ಸೂತ್ರಧಾರ ಯಾರಾಗ್ತಾರೆ ?

ಪಿ.ಓಂಕಾರ್ ಮೈಸೂರು
ನಿರ್ದೇಶಕರಾಗಿದ್ದ ಲಿಂಗದೇವರು ಹಳೆಮನೆ `ನಿರ್ಗಮನ'ದ ನಂತರ `ರಂಗಾಯಣ' ದೊಳಗಿನ ತಳಮಳ ಪೂರಿತ ಕುತೂಹಲ ಮತ್ತೆ ಅನಾವರಣಗೊಂಡಿದೆ.
ವಾದ-ವಿವಾದಗ್ರಸ್ತವಾಗಿದ್ದ ಸಂಸ್ಥೆಯ ಚುಕ್ಕಾಣಿ ಹಿಡಿದು, ಸರಿದಾರಿಗೆ ತರುವ ಪ್ರಯತ್ನ ದಲ್ಲಿದ್ದ ಹಳೆಮನೆ, ಕಲಾವಿದರು ಬೇಸಿಗೆ ರಜೆಯಲ್ಲಿದ್ದಾಗ ಬದುಕಿನ ರಂಗಕ್ಕೆ ಕಾಯಂ ರಜೆ' ಹಾಕಿ ತೆರಳಿದರು. ಸಾರಥಿಯನ್ನು ಬೀಳ್ಕೊಟ್ಟ ಕಲಾವಿದರು ಮೊನ್ನೆ ರಜೆ ಮುಗಿಸಿ ಕರ್ತವ್ಯಕ್ಕೆ ಮರಳಿದ್ದಾರೆ. ಜತೆಗೇ,`ನಿರ್ದೇಶಕರು ಯಾರು' ಎಂಬ ಕುತೂಹಲವೂ ಮರಳಿದೆ.

ಮೈದುಂಬಿದ ಕಬಿನಿ, ಕನ್ನಂಬಾಡಿ ಅಣೆಕಟ್ಟು

ಕುಂದೂರು ಉಮೇಶಭಟ್ಟ, ಮೈಸೂರು
ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿ ಬಳಿ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಮಾಡಿಕೊಂಡ ಅರಿಕೆ  ಈಡೇರಿದಂತಿದೆ.
ಮುಖ್ಯಮಂತ್ರಿ ಸ್ಥಾನದ ಜತೆಗೆ ತಮಿಳುನಾಡು-ಕರ್ನಾಟಕ ಸ್ನೇಹ ಹಾಗೂ ಬಾಂಧವ್ಯ ವೃದ್ಧಿಯಾಗಲಿ ಎನ್ನುವುದು ಅವರ ಕೋರಿಕೆಯಾಗಿತ್ತು. ಅದರಂತೆ ಅವರಿಗೆ ಕಳೆದ ತಿಂಗಳೇ ಮುಖ್ಯ ಮಂತ್ರಿ ಗಾದಿ ಸಿಕ್ಕಾಗಿದೆ. ಎರಡನೆಯದಾಗಿ ಉಭಯ ರಾಜ್ಯಗಳ ಸಂಕಟಕ್ಕೆ ಕಾರಣಳಾಗುವ ಕಾವೇರಿ ಈ ಬಾರಿ ಒಲಿಯುವ ಸೂಚನೆ ನೀಡಿದ್ದಾಳೆ.  ಕೆಲ ದಿನಗಳ ಹಿಂದೆಯಷ್ಟೇ ಜಯಲಲಿತಾ ಕಾವೇರಿ ಕ್ಯಾತೆ ತೆಗೆಯುವ ಸೂಚನೆ ಸಿಕ್ಕಾಗಲೇ ಪ್ರಕೃತಿ ಇದನ್ನು ತಣ್ಣಾಗಾಗಿಸಿದೆ.

ರೈತರ ನೆರವಿಗೆ ಡಿಎಫ್‌ಆರ್‌ಎಲ್

ಕುಂದೂರು ಉಮೇಶಭಟ್ಟ ಮೈಸೂರು
ರೈತರೇ, ಟೊಮೇಟೊಗೆ ಬೆಲೆ ಇಲ್ಲವೆಂದು ಬೆಳೆಯನ್ನೇ ಬೀದಿಗೆ ಎಸೆಯಬೇಡಿ, ನಿಮಗಾಗಿ ಮೈಸೂರಿನ ಡಿಎಫ್‌ಆರ್‌ಎಲ್ ವಿಶೇಷ ಸಂಸ್ಕರಣಾ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ. ಅಷ್ಟೇ ಅಲ್ಲದೇ ಉತ್ಪನ್ನದ ಬಹುಪಯೋಗಕ್ಕೆ ವಿಶೇಷ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕೇಂದ್ರ ಮೈಸೂರಿ ನಲ್ಲಿ ತಲೆ ಎತ್ತಲಿದೆ.
ರಕ್ಷಣಾ ಸಿಬ್ಬಂದಿಗೆ ಆಹಾರೋತ್ಪನ್ನ ತಯಾರಿಸುವ ತಂತ್ರಜ್ಞಾನ ಸಿದ್ಧಪಡಿಸುವಲ್ಲಿ ಮುಂಚೂಣಿಯಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್) ಅಭಿವೃದ್ಧಿಪಡಿಸಿರುವ ಟೊಮೇಟೊ ಸಂಸ್ಕರಣೆ ಯಂತ್ರದ ಮೂಲಕ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ.

೬ ರಿಂದ ಸರಕಾರಿ ಇಂಗ್ಲಿಷ್ ಶಾಲೆ...

ವಿಕ ವಿಶೇಷ ಮೈಸೂರು
ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಸರಕಾರಿ ಶಾಲೆ ಆರಂಭಿಸಬೇಕೆಂಬ ಚಿಂತನೆ ವಿರುದ್ಧ  ಗೋಕಾಕ್ ಮಾದರಿಯ ಚಳವಳಿ ನಡೆಸಲು ಹೋರಾಟಗಾರರು ಚಿಂತನ-ಮಂಥನ ನಡೆಸುತ್ತಿರುವ ಹೊತ್ತಲ್ಲಿಯೇ,ಜಿಲ್ಲೆಯ ಆರು ಕಡೆ ಸರಕಾರ ಅದೇ ಮಾದರಿಯ ಆಂಗ್ಲ ಮಾಧ್ಯಮ ಶಾಲೆಗಳನ್ನು ಸದ್ದಿಲ್ಲದೆ ನಡೆಸುತ್ತಿದೆ.
ರಾಜ್ಯಸರಕಾರದ ಸಹಭಾಗಿತ್ವದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಕಳೆದ ವರ್ಷವಷ್ಟೇ ಆರಂಭವಾಗಿರುವ  ಈ ಎಲ್ಲ ಶಾಲೆಗಳಿಗೆ ಪ್ರವೇಶ ಬಯಸಿ ಜಿಲ್ಲೆಯ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಮಾನ್ಯ ಪರೀಕ್ಷೆ ಬರೆದಿದ್ದರು. `ಪ್ರತಿ ಶಾಲೆಗೆ ೮೦ ವಿದ್ಯಾರ್ಥಿಗಳಂತೆ ಒಟ್ಟು ೪೮೦ ವಿದ್ಯಾರ್ಥಿಗಳನ್ನು  ಆಯ್ಕೆ ಮಾಡಿಕೊಳ್ಳಲಾಗಿದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗೇಂದ್ರಕುಮಾರ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.

ಗಿರಿಜನರ ಕಲ್ಯಾಣವೂ ಇರಲಿ

ಕೂಡ್ಲಿಗುರುರಾಜ ಮೈಸೂರು
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಡಾ.ಆರ್. ಬಾಲಸುಬ್ರಮಣಿಯಮ್ ಗಿರಿಜನರ ಜತೆ ಕೆಲಸ ಮಾಡಿದವರು. ಕಳೆದ ಸುಮಾರು ಮೂರು ದಶಕಗಳಿಂದ ಎಚ್.ಡಿ.ಕೋಟೆ ಕಾಡಿನ ಮಧ್ಯೆ ಇದ್ದು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡವರು. ಭ್ರಷ್ಟಾಚಾರದ ವಿರುದ್ಧ ದನಿ ಯಾದವರು. ಅಣ್ಣಾ ಹಜಾರೆ ನಿಕಟವರ್ತಿ. ಪಶ್ಚಿಮಘಟ್ಟದ ತಾಣಗಳಿಗೆ ಯುನೆಸ್ಕೊ ಮಾನ್ಯತೆಗೆ ರಾಜ್ಯ ಸರಕಾರದ ವಿರೋಧ,  ಕೇಂದ್ರ- ರಾಜ್ಯ ಸರಕಾರಗಳ ಮಧ್ಯೆ ನಡೆದಿರುವ ಸಂಘರ್ಷದ ಬಗ್ಗೆ  ಸ್ಥಳೀಯ ಮೂಲ ನಿವಾಸಿಗಳ ದೃಷ್ಟಿಕೋನದಿಂದ ತಮ್ಮ ಅಭಿಪ್ರಾಯವನ್ನು ಈ ಸಂದರ್ಶನದಲ್ಲಿ  ಮುಂದಿಟ್ಟಿದ್ದಾರೆ.

ಯುನೆಸ್ಕೊ ಪಟ್ಟಿ: ರಾಜ್ಯದ ದ್ವಂದ್ವ ನೀತಿ

ಪಿ.ಓಂಕಾರ್ ಮೈಸೂರು
ಇದು ರಾಜ್ಯ ಸರಕಾರದ ದ್ವಂದ್ವ ನಿಲುವು. ಒಂದೆಡೆ ಪಶ್ಚಿಮಘಟ್ಟ  ಶ್ರೇಣಿಯ ೧೦ ತಾಣಗಳನ್ನು `ವಿಶ್ವ ಪರಂಪರೆ' ಪಟ್ಟಿಗೆ ಸೇರಿಸುವ  ಪ್ರಸ್ತಾಪಕ್ಕೆ ವಿರೋಧ. ಮತ್ತೊಂದೆಡೆ  ದಸರೆ ಸೇರಿ ೬ ಸಾಂಸ್ಕೃತಿಕ ಸಂಗತಿಗಳನ್ನು ಅದೇ ಯುನೆಸ್ಕೋದ `ಅಮೂರ್ತ ಸಾಂಸ್ಕೃತಿಕ ಪರಂಪರೆ 'ಪಟ್ಟಿಗೆ ಸೇರಿಸಬೇಕೆಂಬ ಕೋರಿಕೆ.
ಮೈಸೂರು ದಸರಾ, ಕರಾವಳಿಯ ಯಕ್ಷಗಾನ, ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕ, ಕೊಡವ  ಸಂಸ್ಕೃತಿ, ಬಿಳಿಗಿರಿರಂಗನ ಬೆಟ್ಟದ ಸೋಲಿಗ ಪರಂಪರೆ ಮತ್ತು ತೊಗಲು ಬೊಂಬೆ ಕಲೆಯನ್ನು `ಅಮೂರ್ತ ಸಾಂಸ್ಕೃತಿಕ ಪರಂಪರೆ 'ಪಟ್ಟಿಗೆ ಸೇರಿ ಸಲು ಶಿಫಾರಸು ಮಾಡುವಂತೆ ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ  ೨೦೦೯ ಜುಲೈ ೨೯ರಂದು ಪ್ರಸ್ತಾವನೆ ಸಲ್ಲಿಸಿ ಕಾಯುತ್ತಿದೆ.

