ವೈಭವದ ನೆಪದಿ ದುಂದುವೆಚ್ಚಕ್ಕೆ ಜಿಲ್ಲಾಧಿಕಾರಿ ಬಿಗಿಪಹರೆ

ವಿಕ  ವಿಶೇಷ ಮೈಸೂರು
‘ವೈಭವ ಬೇಕಂತೆ. ಆದರೆ, ಅಧಿಕಾರಿಗಳ ಕೈ ಉದಾರವಾಗುವುದು ಬೇಡವಂತೆ. ಇಷ್ಟೊಂದು ಬಿಗಿ ಇದ್ದರೆ, ಉತ್ಸವ ಯಶಸ್ವಿಯಾಗುವುದು ಹೇಗೆ ?’
-ದಸರಾ ಉಪ ಸಮಿತಿಗೆ ಅಧ್ಯಕ್ಷ- ಉಪಾಧ್ಯಕ್ಷರಾಗಿ ನೇಮಕವಾಗಿರುವ  ಬಹುತೇಕ ಎಲ್ಲ  ರಾಜಕಾರಣಿಗಳು- ಕಾರ್ಯಕರ್ತರ ಪ್ರಶ್ನೆ ಇದು.
‘ಸರಕಾರದ ದುಡ್ಡನ್ನು ಬಳಸಿಕೊಂಡು ಅದ್ದೂರಿತನ ಮಾಡಲು ಇಲ್ಲವೇ  ದುಂದು ವೆಚ್ಚಕ್ಕೆ ಅವಕಾಶವೇ ಇಲ್ಲ. ಪ್ರಾಯೋಜಕತ್ವದ ಮೂಲಕ ಅದ್ದೂರಿಯಾಗಿ ಮಾಡುವುದಾದರೆ ಅಭ್ಯಂತರವಿಲ್ಲ. ಆದರೆ, ಅದಕ್ಕೂ ಪಕ್ಕಾ ರಾಮನ ಲೆಕ್ಕವೇ ಬೇಕು. ಇಲ್ಲದಿದ್ದರೆ, ಕ್ರಮ ನಿಶ್ಚಿತ’ ಎಂಬ ಜಿಲ್ಲಾಧಿಕಾರಿ ಹರ್ಷಗುಪ್ತ ಅವರ ಕಟ್ಟುನಿಟ್ಟಿನ ಆದೇಶದ ಫಲ, ಎಲ್ಲ ಸಮಿತಿಗಳ ಕಾರ್ಯಾಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳ ಕೈ ಬಿಗಿ ಆಗಿದೆ. ಪರಿಣಾಮ ದಸರಾ ಮಹೋತ್ಸವ -೨೦೧೦ರ ಸಿದ್ಧತಾ ಪ್ರಕ್ರಿಯೆಯಲ್ಲಿ  ತೊಡಗಿರುವ  ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರ ಮುನಿಸು ಹೆಚ್ಚಾಗುತ್ತಲೇ ಇದೆ. 
ಕಾಫೀ-ಟೀ ಕುಡಿಯುವಂತಿಲ್ಲ : ದಸರಾ ಮಹೋತ್ಸವ -೨೦೦೯ರ ಖರ್ಚು- ವೆಚ್ಚದಲ್ಲಿ ದುಂದುಗಾರಿಕೆಯೇ ಸದ್ದು ಮಾಡಿತ್ತು. ಕಳೆದ ವರ್ಷ ಕಾಫೀ- ಟೀ ಕುಡಿಯಲು ಸಾವಿರಾರು ರೂ.  ಬಿಲ್ ಮಾಡಿದ ಮಹಾನುಭವರೂ ಇದ್ದರು. ಒಂದು ಸಮಿತಿಯವರು ಒಂದು ಕುರ್ಚಿಗೆ ೩ ರೂ. ಬಾಡಿಗೆ ತೋರಿಸಿದ್ದರೆ, ಇನ್ನೊಂದು ಸಮಿತಿಯವರು ಅದೇ ಕುರ್ಚಿಗೆ ೧೦ ರೂ. ಬಿಲ್ ಮಾಡಿದ್ದರು. ಯುವ ದಸರಾ, ಜನಪದೋತ್ಸವದಂಥ ಕಾರ್ಯಕ್ರಮಗಳ ವೇದಿಕೆ ನಿರ್ಮಾಣ ದಲ್ಲೂ ಲಕ್ಷಾಂತರ ರೂ. ವ್ಯರ್ಥವಾಗಿ ಹರಿದಿತ್ತು. ಈ ಎಲ್ಲ ಸಂಗತಿಗಳ ಶ್ವೇತ ಪತ್ರವನ್ನು ಮುಂದಿಟ್ಟುಕೊಂಡೇ, ಈಗಿನ ವಿಶೇಷಾಧಿಕಾರಿ  ದಸರಾ ಸಿದ್ಧತೆಗೆ ಇಳಿದಿದ್ದಾರೆ. ಪರಿಣಾಮ ಅಗತ್ಯಕ್ಕಿಂತ ಹೆಚ್ಚಾಗಿಯೇ ಕೈ  ಬಿಗಿ ಮಾಡುತ್ತಿದ್ದಾರೆ ಎಂಬುದು ಬಿಜೆಪಿ ಮುಖಂಡರ ವಾದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