ಮೈಸೂರು ಮಹಾನಗರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮೈಸೂರು ಮಹಾನಗರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಓದಿದ್ದು ಎಂಎಸ್ಸಿ, ಆಗಿದ್ದು "ಮಾಸ್ಟರ್ ಆಫ್ ಕೃಷಿ'

ಚೀ.ಜ. ರಾಜೀವ ಮೈಸೂರು
ಕೃಷಿ ಅಂದ್ರೆ ಏನು ? - ಅದೊಂದು ಅನ್ನ ಸೃಷ್ಟಿಯ ಕಾಯಕ, ರೈತರ ಬದುಕು, ವ್ಯವಹಾರ, ಸಂಸ್ಕೃತಿ, ಜೀವನ ಪದ್ಧತಿ, ದೇಶದ ಬೆನ್ನೆಲುಬು, ಮೇಟಿ ವಿದ್ಯೆ... ಹೀಗೆ  ಸರ್ವಸ್ವವನ್ನು ಕೃಷಿಯೊಂದಿಗೆ ಜೋಡಿಸಿ ವ್ಯಾಖ್ಯಾನಿಸಬಹುದು.
ಆದರೆ  ಇದೇ ಪ್ರಶ್ನೆಯನ್ನು ಜಿ.ಬಿ. ಸರಗೂರಿನ ಕೆ. ವೆಂಕಟೇಶ್ ಎಂಬ ಯುವ ಕೃಷಿಕನ ಮುಂದಿಟ್ಟರೆ,  `ಅದೊಂದು ಖುಷಿ ನೀಡುವ  ಕಲೆ, ಅಷ್ಟು  ಮಾತ್ರವಲ್ಲ. ಪರಿಶ್ರಮದಿಂದ ಮಾಡಿದರೆ, ಲಾಭದಾಯಕ  ವ್ಯವಹಾರ.  ಯಂತ್ರೋಪಕರಣ ಬಳಕೆ,  ಸಾವಯವ ಪದ್ಧತಿ ಹಾಗೂ ಅರಣ್ಯ ಆಧರಿತವಾಗಿ(ಒಂದು  ಪ್ರಯೋಗ) ದುಡಿಸಿಕೊಂಡರೆ, ಅದನ್ನೊಂದು ಲಾಭದಾಯಕ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನೇ ಮಾಡಬಹುದು !' ಎಂದು ಅಚ್ಚರಿ ಮೂಡಿಸುತ್ತಾರೆ !
ಎಚ್. ಡಿ. ಕೋಟೆ ತಾಲೂಕು ಹಳ್ಳದ ಮನುಗನಹಳ್ಳಿ ರಸ್ತೆಯಲ್ಲಿ ಬರುವ ಜಿ. ಬಿ. ಸರಗೂರಿನಲ್ಲಿ ವೆಂಕಟೇಶ್ ಅವರೇ ಅಭಿವೃದ್ಧಿ ಪಡಿಸಿರುವ ೨೫ ಎಕರೆ ವಿಶಾಲ  ತೋಟದಲ್ಲಿ  ನಿಂತು, ಕೃಷಿಯನ್ನು ಕಂಪನಿ ವ್ಯವಹಾರಕ್ಕೆ  ಹೋಲಿಸಿ ಮಾತನಾಡುತ್ತಿದ್ದರೆ, ಅವರ ಮಾತಿನ ಮೇಲೆ ವಿಶ್ವಾಸ ಮೂಡುತ್ತದೆ. ಏಕೆಂದರೆ, ಅವರ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ತೋಟವೇ ಅಲ್ಲಿ ಮೈದಾಳಿ ನಿಂತಿದೆ.  

ಕೆಲಸ ಮುಗಿಯುತ್ತಲೇ ಇಲ್ಲ !

ಕುಂದೂರು ಉಮೇಶಭಟ್ಟ ಮೈಸೂರು
ಮಿತಿಗೂ ಮೀರಿ ಹಣ ಖರ್ಚು ಮಾಡಿದ ಫಲವಾಗಿ ಮೈಸೂರು ತಾಲೂಕು ಮಿನಿ ವಿಧಾನಸೌಧಕ್ಕೆ ಇನ್ನೂ ಮುಕ್ತಿಯೇ ಇಲ್ಲ.
ಬರೋಬ್ಬರಿ ಏಳು ವರ್ಷದ ಹಿಂದೆ ಆರಂಭಗೊಂಡು ಎರಡೇ ವರ್ಷದಲ್ಲಿ ಮುಗಿಯಬೇಕಾಗಿದ್ದ ಮಿನಿ ವಿಧಾನಸೌಧ ಕಾಮಗಾರಿ ಇನ್ನೂ ಪ್ರಗತಿಯಲ್ಲೇ ಇದೆ. ಕಟ್ಟಡ ನಿರ್ಮಾಣ ಕಾಮಗಾರಿ ಯೇನೋ ಮುಗಿದಿದ್ದರೂ ಸಣ್ಣ ಪುಟ್ಟ ಕೆಲಸ ಮುಗಿಸಲು ಈಗ ಹಣದ ಅಭಾವ. ಸರಕಾರ ನಿಗದಿಪಡಿಸಿದ ಅನುದಾನಕ್ಕಿಂತ ಹೆಚ್ಚಿನ ಹಣವನ್ನು ಇಲ್ಲಿ ಬಳಸಲಾಗಿದೆ. ಹೆಚ್ಚಿನ ಹಣ ಕೊಡಲು ಸರಕಾರ ತಯಾರಿಲ್ಲ. ಮೈಸೂರಿನ ಮತ್ತೊಂದು ಅರಮನೆ ಮಾದರಿಯಲ್ಲೇ ಕಟ್ಟಿದ ಕಟ್ಟಡಕ್ಕೆ ಬಳಕೆ ಭಾಗ್ಯವೇ ಬರುತ್ತಿಲ್ಲ.  ಲೋಕೋಪಯೋಗಿ ಇಲಾಖೆ ಅಧಿಕಾರಿಗಳ `ಮಿತಿ ಮೀರಿದ ` ಖರ್ಚಿನ ಪರಿಣಾಮ ನೇರವಾಗಿ ಆಗುತ್ತಿರುವುದು ಕಕ್ಷಿದಾರನ ಮೇಲೆ.