ಅಬ್ಬಾ ! ಅರ್ಧ ಲಕ್ಷ ಅರ್ಜಿ

ಚೀ.ಜ.ರಾಜೀವ ಮೈಸೂರು
ಎಲ್ಲವೂ ಆರಂಕಿಗಳ ಗಡಿ ಸಮೀಪಿಸುತ್ತಿರುವ ಯುಜಿಸಿ ಪರಿಷ್ಕೃತ ಶ್ರೇಣಿಯ ಸಂಬಳದ ಆಕರ್ಷಣೆ. ರಾಜ್ಯದ ಅರ್ಧ ಲಕ್ಷಕ್ಕೂ ಹೆಚ್ಚು ಸ್ನಾತಕೋತ್ತರ ಪದವೀಧರರು ಈಗ ಕಾಲೇಜುಗಳಲ್ಲಿ ಅಧ್ಯಾಪಕರಾಗಲು ತುದಿಗಾಲಲ್ಲಿ ನಿಂತಿದ್ದಾರೆ !
ಕರ್ನಾಟಕದಲ್ಲಿ ಉಪನ್ಯಾಸಕರಾಗ ಬಯಸುವವರಿಗೆ ಮೈಸೂರು ವಿಶ್ವವಿದ್ಯಾನಿಲಯ ನಡೆಸಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕರ್ನಾಟಕ ಸ್ಟೇಟ್ ಎಲಿಜಿಬಿಲಿಟಿ ಟೆಸ್ಟ್ , ಕೆ -ಸೆಟ್) ಎದುರಿಸಲು ಅರ್ಜಿ ಹಾಕಿರು ವವರ ಸಂಖ್ಯೆ ಬರೋಬ್ಬರಿ ೫೦ ಸಾವಿರದ ಗಡಿ ದಾಟಿದೆ.

ಮಾದಪ್ಪ ಸನ್ನಿಧಿಯಲ್ಲಿ ಇನ್ನು ಅಭಿವೃದ್ಧಿ ಪರಿಶೆ

ಕೋಟಂಬಳ್ಳಿ ಗುರುಸ್ವಾಮಿ ಕೊಳ್ಳೇಗಾಲ
ಮಲೆ ಮಹಾದೇಶ್ವರಬೆಟ್ಟ ಹೊಸ ಸ್ವರೂಪ ಪಡೆದು ಕೊಳ್ಳುತ್ತಿದೆ. ಈ ಹಿಂದೆ ಇದ್ದ ಸಂಕೀರ್ಣ ವ್ಯವಸ್ಥೆಯನ್ನು ಹೋಗಲಾಡಿಸಿ ಸುಂದರ ರೂಪ ಕೊಡುವ ನಿಟ್ಟಿನಲ್ಲಿ ಸರಕಾರ ಮುಂದಾಗಿದೆ.
ಈಗಾಗಲೇ ೪೦೦ ಎಕರೆ ಪ್ರದೇಶವನ್ನೊಳಗೊಂಡ ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ. ಇದಕ್ಕೆ ಹಣ ಮಿತಿ ಬೇಡ. ತಿರುಪತಿ, ತಿರುಮಲ ಮಾದರಿಯಲ್ಲಿ ಸುಂದರ, ಆಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡಿ. ಅದಕ್ಕೆ ತಗುಲುವ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಲೆ ಮಹಾದೇಶ್ವರಬೆಟ್ಟದಲ್ಲಿ ಒಂದು ದಿನ ವಾಸ್ತವ್ಯ ಹೂಡಿದ್ದ ಸಿಎಂ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಹೋಗಿದ್ದಾರೆ. ೬ ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲಿಸುತ್ತೇನೆ  ಎಂಬ ಎಚ್ಚರಿಕೆಯನ್ನೂ ನೀಡಿ ದ್ದಾರೆ. ಹೀಗಾಗಿ ಬೆಟ್ಟದಲ್ಲಿ ಈಗ ಅಭಿವೃದ್ಧಿ ಮಂತ್ರ.

ಆಣೆ, ಪ್ರಮಾಣ ಕಪ್ಪಡಿಯಲ್ಲೂ ನಡೆಯುತ್ತವೆ

ಕುಂದೂರು ಉಮೇಶಭಟ್ಟ  ಮೈಸೂರು
ಧರ್ಮಸ್ಥಳವೀಗ ಯಡಿಯೂರಪ್ಪ-ಕುಮಾರಸ್ವಾಮಿ ಅವರ ರಾಜಕೀಯ ಜಿದ್ದಾಜಿದ್ದಿನ ಆಣೆ ಪ್ರಮಾಣದ ಕೇಂದ್ರಬಿಂದು. ಇದೇ ರೀತಿ ಮೈಸೂರು ಭಾಗದ ರಾಜಕಾರಣಿಗಳ ಆಣೆ ಪ್ರಮಾಣಗಳಿಗೂ ವೇದಿಕೆ ಯಾಗುವ ಸ್ಥಳವೊಂದಿದೆ. ಅದು ಕಪ್ಪಡಿ ಕ್ಷೇತ್ರ.
ಜಿಲ್ಲೆಯ ಕೃಷ್ಣರಾಜನಗರ ಪಟ್ಟಣದಿಂದ ೧೦ ಕಿ.ಮೀ.ದೂರದಲ್ಲಿರುವ ಕಪ್ಪಡಿ ಕಾವೇರಿ ನದಿ ತಟದ ಕ್ಷೇತ್ರ. ಸತ್ಯ ಮಾಡಲು ಕಪ್ಪಡಿಗೆ ಬನ್ನಿ ಎನ್ನುವುದು ಇಲ್ಲಿನ ಜನರಲ್ಲಿ ಸಾಮಾನ್ಯ ಮಾತು. ಮೈಸೂರು ಭಾಗದ ಪ್ರಮುಖ ರಾಜಕಾರಣಿಗಳಲ್ಲೂ ಆರೋಪ-ಪ್ರತ್ಯಾರೋಪಗಳಾದಾಗ ಅವರ ಚಿತ್ತ ಹರಿಯುವುದು ಕಪ್ಪಡಿಯತ್ತಲೇ.

ಮುಚ್ಚುವ ಹಂತದಿಂದ ಸುಸ್ಥಿರತೆಯೆಡೆಗೆ...

ಕುಂದೂರು ಉಮೇಶಭಟ್ಟ ಮೈಸೂರು
`ಮುಚ್ಚುವ ಹಂತದಿಂದ ಸುಸ್ಥಿರತೆಯೆಡೆಗೆ' ನಡೆದು ಬಂದು ದೇಶದ ನಾನಾ ಮೃಗಾಲಯಗಳಿಗೆ ಮಾದರಿಯಾಗಿರುವ ಶತಮಾನದ ಇತಿಹಾಸವಿರುವ ಮೈಸೂರು ಮೃಗಾಲಯದ ಯಶೋಗಾಥೆಯಿದು.
ಪ್ರಾಣಿಗಳ ವಿನಿಮಯದ ಮೂಲಕ ಹೊಸತನದ ಅಳವಡಿಕೆಯಿಂದ ಹೆಚ್ಚಿನ ಪ್ರವಾಸಿಗರ ಭೇಟಿ, ಆದಾಯ ಮೂಲಗಳ ಬಲಪಡಿಸುವಿಕೆಯಿಂದ ಮೃಗಾಲಯ ೧೦ ಕೋಟಿ ರೂ. ಆದಾಯ ತಲುಪಿದ್ದು ಇದೇ ಮೊದಲು. ಸುಸ್ಥಿರ ಬೆಳವಣಿಗೆ ಮಾದರಿಯಾಗಿ ರೂಪುಗೊಂಡ ಇದನ್ನೇ ಒರಿಸ್ಸಾ, ಉತ್ತರ ಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ದೇಶದ ನಾನಾ ರಾಜ್ಯದ ಮೃಗಾಲಯಗಳು ಅನುಸರಿಸತೊಡಗಿವೆ.

ಕೊಳೆ ಹೊತ್ತ್ತ `ಮಕ್ಕಳ ಕಟ್ಟೆ'

ಬಿದರೂರು ಬೈಪಾಸ್ ರಸ್ತೆ ಬದಿಯ `ಮಕ್ಕಳ ಕಟ್ಟೆ' ಎಂಬ ಪುಟ್ಟ ಕೆರೆ ಪಟ್ಟಣದ ಎಲ್ಲಾ ಪಾಪದ ಕೊಳೆಯನ್ನು ತನ್ನ ಒಡಲಲ್ಲಿ ಹೊತ್ತಿದೆ. ಒಂದು ಕಾಲದಲ್ಲಿ ವಾಯು ವಿಹಾರ ತಾಣ ವಾಗಿದ್ದ ಕೆರೆ ಬಳಿ ಇಂದು ಹೋದರೆ ಮೂಗು ಮುಚ್ಚಿಕೊಳ್ಳಬೇಕು.

