ಮೈಸೂರು ಗ್ರಾಮಾಂತರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮೈಸೂರು ಗ್ರಾಮಾಂತರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಚಿರತೆ ಕಾಡಿಗೆ, ಇನ್ನು ನಿಶ್ಚಿಂತೆ

ವಿಕ ಸುದ್ದಿಲೋಕ ಎಚ್.ಡಿ.ಕೋಟೆ
ಜನ-ಜಾನುವಾರುಗಳಲ್ಲಿ ಭಯ ಹುಟ್ಟಿಸಿದ್ದ ಗಂಡು ಚಿರತೆ(೯) ಕೃಷ್ಣಾಪುರ ಗ್ರಾಮದ ಬಳಿಯ ಮಾಜಿ ಸಚಿವ ಎಂ ಶಿವಣ್ಣನವರ ಜಮೀನಿನಲ್ಲಿ ಬೋನಿಗೆ ಬಿದ್ದಿದೆ.
ಬೆಳಗಿನ ಜಾವ ೩ ಗಂಟೆಯಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಬೆಳಗ್ಗೆ ಚಿರತೆ ಬೋನಿಗೆ ಬಿದ್ದಿರುವ ಮಾಹಿತಿ ದೊರೆಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೋನಿ ನಲ್ಲಿದ್ದ ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿ.ಬಿ. ಕುಪ್ಪೆ ವನ್ಯ ಜೀವಿ ವಲಯದ ಹಳೇ ಕಾಕನಕೋಟೆ ಗಸ್ತಿಗೆ ಒಯ್ದು ಬಿಟ್ಟರು.

ಹುಣಸೂರು ಪೂರ್ಣ ಬಂದ್,ರಸ್ತೆ ತಡೆ

ವಿಕ ಸುದ್ದಿಲೋಕ ಹುಣಸೂರು
ಅಪಹೃತ ವಿದ್ಯಾರ್ಥಿಗಳ ಹತ್ಯೆ ಹಾಗೂ ಪೊಲೀಸರ ವೈಫಲ್ಯ ಖಂಡಿಸಿ ಸರ್ವ ಪಕ್ಷಗಳು ಹಾಗೂ ನಾನಾ ಸಂಘಟನೆಗಳು ಕರೆ ನೀಡಿದ ಹುಣಸೂರು ಬಂದ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ನಾಗರಿಕರು, ವಾಣೀಜ್ಯೋದ್ಯಮಿಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ  ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಎರಡೂವರೆ ಗಂಟೆಗಳ ಕಾಲ ಮೈಸೂರು-ಮಡಿಕೇರಿ ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನ ಸಂಚಾರ ತೀವ್ರ ಅಸ್ತವ್ಯಸ್ತಗೊಂಡಿತ್ತು.
ಪಟ್ಟಣದಲ್ಲಿ  ಬೆಳಗ್ಗೆಯಿಂದಲೇ ಅಂಗಡಿ, ಹೋಟೆಲ್, ಸೇರಿದಂತೆ ಎಲ್ಲ ವಾಣಿಜ್ಯ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರಕಾರಿ ಕಚೇರಿಗಳು, ಬ್ಯಾಂಕ್, ಎಲ್‌ಐಸಿ ಕಚೇರಿಗಳು ಎಂದಿನಂತೆ ಕೆಲಸ ನಿರ್ವಹಿಸಿದರೂ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬಸ್‌ಗಳ ಸಂಚಾರವಿದ್ದರೂ ಪ್ರಯಾಣಿಕರ ಸಂಖ್ಯೆ  ಅತೀ ವಿರಳವಾಗಿತ್ತು. ಸಿನಿಮಾ ಮಂದಿರಗಳು ಮುಚ್ಚಿದ್ದವು, ಮೆಡಿಕಲ್ ಸ್ಟೋರ್ ಹಾಗೂ ಹಾಲಿನ ಡೇರಿ ತೆರೆದಿದ್ದವು.

