ಇವು ನಿಜಕ್ಕೂ ರೋಡ್‌ಕಿಂಗ್

ಸದೇಶ್ ಕಾರ್ಮಾಡ್
ಚಿಂದಿ ಚಿಂದಿ ಜೀನ್ಸು , ಯಮಹಾ ಬೈಕು, ಕಾಲೇಜ್ ಕ್ಯಾಂಪಸ್, ಲೈಫ್ ಸ್ಟೈಲ್ ಸೂಪರ್....
ಯುವಜನತೆ ಯಾವ ಬೈಕ್ ಮೇಲೆ ಹೆಚ್ಚು  ವ್ಯಾಮೋಹ ಇಟ್ಟುಕೊಂಡಿದ್ದಾರೆಂಬುದಕ್ಕೆ ಕನ್ನಡ ಚಲನಚಿತ್ರವೊಂದರ ಈ ಗೀತೆ ಸಾಕ್ಷಿ. ಕೊಡಗಿನ ಯುವಜನತೆ ಯಮಹಾ ಬೈಕ್ ಕ್ರೇಜ್ಹ್‌ನೊಂದಿಗೆ ಇದೀಗ ಕರ್ನಾಟಕದ ಹೆಮ್ಮೆಯ ಕಂಪೆನಿ ಜಾವ, ಯಜ್ಡಿ, ರೋಡ್ ಕಿಂಗ್ ಬೈಕುಗಳು ಸೇರ್ಪಡೆಗೊಂಡಿವೆ.
ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಕೊಡಗು ಜಿಲ್ಲೆಗೆ ಈ ಬೈಕುಗಳು ಹೇಳಿ ಮಾಡಿಸಿದಂತದ್ದು. ಆದರೆ ಈ ಹಿಂದೆ ಹೆಚ್ಚು ಬಳಸುತ್ತಿದ್ದದ್ದು ಮಧ್ಯವಯಸ್ಕರು ಅಥವಾ ವಯಸ್ಕರು. ಆದರೆ ಕಳೆದೆರಡು ವರ್ಷಗಳಲ್ಲಿ ಈ ಬೈಕ್‌ಗಳಿಗೆ ಯುವಕರು ಸಾರಥಿಯಾದ ನಂತರ ಎಲ್ಲಿಲ್ಲದ ಬೇಡಿಕೆ. ಕಾಲೇಜ್ ಕ್ಯಾಂಪಸ್‌ವೊಳಗೆ ಯಮಹಾ ಬೈಕ್‌ನೊಂದಿಗೆ ಕಾಲಿಟ್ಟರೆ ಮಾತ್ರ ಗೌರವ ಎಂದು ತಿಳಿದುಕೊಂಡಿದ್ದ ಹುಡುಗರು ಇದೀಗ ಜಾವ, ಯಜ್ಡಿ, ರೋಡ್‌ಕಿಂಗ್ ಬೆನ್ನೇರಿ ಹೊರಟ್ಟಿದ್ದಾರೆ.
ಕಳೆದ ಐದಾವರು ವರ್ಷಗಳ ಹಿಂದೆ ಈ ಬೈಕುಗಳು ಶೆಡ್ ಸೇರಿಕೊಂಡಿತ್ತು. ಕೆಲವು ಹಿರಿಯರು ಮಾತ್ರ ಚಲಾಯಿಸುತ್ತಿದ್ದರು. ಮಾರುಕಟ್ಟೆಯಲ್ಲಿ ‘ರೀಸೇಲ್ ವ್ಯಾಲ್ಯೂ’ ಇಲ್ಲದ ಕಾರಣ ಗುಜರಿ ಅಂಗಡಿ ಸೇರತೊಡ ಗಿತು. ಸುಸ್ಥಿತಿಯಲ್ಲಿದ್ದ ಯಜ್ಡಿ ಬೈಕ್ ಕೇವಲ ೧ರಿಂದ ೨ ಸಾವಿರ ರೂ.ಗೆ ಮಾರಾಟ ಮಾಡಿದ ಉದಾಹರಣೆಗಳಿವೆ. ಆದರೆ ಈ ಬೈಕ್‌ಗಳಿಗೆ ಯುವಕರು ಸಾರಥಿಯಾದ ಮೇಲೆ ೩೦ ರಿಂದ ೩೫ ಸಾವಿರ ರೂ.ಗೆ ಏರಿಕೆಯಾಗಿದೆ.
