ಮೈಸೂರು ಆವೃತ್ತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮೈಸೂರು ಆವೃತ್ತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮೈಸೂರು ದಸರಾ ಎಲ್ಲೆಲ್ಲೂ ಶೃಂಗಾರ

ವಿಕ ಸುದ್ದಿಲೋಕ ಮೈಸೂರು
ನಾಡ ಹಬ್ಬ ದಸರಾ ಹತ್ತಿರವಾಗುತ್ತಿರುವಂತೆಯೇ ಮೈಸೂರು ಶೃಂಗಾರಗೊಳ್ಳುತ್ತಿದೆ.
ಭಿತ್ತಿಪತ್ರ, ಪೋಸ್ಟರ್, ನಾನಾ ಬರಹಗಳಿಂದ ತುಂಬಿರುತ್ತಿದ್ದ ಕಟ್ಟಡಗಳ ಗೋಡೆ ರಂಗು ಪಡೆದುಕೊಳ್ಳಲಾರಂಭಿಸಿವೆ.
ದಸರಾ ಹಾಗೂ ಮೈಸೂರಿನ ಪರಂಪರೆಯನ್ನು ಬಿಂಬಿಸುವ ಚಿತ್ರಕಲೆ ಸರಕಾರದ  ಕಟ್ಟಡಗಳಲ್ಲಿ  ಮೂಡಲಿದ್ದು, ನೋಡುಗ ರಿಗೆ ಮುದ ನೀಡಲು ಸಿದ್ಧವಾಗುತ್ತಿವೆ. ಇದಕ್ಕಾಗಿ ೩೦ ಮಂದಿ ಕಲಾವಿದರ ತಂಡ ಕಲ್ಪನೆಗೆ ಮೂರ್ತ ರೂಪ ನೀಡಲಾರಂಭಿಸಿ ದ್ದಾರೆ. ನಗರಪಾಲಿಕೆಯಿಂದ ಕೈಗೊಂಡಿರುವ ಈ ವರ್ಣಾ ಲಂಕಾರದ ಹೊಣೆಹೊತ್ತಿರುವ ಪಾಪು ಆರ್ಟ್ಸ್‌ನ ಲೋಕೇಶ್ ನೇತೃತ್ವದಲ್ಲಿ ಕಲಾವಿದರು  ಚಿತ್ರ ಬಿಡಿಸುತ್ತಿದ್ದಾರೆ.

ಚಾಮರಾಜೇಶ್ವರ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ

*ಫಾಲಲೋಚನ ಆರಾಧ್ಯ ಚಾಮರಾಜನಗರ
ಗಡಿ ಜಿಲ್ಲೆ ಚಾಮರಾಜನಗರದ ಶಾಪ ವಿಮೋಚನೆಗಾಗಿ(?) ಮಹಾ ಹೋಮ ಹಾಗೂ ಅಷ್ಟ ಮಂಗಲ ಪ್ರಶ್ನೆ ನಡೆಸಲು ನಗರದಲ್ಲಿ ಭರದ ಸಿದ್ಧತೆಗಳು ನಡೆದಿವೆ !
ಆದರೆ,ಈ ಕಾರ್ಯ ನಡೆಯುತ್ತಿರುವುದು ಮುಜರಾಯಿ ಇಲಾಖೆ ಅಥವಾ ಜಿಲ್ಲಾಡಳಿತದ ವತಿಯಿಂದಲ್ಲ. ಸರಕಾರದ `ಪವರ್' ಫುಲ್ ಸಚಿವರೊಬ್ಬರಿಂದ.
ಹೌದು, ಇಲ್ಲಿನ ಚಾಮರಾಜೇಶ್ವರ ದೇವಾಲಯದಲ್ಲಿ ಸೆ. ೪ ರಿಂದ ೭ರವರೆಗೆ ಕೇರಳದ ೩೫ ಮಂದಿ ಜ್ಯೋತಿಷಿಗಳು ಹಾಗೂ ಅರ್ಚಕರ ತಂಡದಿಂದ ಮಹಾ ಹೋಮ,ಅಷ್ಟ ಮಂಗಲವನ್ನು ನಡೆಸಲು ಸಿದ್ಧತೆ ಕೈಗೊಳ್ಳಲಾ-ಗಿದೆ. ಈ ಕಾರ್ಯಕ್ಕೆ ೧೫ ರಿಂದ ೨೦ ಲಕ್ಷ ರೂ. ವೆಚ್ಚವಾಗ ತಗುಲಬಹುದಾಗಿದ್ದು, ಇದನ್ನು ಭರಿಸಲು ಆ ಸಚಿವರು ಸಿದ್ಧರಿದ್ದಾರೆ. ಏಕೆಂದರೆ  ಈ ಕಾರ್ಯ ನಡೆಯುತ್ತಿರುವುದು ಅವರ ನಿರ್ದೇಶನದ ಮೇರೆಗೆ ಎನ್ನಲಾಗುತ್ತಿದೆ.
ದೇವಾಲಯಗಳಲ್ಲಿ ಇಂಥ ಹೋಮ,ಅಷ್ಟ ಮಂಗಲ ನಡೆಯುವುದು ಹೊಸದಲ್ಲ.-ಆದರದು ಮುಜರಾಯಿ ಇಲಾಖೆ ಅಥವಾ ಅಲ್ಲಿನ ಆಡಳಿತ ಮಂಡಳಿಯಿಂದಲೇ ವತಿ-ಯಿಂದಲೇ ನಡೆಯುತ್ತದೆ.ಆದರೆ, ಚಾಮ-ರಾಜೇಶ್ವರ ದೇವಾಲಯದಲ್ಲಿ ನಡೆಸಲು ಉದ್ದೇಶಿಸಿರುವ ಕಾರ್ಯ ಮುಜರಾಯಿ ಇಲಾಖೆ ಅಥವಾ ಜಿಲ್ಲಾಡಳಿತದ್ದಲ್ಲ. ಈ ಕಾರ್ಯಕ್ಕೆ ಇನ್ನು ಅನುಮತಿಯನ್ನೂ ಪಡೆದಿಲ್ಲ. ಬದಲಿಗೆ ಜಿಲ್ಲಾಡಳಿತಕ್ಕೆ ಒಂದು ಮನವಿ ಪತ್ರ ಸಲ್ಲಿಸಲಾಗಿದೆಯಷ್ಟೆ.

