ಮಾರುಕಟ್ಟೆಗಳಿಗೆ ಮರು ಜೀವ

ವಿಕ ವಿಶೇಷ ಮೈಸೂರು
ನಗರದ ಮೂರು ಮಾರುಕಟ್ಟೆಗಳನ್ನು ಖಾಸಗಿ ಸಂಸ್ಥೆಗಳ ನೆರವಿ ನೊಂದಿಗೆ ಪಿಪಿಪಿ(ಪಬ್ಲಿಕ್-ಪ್ರೈವೇಟ್ ಪಾಟ್ನರ್‌ಶಿಪ್) ಮಾದರಿ ಯಲ್ಲಿ ಹೊಸದಾಗಿ ನಿರ್ಮಿಸಲು ಪಾಲಿಕೆ ಚಿಂತನೆ ನಡೆಸಿದೆ.
ಹೃದಯ ಭಾಗದ ದೇವರಾಜ ಮಾರುಕಟ್ಟೆ , ಅಗ್ರಹಾರ ವೃತ್ತದ ವಾಣಿ ವಿಲಾಸ ಮಾರುಕಟ್ಟೆ ಹಾಗೂ ಮಂಡಿ ಮೊಹಲ್ಲಾದ ಮಂಡಿ ಮಾರುಕಟ್ಟೆಯನ್ನು ಅವುಗಳ ಪಾರಂಪರಿಕತೆಗೆ ತಕ್ಕಂತೆ, ಹೊಸದಾಗಿ ನಿರ್ಮಿಸುವ ಆಲೋಚನೆಗೆ ಮತ್ತೆ ಜೀವ ಬಂದಿದೆ.
ಜವಾಹರ್‌ಲಾಲ್ ನೆಹರು ರಾಷ್ಟ್ರೀಯ ನಗರ ಪುನರುಜ್ಜೀವನ ಯೋಜನೆ(ಜೆಎನ್-ನರ್ಮ್)ಯಡಿ ದೇವರಾಜ ಮಾರುಕಟ್ಟೆ ಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿತ್ತು. ಆದರೆ, ಈಗ ಏಕಾಏಕಿ ನರ್ಮ್ ಯೋಜನೆಯನ್ನು ಮರೆತು, ಪಿಪಿಪಿ ಮಾದರಿಯ ಮಾತುಗಳನ್ನು ಆಡುತ್ತಿರುವುದು ವಿಶೇಷ.

ಎಚ್‌ಐವಿ ಪ್ರಮಾಣ ಇಳಿಮುಖ

ವಿಕ ಸುದ್ದಿಲೋಕ ಮೈಸೂರು
ಇದೊಂದು ಸಮಾಧಾನಕರ ಸುದ್ದಿ. ಎಚ್‌ಐವಿಯೊಂದಿಗೆ ಜೀವಿಸುವವರ ಸಂಖ್ಯೆ ಮೈಸೂರು ಜಿಲ್ಲೆಯಲ್ಲಿ  ಇಳಿಮುಖವಾಗುತ್ತಿದೆ.
೨೦೦೮ರಲ್ಲಿ  ಜಿಲ್ಲೆಯಲ್ಲಿದ್ದ  ಎಚ್‌ಐವಿ ಬಳಗದವರ ಸಂಖ್ಯೆ ಶೇ. ೧೧ರಷ್ಟಿತ್ತು. ಈ  ಅಂಕಿ-ಸಂಖ್ಯೆಗೆ ಹೋಲಿಸಿದರೆ, ೨೦೧೦ರ ಅಂತ್ಯದ ವೇಳೆಗೆ ಅವರ ಸಂಖ್ಯೆ ಶೇ ೫.೧೮ಕ್ಕೆ ಇಳಿದಿದೆ.  ೨೦೦೯ರಲ್ಲಿ  ಇವರ ಪ್ರಮಾಣ ಶೇ. ೮.೦೨ರಷ್ಟಿತ್ತು. ಸೋಂಕಿತ ಗರ್ಭಿಣಿಯರ ಸಂದರ್ಭದಲ್ಲಂತೂ- ಇಳಿಕೆ ಗಣನೀಯವಾಗಿದೆ. ೨೦೦೮ರಲ್ಲಿ  ಶೇ. ೦.೮೮, ೨೦೦೯ರಲ್ಲಿ ಶೇ. ೦.೩೨ರಷ್ಟಿದ್ದ ಪ್ರಮಾಣ ೨೦೧೦ರ ವೇಳೆಗೆ ಶೇ.೦.೨೭ಗೆ ಇಳಿದಿದೆ.
ಎಚ್‌ಐವಿ ಪಾಸಿಟಿವ್ ಹಾಗೂ ಏಡ್ಸ್ ಬಗ್ಗೆ   ನಡೆಸುತ್ತಿರುವ ಜಾಗೃತಿ, ಸಮಾಲೋಚನೆ, ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ, ಸೇವೆಯಂಥ ಕ್ರಮಗಳು ಇದೆಲ್ಲವನ್ನೂ ಸಾಧ್ಯವಾಗಿಸಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಟಿ.ರಘುಕುಮಾರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ೨೦೦೨ರಿಂದ ೨೦೦೯ರ ಅಕ್ಟೋಬರ್ ತನಕ ಸಾಮಾನ್ಯ ವರ್ಗದಲ್ಲಿ ಒಟ್ಟು ೧೩,೮೬೬ ಎಚ್‌ಐವಿ ಸೋಂಕಿತರನ್ನು, ಗರ್ಭಿಣಿಯರಲ್ಲಿ ೭೭೬ ಸೋಂಕಿತರನ್ನು  ಪತ್ತೆ ಹಚ್ಚಲಾಗಿದ್ದು, ಈ ಪೈಕಿ ೧೦,೦೦೦ ಸೋಂಕಿತರಿಗೆ  ಐಸಿಟಿಸಿ ಇಲ್ಲವೇ ಎಆರ್‌ಟಿ ಕೇಂದ್ರಗಳಲ್ಲಿ ಚಿಕಿತ್ಸೆ  ನೀಡ ಲಾಗುತ್ತಿದೆ ಎಂದರು.

ಹೆಸರಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿ !

ಗುರುಸ್ವಾಮಿ ಕೊಳ್ಳೇಗಾಲ
ತಾಲೂಕಿಗೆ ಸೇರಿದ ೧೨ ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ (೨೧೨) ನವೀಕರಣ ಮುಗಿದು ೧೦ ತಿಂಗಳೂ ಕಳೆದಿಲ್ಲ. ಆದರೆ ವಾಹನ ಗಳು ಸಂಚರಿಸಲು ಸರ್ಕಸ್ ಮಾಡಬೇಕು.
ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ನುಣುಪಾಗಿದ್ದರೆ ಇದರ ಸ್ಥಿತಿ ಚಿಂತಾಜನಕ. ರಸ್ತೆಯಲ್ಲೆಲ್ಲ ಮಂಡಿ ಯುದ್ದದ ಹೊಂಡ, ಅಲ್ಲಲ್ಲಿ ಡಾಂಬರು ಕಿತ್ತು ಹೋಗಿದ್ದು, ಕೆಸರು ಗದ್ದೆಯಾಗಿದೆ. ರಸ್ತೆ ಬದಿ ನಡೆಯುವವರಿಗೆ ಕೆಸರಿನ ಸ್ನಾನ ತಪ್ಪಿದ್ದಲ್ಲ.
ಕೊಳ್ಳೇಗಾಲದ ಬಳಿಯ ಉತ್ತಂಬಳ್ಳಿ ಸಮೀಪದಿಂದ ಹೆದ್ದಾರಿ (೨೧೨) ಆರಂಭ. ಟಗರಪುರ ಬಳಿಯ ಚಾಮರಾಜ ನಗರ- ನರಸೀ ಪುರ ಮುಖ್ಯ ರಸ್ತೆ ಬಳಿ ಕೊನೆಗೊಳ್ಳು ತ್ತದೆ. ನಂತರ ಹೆದ್ದಾರಿ ನರಸೀಪುರ ಮಾರ್ಗ ವಾಗಿ, ಮೈಸೂರಿ ನತ್ತ ಹಾದುಹೋಗಿದೆ.
ತಾಂತ್ರಿಕತೆ ಬಳಸಿಲ್ಲ : ೧೨ ಕಿ.ಮೀ. ಉದ್ದಕ್ಕೂ ಹೆದ್ದಾರಿ ಗದ್ದೆಗಳ ಮಧ್ಯೆ ಹಾದುಹೋಗಿದೆ. ಈ ಮಾರ್ಗದಲ್ಲಿ ಉತ್ತಂಬಳ್ಳಿ, ಕುಂತೂರು, ಚಿಲಕವಾಡಿ, ಟಗರಪುರ ಮತ್ತು ಟಗರುಪುರ ಮೋಳೆ ಗ್ರಾಮ ಗಳಿವೆ. ಇದು ಕಪ್ಪು ಮಣ್ಣಿನ ಜೌಗು ಪ್ರದೇಶ. ಇಲ್ಲಿ ರಸ್ತೆ ನಿರ್ಮಾಣಕ್ಕೆ ಬಳಸುವ ತಾಂತ್ರಿಕತೆ ಬಳಸಿಯೇ ಇಲ್ಲ. ಹಾಗಾಗಿ ರಸ್ತೆ ಹಾಳು, ದುಡ್ಡೂ ಹಾಳು.