ಜನನ ಪ್ರಮಾಣ ಕ್ಷೀಣ: ಸರಕಾರಿ ಶಾಲೆಗೆ ಕಂಟಕ

ಸರಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆಯೇ ?   ಮುಚ್ಚುವ ಪರಿಸ್ಥಿತಿಗೆ  ವಿದ್ಯಾರ್ಥಿಗಳ ಕೊರತೆಯೇ ಕಾರಣವೇ ? ಹಾಗಾದರೆ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಂದ ವಿಮುಖರಾಗುತ್ತಿದ್ದಾರೆಯೇ  ? ..
ಈ ಪ್ರಶ್ನೆಗಳಿಗೆ  ಒಂದೇ ಉತ್ತರ ಜನನ ಪ್ರಮಾಣ ಸಂಖ್ಯೆ ಇಳಿಮುಖವಾಗುತ್ತಿರುವುದು. ಹೀಗೊಂದು ಹೊಸ  ಸಂಗತಿಯನ್ನು ಬಯಲು ಮಾಡಿದವರು ಜಿಲ್ಲಾ  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಗೋಪಾಲ್. 
ನಗರದ ಪತ್ರಿಕಾ ಕಚೇರಿಯಲ್ಲಿ  ಶುಕ್ರವಾರ ಜಿಲ್ಲೆಯಲ್ಲೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ  `ವಿಕ ಫೋನ್ ಇನ್' ಕಾರ್ಯಕ್ರಮದಲ್ಲಿ  `ಜಿಲ್ಲಾ  ಶಾಲಾ ಚಟುವಟಿಕೆ ಮತ್ತು ಮೂಲ ಸೌಕರ್ಯ' ಕುರಿತು ಓದುಗರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ನಾನಾ ಸಮಸ್ಯೆ, ಸಂಕಟಗಳನ್ನು ತಮ್ಮ ಒಡಲಿನಿಂದ ಡಿಡಿಪಿಐ ಮಡಿಲಿಗೆ ಹಾಕಿದ ಓದುಗರು ಅವರು ನೀಡಿದ ಉತ್ತರಗಳಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಚಿರತೆ ಕಾಡಿಗೆ, ಇನ್ನು ನಿಶ್ಚಿಂತೆ

ವಿಕ ಸುದ್ದಿಲೋಕ ಎಚ್.ಡಿ.ಕೋಟೆ
ಜನ-ಜಾನುವಾರುಗಳಲ್ಲಿ ಭಯ ಹುಟ್ಟಿಸಿದ್ದ ಗಂಡು ಚಿರತೆ(೯) ಕೃಷ್ಣಾಪುರ ಗ್ರಾಮದ ಬಳಿಯ ಮಾಜಿ ಸಚಿವ ಎಂ ಶಿವಣ್ಣನವರ ಜಮೀನಿನಲ್ಲಿ ಬೋನಿಗೆ ಬಿದ್ದಿದೆ.
ಬೆಳಗಿನ ಜಾವ ೩ ಗಂಟೆಯಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಬೆಳಗ್ಗೆ ಚಿರತೆ ಬೋನಿಗೆ ಬಿದ್ದಿರುವ ಮಾಹಿತಿ ದೊರೆಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೋನಿ ನಲ್ಲಿದ್ದ ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿ.ಬಿ. ಕುಪ್ಪೆ ವನ್ಯ ಜೀವಿ ವಲಯದ ಹಳೇ ಕಾಕನಕೋಟೆ ಗಸ್ತಿಗೆ ಒಯ್ದು ಬಿಟ್ಟರು.

ಬೃಹತ್ ಪಾಲಿಕೆಯತ್ತ ಮೈಸೂರು ಚಿತ್ತ

ಕೂಡ್ಲಿ ಗುರುರಾಜ ಮೈಸೂರು
ಎಲ್ಲವೂ ಅಂದುಕೊಂಡಂತಾದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಂತೆ ಮೈಸೂರು ಪಾಲಿಕೆ ಕೂಡ ಬೃಹತ್ ಆಗಲಿದೆ.
ಮೈಸೂರು ಮಹಾನಗರ ಪಾಲಿಕೆ ಈಗ ೧೨೮.೪೨ ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ನಗರಕ್ಕೆ ಹೊಂದಿ ಕೊಂಡಿರುವ ಸುತ್ತಮುತ್ತಲ ಪ್ರದೇಶ ಗಳನ್ನು ಒಳಗೊಂಡು ಬೃಹತ್ ಮೈಸೂರು ಮಹಾನಗರ ಪಾಲಿಕೆಯಾದರೆ ಒಟ್ಟು ೧೭೦ ಚದರ ಕಿ.ಮೀ.ಗೆ  ಹಿಗ್ಗಲಿದೆ. ಹೊಸದಾಗಿ ಸೇರ್ಪಡೆಯಾಗಲಿರುವ ೪೨ ಚದರ ಕಿ.ಮೀ. ಪ್ರದೇಶಕ್ಕೆ ಮೂಲ ಸೌಕರ್ಯ ಕಲ್ಪಿಸುವ ಹೊಣೆ ಪಾಲಿಕೆ ಹೆಗಲೇರಲಿದೆ.

ಮೈಸೂರು ಜೈವಿಕ ಗಡಿಯಾರ ಏರುಪೇರು !

ಚೀ.ಜ.ರಾಜೀವ ಮೈಸೂರು
ನಿಮಗೆ ಗೊತ್ತೆ? ಮೈಸೂರಿನ ಸಾವಿ ರಾರು ಮುಂಜಾನೆ `ವಾಯು ವಿಹಾರಿ' ಗಳ ಪಾಲಿಗೆ  ವಾರದಿಂದ ಬೆಳಕು ಹರಿಯುವುದು ತಡವಾಗುತ್ತಿದೆ !
ಸೂರ್ಯೋದಯಕ್ಕೆ ಮುನ್ನವೇ ಹಾಸಿಗೆ ಯಿಂದ ಎದ್ದು, ಶೂ ಧರಿಸಿ ಕೊಂಡು ರಸ್ತೆಗಿಳಿ ಯುತ್ತಿದ್ದ  ಬಹುತೇಕ ಮಂದಿ ಈಗ ಸೂರ್ಯನ ಆಗಮನ ವನ್ನು  ಖಚಿತ ಪಡಿಸಿಕೊಂಡೇ ಹೊಸ್ತಿಲು ದಾಟುತ್ತಿದ್ದಾರೆ.
ಏನಿದರ ಮಹಿಮೆ ಎಂಬ ಕುತೂಹಲವನ್ನು ಬೆನ್ನಟ್ಟಿ ಹೋದರೆ ದೊರೆಯುವ ಉತ್ತರ ಆನೆಗಳ ಭೀತಿ (ಪ್ಯಾಕಿಡರ್ಮೊ ಫೋಬಿಯಾ) ಮೈಸೂರಿನ `ನಡಿಗೆ ವೀರ, ವನಿತೆ'ರನ್ನು ಆವರಿಸಿದೆ. ಬೆಳ್ಳಂಬೆಳಗ್ಗೆ  ಎರಡು ಆನೆಗಳು ಮೈಸೂರಿಗೆ ನುಗ್ಗಿ, ಒಬ್ಬನನ್ನು ಹೊಸಕಿ ಹಾಕಿ ಹೋದ ಘಟನೆಯಿಂದ ಬೆಚ್ಚಿ ಬಿದ್ದಿರುವ ಜನತೆ, ನಸುಕಿನ ಸಹವಾಸವನ್ನೇ ತೊರೆದಿದ್ದಾರೆ. ಆನೆಗಳ ಬಳಿಕ ಜೆ.ಪಿ. ನಗರದ ಭಾಗಕ್ಕೆ ಚಿರತೆ ಯೊಂದು `ಹಾಗೆ  ಸುಮ್ಮನೆ'ಬಂದು ಹೋಗಿದೆ. ಇದೆಲ್ಲದರ ಪರಿಣಾಮ ಮೈಸೂರಿನ ಮುಂಜಾನೆಯ ಚಿತ್ರಣವೇ ಬದಲಾಗಿದೆ.

ಮಧುರ ಮಂಡ್ಯದಲ್ಲಿ ತುಂಬಿ ತುಳುಕುವ ಕಸದ ತೊಟ್ಟಿ

ನವೀನ್ ಮಂಡ್ಯ
ಸ್ವಚ್ಛತೆ ವಿಷಯದಲ್ಲಿ ದೇಶದಲ್ಲಿ ೧೫ನೇ ಸ್ಥಾನ ಪಡೆದಿರುವ `ನಿರ್ಮಲ ನಗರ' ಮಂಡ್ಯದಲ್ಲಿ ನೈರ್ಮಲ್ಯಕ್ಕೆ ಪೂರಕವಾದ ಯಾವೊಂದು ಅಂಶಗಳು ಕಾಣುತ್ತಿಲ್ಲ. ನಿಜಕ್ಕೂ ಸ್ವಚ್ಛತೆ ಮರೀಚಿಕೆಯಾಗಿದೆ.
ಎಲ್ಲೆಂದರಲ್ಲಿ ಕಸ ಕಣ್ಣಿಗೆ ರಾಚುತ್ತದೆ. ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿಲ್ಲ. ಪರಿಣಾಮ ಕಸದ ತೊಟ್ಟಿಗಳು ತುಂಬಿ ತುಳುಕುತ್ತಿವೆ. ತೊಟ್ಟಿ ತುಂಬಿದ ಕಸ ರಸ್ತೆ ಮತ್ತು ಚರಂಡಿಯಲ್ಲಿ ಬಿದ್ದು ಚೆಲ್ಲಾಡುತ್ತಿದೆ.
ಕೆಲವೆಡೆ ದೊಡ್ಡ ಕಂಟೈನರ್ ಇಟ್ಟಿದ್ದರೂ ಅದನ್ನು ತುಂಬಿ ಕಸ ಹೊರ ಬರುತ್ತಿದೆ. ಚರಂಡಿ ಸೇರಿದ ಕಸ ಅಲ್ಲೇ ಕೊಳೆತು ದುರ್ನಾತ ಬೀರುತ್ತಿದೆ. ಇದರಿಂದ ಮಲಿನ ನೀರು ಚರಂಡಿ ಗಳಲ್ಲಿ ಸರಾಗವಾಗಿ ಹರಿಯುತ್ತಿಲ್ಲ. ಇದನ್ನು ತಪ್ಪಿಸುವ ಸಲುವಾಗಿ ಇತ್ತೀಚೆಗೆ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ನಿಧಿಯಿಂದ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೆ ಆ ಕಾಮಗಾರಿಯ ಗುಣಮಟ್ಟವೂ ಅಷ್ಟಕ್ಕಷ್ಟೆ.

ಮೈಮುಲ್‌ನಲ್ಲಿ ಕ್ಷೀರ ಕ್ರಾಂತಿ

ಫಾಲಲೋಚನ ಆರಾಧ್ಯ ಚಾಮರಾಜನಗರ
ಮೈಸೂರು-ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ (ಮೈಮುಲ್) ಈ ವರ್ಷ ಕ್ಷೀರ ಕ್ರಾಂತಿ ನಡೆಸಿದೆ.
ಪ್ರತಿ ದಿನ ೫.೫ ಲಕ್ಷ ಲೀಟರ್ ಹಾಲು ಸಂಗ್ರಹ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ.  ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮೈಮುಲ್ ಇದೀಗ ಗಣನೀಯ ಪ್ರಮಾಣದಲ್ಲಿ ಹಾಲು ಸಂಗ್ರಹವನ್ನು ವೃದ್ಧಿಸಿಕೊಂಡಿದೆ. ಕಳೆದ ವರ್ಷ ಇದೇ ವೇಳೆಯಲ್ಲಿ ಮೈಮುಲ್ ಸಂಗ್ರಹಿಸುತ್ತಿದ್ದ  ಹಾಲು ೪.೫ ಲಕ್ಷ ಲೀಟರ್. ಈ ಬಾರಿ ಜೂನ್ ತಿಂಗಳಲ್ಲಿ  (೧೩ ರಂದು) ೫,೫,೨೭೦ ಲೀಟರ್ ಸಂಗ್ರಹ ಮಾಡಿದೆ. ಒಟ್ಟಾರೆ ಮೇ ತಿಂಗಳಿಂದೀಚೆಗೆ ಮೈಮುಲ್‌ನ ಪ್ರತಿದಿನದ ಸಂಗ್ರಹ ೫.೫ ಲಕ್ಷ ಲೀಟರ್.