ವಿದೇಶಿಗರಿಗೆ ದಸರೆಯ ದರ್ಶನ: ವಿಶೇಷ ಪ್ಯಾಕೇಜ್‌ಗೆ ಚಿಂತನೆ

ವಿಕ ವಿಶೇಷ ಮೈಸೂರು
ಮೈಸೂರು ದಸರೆಯ ಸಾಂಪ್ರದಾಯಿಕ ಮುಖವನ್ನು ವಿದೇಶಿ ಪ್ರವಾಸಿಗರಿಗೆ  ಪರಿಚಯಿಸುವ ದೃಷ್ಟಿಯಿಂದ ವಿಶೇಷ ಪ್ಯಾಕೇಜ್ ರೂಪಿಸುವ ನಿಟ್ಟಿನಲ್ಲಿ ದಸರಾ ಸಮಿತಿ ಚಿಂತನೆ ನಡೆಸಿದೆ.
ಮನೆ ಮನೆಗಳಲ್ಲಿ ಬೊಂಬೆ ಕೂರಿಸಿ ಸಂಭ್ರಮಿಸು ವುದೂ ಸೇರಿ ಹಲವು ಸಾಂಪ್ರದಾಯಿಕ,ಸಾಂಸ್ಕೃತಿಕ ಆಚರಣೆಗಳು ದಸರೆಯನ್ನು ಶ್ರೀಮಂತಗೊಳಿಸುತ್ತವೆ. ದಸರೆ ಎಂದರೆ  ಅರಮನೆ ಸಂಗೀತ, ಜಂಬೂ ಸವಾರಿ ಎಂದಷ್ಟೆ  ತಿಳಿದ ಪ್ರವಾಸಿಗರಿಗೆ  ಇನ್ನಷ್ಟು ವೈವಿಧ್ಯಗಳ ದರ್ಶನ ಮಾಡಿಸುವುದು ಪ್ಯಾಕೇಜ್ ಉದ್ದೇಶ.
ಮೈಸೂರು ವಿಜಯ ಕರ್ನಾಟಕ ಕಚೇರಿಯಲ್ಲಿ ಶುಕ್ರವಾರ ನಡೆದ  `ಫೋನ್-ಇನ್ ಕಾರ್ಯಕ್ರಮ'ದಲ್ಲಿ ಭಾಗವಹಿಸಿದ್ದ  ದಸರಾ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಈ ವಿಷಯ ತಿಳಿಸಿದರು.
`ದಸರಾ ಮಹೋತ್ಸವ ೨೦೧೧'ರ ಸಿದ್ಧತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಸ್ತ್ರದ್ ಅವರಿಗೆ ದಸರೆ ಹೊಸದಲ್ಲ. ಎರಡು ದಶಕದ ಹಿಂದೆ ನಡೆದ ದಸರೆಯಲ್ಲಿ ಕೆಲಸ ಮಾಡಿದ್ದಾರೆ.   
ಫೋನ್-ಇನ್‌ನಲ್ಲಿ  ಓದುಗರ ಪ್ರಶ್ನೆ-ಸಲಹೆಗಳಿಗೆ ಸ್ಪಂದಿಸಿದ ವಸ್ತ್ರದ್, ` ಈ ಬಾರಿ ಅನವಶ್ಯಕ ಖರ್ಚುಗಳಿಗೆ  ತಡೆ ಹಾಕುವುದು ನಿಶ್ಚಿತ. ಹಾಗೆಂದು ಕಾರ್ಯಕ್ರಮಗಳ ಗುಣಾತ್ಮಕತೆಯನ್ನು ನಿರ್ಲಕ್ಷಿಸುವುದಿಲ್ಲ.ಆಕರ್ಷಕ, ಗುಣಾತ್ಮಕ ಉತ್ಸವಕ್ಕೆ ಒತ್ತು ನೀಡಲಾಗುವುದು' ಎಂದರು.

ಇದು `ಕತ್ತಿ ವೀರ' ಅಲೆಮಾರಿಗಳ ಜನಪದ

 ವಿಕ ವಿಶೇಷ ಮೈಸೂರು
`ಮನುಷ್ಯನ ತಲೆ ಮೇಲೆ ಇಟ್ಟಿರುವ ಈರುಳ್ಳಿಯನ್ನು, ನಮ್ಮ ಹುಡುಗರು ಕುಣಿಯುತ್ತಾ ಕತ್ತಿ ಬೀಸಿ,  ಕ್ಷಣ ಮಾತ್ರದಲ್ಲಿ ತುಂಡು ಮಾಡುತ್ತಾರೆ. ಹೊಟ್ಟೆಯ ಮೇಲೆ ನಿಂಬೆ ಹಣ್ಣು ಇಟ್ಟು, ಅದನ್ನೂ ಡಾಲು ಕತ್ತಿಯಿಂದ ಕತ್ತರಿಸಬಲ್ಲರು.  ನಮ್ಮ  ಈ ಕಲೆಯನ್ನು ಮೈಸೂರು ದಸರಾಗೆ ಪರಿಚಯಿಸಬೇಕೆಂಬ ಇರಾದೆ ಸ್ವಾಮಿ. ಅವಕಾಶ ನೀಡುವಿರಾ ?' 
- ಉತ್ತರ ಕರ್ನಾಟಕ ಸೀಮೆಯ ಅಲೆಮಾರಿ ಜನಾಂಗಕ್ಕೆ ಸೇರಿದ ದಾಲಪಟಾ ಕಲಾವಿದರು  ಮೈಸೂರು ಜಿಲ್ಲಾಧಿಕಾರಿ  ಮುಂದಿಟ್ಟರುವ ಮನವಿ ಇದು. ದಸರಾ ಸಮೀಪಿಸಿತು ಅಂದ್ರೆ ಬಗೆಬಗೆಯ ಜನಪದ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಪ್ರಭಾವ ಬೀರಿ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವುದು ಸಾಮಾನ್ಯ. 
ಆದರೆ, ಗುರುವಾರ  ಜಿಲ್ಲಾಧಿಕಾರಿ ಪಿ. ಎಸ್. ವಸ್ತ್ರದ್ ಅವರನ್ನು ಕಾಣಲು ಬಂದಿದ್ದ ಕಲಾವಿದರು ಮಾತ್ರ ಮೈಸೂರು ದಸರೆಗೆ ಹೊಸಬರು.
ಹಳ್ಳಿ-ಹಳ್ಳಿಗೆ ತೆರಳಿ ಹೆಂಗಸರ ಕೂದಲು ಪಡೆದು, ಬಳೆ, ಕ್ಲಿಪ್, ಮುತ್ತಿನ ಸರದಂತಹ ಹೆಣ್ಣು  ಮಕ್ಕಳ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ  ಈ ಮಂದಿ, ಮನರಂಜನೆಗಾಗಿ ರೂಢಿಸಿಕೊಂಡಿರುವ ಕಲೆಯ ಹೆಸರು ದಾಲಪಟಾ !

