ಕನ್ನಂಬಾಡಿ ತುಂಬುವ ಮುನ್ನವೇ ತ.ನಾಡಿಗೆ ನೀರು !

ಮತ್ತೀಕೆರೆ ಜಯರಾಮ್ ಮಂಡ್ಯ
‘ಜೀವನಾಡಿ’ ಕನ್ನಂಬಾಡಿ(ಕೆಆರ್‌ಎಸ್) ಭರ್ತಿಯಾಗದೆ ಮೈಸೂರು ಭಾಗದ ರೈತರು ಕಂಗಾಲಾಗಿದ್ದರೆ, ಜಲಾಶಯ ದಿಂದ ಕದ್ದುಮುಚ್ಚಿ ನದಿಗೆ ನೀರು ಹರಿಸುವ ಮೂಲಕ ರಾಜ್ಯ ಸರಕಾರ ತಮಿಳುನಾಡನ್ನು ತಣಿಸಲು ಹೊರಟಿದೆ. 
ಜಲಾಶಯದ ೫೦ನೇ ಗೇಟ್ ಮೂಲಕ ೩೨೧೮ ಕ್ಯೂಸೆಕ್ ನೀರನ್ನು ಬುಧವಾರ ಮಧ್ಯಾಹ್ನದಿಂದಲೇ ನದಿಗೆ ಬಿಡುಗಡೆ ಮಾಡಲಾಗಿದೆ. ಇನ್ನೂ ದುರಸ್ತಿ ಹಂತದಲ್ಲಿರುವ ೮೦ನೇ ಗೇಟ್‌ನಲ್ಲೂ ಮುನ್ನೂರು ಕ್ಯೂಸೆಕ್‌ನಷ್ಟು ಸೋರಿಕೆ ನೀರು ಹರಿದು ಹೋಗುತ್ತಿದೆ.
ಕಾವೇರಿ ನ್ಯಾಯ ಮಂಡಳಿಯ ಮಧ್ಯಂತರ ಆದೇಶ ದನ್ವಯ ಜೂನ್ ಮತ್ತು ಜುಲೈನ ಪಾಲು ೧೫ ಟಿಎಂಸಿ ಅಡಿ ನೀರು ಹರಿಸಿ ತಮಿಳುನಾಡನ್ನು ತೃಪ್ತಿಪಡಿಸಲು ರಾಜ್ಯ ಸರಕಾರವು ಮಂಡ್ಯ ಮತ್ತು ಮೈಸೂರು ಭಾಗದ ರೈತರ ಭವಿಷ್ಯವನ್ನು ಬಲಿಕೊಡಲು ಮುಂದಾಗಿದೆ. ಕೇರಳದ ವೈನಾಡಿನಲ್ಲಿ ಧಾರಾಕಾರ ಮಳೆಯಾಗಿ ಭರ್ತಿ ಅಂಚಿಗೆ ತಲುಪಿರುವ ಕಬಿನಿ ಜಲಾಶಯ ದಿಂದಲೂ ತಮಿಳುನಾಡಿಗೆ ನೀರು ಹರಿಯುತ್ತಿದೆ. ಅಲ್ಲಿ ಒಳ ಹರಿವಿನಷ್ಟೇ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಿದ್ದರೂ ಕನ್ನಂಬಾಡಿ ಒಡಲು ಬಸಿಯುವ ದುಸ್ಸಾಹಸ ನಡೆದಿದೆ. ಕನ್ನಂಬಾಡಿಯು ಕಳೆದ ವರ್ಷ ಇಷ್ಟರಲ್ಲಾಗಲೇ ತುಂಬಿ ತುಳುಕುತ್ತಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಳೆದ ಬಾರಿ ಜು.೨೪ರಂದೇ ಕೆಆರ್‌ಎಸ್‌ಗೆ ಆಗಮಿಸಿ ಕಾವೇರಿ ಮಾತೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸಿದ್ದರು. ಭರ್ತಿಯಾಗಿದ್ದ ಜಲಾಶಯ ದಿಂದ ನದಿಗೆ ನೀರು ಬಿಡುವ ಮುನ್ನವೇ ನಾಲೆಗಳಿಗೆ ಹರಿಸ ಲಾಗಿತ್ತು. ಈ ವೇಳೆಗಾಗಲೇ ರೈತರು ಮುಂಗಾರು ಕೃಷಿ ಚಟು ವಟಿಕೆಯಲ್ಲಿ ತೊಡಗಿದ್ದರು. ಕಬ್ಬು, ಬತ್ತದ ಬಿತ್ತನೆ ಕಾರ್ಯ ಭರದಿಂದ ಸಾಗಿತ್ತು. ಈ ಬಾರಿ ನಾಲೆಗಳಿಗಿನ್ನೂ ನೀರು ಬಿಟ್ಟಿಲ್ಲ.