ಬಾರದ ನೀರು: ನೀಗದ ರೈತರ ಸಮಸ್ಯೆ

ವಿಕ ಸುದ್ದಿಲೋಕ ಕೃಷ್ಣರಾಜನಗರ
ತಾಲೂಕಿನ ಸೌತನಹಳ್ಳಿ, ಸಾತಿ ಗ್ರಾಮ ಸೇರಿದಂತೆ ಈ ಭಾಗದ ನೂರಾರು ಎಕರೆ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ನಾಲಾ ನೀರು ಹರಿಯದೆ ರೈತರು ಭತ್ತ ಬೆಳೆಯಲು ಕಾಲುವೆ ಎದುರು ನೋಡುವಂತಾಗಿದೆ.
ಈ ಭಾಗಕ್ಕೆ ಚಾಮರಾಜ ಮತ್ತು ರಾಮಸಮುದ್ರ ನಾಲೆಯ ನೀರು ಹರಿಯುತ್ತಿದ್ದು ನಾಲೆಯ ಮೇಲ್ಭಾಗದ ಅಚ್ಚುಕಟ್ಟುದಾರರು ಈಗಾಗಲೆ ನಾಟಿ ಕಾರ್ಯ ಮುಗಿಸಿ ಕಳೆ ತೆಗೆಯುವ ಹಂತ ತಲುಪಿದೆ. ನಾಲೆಯ ಕೊನೆಭಾಗದ ಈ ಗ್ರಾಮದ ಸುತ್ತ ಮುತ್ತಲ ರೈತರು ಮಾತ್ರ ನೀರಿಗಾಗಿ ಕಾದು ಸುಸ್ತಾಗಿ ನೀರಾವರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿ ಹಿಡಿಶಾಪ ಹಾಕಿ, ಹಾಕಿರುವ ಪೈರು ಒಣಗದಂತೆ ನೀರು ಹಾಕುತ್ತಿದ್ದಾರೆ.
ಇಂಥ ಪರಿಸ್ಥಿತಿ ಈ ಭಾಗದಲ್ಲಿ ಪ್ರತಿವರ್ಷ ಮಾಮೂಲಾಗಿದ್ದು, ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಗಮನಹರಿಸುತ್ತಿಲ್ಲ.
ಬರುವ ನೀರಿಗಾಗಿ ರೈತರು ಭತ್ತದ ಅಗೆ ಹಾಕಿಕೊಂಡು ಕಾದುಕುಳಿತಿದ್ದು, ನೀರು ಬಾರದ ಕಾರಣ ಈ ಮೊದಲು ಹಾಕಿದ್ದ ಹುರಳಿ, ಅಲಸಂದೆ ಹಾಗೂ ಇತರ ಬೆಳೆಗಳನ್ನು ಉಳುಮೆ ಮಾಡದೆ ಹಾಗೆ ಬಿಟ್ಟುಕೊಂಡು ಬರುವ ನೀರಿಗಾಗಿ ಎದುರು ನೋಡುತ್ತಿದ್ದಾರೆ.
ಈ ಭಾಗದಲ್ಲಿ ಭತ್ತ ಬಿಟ್ಟು ಬೇರೆ ಬೆಳೆ ಇಲ್ಲದ ಕಾರಣ ಇಲ್ಲಿನ ಜನತೆಗೆ ಭತ್ತದ ಬೆಳೆಯು ವರ್ಷದ ಕೂಳಾಗಿದೆಯಲ್ಲದೆ ವಾಣಿಜ್ಯದ ದೃಷ್ಟಿಯಿಂದಲೂ ಈ ಭಾಗದ ಜನತೆಗೆ ಪ್ರಮುಖ ಬೆಳೆಯಾಗಿದೆ.
ನೀರುಬಾರದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸುವ ರೈತರು, ನೀರಾವರಿ ಅಧಿಕಾರಿಗಳು ಕಾಲುವೆ ದುರಸ್ತಿಗೊಳಿಸಿ ನೀರು ಬಿಟ್ಟರೆ ಎಲ್ಲರ ಬೆಳೆಗೂ ದೊರೆಯುತ್ತದೆ. ಆದರೆ ಯಾರೂ  ಒಮ್ಮೆಯೂ ಕಾಲುವೆ ಏರಿ ಮೇಲೆ ಬಂದಿಲ್ಲ ಎಂದು ದೂರಿದ್ದಾರೆ.
ಸಾತಿಗ್ರಾಮದ ರೈತ ಶಾಂತರಾಜು ಪತ್ರಿಕೆಯೊಂದಿಗೆ ಮಾತನಾಡಿ, ಈ ಭಾಗದ ಸುಮಾರು ೮೦ ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿಲ್ಲದೆ ಪರದಾಡುವಂತಾಗಿದೆ. ಕಟ್ಟು ನೀರು ಕೊಟ್ಟರೆ ಎಲ್ಲರಿಗೂ ನೀಡಬಹುದು. ಆದರೆ ಯಾವ ಅಧಿಕಾರಿಯೂ ಈ ಬಗ್ಗೆ ಕ್ರಮಕ್ಕೆ ಮುಂದಾಗದ ಕಾರಣ ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆಹರಿಸದಿದ್ದರೆ ರೈತರೊಡಗೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ರೈತ ರೇವಣ್ಣ ಮಾತನಾಡಿ, ರೈತರೆಲ್ಲರೂ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದಾಗ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವುದಾಗಿ ಹೇಳಿದವರು ಮತ್ತೆ ಇತ್ತ ತಿರುಗಿ ನೋಡಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಮತ್ತೊಬ್ಬ ರೈತ ಶಿವರಾಮು ಮಾತನಾಡಿ, ಉದ್ಯೋಗ ಖಾತ್ರಿಯಲ್ಲಿ ನಾಲೆ ಸ್ವಚ್ಛಗೊಳಿಸುವ ಕೆಲಸ ಮಾಡಿದರು. ಆದರೆ ಕೆಲಸ ಮಾತ್ರ ಸರಿಯಾಗಿ ಮಾಡದೆ ಬಿಲ್ ಪಡೆದರು. ಅದರ ಪರಿಣಾಮ ನಾವು ಎದುರಿಸಬೇಕಾಗಿದೆ ಎಂದು ದೂರಿದರು.