ಅರಣ್ಯ ಇಲಾಖೆಯಲ್ಲಿ ಬಡ್ತಿ ಹೈಜಾಕ್ !

ಕುಂದೂರು ಉಮೇಶಭಟ್ಟ, ಮೈಸೂರು
ರಾಜ್ಯದ ಐಎಫ್‌ಎಸ್ ಅಧಿಕಾರಿಗಳ ಬಡ್ತಿ ಸಮಸ್ಯೆ ಮತ್ತೊಮ್ಮೆ ತಲೆದೋರಿದೆ.
ಹಿರಿಯ ಅಧಿಕಾರಿಗಳು ತಮಗೆ ಸಿಗುವ ಮುಂಬಡ್ತಿಯನ್ನು ತಪ್ಪಿಸಿ ಕೊಂಡು ಈಗಿರುವ ಫಲವತ್ತಾದ ಹುದ್ದೆಯಲ್ಲೇ ಮುಂದುವರಿಯಲು ಬಡ್ತಿ ಪ್ರಕ್ರಿಯೆಯನ್ನೇ ಮುಂದೆ ಹಾಕುತ್ತಿದ್ದಾರೆ. ಇದರಿಂದಾಗಿ ಬಡ್ತಿ ಗಾಗಿ ವರ್ಷಗಳಿಂದ ಕಾದಿರುವ ಅರ್ಹ ಅಧಿಕಾರಿಗಳು ಅತ್ತ ಪ್ರಭಾವವೂ ಇಲ್ಲದೇ ಇತ್ತ ಹೊಸ ಹುದ್ದೆಯೂ ಇಲ್ಲದೇ ಪರಿತಪಿಸಬೇಕಾದ ಸ್ಥಿತಿ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಡಿಪಿಎಆರ್) ಐಎಫ್‌ಎಸ್ ಬಡ್ತಿ ಪ್ರಕ್ರಿಯೆಯನ್ನು ಮುಗಿಸಬೇಕಾಗಿತ್ತಾದರೂ ಕೆಲವೇ ಅಧಿಕಾರಿಗಳ ಒತ್ತಡಕ್ಕಾಗಿ ಒಂದು ವರ್ಷದಿಂದ ಬಡ್ತಿ ಪ್ರಕ್ರಿಯೆಯನ್ನೇ ಕೈಗೆತ್ತಿಕೊಂಡಿಲ್ಲ.

ಹುಣಸೂರು ಪೂರ್ಣ ಬಂದ್,ರಸ್ತೆ ತಡೆ

ವಿಕ ಸುದ್ದಿಲೋಕ ಹುಣಸೂರು
ಅಪಹೃತ ವಿದ್ಯಾರ್ಥಿಗಳ ಹತ್ಯೆ ಹಾಗೂ ಪೊಲೀಸರ ವೈಫಲ್ಯ ಖಂಡಿಸಿ ಸರ್ವ ಪಕ್ಷಗಳು ಹಾಗೂ ನಾನಾ ಸಂಘಟನೆಗಳು ಕರೆ ನೀಡಿದ ಹುಣಸೂರು ಬಂದ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ನಾಗರಿಕರು, ವಾಣೀಜ್ಯೋದ್ಯಮಿಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ  ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಎರಡೂವರೆ ಗಂಟೆಗಳ ಕಾಲ ಮೈಸೂರು-ಮಡಿಕೇರಿ ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನ ಸಂಚಾರ ತೀವ್ರ ಅಸ್ತವ್ಯಸ್ತಗೊಂಡಿತ್ತು.
ಪಟ್ಟಣದಲ್ಲಿ  ಬೆಳಗ್ಗೆಯಿಂದಲೇ ಅಂಗಡಿ, ಹೋಟೆಲ್, ಸೇರಿದಂತೆ ಎಲ್ಲ ವಾಣಿಜ್ಯ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರಕಾರಿ ಕಚೇರಿಗಳು, ಬ್ಯಾಂಕ್, ಎಲ್‌ಐಸಿ ಕಚೇರಿಗಳು ಎಂದಿನಂತೆ ಕೆಲಸ ನಿರ್ವಹಿಸಿದರೂ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬಸ್‌ಗಳ ಸಂಚಾರವಿದ್ದರೂ ಪ್ರಯಾಣಿಕರ ಸಂಖ್ಯೆ  ಅತೀ ವಿರಳವಾಗಿತ್ತು. ಸಿನಿಮಾ ಮಂದಿರಗಳು ಮುಚ್ಚಿದ್ದವು, ಮೆಡಿಕಲ್ ಸ್ಟೋರ್ ಹಾಗೂ ಹಾಲಿನ ಡೇರಿ ತೆರೆದಿದ್ದವು.

ಅಪಹರಣ ವಿದ್ಯಾರ್ಥಿಗಳ ಬರ್ಬರ ಹತ್ಯೆ

ವಿಕ ಸುದ್ದಿಲೋಕ ಹುಣಸೂರು
ತಾಲೂಕಿನ ಪೊಲೀಸ್ ಇಲಾಖೆ ವೈಫಲ್ಯ ಹಾಗೂ ಅಧಿಕಾರಿ ಗಳ ವರ್ತನೆಯಿಂದ ಬೇಸತ್ತ ಶಾಸಕ ಎಚ್.ಪಿ.ಮಂಜುನಾಥ್ ತಮ್ಮ ಸ್ಥಾನಕ್ಕ ರಾಜಿನಾಮೆ ನೀಡಲು ಮುಂದಾದ ಘಟನೆ ಭಾನುವಾರ ನಡೆಯಿತು.
ರಾಜಿನಾಮೆ ಪತ್ರವನ್ನು ಸಿದ್ದಪಡಿಸಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ರವಾನಿಸಲೂ ಮಂಜುನಾಥ್ ಮುಂದಾಗಿದ್ದರು. ಶಾಸಕರು ರಾಜಿನಾಮೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದ ಕಾರ್‍ಯಕರ್ತರು ನೂರಾರು ಸಂಖ್ಯೆಯಲ್ಲಿ ಅವರ ಕಾರ್ಖಾನೆ ಎದುರು ಜಮಾಯಿಸಿ, ಇಂಥ ನಿರ್ಧಾರವನ್ನು ಮಾತ್ರ ತೆಗೆದುಕೊಳ್ಳ ಬೇಡಿ  ಎಂದು ವಿನಂತಿಸಿಕೊಂಡರು.

ಮೇಘನಾ ಧೀಂ...ತನನ...

ಕಲೆಗೆ ವಯಸ್ಸಿನ ಹಂಗಿಲ್ಲ. ಕಲಿಯವ ಮನಸ್ಸು ಹಾಗೂ ಅವಕಾಶ ಸಿಕ್ಕರೆ ಕಿರಿಯ ವಯಸ್ಸಿನಲ್ಲೂ ಸಾಧನೆ ಮಾಡಬಹುದು. ಇದಕ್ಕೆ ಉದಯೋನ್ಮುಖ ಭರತನಾಟ್ಯ ಪ್ರತಿಭೆ ಎಲ್. ಮೇಘನಾ ಸಾಕ್ಷಿ.


ಪೇಟೆ ಪ್ರೈಮರಿ ನೆನಪು ಸಾವಿರ

ಪೇಟೆ ಪ್ರೈಮರಿ ಶಾಲೆಯೆಂದರೆ ಹಿರಿಯ ತಲೆಮಾರಿನ ಮಂದಿಗೆ ನೆನಪುಗಳ ಸರಮಾಲೆಯೇ ಬಿಚ್ಚಿಕೊಳ್ಳುತ್ತದೆ.
ಚಾಮರಾಜನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ಮಂದಿಗೆ ಈ ಶಾಲೆ ಚಿರಪರಿಚಿತ. ಇಂದಿನ ತಲೆಮಾರು ಅಷ್ಟೇ ಅಲ್ಲ, ಹಿಂದಿನ ಎರಡು ತಲೆಮಾರಿನ ಮಂದಿಗೂ ಈ ಸರಕಾರಿ ಶಾಲೆ ಗೊತ್ತು. ಶಾಲೆ ಶತಮಾನವನ್ನು ದಾಟಿದ್ದು, ಶಾಲೆ ಆವರಣಕ್ಕೆ ಕಾಲಿಟ್ಟರೆ ಬರೋಬರಿ ೧೦೪ ವರ್ಷಗಳ ಹಿಂದಿನ ಕತೆ ಬಿಚ್ಚಿಕೊಳ್ಳುತ್ತದೆ. ಈಗ ನಗರದ ಹೃದಯ ಭಾಗದಲ್ಲಿರುವ ಈ ಸರಕಾರಿ ಶಾಲೆ ಆರಂಭವಾಗಿದ್ದು ೧೯೦೫ರಲ್ಲಿ. ಆ ಸಂದರ್ಭದಲ್ಲಿ ನಗರ ಹಳ್ಳಿಯಾಗಿತ್ತು. ಆಗ ಬ್ರಿಟಿಷರ ಪ್ರಭಾವ ಇದ್ದ ಕಾರಣ ಇಂಗ್ಲಿಷ್ ಪ್ರಭಾವವೂ ಅಷ್ಟೆ ಪ್ರಬಲವಾಗಿತ್ತು. ಹೀಗಾಗಿ ಈ ಶಾಲೆಗೆ ಪೇಟೆ `ಪ್ರೈಮರಿ' ಎಂದೆ ಹೆಸರಿಸಲಾಯಿತು.