ಶೆಡ್‌ವೊಳಗಿದ್ದ ಹಳೆ ಬೈಕುಗಳು ಹೊಸದಾಗಿ ಶೃಂಗಾರಗೊಂಡು ರೋಡಿಗಿಳಿದಿವೆ. ಇದಕ್ಕಾಗಿ ಯುವಕರು ಕನಿಷ್ಠ ೧೦ ರಿಂದ ಗರಿಷ್ಠ ೨೫ ಸಾವಿರ ರೂ..ವರೆಗೆ ವೆಚ್ಚ ಮಾಡುತ್ತಿದ್ದಾರೆ. ಹೀಗಾಗಿ ಜಾವ ಕಂಪನಿಯ ಬೈಕ್‌ಗಳಿಗೆ ಕೊಡಗಿನಲ್ಲಿ ಭಾರಿ ಬೇಡಿಕೆ.
‘ನಾಲ್ಕೈದು ವರ್ಷಗಳ ಹಿಂದೆ ಜಾವ ಕಂಪನಿಯ ಬೈಕ್‌ಗಳನ್ನು ಕೊಳ್ಳುವವರಿರಲಿಲ್ಲ. ಹೀಗಾಗಿ ಗುಜರಿ ಅಂಗಡಿಗಳಿಗೆ ೨ ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದೆವು. ಈಗ ಈ ಬೈಕುಗಳು ಸಿಗುವುದೇ ಅಪರೂಪ. ಮೈಲೇಜ್ ಕಡಿಮೆ ಅನ್ನುವುದನ್ನು ಹೊರತುಪಡಿಸಿದರೆ ನಿರ್ವಹಣೆಯ ವೆಚ್ಚ ತೀರಾ ಕಡಿಮೆ. ಹೀಗಾಗಿ ಹೆಚ್ಚಿನವರು ಇದೀಗ ಜಾವ ಕಂಪನಿಯ ಬೈಕ್‌ಗಳ ಕಡೆ ಮುಖ ಮಾಡಿದ್ದಾರೆ’ ಎಂದು ಮಡಿಕೇರಿಯ ಬೈಕ್ ವಿತರಕರಾದ ಪೊನ್ನಚನ ಮಧು ಹೇಳುತ್ತಾರೆ.
ಜಾವ ಕಂಪನಿಯು ಪ್ರಥಮ ಬಾರಿಗೆ ಹೊರ ತಂದ ಜಾವ ಬೈಕ್‌ನ ಟ್ಯಾಂಕ್ ಮೇಲೆ ಮೀಟರ್ ಅಳವಡಿಸಲಾಗಿತ್ತು. ಆದರೆ ಈ ಬೈಕ್ ಕಾಣಸಿಗುವುದೇ ಅಪರೂಪ. ಈ ಬೈಕ್‌ಗಳು ಇದೀಗ ೬೦ ಸಾವಿರ ರೂ.ವರೆಗೆ ಬೆಲೆ ಬಾಳುತ್ತಿವೆ. ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಜಾವ ಕ್ಲಬ್‌ಗಳು ಪ್ರಾರಂಭಗೊಂಡ ನಂತರ ಜಾವ ಕಂಪೆನಿಯ ಬೈಕ್‌ಗಳು ತಮ್ಮ ಮೌಲ್ಯವನ್ನು ವೃದ್ಧಿಸಿಕೊಂಡಿದೆ.