ದಸರಾ ಆನೆಗಳಿಗೆ ವಿಶೇಷ ಆರೈಕೆ

*ಹನಗೋಡು ನಟರಾಜ್ ಹುಣಸೂರು   
ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಬಲರಾಮ ಹಾಗೂ ಆತನ ಸಂಗಡಿಗರಿಗೆ ಈಗ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು ಆನೆ ಶಿಬಿರದಲ್ಲಿ ವಿಶೇಷ ಆರೈಕೆ.
ದಸರಾದಲ್ಲಿ ಪಾಲ್ಗೊಳ್ಳುವ ಅಭಿಮನ್ಯು ಸಹ ಇದೆ ಶಿಬಿರದಲ್ಲಿ ಇತರೆ ೧೪ ಆನೆ ಹಾಗೂ ೮ ತಿಂಗಳ ಮರಿಯೊಂದಿಗೆ ಆರೈಕೆ ಪಡೆಯುತ್ತಿದ್ದಾನೆ. ಒಟ್ಟು ೧೪ ಆನೆಗಳು ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು ಬಲರಾಮ, ಅಭಿಮನ್ಯು -ಮತ್ತಿಗೋಡು , ಅರ್ಜುನ, ಕೋಕಿಲ, ಗಂಗೆ- ಬಳ್ಳೆ, ಶ್ರೀರಾಮ, ಕಾಂತಿ, ಗಜೇಂದ್ರ- ಚಾಮರಾಜನಗರದ ಕೆ. ಗುಡಿ,  ಗೋಪಿ, ಕಾವೇರಿ- ದುಬಾರೆ ಕ್ಯಾಂಪಿನಲ್ಲಿ ಹಾಗೂ ಮೇರಿ, ಸರಳ ಸುಂಕದಕಟ್ಟ್ಟೆ ಶಿಬಿರಗಳಲ್ಲಿವೆ.
ಪ್ರತಿ ಬಾರಿಯೂ ಒಕ್ಕಣ್ಣ ಬಲರಾಮನಿಗೆ ಇದೇ ಕೊನೆ ದಸರಾ ಎಂದು ಹೇಳುತ್ತಿದ್ದರೂ ಪರ್‍ಯಾಯವಿಲ್ಲದೆ ಈ ಸಲವೂ ಆತನೇ ಮುಂದುವರೆಯಲಿದ್ದಾನೆ.

ಪಡಿತರ ಭ್ರಷ್ಟಾಚಾರ ಗಣಿಯಷ್ಟೇ ಘನಘೋರ !

*ವಿಕ ಸುದ್ದಿಲೋಕ ಮೈಸೂರು
`ಹದಿನಾಲ್ಕು ತಿಂಗಳ ಅವಧಿಯಲ್ಲಿ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟ ೧೮೨೭ ಕೋಟಿ ರೂಪಾಯಿ. ಆದರೆ  ರಾಜ್ಯದ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ನಡೆದಿರುವ  ಭ್ರಷ್ಟಾಚಾರ ಹಾಗೂ ಅಕ್ರಮದ  ಪರಿಣಾಮ ವಾರ್ಷಿಕ ೧೭೩೭.೬೦ ಕೋಟಿ ರೂ. ಸೋರಿಕೆಯಾಗಿದೆ. ಪರಿಣಾಮದಲ್ಲಿ ಯೋಚಿಸಿದಾಗ, ಗಣಿಗಾರಿಕೆ ಅಕ್ರಮಕ್ಕಿಂತ, ಪಡಿತರ ಅಕ್ರಮವೇ ಆತಂಕಕಾರಿ' ಎಂದು ಪಡಿತರ   ತನಿಖೆ ನಡೆಸಿರುವ ಡಾ.ಆರ್. ಬಾಲಸುಬ್ರಮಣ್ಯಂ ಹೇಳಿದ್ದಾರೆ.
ಗಣಿ ಹಗರಣದಲ್ಲಿ ಒಂದಿಷ್ಟು ಮಂದಿ ಸೇರಿಕೊಂಡು ಬೊಕ್ಕಸಕ್ಕೆ ಬರಬೇಕಿದ್ದ ಕೋಟ್ಯಂತರ ರೂ. ಹಣವನ್ನು ತಾವಷ್ಟೇ ನುಂಗಿ ಹಾಕಿದ್ದಾರೆ. ಆದರೆ, ಪಡಿತರ ಅಕ್ರಮದಲ್ಲಿ  ಸೋರಿಕೆಯಾಗಿರುವುದು ಸರಕಾರದ ಹಣ ಮಾತ್ರವಲ್ಲ.  ಲಕ್ಷಾಂತರ ಶ್ರೀ ಸಾಮಾನ್ಯರ ಹಣವನ್ನೂ ವ್ಯವಸ್ಥೆಯಲ್ಲಿರುವ ವಂಚಕರು ಸೇರಿಕೊಂಡು ಲೂಟಿ ಮಾಡಿದ್ದಾರೆ. ಪ್ರಮಾಣದಲ್ಲೂ  ಪಡಿತರ ಅಕ್ರಮ  ಗಣಿಗಾರಿಕೆಗಿಂತ  ೯೦ ಕೋಟಿ ರೂ. ಕಡಿಮೆಯಷ್ಟೆ. ಆದರೂ ಗಣಿ ಅಕ್ರಮದ ಅಬ್ಬರದಲ್ಲಿ , ಪಡಿತರದ ಅಕ್ರಮ ಸದ್ದು ಮಾಡಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಪ್ಪಚ್ಚುಗೆ ಈಗಲೂ ಮಂತ್ರಿ ಸ್ಥಾನ ಅನುಮಾನ ?

*ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ರಾಜ್ಯದ  ಮುಖ್ಯಮಂತ್ರಿಯಾಗಿ ಕೊಡಗಿನ ಅಳಿಯ ಡಿ.ವಿ. ಸದಾನಂದ ಗೌಡ ಅಧಿಕಾರ ವಹಿಸಿಕೊಂಡ ಬಳಿಕ ಆಡಳಿತಾರೂಢ ಬಿಜೆಪಿಯಲ್ಲಿ ಕೂಡುವ- ಕಳೆಯುವ ಲೆಕ್ಕಾಚಾರ ಪ್ರಾರಂಭವಾಗಿವೆ.
ಚಿರಪರಿಚಿತ ಡಿವಿ ಆಯ್ಕೆ ಕೊಡಗಿನಲ್ಲಿ ಹಲವರಿಗೆ ಸಿಹಿ, ಮತ್ತೆ ಕೆಲವರಿಗೆ ಕಹಿಯಾಗಿ ಪರಿಣಮಿಸಿದೆ. ಕೆಲವರು ಪರಿಸ್ಥಿತಿ ಲಾಭ ಪಡೆಯುವುದು ಹೇಗೆ ಎಂಬ ಹವಣಿಕೆಯಲ್ಲಿದ್ದಾರೆ.
೩ನೇ ಬಾರಿಗೆ ಶಾಸಕರಾಗಿರುವ ಮಡಿಕೇರಿ ಕ್ಷೇತ್ರದ ಎಂ.ಪಿ. ಅಪ್ಪಚ್ಚು ರಂಜನ್  ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಕಾಲಘಟ್ಟದಲ್ಲಿಯೇ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಸಚಿವ ಸಂಪುಟದ ಪ್ರಥಮ ವಿಸ್ತರಣೆ ಸಂದರ್ಭದಲ್ಲಿ ಇದ್ದ ಹೆಸರು ಅಂತಿಮ ಕ್ಷಣದಲ್ಲಿ  ನಡೆದ ಕಸರತ್ತಿನಿಂದ ತಪ್ಪಿಹೋಯಿತು. ಅನಂತರದ ವಿದ್ಯಮಾನದಲ್ಲಿ ಅಪ್ಪಚ್ಚು ಪರ ಲಾಬಿ ಮಾಡುವವರಿಗಿಂತ ಅಡ್ಡಗಾಲು ಹಾಕುವವರ ಪ್ರಭಾವವೇ ಹೆಚ್ಚಾಯಿತು. ಹೀಗಾಗಿ ಅವರ ಆಸೆ ಕೈಗೂಡಲೇ ಇಲ್ಲ.

ಆ ಘಟನೆ ಒಡಹುಟ್ಟಿದವರ ಬಾಲ್ಯಕ್ಕೇ ಕೊಡಲಿ ಪೆಟ್ಟು

ಆರ್.ಕೃಷ್ಣ ಮೈಸೂರು
ನಕ್ಕು-ನಲಿದು ಶಾಲೆಗೆ ಹೋಗಬೇಕಾದ ಕಂದಮ್ಮಗಳಿಗೆ ಈಗ ಹಾಸಿಗೆಯೇ ಆಧಾರ.
ಬ್ಯಾಗು ಹೆಗಲಿಗೆ ಏರಿಸಿ ಉಲ್ಲಸಿತ ಮನಸ್ಸಿನಿಂದ ಹಾರಾಡಬೇಕಾದ ಮಕ್ಕಳು, ಒಂದು ಹೆಜ್ಜೆ ಇಡಲು ಇತರರನ್ನು ಆಶ್ರಯಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.
ಎಲ್ಲರಂತೆ ಓಡಾಡಿಕೊಂಡಿದ್ದ ಎಚ್.ಡಿ.ಕೋಟೆ ತಾಲೂಕು ಮಾದಾಪುರದ ಮೋಹನ್‌ರಾವ್ ಮಕ್ಕಳಾದ ಪವನ್ (೧೭), ಲಾವಣ್ಯ (೧೪) ಹಾಗೂ ವೇದಲಕ್ಷ್ಮಿ (೧೨) ಅವರು ಎಂಟು ತಿಂಗಳಿನಿಂದ ನಡೆಯಲಾಗದ ಅಸಹಾಯಕತೆಯಲ್ಲಿದ್ದಾರೆ. ಚಂದದ ನಗುವಿನ ಇವರ ಬಾಳನ್ನು ಅಪಘಾತ ನುಂಗಿ ಹಾಕಿದೆ.

ತಗ್ಗಿಗೆ ನುಗ್ಗಿದ ನೀರು: ಉಕ್ಕಿ ಹರಿದ ರಸ್ತೆಗಳು !

ಮೈಸೂರು ನಗರ
ಮುಂಗಾರು ಆರಂಭದ ನಂತರ ಮಳೆ ಕೊರತೆ ಎದು ರಿಸಿದ್ದ ನಗರದಲ್ಲಿ ಗುರುವಾರ ಧಾರಾಕಾರ ಮಳೆ.
ನಡು ಮಧ್ಯಾಹ್ನ ಮೋಡಕವಿದ ವಾತಾವರಣ. ೨ ಗಂಟೆ ನಂತರ ಧಾರಾಕಾರ ಮಳೆ. ಕೆಲ ನಿಮಿಷ ಬಿಡುವಿನ ಹೊರತು ನಿರಂತರ ಎರಡೂವರೆ ತಾಸು ಸುರಿಯಿತು. ನಂತರವೂ ರಾತ್ರಿವರೆಗೆ ಆಗಸ ಜಿಟಿಜಿಟಿ ಜಿನುಗುತ್ತಲೇ ಇತ್ತು.
ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಯಿತಾದರೂ,ಹೆಚ್ಚಿನ ಅನಾಹುತ ವರದಿಯಾಗಿಲ್ಲ. ಇನ್ನು ಕೆಲವೆಡೆ ಒಳ ಚರಂಡಿ, ಮಳೆ ನೀರು ಚರಂಡಿ ವ್ಯವಸ್ಥೆ ಹದಗೆಟ್ಟಿದ್ದ ರಿಂದ ರಸ್ತೆಗಳು ನದಿಗಳೋಪಾದಿ ಉಕ್ಕಿ ಹರಿದು ಸಂಚಾರ ಅಸ್ತವ್ಯಸ್ತವಾಗಿತ್ತು. ನಗರದ ಹೃದಯಭಾಗ ಕೆ.ಆರ್.ವೃತ್ತದಲ್ಲಿಯೇ ಮೊಣಕಾಲು ವರೆಗೆ ನೀರು ನಿಂತಿತ್ತು. ರಾಮಾನುಜ ರಸ್ತೆ ಮತ್ತಿತರ ಕಡೆಯೂ ಇದೇ ಸ್ಥಿತಿ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾ ರರು ಪರದಾಡಿದರು. ಸಂಜೆ ಶಾಲೆಯಿಂದ ಮನೆಗೆ ಹೊರಟ ಮಕ್ಕಳು ತೊಯ್ದು ತೊಪ್ಪೆಯಾದರು.
ಕುವೆಂಪು ನಗರ ಅಕ್ಷಯ ಭಂಡಾರ್ ಸಮೀಪ ರಸ್ತೆ ಪಕ್ಕ ಹೂತು ನಿಂತಿದ್ದ ಕಾರು ಮತ್ತು ಜೀಪ್‌ಗಳನ್ನು ನಗರ ಪಾಲಿಕೆಯ `ಧನುಷ್' ತಂಡ ಎತ್ತಿತು.
ಗ್ರಾಮಾಂತರದಲ್ಲಿ: ಹುಣಸೂರು, ಪಿರಿಯಾಪಟ್ಟಣ,ನಂಜನಗೂಡು,ತಿ.ನರಸೀಪುರ,ಎಚ್.ಡಿ.ಕೋಟೆ, ಕೆ.ಆರ್.ನಗರದಲ್ಲೂ ಮಳೆಯಾಗಿದೆ.

