ಚಾ.ನಗರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚಾ.ನಗರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಇಚ್ಛಾಶಕ್ತಿ `ಇಷ್ಟ'ವಾದರೆ, ಸಮಸ್ಯೆ ಪರಿಹಾರ ಕಷ್ಟವಲ್ಲ

* ಫಾಲಲೋಚನ ಆರಾಧ್ಯ ಚಾಮರಾಜನಗರ
ಜಿಲ್ಲೆಯಲ್ಲಿ  ಸಮಸ್ಯೆಗಳಿಂದ ಮುಕ್ತವಾಗಿರುವ, ಸುಂದರ ಪರಿಸರವುಳ್ಳ ಶಾಲೆಗಳು ಬೆರಳೆಣಿಕೆಯಷ್ಟು ಮಾತ್ರ. ಉಳಿದ ಶಾಲೆಗಳು ಒಂದಿಲ್ಲೊಂದು ಸಮಸ್ಯೆಗಳಿಂದ ನಲುಗುತ್ತಿವೆ.
ಕೊಠಡಿಗಳ ಕೊರತೆ, ಇಕ್ಕಟ್ಟಿನಲ್ಲಿ ಪಾಠ, ಇದ್ದೂ ಇಲ್ಲದಂತಿರುವ ಶೌಚಾಲಯ, ಕುಡಿಯುವ ನೀರಿಗೆ ವಿದ್ಯಾರ್ಥಿಗಳ ಪರಿತಾಪ, ಆಟದ ಮೈದಾನ ಇಲ್ಲದಿರು ವುದು, ಎರಡು- ಮೂರು ವರ್ಷಗಳ ಕಳೆದರೂ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿರು ವುದು, ಅಪೂರ್ಣಗೊಂಡಿರುವುದು, ಶಾಲಾ ಸಮಿತಿ ಹಾಗೂ ಶಿಕ್ಷಕರ ನಡುವಿನ ರಾಜಕೀಯ ಎಲ್ಲ ಕಡೆ ಇದ್ದದೆ.
ಇಂಥ ಅವ್ಯವಸ್ಥಿತ ಸರಕಾರಿ ಶಾಲೆಗಳ ಸ್ಥಿತಿಯನ್ನು ವಿಜಯ ಕರ್ನಾಟಕ ಪತ್ರಿಕೆ ಬಿಡಿಸಿಡುವ ಪ್ರಯತ್ನವನ್ನು ಮಾಡಿದೆ. ಕಳೆದ ಒಂದು ವಾರದಿಂದ `ವಿಕ ಅಭಿಯಾನ' ದಡಿ ಶಾಲೆಗಳಲ್ಲಿನ ಸಮಸ್ಯೆಗಳನ್ನು  ತೋರಿಸಲಾಗಿದೆ. ಎಲ್ಲೆಲ್ಲಿ ಕೊಠಡಿಗಳ ಕೊರತೆ ಇದೆ. ಶಾಲೆಗಳು ಎಂಥ ವಾತಾವರಣದಲ್ಲಿವೆ ಎಂಬುದನ್ನು  ಚಿತ್ರ ಸಮೇತ ಪ್ರಕಟಿಸಲಾಗಿದೆ.

ವಿಕ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ

ಫಾಲಲೋಚನ ಆರಾಧ್ಯ ಚಾಮರಾಜನಗರ
ಯಾವುದೇ ಒಂದು ಊರಿನ ಅಭಿವೃದ್ಧಿಯಲ್ಲಿ ರಸ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾರಾದರೂ ಒಂದು ಊರಿಗೆ ಹೋಗ ಬೇಕಾದರೆ ಮೊದಲು ವಿಚಾರಿಸೋದು ರಸ್ತೆ ಚೆನ್ನಾಗಿದಿಯೇ ಎಂದು ?
ಹಾದಿ ಚೆನ್ನಾಗಿಲ್ಲ ಎಂದರೆ ಆ ಊರಿನ ಅಥವಾ ಪಟ್ಟಣವೂ ಚೆಂದ ಕಾಣುವುದಿಲ್ಲ. ಅಲ್ಲಿ ಸಂಚರಿಸುವವರಿಗೆ ನಿತ್ಯ ಕಿರಿಕಿರಿ. ಈ ನಿಟ್ಟಿನಲ್ಲಿ ವಿಜಯ ಕರ್ನಾಟಕ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಮುಖ್ಯ ಹೋಬಳಿ ಕೇಂದ್ರಗಳ ವ್ಯಾಪ್ತಿ ಹಾಗೂ ಅವುಗಳ ಸಂಪರ್ಕ ರಸ್ತೆಗಳ ಸ್ಥಿತಿಗತಿಯನ್ನು ಒಂದು ವಾರ ತೆರೆದಿಟ್ಟಿತ್ತು.  ಜಿಲ್ಲೆಯ ಯಾವ ಕಡೆ ಹೋದರೂ ಉತ್ತಮ ರಸ್ತೆಗಳು ಎಂಬದು ವಿರಳ. ಹದಗೆಟ್ಟ, ರಾಡಿ ಹಿಡಿದ ರಸ್ತೆಗಳ ಸಂಖ್ಯೆಯೇ ಹೆಚ್ಚು.