ಅಭಿವೃದ್ಧಿಗೆ ಕೈಜೋಡಿಸಿದರೆ ಸಹಕಾರ: ಯಡಿಯೂರಪ್ಪ

 ಹೆಬ್ಬಾಳು
ಇನ್ಫೋಸಿಸ್ ರೀತಿಯಲ್ಲಿ ಯಾವುದೇ ಖಾಸಗಿ ಸಂಸ್ಥೆಗಳು ನಾಡಿನ ಅಭಿವೃದ್ಧಿಗೆ ಸರಕಾರದೊಂದಿಗೆ ಕೈ ಜೋಡಿಸಿದರೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಹೇಳಿದ್ದಾರೆ,
ಹೆಬ್ಬಾಳ ಕೈಗಾರಿಕೆ ಪ್ರದೇಶದಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್ ನವರು ನಿರ್ಮಿಸಿದ ಆಧುನಿಕ ಅಗ್ನಿ ಶಾಮಕ ಠಾಣೆ ಹಾಗೂ ೧೪ ವಸತಿ ಗೃಹಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಹೆಬ್ಬಾಳಿನಲ್ಲಿ ಹೊಸ ಅಗ್ನಿಶಾಮಕ ಠಾಣೆ

ವಿಕ ವಿಶೇಷ
ಸಂಭವನೀಯ ಆಗ್ನಿದುರಂತ ಶಮನಕ್ಕೆ ನಗರದಲ್ಲಿ ಮತ್ತೊಂದು ಆಗ್ನಿಶಾಮಕ ಠಾಣೆ ಕಾರ್‍ಯಾರಂಭ ಗೊಳ್ಳಲಿದೆ.
ಜಿಲ್ಲೆಯಲ್ಲಿ ಇದು ಎಂಟನೇ ಅಗ್ನಿಶಾಮಕ ಠಾಣೆ. ನಗರಕ್ಕೆ ಮೂರನೆಯದು. ಇದರಿಂದ ನೂರಾರು ಕೈಗಾರಿಕೆಗಳಿರುವ ಹೆಬ್ಬಾಳು ಕೈಗಾರಿಕಾ ಪ್ರದೇಶಕ್ಕೆ ಮುಂಜಾಗ್ರತಾ ಕ್ರಮವಾಗಿ ಆಗ್ನಿಶಾಮಕ ಠಾಣೆ ಬೇಕೆಂಬ ಉದ್ದಿಮೆಗಳ ಬೇಡಿಕೆ ಈಡೇರಿದೆ.
ಸರಸ್ವತಿಪುರಂ, ಬನ್ನಿಮಂಟಪ ಪೂರ್ಣ ಪ್ರಮಾಣದ ಠಾಣೆ ಇದ್ದರೆ, ಮೇಟಗಳ್ಳಿ ಕೈಗಾರಿಕಾ ಪ್ರದೇಶದ ಭಾರತೀಯ ನೋಟು ಮುದ್ರಣ ಘಟಕ (ಆರ್‌ಬಿಐ)ಬಳಿ ಉಪಠಾಣೆ ಕಾರ್‍ಯ ನಿರ್ವಹಿಸುತ್ತಿದೆ. ಒಂದೊಮ್ಮೆ ಕೈಗಾರಿಕೆಗಳಲ್ಲಿ ಆಗ್ನಿ ದುರಂತ ಸಂಭವಿಸಿ ದರೆ ಹಾಲಿ ಸರಸ್ವತಿಪುರಂ, ಬನ್ನಿಮಂಪಟದಲ್ಲಿನ ವಾಹನಗಳು ಕೈಗಾರಿಕಾ ಪ್ರದೇಶಕ್ಕೆ ಬರಲು ಬಹು ಸಮಯ ಹಿಡಿಯುವುದು ಸಾಮಾನ್ಯ. ಹಾಗಾಗಿ ಅಲ್ಲಿಗೆ ಪ್ರತ್ಯೇಕ ಠಾಣೆ ಅಗತ್ಯವಿದೆ ಎಂಬ ಬೇಡಿಕೆ ಇತ್ತು.

ಸೆರೆ ಸಿಕ್ಕ ಚಿರತೆ ಅರಣ್ಯಕ್ಕೆ

* ವಿಕ ಸುದ್ದಿಲೋಕ ಎಚ್.ಡಿ. ಕೋಟೆ
ಕೊನೆಗೆ ಸೆರೆ ಸಿಕ್ಕಿತು ಬಲವಾದ ಚಿರತೆ.
ಒಂದು ವಾರದಿಂದ ಚಿರತೆ ಸೆರೆ ಹಿಡಿಯಲೆಂದೇ ಅರಣ್ಯ ಇಲಾಖೆ ಸಿಬ್ಬಂದಿ ಬೋನನ್ನು ಅಳವಡಿಸಿ ಕೊಂಡು ಕಾಯುತ್ತಲೇ ಇದ್ದರು. ಚಿರತೆ ಬೋನಿಗೆ ಬೀಳಬಹುದು ಎಂದುಕೊಂಡಿದ್ದ ಇಲಾಖೆಯವರಿಗೆ ಶನಿವಾರ ಮಧ್ಯರಾತ್ರಿ ಕಾರ್‍ಯಾಚರಣೆ ಯಶಸ್ವಿಯಾಗಿದೆ.
ಹಳ್ಳಿಗಳಿಗೆ ನುಗ್ಗಿ ಜಾನುವಾರುಗಳನ್ನು ತಿನ್ನುತ್ತ, ಜನತೆ ಯಲ್ಲಿ ಭೀತಿ ಮೂಡಿಸಿದ್ದ  ಚಿರತೆಯನ್ನು ಸೆರೆ ಹಿಡಿಯ ಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಬಹಳ ದಿನಗಳಿಂದಲೇ ಈ ಭಾಗದಲ್ಲಿ ಚಿರತೆ ಕಾಟವಿದೆ ಎನ್ನುವುದು ಗ್ರಾಮಸ್ಥರ ದೂರಾಗಿತ್ತು,
ಹಳ್ಳದ ಮನುಗನಹಳ್ಳಿಯ ಕೃಷ್ಣೇಗೌಡರ ಜಮೀನಿ ನಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು. ೭ ರಿಂದ ೮ ವರ್ಷದ ಚಿರತೆ ಶನಿವಾರ  ಮಧ್ಯರಾತ್ರಿ ೧೨ ಗಂಟೆ ಸಮಯದಲ್ಲಿ ಬೋನಿಗೆ ಬಿದ್ದಿದೆ.