ಪಟ ಪಟ ಗಾಳಿಪಟ ಬಾನಗಲ ಚಟಪಟ

ಮೈಸೂರಿನ ವಿದ್ಯಾರಣ್ಯಪುರಂ ಬೂತಾಳೆ ಪಿಚ್‌ನಲ್ಲಿ ಸೋಮವಾರ `ಗಾಳಿಪಟ'ಹಾರಿಸುವ ಸಂಭ್ರಮ. ನಳಂದ ಎಜುಕೇಷನ್ ಸಂಸ್ಥೆಯ ಪ್ರಾಥಮಿಕ, ಪ್ರೌಢಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಷಾಢದ ಗಾಳಿಯಲ್ಲಿ ಬಣ್ಣ ಬಣ್ಣದ ವೈವಿಧ್ಯಮಯ ಪಟಗಳನ್ನು ಹಾರಿಸಿ ಖುಷಿ ಪಟ್ಟರು. ಮಕ್ಕಳ ಖುಷಿಗಾಗಿ ಶಾಲೆಯ ಆಡಳಿತವೇ `ಪಟದ ಹಬ್ಬ'ವನ್ನು ಆಯೋಜಿಸಿತ್ತು. ಮಾಜಿ ಮೇಯರ್ ಮೋದಾಮಣಿ, ಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್, ಸಂಸ್ಥೆ ಕಾರ್‍ಯದರ್ಶಿ ಎಚ್.ಎಚ್. ಸಾವಿತ್ರಿ, ಮುಖ್ಯ ಶಿಕ್ಷಕ ನಟೇಶ್ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.

ನಾಗರಿಕರಾಗಿ ! ನಗರ ಸ್ವಚ್ಛತೆಗೆ ಮುಂದಾಗಿ

ನಗರ ಬಸ್ ನಿಲ್ದಾಣ ಎದುರು ಸಾರ್ವಜನಿಕರು ಬಾಳೆ ಹಣ್ಣು ಖರೀದಿಸಿ ಸಿಪ್ಪೆ ಅಲ್ಲೇ ಬಿಸಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗಿದೆ. ಕೆಲವೊಮ್ಮೆ ಸಿಪ್ಪೆ ಮೇಲೆ ಕಾಲಿಟ್ಟು ಜಾರಿ ಬಿದ್ದ ಪ್ರಸಂಗಗಳು ಹಲವಾರು. ನಮ್ಮಿಂದ ಇತರರಿಗೆ ತೊಂದರೆಯಾಗಬಾರದು ಎಂಬ ಸಣ್ಣ ಸಂಗತಿಯೂ ಅರಿವಾಗದಿದ್ದರೆ ಹೇಗೆ ?

ಪರಿಸರಸ್ನೇಹಿ ಸೋಲಾರ್ ಎಂಜಿನ್!

ಚೀ. ಜ. ರಾಜೀವ ಮೈಸೂರು
ಇತಿಹಾಸ ಪುನರಾವರ್ತನೆಯಾಗುತ್ತದೆ ಎಂಬುದು ಸಮಾಜ ವಿಜ್ಞಾನದ ನಂಬಿಕೆ. ಆದರೆ,ಇಂದಿನ ಸಂಶೋಧನೆಯನ್ನು  ನಾಳೆಯ ವೇಳೆಗೆ `ಇತಿಹಾಸ ' ಮಾಡುವಷ್ಟು  ವೇಗವರ್ಧಕ ಗುಣ ಹೊಂದಿರುವ ವಿಜ್ಞಾನದಲ್ಲಿ, ಅಂಥ ನಂಬಿಕೆಗಳಿಗೆ ಎಳ್ಳಷ್ಟು ಜಾಗವಿಲ್ಲ ಎನ್ನುತ್ತದೆ ವಿಜ್ಞಾನ.  ಕೇವಲ ಸಂವಹನ ಮಾಡಲಷ್ಟೇ ಬಳಕೆಯಾಗುತ್ತಿದ್ದ  ನಿನ್ನೆಯ ಲ್ಯಾಂಡ್  ಫೋನ್,  ಇಂದು ಮೊಬೈಲ್  ಸೆಲ್ ಆಗಿ ಹತ್ತಾರು ರೀತಿಯ ಸೇವೆ ನೀಡುತ್ತಿದೆ. ನಾಳೆ ಇನ್ನೇನು ರೂಪ ಪಡೆಯುತ್ತದೆಯೋ ಬಲ್ಲವರಾರು ಎಂಬುದು ವಿಜ್ಞಾನ ಮುಂದಿಡುವ  ಸರಳ ರೂಪಕ.  ಹಾಗಾಗಿ ಚರ್ಚೆಗೆ ಇಲ್ಲಿ ಹೆಚ್ಚು ಅವಕಾಶವಿಲ್ಲ  ಎಂಬುದು ಸಾಮಾನ್ಯರ ಗ್ರಹಿಕೆ. 


ಭರಚುಕ್ಕಿ: ಎಚ್ಚರ ತಪ್ಪಿದರೆ ಸಾವು ನಿಕ್ಕಿ

ಫಾಲಲೋಚನ ಆರಾಧ್ಯ ಚಾಮರಾಜನಗರ/   ಎಂ. ಗುರುಸ್ವಾಮಿ ಕೊಳ್ಳೇಗಾಲ
ಭರಚುಕ್ಕಿ ಜಲಪಾತ ಮಳೆಗಾಲದಲ್ಲಿ ಪ್ರವಾಸಿಗರ ಆಕರ್ಷಣೆ ಕೇಂದ್ರವಷ್ಟೇ ಅಲ್ಲ, ಪ್ರವಾಸಿಗರ ಪ್ರಾಣಹಾನಿಯ ತಾಣವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಈಜಲು ಹೋಗಿ ೪ ವರ್ಷಗಳಲ್ಲಿ ಮೃತಪಟ್ಟವರ ಸಂಖ್ಯೆ ಬರೋಬ್ಬರಿ ೪೩ !
ಕಳೆದ ಒಂದೂವರೆ ವರ್ಷದಲ್ಲೇ ೨೦ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಇಲ್ಲಿ ರಕ್ಷಣಾ ಸಿಬ್ಬಂದಿ ಇಲ್ಲ. ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ.