ಪ್ರಸಾದದಂತೆ ಗುತ್ತಿಗೆ ಹಂಚಿಕೆ, ಕಳಪೆಯಾದ ಗುಣಮಟ್ಟ

ಮಡಹಳ್ಳಿ ಮಹೇಶ್ ಗುಂಡ್ಲುಪೇಟೆ
ಒಳಚರಂಡಿ ನಿರ್ಮಾಣ ಕಾಮಗಾರಿ ಪರಿಣಾಮ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಹಾಳಾಗಿವೆ. ಗುಂಡ್ಲುಪೇಟೆಯ ಮುಖ್ಯ ರಸ್ತೆಗಳನ್ನು ಹೊರತು ಪಡಿಸಿ ಉಳಿದವುಗಳಲ್ಲಿ ಗುಂಡಿ ನಡುವೆ ರಸ್ತೆ ಹುಡುಕುವ ಸ್ಥಿತಿ. ರಸ್ತೆಗಳ ವಿಚಾರದಲ್ಲಿ  ಪುರಸಭೆ ನಿದ್ರೆಗೆ ಜಾರಿದೆ. ಹೀಗಾಗಿ ಹದಗೆಟ್ಟ ರಸ್ತೆಗಳದ್ದೇ ಕಾರುಬಾರು.
ಈಚೆಗೆ ನಿರ್ಮಿಸಿದ್ದ ಡಾಂಬರು ಹಾಗೂ ಮೆಟ್ಲಿಂಗ್ ರಸ್ತೆಗಳನ್ನು ಒಳ ಚರಂಡಿ ನಿರ್ಮಾಣಕ್ಕಾಗಿ ಅಗೆಯಲಾಗಿದೆ. ಮ್ಯಾನ್ ಹೋಲ್‌ಗಳು ರಸ್ತೆಗಿಂತ ಎತ್ತರವಾಗಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿವೆ.  ಇದರಿಂದ ವಾಹನ ಸಂಚಾರ ಪಟ್ಟಣದಲ್ಲಿ ತ್ರಾಸದಾಯಕ. ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾದ ಹಣ ಜಲ್ಲಿ ಕಲ್ಲಿನಡಿ ಹೂತು ಹೋಗಿದೆ. 
ರಸ್ತೆ ಕಾಮಗಾರಿಗಳ ಗುತ್ತಿಗೆಯನ್ನು `ಪ್ರಸಾದ' ಹಂಚಿದಂತೆ ಹಂಚಿದ ಪರಿಣಾಮ ಗುಣಮಟ್ಟವೂ ಅವಿತುಕೊಂಡಿದೆ. ಮಳೆ ಬಿದ್ದ ವೇಳೆಯಲ್ಲಂತೂ ಕಾಮಗಾರಿ ಬಂಡವಾಳ ಎಲ್ಲರಿಗೂ ರಾಚುತ್ತದೆ.