ಕದ್ದಮಾಲು `ಕೊಳ್ಳು'ವವರಿಗೆ ಪೊಲೀಸರ ಚಾಟಿ !

ವಿಕ ವಿಶೇಷ ಮೈಸೂರು
ಕಳ್ಳಮಾಲು ಗಿರವಿದಾರರಿಗೆ ಚಾಟಿ ಬೀಸಲು ನಗರ ಪೊಲೀಸರು ಸಜ್ಜಾಗಿದ್ದಾರೆ.
ಕದ್ದಮಾಲನ್ನು ಗಿರವಿ ಇಟ್ಟುಕೊಳ್ಳುವುದನ್ನೇ ದಂಧೆ ಮಾಡಿಕೊಂಡ ಕೆಲ ಗಿರವಿದಾರರಿಗೆ ಪೊಲೀಸರು ಈಗಾಗಲೇ ಬಿಸಿ ಮುಟ್ಟಿಸಿದ್ದಾರೆ. ಹಣ ಗಳಿಕೆಗೆ ಸುಲಭ ದಾರಿ ಕಂಡುಕೊಂಡಿದ್ದ  ಇಂಥವರ ಕಳ್ಳತನದ ಪ್ರೋತ್ಸಾಹಕ್ಕೆ ಕಡಿವಾಣ ಹಾಕಲು ಪೊಲೀಸರು ಹೆಜ್ಜೆ ಇಟ್ಟಿದ್ದಾರೆ.
ಕಳವು ಮಾಲನ್ನು ಮಾರಾಟವಾಗದಂತೆ ಎಚ್ಚರ ವಹಿಸಿದರೆ ಅರ್ಧ ಕಳ್ಳತನ ತಡೆಗಟ್ಟಿದಂತೆ ಎನ್ನುವ ಭಾವನೆ ಪೊಲೀಸರದ್ದು. ಇಷ್ಟು ದಿನ ಕಾಲ ಕಳವು ಮಾಲನ್ನು ವಶಪಡಿಸಿಕೊಂಡು ಗಿರವಿ ಅಂಗಡಿ ಮಾಲೀಕರಿಗೆ ಎಚ್ಚರಿಸಲಾಗುತ್ತಿತ್ತು. ಇಷ್ಟು ಸಂದರ್ಭದಲ್ಲಿ ಹೇಳಿಕೆ ಪಡೆದು ಬಿಟ್ಟು ಬಿಡಲಾಗುತ್ತಿತ್ತು. ಆದರೆ ಮುಂದೆ ಇಂಥದ್ದಕ್ಕೆ ಅವಕಾಶ ನೀಡದೆ, ಮಾಲೀಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ ಪೊಲೀಸರು.
ವಿವಿಧ ಗಿರವಿ ಅಂಗಡಿ ಮಾಲೀಕರನ್ನು ಕರೆದು ಎಚ್ಚರಿಸಲಾಗಿದ್ದು, ಪ್ರತಿ ಗಿರವಿ ಅಂಗಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಇದಲ್ಲದೇ ಕಳ್ಳ ಮಾಲನ್ನು ಗಿರವಿ ಇಟ್ಟುಕೊಂಡಿದ್ದ ಐದು ಗಿರವಿ ಅಂಗಡಿ ಮಾಲೀಕರ ವಿರುದ್ಧ ಈಗಾಗಲೇ ಐಪಿಎಸ್ ೪೧೧ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಆಟೋಗೆ ಎಲ್‌ಪಿಜಿ:ಡಿಸೆಂಬರ್ ಡೆಡ್‌ಲೈನ್