ರೈತರಿಗೆ ‘ಜೀವ’ ನೀಡಿದ ಕಾವೇರಿ

ಮತ್ತೀಕೆರೆ ಜಯರಾಮ್ ಮಂಡ್ಯ
ಮೈಸೂರು ಭಾಗದ ‘ಜೀವನಾಡಿ’ ಕೆಆರ್‌ಎಸ್‌ನಲ್ಲಿ ಬೇಸಿಗೆ ಬೆಳೆಗೆ ಸಮರ್ಪಕ ನೀರು ಲಭ್ಯವಿದೆ. ಸಂಕ್ರಾಂತಿ ಹಬ್ಬಕ್ಕೆ ಮುನ್ನ ನಾಲೆಗಳಿಗೆ ನೀರು ಬಿಡುಗಡೆಯಾಗಲಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ಆತಂಕದಿಂದ ದೂರ ವಾಗಿದ್ದಾರೆ.
ಗರಿಷ್ಠ ೧೨೪.೮೦ ಅಡಿ ನೀರು ಶೇಖರಣಾ ಸಾಮರ್ಥ್ಯದ  ಇದೆ. ಮೇ ಅಂತ್ಯದವರೆಗೆ ಹಾಲಿ ಇರುವ ಬೆಳೆ ಮತ್ತು ಆಶ್ರಿತ ಪ್ರದೇಶಕ್ಕೆ ಕುಡಿಯುವ ನೀರು ಸರಬರಾಜಿಗೆ ಚಿಂತೆಯಿಲ್ಲ. ಕಳೆದ ವರ್ಷ ಈ ವೇಳೆಗೆ ೧೨೩.೧೫ ಅಡಿ ನೀರಿತ್ತು.
ಕಾವೇರಿ ಕೊಳ್ಳದಲ್ಲಿ ಕಳೆದ ಮುಂಗಾರು ದುರ್ಬಲ ಗೊಂಡಿತ್ತು. ಜಲಾಶಯವು ಪ್ರತಿ ವರ್ಷ ಆಗಸ್ಟ್ ಅಂತ್ಯದೊಳಗೆ ಭರ್ತಿಗೊಳ್ಳುವುದು ವಾಡಿಕೆ. ಆದರೆ, ಈ ಬಾರಿ ಭರ್ತಿ ಅನುಮಾನವಾಗಿತ್ತು. ಹಾಗೂ ಹೀಗೂ ಆಯುಧಪೂಜೆ ಹಬ್ಬದ ವೇಳೆಗೆ ತುಂಬಿ ತುಳುಕಿತು.
ಭರ್ತಿಗೊಳ್ಳುವ ಮುನ್ನವೇ ಕೆಆರ್‌ಎಸ್‌ನಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿತ್ತು. ಅಕ್ಟೋಬರ್‌ನಲ್ಲಿ ಅಕಾಲಿಕ ಮಳೆಯಿಂದ ಒಳ ಹರಿವು ಹೆಚ್ಚಿದಾಗ ಸಾಕಷ್ಟು ನೀರು ತಮಿಳುನಾಡಿಗೆ ಹರಿದುಹೋಯಿತು. ಇಷ್ಟಾಗಿಯೂ ಅಧಿಕಾರಿಗಳು ಗರಿಷ್ಠ ಮಟ್ಟ ಕಾಯ್ದುಕೊಂಡಿದ್ದಾರೆ.

ಎಚ್‌ಐವಿ ಬಾಧಿತರ ಆಶಾಕಿರಣ ಎಆರ್‌ಟಿ ಕೇಂದ್ರ...