ಪ್ರಸಕ್ತ ವರ್ಷ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ತಳ ಬಿಟ್ಟು ಮೇಲೆದ್ದಿಲ್ಲ. ಕೊಡಗಿನಲ್ಲಿ ನಾಲ್ಕು ದಿನದ ಹಿಂದಿನವರೆಗೂ ಮುಂಗಾರು ಕ್ಷೀಣಿಸಿದ್ದರಿಂದ ಮಂಡ್ಯದ ರೈತರು ಮಂಕಾಗಿದ್ದರು. ಅತ್ತ ಕೊಡಗಿನಲ್ಲಿ ಮಳೆ ಜೋರಾಗುತ್ತಿದ್ದಂತೆ ಇತ್ತ ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಆದರೆ ವರುಣ ಕೃಪೆ ತೋರುವಷ್ಟರಲ್ಲಿ  ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದು ರೈತರಿಗೆ ಆಘಾತವನ್ನುಂಟು ಮಾಡಿದೆ.
ಘೋರ ಅನ್ಯಾಯ: ರೈತರು ಸಂಕಷ್ಟದಲ್ಲಿದ್ದಾಗ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಹರಿಸುವ ಚಾಳಿ ನಡೆದು ಬಂದಿದೆ. ಆದರೆ, ಕನ್ನಂಬಾಡಿಯಲ್ಲಿ ನೀರಿನ ಮಟ್ಟ ೧೦೦ ಅಡಿಗಿಂತ ಕಮ್ಮಿ ಇದ್ದಾಗ ನೀರು ಬಿಟ್ಟು, ರೈತರಿಗೆ ಘೋರ ಅನ್ಯಾಯ ಮಾಡಿರುವುದು ಇದೇ ಮೊದಲು. ಗರಿಷ್ಠ ೧೨೪.೮೦ ಅಡಿಯ ಜಲಾಶಯದಲ್ಲಿ ಬುಧವಾರ ಸಂಜೆ ನೀರಿನ ಮಟ್ಟ ೯೦.೫೦ ಅಡಿ ಇತ್ತು. ಜಲಾಶಯಕ್ಕೆ ಮಧ್ಯಾಹ್ನದವರೆಗೆ ೯೨೩೨ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಸಂಜೆಯ ಬಳಿಕ ಒಳ ಹರಿವಿನ ಪ್ರಮಾಣ ೧೫,೦೨೭ ಕ್ಯೂಸೆಕ್‌ಗೆ ಏರಿದೆ. ಒಳ ಹರಿವು ಹೆಚ್ಚಿದ ಬಳಿಕ ಹೊರ ಹರಿವನ್ನು ೩೨೬೫ ಕ್ಯೂಸೆಕ್ ಹೆಚ್ಚಿಸ ಲಾಗಿದೆ. ಆರು ವರ್ಷದಿಂದ ಕರ್ನಾಟಕ ಮತ್ತು ತಮಿಳುನಾಡಿನ ಜಲಾನಯನ ಪ್ರದೇಶದಲ್ಲಿ ಸಮೃದ್ಧ  ಮಳೆಯಾಗಿತ್ತು. ಕನ್ನಂಬಾಡಿ ಮತ್ತು ಮೆಟ್ಟೂರು ಜಲಾಶಯಗಳು ಭರ್ತಿಯಾಗಿದ್ದವು. ಹಾಗಾಗಿ ಅಧಿಕಾರಸ್ಥರಿಗೆ ಕಾವೇರಿ ಕದನದ ಕಾಟವಿರಲಿಲ್ಲ.  ಇದೀಗ ಯಡಿಯೂರಪ್ಪ ಅವರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ.
ತಮಗೆ ಅನ್ಯಾಯವಾದಾಗ ಮಂಡ್ಯ ಜಿಲ್ಲೆಯ ರೈತರು ರೊಚ್ಚಿಗೇಳದೆ ಸುಮ್ಮನಿರಲಾರರು. ಕಾವೇರಿ ಜಲ ವಿವಾದ ಎದುರಾದಾಗೆಲ್ಲಾ ಜಿಲ್ಲೆ ಹೊತ್ತಿ ಉರಿದಿದೆ. ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿರುವ ಬಿಜೆಪಿ ಬೇರು ಈ ಜಿಲ್ಲೆಯಲ್ಲಿ ಗಟ್ಟಿಯಾಗಿಲ್ಲ. ಹಾಗಾಗಿ ಚಳ ವಳಿ ಮತ್ತಷ್ಟು ಭುಗಿಲೇಳುವ ಸಾಧ್ಯತೆ ನಿಚ್ಚಳವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