ವಿಕ ಸುದ್ದಿಲೋಕ ಮೈಸೂರು
ಆಟೋರಿಕ್ಷಾಗಳಿಗೆ ಎಲ್‌ಪಿಜಿಯನ್ನು ಕಡ್ಡಾಯವಾಗಿ ಅಳವಡಿಸಲು ಇನ್ನು ಒಂದು ತಿಂಗಳ ಡೆಡ್‌ಲೈನ್.
೨೦೧೦ರ ಡಿಸೆಂಬರ್ ೩೧ರ ಹೊತ್ತಿಗೆ ಎಲ್ಲಾ ಆಟೋರಿಕ್ಷಾಗಳು ಎಲ್‌ಪಿಜಿಯನ್ನು ಅಳವಡಿಸಿಕೊಳ್ಳದೇ ಇದ್ದರೆ ಜನವರಿ ಒಂದರಿಂದ ಅಂಥ ಆಟೋರಿಕ್ಷಾಗಳ ಪರವಾನಗಿಯನ್ನೇ ರದ್ದು ಮಾಡಲಾಗುತ್ತದೆ.
ಈಗಾಗಲೇ ಪೆಟ್ರೋಲ್‌ನ  ಜತೆಗೆ ಎಲ್‌ಪಿಜಿ ಕಿಟ್ ಹೊಂದಿ ರುವ ಆಟೋರಿಕ್ಷಾಗಳಿಗೆ ಮಾತ್ರ ಪರವಾನಗಿ ನೀಡಲಾಗುತ್ತಿದೆ. ಎರಡೂ ಇಲ್ಲ ಎಂದರೆ ಪರವಾನಗಿ ಹಾಗೂ ನೋಂದಣಿ ಇಲ್ಲವೇ ಇಲ್ಲ. ಡೆಡ್‌ಲೈನ್ ಸಮೀಪಿಸುತ್ತಿರುವುದರಿಂದ ಸಾರಿಗೆ ಇಲಾಖೆ ಅಧಿಕಾರಿಗಳೂ ಬ್ಯುಸಿ.
ಏನು ಸರಕಾರಿ ಆದೇಶ: ಪರಿಸರ ಮಾಲಿನ್ಯ ತಪ್ಪಿಸುವ ಜತೆಗೆ ಪ್ರಯಾಣಿಕರಿಗೆ ಹಿತಕರವಾಗುವ ಉದ್ದೇಶದಿಂದ ಸಾರಿಗೆ ಇಲಾಖೆ ವರ್ಷಗಳ ಹಿಂದೆಯೇ ಆದೇಶ ಹೊರಡಿಸಿದೆ. ಅದರ ಪ್ರಕಾರ ೧.೪.೧೯೯೧ರಿಂದ ೩೧.೧೦.೨೦೦೮ರವರೆಗೆ ನೋಂದಣಿ ಯಾದ ಎಲ್ಲಾ ಆಟೋರಿಕ್ಷಾಗಳು ಎಲ್‌ಪಿಜಿಯನ್ನು ಕಡ್ಡಾಯ ವಾಗಿ ಅಳವಡಿಸಿಕೊಳ್ಳಲೇಬೇಕು. ಅದರಂತೆ ಸರಕಾರ ೨೦೦೮ರ ಅಕ್ಟೋಬರ್ ೭ರಂದು ಹೊರಡಿಸಿದ ಅಧಿಸೂಚನೆಯಂತೆ ೨೦೧೦ರ ಡಿಸೆಂಬರ್ ೩೧ ರ ಒಳಗೆ ೧೯೯೧ರ ನಂತರ ನೋಂದಣಿ ಯಾದ ಎಲ್ಲಾ ಆಟೋರಿಕ್ಷಾಗಳು ಎಲ್‌ಪಿಜಿ ಅಳವಡಿಸಬೇಕು.

ಮೈಸೂರು ವಿವಿಯ ಪ್ರಮುಖ ಆಸ್ತಿ ನಾಪತ್ತೆ !

ವಿಕ ಸುದ್ದಿಲೋಕ ಮೈಸೂರು
ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ ಪ್ರಮುಖ ಆಸ್ತಿಯೊಂದು ನಾಪತ್ತೆ !
ವಿಶ್ವವಿದ್ಯಾನಿಲಯವೇ ಪ್ರಕಟಿಸಿದ ತನ್ನ ಸ್ಥಿರಾಸ್ತಿ ಪಟ್ಟಿಯಿಂದ ವಿವಿಗೆ ಸೇರಿದ ಪ್ರಮುಖ ಆಸ್ತಿಯೊಂದು ಕೈಬಿಟ್ಟಿದೆ. ರಾಜ್ಯದ ಎಲ್ಲ ನಗರಗಳಲ್ಲೂ ಭೂ ಹಗರಣವೇ ನಿತ್ಯದ  ವರ್ತಮಾನವಾಗಿರುವಾಗ ಇಂಥದ್ದೊಂದು ಹೇಳಿಕೆ ನೀಡಿದರೆ, ಇದ್ದರೂ ಇರಬಹುದು ಎಂದು ನಂಬುವವರು ಹೆಚ್ಚು.