ಜೆ.ಶಿವಣ್ಣ ಮೈಸೂರು
ಎಚ್‌ಐವಿಯೊಂದಿಗೆ ಜೀವಿಸುವವರಿಗೆ  ಸಾಂತ್ವನ ಹೇಳಿ ಚಿಕಿತ್ಸೆ  ನೀಡಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ ಕೆ.ಆರ್.ಆಸ್ಪತ್ರೆಯ ಎಆರ್‌ಟಿ ಕೇಂದ್ರ (ಆಂಟಿ ರಿಟ್ರೋವೈರಲ್ ಟ್ರೀಟ್‌ಮೆಂಟ್ ಸೆಂಟರ್). ಇಲ್ಲೀಗ ಅಪೌಷ್ಟಿಕತೆ ಎದುರಿಸುತ್ತಿರುವ ಎಚ್‌ಐವಿ ಬಾಧಿತರಿಗೆ  ಪೌಷ್ಟಿಕ ಆಹಾರ ಒದಗಿಸಲು ಚಿಂತನೆ ನಡೆದಿದೆ. ಅಷ್ಟು ಮಾತ್ರವಲ್ಲ, ರೋಗಿಗಳಿಗೆ ಆಧ್ಯಾತ್ಮಿಕ ಚಿಂತನೆಗಳನ್ನು ತುಂಬುವ ಪ್ರಯತ್ನಕ್ಕೂ ಮುಂದಾಗಿದೆ.
ಸಿಎಫ್‌ಟಿಆರ್‌ಐ ರೂಪಿಸಿರುವ ಫಾರ್ಮುಲಾದ ಪೌಷ್ಟಿಕ ಆಹಾರವನ್ನು ಎಚ್‌ಐವಿ ಪೀಡಿತರಿಗೆ ಒದಗಿಸುವ ಸಂಕಲ್ಪದೊಂದಿಗೆ ಹೆಜ್ಜೆ ಇರಿಸಲಾಗಿದೆ. ಈ ಕುರಿತಂತೆ ನಗರದ ಹಲವು ಸೇವಾ ಸಂಸ್ಥೆಗಳು, ದಾನಿಗಳು, ಜನಪ್ರತಿನಿಧಿಗಳ ಜತೆ ಮಾತುಕತೆಗೆ ಚಿಂತನೆ ನಡೆಸಲಾಗಿದ್ದು, ಕೊಡುಗೈ ದಾನಿಗಳು, ನೆರವು ನೀಡುವ ಸಹೃದಯ ಮನಸ್ಸುಗಳು ಈ ಕನಸಿನ ಯೋಜನೆಗೆ ಕೈಜೋಡಿಸಬೇಕಿದೆ.

ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸೀರಾ ಜೋಕೆ

ಆರ್.ಕೃಷ್ಣ ಮೈಸೂರು
ಟ್ರಾಫಿಕ್ ರೂಲ್ಸ್ ಪಾಲಿಸದೇ ಇದ್ದರೆ ಬರೀ ದಂಡ ವಿಧಿಸೋಲ್ಲ, ದಂಡಿಸ್ತಾರೆ !
ನಿಯಮ ಮೀರುವವರನ್ನು ಇನ್ನು ಮುಂದೆ ಕ್ಯಾಮೆರಾಗಳು ನಿಗಾ ವಹಿಸಲಿವೆ. ಅಡ್ಡಾದಿಡ್ಡಿ ಸಂಚಾರಕ್ಕೆ ಕಡಿವಾಣ ಹಾಕಲು ಈಗಾಗಲೇ ೨೦ಕ್ಕೂ ಹೆಚ್ಚು  ಕ್ಯಾಮೆರಾಗಳನ್ನು ನಗರದ ವಿವಿಧೆಡೆ ಅಳವಡಿಸಿದ್ದರೂ ಅವು ಇಷ್ಟು ದಿನ ಕಣ್ಣು ಮುಚ್ಚಿದ್ದವು. ಆದರೀಗ ಸದ್ಯವೇ ಅವುಗಳಿಗೆ ಜೀವ ಬರಲಿದೆ.
ಕ್ಯಾಮೆರಾ ಕಣ್ಣುಗಳು ಚುರುಕಾದರೆ, ನಿಯಮ ಉಲ್ಲಂಘಿಸಿದವರ ಮನೆಗೆ ರಾತ್ರಿ ಕಳೆದು ಬೆಳಗ್ಗೆ ಆಗುವಾಗ ನೋಟಿಸ್ ಖಚಿತ. ವಾಹನ ಗಳ ವಿಳಾಸ, ಮಾಲೀಕರ ಮಾಹಿತಿಯ ಗಣಕೀಕರಣ ಚಾಲ್ತಿಯಲ್ಲಿದೆ. ಹೀಗಾಗಿ ಉಪ್ಪು ತಿಂದವನು ನೀರು ಕುಡಿಯಲೇ ಬೇಕೆನ್ನುವಂತೆ ತಪ್ಪು ಮಾಡಿದವರು ದಂಡ ತೆರಲೇಬೇಕು.