ಮೈಸೂರು ಜಿ.ಪಂ.ನಲ್ಲಿ ಅಮ್ಮಾವ್ರ ಧ್ವನಿ

ಪಿ.ಓಂಕಾರ್ ಮೈಸೂರು
ಮೈಸೂರು ಜಿಲ್ಲಾ ಪಂಚಾಯಿತಿ ಅಧಿಕಾರ ಅತಂತ್ರ. ಆದರೆ, ಮಹಿಳಾ `ಪಕ್ಷ'ಕ್ಕೆ ಬಹುಮತ !
ಪೂರ್ವ ನಿರ್ಧಾರದಂತೆ ೪೬ ಸ್ಥಾನಗಳ ಪೈಕಿ ೨೪ ಮಹಿಳೆಯರ ಮಡಿಲು ಸೇರಿವೆ. ಅಂದರೆ, ಸರಳ ಬಹುಮತ. ಇದು ಶೇ.೫೦ ಮೀಸಲು ಫಲ. ಯಾವ ಪಕ್ಷಕ್ಕೂ ಅರ್ಧದಷ್ಟೂ ಹಾದಿಯನ್ನು ಸವೆಸಲಾಗಿಲ್ಲ.
ಪುರುಷ ಕೇಂದ್ರಿತ ರಾಜಕೀಯ ದರ್ಬಾರಿ ದ್ದರೂ, ಯಾವ ಪಕ್ಷ ಏನೇ ಲಾಗ ಹೊಡೆದಿದ್ದರೂ ಇವರ ಆಯ್ಕೆಯನ್ನು ತಡೆಯಲು ಸಾಧ್ಯ ವಾಗು ತ್ತಿರಲಿಲ್ಲ ಎಂಬುದೂ ನಿಜವೇ. ಈಗ, ಅಧಿಕಾರ ಹಿಡಿಯುವುದು ಸಾಧ್ಯವಿಲ್ಲ ವಾದರೂ ಗಟ್ಟಿ ಧ್ವನಿಯಾಗಿ ಹೊರ ಹೊಮ್ಮಬಹುದು.

ರಸ್ತೆಯಲ್ಲೇ ಒಕ್ಕಣೆ, ಸಂಚಾರಿಗಳಿಗೆ ಬವಣೆ

ವಿಕ ವಿಶೇಷ ಮೈಸೂರು
ವಾಹನಗಳ ಮುಖಾಮುಖಿ ಡಿಕ್ಕಿಯಿಂದ  ಹತ್ತು ಸಾವು ; ಹಳ್ಳ-ಕೊಳ್ಳಗಳ ರಸ್ತೆಯಲ್ಲಿ  ಸ್ಕಿಡ್ ಆಗಿ, ವಾಹನ ಉರುಳಿ ೨ ಸಾವು ; ರಸ್ತೆಯಲ್ಲಿ ನಿಯಂತ್ರಣ ತಪ್ಪಿ- ಮೂವರಿಗೆ ಗಾಯ ; ನಿಂತ ವಾಹನಕ್ಕೆ ಡಿಕ್ಕಿ- ಬೈಕ್ ಸವಾರ ನಿಧನ; ಬ್ರೇಕ್ ಫೇಲ್‌ನಿಂದ ರಸ್ತೆಯಿಂದ ಹಳ್ಳಕ್ಕೆ ಉರುಳಿದ ಬಸ್-ಎಲ್ಲರೂ ಪಾರು...!
ಈ ಎಲ್ಲವೂ ರಸ್ತೆ ಅಪಘಾತದ ಸಾಮಾನ್ಯ ಮಾದರಿಗಳು. ಇವುಗಳನ್ನು ಮೀರಿ, ಬೇರೆ  ಸ್ವರೂಪದಲ್ಲಿ ಅಪಘಾತ ನಡೆಯುವುದು ಕಡಿಮೆ. ನಡೆದರೂ ಅದು ವಿರಳಾತಿ ವಿರಳ ಎನ್ನಬಹುದು. ಆದರೆ, ಮೈಸೂರು ಸೇರಿದಂತೆ ಹಲವೆಡೆ ಹೊಸ ಮಾದರಿ ಅಪಘಾತ ಘಟಿಸತೊಡಗಿದೆ. ಅದು-‘ಒಕ್ಕಣಿಕೆ’ ಅಪಘಾತಗಳು. ನಟ್ಟನಡು ರಸ್ತೆಯಲ್ಲೇ ರೈತರು ಒಕ್ಕಣಿಕೆ ಮಾಡಲು ಬೆಳೆಯನ್ನು ತಂದು ಸುರಿಯುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ದುಬಾರಿಯಾಗಲಾರಂಭಿಸಿದೆ.
ಉದಾಹರಣೆಗೆ ಮೈಸೂರಿನ ಹೊರವಲಯದ ಕೇರ್ಗಳ್ಳಿ, ಬೋಗಾದಿ, ಉದ್ಬೂರು, ದೂರ, ಬೀರಿಹುಂಡಿ, ಟಿ. ಕಾಟ್ನೂರು ಸೇರಿದಂತೆ ಬಹುತೇಕ ಒಳ ರಸ್ತೆಗಳಲ್ಲಿ ಇಂಥ ಅಪಘಾತಗಳು ಹೆಚ್ಚುತ್ತಿವೆ. ಪ್ರಾಣಾಪಾಯದ ಮಟ್ಟಿಗೆ ಬೆಳೆದು ನಿಂತಿಲ್ಲ ಎನ್ನುವುದೇ ಸದ್ಯದ ಸಮಾಧಾನ. ಹಾಗಾಗಿ ಪೊಲೀಸರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ, ವಾಹನ ಸವಾರರಿಗೆ ಆಗುತ್ತಿರುವ ತೊಂದರೆ, ಕಿರಿಕಿರಿ ಹೇಳುವಂತಿಲ್ಲ.