ಸವಲತ್ತಿಲ್ಲ, ಮತದಾನ ಮಾತ್ರ ತಪ್ಪಿಸಿಲ್ಲ


ವಿಕ ಸುದ್ದಿಲೋಕ ಕೃಷ್ಣರಾಜನಗರ
ಎಷ್ಟೋ ಅಧಿಕಾರಿಗಳಿಗೆ  ಸೋಮನಹಳ್ಳಿ ಎಂಬ ಗ್ರಾಮ ತಾಲೂಕಿ ನಲ್ಲಿ ಇದೆ ಎಂಬುದೇ ಗೊತ್ತಿಲ್ಲ ಎಂದರೂ ಆಶ್ವರ್ಯವಿಲ್ಲ , ಗ್ರಾಮದ ಜನತೆ ಇಂದಿಗೂ ಬಸ್ ಹತ್ತಬೇಕಾದರೆ ೨ರಿಂದ ೩ ಕಿ.ಮೀ. ನಡೆದೇ ಹೋಗಬೇಕು.
ಖಾಸಗಿ ಕಂಪನಿಯಿಂದಾಗಿ ಗ್ರಾಮದ ಜನತೆ ವ್ಯವಸಾಯದಲ್ಲಿ ಸಾವಯವ ಕೃಷಿ ಅಳವಡಿಸಿಕೊಂಡಿರುವುದು ಹೊರತುಪಡಿಸಿದರೆ  ಮೂಲ ಸವಲತ್ತುಗಳು ಮಾತ್ರ ಈ ಗ್ರಾಮದಿಂದ ಬಲು ದೂರ.
ಈ ಗ್ರಾಮದಲ್ಲಿ  ಸಮರ್ಪಕ ವಿದ್ಯುತ್, ಕುಡಿಯುವ ನೀರು, ಚರಂಡಿ, ರಸ್ತೆ, ಶೌಚಾಲಯ, ಇಲ್ಲದಾಗಿದೆ.  ಪ್ರತಿಯೊಂದಕ್ಕೂ ದೂರದ ಭೇರ್ಯ, ಇಲ್ಲವೆ ಕೃಷ್ಣರಾಜನಗರ ತಾಲೂಕು ಕೇಂದ್ರ ವನ್ನೇ ಅವಲಂಬಿಸಬೇಕಾಗಿದೆ.  ಇಂದಿಗೂ ಯಾವುದೇ ಸವಲತ್ತು ಬಯಸದ ಇಲ್ಲಿಯ ಜನ ಪ್ರತಿ ಚುನಾವಣೆಯಲ್ಲಿ ಮತ ಚಲಾಯಿಸುತ್ತಾ ಬಂದಿದ್ದಾರೆ.
ತಾ. ಕೇಂದ್ರದಿಂದ ಸುಮಾರು ೨೩ ಕಿ.ಮೀ.ನಲ್ಲಿರುವ ಸೋಮನ ಹಳ್ಳಿಯ ಜನ ಹೊರಜಗತ್ತಿನ ಐಷಾರಾಮಿ ಜೀವನ ತಿಳಿದವರಲ್ಲ.  ಗ್ರಾಮದಲ್ಲಿ ೩೦೦ ಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ರಸ್ತೆಗಳು ಹಾಗೂ ಚರಂಡಿಗಳು ಯಾವುದು ಎಂಬುದು ತಿಳಿಯದಾಗಿದೆ. ಸರಕಾರಿ ಬಸ್ ಕಾಣದ ಇಲ್ಲಿನ ಜನ ಸಾಕಷ್ಟು  ವಿದ್ಯೆ ಪಡೆಯದಿದ್ದರೂ, ಧ್ವನಿ ಯಿಲ್ಲದೇ ಪ್ರಶ್ನಿಸಲಾಗದೇ, ಬಾಯಿಮುಚ್ಚಿ ಮತ ಚಲಾಯಿಸುತ್ತಿದ್ದಾರೆ.
ಸಮರ್ಪಕ ರಸ್ತೆಯಿಲ್ಲದೆ  ಶೌಚಾಲಯವಿಲ್ಲದ  ಇಲ್ಲಿ ಅಂಗನ ವಾಡಿ, ೫ನೇ ತರಗತಿವರೆಗಿನ  ಶಾಲೆ ಹಾಗೂ ಕಲ್ಲು ಮಣ್ಣಿನಿಂದ ಕೂಡಿದ ರಸ್ತೆಯೇ ಇವರ ಪಾಲಿಗೆ ಗತಿಯಾಗಿದೆ. ಚರಂಡಿಯಿಲ್ಲದ ಈ ಗ್ರಾಮದಲ್ಲಿ ಎಲ್ಲೆಂದರಲ್ಲಿ  ಚರಂಡಿ ನೀರು ನಿಂತಿದ್ದು, ಅನಾ ರೋಗ್ಯಕ್ಕೆ ಕಾರಣವಾಗಿದೆ . ಬೋರ್‌ವೆಲ್‌ನಿಂದ ಸೋಮನಹಳ್ಳಿ ಮತ್ತು ಪಕ್ಕದ ಗೇರುದಡ ಗ್ರಾಮಕ್ಕೆ ಕುಡಿಯುವನೀರು ಒದಗಿಸ ಲಾಗುತ್ತಿದ್ದು  ವಿದ್ಯುತ್ ಇದ್ದರೆ ಮಾತ್ರ ಇವರ ಪಾಲಿಗೆ ನೀರು ಲಭ್ಯ. ಇಲ್ಲವಾದಲ್ಲಿ  ಬೇರೆಡೆಗೆ ನೀರಿಗಾಗಿ ಅಲೆಯುವಂತಾಗಿದೆ.    
ಗ್ರಾಮದ ವಾಸಿಗಳಾದ ಪುಟ್ಟಸ್ವಾಮಯ್ಯ ಮತ್ತು ಕುಳ್ಳಯ್ಯ ಅವರನ್ನು ಪತ್ರಿಕೆಯು ಮಾತನಾಡಿಸಿದಾಗ “ಗ್ರಾಮದ ಸೌಕರ್ಯದ ಬಗ್ಗೆ ನಮಗೆ ತಿಳಿಯದು ಸಾರ್, ಎಲೆಕ್ಷನ್ ಬಂದೈತೆ ಓಟ್ ಹಾಕ್‌ಬೇಕು, ಹಾಕ್‌ತೀವಿ ಅಷ್ಟೇ" ಎಂದು ನಿರುತ್ಸಾಹ ವ್ಯಕ್ತಪಡಿಸುತ್ತಾರೆ. ಇವರು ಚುನಾವಣೆ ಬಗ್ಗೆ ಅಂಥ ಕುತೂಹಲವೇನೂ ಇಟ್ಟುಕೊಂಡಂತಿಲ್ಲ.
ಭೇರ್ಯ ಜಿ.ಪಂ. ತಾ.ಪಂ.ಕ್ಷೇತ್ರ ಹಾಗೂ ಗ್ರಾ.ಪಂ.ಗೆ ಸೇರಿರುವ ಈ ಗ್ರಾಮವು ಭೇರ್ಯದಿಂದ ಸುಮಾರು ೪ ಕಿ.ಮೀ. ದೂರದಲ್ಲಿರುವ ಈ ಗ್ರಾಮದ ನಿವಾಸಿಗಳು ತಮಗಾಗಿ ಏನನ್ನೂ ಪಡೆಯದಿದ್ರೂ ಚುನಾವಣೆಯಲ್ಲಿ ಮಾತ್ರ ಮತ ಚಲಾಯಿಸುವುದನ್ನು ಮರೆಯುವುದಿಲ್ಲ.
ಇಲ್ಲದ ರಸ್ತೆಯ ನಡುವೆ ಇಂದಿಗೂ ಕೆಲವರು ಗುಡಿಸಲುಗಳಲ್ಲಿ ವಾಸಮಾಡುವ, ಈ ಗ್ರಾಮದಲ್ಲಿ ವ್ಯವಸಾಯ ಮತು  ಕೂಲಿಯನ್ನೇ ನಂಬಿ ಜೀವನ ನಡೆಸುತ್ತಿರುವ ಜನತೆಯ ಕೂಗು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕೇಳದಾಗಿದೆ. ಹಿಂದುಳಿದ ಪರಿಶಿಷ್ಟ ಜಾತಿಯವರೇ ವಾಸಿಸುವ ಈ ಗ್ರಾಮದವರು ಇಂದಿನವರೆಗೆ ಇತಿಹಾಸದಲ್ಲಿ ಗ್ರಾ.ಪ. ಸದಸ್ಯರಾದ ಉದಾಹರಣೆ ಇಲ್ಲ.
ಸುಮಾರು ೧೫೦ ಮತದಾರರನ್ನು ಹೊಂದಿರುವ ಗ್ರಾಮದಲ್ಲಿ ಗೆಲ್ಲಲು ಅವಕಾಶ ಇಲ್ಲ ಎಂಬ ಕಾರಣದಿಂದ, ಸ್ಪರ್ಧಿಸಲು ಇಲ್ಲಿಯ ವರು ಹಿಂದೇಟು ಹಾಕುವಂತಾಗಿದ್ದು, ತಮ್ಮ ಮತ ಚಲಾಯಿಸಲು ೪ ಕಿ.ಮೀ.ದೂರದ ಭೇರ್ಯಕ್ಕೆ  ಹೋಗಬೇಕಾಗಿದೆ.