ಅಕಾಡೆಮಿಗೂ ಒಂದು ಕೈ ಮೇಲು ಈ ಕೂಟ

ಕೊಡವ ಸಾಹಿತ್ಯ ಕ್ಷೇತ್ರಕ್ಕೆ `ಕೊಡವ ತಕ್ಕ್ ಎಳ್ತ್‌ಕಾರಡ ಕೂಟ' ಕೊಡುಗೆ ಪ್ರಶಂಸನೀಯ!
ಹದಿನೇಳು ವರ್ಷಗಳ ಹಿಂದೆ ಸ್ಥಾಪನೆ ಯಾದ ಕೂಟದ ಕೈಂಕರ್ಯ ಇತರ ಸಂಸ್ಥೆಗಳಿಗೂ ಮಾದರಿ. ಸ್ವಂತ ಲಿಪಿ ಹೊಂದಿಲ್ಲದ ಕೊಡವ ಭಾಷೆಯ ಕೃತಿಗಳು ಅತಿ ವಿರಳ. ಇದನ್ನು ಮನಗಂಡು ಕೂಟ `ಜನಪ್ರಿಯ ಕೊಡವ ಸಾಹಿತ್ಯ ಮಾಲೆ' ಯೋಜನೆಯಲ್ಲಿ ಪ್ರತಿ ತಿಂಗಳು ಒಂದೊಂದು ಹೊಸ ಕೃತಿ ಅನಾವರಣ ಕೈಗೊಂಡಿದೆ. ಇಲ್ಲಿವರೆಗೆ ೧೩೧ ಕೃತಿಗಳು ಪ್ರಕಟಗೊಂಡಿವೆ.



ಶಿಶು ಕಲ್ಯಾಣವೇ ಜೀವನ ವಿಹಾರ

ಗ್ರಾಮಗಳು, ಪ್ರಾಣಿ ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವುದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವುದು ಇತ್ತೀಚಿನ ದಿನಗಳಲ್ಲಿ  ರೂಢಿಯಾಗಿದೆ. ಆದರೆ ದಶಕಗಳ ಹಿಂದೆ ಈ ರೀತಿ ಕಲ್ಪನೆಯೇ ಇಲ್ಲದ ಸಮಯದಲ್ಲಿ  ಗ್ರಾಮಗಳನ್ನು ದತ್ತು ತೆಗೆದು ಕೊಂಡು ಅಲ್ಲಿ ಶಿಶು ವಿಹಾರಗಳನ್ನು ತೆರೆದು ಜ್ಞಾನ ದಾಸೋಹಕ್ಕೆ ಮುಂದಾದವರು ೭೭ರ ಹರೆಯದ ವಾಣಿ ವೆಂಕಟರಾಂ.

ಪುಂಡಾನೆಗಳ ಚಕ್ರವ್ಯೂಹಕ್ಕೆ

ಕುಂದೂರು ಉಮೇಶಭಟ್ಟ ಮೈಸೂರು
ಈತ ದಸರೆ ಗಜ ಪಡೆಗೆ ಕ್ಯಾಪ್ಟನ್ ಅಲ್ಲದಿರಬಹುದು. ಆದರೆ,ಹಠಮಾರಿಗಳಿಗೆ ಮೂಗುದಾರ ಹಾಕಿ ನಿಯಂತ್ರಿಸುವ `ಆಪರೇಷನ್ ಪಡೆ'ಯ ಕ್ಯಾಪ್ಟನ್. ಕರ್ನಾಟಕವಲ್ಲದೆ  ಮಧ್ಯಪ್ರದೇಶದಲ್ಲೂ ಈತ ಜನಪ್ರಿಯ.
ಮೈಸೂರಿಗೆ ದಾಳಿಯಿಟ್ಟು ಜನತೆಯ ಹೃದಯದಲ್ಲಿ `ಲಬ್ ಡಬ್' ಪ್ರಮಾಣ ಹೆಚ್ಚಿಸಿದ್ದ ಕಾಡಾನೆಗಳನ್ನು ನಿಯಂತ್ರಿಸಿದ ನಿಷ್ಣಾತನೀತ. ಈವರೆಗೂ ೭೦ರಿಂದ ೭೫ ಕಾಡಾನೆಗಳಿಗೆ ಪಾಠ ಹೇಳಿಕೊಟ್ಟವ.

ಮೈಸೂರು ನಗರ ಪಾಲಿಕೆಯ ಪರಿಸರ ಸ್ನೇಹಿ ಪ್ರಯೋಗ

ಆರ್.ಕೃಷ್ಣ ಮೈಸೂರು
ಮಲಿನ ನೀರು ಶುದ್ಧೀಕರಣ ಪ್ರಕ್ರಿಯೆ ಯಲ್ಲಿ ಮೈಸೂರು ನಗರಪಾಲಿಕೆ ಪರಿಸರ ಸ್ನೇಹಿ ಪ್ರಯೋಗಕ್ಕೆ ಮುಂದಾ ಗಿದೆ. ಯಂತ್ರಗಳ ಬದಲು ಬಾತು ಕೋಳಿ ಬಳಕೆಗೆ ಮನಸ್ಸಮಾಡಿದೆ.
ಸ್ವಚ್ಛತೆಗಾಗಿ ದೇಶದಲ್ಲಿಯೇ ಎರಡನೇ ಸ್ಥಾನ ಪಡೆದು ಕೊಂಡಿರುವ ನಗರಪಾಲಿಕೆ ಈಗ ರಾಜ್ಯದಲ್ಲೇ ಪ್ರಥಮ ಬಾರಿಗೆ ಬಾತುಕೋಳಿಗಳ ಮೂಲಕ ನೀರು ಸಂಸ್ಕರಣೆ ಮಾಡಲು ಹೊರಟಿದೆ. ವಿದ್ಯುತ್ ಉಳಿತಾಯ, ಪರಿಸರ ರಕ್ಷಣೆ ಆಶಯದ ಈ ಯೋಜನೆಗೆ ಅಧಿಕೃತ ಚಾಲನೆ ನೀಡಲು ಸಿದ್ಧತೆ ನಡೆದಿದ್ದು, ತಮಿಳುನಾಡು ವೆಲ್ಲೂರಿನ `ಇಂಡಿಯನ್ ಗ್ರೀನ್ ಸರ್ವೀಸ್' (ಐಜಿಎಸ್) ಅನುಷ್ಠಾನ ಜವಾಬ್ದಾರಿ ಹೊತ್ತಿದೆ.

ಹೊತ್ತಲ್ಲದ ಹೊತ್ತಲ್ಲಿ ಜಂಬೂ ಸವಾರಿ...

ಕುಂದೂರು ಉಮೇಶಭಟ್ಟ ಮೈಸೂರು
ಏಷ್ಯಾದ ಎಲಿಫೆಂಟ್ ಕಾರಿಡಾರ್‌ನಲ್ಲೇ ಕಾರ್‍ಯರೂಪಕ್ಕೆ ಬರಲಿಲ್ಲ ಕಾಡಾನೆ ಹಾವಳಿ ತಡೆ ಯೋಜನೆ !
ಮೈಸೂರು ಹಾಗೂ ನೆರೆ ಹೊರೆಯ ಅರಣ್ಯ ಪ್ರದೇಶದಲ್ಲಿ ಮಿತಿ ಮೀರಿರುವ ವನ್ಯಜೀವಿ-ಮನುಷ್ಯನ ನಡುವಿನ ಸಂಘರ್ಷ ತಗ್ಗಿಸಲು ರೂಪಿಸಿದ ಯೋಜನೆ ಬರೀ ಕಾಗದದ ಮೇಲೆ ಉಳಿದುಕೊಂಡಿದೆ.
ಈ ಕಾರಣದಿಂದಲೇ ಅತಿ ಹೆಚ್ಚು ಆನೆ ಹೊಂದಿರುವ ಭಾಗದಲ್ಲಿ ಸಮನ್ವಯ ಕಾಪಾಡುವ ಕೆಲಸವಾಗಿಲ್ಲ. ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಯಾಗಿದ್ದಾಗ  ರೂಪಿಸಿದ್ದ ಸುಮಾರು ೧೧೫ ಕೋಟಿ ರೂ.ಗಳ ಯೋಜನೆ ಜಾರಿಗೆ ಬರಲಿಲ್ಲ. ಅವರೇ ಹೇಳಿ ಅದನ್ನು ಮರೆತರೆ, ನಂತರ ಬಂದ ಸರಕಾರಗಳು ಬರೀ ಬಾಯಿ ಮಾತಿನ ಯೋಜನೆ ಪ್ರಕಟಿಸಿದ್ದಾಯಿತು. ಇದರಿಂದ ಈ ಭಾಗದ ಜನ ವನ್ಯಜೀವಿ ಗಳೊಂದಿಗೆ ಸಂಘರ್ಷ ಮಾಡಿಕೊಳ್ಳುತ್ತಲೇ ಬದುಕುವ ಸ್ಥಿತಿ. ಇದರ ಮುಂದುವರೆದ ಭಾಗವೇ ಮೈಸೂರು ಹೃದಯ ಭಾಗಕ್ಕೆ ಲಗ್ಗೆ ಇಟ್ಟ ಕಾಡಾನೆಗಳು.

ಆನೆ ಬಂತೊಂದಾನೆ, ಯಾವೂರಾನೆ ... ಮಳವಳ್ಳಿಯಾನೆ...

ಚೀ.ಜ.ರಾಜೀವ ಮೈಸೂರು
ಆನೆ ಮೈಸೂರಿಗೆ ಬಂದಿದ್ದು ಏಕೆ ?
 -ಅಯ್ಯೋ, ಅಷ್ಟು ಗೊತ್ತಾಗಲ್ವೇನ್ರಿ. ಅದಕ್ಕೆ ಕಾಡಲ್ಲಿ ಮೇವು ಇಲ್ವಂತೆ. ಅದಕ್ಕೆ ಅದು ದಾರಿ ತಪ್ಪಿ ಇಲ್ಲಿಗೆ ಬಂದಿದೆ,ಪಾಪ...!
`ಜಂಬೂ ಸವಾರಿ ನಗರಿ' ಮೈಸೂರಿನಲ್ಲಿ ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಇದೇ ಧಾಟಿಯ ಚರ್ಚೆ. ಮುಂಜಾನೆಯಿಂದ ಸೆರೆ ಸಿಕ್ಕುವವರೆಗೂ ಆನೆ ದಾಂಧಲೆ  ನೋಡುತ್ತಲೇ, ಅದರ ಹಿಂದೆ ಹಿಂಡಿನಂತೆ ಸಾಗಿದ ಕುತೂಹಲ ಭರಿತ ಜನರಿಗೆ,ಆತಂಕವಷ್ಟೇ ಇರ ಲಿಲ್ಲ.ಬಹಳಷ್ಟು ಜನರಿಗೆ `ಆನೆಯ ಭೇಟಿ' ರಂಜನೆ, ಮನರಂಜನೆ,ಮಾಹಿತಿಯನ್ನೂ  ಒದಗಿಸಿತು.ರಸ್ತೆಯ ಇಕ್ಕೆಲಗಳ ಮಹಡಿ-ಮಹಲು, ಬೇಲಿ-ಮರಗಳನೇರಿ, ನೂಕು-ನುಗ್ಗಲಾಗಿಸಿಕೊಂಡು ದಸರೆಯ ಜಂಬೂ ಸವಾರಿ ಯನ್ನು ಕಣ್ತುಂಬಿಸಿಕೊಳ್ಳುವಂತೆಯೇ, ಕಾಡಾನೆ  ಸವಾರಿ ಯನ್ನು ಮೈಸೂರಿನ ಸಾವಿರಾರು ಜನ ವೀಕ್ಷಿಸಿದರು.