ಕಾಂಗ್ರೆಸ್, ದಳ ಪೈಪೋಟಿ ನಡುವೆ ಬಿಜೆಪಿ ಕಸರತ್ತು

ವಿಕ ತಂಡ
ಪಿರಿಯಾಪಟ್ಟಣ ತಾಲೂಕಿನ ೫ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಒಟ್ಟು ೨೦ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಇದರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎಲ್ಲ ೫ ಕ್ಷೇತ್ರ ಗಳಲ್ಲಿ ಸ್ಪರ್ಧಿಸಿ ದ್ದರೆ, ಬಿಎಸ್‌ಪಿ ೩ ಕ್ಷೇತ್ರಗಳಲ್ಲಿ ಕಣಕ್ಕಿಳಿ ದಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿ ಗಳು ಇದ್ದಾರೆ. ಕಳೆದ ಬಾರಿ ಜೆಡಿಎಸ್ ೧ ಮತ್ತು ಎಬಿಪಿಜೆಡಿಯ ೪ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ ಬಿಜೆಪಿ ಖಾತೆ ತೆರೆದಿರಲಿಲ್ಲ.
ಕಂಪಲಾಪುರ
ಅನುಸೂಚಿತ ಪಂಗಡಕ್ಕೆ ಮೀಸಲಾಗಿದ್ದು ೩೦೩೮೨ ಮತದಾರರನ್ನು ಹೊಂದಿದೆ. ಈ ಹಿಂದೆ ಜಾ.ದಳದ ಕೋಮಲತಾ ಕಿಟ್ಟಪ್ಪ ಆಯ್ಕೆಯಾಗಿದ್ದರು.ಈ ಬಾರಿ ಕೆ.ಪಿ.ನಿಂಗರಾಜು(ಕಾಂಗ್ರೆಸ್) , ಚಂದ್ರ (ಬಿಜೆಪಿ), ಎಂ.ಪಿ.ಚಂದ್ರೇಶ್ (ಜೆಡಿಎಸ್) ಅಭ್ಯರ್ಥಿಗಳಾಗಿದ್ದಾರೆ. ಜಾ.ದಳದ ಮಾಜಿ ತಾ.ಪಂ.ಸದಸ್ಯ ಚಂದ್ರೇಶ್ ಮತ್ತು ವಾಣಿಜ್ಯೋದ್ಯಮಿ ಕಾಂಗ್ರೆಸ್‌ನ ಕೆ.ಪಿ.ನಿಂಗರಾಜು ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಹುಣಸವಾಡಿ
ಹಿಂದುಳಿದ ಅ ವರ್ಗ ಕ್ಕೆ ಮೀಸಲಾಗಿದ್ದು ಒಟ್ಟು ೨೮೦೬೧ ಮತಗಳಿವೆ.. ಕಳೆದ ಬಾರಿ ಎಬಿಪಿಜೆಡಿಯಿಂದ ಕೆ.ಸಿ. ರಾಜಶೇಖರಯ್ಯ ಆಯ್ಕೆಯಾಗಿದ್ದರು. ಈ ಬಾರಿ ಸರಿತಾ (ಕಾಂಗ್ರೆಸ್), ಎಂ.ಕೆ.ಸುಚಿತ್ರಾ (ಜೆಡಿಎಸ್) ಲತಾ (ಬಿಜೆಪಿ) ಕಣದಲ್ಲಿದ್ದಾರೆ.  ಕಾಂಗ್ರೆಸ್ ಮತ್ತು ಜೆಡಿಎಸ್‌ನಡುವೆ ನೇರ ಸ್ಪರ್ಧೆ ಇದೆ.
ಕೊಪ್ಪ: ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿದ್ದು ತಾಲೂಕಿನಲ್ಲಿ ಅತಿಹೆಚ್ಚು ಮತದಾರರನ್ನು ಒಳಗೊಂಡಿ ರುವ ಜಿ.ಪಂ ಕ್ಷೇತ್ರ. ೩೨೩೩೧ ಮತದಾರರನ್ನು ಹೊಂದಿದೆ. ಈ ಹಿಂದೆ ಎಬಿಪಿಜೆಡಿಯಿಂದ ಚೌಡಯ್ಯ ಆಯ್ಕೆಯಾಗಿ ದ್ದರು. ಈ ಬಾರಿ ಕಾವೇರಿ ಶೇಖರ್(ಕಾಂಗ್ರೆಸ್), ಜಯಂತಿ (ಜೆಡಿಎಸ್), ಎಚ್.ಕೆ.ಭಾಗ್ಯ (ಬಿಜೆಪಿ), ರಾಜಮ್ಮ (ಬಿಎಸ್‌ಪಿ), ಆರ್.ಹರಿಣಿಕುಮಾರಿ(ಪಕ್ಷೇತರ) ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ ಇದ್ದರೂ ಬಿಜೆಪಿ ಅಭ್ಯರ್ಥಿ ಪೈಪೋಟಿ ನಡೆಸಿದ್ದಾರೆ. ಬಿಎಸ್‌ಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಪಡೆ ಯುವ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ.
ಬೆಟ್ಟದಪುರ
ಬೆಟ್ಟದಪುರ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ  ೨೯೧೧೭ ಮತದಾರರಿದ್ದು, ಕಳೆದ ಬಾರಿ ಎಬಿಪಿಜೆಡಿ ವತಿಯಿಂದ ಕೆ.ಸಿ.ಕೃಷ್ಣಪ್ಪ ಆಯ್ಕೆಯಾಗಿದ್ದರು. ಈ ಬಾರಿ ಮಾಜಿ ಶಾಸಕ ಕಾಳಮರೀಗೌಡರ ಪುತ್ರಿ ಡಿ.ಕೆ.ಮಂಜುಳಾರಾಜ್(ಕಾಂಗ್ರೆಸ್), ಕೌಸಲ್ಯ (ಜೆಡಿಎಸ್), ಬಿ.ಸಿ.ಭಾಗ್ಯ (ಬಿಜೆಪಿ), ಯಶೋದಮ್ಮ (ಬಿಎಸ್‌ಪಿ) ಸ್ಪರ್ಧೆಯಲ್ಲಿದ್ದಾರೆ. ಕಾಂಗ್ರೆಸ್, ದಳ, ಬಿಜೆಪಿ ಅಭ್ಯರ್ಥಿಗಳ ನಡುವೆ ಪೈಪೋಟಿ ಇದೆ.
ರಾವಂದೂರು
ಸಾಮಾನ್ಯವರ್ಗಕ್ಕೆ ಮೀಸಲಾಗಿದ್ದು, ೨೭೧೮೪ ಒಟ್ಟು ಮತದಾರರಿದ್ದಾರೆ. ಕಳೆದ ಬಾರಿ  ಎಬಿಪಿಜೆಡಿವತಿಯಿಂದ ಹೇಮಾವತಿ ಶಿವಕುಮಾರ್ ಆಯ್ಕೆಯಾಗಿದ್ದರು. ಕುರುಬ ಮತದಾರರೆ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಕಣದಲ್ಲಿರುವ ನಾಲ್ವರು ಅಭ್ಯರ್ಥಿUಳೂ ಕುರುಬ ಜನಾಂಗಕ್ಕೆ ಸೇರಿದವರಾಗಿದ್ದಾರೆ.
ಡಿ.ಎ.ಜವರಪ್ಪ(ಕಾಂಗ್ರೆಸ್), ಎಸ್.ಎ.ಶಿವಣ್ಣ (ಜೆಡಿಎಸ್) ಜಿ.ಪಂ.ಮಾಜಿ ಉಪಾಧ್ಯಕ್ಷ ವಿ.ಜಿ.ಅಪ್ಪಾಜಿಗೌಡ (ಬಿಜೆಪಿ), ಶಶಿಕುಮಾರ್ (ಬಿಎಸ್‌ಪಿ), ಹೇಮಾವತಿ ಶಿವಕುಮಾರ್ (ಪಕ್ಷೇತರ) ಸ್ಪರ್ಧಿಸಿ ದ್ದಾರೆ. ಐವರು ಕಣದಲ್ಲಿದ್ದರೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಮಬಲ ಹೋರಾಟವಿದೆ.