ದಾಸ್ತಿಕೊಳ ಬಡಾವಣೆಯಲ್ಲಿ ನೀರಿಗೆ ತತ್ವಾರ

ವಿಕ ಸುದ್ದಿಲೋಕ ಹುಣಸೂರು
ಬಿಳಿಕೆರೆಗೆ ಹೊಂದಿಕೊಂಡಂತಿರುವ ದಾಸ್ತಿಕೊಳ ಬಡಾವಣೆಯಲ್ಲಿ ಜನತೆ ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ.
ಮೈಸೂರು-ಹುಣಸೂರು ಮುಖ್ಯ ರಸ್ತೆಯ ಅಂಚಿನಲ್ಲಿರುವ ಬಡಾವಣೆಯಲ್ಲಿ  ೨೫೦ಕ್ಕೂ ಹೆಚ್ಚು ಬಡ ಕುಟುಂಬಗಳೇ ವಾಸಿಸುತ್ತಿದ್ದು,  ನೀರಿನ ಟ್ಯಾಂಕ್ ಇದ್ದರೂ ನಿಷ್ಪ್ರಯೋಜಕ. ಜತೆಗೆ ಮೂರು ಬೋರ್‌ವೆಲ್‌ಗಳಲ್ಲಿ ಎರಡು ಕೆಟ್ಟು ಹೋಗಿವೆ. ಮತ್ತೊಂದರಲ್ಲಿ ಗಂಟೆಗೊಂದು ಬಿಂದಿಗೆ ನೀರು ಸಿಗುತ್ತಿದೆ. ಟ್ಯಾಂಕಿಗೆ ನೀರು ಪೂರೈಸುವ ಬೋರ್‌ವೆಲ್‌ನಲ್ಲಿ ಬಹುತೇಕ ನೀರು ಬತ್ತಿಹೋಗಿದೆ. ಸಿಕ್ಕುವ ಅಲ್ಪಸ್ವಲ್ಪ ನೀರಿನಲ್ಲಿ  ೧೦-೧೫ ದಿನಕ್ಕೊಮ್ಮೆ ನೀರು ಪೂರೈಸುತ್ತಾರೆ.
ಪಂಪ್‌ಸೆಟ್ಟೇ ಗತಿ: ಬಡಾವಣೆಯ ಮಹಿಳೆಯರು ಬೆಳಗಿನ ಜಾವ ಗ್ರಾಮಕ್ಕೆ ಒಂದು ಕಿ.ಮೀ. ದೂರವಿರುವ ಪಂಪ್‌ಸೆಟ್‌ಗಳಿಂದ ಜಮೀನಿನ ಮಾಲೀಕರನ್ನು ಗೋಗರೆದು  ನೀರು ಹೊತ್ತು ತರುವ ಹೀನಸ್ಥಿತಿ ಇಲ್ಲಿದೆ. ನೀರು ಬೇಕೆಂದಾಗಲೆಲ್ಲ ಅಲ್ಲಿಗೆ ಓಡಬೇಕಾದ ಪರಿಸ್ಥಿತಿ ಈ ಜನರದ್ದು. ಅಂತರ್ಜಲ ಕುಸಿದು ನೀರು ಪಾತಾಳಕ್ಕಿಳಿದಿರುವ ಒಂದು ಬೋರ್‌ವೆಲ್‌ನಲ್ಲಿ ಒಂದು ಬಿಂದಿಗೆ ನೀರು ತುಂಬಲು ಕನಿಷ್ಠ ೧ ಗಂಟೆ ತೆಗೆದುಕೊಳ್ಳುತ್ತಿದೆ. ಒಮ್ಮೊಮ್ಮೆ ನೀರು ನಿಂತು ಹೋಗುತ್ತದೆ. ಈ ನೀರಿಗೂ ನೂಕುನುಗ್ಗಲು ಉಂಟಾಗಿ ನಿತ್ಯ ಜಗಳ ನಡೆಯುತ್ತಿರುತ್ತದೆ.
ಏಕಿ ಅವಸ್ಥೆ ?: ಚಿಕ್ಕಮಾದು ಶಾಸಕರಾಗಿದ್ದ ೧೮ ವರ್ಷದ ಹಿಂದೆ ನೂತನ ಬಡಾವಣೆ ರಚಿಸಲಾಗಿತ್ತು. ಆಗ ನೀರಿನ ವ್ಯವಸ್ಥೆ ಕಲ್ಪಿಸಿದ್ದರು. ಮುಂದೆ ಇಲ್ಲಿ ಜನಸಂಖ್ಯೆ ಹೆಚ್ಚಾಯಿತು. ತಕ್ಕಂತೆ ಸೌಲಭ್ಯ ಒದಗಿಸಲಿಲ್ಲ, ಇರುವ ಕುಡಿಯುವ ನೀರಿನ ಯೋಜನೆಗೆ ಟ್ಯಾಂಕ್ ನಿರ್ಮಿಸಿದರೆ ಹೊರತು ನೀರು ಪೂರೈಸುವ ಜಲ ಸಂಪನ್ಮೂಲ ಗುರುತಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಹಾಗೂ ನೀರುಗಂಟಿಗಳು ತಮಗಿಷ್ಟ ಬಂದ ರೀತಿಯಲ್ಲಿ ನೀರು ನಿರ್ವಹಣೆ ಮಾಡುತ್ತಿರುವುದೇ ಈ ಅವಸ್ಥೆಗೆ ಕಾರಣ
