ಬೆಳಗ್ಗೆ ಗ್ರಾಮೀಣ ಸೊಗಡು, ಸಂಜೆ ಸಾಂಸ್ಕೃತಿಕ ಸೊಬಗು

ಜೆ.ಶಿವಣ್ಣ ಮೈಸೂರು
ನಗರದ ಹಲವೆಡೆ ಬೆಳಗ್ಗೆ ಗ್ರಾಮೀಣ ಸೊಗಡಿನ ಸ್ಪರ್ಧೆ ಗಳ ಮೆರಗು, ಸಂಜೆ ಸಾಂಸ್ಕೃತಿಕ ಸಂಭ್ರಮದ ಬೆರಗು.
ಅರಮನೆ ಅಂಗಳದಲ್ಲಿ ಮುಂಜಾನೆ ರಂಗು ರಂಗಿನ ರಂಗವಲ್ಲಿಯ ಚಿತ್ತಾರ. ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು  ಉತ್ತರ ದ್ವಾರದ  ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಅರಮನೆ ಎದುರಿನ ವಿಶಾಲ ಅಂಗಳದಲ್ಲಿ ರಂಗೋಲಿ ಬಿಡಿಸಿ ಬಣ್ಣ ತುಂಬಿದರು. ಇತ್ತ ಗ್ರಾಮ ವಿದ್ಯಾರ್ಥಿನಿಲಯದ ಮೈದಾನದಲ್ಲಿ ಮೈನ ವಿರೇ ಳಿಸುವ ಎತ್ತಿನಗಾಡಿಗಳ ಓಟ ರೋಮಾಂಚನ ಹುಟ್ಟಿಸಿತು. ಯುವ ಸಮೂಹ ಚಾಮುಂಡಿಬೆಟ್ಟ ಏರಿತು.
ಜೆ.ಕೆ.ಮೈದಾನದಲ್ಲಿ ರೈತಾಪಿಯ ಹಾಲು ಕರೆಯುವ ಸ್ಪರ್ಧೆಯಲ್ಲಿ ಹಾಲ್ನೊರೆ ತುಂಬಿ ತುಳುಕಿತು. ಬೂಲೆ ವಾರ್ಡ್ ರಸ್ತೆಯಲ್ಲಿ `ಒಲವೇ ಜೀವನ ಸಾಕ್ಷಾತ್ಕಾರ' ಎಂಬಂತೆ ದಂಪತಿಗಳು `ಜೊತೆ ಜೊತೆಯಲಿ' ಸೈಕಲ್ ಏರಿ ಸವಾರಿ ನಡೆಸಿ ಸಂಭ್ರಮಿಸಿದರು. ನಾವು ಯಾರಿಗೇನು ಕಮ್ಮಿಯಿಲ್ಲ ಎನ್ನುವಂತೆ ವಿಕಲಚೇತನರು ತ್ರಿಚಕ್ರ ವಾಹನದಲ್ಲಿ ರೇಸ್ ನಡೆಸಿ ಅಚ್ಚರಿಹುಟ್ಟಿಸಿದರು.
ಸಂಜೆ ಹೊತ್ತಿಗೆ `ಎಲ್ಲೆಲ್ಲೂ ಸಂಗೀತವೇ...' ಅರ ಮನೆಯ ಜಗಮಗಿಸುವ ದೇದೀಪ್ಯಾಮಾನ ಬೆಳಕಿನಲ್ಲಿ ಕರ್ನಾಟಕ ಪೊಲೀಸ್ ಬ್ಯಾಂಡ್‌ನ  ಸಂಗೀತ ಮಾಧುರ್‍ಯದ ದಿವ್ಯಾನುಭೂತಿ, ಸುಗಮ ಸಂಗೀತದ ಮಧುರಾನುಭೂತಿ, ಪಂಚವೀಣೇಯ ನಾದವೈಭವ. ಮನರಂಜನಾ ದಸರೆ ಯಲ್ಲಿ ಸಂಗೀತ ಗಾರುಡಿಗ ಹಂಸಲೇಖ, ಮಧುರ ಕಂಠದ ಗಾಯಕ ರಾಜೇಶ್ ಕೃಷ್ಣನ್ ಅವರ ಸಂಗೀತ-ಹಾಡಿನ ಮೋಡಿ.. ಇವು ದಸರೆಯ ಆರನೇ ದಿನದ ಹೈಲೈಟ್ಸ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