ಪ್ರಕೃತಿ ವಿಕೋಪ: ಜಿಲ್ಲಾಡಳಿತ ಸಜ್ಜು

ವಿಕ ಸುದ್ದಿಲೋಕ ಮಡಿಕೇರಿ
ಜಿಲ್ಲೆಯಲ್ಲಿ  ಹೆಚ್ಚು  ಸಮಸ್ಯೆಗಳಿಲ್ಲದಿದ್ದರೂ ಸಣ್ಣ ಪುಟ್ಟ ಸಮಸ್ಯೆಗಳೇ ಬೆಟ್ಟದಷ್ಟಾಗಿವೆ. ಬಹುತೇಕ ಕಚೇರಿಗಳಲ್ಲಿ ಯುವ ಸಿಬ್ಬಂದಿಯೇ ಹೆಚ್ಚಿದ್ದರೂ ಆಡಳಿತದಲ್ಲಿ  ಚುರುಕು ಕಾಣುತ್ತಿಲ್ಲ. ಅಧಿಕಾರಿ ವರ್ಗ ಹಾಗೂ ನೌಕರರು  ಜನ ಸಾಮಾನ್ಯರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದರೂ ಪ್ರಕೃತಿ ವಿಕೋಪ ಎದುರಿಸಲು  ಜಿಲ್ಲಾಡಳಿತ ಸಜ್ಜಾಗಿದೆ...
ಸೋಮವಾರ   ನಗರದ ವಿಜಯ ಕರ್ನಾಟಕ  ಕಚೇರಿಯಲ್ಲಿ  ಗಂಟೆಗೂ  ಹೆಚ್ಚು ಕಾಲ ನಡೆದ `ವಿಕ ಫೋನ್ ಇನ್' ಕಾರ್ಯಕ್ರಮದಲ್ಲಿ   ಉಪ ವಿಭಾಗಾಧಿಕಾರಿ ಡಾ. ಎಂ. ಆರ್. ರವಿ  ಜಿಲ್ಲೆಯ ಜನತೆಗೆ ಹತ್ತು ಹಲವು ಭರವಸೆ ನೀಡಿದರು. ಸಾರ್ವಜನಿಕರಿಂದ ಬಂದ ಬಹುತೇಕ ಕರೆಗಳಿಗೆ ಸಾವಧಾನವಾಗಿ ಉತ್ತರಿಸಿ ಸಮಸ್ಯೆಗಳಿಗೆ ಸ್ಪಂದಿಸುವ ತಮ್ಮ ನೈಜ ಕಳಕಳಿ ತೋರಿದರು.

ಓದುಗರೇ ಬರೆಯುವ ಅಂಕಣ !



ಮೈಸೂರು , ಮೈಸೂರು ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ  ದೂರು, ದೂರದೃಷ್ಟಿಯ ಬರಹ ಇದು. ಸಾಮಾಜಿಕ ಹಿತಾಸಕ್ತಿಯ ಅನಿಸಿಕೆಗಳನ್ನು ಚಿಕ್ಕ, ಚೊಕ್ಕದಾಗಿ ಬರೆದು ಕಳಿಸಿ. ಸಮಸ್ಯೆಯನ್ನು ಬಿಂಬಿಸುವ ಚಿತ್ರಗಳಿಗೂ ಜಾಗವಿದೆ.

ಆಗಿದ್ದು ಆಯಿತು ಮುಂದಿನದು ನೋಡೋಣ...

*ವಿಕ ಸುದ್ದಿಲೋಕ ಮೈಸೂರು
ಇಂತಹ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ!
ಮೈಸೂರಿನಲ್ಲಿ ಜೆಎನ್-ನರ್ಮ್ ಯೋಜನೆ ಅನುಷ್ಠಾನ ಬಗ್ಗೆ ವಿಜಯಕರ್ನಾಟಕ ರಿಯಾಲಿಟಿ ಚೆಕ್ ಅಭಿಯಾನಕ್ಕೆ  ನಾಗರಿಕರು ಬೆನ್ನು ತಟ್ಟಿದರು. ಪತ್ರಿಕೆ ಇಂತಹ ಕೆಲಸ ಕೈಗೆತ್ತಿಕೊಂಡಿದ್ದು  ಸುತ್ಯರ್ಹ ಎಂದು ಸ್ವಯಂಸೇವಾ ಸಂಸ್ಥೆಗಳು ಅಭಿನಂದಿಸಿದವು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎ.ರಾಮದಾಸ್, ಸಂಸದ ಅಡಗೂರು ಎಚ್. ವಿಶ್ವನಾಥ್ ವಿಕ ಕಾರ್ಯವನ್ನು ಬಹಿರಂಗವಾಗಿಯೇ  ಶ್ಲಾಘಿಸಿದರು.
ನರ್ಮ್ ಯೋಜನೆಯ ಅನುಷ್ಠಾನದ  ರಿಯಾಲಿಟಿ ಚೆಕ್‌ನಲ್ಲಿ ಕಂಡುಕೊಂಡಿದ್ದನ್ನು  ಪತ್ರಿಕೆ ವರದಿ ಮಾಡುತ್ತಾ ಹೋಯಿತು. ಹತ್ತು ದಿನಗಳ ಅಭಿಯಾನ ಅಧಿಕಾರಿ ವಲಯದಲ್ಲಿ ಮಿಂಚಿನ ಸಂಚಾರಕ್ಕೂ ಕಾರಣವಾಯಿತು. ವಿಶ್ವನಾಥ್ ವಿಕ ವರದಿಯನ್ನು ಕೇಂದ್ರ ಸರಕಾರದ ಗಮನಕ್ಕೂ ತಂದರು. ರಾಜ್ಯ ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ೧೩ ಯೋಜನೆಗಳಲ್ಲಿ  ೫ ಯೋಜನೆ ಗಳ ಕಾರ್ಯ ವಿಳಂಬವಾಗಿದೆ ಎಂಬುದನ್ನು ಒಪ್ಪಿಕೊಂಡರು.


ಸಾರಿ, ಎಡವಿದ್ದೇವೆ; ಭಾಗ-೨ರಲ್ಲಿ ಏಳುತ್ತೇವೆ

*ವಿಕ ಸುದ್ದಿಲೋಕ ಮೈಸೂರು
ನಿಜ, ಯೋಜನೆ ರೂಪಿಸುವ ಸಂದರ್ಭದಲ್ಲಿಯೇ ಎಡವಿದ್ದೇವೆ. ಭವಿಷ್ಯದ ನಗರ ಕಟ್ಟುವ ಎಂಜಿನಿಯರ್‌ಗಳ ಕೊರತೆ ನಮಗಿತ್ತು. ನಾಲ್ಕು ವರ್ಷಗಳ ಹಿಂದೆ ಕಾಮಗಾರಿ ಕುರಿತು ಸರಿಯಾದ `ವಿಸ್ತೃತ ಯೋಜನಾ ವರದಿ(ಡಿಪಿಆರ್)' ತಯಾರಿಸಿದ್ದರೆ, ಈ ಹೊತ್ತು ಇಷ್ಟೊಂದು ಲೋಪ ದೋಷಗಳು ಆಗುತ್ತಿರಲಿಲ್ಲ !
ಹತ್ತು ದಿನಗಳ ಕಾಲ ವಿಜಯ ಕರ್ನಾಟಕ ನಡೆಸಿದ `ನಮ್ಮ ನರ್ಮ್ - ವಿಕ ರಿಯಾಲಿಟಿ ಚೆಕ್' ಗ್ರಹಿಸಿದ ರಿಯಲ್ ಸಂಗತಿಗಳನ್ನು ನರ್ಮ್‌ನ ನೋಡಲ್ ಏಜೆನ್ಸಿ ಮೈಸೂರು ಮಹಾನಗರ ಪಾಲಿಕೆ ಒಪ್ಪಿಕೊಂಡಿತು. ಆದರೆ, ಇದಕ್ಕೆ ವ್ಯವಸ್ಥೆಯತ್ತ ಬೆರಳು ಮಾಡಿತು.
ವಿಕ ಅಭಿಯಾನದ ಅಂಗವಾಗಿ ಶನಿವಾರ ವಿಕ ಕಚೇರಿ ಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎ. ರಾಮದಾಸ್, ಸಂಸದ ಅಡಗೂರು ಎಚ್. ವಿಶ್ವನಾಥ್, ನರ್ಮ್ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಹರ್ಷಗುಪ್ತ, ಪಾಲಿಕೆ ಆಯುಕ್ತ ಕೆ. ಎಸ್. ರಾಯ್ಕರ್, ಎಸಿಐಸಿಎಂನ ಎಂ. ಲಕ್ಷ್ಮಣ್, ಮೈಸೂರು ಗ್ರಾಹಕರ ಪರಿಷತ್‌ನ ಬಾಪು ಸತ್ಯನಾರಾಯಣ್ ಭಾಗವಹಿಸಿದ್ದರು. ಆಗಿರುವ ದೋಷಗಳನ್ನು ಸಚಿವರು, ಅಧಿಕಾರಿಗಳು ಪ್ರಾಮಾಣಿಕ ವಾಗಿಯೇ ಒಪ್ಪಿಕೊಂಡರು. ಸಂಸದರು, ನಾಗರಿಕ ಪ್ರತಿನಿಧಿಗಳು ಎತ್ತಿದ ಕೆಲವು ಆಕ್ಷೇಪ, ತಕರಾರುಗಳಿಗೂ ತಲೆದೂಗಿದರು.

ಪ್ಲಾಸ್ಟಿಕ್ ಮುಕ್ತ ಝೂಗೆ ದಶಮಾನೋತ್ಸವ !