ಶಿಶು ಕಲ್ಯಾಣವೇ ಜೀವನ ವಿಹಾರ

ಗ್ರಾಮಗಳು, ಪ್ರಾಣಿ ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವುದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವುದು ಇತ್ತೀಚಿನ ದಿನಗಳಲ್ಲಿ  ರೂಢಿಯಾಗಿದೆ. ಆದರೆ ದಶಕಗಳ ಹಿಂದೆ ಈ ರೀತಿ ಕಲ್ಪನೆಯೇ ಇಲ್ಲದ ಸಮಯದಲ್ಲಿ  ಗ್ರಾಮಗಳನ್ನು ದತ್ತು ತೆಗೆದು ಕೊಂಡು ಅಲ್ಲಿ ಶಿಶು ವಿಹಾರಗಳನ್ನು ತೆರೆದು ಜ್ಞಾನ ದಾಸೋಹಕ್ಕೆ ಮುಂದಾದವರು ೭೭ರ ಹರೆಯದ ವಾಣಿ ವೆಂಕಟರಾಂ.

ಆಗಿದ್ದು ಆಯಿತು ಮುಂದಿನದು ನೋಡೋಣ...

*ವಿಕ ಸುದ್ದಿಲೋಕ ಮೈಸೂರು
ಇಂತಹ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ!
ಮೈಸೂರಿನಲ್ಲಿ ಜೆಎನ್-ನರ್ಮ್ ಯೋಜನೆ ಅನುಷ್ಠಾನ ಬಗ್ಗೆ ವಿಜಯಕರ್ನಾಟಕ ರಿಯಾಲಿಟಿ ಚೆಕ್ ಅಭಿಯಾನಕ್ಕೆ  ನಾಗರಿಕರು ಬೆನ್ನು ತಟ್ಟಿದರು. ಪತ್ರಿಕೆ ಇಂತಹ ಕೆಲಸ ಕೈಗೆತ್ತಿಕೊಂಡಿದ್ದು  ಸುತ್ಯರ್ಹ ಎಂದು ಸ್ವಯಂಸೇವಾ ಸಂಸ್ಥೆಗಳು ಅಭಿನಂದಿಸಿದವು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎ.ರಾಮದಾಸ್, ಸಂಸದ ಅಡಗೂರು ಎಚ್. ವಿಶ್ವನಾಥ್ ವಿಕ ಕಾರ್ಯವನ್ನು ಬಹಿರಂಗವಾಗಿಯೇ  ಶ್ಲಾಘಿಸಿದರು.
ನರ್ಮ್ ಯೋಜನೆಯ ಅನುಷ್ಠಾನದ  ರಿಯಾಲಿಟಿ ಚೆಕ್‌ನಲ್ಲಿ ಕಂಡುಕೊಂಡಿದ್ದನ್ನು  ಪತ್ರಿಕೆ ವರದಿ ಮಾಡುತ್ತಾ ಹೋಯಿತು. ಹತ್ತು ದಿನಗಳ ಅಭಿಯಾನ ಅಧಿಕಾರಿ ವಲಯದಲ್ಲಿ ಮಿಂಚಿನ ಸಂಚಾರಕ್ಕೂ ಕಾರಣವಾಯಿತು. ವಿಶ್ವನಾಥ್ ವಿಕ ವರದಿಯನ್ನು ಕೇಂದ್ರ ಸರಕಾರದ ಗಮನಕ್ಕೂ ತಂದರು. ರಾಜ್ಯ ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ೧೩ ಯೋಜನೆಗಳಲ್ಲಿ  ೫ ಯೋಜನೆ ಗಳ ಕಾರ್ಯ ವಿಳಂಬವಾಗಿದೆ ಎಂಬುದನ್ನು ಒಪ್ಪಿಕೊಂಡರು.


ಸಾರಿ, ಎಡವಿದ್ದೇವೆ; ಭಾಗ-೨ರಲ್ಲಿ ಏಳುತ್ತೇವೆ

*ವಿಕ ಸುದ್ದಿಲೋಕ ಮೈಸೂರು
ನಿಜ, ಯೋಜನೆ ರೂಪಿಸುವ ಸಂದರ್ಭದಲ್ಲಿಯೇ ಎಡವಿದ್ದೇವೆ. ಭವಿಷ್ಯದ ನಗರ ಕಟ್ಟುವ ಎಂಜಿನಿಯರ್‌ಗಳ ಕೊರತೆ ನಮಗಿತ್ತು. ನಾಲ್ಕು ವರ್ಷಗಳ ಹಿಂದೆ ಕಾಮಗಾರಿ ಕುರಿತು ಸರಿಯಾದ `ವಿಸ್ತೃತ ಯೋಜನಾ ವರದಿ(ಡಿಪಿಆರ್)' ತಯಾರಿಸಿದ್ದರೆ, ಈ ಹೊತ್ತು ಇಷ್ಟೊಂದು ಲೋಪ ದೋಷಗಳು ಆಗುತ್ತಿರಲಿಲ್ಲ !
ಹತ್ತು ದಿನಗಳ ಕಾಲ ವಿಜಯ ಕರ್ನಾಟಕ ನಡೆಸಿದ `ನಮ್ಮ ನರ್ಮ್ - ವಿಕ ರಿಯಾಲಿಟಿ ಚೆಕ್' ಗ್ರಹಿಸಿದ ರಿಯಲ್ ಸಂಗತಿಗಳನ್ನು ನರ್ಮ್‌ನ ನೋಡಲ್ ಏಜೆನ್ಸಿ ಮೈಸೂರು ಮಹಾನಗರ ಪಾಲಿಕೆ ಒಪ್ಪಿಕೊಂಡಿತು. ಆದರೆ, ಇದಕ್ಕೆ ವ್ಯವಸ್ಥೆಯತ್ತ ಬೆರಳು ಮಾಡಿತು.
ವಿಕ ಅಭಿಯಾನದ ಅಂಗವಾಗಿ ಶನಿವಾರ ವಿಕ ಕಚೇರಿ ಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎ. ರಾಮದಾಸ್, ಸಂಸದ ಅಡಗೂರು ಎಚ್. ವಿಶ್ವನಾಥ್, ನರ್ಮ್ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಹರ್ಷಗುಪ್ತ, ಪಾಲಿಕೆ ಆಯುಕ್ತ ಕೆ. ಎಸ್. ರಾಯ್ಕರ್, ಎಸಿಐಸಿಎಂನ ಎಂ. ಲಕ್ಷ್ಮಣ್, ಮೈಸೂರು ಗ್ರಾಹಕರ ಪರಿಷತ್‌ನ ಬಾಪು ಸತ್ಯನಾರಾಯಣ್ ಭಾಗವಹಿಸಿದ್ದರು. ಆಗಿರುವ ದೋಷಗಳನ್ನು ಸಚಿವರು, ಅಧಿಕಾರಿಗಳು ಪ್ರಾಮಾಣಿಕ ವಾಗಿಯೇ ಒಪ್ಪಿಕೊಂಡರು. ಸಂಸದರು, ನಾಗರಿಕ ಪ್ರತಿನಿಧಿಗಳು ಎತ್ತಿದ ಕೆಲವು ಆಕ್ಷೇಪ, ತಕರಾರುಗಳಿಗೂ ತಲೆದೂಗಿದರು.

