ಭಾನುವಾರ ಯುವಜನರ ಸ್ಪರ್ಧೋತ್ಸಾಹ

ವರುಣ/ಚಾಮುಂಡಿಬೆಟ್ಟ
ಕೆಸರು ಗದ್ದೆಯಲ್ಲಿ ಓಡಿದರು, ಬಿದ್ದರು, ಎದ್ದರು, ಕೊನೆಗೂ ಗುರಿ ಮುಟ್ಟಿದರು. ಇಡೀ ಶರೀರ ಕೆಸರುಮಯ. ಆದರೆ ಗೆದ್ದ ಸಂಭ್ರಮದಲ್ಲಿ ಮೈಗೆ ಮೆತ್ತಿದ ಕೆಸರು ಮರೆತು ಹರ್ಷದಲ್ಲಿ ತೇಲಾಡಿದರು.
ಕೆಸರಿನ ಕೊಳದಲ್ಲಿ ಉದ್ದನೆಯ ಹಗ್ಗದ ಹಿಡಿದು ಶಕ್ತಿ ಪ್ರದರ್ಶನಕ್ಕೆ ನಿಂತರು. ಹಗ್ಗದ ಎರಡೂ ತುದಿಯಲ್ಲಿ ನಿಂತ ಹತ್ತಾರು ಮಂದಿ ಬಲವನ್ನೆಲ್ಲಾ ಸೇರಿಸಿ ಜಗ್ಗಿದರು. ಅದೇನು ತುಂಡಾಗಲಿಲ್ಲ, ಬದಲಿಗೆ ಒಂದೆಡೆಯವರು ನಿಂತರೆ, ಮತ್ತೊಂದೆಡೆಯವರು ಬಿದ್ದರು. ಮೈಯಿಗೆ ಕೆಸರಿನ ಸ್ನಾನ. ಆದರೂ ಉತ್ಸಾಹ ಹಿಂಗಲಿಲ್ಲ. ಸ್ಪರ್ಧೆ ವೀಕ್ಷಿಸಲು ನೆರೆದಿದ್ದ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಸ್ಪರ್ಧಿಗಳನ್ನು ಹುರಿದುಂಬಿಸಿದರು.
ಇವು ವರುಣ ಗ್ರಾಮದ ಮಾಜಿ ಚೇರ್‍ಮನ್ ಸಿ.ನಂಜಪ್ಪ ಅವರ ಗದ್ದೆಯಲ್ಲಿ ಭಾನುವಾರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಯುವಕ, ಯುವತಿಯರಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕೆಸರು ಗದ್ದೆ ಓಟ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕಂಡು ಬಂದ ಪೈಪೋಟಿಯ ಕ್ಷಣಗಳು. ಪುರುಷ, ಮಹಿಳಾ ಮತ್ತು ಬಾಲಕಿಯರ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಚಾಮುಂಡಿಬೆಟ್ಟದಲ್ಲಿ ಬೆಟ್ಟ ಏರುವ ಸ್ಪರ್ಧೆಯೂ ನಡೆಯಿತು.

ವಿಕ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ

ಫಾಲಲೋಚನ ಆರಾಧ್ಯ ಚಾಮರಾಜನಗರ
ಯಾವುದೇ ಒಂದು ಊರಿನ ಅಭಿವೃದ್ಧಿಯಲ್ಲಿ ರಸ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾರಾದರೂ ಒಂದು ಊರಿಗೆ ಹೋಗ ಬೇಕಾದರೆ ಮೊದಲು ವಿಚಾರಿಸೋದು ರಸ್ತೆ ಚೆನ್ನಾಗಿದಿಯೇ ಎಂದು ?
ಹಾದಿ ಚೆನ್ನಾಗಿಲ್ಲ ಎಂದರೆ ಆ ಊರಿನ ಅಥವಾ ಪಟ್ಟಣವೂ ಚೆಂದ ಕಾಣುವುದಿಲ್ಲ. ಅಲ್ಲಿ ಸಂಚರಿಸುವವರಿಗೆ ನಿತ್ಯ ಕಿರಿಕಿರಿ. ಈ ನಿಟ್ಟಿನಲ್ಲಿ ವಿಜಯ ಕರ್ನಾಟಕ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಮುಖ್ಯ ಹೋಬಳಿ ಕೇಂದ್ರಗಳ ವ್ಯಾಪ್ತಿ ಹಾಗೂ ಅವುಗಳ ಸಂಪರ್ಕ ರಸ್ತೆಗಳ ಸ್ಥಿತಿಗತಿಯನ್ನು ಒಂದು ವಾರ ತೆರೆದಿಟ್ಟಿತ್ತು.  ಜಿಲ್ಲೆಯ ಯಾವ ಕಡೆ ಹೋದರೂ ಉತ್ತಮ ರಸ್ತೆಗಳು ಎಂಬದು ವಿರಳ. ಹದಗೆಟ್ಟ, ರಾಡಿ ಹಿಡಿದ ರಸ್ತೆಗಳ ಸಂಖ್ಯೆಯೇ ಹೆಚ್ಚು.