ಕಳಪೆ ಕಾಮಗಾರಿ ಅವಾಂತರ, ಮಳೆ ಬಂದರೆ ಬಣ್ಣಗೇಡು

ಕೋಟಂಬಳ್ಳಿ ಗುರುಸ್ವಾಮಿ ಕೊಳ್ಳೇಗಾಲ 
ಪಟ್ಟಣದಲ್ಲಿ  ರಸ್ತೆ ಕಳೆದಿದೆ! ಹುಡುಕಿಕೊಡಿ ಎನ್ನುವುದು ಜನತೆ ಒಕ್ಕೊರಲು. ರಸ್ತೆಯನ್ನು ಕಾಲುದಾರಿ ನುಂಗಿದೆಯೋ, ಕಾಲು ದಾರಿಯಲ್ಲಿ ರಸ್ತೆ ಕಳೆದು ಹೋಗಿದೆಯೋ, ತಿಳಿಯುತ್ತಿಲ್ಲ್ಲ. ಕಾಲುದಾರಿಯನ್ನೇ ರಸ್ತೆ ಎನ್ನಬೇಕು ಅಷ್ಟರ ಮಟ್ಟಿಗೆ ಸ್ಥಿತಿ ಹೀನಾಯ. ಹಗಲಿನಲ್ಲಿ ದೀಪ ಹಿಡಿದು ಹುಡುಕಿದರೂ ಸುಸ್ಥಿತಿ ರಸ್ತೆ ಒಂದೂ ಕಂಡುಬರದು. ಕಾಲು ದಾರಿಯಂತಿರುವ ಮಾರ್ಗವನ್ನು ರಸ್ತೆ ಎನ್ನಬೇಕು.
ಇದಕ್ಕೆ ಅಪೂರ್ಣ ಕಾಮಗಾರಿಯ ಕೃಪೆ ಒಂದೆಡೆ ಇದ್ದರೆ, ಕೆಲ ರಸ್ತೆಗಳ ಕಾಮಗಾರಿ ನಡೆದಿರುವುದು ನೀಜ. ಆದರೆ, ಡಾಂಬರೀಕರಣವಾಗಿದೆ ಎನ್ನುವುದಕ್ಕೆ ಪುರಾವೆಯೇ ಸಿಗದಂತಿದೆ ಇನ್ನೊಂದೆಡೆ. ಅಲ್ಲದೇ, ಮಳೆ ಬಂದರೆ ಕಾಮಗಾರಿ ಬಣ್ಣ ಪೂರ್ಣ ಪ್ರಮಾಣದಲ್ಲಿ ಬಯಲು. ಡಾಂಬರೀಕರಣ ಮಾಡುವಾಗ ಒಂದು ರಸ್ತೆಯನ್ನು ಎರಡು ಭಾಗ ಮಾಡಿ  ಕೆಲಸ ಮಾಡಲಾಗುತ್ತದೆ. ಒಂದು ಭಾಗ ಪೂರ್ಣವಾಗಿ ಇನ್ನೊಂದರ ಕೆಲಸ ಕೈಗೆತ್ತಿಕೊಳ್ಳುವಷ್ಟರಲ್ಲಿ  ಮೊದಲ ಭಾಗ ಯಥಾಸ್ಥಿತಿಗೆ ಬರುತ್ತದೆ.