ಪ್ಲಾಸ್ಟಿಕ್ ಮುಕ್ತ ಝೂಗೆ ದಶಮಾನೋತ್ಸವ !

*ಜೆ.ಶಿವಣ್ಣ ಮೈಸೂರು
ಅದು ವನ್ಯಜೀವಿಗಳ ತಾಣ. ದೇಶದ ಅತ್ಯಂತ ಹಳೆಯ ಮತ್ತು ಅತ್ಯುತ್ತಮ ಮೃಗಾಲಯಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ.
ಅಲ್ಲಿ `ಪ್ಲಾಸ್ಟಿಕ್'ಬಳಕೆಗೆ ಬ್ರೇಕ್ ಬಿದ್ದು ದಶಕವಾಗಿದೆ. `ಪ್ಲಾಸ್ಟಿಕ್ ಮುಕ್ತ' ವಲಯ ಎಂದು  ಘೋಷಣೆಯಾಗಿ ದಶಕ ಉರುಳಿದೆ. ಪರಿಣಾಮ-ಅಲ್ಲೀಗ ಹುಡುಕಿದರೂ ತುಂಡು ಪ್ಲಾಸ್ಟಿಕ್ ಸಿಗುವುದಿಲ್ಲ. ಅದು ಪಾರಂಪರಿಕ ನಗರಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ.
ತೀವ್ರ ಕಣ್ಗಾವಲಿನ ನಡುವೆಯೂ ಪ್ಲಾಸ್ಟಿಕ್ ನುಸುಳಿದರೂ ನೆಲ ಮುಟ್ಟುವ ಮುನ್ನವೇ ಕಸದ ಬುಟ್ಟಿಗೆ ಸೇರಿಸಲು ಸಿಬ್ಬಂದಿ ಸದಾ ಸಿದ್ಧ. ಕೇವಲ ಸಿಬ್ಬಂದಿ ಮಾತ್ರವಲ್ಲ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದಿ ಯಾಗಿ ಎಲ್ಲಾ ಅಧಿಕಾರಿಗಳೂ ಪ್ಲಾಸ್ಟಿಕ್ ಕಣ್ಣಿಗೆ ಬಿದ್ದರೆ ಹೆಕ್ಕಿ ತೆಗೆಯುತ್ತಾರೆ. ೨೦೦೧-೦೨ ರಿಂದ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದು, ಮೃಗಾಲಯವೀಗ ಪ್ಲಾಸ್ಟಿಕ್ ಮುಕ್ತ.

ಛೇ! ಅಂದ್ಕೊಂಡಂಗೆ ಆಗ್ಲಿಲ್ವೆ

ಗುಣಮಟ್ಟ ಕೇಳಬೇಡಿ...
ಮೈಸೂರಿನಲ್ಲಿ ನರ್ಮ್ ಅಡಿ ಹೊರ ವರ್ತುಲ ರಸ್ತೆ ಹಾಗೂ ಅಗೆದ ರಸ್ತೆ ರಿಪೇರಿ ಕಾಮಗಾರಿಗಳು ನಡೆಯುತ್ತಿವೆ. ಇದರಲ್ಲಿ ಹೊರ ವರ್ತುಲ ರಸ್ತೆ ಕಾಮಗಾರಿ ಸ್ಥಿತಿಯಂತೂ ಅಧ್ವಾನ. ಕಾಮಗಾರಿ ಗುಣಮಟ್ಟವಂತೂ ಕೇಳಲೇಬೇಡಿ.
ಭಾರತೀಯ ರಸ್ತೆ ಕಾಂಗ್ರೆಸ್ ನಿಯಮಗಳ ಪ್ರಕಾರ ರಸ್ತೆ ನಿರ್ಮಾಣವಾಗಬೇಕು. ಆರು ಪಥದ ರಸ್ತೆಗೆ ಅಕ್ಕಪಕ್ಕದಲ್ಲಿ ಜಾಗ ಬಿಡಬೇಕು. ಜತೆಗೆ ರಸ್ತೆ ಗಟ್ಟಿತನಕ್ಕೂ ಆದ್ಯತೆ ನೀಡಬೇಕು. ಪಾದಚಾರಿ ರಸ್ತೆ ನಿರ್ಮಿಸಬೇಕು. ಕೆಲವು ಕಡೆ ಕಾಮಗಾರಿ ಮುಗಿದಿರುವುದರಿಂದ ಬೀದಿ ದೀಪ ಬರ ಬೇಕಾಗಿತ್ತು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ.
ಇಡೀ ರಸ್ತೆಯುದ್ದಕ್ಕೂ ಗುಣಮಟ್ಟದ ಕೆಲಸ ನಡೆಯು ತ್ತಿದೆ ಎನ್ನಿಸುತ್ತಿಲ್ಲ.  ವೆಟ್ ಬೀಮ್, ವೆಟ್ ಮಿಕ್ಸ್ ಬಳಕೆ ಮಾಡಬೇಕು. ರಸ್ತೆಗೆ ಬಳಸುವ ಮಣ್ಣು, ಟಾರಿನ ಪರೀಕ್ಷೆ ಯಾಗಬೇಕು. ಅಲ್ಲಲ್ಲಿ ಕಿರು ಪರೀಕ್ಷಾರ್ಥ ಪ್ರಯೋ ಗಾಲಯಗಳನ್ನು ಸ್ಥಾಪಿಸಿಕೊಳ್ಳುವುದು ಸೂಕ್ತ. ಈಗಿನ್ನೂ ಕೆಲಸ ಶುರುವಾಗಿರುವುದರಿಂದ ಪ್ರಯೋಗಾಲಯ ಗಳನ್ನು ಸ್ಥಾಪಿಸಬೇಕು. ಅದೇ ರೀತಿ ರಸ್ತೆಯ ಸೇತುವೆಗಳ ನಿರ್ಮಾಣ ಬಹಳಷ್ಟು ವಿಳಂಬವಾಗಿರುವುದು ಕಂಡು ಬರುತ್ತದೆ. ರಸ್ತೆಯುದ್ದಕ್ಕೂ ಆಳದ ಚರಂಡಿ ನಿರ್ಮಿಸಲಾಗಿದೆ. ಇದು ಯಾಕೆ ಎನ್ನುವುದು ಗೊತ್ತಾಗಲಿಲ್ಲ.