ಸಂಬಾರ ರಾಣಿಗೆ ರಾಜನ ಬೆಲೆ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಸಂಬಾರ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಏಲಕ್ಕಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇರುವುದು ಮತ್ತು ಕಳೆದ ವರ್ಷಕ್ಕಿಂತ ಹೆಚ್ಚುವರಿ ಇಳುವರಿ ಕೈಸೇರುವ ನಿರೀಕ್ಷೆಯಿಂದ ಕೊಡಗಿನ ಏಲಕ್ಕಿ ಬೆಳೆಗಾರರ ಮೊಗದಲ್ಲಿ ಹರ್ಷದ ಹೊನಲು ಮೂಡಿಸಿದೆ. ಬಂಪರ್ ಬೆಲೆ ಬರುತ್ತಿದ್ದಂತೆ ಕಾಫಿ ನಂಬಿ ಏಲಕ್ಕಿ ತೋಟ ನಾಶ ಮಾಡಿದ್ದೆವಲ್ಲಾ ಎಂದು ಹಲವು ಬೆಳೆಗಾರರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.
ಬಂಪರ್ ಬೆಲೆ: ಏಲಕ್ಕಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಗುವ ಗ್ವಾಟೆಮಾಲಾದಲ್ಲಿ ಇಳುವರಿ ತೀರಾ ಕಡಿಮೆಯಾಗಿರುವುದು ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ದೊರೆಯುವಂತೆ ಮಾಡಿದೆ. ಉತ್ತಮ ಇಳುವರಿ ಬಂದಿರುವ ಸಂದರ್ಭದಲ್ಲಿಯೇ ಬಂಪರ್ ಬೆಲೆ ಬಂದಿರುವುದು ಏಲಕ್ಕಿ ಬೆಳೆಗಾರರ ಮೊಗದಲ್ಲಿ ಸಂತಸ ಅರಳಿಸಿದೆ.
ದಾಖಲೆ ಅನ್ನುವ ರೀತಿಯಲ್ಲಿ ನೆಲ್ಯಾಣಿ ತಳಿಗೆ ೧,೮೦೦ ಹಾಗೂ ಮಂಜರಬಾದ್‌ಗೆ ೧,೫೦೦ ರೂ. (೧ ಕೆ.ಜಿ.ಗೆ) ಬಂದಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ನೆಲ್ಯಾಣಿಗೆ ೧,೧೦೦ ರಿಂದ ೧,೨೦೦ ಹಾಗೂ ಮಂಜರಬಾದ್‌ಗೆ ೯೦೦ ರಿಂದ ೧,೦೦೦ ಬೆಲೆ ಇದೆ. ಬೆಲೆ ಏರುಮುಖದಲ್ಲಿ ಸಾಗುತ್ತಿರುವುದು ಬೆಳೆಗಾರರನ್ನು ಹರ್ಷಚಿತ್ತರನ್ನಾಗಿಸಿದೆ. ಹತ್ತು ವರ್ಷಗಳ ಹಿಂದೆ ೧೨೦ ರಿಂದ ೧೫೦ ರೂ. ಇದ್ದದ್ದೇ ಹೆಚ್ಚಿನ ಬೆಲೆಯಾಗಿತ್ತು.