ಚರಂಡಿ ಇಲ್ಲ: ಇಷ್ಟಲ್ಲದೆ ಬೀದಿದೀಪ ಕೆಟ್ಟು ೨ ತಿಂಗಳಾಗಿದ್ದರೂ ಸರಿಪಡಿಸಿಲ್ಲ, ಬೀದಿಗಳು ಡಾಂಬರು ಕಂಡಿಲ್ಲ, ಹಲವೆಡೆ ಚರಂಡಿ ನಿರ್ಮಿಸಿಲ್ಲ, ಕೆಲವೆಡೆ ಮಳೆ ನೀರು ಮನೆಗೆ ನುಗ್ಗುತ್ತಿದೆ, ಚರಂಡಿಯಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿವೆ. ಹಾವುಗಳ ಕಾಟ ಇಲ್ಲಿದೆ, ಸುವರ್ಣ ಗ್ರಾಮ ಯೋಜನೆಯಡಿ ಹಾಕಿರುವ ಕಸದ ತೊಟ್ಟಿಯಲ್ಲಿ ಕಸ ತುಂಬಿ ತುಳುಕಾಡುತ್ತಿದ್ದರೂ ಎತ್ತುವವರಿಲ್ಲ.
ಮಹಿಳೆಯರ ಆಕ್ರೋಶ:  ಮೂರ‍್ನಾಲ್ಕು ವರ್ಷದಿಂದ ನೀರಿಲ್ಲದೆ ಸಾಯ್ತಿದ್ದೀವಿ, ಅವರಿವರ ಪಂಪ್‌ಸೆಟ್‌ನಿಂದ ನೀರನ್ನು ಹೊತ್ತು ತರ‍್ತಿದ್ದೀವಿ, ಯಾರಿಗೆ ಹೇಳಿದ್ರು ಕೇಳಿಸ್ಕೋತ ಇಲ್ಲ. ಶಾಸಕರಿಗೂ, ಅಧಿಕಾರಿಗಳಿಗೂ ಕಷ್ಟ ಹೇಳ್ಕೊಂಡ್ರು ಏನೂ ಆಗಿಲ್ಲ. ಈ ಬಗ್ಗೆ ಗ್ರಾ.ಪಂ. ವಿರುದ್ಧ ಹಾಗೂ ಬಿಳಿಕೆರೆಯಲ್ಲಿ ವಾಣಿಜ್ಯ ಮಳಿಗೆ ಉದ್ಘಾಟನೆ ಸಂದರ್ಭದಲ್ಲಿ  ನಾವೆಲ್ಲ ಖಾಲಿ ಕೊಡ ಹಿಡಿದು ಪ್ರತಿಭಟಿಸಿದ್ದೇವೆ, ಜನಸ್ಪಂದನ ಸಭೆಗಳಲ್ಲಿ ಗಲಾಟೆ ಮಾಡಿದ್ದೇವೆ.ಆದರೂ ಇಲ್ಲಿನ ಸಮಸ್ಯೆ ಬಗೆಹರಿಸಲು ಯಾರೂ ಯತ್ನಿಸಿಲ್ಲ, ಇನ್ನು ನಮ್ಮ ಜನ ಪ್ರತಿನಿಧಿಗಳು ಇದ್ದು ಸತ್ತಂತಾಗಿದ್ದಾರೆ ಎಂದು ಬಡಾವಣೆಯ  ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
------------------------
ದಾಸ್ತಿಕೊಳದ ನೀರಿನ ಸಮಸ್ಯೆ ಬಗ್ಗೆ ತಿಳಿದಿದೆ. ತಕ್ಷಣವೇ ಬಿಳಿಕೆರೆಯಿಂದ ಪೈಪ್‌ಲೈನ್ ಅಳವಡಿಸಿ ಅಥವಾ ಮತ್ತೊಂದು ಬೋರ್‌ವೆಲ್ ಹಾಕಿಸಿ ಸಮರ್ಪಕ ನೀರಿನ ವ್ಯವಸ್ಥೆಗೆ ಕ್ರಮ ವಹಿಸುತ್ತೇನೆ.
-ಎ.ಬಿ.ಬಸವರಾಜು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ.
--------------------
ಈ ಭಾಗದಲ್ಲಿ ಅಂತರ್ಜಲ ಕುಸಿದಿದೆ. ಆದರೆ, ಈ ಸಾಲಿನ ಅನುದಾನ ಬಿಡುಗಡೆಯಾಗಿಲ್ಲ . ಆದರೂ ತಕ್ಷಣ ಕ್ರಮ ವಹಿಸ್ತೇನೆ.
-ದಯಾನಂದ್, ಎ.ಇ.ಇ., ಜಿ.ಪಂ.
-------------------
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಕೆಟ್ಟಿರುವ ಬೋರ್‌ವೆಲ್ ಸರಿಪಡಿಸುತ್ತೇನೆ, ನೀರುಗಂಟಿಗಳನ್ನು ಹದ್ದುಬಸ್ತಿನಲ್ಲಿಡುತ್ತೇನೆ.
-ಶ್ರೀನಿವಾಸ್, ಕಾರ್ಯದರ್ಶಿ ಬಿಳಿಕೆರೆ ಗ್ರಾ.ಪಂ.