ನಲ್ಲಿಗಳಲ್ಲಿ ಕಾವೇರಿ ಧುಮ್ಮಿಕ್ಕಲಿಲ್ಲ, ಬವಣೆ ಕೇಳೋರಿಲ್ಲ

 ವಿಕ ಸುದ್ದಿಲೋಕ ಚಾಮರಾಜನಗರ
ತಿ. ನರಸೀಪುರದಿಂದ ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡುವ ಪೈಪ್‌ಲೈನ್  ಅಲ್ಲಲ್ಲಿ  ಹಲವು ಬಾರಿ ಒಡೆಯುತ್ತಲೇ ಇದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಕಾರಣ ನಗರದ ಜನತೆ ಪರದಾಡುವಂತಾಗಿದೆ.
ಮಾರ್ಗ ಮಧ್ಯದಲ್ಲೇ ಪೈಪ್ ಒಡೆಯುವ ಕಾರಣ, ಅದರ ದುರಸ್ತಿಗೆ ನಗರಸಭೆ ಮುಂದಾದಾಗಲೆಲ್ಲಾ ೨ ದಿನಗಳ ಕಾಲ ನಗರಕ್ಕೆ ನೀರು ಪೂರೈಕೆ ಸ್ಥಗಿತ. ಪರಿಣಾಮ ನಗರದ ೩೧ ವಾರ್ಡ್‌ಗಳಲ್ಲೂ  ಕುಡಿಯುವ ನೀರಿಗೆ ಪರದಾಟ. ವಾರದ ಹಿಂದಷ್ಟೆ  ೧ ದಿನ ಇದೇ ಕಾರಣಕ್ಕೆ ನೀರು ಪೂರೈಕೆ ಆಗಿರಲಿಲ್ಲ. ಇದೀಗ ಮತ್ತೆ ಬುಧವಾರ ಮತ್ತು ಗುರುವಾರ ನೀರು ಪೂರೈಕೆ ಇರುವುದಿಲ್ಲ ಎಂದು ನಗರಸಭೆ ತಿಳಿಸಿದೆ.
ಅದರಂತೆ ಬುಧವಾರ ನಗರದ ನಲ್ಲಿಗಳಲ್ಲಿ ಕಾವೇರಿ ಧುಮಕಲಿಲ್ಲ. ಹೀಗಾಗಿ ಯಾವ ಬಡಾವಣೆಗೆ ಕಾಲಿಟ್ಟರೂ ನೀರು ಹೊರುವ ದೃಶ್ಯ ಸಾಮಾನ್ಯವಾಗಿತ್ತು. ಹೇಳಿ ಕೇಳಿ ನಗರದಲ್ಲಿ ಭೂಮಿ ಮಟ್ಟಕ್ಕೆ ನಲ್ಲಿ ನೀರು ಏರುವುದಿಲ್ಲ.  ಆಳವಾದ ಗುಂಡಿಗಳಲ್ಲಿ ನಲ್ಲಿ ಗಳನ್ನು ಅಳವಡಿಸಿ ನೀರು ಹಿಡಿದುಕೊಳ್ಳಬೇಕಾದ ಸ್ಥಿತಿ ಜಿಲ್ಲಾ ಕೇಂದ್ರದ ಜನತೆಯದ್ದು. ಈ  ಅವ್ಯವಸ್ಥೆ ದಶಕಗಳಿಂದಲೂ ಮುಂದುವರಿದೆ.

ಶ್ರೀರಂಗಪಟ್ಟಣ: ವಿಜೃಂಭಣೆಯ ಲಕ್ಷ ದೀಪೋತ್ಸವ

ವಿಕ ಸುದ್ದಿಲೋಕ ಶ್ರೀರಂಗಪಟ್ಟಣ
ಆದಿರಂಗ ಎಂದೇ ಹೆಸರಾದ ಶ್ರೀರಂಗಪಟ್ಟಣದ ಶ್ರೀ ಶ್ರೀರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ಶನಿವಾರ ಸಂಧ್ಯಾಕಾಲದಲ್ಲಿ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.
 ಶನಿವಾರ ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆ ೧೬ ಸಾಲುಗಳಲ್ಲಿ ದೀಪಗಳನ್ನು ಬೆಳಗಲಾಯಿತು. ದೇವಾಲಯ ಎದುರಿನ ರಾಜ ಮಾರ್ಗದಲ್ಲಿ ಗಂಡ ಭೇರುಂಡ ವೃತ್ತದವರಗೆ ದಬ್ಬೆ ಪಟ್ಟಿಗಳನ್ನು ಕಟ್ಟಿ ದೀಪಗಳನ್ನು ಇಡಲಾಗಿತ್ತು. ಲಕ್ಷ ದೀಪೋತ್ಸವ ಸಮಿತಿಯು ಸಾರ್ವ ಜನಿಕರು ಮತ್ತು ಭಕ್ತರ ನೆರವಿನಿಂದ ಎಣ್ಣೆ, ದೀಪಗಳನ್ನು ಸಂಗ್ರಹಿಸಿ ಜೋಡಿಸಿತ್ತು. ಬೇಬಿ ಗ್ರಾಮದ ಶ್ರೀ ದುರ್ದಂಡೇಶ್ವರ ಮಠದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅವರು ದೀಪೋತ್ಸವಕ್ಕೆ ಚಾಲನೆ ನೀಡಿದರು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ೨೫ ಸಾವಿರಕ್ಕೂ ಹೆಚ್ಚು ಭಕ್ತರು ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.