ಸಮುದಾಯ ಸೇವೆಗೆ ಸಿದ್ಧ ಪೌರ ರಕ್ಷಣಾ ಪಡೆ

ವಿಕ ವಿಶೇಷ ಮೈಸೂರು
ಪೌರ ರಕ್ಷಣಾ ಕಾವಲುಗಾರರು(ಸಿವಿಲ್ ಡಿಫೆನ್ಸ್ -ಸಿಡಿ ವಾರ್ಡನ್ಸ್)  ಈಗ ಮೈಸೂರಿನಲ್ಲಿ  ಸೇವೆಗೆ ಸನ್ನದ್ಧರು.
ವಿಶ್ವವಿದ್ಯಾನಿಲಯದ  ಪ್ರಾಧ್ಯಾಪಕರು, ವೈದ್ಯರು, ವಕೀಲರು, ಉದ್ಯಮಿಗಳು ಸೇರಿದಂತೆ ಸಮಾಜದ ವಿವಿಧ ವಲಯದ  ಶ್ರೀ ಸಾಮಾನ್ಯರು, ಪ್ರತಿಷ್ಠಿತರು ಹಳದಿ ಜಾಕೆಟ್ ಧರಿಸಿ, `ಸಿಡಿ'ಗಳಾಗಿ ನಾನಾ ರೀತಿಯ ಸೇವೆಗಳಿಗೆ ಕೈ ಜೋಡಿಸುವರು. 
ಸಣ್ಣ-ಪುಟ್ಟ ಅಪಘಾತದಿಂದ ಹಿಡಿದು, ಪ್ರಾಕೃತಿಕ ವಿಕೋಪದಂಥ ಸಮಸ್ಯೆ-ಸಂಕಷ್ಟಗಳು ಸೃಷ್ಟಿಯಾದಾಗ  ಪೊಲೀಸರು ಹಾಗೂ ಅಗ್ನಿ ಶಾಮಕ, ತುರ್ತು ಸೇವಾ ದಳದ ಸಿಬ್ಬಂದಿಯಂತೆ, ಸಿಡಿ  ಕಾವಲುಗಾರರು ಕೂಡ ಕರ್ತವ್ಯಕ್ಕಾಗಿ ಕಟಿಬದ್ಧರಾಗಲಿದ್ದಾರೆ. ಏಕೆಂದರೆ- ಈ ಸ್ವಯಂ ಸೇವಕರಿಗೆ ಸರಕಾರವೇ ಶಾಸನಬದ್ಧವಾಗಿ ಸೇವೆ ಮಾಡಲು ಅನುಮತಿ ನೀಡಿ, ಅವರನ್ನು ಸೇವಾಕಣಕ್ಕೆ ಇಳಿಸಲಿದೆ.  ಹಾಗೆ ನೋಡಿದರೆ  ಇವರು ಯಾವುದೇ ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಸದಸ್ಯರಂತಲ್ಲ. ಅವರ ಸೇವೆಯೂ ನಿಸ್ವಾರ್ಥದಿಂದ ಇದ್ದರೂ, ಅದಕ್ಕೆ ಸರಕಾರದ ಅಧಿಕೃತ ಅನುಮತಿ ಇರದು. ಹಾಗಾಗಿ ಸೇವೆಯ ವಿಶ್ವಾಸಾರ್ಹತೆಗೆ ಖಚಿತತೆ(ಗ್ಯಾರಂಟಿ) ಇರುವುದಿಲ್ಲ. ಆದರೆ, ಸಿಡಿ ವಾರ್ಡನ್ಸ್ ಗಳು ಅಧಿಕೃತವಾಗಿ ಗೃಹ ಮಂತ್ರಾಲಯದ ರಹದಾರಿ ಹೊಂದಿರುತ್ತಾರೆ.

