರಾಟ ಮಾಡಲಾಗಿದೆ. ಎಲ್ಲಾ ಎಂಟು ನಿವೇಶನದ ಮೂಲ ದಾಖಲೆಗಳನ್ನು ನಾಶ ಮಾಡಿದ್ದಾರೆ. ಇದರಲ್ಲಿ ವಿಜಯನಗರ ೨ನೇ ಹಂತದ ಏಳು ನಿವೇಶನಗಳು, ಕೆಸರೆ ಮೂರನೇ ಹಂತದಲ್ಲಿ ಒಂದು ನಿವೇಶನದ ಮೂಲ ದಾಖಲೆ ನಾಶ ಮಾಡಿ ಖೋಟಾ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ. ಈ ಎಲ್ಲಾ ನಿವೇಶನಗಳು ಮಾರಾಟ ಮಾಡಿದವರಿಗೆ ನೋಂದಣಿಯೂ ಆಗಿವೆ. ಈವರೆಗೂ ಈ ನಿವೇಶನಗಳು ಹಲವು ಕೈಗಳ ಬದಲಾವಣೆಯು ಆಗಿದೆ. ಇದರ ಮಾರುಕಟ್ಟೆ ಬೆಲೆಯೇ ಸುಮಾರು ೪ ಕೋಟಿ ರೂ.
ಮುಡಾಕ್ಕೆ ಕೋಟ್ಯಂತರ ರೂ. ನಷ್ಟವಾಗಿರುವುದರಿಂದ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಕೋರಿದ್ದರು.
ಬರೀ ನೆನಪಿನೋಲೆ: ಮುಡಾ ನೀಡಿದ ದೂರು ಆಧರಿಸಿ ತನಿಖೆ ಆರಂಭಿಸಿದ ಲಕ್ಷ್ಮಿಪುರಂ ಪೊಲೀಸರು ಬಸವರಾಜು ಹಾಗೂ ಮಂಜು ಎಂಬ ಇಬ್ಬರು ಮಧ್ಯವರ್ತಿಗಳನ್ನು ಬಂಧಿಸಿದರು. ಅವರೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಇದಾದ ನಂತರ ನಿವೇಶನ ಅಕ್ರಮ ಮಾರಾಟಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಳಿಸಲು ಅಗತ್ಯ ದಾಖಲೆಗಳನ್ನು ಆದಷ್ಟು ಬೇಗನೇ ಒದಗಿಸಿ. ಮುಡಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾರ‍್ಯಾರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ವಿವರಗಳನ್ನು ನೀಡಿ. ಇಂಥ ಒಕ್ಕಣೆಯೊಂದಿಗೆ ಲಕ್ಷ್ಮಿಪುರಂ ಪೊಲೀಸ್ ಠಾಣೆಯಿಂದ ಮುಡಾಕ್ಕೆ ಎಂಟು ಪತ್ರಗಳು ಹೋಗಿವೆ. ಸರಿ ಸುಮಾರು ಒಂದೂವರೆ ತಿಂಗಳಿಗೆ ಒಂದರಂತೆ ಪತ್ರಗಳನ್ನು ಠಾಣೆಯ ಇನ್ಸ್‌ಪೆಕ್ಟರ್ ಬರೆದಿದ್ದರೂ ಅಲ್ಲಿಂದ ಬರುವ ಉತ್ತರ ಮಾತ್ರ ಅಸಹಕಾರ ರೂಪದಲ್ಲೇ. ಏಪ್ರಿಲ್ ಮೊದಲ ವಾರದಲ್ಲಿ ಪತ್ರವೊಂದನ್ನು ಬರೆದಿದ್ದರೂ ಇನ್ನೂ ಮಾಹಿತಿ ಕಲೆ ಹಾಕುತ್ತಿದ್ದೇವೆ ಎನ್ನುವ ಉತ್ತರವೇ ಬರುತ್ತಿರುವುದು  ಪೊಲೀಸರನ್ನು ಅಸಹಾಯಕ ಸ್ಥಿತಿಗೆ ತಳ್ಳಿದೆ.
ಅಧಿಕಾರಿಗಳಲ್ಲೇ ತಿಕ್ಕಾಟ: ಪೊಲೀಸರ ಒತ್ತಡ ಜೋರಾಗುತ್ತಿರುವ ನಡುವೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮುಡಾದ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರನ್ನು ರಕ್ಷಿಸುವ ಕೆಲಸ ಆರಂಭವಾಗಿದೆ.
ದಾಖಲೆಗಳನ್ನು ಒದಗಿಸುವ ವಿಚಾರದಲ್ಲಿ ಸಹಾಯಕ ಕಾರ‍್ಯದರ್ಶಿ ರಂಗಸ್ವಾಮಿ ಅವರು ಆಸಕ್ತರಾಗಿದ್ದರೆ, ಕಾರ‍್ಯದರ್ಶಿ ರವಿಕುಮಾರ್ ಅಸಹಕಾರ ತೋರುತ್ತಿದ್ದಾರೆ ಎನ್ನುವ ಮಾತುಗಳು ಮುಡಾ ಅಧಿಕಾರಿಗಳ ವಲಯದಲ್ಲಿ ಕೇಳಿ ಬಂದಿದೆ. ಈ ವಿಚಾರದಲ್ಲಿ ಶುಕ್ರವಾರ ರಾತ್ರಿ ಇಬ್ಬರು ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈವರೆಗೂ ಶಿಕ್ಷೆಯಾಗೇ ಇಲ್ಲ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾಗುವ ಮುನ್ನ  ಇದನ್ನು ಕರೆಯುತ್ತಿದ್ದುದು ಸಿಐಟಿಬಿಯಾಗಿ. ೧೯೭೪ರಲ್ಲಿ ನಡೆದಿದ್ದ ನಿವೇಶನ ಮಾರಾಟ ಹಗರಣವೊಂದರ ಕುರಿತು ತನಿಖೆ ನಡೆದಿದ್ದು ಬರೋಬ್ಬರಿ ೨೨ ವರ್ಷ. ೧೯೯೬ರಲ್ಲಿ ಕೆಲವು ಆರೋಪಿಗಳು ದೋಷಮುಕ್ತರಾಗಿದ್ದರೆ, ಇನ್ನೂ ಕೆಲವರು ಮೃತಪಟ್ಟಿದ್ದಾರೆ. ಹೀಗೆ ವಿವಿಧ ಮೊಕದ್ದಮೆಗಳು ದಾಖಲಾದರೂ ಯಾರೊಬ್ಬರಿಗೂ ಶಿಕ್ಷೆಯಾದ ದಾಖಲೆಗಳಿಲ್ಲ. ಸದ್ಯ ಮುಡಾದಲ್ಲಿ ನಡೆದ ಹಗರಣಗಳ ಕುರಿತು ೧೧ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಸಚಿವರೇ ಇತ್ತ ನೋಡಿ: ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಅವರಿಗೆ ಮುಡಾದಲ್ಲಿ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳ ವಿವರ ಗೊತ್ತೇ ಇದೆ. ಆದರೆ ಅವರಿಂದ ಕಠಿಣವಾದ ಕ್ರಮಗಳು ಈವರೆಗೂ ಆಗಿಲ್ಲ. ಈಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ ಮುಡಾದಲ್ಲಿ ಪಾರದರ್ಶಕತೆ ತರುವುದು, ಹಗರಣ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡುವರೇ?.