ಲೇಡಿಸ್ ಕಂಪಾರ್ಟ್‌ಮೆಂಟ್ !

ಚೀ.ಜ.ರಾಜೀವ ಮೈಸೂರು
ಲೇಡಿಸ್ ಕಂಪಾರ್ಟ್‌ಮೆಂಟ್ !
ಹೆಸರೇ ಹೇಳುವಂತೆ ಅದೊಂದು ಮಹಿಳೆಯರ ಪ್ರತ್ಯೇಕ ಲೋಕ. ಎಲ್ಲ ರೈಲು ಗಾಡಿಗಳ ಅಂತ್ಯದ ಬೋಗಿಯಾಗಿ,ಸದ್ದಿಲ್ಲದೆ ಹಳಿಗಳ ಮೇಲೆ ಚಲಿಸುವ ಕಂಪಾರ್ಟ್‌ಮೆಂಟ್‌ನಲ್ಲಿ ಚರ್ಚೆಯಾಗದ ಸಂಗತಿ ಏನುಂಟು- ಏನಿಲ್ಲ. 
ಉದ್ಯೋಗಸ್ಥ ಮಹಿಳೆಯರೇ ಸೇರಿದರೆಂದರೆ ಮುಗಿದೇ ಹೋಯಿತು. ಅಡುಗೆ ಮನೆಯ ರಾಜಕೀಯದಿಂದ ಅಂತಾರಾಷ್ಟ್ರೀಯ ಮಟ್ಟದವರೆಗಿನ ರಾಜಕೀಯ, ಮಾಸಾಂತ್ಯದ ಸೊಂಟ ನೋವಿನಿಂದ ಹಿಡಿದು ವಾರಾಂತ್ಯದ ರಜೆ ಸುಖದವರೆಗೆ- ಮಹಿಳೆ ಯರ  ನಾಲಗೆಯ ಹಿಡಿತಕ್ಕೆ  ಸಿಕ್ಕಿ ಬೀಳದ ಸಂಗತಿಗಳೇ ಇಲ್ಲ ಎನ್ನಬಹುದೇನೋ. ಅದೊಂದು ರೀತಿ ಅನಧಿಕೃತ ಪ್ರತ್ಯೇಕ ಮಹಿಳಾ ಸಂಸತ್ !

`ಡೈಬ್ಯಾಕ್' ದಾಳಿಗೆ ಬೇವು ಬರಡು

 ಚೀ. ಜ. ರಾಜೀವ  ಮೈಸೂರು
`ಸಂದೇಹವೇ ಬೇಡ, ಬೀದರ್ ಜಿಲ್ಲೆ ಔರಾದ್ ತಾಲೂಕಿನ  ಮದನೂರು ಗ್ರಾಮದ ಬೇವಿನ ಮರಗಳಿಗೆ `ಡೈಬ್ಯಾಕ್' ಎಂಬ ರೋಗ ದಾಳಿ ಇಟ್ಟಿದೆ. ಹಾಗಾಗಿ, ಆ ಮರಗಳು ಈಗ ಬೋಳು-ಬೋಳಾಗಿವೆ. ಗಂಗೋತ್ರಿಯ ಸುಮಾರು ಮೂರು ಸಾವಿರ ಮರಗಳಿಗೆ ಬಹಳ ಹಿಂದೆಯೇ ಈ ರೋಗ ಕಾಣಿಸಿತ್ತು. ಅಂದಿನಿಂದ ಇಂದಿನವರೆಗೂ ರೋಗ ಬೇವಿಗೆ ದಾಳಿ ಇಡುತ್ತಲೇ ಇದೆ !'
-ಹೀಗೆನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ಸಸ್ಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಶಂಕರ ಭಟ್. ೧೫ ವರ್ಷಗಳ ಹಿಂದೆಯೇ ಬೇವಿನ ಮರಗಳ ರೋಗಗ್ರಸ್ತ ಸ್ಥಿತಿಯನ್ನು ಕಂಡು, ಅದರ ಮೇಲೆ ಅಧ್ಯಯನ ನಡೆಸಿದ ಶಂಕರ್ ಭಟ್, `ಡೈಬ್ಯಾಕ್' ಬಗ್ಗೆ  ಅಧಿಕೃತವಾಗಿ ಮಾತನಾಡುತ್ತಾರೆ.

ಹೆದ್ದಾರಿ ಓಕೆ, ಉಳಿದ ರಸ್ತೆ ಹೀಗೇಕೆ !