*ಜೆ.ಶಿವಣ್ಣ ಮೈಸೂರು
ಅದು ವನ್ಯಜೀವಿಗಳ ತಾಣ. ದೇಶದ ಅತ್ಯಂತ ಹಳೆಯ ಮತ್ತು ಅತ್ಯುತ್ತಮ ಮೃಗಾಲಯಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ.
ಅಲ್ಲಿ `ಪ್ಲಾಸ್ಟಿಕ್'ಬಳಕೆಗೆ ಬ್ರೇಕ್ ಬಿದ್ದು ದಶಕವಾಗಿದೆ. `ಪ್ಲಾಸ್ಟಿಕ್ ಮುಕ್ತ' ವಲಯ ಎಂದು  ಘೋಷಣೆಯಾಗಿ ದಶಕ ಉರುಳಿದೆ. ಪರಿಣಾಮ-ಅಲ್ಲೀಗ ಹುಡುಕಿದರೂ ತುಂಡು ಪ್ಲಾಸ್ಟಿಕ್ ಸಿಗುವುದಿಲ್ಲ. ಅದು ಪಾರಂಪರಿಕ ನಗರಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ.
ತೀವ್ರ ಕಣ್ಗಾವಲಿನ ನಡುವೆಯೂ ಪ್ಲಾಸ್ಟಿಕ್ ನುಸುಳಿದರೂ ನೆಲ ಮುಟ್ಟುವ ಮುನ್ನವೇ ಕಸದ ಬುಟ್ಟಿಗೆ ಸೇರಿಸಲು ಸಿಬ್ಬಂದಿ ಸದಾ ಸಿದ್ಧ. ಕೇವಲ ಸಿಬ್ಬಂದಿ ಮಾತ್ರವಲ್ಲ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದಿ ಯಾಗಿ ಎಲ್ಲಾ ಅಧಿಕಾರಿಗಳೂ ಪ್ಲಾಸ್ಟಿಕ್ ಕಣ್ಣಿಗೆ ಬಿದ್ದರೆ ಹೆಕ್ಕಿ ತೆಗೆಯುತ್ತಾರೆ. ೨೦೦೧-೦೨ ರಿಂದ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದು, ಮೃಗಾಲಯವೀಗ ಪ್ಲಾಸ್ಟಿಕ್ ಮುಕ್ತ.

ಛೇ! ಅಂದ್ಕೊಂಡಂಗೆ ಆಗ್ಲಿಲ್ವೆ

ಗುಣಮಟ್ಟ ಕೇಳಬೇಡಿ...
ಮೈಸೂರಿನಲ್ಲಿ ನರ್ಮ್ ಅಡಿ ಹೊರ ವರ್ತುಲ ರಸ್ತೆ ಹಾಗೂ ಅಗೆದ ರಸ್ತೆ ರಿಪೇರಿ ಕಾಮಗಾರಿಗಳು ನಡೆಯುತ್ತಿವೆ. ಇದರಲ್ಲಿ ಹೊರ ವರ್ತುಲ ರಸ್ತೆ ಕಾಮಗಾರಿ ಸ್ಥಿತಿಯಂತೂ ಅಧ್ವಾನ. ಕಾಮಗಾರಿ ಗುಣಮಟ್ಟವಂತೂ ಕೇಳಲೇಬೇಡಿ.
ಭಾರತೀಯ ರಸ್ತೆ ಕಾಂಗ್ರೆಸ್ ನಿಯಮಗಳ ಪ್ರಕಾರ ರಸ್ತೆ ನಿರ್ಮಾಣವಾಗಬೇಕು. ಆರು ಪಥದ ರಸ್ತೆಗೆ ಅಕ್ಕಪಕ್ಕದಲ್ಲಿ ಜಾಗ ಬಿಡಬೇಕು. ಜತೆಗೆ ರಸ್ತೆ ಗಟ್ಟಿತನಕ್ಕೂ ಆದ್ಯತೆ ನೀಡಬೇಕು. ಪಾದಚಾರಿ ರಸ್ತೆ ನಿರ್ಮಿಸಬೇಕು. ಕೆಲವು ಕಡೆ ಕಾಮಗಾರಿ ಮುಗಿದಿರುವುದರಿಂದ ಬೀದಿ ದೀಪ ಬರ ಬೇಕಾಗಿತ್ತು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ.
ಇಡೀ ರಸ್ತೆಯುದ್ದಕ್ಕೂ ಗುಣಮಟ್ಟದ ಕೆಲಸ ನಡೆಯು ತ್ತಿದೆ ಎನ್ನಿಸುತ್ತಿಲ್ಲ.  ವೆಟ್ ಬೀಮ್, ವೆಟ್ ಮಿಕ್ಸ್ ಬಳಕೆ ಮಾಡಬೇಕು. ರಸ್ತೆಗೆ ಬಳಸುವ ಮಣ್ಣು, ಟಾರಿನ ಪರೀಕ್ಷೆ ಯಾಗಬೇಕು. ಅಲ್ಲಲ್ಲಿ ಕಿರು ಪರೀಕ್ಷಾರ್ಥ ಪ್ರಯೋ ಗಾಲಯಗಳನ್ನು ಸ್ಥಾಪಿಸಿಕೊಳ್ಳುವುದು ಸೂಕ್ತ. ಈಗಿನ್ನೂ ಕೆಲಸ ಶುರುವಾಗಿರುವುದರಿಂದ ಪ್ರಯೋಗಾಲಯ ಗಳನ್ನು ಸ್ಥಾಪಿಸಬೇಕು. ಅದೇ ರೀತಿ ರಸ್ತೆಯ ಸೇತುವೆಗಳ ನಿರ್ಮಾಣ ಬಹಳಷ್ಟು ವಿಳಂಬವಾಗಿರುವುದು ಕಂಡು ಬರುತ್ತದೆ. ರಸ್ತೆಯುದ್ದಕ್ಕೂ ಆಳದ ಚರಂಡಿ ನಿರ್ಮಿಸಲಾಗಿದೆ. ಇದು ಯಾಕೆ ಎನ್ನುವುದು ಗೊತ್ತಾಗಲಿಲ್ಲ.

ಅರಣ್ಯ ಸಚಿವರ ಜಿಲ್ಲೆಯಲ್ಲೇ ಸೌದೆ ದಂಧೆ

*ನವೀನ್‌ಕುಮಾರ್ ಪಿರಿಯಾಪಟ್ಟಣ
ತಂಬಾಕು ಬೆಳೆಗಾರರಿಗೆ ಸಿಗದ ಸೌದೆ ಹಣವಂತರಿಗೆ ಲಭ್ಯ. ರೈತರಿಗೆ ಮಾತ್ರ ಹೊರೆ... ಇದು ಅರಣ್ಯ ಸಚಿವರ `ಪ್ರೀತಿಯ' ತಾಲೂಕು ಪಿರಿಯಾಪಟ್ಟಣದಲ್ಲಿ ಸದ್ದಿಲ್ಲದೆ ನಡೆದಿರುವ ವ್ಯವಹಾರ.
ಉರುವಲು (ಸೌದೆ) ಮರಗಳ ಮಾರಾಟದಲ್ಲಿ ಕಮಿಷನ್ ಆಸೆಯಿಂದ ರೈತರನ್ನು ವಂಚಿಸಲಾಗುತ್ತಿದೆ. ಅರಣ್ಯ ಇಲಾಖೆಯಿಂದ ತಾಲೂಕಿನ ನೆಡುತೋಪು ಗಳಲ್ಲಿ ಬೆಳೆಸಲಾದ ನೀಲಗಿರಿ ಮತ್ತು ಹರ್ಕ್ಯುಲೆಸ್ ಮರಗಳ ನಾಟಾಗಳನ್ನು ಇಲಾಖೆ ಅಂಗಸಂಸ್ಥೆಯಾದ  ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ವತಿಯಿಂದ ಕಡಿದು ಮಾರಾಟ ಮಾಡಲಾಗುತ್ತಿದೆ.
ಉರುವಲು ಸೌದೆಗಳನ್ನಾಗಿ ನಾಟಾ ರೂಪದಲ್ಲಿ ಸಾಗಿಸಿ ಡಿಪೋಗಳಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸ ಲಾಗಿದೆ. ತಾಲೂಕಿನಲ್ಲಿ ತಂಬಾಕು ಬೆಳೆ ಹೆಚ್ಚಾಗಿದ್ದು ಪ್ರತಿ ವರ್ಷ ನೆಡುತೋಪುಗಳಿಂದ ಬರುವ ಸೌದೆಗಳನ್ನು  ಡಿಪೋಗಳಲ್ಲಿ ಮಾರಾಟ ಮಾಡಲಾಗು ತ್ತಿತ್ತು. ಇದರಿಂದ ರೈತರು ಹಾಗೂ ಮನೆಗಳಲ್ಲಿ ಸೌದೆ ಬಳಸುವವರಿಗೆ ಅನುಕೂಲವಾಗುತ್ತಿತ್ತು. ಈಗ ಹೊರಗಿನವರಿಗೆ ಮಾರಾಟ ಮಾಡಿ ರೈತರನ್ನು ವಂಚಿಸಲಾಗುತ್ತಿದೆ.

ನಮ್ಮ ನರ್ಮ್

ಕುಂದೂರು ಉಮೇಶ ಭಟ್ಟ / ಚೀ.ಜ.ರಾಜೀವ ಮೈಸೂರು
ಮೈಸೂರಿನ ಅಭಿವೃದ್ಧಿಗೆ ಹೆದ್ದಾರಿಯಾಗಲಿ ಎನ್ನೋ ದೂರದೃಷ್ಟಿಯಿಂದ ಆರಂಭಿಸಿದ ಹೊರವರ್ತುಲ ರಸ್ತೆ ಕಾಮಗಾರಿ ಈಗ ಯಾರ್‍ಯಾರದೋ ಕೈಗೆ ಸಿಲುಕಿದೆ.
ಮೈಸೂರು ವ್ಯಾಪ್ತಿಯನ್ನು ವಿಸ್ತರಿಸಿ, ಎಲ್ಲಾ ಬಡಾವಣೆಗಳಿಗೂ ಸುಲಭ ಸಂಪರ್ಕವಾಗಬೇಕು. ಸಂಚಾರ ಒತ್ತಡ ತಗ್ಗಿಸಿ ಪಾರಂಪರಿಕ ನಗರಿಯ ಹಿರಿಮೆಯನ್ನು ಎತ್ತಿಹಿಡಿಯಲು ವರ್ತುಲ ರಸ್ತೆಯೂ ಕಾರಣವಾಗಬೇಕು ಎನ್ನುವ ಸದುದ್ದೇಶದಿಂದ ಆರಂಭಗೊಂಡ ಹೊರವರ್ತುಲ ರಸ್ತೆ ಹಳ್ಳ ಹಿಡಿಯುತ್ತಿದೆ.