ಹೂ ಅರಳಿತು, ಬದುಕು ಬಾಡಿತು

ಆರ್. ರಾಜೇಂದ್ರ, ಕೃಷ್ಣರಾಜನಗರ
ಮೈಸೂರು ಎಂದರೆ ಥಟ್ಟನೆ ನೆನಪಿಗೆ ಬರುವುದು ಮೈಸೂರು ಮಲ್ಲಿಗೆ, ಮೈಸೂರು ಪಾಕು, ಮೈಸೂರು ರೇಷ್ಮೆ ಇಂಥ ಜಗದ್ವಿಖ್ಯಾತಿ ಪಡೆದ ಮೈಸೂರು ಜಿಲ್ಲ್ಲೆಯಲ್ಲಿ ಕಾಕಡ ಹೂ  ಸಹ ತನ್ನ  ಅಸ್ತಿತ್ವ ಸ್ಥಾಪಿಸಿದ್ದರೂ, ಬೆಳಕಿಗೂ ಬಾರದೆ, ಬೆಲೆಯೂ ಇಲ್ಲದೆ ಬೆಳೆಗಾರರು ಕಾಕಡ ಹೂ ಬೆಳೆಗೆ ತಿಲಾಂಜಲಿ ಹೇಳುವ ಪರಿಸ್ಥಿತಿ ಬಂದೊದಗಿದೆ.
ಸಭೆ ,ಸಮಾರಂಭ, ಜಾತಿ, ಧರ್ಮದ ಭೇದ ವಿಲ್ಲದೆ ಪೂಜೆ ಪುನಸ್ಕಾರ ಎಲ್ಲದಕ್ಕೂ ಸಲ್ಲುವ,  ಈ ಬೆಳೆ ತಾಲೂಕಿನ ಹಲವೆಡೆ ಹೆಸರಾಗಿದ್ದು, ರೈತರು ತಮ್ಮ ದೈನಂದಿನ ಕೆಲಸ ಹಾಗೂ ಪ್ರಮುಖ ಬೆಳೆ ಯೊಂದಿಗೆ ಉಪ ಬೆಳೆಯಾಗಿ ಬೆಳೆಯುತ್ತಿದ್ದಾರೆ.
ತಾಲೂಕಿನ ಕಾಟ್ನಾಳು, ಚಂದಗಾಲು, ಚಿಕ್ಕವಡ್ಡರ ಗುಡಿ, ದೊಡ್ಡ ವಡ್ಡರಗುಡಿ, ಕಂಚಿನಕೆರೆ, ಡೆಗ್ಗನಹಳ್ಳಿ, ತಿಪ್ಪೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರು   ಪ್ರಮುಖ ಬೆಳೆಯೊಂದಿಗೆ  ಕಾಕಡ ಹೂ ಬೆಳೆಯುತ್ತಿದ್ದಾರೆ.  ಅದರಲ್ಲೂ ಕೆಲವು ಕುಟುಂಬಗಳು ಹೂ ಬೆಳೆಯನ್ನು ನಂಬಿ ಬದುಕು ನಡೆಸುತ್ತಿದ್ದು, ಬೆಲೆ ಮತ್ತು ಮಧ್ಯವರ್ತಿಗಳ ಹಾವಳಿಯಿಂದ ನಲುಗಿ ಹೋಗಿದ್ದಾರೆ.
ಬೆಳೆದ ಹೂ ಕೊಂಡು ಹೋಗಿ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಇಲ್ಲದೆ  ಮಧ್ಯವರ್ತಿಗಳ ಹಾವಳಿಯಿಂದ, ದಲ್ಲಾಳಿಗಳು ನಿಗದಿ ಮಾಡಿದ ಬೆಲೆಗೆ ಮಾರಾಟ ಮಾಡಿ ಬಂದಷ್ಟು ಹಣ ಪಡೆದು ಪಾಲಿಗೆ ಬಂದದ್ದು ಪಂಚಾಮೃತ ಎನ್ನುವಂತಾಗಿದೆ.
ಮೈಸೂರು - ಹಾಸನದ ಮುಖಾಂತರ ರಾಜ್ಯದ ವಿವಿಧೆಡೆಗೆ ದಲ್ಲಾಳಿಗಳ ಮುಖಾಂತರ  ರವಾನೆಯಾಗುತ್ತಿದ್ದು,  ಹೂವಿನ ಬೆಲೆಯಲ್ಲಿ ಏರುಪೇರಾದರೂ ಮಧ್ಯವರ್ತಿಗಳು ನಿಗದಿಪಡಿಸಿದ ಹಣವನ್ನು ಬೆಳೆಗಾರರು ಪಡೆದು ತೆಪ್ಪಗಿರುವಂತಾಗಿದೆ.
ಪ್ರತಿಯೊಬ್ಬ ರೈತರೂ ಪ್ರತಿದಿನ ೫ರಿಂದ ೨೫ ಕೆ.ಜಿ. ಯವರೆಗೆ ಹೂ ಬಿಡಿಸುತ್ತಾರೆ.  ಈ ಕೆಲಸವೂ ತ್ರಾಸದಾಯಕ ವಾಗಿದ್ದು ಕೂಲಿಕಾರರು ಸಿಗುವುದು ಕಷ್ಟವಾಗಿದೆ. ಬಿಡಿಸಿದ ಕೂಡಲೇ ಮಾರಾಟ ಮಾಡಬೇಕಾಗಿರುವುದರಿಂದ ಮಾರುಕಟ್ಟೆಯ ವ್ಯವಸ್ಥೆ ಇಲ್ಲದೆ ಹೂ ಕೊಂಡರೆ ಸಾಕು ಎಂಬ ಸ್ಥಿತಿಗೆ ಬೆಳೆಗಾರರು ತಲುಪಿದ್ದಾರೆ.
ಹೂ ಬೆಳೆಯುವವರು ಹೇಳುವಂತೆ ವಿಶೇಷ ದಿನಗಳಲ್ಲಿ ಕೆ.ಜಿ.ಗೆ ೧೦೦ ರೂಪಾಯಿ ಆದರೂ ನೀಡುವುದು ೪೦ ರೂ. ಮಾತ್ರ. ಕೆ.ಜಿ. ಹೂಗೆ ೩೦ ಆದರೂ ನಮಗೆ ನೀಡುವುದು ೪೦ ರೂಪಾಯಿ  ಮಾತ್ರ ಎನ್ನುತ್ತಾರೆ.
ಪುಷ್ಪೋದ್ಯಮಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಸಲಹೆ, ಸಹಕಾರ ನೀಡಿರುವುದರ ಜತೆಗೆ ಆರ್ಥಿಕ ನೆರವು ನೀಡಬೇಕೆನ್ನುವ ಬೆಳೆಗಾರರು ಇತ್ತೀಚೆಗೆ ತೋಟಗಾರಿಕೆ ಸಚಿವರು ಕೃಷ್ಣರಾಜ ನಗರದಲ್ಲಿ ಹೂವಿನ ಮಾರುಕಟ್ಟೆ ತೆರೆಯುವುದಾಗಿ ಹೇಳಿದ್ದು  ಈ ಕೆಲಸ ಬೇಗ ಆಗಲಿ ಎಂಬುದು ರೈತರ ಕನಸು.

ಇಂದು ಮಾಜಿ ಮುಖ್ಯಮಂತ್ರಿ ಅರಸು ಹುಟ್ಟುಹಬ್ಬ


ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಹುಟ್ಟೂರು ಹುಣಸೂರಿನ ಕಲ್ಲಹಳ್ಳಿಯನ್ನು ಸರಕಾರ 2.61 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದ್ದರೂ ಮತ್ತಷ್ಟು ಕೆಲಸಗಳು ನನೆಗುದಿಗೆ ಬಿದ್ದಿವೆ.

ಸಂಪರ್ಕ ಸೇತುವೆಯೇ ಇಲ್ಲ !


ಹುಣಸೂರಿನ ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಗೊರವೆ ಮಾಳ ರಸ್ತೆಯಲ್ಲಿನ ದೊಡ್ಡ ಹಳ್ಳ ಹೆಬ್ಬಾಳಕ್ಕೆ ಸೇತುವೆ ನಿರ್ಮಿಸದಿರುವುದರಿಂದ ರೈತರು ಪರದಾಡುವಂತಾಗಿದೆ.

ಬಂಡೀಪುರ: ಬೇಟೆಗಾರರಿಗೆ ಹುಲಿಗಳ ಬಲಿ ?


ಬಂಡೀಪುರ-ನಾಗರಹೊಳೆ ವ್ಯಾಪ್ತಿ ಹುಲಿಗಳಿಗೆ ಸುರಕ್ಷಿತವಾದ ತಾಣವಲ್ಲ ! ಇಂಥ ಒಂದು ಅನುಮಾನ ಇತ್ತೀಚೆಗೆ ದೃಢಪಡುತ್ತಿದೆ. ಏಕೆಂದರೆ ಈ ಎರಡು ರಾಷ್ಟ್ರೀಯ ಉದ್ಯಾನದಲ್ಲಿ ಆರು ತಿಂಗಳ ಅವಧಿಯಲ್ಲಿ ಐದು ಹುಲಿಗಳು ಪ್ರಾಣ ಕಳೆದುಕೊಂಡಿವೆ.