ರೇಷ್ಮೆ ಕೃಷಿ: ಎಲ್ಲೆಡೆ ಶೂನ್ಯ ಮಂಡ್ಯದಲ್ಲಿ ಮಾನ್ಯ

ರೇಷ್ಮೆ ಕೃಷಿ
ಎಲ್ಲೆಡೆ ಶೂನ್ಯ
ಮಂಡ್ಯದಲ್ಲಿ ಮಾನ್ಯ
ವಿಕ ತಂಡ
ಮಂಡ್ಯ:
ಒಂದು ಕಾಲದಲ್ಲಿ ರೇಷ್ಮೆ ಕೃಷಿಯು ಮಳೆಯಾಶ್ರಿತ ಮತ್ತು ಕೊಳವೆ ಬಾವಿ ಆಶ್ರಯಿಸಿದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಾಮರಾಜನಗರ ಜಿಲ್ಲೆಗಳಿಗಷ್ಟೇ ಸೀಮಿತ ಎನ್ನುವಂತಿತ್ತು. ಇದೀಗ ಸಮೃದ್ದ ನೀರಾವರಿ ಪ್ರದೇಶ ಮಂಡ್ಯ ಜಿಲ್ಲೆಯಲ್ಲೂ ದಾಪುಗಾಲಿಟ್ಟಿದೆ.
ಉದ್ಯೋಗ ಸೃಷ್ಟಿ, ಸುಲಭದ ಬೇಸಾಯ, ಕಡಿಮೆ ಅವಧಿ ಮತ್ತು ಬಂಡವಾಳದಲ್ಲಿ ಹೆಚ್ಚು ಲಾಭ ಸಿಗುವಂಥದ್ದು ಇದು. ಇದೀಗ ಜಿಲ್ಲೆಯಲ್ಲಿ ೪೧,೦೩೫ ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆದು, ರೇಷ್ಮೆ ಕೃಷಿ ಅವಲಂಬಿಸಲಾಗಿದೆ. ಕಬ್ಬು ಮತ್ತು ಭತ್ತದ ಬೇಸಾಯದಷ್ಟೇ ರೇಷ್ಮೆ ಕೃಷಿಗೂ ಗಮನ. ಜಿಲ್ಲೆಯಲ್ಲಿ  ವಾರ್ಷಿಕ ೧೫೨೦೦ ಮೆಟ್ರಿಕ್ ಟನ್ ರೇಷ್ಮೆ ಗೂಡು ಉತ್ಪಾದನೆಯಾಗುತ್ತಿದೆ. ಶೇ. ೨೫ರಷ್ಟು ಕುಟುಂಬಗಳು ರೇಷ್ಮೆಗೆ ಮಾರು ಹೋಗಿವೆ. ಇಲ್ಲಿನ ಮಣ್ಣು ಮತ್ತು ಹವಾಗುಣವು ವಿ೧ ತಳಿ ಹಿಪ್ಪುನೇರಳೆ, ಸಿಎಸ್ಆರ್ ಹೈಬ್ರಿಡ್ ರೇಷ್ಮೆ ಹುಳು ಸಾಕಣೆಗೆ ಪೂರಕ. ೨೦೦೯ನೇ ಸಾಲಿನಿಂದ ಹಿಪ್ಪು ನೇರಳೆ ನಾಟಿ ೭೫೦೦ ಎಕರೆಯಷ್ಟು ವಿಸ್ತಾರಗೊಂಡಿದೆ. ಜಿಲ್ಲೆಯಲ್ಲಿ ರೇಷ್ಮೆ ಕೃಷಿ ವಿಸ್ತಾರಗೊಂಡ ಹಿನ್ನೆಲೆಯಲ್ಲಿ ಸರಕಾರವು ಕೆ.ಆರ್.ಪೇಟೆ ಮತ್ತು ಮಳವಳ್ಳಿಯಲ್ಲಿ ಮಾರಾಟ ಕೇಂದ್ರಗಳನ್ನು ತೆರೆದಿದೆ. ರಾಮನಗರ ಮತ್ತು ಚನ್ನಪಟ್ಟಣ ರೇಷ್ಮೆ ಗೂಡು ಮಾರುಕಟ್ಟೆಗಳು ಜಿಲ್ಲೆಗೆ ಸಮೀಪದಲ್ಲಿವೆ. ಹಾಗಾಗಿ ರೈತರಿಗೆ ಮಾರುಕಟ್ಟೆಯ ಸಮಸ್ಯೆ ಇಲ್ಲ. ಸಾಗಣೆಗೂ ಚಿಂತೆ ಇಲ್ಲ.

ಈರುಳ್ಳಿ ದಿಲ್ಲಿಯಲ್ಲಿ ಕುಸಿದಿರಬಹುದು ಹಳ್ಳಿಯಲ್ಲಲ್ಲ !

ವಿಕ ತಂಡ
ಈರುಳ್ಳಿ ದರ ಮಾರುಕಟ್ಟೆಯಲ್ಲಿ ಬಹಳ ಕುಸಿದಿಲ್ಲ. ಹೋಲ್‌ಸೇಲ್ ಕಥೆ ಗೊತ್ತಿಲ್ಲ. ನಿತ್ಯವೂ ಕಾಲು ಕೆಜಿ ಬಳಸುವ ಮಂದಿಗೆ ಇಳಿಕೆಯ ಅನುಭವ ತಿಳಿಯುತ್ತಿಲ್ಲ, ಬರೀ ಏರಿಕೆಯ ಬಿಸಿಯಷ್ಟೇ.
ಮಡಿಕೇರಿಯಲ್ಲಿ:ಈರುಳ್ಳಿ ಬೆಲೆ ಕೊಡಗಿನ ಜನರಿಗೂ ಬಿಸಿ ಮುಟ್ಟಿಸಿದೆ. ಸ್ವಲ್ಪ ಬೆಲೆ ಇಳಿಕೆಯಿಂದ ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.
ಈರುಳ್ಳಿಗೆ ದುಬಾರಿ ಬೆಲೆಯಾದರೂ ಜನರು ಖರೀದಿಯನ್ನು ನಿಲ್ಲಿಸಿಲ್ಲ. ಜಿಲ್ಲೆಯ ಕೆಲವು ವರ್ತಕರು ಪರಿಸ್ಥಿತಿಯ ಲಾಭ ಪಡೆದುಕೊಳ್ಳತೊಡಗಿದ್ದಾರೆ. ಹಾಗಾಗಿ ಒಂದೊಂದು ಅಂಗಡಿಗಳಲ್ಲಿ ಒಂದೊಂದು ದರ. ಒಂದು ಅಂಗಡಿಯಲ್ಲಿ ಗುರುವಾರ ೫೮ ರೂ., ಬುಧವಾರ ೪೮ ರೂ, ಮಂಗಳವಾರ ೪೦ ರೂ. ಗಳಿದ್ದರೆ,  ಮತ್ತೊಂದು ಅಂಗಡಿಯಲ್ಲಿ ಕ್ರಮವಾಗಿ ೪೦, ೬೦, ೩೦ ರೂ. ಗೆ ಈರುಳ್ಳಿ ಲಭ್ಯ.
ಕೊಡಗು ಜಿಲ್ಲೆಯಲ್ಲಿ ಮೂರು ಎಪಿಎಂಸಿಗಳಿದ್ದು, ಇವು ವಿವಿಧ ಸಾಮಗ್ರಿಗಳ ಮಾರಾಟದ ಮಧ್ಯವರ್ತಿಗಳಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ವಸ್ತುಗಳಿಗೆ ಸಂಬಂಧಿಸಿದಂತೆ ಒಂದೇ ದರ ಕಾಣುವುದಿಲ್ಲ. ಜಿಲ್ಲೆಯ ವರ್ತಕರಿಗೆ ಬೆಂಗಳೂರಿನ ಮಾರುಕಟ್ಟೆಯೇ ಆಶ್ರಯ.
ಮಂಡ್ಯದಲ್ಲಿ: ಈರುಳ್ಳಿ ಬೆಲೆ ನಿಯಂತ್ರಣ ಸಂಬಂಧ ಕೇಂದ್ರ ಸರಕಾರ ರಫ್ತು ನಿಷೇಧ ಮಾಡಿದ ಬೆನ್ನಲ್ಲೇ ಪ್ರತಿ ಕಿಲೋ ಈರುಳ್ಳಿಗೆ ೨೦ ರಿಂದ ೨೫ರೂ. ಕಡಿಮೆಯಾಗಿದೆ. ಆದರೆ, ಸರಕಾರದ ಈ ನಿರ್ಧಾರದಿಂದ ತಮಗೆ ನಷ್ಟ ಆಗಿದೆ ಎಂದು ವ್ಯಾಪಾರಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ.