ಭಾರಿ ಮಳೆ; ಜಲಾವೃತ ಮರ ಬಿದ್ದು ಅಸ್ತವ್ಯಸ್ಥ

ವಿಕ ಸುದ್ದಿಲೋಕ ಚಾಮರಾಜನಗರ
ಚಾ.ನಗರ, ಯಳಂದೂರು ಪಟ್ಟಣ ಸೇರಿದಂತೆ ಸುತ್ತಮುತ್ತ ಬುಧವಾರ ಭಾರಿ ಸುರಿ ಸುರಿದ ಪರಿಣಾಮ ಹಲವಾರು ಪ್ರದೇಶ ಗಳು ಜಲಾವೃತಗೊಂಡಿದ್ದವು. ಕೆಲ ಕಡೆ ಮರ ಉರುಳಿ ಜನ ಸಂಚಾರ ಹಾಗೂ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಯಿತು.
ನಗರದಲ್ಲಿ ಬೆಳಗ್ಗೆಯಿಂದ ಮಳೆ ಬರುವ ಯಾವುದೇ ಮುನ್ಸೂಚನೆ ಇರಲಿಲ್ಲ. ಮಧ್ಯಾಹ್ನ ೧.೩೦ರ ಸಮಯದಲ್ಲಿ ಮಳೆ ಏಕಾಏಕಿ ಧೋ ಎಂದು ಸುರಿಯಲಾರಂಭಿ ಸಿತು. ಗಾಳಿ ಸಹಿತ ಭರ್ಜರಿ ಮಳೆ ಸುರಿಯಿತು. ಸುಮಾರು ಒಂದು ತಾಸು ಸುರಿದ ಮಳೆ ಜನಸಂಚಾರವನ್ನು ಅಸ್ತವ್ಯಸ್ತಗೊಳಿಸಿತು. ಶುರುವಿನಿಂದಲೇ ಆರ್ಭಟಿಸಿದ ಮಳೆ ನಿರಂತರ ಒಂದು ತಾಸು ಒಂದೇ ಸಮನೆ ಜೋರಾಗಿ ಸುರಿಯಿತು. ಇದರೊಂದಿಗೆ ಗಾಳಿಯೂ ಇದ್ದ ಕಾರಣ ಗಾಳಿಪುರ, ಹೌಸಿಂಗ್ ಬೋರ್ಡ್ ಕಾಲೋನಿ ಹಾಗೂ ಚೆನ್ನಿಪುರ ಮೋಳೆಯಲ್ಲಿ ಮರಗಳು ಉರುಳಿ ಬಿದ್ದವು. ಚೆನ್ನೀಪುರ ಮೋಳೆ ಬಡಾವಣೆ ಮೂಲಕ ದೊಡ್ಡ ಚರಂಡಿ ಹಾದು ಹೋಗಿದ್ದು, ದಿಢೀರ್ ಭಾರಿ ಪ್ರಮಾಣದ ನೀರು ನುಗ್ಗಿದ ಪರಿಣಾಮ ತಗ್ಗು ಪ್ರದೇಶಕ್ಕೆ ನುಗ್ಗಿತು.

ಸಕಾಲಕ್ಕೆ ಬರಲಿಲ್ಲ ಕೇಂದ್ರದ ಅನುದಾನ

*ಚೀ.ಜ.ರಾಜೀವ ಮೈಸೂರು
ಮುಂಗಾರು ಮಳೆ  ಶುಭಾರಂಭಗೊಂಡು, ಭರ್ಜರಿಯಾಗಿ ಸುರಿಯುವುದು  ಗ್ರಾಮೀಣ ಪ್ರದೇಶದ ಜನರಿಗೆ ಸಂತಸ ತಂದರೆ,  ಮೈಸೂರಿನಂಥ ಮಹಾ ಜನತೆಗೆ ಸಂಕಟ ತರುತ್ತದೆ !
ಹದವಾಗಿ ಎರಡು ಬಾರಿ ಮಳೆ ಬಿದ್ದರೆ ಸಾಕು ಮೈಸೂರಿನ ಹಾದಿ ಬೀದಿಗಳು ಕೆರೆ ಕೊಳ್ಳಗಳಾಗಿ ಪರಿವರ್ತನೆಯಾಗುತ್ತದೆ. ಮೂರು ವರ್ಷಗಳ ಹಿಂದೆ ಸುರಿದ ಸಾಧಾರಣ ಮುಂಗಾರಿಗೆ ಮುಂಬಯಿ, ಬೆಂಗಳೂರಿನಂಥ ಮಹಾನಗರಗಳು  ಕೊಚ್ಚಿಕೊಂಡು ಹೋಗಿದ್ದವು. ಆ ವರ್ಷ ಮೈಸೂರಿನಲ್ಲೂ ಅದೇ ಸ್ಥಿತಿ. ತಗ್ಗಿನ ಪ್ರದೇಶಗಳ ಜನರ ಪಾಡಂತೂ ಹೇಳತೀರದು. `ಯಾಕಾದರೂ ಮಳೆ ಬಿದ್ದಿತೋ,... ಶಿವಾ ಶಿವಾ...' ಎಂದು ಭಜನೆ ಮಾಡುವಂಥ ಸ್ಥಿತಿ ನಿರ್ಮಾಣವಾಗುತ್ತದೆ.
ಯಾಕೆ ಹೀಗೆ ಎಂಬ ಪ್ರಶ್ನೆಯನ್ನು ಬೆನ್ನತ್ತಿದರೆ ದೊರಕುವ ಉತ್ತರ ಒಂದೇ- ನಮ್ಮ ನಗರಗಳ ಮಳೆ ನೀರು ಚರಂಡಿ ವ್ಯವಸ್ಥೆ  ಸಂಪೂರ್ಣ ಹದಗೆಟ್ಟಿದೆ.
ಇದನ್ನು ಮನಗಂಡೇ ಕೇಂದ್ರ ಸರಕಾರ ತನ್ನ  ನರ್ಮ್ ಯೋಜನೆಯಲ್ಲಿ  ಮಳೆ ನೀರಿನ ಚರಂಡಿ ನವೀಕರಣಕ್ಕೆ ಧಾರಾಳವಾಗಿಯೇ ಅನುದಾನ ಒದಗಿಸಿದೆ. ಆದರೆ, ದೊರಕಬಹುದಾದ ಅನುದಾನವನ್ನು ಬಳಸಿಕೊಳ್ಳುವಷ್ಟು  ಶಕ್ತಿ-ಸಾಮರ್ಥ್ಯ, ಜಾಣ್ಮೆ ಕೂಡ ಮೈಸೂರು ಪಾಲಿಕೆಗೆ ಇಲ್ಲ  !

ಸುಪಾರಿ ಕುತಂತ್ರ: ಕಂದಾಯ ಅರಣ್ಯ ನಾಶ

*ವಿಕ ವಿಶೇಷ ಚಾಮರಾಜನಗರ
ಸುಪಾರಿ ಹಂತಕರಿಗೆ ಮನುಷ್ಯರಷ್ಟೇ ಬಲಿಯೇ? ಹಾಗೇನಿಲ್ಲ. ದಟ್ಟ  ಅರಣ್ಯದ ಸಾವಿರಕ್ಕೂ ಹೆಚ್ಚು ಮರಗಳೂ ಜೀವತೆತ್ತಿವೆ ಎಂಬುದು ಅಚ್ಚರಿಯಾದರೂ ಸತ್ಯ. ಸ್ವಾರ್ಥ ಸಾಧನೆಗಾಗಿ ಸುಪಾರಿ ನೀಡಿದವ ಒಂದು ಕಾಲದಲ್ಲಿ  ದೇಶ ಕಾದ ಯೋಧ (?). 
ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಯೋಜನೆ ವ್ಯಾಪ್ತಿಯ ಸಮೀಪದ ಅರಣ್ಯ ಕಂದಾಯ ಭೂಮಿಯಲ್ಲಿ ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಲಾಗಿದೆ. ಇಲ್ಲಿ ಮರ ಕಡಿದಿರುವುದು ಹಣದಾಸೆಗಾಗಿ ಅಲ್ಲ , ಭೂಮಿ ಪಡೆಯುವುದಕ್ಕಾಗಿ !
ಈ ಪ್ರದೇಶದಲ್ಲಿ ಐದೂವರೆ ಎಕರೆ ಭೂಮಿ ಪಡೆಯಲು ಕಾಡು ಜಾತಿಯ ಸಾವಿರಕ್ಕೂ ಹೆಚ್ಚು ಮರಗಳನ್ನು ಹನನ ಮಾಡಲಾಗಿದೆ. ವಿಪರ್ಯಾಸವೆಂದರೆ ಇಷ್ಟು ಪ್ರಮಾಣದ ಮರಗಳನ್ನು ವ್ಯವಸ್ಥಿತ ರೀತಿಯಲ್ಲಿ ಕಡಿದು ಹಾಕುತ್ತಿದ್ದರೂ ಸಂಬಂಧಪಟ್ಟವರ್‍ಯಾರೂ ಇತ್ತ ತಲೆ ಹಾಕಿರಲಿಲ್ಲ. ಪರಿಣಾಮ ದಿಂಡಿಲು (ಅನಾಗೈಸಿಸ್), ಕಕ್ಕಲು ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಮನಸೋ ಇಚ್ಛೆ ನೆಲಕ್ಕರುಳಿಸಲಾಗಿದೆ.

ಭರ್ರನೆ ಸಾಗುತ್ತಿದೆ ಭರಚುಕ್ಕಿ ಜಲಪಾತ ಅಭಿವೃದ್ಧಿ

ಎಂ. ಗುರುಸ್ವಾಮಿ ಕೊಳ್ಳೇಗಾಲ
ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ತಾಲೂಕಿನ ಭರಚುಕ್ಕಿ ಜಲಪಾತ ಪ್ರದೇಶ ಇದೀಗ ಅಭಿವೃದ್ಧಿಗೊಳ್ಳುತ್ತಿದೆ.
ರಮ್ಯ ಮನೋಹರ ಜಲಪಾತ ಹೊಂದಿದ್ದರೂ ಇಲ್ಲಿ ಅಭಿವೃದ್ಧಿ ಹೇಳ ಹೆಸರಿಲ್ಲದಂತಿತ್ತು. ಸರಿಯಾದ ಭದ್ರತೆ, ಸೌಲಭ್ಯಗಳಿಲ್ಲದೆ ಪ್ರವಾಸಿಗರು ಪರದಾಡು ವಂತಾಗಿತ್ತು. ಈ ಹಿನ್ನೆಲೆ ಪ್ರವಾಸೋದ್ಯಮ ಇಲಾಖೆ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಹೀಗಾಗಿ ತಡವಾಗಿಯಾದರೂ ಇಲಾಖೆ ಎಚ್ಚೆತ್ತುಕೊಂಡಿದೆ.