ಅರಣ್ಯ ಸಚಿವರ ಜಿಲ್ಲೆಯಲ್ಲೇ ಸೌದೆ ದಂಧೆ

*ನವೀನ್‌ಕುಮಾರ್ ಪಿರಿಯಾಪಟ್ಟಣ
ತಂಬಾಕು ಬೆಳೆಗಾರರಿಗೆ ಸಿಗದ ಸೌದೆ ಹಣವಂತರಿಗೆ ಲಭ್ಯ. ರೈತರಿಗೆ ಮಾತ್ರ ಹೊರೆ... ಇದು ಅರಣ್ಯ ಸಚಿವರ `ಪ್ರೀತಿಯ' ತಾಲೂಕು ಪಿರಿಯಾಪಟ್ಟಣದಲ್ಲಿ ಸದ್ದಿಲ್ಲದೆ ನಡೆದಿರುವ ವ್ಯವಹಾರ.
ಉರುವಲು (ಸೌದೆ) ಮರಗಳ ಮಾರಾಟದಲ್ಲಿ ಕಮಿಷನ್ ಆಸೆಯಿಂದ ರೈತರನ್ನು ವಂಚಿಸಲಾಗುತ್ತಿದೆ. ಅರಣ್ಯ ಇಲಾಖೆಯಿಂದ ತಾಲೂಕಿನ ನೆಡುತೋಪು ಗಳಲ್ಲಿ ಬೆಳೆಸಲಾದ ನೀಲಗಿರಿ ಮತ್ತು ಹರ್ಕ್ಯುಲೆಸ್ ಮರಗಳ ನಾಟಾಗಳನ್ನು ಇಲಾಖೆ ಅಂಗಸಂಸ್ಥೆಯಾದ  ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ವತಿಯಿಂದ ಕಡಿದು ಮಾರಾಟ ಮಾಡಲಾಗುತ್ತಿದೆ.
ಉರುವಲು ಸೌದೆಗಳನ್ನಾಗಿ ನಾಟಾ ರೂಪದಲ್ಲಿ ಸಾಗಿಸಿ ಡಿಪೋಗಳಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸ ಲಾಗಿದೆ. ತಾಲೂಕಿನಲ್ಲಿ ತಂಬಾಕು ಬೆಳೆ ಹೆಚ್ಚಾಗಿದ್ದು ಪ್ರತಿ ವರ್ಷ ನೆಡುತೋಪುಗಳಿಂದ ಬರುವ ಸೌದೆಗಳನ್ನು  ಡಿಪೋಗಳಲ್ಲಿ ಮಾರಾಟ ಮಾಡಲಾಗು ತ್ತಿತ್ತು. ಇದರಿಂದ ರೈತರು ಹಾಗೂ ಮನೆಗಳಲ್ಲಿ ಸೌದೆ ಬಳಸುವವರಿಗೆ ಅನುಕೂಲವಾಗುತ್ತಿತ್ತು. ಈಗ ಹೊರಗಿನವರಿಗೆ ಮಾರಾಟ ಮಾಡಿ ರೈತರನ್ನು ವಂಚಿಸಲಾಗುತ್ತಿದೆ.

ಸಕಾಲಕ್ಕೆ ಬರಲಿಲ್ಲ ಕೇಂದ್ರದ ಅನುದಾನ

*ಚೀ.ಜ.ರಾಜೀವ ಮೈಸೂರು
ಮುಂಗಾರು ಮಳೆ  ಶುಭಾರಂಭಗೊಂಡು, ಭರ್ಜರಿಯಾಗಿ ಸುರಿಯುವುದು  ಗ್ರಾಮೀಣ ಪ್ರದೇಶದ ಜನರಿಗೆ ಸಂತಸ ತಂದರೆ,  ಮೈಸೂರಿನಂಥ ಮಹಾ ಜನತೆಗೆ ಸಂಕಟ ತರುತ್ತದೆ !
ಹದವಾಗಿ ಎರಡು ಬಾರಿ ಮಳೆ ಬಿದ್ದರೆ ಸಾಕು ಮೈಸೂರಿನ ಹಾದಿ ಬೀದಿಗಳು ಕೆರೆ ಕೊಳ್ಳಗಳಾಗಿ ಪರಿವರ್ತನೆಯಾಗುತ್ತದೆ. ಮೂರು ವರ್ಷಗಳ ಹಿಂದೆ ಸುರಿದ ಸಾಧಾರಣ ಮುಂಗಾರಿಗೆ ಮುಂಬಯಿ, ಬೆಂಗಳೂರಿನಂಥ ಮಹಾನಗರಗಳು  ಕೊಚ್ಚಿಕೊಂಡು ಹೋಗಿದ್ದವು. ಆ ವರ್ಷ ಮೈಸೂರಿನಲ್ಲೂ ಅದೇ ಸ್ಥಿತಿ. ತಗ್ಗಿನ ಪ್ರದೇಶಗಳ ಜನರ ಪಾಡಂತೂ ಹೇಳತೀರದು. `ಯಾಕಾದರೂ ಮಳೆ ಬಿದ್ದಿತೋ,... ಶಿವಾ ಶಿವಾ...' ಎಂದು ಭಜನೆ ಮಾಡುವಂಥ ಸ್ಥಿತಿ ನಿರ್ಮಾಣವಾಗುತ್ತದೆ.
ಯಾಕೆ ಹೀಗೆ ಎಂಬ ಪ್ರಶ್ನೆಯನ್ನು ಬೆನ್ನತ್ತಿದರೆ ದೊರಕುವ ಉತ್ತರ ಒಂದೇ- ನಮ್ಮ ನಗರಗಳ ಮಳೆ ನೀರು ಚರಂಡಿ ವ್ಯವಸ್ಥೆ  ಸಂಪೂರ್ಣ ಹದಗೆಟ್ಟಿದೆ.
ಇದನ್ನು ಮನಗಂಡೇ ಕೇಂದ್ರ ಸರಕಾರ ತನ್ನ  ನರ್ಮ್ ಯೋಜನೆಯಲ್ಲಿ  ಮಳೆ ನೀರಿನ ಚರಂಡಿ ನವೀಕರಣಕ್ಕೆ ಧಾರಾಳವಾಗಿಯೇ ಅನುದಾನ ಒದಗಿಸಿದೆ. ಆದರೆ, ದೊರಕಬಹುದಾದ ಅನುದಾನವನ್ನು ಬಳಸಿಕೊಳ್ಳುವಷ್ಟು  ಶಕ್ತಿ-ಸಾಮರ್ಥ್ಯ, ಜಾಣ್ಮೆ ಕೂಡ ಮೈಸೂರು ಪಾಲಿಕೆಗೆ ಇಲ್ಲ  !