ನಡೆದಿದೆ ದೀಪಾಲಂಕಾರ ಕಳೆಗಟ್ಟುತ್ತ್ತಿದೆ ಮೈಸೂರು

ಲೋಕೇಶ್ ನೀರಬಿದಿರೆ ಮೈಸೂರು
ನವರಾತ್ರಿ ಆರಂಭಗೊಳ್ಳುವ ಅ.೮ರಿಂದ ಮೈಸೂರಿನಲ್ಲಿ ‘ರಾತ್ರಿ’ಗೆ ಬಹುಪಾಲು ರಜೆ! ‘ಬೆಳ(ಗಿ)ಕಿ’ಗೆ ಡಬ್ಬಲ್ ಡ್ಯೂಟಿ!
ಇದೇನಪ್ಪಾ ಅಚ್ಚರಿಯಾಯಿತೆ ? ಹೌದು ಅ.೮ರಿಂದ ನಾಡಹಬ್ಬ ದಸರಾ ಆರಂಭ. ನಂತರ ವಿಜಯದಶಮಿ (ಜಂಬೂಸವಾರಿ) ಮೆರವಣಿಗೆ (ಅ.೧೭) ವರೆಗೆ ಅಷ್ಟೂದಿನ ಮೈಸೂರು ವಿದ್ಯುತ್ ದೀಪಗಳಿಂದ ಝಗ ಮಗಿಸಲಿದೆ. ಅರಮನೆ ಸೇರಿದಂತೆ ಪ್ರಮುಖ ರಸ್ತೆಗಳು, ಪಾರಂಪರಿಕ ಕಟ್ಟಡಗಳು ದೀಪಾಲಂಕಾರ ಗೊಂಡು ಅರ್ಧಪಾಲು ರಾತ್ರ್ರಿಯನ್ನು ಮರೆಯಾಗಿಸಲಿವೆ.
೧.೭೦ ಲಕ್ಷ ಬಲ್ಬ್: ಅರಮನೆ ಹೊರತುಪಡಿಸಿ ದೀಪಾಲಂಕಾರಕ್ಕೆ ೧ ಲಕ್ಷ ೭೦ ಸಾವಿರ ಇನ್ ಕ್ಯಾಂಡಿಸೆಂಟ್ ಸೇರಿದಂತೆ ವಿವಿಧ ಬಲ್ಬ್‌ಗಳ ಬಳಕೆ. ಇದಲ್ಲದೆ ೩,೫೦೦ರಷ್ಟು ಮೆಟಲ್ ಅಲೈಡ್ ಲ್ಯಾಂಪ್(ಫೋಕಸ್ ಲೈಟ್) ಗಳನ್ನು ಸಾಲು ಮರಗಳಿಗೆ ಅಳವಡಿಸಲಾಗುವುದು. ವಿವಿಧೆಡೆ ೧೩ ಜನರೇಟರ್ ಬಳಕೆಯಾಗಿದೆ.
ಯಾವ ರಸ್ತೆಗಳಿಗೆ ದೀಪಾಲಂಕಾರ?: ಜಂಬೂ ಸವಾರಿ ಮೆರವಣಿಗೆ ಸಾಗುವ ಸಯ್ಯಾಜಿರಾವ್ ರಸ್ತೆ (ಬನ್ನಿಮಂಟಪವರೆಗೆ), ದೇವರಾಜ ಅರಸು, ಜೆಎಲ್‌ಬಿ, ಚಾಮರಾಜ ಜೋಡಿ, ಧನ್ವಂತರಿ, ನಾರಾಯಣಶಾಸ್ತ್ರಿ, ವಿನೋಬಾ, ನ್ಯೂ ಕಾಂತರಾಜ ಅರಸ್, ಲಲಿತಮಹಲ್, ಇರ‍್ವಿನ್, ಬೋಗಾದಿ, ಬೆಂಗಳೂರು- ಮೈಸೂರು ರಸ್ತೆ ಟೋಲ್‌ಗೇಟ್‌ವರೆಗೆ, ಅರಮನೆ ಸುತ್ತಮುತ್ತಲ ರಸ್ತೆ, ಬನ್ನೂರು ರಸ್ತೆ ಟೆರೇಷಿಯನ್ ಕಾಲೇಜುವರೆಗೆ, ಜಿ.ಪಂ. ಮುಂಭಾಗದ ರಸ್ತೆ ಹೀಗೆ ಸುಮಾರು ೨೦ಕ್ಕೂ ಹೆಚ್ಚು ರಸ್ತೆಗಳು ದೀಪಾಲಂಕಾರಗೊಂಡಿವೆ. ಚಾಮುಂಡಿ ಬೆಟ್ಟದವರೆಗೆ ರಸ್ತೆಯುದ್ದಕ್ಕೂ ಫೋಕಸ್ ಲೈಟ್ ಅಳವಡಿಸಲಾಗುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