ಎಲ್ಲರ ಚಿತ್ತ ಅವರೆಕಾಯಿಯತ್ತ

ಮಾಗಿಯ ಕಾಲ ಬಂದಿದೆ. ಅಂತೆಯೇ ಅವರೆಕಾಯಿಯೂ ಮಾರುಕಟ್ಟೆಗೆ ದಾಳಿ ಇಟ್ಟಿದೆ. ಹಸಿ ಅವರೆಕಾಳಿನಿಂದ ವಿವಿಧ ಬಗೆಯ ಭಕ್ಷ್ಯಗಳನ್ನು ಹೇಗೆ ಮಾಡಬಹುದೆಂಬುದನ್ನು ಇಲ್ಲಿ ತಿಳಿಸಲಾಗಿದೆ. ಇದನ್ನು ಓದಿ ಒಮ್ಮೆ ಟ್ರೈ ಮಾಡಿ ನೋಡಿ...

ಅವರೆಕಾಯಿ ಬಂದಿದೆ !

ಎಸ್.ಕೆ.ಚಂದ್ರಶೇಖರ್
ತಾಜಾ ತಾಜಾ ಕಳ್ಳೇಕಾಯ್, ಗರಂ ಗರಂ ಕಳ್ಳೇಕಾಯ್ ಎಂದು ಹಾಡಿದ್ದು ಕಲ್ಪನಾ. ಈಗ ಅವರಿದ್ದಿದ್ದರೆ ತಾಜಾ ತಾಜಾ ಅವರೆಕಾಯ್,  ಚಳಿ ಬಿಡಿಸುವ ಅವರೇಕಾಯ್ ಎಂದು ಕೂಗುತ್ತಿದ್ದರೇನೋ ?
ಮಾಗಿಯ ಚಳಿ ಬಂದಿದೆ. ದಿನೇ ದಿನೆ ಚಳಿ ಹೆಚ್ಚುತ್ತಿದೆ. ಮೈಯೊಳಗೆ ಚಳಿ ಓಡಿಸಲು ಎದುರಾಗಿರುವುದೇ ಅವರೇಕಾಯಿ. ಮಾಗಿಯ ಅತಿಥಿ ಬಂದಿದ್ದಾನೆ ನಮ್ಮ ಮನೆ ಬಾಗಿಲಿಗೆ. ಕೈ ಮುಗಿದು ಒಳಗೆ ಕರೆದುಕೊಳ್ಳಬೇಕಷ್ಟೇ. ಎಲ್ಲೆಲ್ಲೂ ಅವನದ್ದೇ ಘಮಲು. ಬನ್ನಿ ಹೀಗೇ ಒಂದು ಸುತ್ತು ಹಾಕೋಣ.
ದೇವರಾಜ ಮಾರುಕಟ್ಟೆಯಲ್ಲಿ ಈ ಹಿಂದೆ ಮಾರಾಟವಾಗುತ್ತಿದ್ದ ರಾಶಿ ರಾಶಿ ಅವರೆ ಈಗಿಲ್ಲ. ಹಾಗೆಂದು ಅವರೆ ಸಿಗೋದಿಲ್ಲವೆಂದಲ್ಲ. ಸದ್ಯಕ್ಕೆ ಕೆ.ಜಿ.ಗೆ ೨೦-೨೫ ರೂ. ಬೆಳೆ ಕಡಿಮೆಯಾಗಿದ್ದರಿಂದ ಈ ಬೆಲೆ. ಕಳೆದ ವರ್ಷ ೧೦-೧೫ ರೂ. ಗೆ ನಿಮ್ಮ ಚೀಲದಲ್ಲಿ ಅವರೆ ಇರುತ್ತಿತ್ತು. ಅಕಾಲಿಕ ಮಳೆ ಮತ್ತಿತರ ಕಾರಣದಿಂದ ಸ್ವಲ್ಪ ದುಬಾರಿಯಂತೆ. ಸಿಪ್ಪೆಯಿಂದ ಕಾಳುಗಳನ್ನು ಬೇರ್ಪಡಿಸುವ ಗೋಜಿಗೆ ಹೋಗಬಾರದೆಂದರೆ ಬಿಡಿಸಿದ ಕಾಳುಗಳೂ ಲಭ್ಯ. ೧ ಲೀಟರ್‌ಗೆ  ೮೦ರೂ., ಚಿತ್‌ಕವರೆ ಇದಕ್ಕಿಂತ ತುಸು ಹೆಚ್ಚು.