ರಾಘವಾಪುರ  ದೇವಯ್ಯ ಬೇಗೂರು
ಗುಂಡ್ಲುಪೇಟೆ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಬೇಗೂರು ಗ್ರಾಮದ ಮಧ್ಯೆ ರಾಷ್ಟ್ರೀಯ ಹೆದ್ದಾರಿ ೨೧೨ ಹಾದು ಹೋಗಿದೆ. ಇದೊಂದು ರಸ್ತೆಯನ್ನು ಹೊರತು ಪಡಿಸಿ ಉಳಿದ ರಸ್ತೆಗಳ ಸ್ಥಿತಿ ಚಿಂತಾಜನಕ. ಈ ರಸ್ತೆಗಳ ದುರಸ್ತಿಗೆ ಸಣ್ಣ, ಪುಟ್ಟ ಆಪರೇಷನ್ ಸಾಲದು. ಮೇಜರ್ ಸರ್ಜರಿಯೇ ನಡಿಯಬೇಕು.  ಆ ಮಟ್ಟಕ್ಕೆ ಹದಗೆಟ್ಟಿವೆ ಇಲ್ಲಿನ ರಸ್ತೆಗಳು.
ಬೇಗೂರು ದೊಡ್ಡೂರು. ಹೋಬಳಿಯೊಂದಿಗೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವೂ ಹೌದು. ಆದರೆ  ಈ ಊರಿನ ರಸ್ತೆಗಳೆಲ್ಲಾ ಸಣ್ಣವು. ಇಂಥ ಸಣ್ಣ ರಸ್ತೆಗಳನ್ನು ಸರಿಯಾಗಿ ಇಟ್ಟುಕೊಳ್ಳುವಲ್ಲಿ ಗ್ರಾ.ಪಂ. ಆಡಳಿತ ನಿರ್ಲಕ್ಷ್ಯ ವಹಿಸಿದೆ. ಅಭಿವೃದ್ಧಿಯ `ಪ್ರಸಾದ'ವೂ ರಸ್ತೆಗಳಿಗೆ ಸಿಗದೇ ಇರುವುದು ದುರದೃಷ್ಟಕರ.  ಯಾವ ಜನಪ್ರತಿನಿಧಿಗಳು ಸಹ ಬೇಗೂರಿನ ರಸ್ತೆಗಳ ಬಗ್ಗೆ ಕಾಳಜಿ ವಹಿಸಿಲ್ಲ.

ಕಾಮನ ಬಿಲ್ಲಿನಂಥ ಕಲಾಕೃತಿಗಳು !

ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ  `ನವ ವರ್ಣಗಳು- ೯ ವಿ' ಆರಂಭವಾಗಿದೆ.
ಯುವ ಕಲಾವಿದರಾದ ಎಸ್. ಸಂದೀಪ್, ಕೆ. ನರೇಂದ್ರ, ಸಿ. ಕಿರಣ್, ಸಿ. ಸಂತೋಷ್, ಬಿ. ಎಚ್. ವಿಜಯಕುಮಾರ್, ಎಸ್. ಯೋಗೇಶ್, ಐ.ಟಿ. ಮೊಹಮ್ಮದ್ ಉನ್ಸಿ, ಸೂರಜ್ ಸ್ಟೀಫನ್ ಡಿಸೋಜಾ ಮತ್ತು ಜಿ. ಕಾರ್ತೀಕ ಅವರು ಒಂಬತ್ತು ಬಣ್ಣಗಳನ್ನು ಬಳಸಿಕೊಂಡು ಬಗೆ-ಬಗೆಯ ಚಿತ್ರಗಳನ್ನು  ಪ್ರದರ್ಶನಕ್ಕೆ ಇಟ್ಟಿದ್ದಾರೆ. 
ಪ್ರದರ್ಶನ ಉದ್ಘಾಟಿಸಿದ ಸಾಹಿತಿ ಡಾ. ಕಾಳೇಗೌಡ ನಾಗವಾರ- `ಕಲಾವಿದನ ಮನಸ್ಸು  ಮುಗ್ಧವಾಗಿದ್ದಾಗ, ಸಹಜವಾಗಿದ್ದಾಗ ಮಾತ್ರ ಶ್ರೇಷ್ಠ ಕಲಾಕೃತಿಗಳು ಸೃಷ್ಟಿಯಾಗಲು ಸಾಧ್ಯ' ಎಂದರು. ಈ ಚಿತ್ರಗಳಲ್ಲೂ  ಸಹಜತೆ -ಮುಗ್ಧತೆಯನ್ನು ಹುಡುಕಬಹುದು. ಮಾ. ೮ ರವರೆಗೆ ವೀಕ್ಷಣೆಗೆ ಮುಕ್ತ ಅವಕಾಶ.