ಬೀರಂಬಳ್ಳಿ ಏತ ನೀರಾವರಿ ಯೋಜನೆ ಕಥೆ ಇದು !


ಈಗ ಉತ್ತಮ ಮಳೆಯಾಗುತ್ತಿದೆ. ಆದರೂ ಬೀರಂಬಳ್ಳಿ ಏತ ನೀರಾವರಿ ಯೋಜನೆ ಭಾಗದ ರೈತರಿಗೆ ಕುಡಿಯಲು ನೀರಿಲ್ಲ. ಕಾರಣ ಇಷ್ಟೇ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ.

ಗೊಲ್ಲನಬೀಡು ಶಾಲೆಯ ಗೋಳು ಕೇಳೋರಾರಣ್ಣ !


ಹೆಗ್ಗಡದೇವನಕೋಟೆ ಗಡಿ ಭಾಗದಲ್ಲಿರುವ ಗೊಲ್ಲನ ಬೀಡು ಗ್ರಾಮದ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಅವ್ಯವಸ್ಥೆಗಳದ್ದೆ ಆಟ. ಶಾಲಾ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳಬೇಕು. ಕೊಠಡಿಯಲ್ಲಿ ಕಿಟಕಿ, ಬಾಗಿಲು ಬೋರ್ಡ್ ಗಳಿಲ್ಲ. ಶಾಲೆ ಸುತ್ತ ದುರ್ವಾಸನೆಯದ್ದೆ ಕಾರುಬಾರು.

ಕೃಷ್ಣರಾಜನಗರಕ್ಕೆ 75ರ ಸಂಭ್ರಮ


ಕೆಆರ್ಎಸ್ ನಿರ್ಮಾಣದ ಹಿನ್ನೆಲೆಯಲ್ಲಿ ಎಡತೊರೆಯಿಂದ ಸ್ಥಳಾಂತರಗೊಂಡ ತಾಲೂಕು ಕೇಂದ್ರ ಕೃಷ್ಣರಾಜನಗಕ್ಕೆ ಈಗ 75ರ ಸಂಭ್ರಮ.

ಅಂಗವಿಕಲ ಪುನರ್ವಸತಿ ಕೇಂದ್ರ ಲೆಕ್ಕಕ್ಕುಂಟು, ಆಟಕ್ಕಿಲ್ಲ !


ನಂಜನಗೂಡು ತಾಲೂಕಿನ ಅಂಗವಿಕಲ ಪುನರ್ವಸತಿ ಕೇಂದ್ರ ಇದ್ದು ಇಲ್ಲದಂತಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ವಿತರಣೆಯಾಗಬೇಕಿದ್ದ ಸವಲತ್ತುಗಳು ಗೋಡೌನ್ ನಲ್ಲೇ ತುಕ್ಕು ಹಿಡಿಯುತ್ತಿವೆ.ಇದರಿಂದ ವಿಕಲಚೇತನರು ತೊಂದರೆಯ ಸುಳಿಯಲ್ಲಿ ಸಿಲುಕಿದ್ದಾರೆ.

ಹುಲ್ಲಹಳ್ಳಿಗೆ ಕೈ ತಪ್ಪಿದ ತಾಲೂಕು ಪಟ್ಟ


ಪ್ರಮುಖ ಹೋಬಳಿ ಕೇಂದ್ರವಾಗಿದ್ದ ಹುಲ್ಲಹಳ್ಳಿ ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸುತ್ತಮುತ್ತ 70 ಹಳ್ಳಿಗಳ ವ್ಯಾಪ್ತಿ ಇದೆ. ಜತೆಗೆ ಕಪಿಲಾ ನದಿ, ಸರಕಾರಿ ಪದವಿ ಪೂರ್ವ ಕಾಲೇಜು, 19 ಎಕರೆ ಸರಕಾರಿ ಮತ್ತಿತರ ಸೌಲಭ್ಯಗಳನ್ನು ಹೊಂದಿದ್ದರೂ ತಾಲೂಕು ಪುನಾರಚನೆ ಪಟ್ಟಿಯಿಂದ ಕೈ ಬಿಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ.

೪೦ ಕೋಟಿ ರೂ. ಮಣ್ಣುಪಾಲು


2006ರಲ್ಲಿ ನಡೆದ ಈ ಶತಮಾನದ ಮೊದಲ ಪಂಚಲಿಂಗ ದರ್ಶನ ಮಹೋತ್ಸವಕ್ಕಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ನಡೆದ ರಸ್ತೆ ಅಭಿವೃದ್ಧಿ ಮಣ್ಣುಪಾಲಾದ ಕುರಿತು ನಡೆದ ತನಿಖೆಯ ಅಂತಿಮ ವರದಿ ಸಹ ಇದುವರೆಗೂ ಬಹಿರಂಗವಾಗಿಲ್ಲ.

ಸೌಲಭ್ಯವೇ ಇಲ್ಲದ ಕಾಲೇಜು !


ಹಲವು ರಾಜಕೀಯ ದಿಗ್ಗಜರು ವ್ಯಾಸಂಗ ಮಾಡಿದ ಹುಣಸೂರು ಪಟ್ಟಣದ ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು ಮೂಲ ಸೌಕರ್ಯವಿಲ್ಲದೆ ನರಳುತ್ತಿದೆ.

ತಂಬಾಕಿಗೆ ಬಂಪರ್ ಬೆಲೆ !



ನಮ್ಮ ವಿಶೇಷ ವರದಿಗಳನ್ನು ಓದಿ, ನೋಡಿ ಅಭಿಪ್ರಾಯ ತಿಳಿಸಿ.